ದುರ್ಭಗಾಭರಣಮಿವ[1]ದೇಹಬಾಧಾವಹಮೇವ[2] ಜ್ಞಾನಂ ಸ್ವಯಮ ನಾಚರಿತಃ[3] || ೩೦ ||

ಅರ್ಥ : ದುರ್ಭಗಾಭರಣಮಿವ = ಹಡಣಿಗೆಯ ತೊಡವಿನಂತೆ, ದೇಹಭೇಧಾವಹಮೇವ = ಒಡಲ್ಗೆ ಪೀಡೆ ಪಡುವುದೇ, ಸ್ವಯಂ = ತಾಂ, ಅನಾಚರಿತಃ = ನೆಗಳದನ, ಜ್ಞಾನಂ = ಅಱಿತಂ || ಅಱಿದು ನೆಗಳಲ್ವೇಳ್ಕುಮೆಂಬುದು ತಾತ್ಪರ್ಯಂ || ತಮಗೆ ನೆಗಳ್ತೆಯಿಲ್ಲದೆಯುಂ ಪೆಱರ್ಗೆ ಧರ್ಮಮಂ ಪೇಳ್ವರ್ ಪಲಂಬರೆಂಬುದುತ್ತರವಾಕ್ಯಂ

ಸುಲಭಃ ಖಲು ಕಥಕ ಇವ ಪರಸ್ಯ ಧರ್ಮೋಪದೇಶೇ ಲೋಕಃ || ೩೧ ||

ಅರ್ಥ ಪರಸ್ಯ = ಪೆಱಂಗೆ, ಧರ್ಮೋಪದೇಶೇ = ಧರ್ಮಮಂ ನೆಗಳ್ವಲ್ಲಿ, ಲೋಕಃ = ಜನಂ, ಸುಲಭಃ ಖಲು = ಪಡೆಯಲ್ಲಪ್ಪುದು || ಕಥಕ ಇವ = ಕಥೆಪೇಳ್ವನಂತೆ || ನೆಗಳ್ವರ್ಪಲರಿಲ್ಲೆಂಬುದು ತಾತ್ಪರ್ಯ || ನಿತ್ಯಂ ಧರ್ಮವ್ಯಾಪಾರಮಂ ಪೇಳ್ವುದುತ್ತರವಾಕ್ಯಂ :

ಪ್ರತ್ಯಹಂ ಕಿಮಪಿ ನಿಯಮೇನ ಪ್ರಯಚ್ಛತಸ್ತಪಸ್ಯತೋ ವಾ ಭವಂತ್ಯವಶ್ಯಂ
ಮಹೀಯಾಂಸಃ ಪರೇ ಲೋಕಾಃ
|| ೩೨ ||

ಅರ್ಥ : ಪ್ರತ್ಯಹಂ = ದಿವಸದಿವಸಕ್ಕಂ, ನಿಯಮೇನ = ತಪ್ಪದೆ, ಕಿಮಪಿ = ಏನಾನುಮಂ, ಪ್ರಯಚ್ಛತಃ = ಕುಡುವಂಗಂ, ತಪಸ್ಯತೋ ವಾ = ತಪಂಗೆಯ್ವಂಗಂ ಮೇಣ್, ಅವಶ್ಯಂ = ನಿಕ್ಕುವದಿಂ ಮಹೀಯಾಂಸಃ = ಪಿರಿದಪ್ಪ, ಪರೇ ಲೋಕಾಃ = ಪರಲೋಕಂಗಳ್, ಭವಂತಿ = ಅಪ್ಪುವು || ಧರ್ಮಮಂ ಮಱದಿರಲಾಗದೆಂಬುದು ತಾತ್ಪರ್ಯಂ || ಈ ಅರ್ಥಮಂ ದೃಷ್ಟಾಂತದಿಂ ಸಮರ್ಥಿಸಿ ಪೇಳ್ವುದುತ್ತರವಾಕ್ಯಂ :

ಕಾಲೇನ ಸಂಚೀಯಮಾನಃ ಪರಮಾಣುರಪಿ ಜಾಯತೇ ಮೇರುಃ || ೩೩ ||

ಅರ್ಥ : ಕಾಲೇನ = ಕಾಲಕ್ರಮದಿಂದಂ, ಸಂಚೀಯಮಾನಃ = ನೆರಪಲ್ಕೆ ಪಡುವ, ಪರಮಾಣುರಪಿ = ಪರಮಾಣುವುಂ, ಮೇರುಃ = ಮಂದರಂ, ಜಾಯತೇ = ಅಕ್ಕುಮೆಂತಂತೆ ||

—-

೩೦. ಆಚಾರವಿಲ್ಲದ ಜ್ಞಾನವು ಗಂಡನಿಲ್ಲದವಳ ಆಭರಣಗಳಂತೆ ಶರೀರಕ್ಕೆ ಹೊರೆ ಮಾತ್ರ.

೩೧. ಕಥೆ ಹೇಳುವವರಂತೆ ಇತರರಿಗೆ ಧರ್ಮೋಪದೇಶ ಮಾಡುವುದು ಸುಲಭ.

೩೨. ಪ್ರತಿ ದಿನವೂ ನಿಯಮದಿಂದ ಸ್ವಲ್ಪವಾದರೂ ದಾನ ಮಾಡುವವರಿಗೆ ತಪಸ್ಸು ಮಾಡುವವರಿಗೆ ನಿಶ್ಚಯವಾಗಿಯೂ ಉತ್ತಮ ಪರಲೋಕ ಪ್ರಾಪ್ತಿಯಾಗುತ್ತದೆ.

೩೩. ಕಾಲಕ್ರಮದಿಂದ ಸೇರಿಲಸಾಗುವ ಪರಮಾಣುವೂ ಕೂಡ ಮೇರುಪರ್ವತದಂತಾಗುವುದು.

—-

ಧರ್ಮಶ್ರುತಧನಾನಾಂ ಪ್ರತಿದಿನಂ ಲವೋಪಿ ಸಂಗೃಹ್ಯಮಾಣೋ ಭವತಿ ಸಮುದ್ರಾದಪ್ಯಧಿಕಃ || ೭೪ ||

ಅರ್ಥ : ಧರ್ಮಶ್ರುತಧನಾನಾಂ = ಧರ್ಮಮುಂ ಶ್ರುತಮುಂ ಧನಮುಮೆಂಬಿವಱ, ಲವೋಪಿ = ಅತಿಕಿಱಿದಾದೊಡುಂ-ಲವಮುಂ, ಪ್ರತಿದಿನಂ = ದಿವಸದಿವಸಕ್ಕಂ, ಸಂಗೃಹ್ಯಮಾಣಃ = ನೆರಪಲ್ಪಡುತ್ತಿರ್ಪುದು, ಸಮುದ್ರಾದಪಿ = ಸಮುದ್ರದಿಂದಮಂ ನೋಡಲ್, ಅಧಿಕಃ = ಪಿರಿದಾಗಿ, ಭವತಿ = ಅಕ್ಕುಂ || ನೆರಪಿ ಪಿರಿದಕ್ಕುಮೆಂಬುದು ತಾತ್ಪರ್ಯಂ ||

ಧರ್ಮಾಯ ನಿತ್ಯಮಜಾಗ್ರತಾಮಾತ್ಮವಂಚನಂ[4] || ೩೫ ||

ಅರ್ಥ : ಧರ್ಮಾಯ = ಧರ್ಮ ಕಾರಣಮಾಗಿ, ನಿತ್ಯಂ = ಎಲ್ಲಾ, ಕಾಲಮುಂ, ಅಜಾಗ್ರತಾಂ = ಎಚ್ಚರದರ್ಗೆ, ಆತ್ಮ ವಂಚನಂ = ತಂತಮ್ಮಂ ಮರಸುವುದಕ್ಕುಂ – ತವಗೆ ತಾವೇ ಕಳ್ಳರು || ಧರ್ಮಮಂ ಮಱಿದದು ಆತ್ಮವಂಚಕತನಮಕ್ಕುಮೆಂಬುದು ತಾತ್ಪರ್ಯಂ || ಧರ್ಮಮನೋರ್ಮೆಯೆ ನೆರಪಲ್ಕೆ ಬಾರದೆಂಬುದುತ್ತರಸೂತ್ರಂ :

ಕಸ್ಯ ನಾಮೈಕದೈವ ಸಂಪದ್ಯತೇ ಪುಣ್ಯರಾಶಿಃ || ೩೬ ||

ಅರ್ಥ : ಸ್ವಯಂ = ತಾಂ, ಅನಾಚರತಃ = ನೆಗಳದನ, ಮನೋರಥಾ = ಬಯಕೆಗಳು, ಸ್ವಪ್ನರಾಜ್ಯಸ್ಯ ಸಮಾಃ = ಕನಸಿನ ರಾಜ್ಯದ ಸಮಾನಂಗಳು || ನೆಗಳಲೆವೇಳ್ಕುಮೆಂಬುದು ತಾತ್ಪಯಂ || ಧರ್ಮದ ಫಲವನನುಭವಿಸುತ್ತುಂ ಧರ್ಮಮಂ ನೆಗಳದಿರ್ದಡೆ ದೋಷಮಂ ಪೇಳ್ವುದುತ್ತರವಾಕ್ಯಂ :

[5]ಸ್ವಯಮನಾಚರತೋಮನೋರಥಾಃ ಸ್ವಪ್ನರಾಜ್ಯಸ್ಯ ಸಮಾಃ || ೩೭ ||

ಅರ್ಥ : ಸ್ವಯಂ = ತಾಂ, ಅನಾಚರತಃ = ನೆಗಳದನ, ಮನೋರಥಾಃ = ಬಯಕೆಗಳು, ಸ್ವಪ್ನರಾಜ್ಯಸ್ಯ ಸಮಾಃ = ಕನಸಿನ ರಾಜ್ಯದ ಸಮಾನಂಗಳು || ನೆಗಳಲೆವೇಳ್ಕುಮೆಂಬುದು ತಾತ್ಪರ್ಯಂ || ಧರ್ಮದ ಫಲವನನುಭವಿಸುತ್ತುಂ ದರ್ಮಮಂ ನೆಗಳದಿರ್ದಡೆ ದೋಷಮಂ ಪೇಲ್ವುದುತ್ತರವಾಕ್ಯಂ :

ಧರ್ಮಫಲಮನುಭವತೋ ಧರ್ಮಾನನುಷ್ಠಾನಮನಾತ್ಮಜ್ಞಸ್ಯ[6] || ೩೮ ||

ಅರ್ಥ : ಧರ್ಮಫಲಂ = ಧರ್ಮದ ಫಲಮಂ, ಅನುಭವತಃ = ಅನುಭವಿಸುತಿರ್ದನ, ಧರ್ಮಾನನುಷ್ಠಾನಂ = ಧರ್ಮಮಂ ನೆಗಳದದು, ಅನಾತ್ಮಜ್ಞಸ್ಯ = ತನ್ನನಿಱಿಯದನ ನೆಗಳ್ತೆ || ಧರ್ಮದ ಫಲಮಂ ಕಂಡುಂ ಧರ್ಮಮಂ ಮಱೆಯಲಾಗದೆಂಬುದು ತಾತ್ಪರ್ಯಂ || ಹಿತಮಪ್ಪುದಂ ತಾನೆ ನೆಗಳಲ್ವೇಳ್ಕುಮೆಂಬುದುತ್ತರವಾಕ್ಯಂ :

—-

೩೪. ಧರ್ಮವೂ ವಿದ್ಯೆಯೂ ಧನವೂ ಪ್ರತಿದಿನವೂ ಸ್ವಲ್ಪ ಸ್ವಲ್ಪವಾಗಿ ಸಂಗ್ರಹಿಸಲ್ಪಟ್ಟರೂ ಅವು ಸಮುದ್ರಕ್ಕಿಂತಲೂ ದೊಡ್ಡದಾಗುತ್ತದೆ.

೩೫. ಧರ್ಮದ ವಿಷಯದಲ್ಲಿ ಅಜಾಗ್ರತೆಯು ಆತ್ಮವಂಚನೆಯಾಗುತ್ತದೆ.

೩೬. ಪುಣ್ಯರಾಶಿಯು ಯಾರಿಗೆ ತಾನೆ ಒಮ್ಮೆಗೇ ಸೇರಿ ಬರುವುದು?

೩೭. ಸ್ವತಃ ಕೆಲಸ ಮಾಡದವನ ಅಪೇಕ್ಷೆಗಳು ಕನಸಿನ ರಾಜ್ಯಕ್ಕೆ ಸಮಾನವಾದವು.

೩೮. ಎಂದೋ ಮಾಡಿದ ಧರ್ಮಕಾರ್ಯದ ಫಲಗಳನ್ನು ಅನುಭವಿಸುತ್ತ ಈಗ ಧರ್ಮಾಚರಣೆಯಲ್ಲಿ ತೊಡಗದವನು ತಿಳುವಳಿಕೆ ಇಲ್ಲದವನು.

—-

ಕಃ ಸುಧೀರ್ಭೇಷಜಮಿವಾತ್ಮ ಹಿತಂ ಧರ್ಮಂ ಪರೋಪರೋಧಾದ ನುತಿಷ್ಠತಿ || ೩೯ ||

ಅರ್ಥ : ಭೇಷಜಮಿವ = ಔಷಧದಂತೆ, ಆತ್ಮಹಿತಂ = ತನಗೆ ಹಿತಮಪ್ಪ, ಧರ್ಮಂ = ಧರ್ಮಮಂ, ಕಃ = ಆವಂ, ಸುಧೀಃ = ಬುದ್ಧಿವಂತಂ, ಪರೋಪರೋಧಾತ್ = ಪೆಱರುಪರೋಧದಿಂ, ಅನುತಿಷ್ಠತಿ = ನೆಗಳ್ವಂ || ಅಱಿವಂ ತಾನೆ ನೆಗಳಲ್ವೇಳ್ಕುಮೆಂಬುದು ತಾತ್ಪರ್ಯಂ ||

ಧರ್ಮಾನುಷ್ಠಾನೇ ಭವತ್ಯಪ್ರಾರ್ಥಿತಮಪಿ ಪ್ರಾತಿಲೋಮ್ಯಂ ಲೋಕಸ್ಯ || ೪೦ ||

ಅರ್ಥ : ಧರ್ಮಾನುಷ್ಠಾನೇ = ಧರ್ಮಮಂ ನೆಗಳ್ವಲ್ಲಿ, ಅಪ್ರಾರ್ಥಿತಮಪಿ = ಬಯಸಿದುದಂ, ಲೋಕಸ್ಯ = ಜನದ, ಪ್ರಾತಿಲೋಮ್ಯಂ = ಎಡರುಹಂ, ವಿಘ್ನಂ ಭವತಿ = ಅಕ್ಕುಂ || ಧರ್ಮಂ ಪಲರ್ಗೆ ಸೊಗಯಿಸದಿರ್ದೊಡೆ ಮಾಣವೇಡೆಂಬುದು ತಾತ್ಪರ್ಯಂ || ಧರ್ಮಕ್ಕೆ ಪಲರ್ ಸಹಾಯವಿಲ್ಲೆಂಬುದುತ್ತರವಾಕ್ಯಂ :

ಅಧರ್ಮಕರ್ಮ್ಯಣಿ ಕೋ ನಾಮ ನೋಪಾಧ್ಯಾಯಃ ಪುರಶ್ಚಾರೀ[7] ವಾ || ೪೧ ||

ಅರ್ಥ : ಅಧರ್ಮಕರ್ಮಣಿ = ಪಾಪಮಂ ನೆಗಳ್ವಲ್ಲಿ, ಉಪಾಧ್ಯಾಯಃ = ಪೇಳ್ವನುಂ, ಪುರಶ್ಚಾರೀ ವಾ[8] = ಮುಂದುವರಿದವನುಂ ಮೇಣ್, ಕೋ ನಾಮ ನ = ಅವನಲ್ಲನು || ಫಲಸ್ಸಹಾಯರಾದೊಡಂ[9] ಅಧರ್ಮಮಂ ನೆಗಳಲ್ವೇಡೆಂಬುದು ತಾತ್ಪರ್ಯಂ || ಎರಡರೊಳಧರ್ಮಮಂ ನೆಗಳಲಾಗದೆಂಬುದುತ್ತರವಾಕ್ಯಂ :

—-

೩೯. ಔಷಧವನ್ನು ತಾನೇ ತೆಗೆದುಕೊಳ್ಳುವಂತೆ ತನಗೆ ಹಿತವಾದ ಧರ್ಮವನ್ನು ತಾನೇ ಮಾಡಬೇಕು. ಇತರರ ಹೇಳಿಕೆಯಂತೆ ಅಲ್ಲ.

೪೦. ಧರ್ಮಾಚರಣೆಯಲ್ಲಿ ತೊಡಗಿದಾಗ ಬೇಡವೆಂದರೂ ಇತರರು ಅಡ್ಡಿ ಆತಂಕಗಳನ್ನು ತಂದೊಡ್ಡುವರು.

೪೧. ಅಧರ್ಮಕರ್ಮದಲ್ಲಿ ತೊಡಗಿದಾಗ ಉಪದೇಶ ಮಾಡದವನು. ದಾರಿತೋರದವನು ಉಂಟೆ?

—-

ಕಂಠಗತೈರಪಿ ಪ್ರಾಣೈರ್ನಾಶುಭಂ ಕರ್ಮ ಸಮಾಚರಂತಿ ಕುಶಲಬುದ್ಧಯಃ || ೪೨ ||

ಅರ್ಥ : ಕಂಠಗತೈಃ = ಕೊರಲ್ಗುಡಿಗಿ ಬಂದ,[10] ಪ್ರಾಣೈರಪಿ = ಪ್ರಾಣಂಗಳಿಂದಮುಂ, ಅಶುಭಕರ್ಮ = ಪೊಲ್ಲದಪ್ಪ ನೆಗಳ್ತೆಯಂ, ನ ಸಮಾಚರಂತಿ = ನೆಗಳ್ವರಲ್ಲರ್, ಕುಶಲಬುದ್ಧಯಃ = ಒಳ್ಳಿತಪ್ಪ ಮನಮನುಳ್ಳವರ್ಗಳ್ || ಆವಾವವಸರದೊಳು ನೊಳ್ಪನೆ ಮಾಳ್ಪುದೆಂಬುದು ತಾತ್ಪರ್ಯಂ || ದುರ್ವ್ಯಸನಿಗಳಪ್ಪರುಮಂ ನೆಗಳಲೀಯರೆಂಬುದಂ ಪೇಳ್ವುದುತ್ತರವಾಕ್ಯಂ :

ಸ್ವವ್ಯಸನಸಂತರ್ಪಣಾಯ[11] ಧೂರ್ತೈರ್ದುರೀಹಿತವೃತ್ತಯಃ ಕ್ರೀಯಂತೇ ಶ್ರೀಮಂತಃ || ೪೩ ||

ಅರ್ಥ : ಸ್ವವಯಸನಸಂತರ್ಪಣಾಯ = ತಮ್ಮವ್ಯಸನಮನುಪಶಮಿಸಲ್ವೇಡಿ, ಧೂರ್ತೈಃ = ಧೂರ್ತರಿಂದಂ, ದುರೀಹಿತವೃತ್ತಯಃ = ಪೊಲ್ಲದಪ್ಪ ನೆಗಳ್ತೆಯನುಳ್ಳರಾಗಿ, ಕ್ರೀಯಂತೆ = ಮಾಳ್ಪರು, ಶ್ರೀಮಂತಃ = ಶ್ರಿಯನುಳ್ಳವರ್ಗಳ್ || ಸಿರಿಯನುಳ್ಳರಂ ಪಲರ್ದುರಾಚಾರದೊಳ್ ನೆಗಳ್ವರದಾಗಲಾಗದೆಂಬುದು ತಾತ್ಪರ್ಯಂ || ಧೂರ್ತರೇನಂ ಮಾಡಲಾರ್ಪರೆಂದಡೆ ಪೇಳ್ವುದುತ್ತರವಾಕ್ಯಂ :

ಖಲಸಂಸರ್ಗಃ ಕಂ ನಾಮಾನರ್ಥಂ ಕರೋತಿ[12]|| ೪೪ ||

ಅರ್ಥ : ಖಲಸಂಸರ್ಗಃ = ದುರ್ಜನರ ಕೂಟಂ, ನಾಮ = ನಿಕ್ಕುವದಿಂ, ಕಂ = ಆವ, ಅನರ್ಥಂ = ಪೊಲ್ಲಮೆಯಂ, ನ ಕರೋತಿ = ಮಾಡದು || ದುರ್ಜನರ ಸಂಗತಿಯಿಂ ಕುಮತಿಯಾಗದಿರನೆಂಬುದು ತಾತ್ಪರ್ಯಂ || ದುಷ್ಟ ಶಿಷ್ಟರುಮಂ ತನ್ನಿರ್ದೆಡೆಯುಮಂ ಕೆಡಿಸುವರೆಂಬುದುತ್ತರವಾಕ್ಯಂ :

ಅಗ್ನಿವತ್‌[13]ಸ್ವಾಶ್ರಯಮೇವ ದಹಂತಿ ರ್ದುನಾಃ || ೪೫ ||

ಅರ್ಥ : ಅಗ್ನಿವತ್ = ಕಿಚ್ಚಿನಂತೆ, ಸ್ವಾಶ್ರಯಮೇವ = ತನ್ನಿರ್ದೆಡೆಯನೇ, ದಹಂತಿ = ಸುಡುವರ್, ಕೆಡಿಸುವರು, ದುರ್ಜನಾಃ = ಕಷ್ಟರು || ಪೊಲ್ಲಮಾನಸರಪಾಯಮನಾರ್ಗಂ ಮಾಡದಿರರೆಂಬುದು ತಾತ್ಪರ್ಯಂ || ವರ್ತಮಾನ ಸುಖಾಭಿಲಾಷಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ :

—-

೪೨. ಪ್ರಾಣವು ಹೋಗುತ್ತಿದ್ದರೂ ಬುದ್ಧಿವಂತರು ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ.

೪೩. ತಮ್ಮ ವ್ಯಸನಗಳನ್ನು ತೃಪ್ತಿ ಪಡಿಸಿಕೊಳ್ಳುವುದಕ್ಕಾಗಿ ಧೂರ್ತರು ಶ್ರೀಮಂತರನ್ನು ದುರಾಚರಣೆಯಲ್ಲಿ ತೊಡಗಿಸುತ್ತಾರೆ.

೪೪. ದುರ್ಜನ ಸಹವಾಸವು ಯಾವ ಅನರ್ಥವನ್ನು ತಾನೆ ಉಂಟುಮಾಡುವದಿಲ್ಲ ?

೪೫. ದುರ್ಜನರು ಬೆಂಕಿಯಂತೆ ತಮಗೆ ಆಶ್ರಯವಾದುದನ್ನೇ ಸುಡುವರು.

—-

ವನಗಜ ಇವ ತಾದಾತ್ವಿಕ[14] ಸುಖಲುಬ್ಧ : ಕೋ ನಾಮ ನ ಭವತ್ಯಾಸ್ಪ ದಮಾಪದಾಂ || ೪೬ ||

ಅರ್ಥ : ವನಗಜ ಇವ = ಕಾಡಾನೆಯಂತೆ, ತಾದಾತ್ವಿಕಸುಖಲುಬ್ಧಃ = ಆಗಳಿನ ಸುಖಕ್ಕಾಟಿಸಿದ, ಕಃ = ಆವಂ, ನಾಮ = ನಿಶ್ಚಯದಿಂ, ಆಪದಾಂ = ಆಪತ್ತುಗಳ್ಗೆ, ಆಸ್ಪದಂ = ಸ್ಥಾನಮಾಗಿ, ನ ಭವತಿ = ಆಗನೆ || ಎಡೆಯುಡುಗದ[15] ಸೊಕಮನೆ ನೋಳ್ಪುದೆಂಬುದಭಿಪ್ರಾಯಂ || ಧನಲಾಭಾಭಿಷೆಯಿಂ ಧರ್ಮಮನತಿಕ್ರಮಿಸಿ ನಡೆದಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ಧರ್ಮಾತಿಕ್ರಮಾಲ್ಲಬ್ಧಧನಂ[16] ಪರೇನುಭವಂತಿ, ಸ್ವಯಂ ತು ಪರಂ ಪಾಪಸ್ಯ ಭಾಜನಂ ಸಿಂಹ ಇವ ಸಿಂಧುರವಧಾತ್ || ೪೭ ||

ಅರ್ಥ : ಧರ್ಮಾತಿಕ್ರಮಾತ್ = ಧರ್ಮಮಂ ಮೀಱುವುದಱಿಂದ, ಲಬ್ದಧನಂ = ಪಡೆದ ಅರ್ಥಮಂ, ಪರೇ = ಪೆಱರ್, ಅನುಭವಂತಿ = ಉಂಬರು, ಸ್ವಯಂ ತು = ತಾಂ ಮತ್ತೆ, ಪರಂ = ಬಱಿದೆ ಪಿರಿದು, ಪಾಪಸ್ಯ = ಪಾಪಕ್ಕೆ, ಭಾಜನಂ = ಎಡೆಯಾಗಿ, ಸಿಂಹ ಇವ = ಸಿಂಹದಂತೆ, ಸಿಂದುರವಧಾತ್ = ಆನೆಯ ಕೊಲೆಯತ್ತಣಿಂದಂ || ಅಧರ್ಮದಿಂ ಧನೋಪಾರ್ಜನೆಯಂ ಮಾಡಲಾಗದೆಂಬುದು ತಾತ್ಪರ್ಯಂ || ಅಧರ್ಮಿಗೇನಪ್ಪುದೆಂಡೊಡೆ ಪೇಳ್ವುದುತ್ತರವಾಕ್ಯಂ :

ಬೀಜಭೋಜಿನಃ ಕುಟುಂಬಿನ ಇವ ನಾಸ್ತ್ಯಧಾರ್ಮಿಕಸ್ಯಾಯತ್ಯಾಂ ಕಿಮಪಿ ಶುಭಂ ಫಲಂ[17]|| ೪೮ ||

ಅರ್ಥ : ಬೀಜಭೋಜಿನಃ = ಬೀಜಮನುಣ್ಬ,[18] ಕುಟುಂಬಿನ ಇವ = ಒಕ್ಕಲಿಗಂಗೆತಂತೆ, ಅಧಾರ್ಮಿಕಸ್ಯ = ಧಾರ್ಮಿಕನಲ್ಲದಂಗೆ, ಆಯತ್ಯಾಂ = ಮೇಲೆ[19], ಶುಭಂ = ಒಳ್ಳಿಪ್ಪ, ಫಲಂ = ಫಲವು, ಕಿಮಪಿ = ಏನಪ್ಪೊಡಂ, ನಾಸ್ತಿ = ಇಲ್ಲಂ || ಪಾಪಿಗೆ ಪರಲೋಕಮಿಲ್ಲೆಂಬುದು ತಾತ್ಪರ್ಯಂ || ಅರ್ಥಕಾಮಂಗಳಂ ಬಿಟ್ಟು ಕೇವಲಂ ಧರ್ಮಮನುಪಾಸ್ತಿಗೆಯ್ವಾತಂಗೆ ದೂಷಣಮಂ ಪೇಳ್ವುದುತ್ತರವಾಕ್ಯಂ :

—-

೪೬. ಕಾಡಾನೆಯಂತೆ ತಾತ್ಕಾಲಿಕ ಸುಖವನ್ನೇ ಬಯಸುವ ಯಾರು ತಾನೆ ಆಪತ್ತಿಗೆ ಗುರಿಯಾಗುವುದಿಲ್ಲ?

೪೭. ಅಧರ್ಮದಿಂದ ಪಡೆದ ಧನಾದಿಗಳನ್ನು ಇತರರು ಅನುಭವಿಸುತ್ತಾರೆ. ತಾನಾದರೋ ಆನೆಯನ್ನು ಕೊಲ್ಲುವ ಸಿಂಹದಂತೆ ಕೇವಲ ಪಾಪಕ್ಕೆ ಗುರಿಯಾಗುತ್ತಾನೆ.

೪೮. ಬೀಜಕ್ಕಾಗಿದ್ದ ಧಾನ್ಯವನ್ನೇ ತಿಂದು ಮುಗಿಸುವ ರೈತನಂತೆ ಅಧಾರ್ಮಿಕನಿಗೆ ಶುಭಫಲವು ಎಷ್ಟು ಮಾತ್ರವೂ ಇರದು.

—-

ಯಃ ಕಾಮಾರ್ಥಾಪುಪಹತ್ಯ ಧರ್ಮಮೇವೋಪಾಸ್ತೇ ಸ ಪಕ್ವಂ ಕ್ಷೇತ್ರಂ ಪರಿತ್ಯಜ್ಯಾರಣ್ಯಂ ಕೃಪತಿ || ೪೯ ||

ಅರ್ಥ : ಯಃ = ಆವನೋರ್ವಂ, ಕಾಮಾರ್ಥೌ = ಕಾಮಾರ್ಥಂಗಳಂ, ಉಪಹತ್ಯ = ಕೆಡಿಸಿ, ಧರ್ಮಮೇವ = ಧರ್ಮಮನೆ, ಉಪಾಸ್ತೇ = ಪೊರ್ದುವಂ, ಸಃ = ಆತಂ, ಪಕ್ವಂ ಕ್ಷೇತ್ರಂ = ಬೆಳದ ಕೆಯ್ಯಂ, ಪರಿತ್ಯಜ್ಯ = ಬಿಸುಟ್ಟು, ಅರಣ್ಯಂ = ಅಡವಿಯಂ, ಕೃಷತಿ = ಉಳ್ವನಂತಕ್ಕುಂ[20] || ವರ್ತಮಾನಸುಖಮಂ ಬೇಳ್ಕುಮೆಂಬುದು ತಾತ್ಪರ್ಯಂ || ಈ ಅರ್ಥಮನೆ ಸಮರ್ಥಿಸಿ ಪೇಳ್ವುದುತ್ತರವಾಕ್ಯಂ :

ಸ ಖಲು ಸುಖೀ ಯೋsಮುತ್ತ[21] ಸುಖಾವಿರೋಧೇನ ಸುಖಮನುಭವತಿ || ೫೦ ||

ಅರ್ಥ : ಸ ಖಲು = ಆತನೇ, ಸುಖೀ = ಸುಖಿಯು, ಯಃ = ಆವನೋರ್ವಂ, ಅಮುತ್ರ ಸುಖಾವಿರೋಧೇನ = ಮಱುಭವದ ಸುಖಮಂ ಕಿಡಿಸದೆ, ಸುಖಂ = ಸುಖಮಂ, ಅನುಭವತಿ = ಅನುಭವಿಸುಗುಂ || ನ್ಯಾಯಾತಿಕ್ರಮದಿಂದಲ್ಪಸುಖಾನುಭವಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ :

ಇದಮಿಹ ಪರಮಾಶ್ಚರ್ಯಂ ಯದನ್ಯಾಯಸುಖಲವಾದಿಹಾಮುತ್ರ ಚಾನವಧೀರ್ದುಃಖಾನುಬಂಧಃ || ೫೧ ||

ಅರ್ಥ : ಇದಂ = ಇದು, ಇಹ = ಇಲ್ಲಿ, ಪರಮಾಶ್ಚರ್ಯಂ = ಪಿರಿದಚ್ಚರಿ, ಯತ್ = ಆವುದೊಂದು, ಅನ್ಯಾಯಸುಖಲವಾತ್ = ನ್ಯಾಯಮಂ ಮೀಱುವಲ್ಲಸುಖದಿಂದಂ, ಇಹ = ಇಲ್ಲಿಯುಂ, ಅಮುತ್ರ (ಭವೇ) ಚ = ಮಱುಭವದೊಳುಂ, ಅನವಧೀಃ = ಕಡೆಯಿಲ್ಲದ, ದುಃಖಾನುಬಂಧಃ = ದುಃಖದ ತೊಡರ್ಪಕ್ಕುಂ || ಅನ್ಯಾಯದಿಂದಾದಲ್ಪಸುಖಂ ಪಿರಿದು ದುಃಖಕ್ಕೆ ಕಾರಣಮೆಂಬುದು ತಾತ್ಪರ್ಯ || ಪುಣ್ಯ = ಪಾಂಪಗಳೆಂತಱಿಯಲಕ್ಕುಮೆಂದೊಡೆ ಪೇಳ್ವುದುತ್ತರವಾಕ್ಯಂ :

—-

೪೯. ಕಾಮ ಅರ್ಥಗಳನ್ನು ಕಡೆಗಣಿಸಿ ಧರ್ಮವನ್ನು ಮಾತ್ರ ಆಚರಿಸುವವನು ಫಲವತ್ತಾದ ಭೂಮಿಯನ್ನು ಬಿಟ್ಟು ಕಾಡುಭೂಮಿಯನ್ನು ಉಳ್ಳುವವನಂತಾಗುತ್ತಾನೆ.

೫೦. ಪರಲೋಕ ಸುಖಕ್ಕೆ ಭಂಗ ಬರದಂತೆ ಐಹಿಕ ಸುಖವನ್ನು ಅನುಭವಿಸುವವನೇ ನಿಜವಾದ ಸುಖಿ.

೫೧. ಅನ್ಯಾಯದಿಂದ ಉಂಟಾಗುವ ಅಲ್ಪ ಸುಖದಿಂದ ಇಹಪರಗಳಲ್ಲಿ ನಿರಂತರವಾದ ದುಃಖಾನುಭವ ಉಂಟಾಗುವುದೆಂಬುದು ಆಶ್ಚರ್ಯಕರವೇ.

—-

ಸುಖದುಃಖಾದಿಭಿಃ ಪ್ರಾಣಿನಾಮುತ್ಕರ್ಷಾಪಕರ್ಷೌ ಧರ್ಮಾಧರ್ಮ ಯೋರ್ಲಿಂಗಂ || ೫೨ ||

ಅರ್ಥ : ಪ್ರಾಣಿನಾಂ = ಪ್ರಾಣಿಗಳ, ಸುಖ-ದುಃಖಾದಿಭಿಃ = ಸುಖ-ದುಃಖಂ ಮೊದಲಾಗೊಡೆಯುವ ಱಿಂದಂ, ಉತ್ಕರ್ಷಾಪಕರ್ಷೌ = ಯುಥಾಕ್ರಮದಿಂ, ಪೆರ್ಚು – ಕುಂದುಗಳು – ಸಂಪತ್ತು – ದಾರಿದ್ರ್ಯಂಗಳು, ಧರ್ಮಾಧರ್ಮಯೋಃ = ಪುಣ್ಯ-ಪಾಪಂಗಳ, ಲಿಂಗಂ = ಕುಱುಹು || ಕ್ರಮದಿಂ ಕಾರ್ಯಮಪ್ಪ ಚಿಹ್ನಂಗಳು, ಸುಖಾದಿಗಳಿಂ ಪುಣ್ಯಮಂ, ದುಃಖಾದಿಗಳಂ ಪಾಪಮನಱಿವುದೆಂಬುದು ತಾತ್ಪರ್ಯಂ ||

ಕಿಮಪಿ ತದ್ವಸ್ತು[22] ನಾಸ್ತಿ ಯತ್ರ ನೈಶ್ವರ್ಯಮದೃಷ್ಟಾಧಿಷ್ಟಾತುಃ[23]|| ೫೩ ||

ಅರ್ಥ : ಅದೃಷ್ಟಾಧಿಷಠಾತುಃ = ಧರ್ಮದೊಳ್ ನೆಗಳ್ವಂಗೆ, ಯತ್ರ = ಆವುದೊಂದು ವಸ್ತುವಿನಲ್ಲಿ, ನೈಶ್ಚರ್ಯಂ = ಬಡತನಂ, ತದ್ವಸ್ತು = ಅಂತಪ್ಪ ವಸ್ತು, ಕಿಮಪಿ = ಏನುಂ, ನಾಸ್ತಿ = ಇಲ್ಲ, ಹಿ = ನೆಟ್ಟನೆ || ಪುಣ್ಯದಿಂದಭ್ಯುದಯ ನಿಃಶ್ರೇಯಸಂಗಳಕ್ಕುಮೆಂಬುದು ತಾತ್ಪರ್ಯಂ ||

ಇತಿ ಧರ್ಮಸಮುದ್ದೇಶಃ || ||

ಈ ಸಮುದ್ದೇಶದ ವಾಕ್ಯಂಗಳು || ೫೩ ||

—-

೫೨. ಪ್ರಾಣಿಗಳ ಸುಖದುಃಖಾದಿಗಳಿಂದ ಕಂಡುಬರುವ ಉತ್ಕರ್ಷ ಅಪಕರ್ಷಗಳು ತಾವು ಆಚರಿಸಿದ ಧರ್ಮ ಅಥವಾ ಅಧರ್ಮಗಳ ಗುರುತು.

೫೩. ಧರ್ಮದಲ್ಲಿ ತೊಡಗಿದವನಿಗೆ ಎಲ್ಲಿಯೂ ಬಡತನವೆಂಬುದಿಲ್ಲ.

—-

 

[1]ಮೈ. ದುರ್ಭಗಾಭರಣಮಿವ ಕೇವಲಂ ದೇಹಖೇದಾವಹಮೇವ.

[2]ಚೌ. ದೇಹಖೇದಾವಹಮೇವ.

[3]ಮೈ. ಚೌ. ಸ್ವಯಮನಾಚರತಃ

[4]ಚೌ. ನಿತ್ಯಮನಾಶ್ರಯಮಾಣಾನಾಂ.

[5]ಮೈ. ಸ್ವಯಮನಾಚರತಾಂ ಚೌ. ಅನಾಚರತೋ.

[6]ಮೈ. ಚೌ. ಅನುಭವತೋಪ್ಯಧರ್ಮಾನುಷ್ಠಾನ. ಧರ್ಮದ ಫಲವನ್ನು ಅನುಭವಿಸುತ್ತಿದ್ದೂ, ಅಧರ್ಮವನ್ನು ಮಾಡುವವನು ತನ್ನನ್ನು ತಾನು ತಿಳಿಯಲಾರನು ಎಂದು ಈ ವಾಕ್ಯದ ಅರ್ಥ. ನಮ್ಮ ಪ್ರತಿಯಲ್ಲಿ ‘ಅಧರ್ಮಾನುಷ್ಠಾನ’ದ ಬದಲಿಗೆ ‘ಧರ್ಮಅನನುಷ್ಠಾನ’ ಅಂದರೆ ಧರ್ಮವನ್ನು ಆಚರಿಸದಿರುವುದು ಎಂದು ಇದೆ. ಇದು ಸಂದರ್ಭಕ್ಕೆ ಹೆಚ್ಚು ಸೂಕ್ತವಾಗಿದೆ.

[7]ಪುರಶ್ಚಾರೀ: ಇದು ಮಾರ್ಗದರ್ಶಿ ಶಬ್ದಕ್ಕೆ ಸಮಾನಾಂತರ ಪದ.

[8]ಅಧರ್ಮವನ್ನು ಮಾಡಲಿಕ್ಕೆ ಇನ್ನೊಬ್ಬರು ಹೇಳಿಕೊಡಬೇಕಾಗಿಲ್ಲ;  ಅದಕ್ಕೆ ಮನುಷ್ಯನು ತಾನೇ ಮುಂದಾಗುತ್ತಾನೆ. ಎಂಬುದು ಈ ಸೂತ್ರದ ಭಾವಾರ್ಥ.

[9]‘ಫಲಸ್ಸ’ ಬದಲು ‘ಪಲರ್ಸ’ ಎಂದಿರಬೇಕು;  ಪಲರ್ಸಹಾಯರಾದೊಡಂ

[10]ಕೊರಲ್ಗುಡಿಗಿ ಬಂದ ಎಂಬ ಅಚ್ಚ ಕನ್ನಡ ಪದಪುಂಜವನ್ನು ಗಮನಿಸಬೇಕು. ಪ್ರಾಣಕುತ್ತಿಗೆಗೆ ಬರುವುದು ಎಂಬ ಮಾತು ರೂಢಿಯಲ್ಲಿದೆ. ಪ್ರಾಣ ಹೋಗುವ ಪ್ರಸಂಗ ಬಂದರೂ ಎಂದರ್ಥ.

[11]ಮೈ. ಸ್ವವಯಸನತರ್ಪಣಾಯ, ಚೌ. ವ್ಯಸನತರ್ಪಣಾಯ.

[12]ಮೈ. ಕಿಂ ನಾಮ ನ ಕರೋತ್ಯನಿಷ್ಟಂ, ಚೌ. ಮುತ್ತು ಜ ಖಲಸಂಗಮೇವ ಕಿಂ ನಾಮ ಭವತಿ ಅನಿಷ್ಟಂ.

[13]ಮೈ. ಚೌ. ಜ. ಅಗ್ನಿರಿವ.

[14]ಮೈ. ಚೌ. ತದಾತ್ವಸುಖ.

[15]ಎಡೆಯುಡುಗದ, ಎಂದಿಗೂ ನಶಿಸದ;  ಸುಖ > ಸೊಕ.

[16]ಮೈ. ಧರ್ಮಾತಿಕ್ರಮಾಲ್ಲಬ್ಧಂ. ಚೌ. ಧರ್ಮಾತಿಕ್ರಮಾತ್ ಧನಂ.

[17]ಮೈ. ಚೌ. ಕಿಮಪಿ ಶುಭಂ.

[18]ಬೀಜಮನುಣ್ಣ = ಬೀಜವನ್ನು ಉಣ್ಣುವವ = ಬಿತ್ತುವುದಕ್ಕೆ ಇಟ್ಟ ಬೀಜಗಳನ್ನು ತಿಂದು ಹಾಕುವವ.

[19]ಅಯತ್ಯಾಂ = ಮೇಲೆ = ಮುಂದೆ, ಅನಂತರದಲ್ಲಿ, ಮುಂಬರುವ ದಿನಗಳಲ್ಲಿ,

[20]ಬೆಳದ ಕೆಯ್ಯಂ ಬಿಸುಟು ಅಡವಿಯಂ ಉಳ್ಳನಂತಕ್ಕುಂ ಎಂಬುದು ನಾಣ್ಣುಡಿಯಂತಿದೆ.

[21]ಚೌ. ಸ ಖಲು ಸುಧೀರ್ಯೋಮುತ್ರ.

[22]ಮೈ. ಕಿಮಪಿ ಹಿ ನಾಸ್ತಿ ತದ್ವಸ್ತು ಚೌ. ಕಿಮಪಿ ಹಿ.

[23]ಮೈ. ಅಧಿಷ್ಠಾತ್ರ್ಯಾ ಇಲ್ಲಿ ಅರ್ಥಭೇದವಿದೆ. ಧರ್ಮವನ್ನಾಚರಿಸುವವನಿಗೆ (ಅದೃಷ್ಟಾಧಿಷ್ಠಾತುಃ) ಯಾವ ವಸ್ತುವಿನಲ್ಲಿಯೂ ಬಡತನವಿಲ್ಲ. ಎಂಬುದು ವ್ಯಾಖ್ಯಾನಕಾರನ ಭಾವಾರ್ಥ.

ಅದೃಷ್ಟದೇವತೆಯ ಪ್ರಭಾವವು (ಐಶ್ವರ್ಯಂ) ಯಾವ ವಸ್ತುವಿನಲ್ಲಿಯೂ ಇಲ್ಲದಿಲ್ಲ ಎಂಬುದು ಮೈ. ಪ್ರತಿಯ ಭಾವಾರ್ಥ. ಚೌ. ಪ್ರತಿಯಲ್ಲಿಯೂ ಅರ್ಥವು ಹೀಗೆ ಇದೆ. ಇದು ಹೆಚ್ಚು ಸಮಂಜಸವೆನಿಸುತ್ತದೆ.ನೀತಿವಾಕ್ಯಾಮೃತಂನೀತಿವಾಕ್ಯಾಮೃತಂ