ಈ ಶಾಸ್ತ್ರದೊಳ್ ಪುರುಷಾರ್ಥಚತುಷ್ಟಯಂ ವಿಶಿಷ್ಟಮಪ್ರಭೀಷ್ಟಮಮಭಿ ಧೀಯವೆಂಬುದಂ ಧ್ವನಿಯಿಸಲ್ವೇಡಿ ಬಂದುದು ಉತ್ತರವಾಕ್ಯಂ

ಅಥ ಧರ್ಮಾರ್ಥಕಾಮಫಲಾಯ ರಾಜ್ಯಾಯ ನಮಃ[1] || ೧ ||

ಅರ್ಥ : ಅಥ = ಇಷ್ಟದೇವತಾನಮಸ್ಕಾರಕರಣಾನಂತರ ಸಂಸಾರಿಗಳ್ಗೆ, ಧರ್ಮಾರ್ಥಕಾಮಫಲಾಯ = ಧರ್ಮಾರ್ಥಕಾಮಂಗಳಂ ಫಲಮಾಗುಳ್ಳ, ರಾಜ್ಯಾಯ = ರಾಜ್ಯಕ್ಕೆ, ನಮಃ = ನಮಸ್ಕಾರಂ ಗೈವೆಂ || ಧರ್ಮಾರ್ಥಕಾಮಂಗಳನುಳ್ಳದೆ ರಾಜ್ಯಮೆಂಬುದು ತಾತ್ಪರ್ಯಂ || ಧರ್ಮಸ್ವರೂಪಮಂ ಪೇಳ್ವುದುತ್ತರವಾಕ್ಯಂ :

ಯತೋsಭ್ಯುದಯನಿಶ್ರೇಯಸಸಿದ್ಧಿಃ ಸ ಧರ್ಮಃ[2] || ೨ ||

ಅರ್ಥ : ಯತಃ = ಆವುದೊಂದಱತ್ತಣಿಂ, ಅಭ್ಯುದಯ ನಿಃಶ್ರೇಯಸ = ಸಾಂಸಾರಿಕ ಮೋಕ್ಷಸುಖಂಗಳ್, ಸಿದ್ಧಿಃ = ನಿಷ್ಟತತಿ, ಸಃ = ಅದು, ಧರ್ಮಃ = ಧರ್ಮಮೆಂಬುದು, ಸಾಂಸಾರಿಕ ಮೋಕ್ಷಸುಖಂಗಳ್ ಧರ್ಮದಿಂದಕ್ಕುಮೆಂಬುದು ತಾತ್ಪರ್ಯಂ || ಅಧರ್ಮಮಂ ಪೇಳ್ದಪರ್ :

ಪುನರೇತದ್ ವಿಪರೀತಫಲೋsಧರ್ಮಃ || ೩ ||

ಅರ್ಥ : ಪುನಃ = ಮತ್ತೆ, ಏತದ್ವಿಪರೀತಫಲಃ = ಅಭ್ಯುದಯ – ನಿಃಶ್ರೇಯಸಂಗಳ್ಗೆ ವಿಪರೀತಮಪ್ಪ ನಾರಕತಿರ್ಯಗಾದಿದುಃಖಮಂ ಫಲಿಯಿಸುವುದು, ಅಧರ್ಮಃ = ಅಧರ್ಮಮೆಂಬುದಕ್ಕುಂ || ಅಧರ್ಮದಿಂದ ದುಃಖಮೆಂಬುದಭಿಪ್ರಾಯಂ || ಧರ್ಮಮಂ ನೆಗಳ್ವುಪಾಯಮಂ ಪೇಳ್ವುದುತ್ತರಸೂತ್ರಂ

—-

ಭಾವಾನುವಾದ

೧. ಧರ್ಮಾರ್ಥಕಾಮಗಳೆಂಬ ಪುರುಷಾರ್ಥಗಳ ಫಲರೂಪವಾದ ರಾಜ್ಯಕ್ಕೆ ನಮಸ್ಕಾರ.

೨. ಯಾವುದರಿಂದ ಐಹಿಕ ಅಭ್ಯುದಯವೂ ಪಾರಲೌಕಿಕ ಸಿದ್ಧಿಯೂ ಉಂಟಾಗುವುದೋ ಅದೇ ಧರ್ಮ.

೩. ಇದಕ್ಕೆ ವಿರುದ್ಧವಾದ ಫಲವುಂಟಾಗುವುದು ಅಧರ್ಮದಿಂದ.

—-

ಆತ್ಮವತ್ ಪರತ್ತ ಕುಶಲವೃತ್ತಿಚಿಂತನಂ ಶಕ್ತಿಸ್ತ್ಯಾಗತಪಸೀ ಚ
ಧರ್ಮಾಧಿಗಮೋಪಾಯಾಃ[3]
|| ೪ ||

ಅರ್ಥ : ಆತ್ಮವತ್ = ತನ್ನೊಳೆಂತಂತೆ, ಪರತ್ತ = ಪೆಱವು ಪ್ರಾಣಿಗಳೊಳು, ಕುಶಲವೃತ್ತಿಚಿಂತನಂ = ಹಿತಮಂ ಚಿಂತಿಪುದಂ, ಶಕ್ತಿತಃ = ಶಕ್ತಿಗೆ ತಕ್ಕಂತೆ, ತ್ಯಾಗ-ತಪಸೀ ಚ = ಮಿಕ್ಕ ನೆಗೞ್ತೆಯು || ದಯೆಯಿಲ್ಲದೆಲ್ಲಾ ನೆಗೞ್ತೆಗಳುಂ ಬಾರ್ತೆಯಲ್ಲೆಂಬುದಂ ಪೇಳ್ವುದುತ್ತರವಾಕ್ಯಂ

ನ ಖಲು ಭೂತದ್ರುಹಾಂ ಕಾಪಿ ಕ್ರಿಯಾ ಪ್ರಸೂತೇ ಶ್ರೇಯಾಂಸಿ || ೬ ||

ಅರ್ಥ : ಭೂತದ್ರುಹಾಂ = ಪ್ರಾಣಿಗಳಂ ಕೊಲ್ವರ್ಗಳ, ಕಾಪಿ ಕ್ರಿಯಾ = ಆವ ನೆಗಳ್ತೆಯುಂ, ಶ್ರೇಯಾಂಸಿ = ಒಳ್ಪುಗಳಂ, ಖಲು = ನಿಶ್ಚಯದಿಂ, ನ ಪ್ರಸೂತೇ = ಪುಟ್ಟಿಸದು || ದಯಾರಹಿತಮಪ್ಪ ನೆಗಳ್ತೆಗಳಿಂ ಪುಣ್ಯಮಿಲ್ಲೆಂಬುದೀ ಎರಡು ವ್ಯಾಕದಭಿಪ್ರಾಯಂ || ದಯೆಯ ಮಹಾತ್ಮ್ಯಮನುತ್ತರವಾಕ್ಯದಿಂ ಪೇಳ್ದಪರ್

ಪರತ್ರಾಜಿಘಾಂಸುಮನಸಾಂ ವ್ರತರಿಕ್ತಮಪಿ ಚಿತ್ತಂ ಸ್ವರ್ಗಾಯ ಜಾಯತೇ || ೭ ||

ಅರ್ಥ : ಪರತ್ರ = ಪೆಱವು ಪ್ರಾಣಿಗಳಲ್ಲಿ, ಅಜಿಘಾಂಸುಮನಸಾಂ = ಕೊಲ್ಲದಿರ್ಪ ಮನಮನುಳ್ಳವರ್ಗಳ, ಚಿತ್ತಂ = ಮನಂ, ವ್ರತರಿಕ್ತಮಪಿ = ವ್ರತಮಿಲ್ಲದಿರ್ದೊಡಂ, ಸ್ವರ್ಗಾಯ ಜಾಯತೇ = ಸ್ವರ್ಗಕ್ಕೆ ಕಾರಣಮಕ್ಕುಂ || ದಯಾಮಾತ್ರದಿಂದಭ್ಯುದಯಮಪ್ಪುದೆಂಬುದಭಿಪ್ರಾಯಂ | ಹಿಂಸೆಯಿಲ್ಲದ ವ್ರತಮ ನೆಗಳ್ಪುದೆಂಬುದಂ ಪೇಳ್ದಪರ್

—-

೪. ತನ್ನಂತೆಯೇ ಇತರರಿಗೂ ಒಳ್ಳೆಯದಾಗಬೇಕೆಂದು ಬಯಸುವುದು ಯಥಾಶಕ್ತಿ ದಾನ ಮತ್ತು ತಪಸ್ಸನ್ನು ಮಾಡುವುದು ಧರ್ಮವನ್ನು ಪಡೆಯುವ ಉಪಾಯಗಳು.

೫. ಸಕಲ ಪ್ರಾಣಿಗಳನ್ನೂ ಸಮನಾಗಿ ಕಾಣುವುದು ಎಲ್ಲ ಆಚರಣೆಗಳಿಗಿಂತಲೂ ಶ್ರೇಷ್ಠವಾದ ಆಚರಣೆ.

೬. ಪ್ರಾಣಿಗಳನ್ನು ಹಿಂಸಿಸುವವನ ಯಾವ ನಡವಳಿಕೆಯೂ ನಿಶ್ಚಯವಾಗಿಯೂ ಒಳ್ಳೆಯ ಪರಿಣಾಮವನ್ನುಂಟುಮಾಡದು.

೭. ಇತರರನ್ನು ಹಿಂಸಿಸುವ ಮನೋಭಾವವಿಲ್ಲದವರು ಯಾವ ವ್ರತವನ್ನು ಆಚರಿಸದೆ ಇದ್ದರೂ ಸ್ವರ್ಗವನ್ನು ಹೊಂದಬಲ್ಲರು.

—-

ತದ್‌ವ್ರತಮಾಚರಿತವ್ಯಂ ಯತ್ರ ನ ಸಂಶಯತುಲಾಮಾರೋಹತಃ
ಶರೀರಮನಸೀ
|| ೮ ||

ಅರ್ಥ : ಯತ್ರ = ಆವುದೊಂದಱಲ್ಲಿ, ಶರೀರಮನಸೀ = ಶರೀರಮನಂಗಳುಂ, ಸಂಶಯತುಲಾಂ = ಸಂದಯಮೆಂಬ ತೊಲೆಯಂ, ಆರೋಹತಃ = ಏಱುವುವು, ನ = ಆಗದು, ತದ್ವ್ರತಂ = ಅಂತಪ್ಪ ವ್ರತಂ, ಆಚರಿತವ್ಯಂ = ಆಚರಿಸಲ್ಪಡುವುದು || ಪಾಪಂಗಳಿಲ್ಲದುದಂ ನೆಗಳ್ವುದೆಂಬುದು ತಾತ್ರರ್ಯ || ಧರ್ಮಾಧಿಗಮೋಪಾಯದಲ್ಲಿ ತ್ಯಾಗಮಂ ಪೇಳ್ವುದುತ್ತರವಾಕ್ಯಂ

ಐಹಿಕಮುತ್ರಿ ಕಫಲಾರ್ಥಮರ್ಥವ್ಯಯಸ್ತ್ಯಾಗಃ || ೯ ||

ಅರ್ಥ: ಐಹಿಕಮುತ್ರಿಕಫಲಾರ್ಥಂ = ಈ ಭವದ ಪಱಭವದ ಕಾರಣಮಾಗಿ, ಅರ್ಥವ್ಯಯಃ = ಅರ್ಥದ ಬೀಯಂ, ತ್ಯಾಗಃ = ತ್ಯಾಗಮೇಂಬುದು || ನಿರರ್ಥಕವ್ಯಯಂಗೆಯ್ಯಲಾಗದೆಂಬುದು ತಾತ್ಪರ್ಯಂ || ನಿರರ್ಥಕವ್ಯಯಕ್ಕೆ ದೂಷಣಮಂ ಪೇಳ್ದಪರ್ :

ಭಸ್ಮನಿ ಹುತಮಿವಾಪಾತ್ರೇಷ್ವರ್ಥವ್ಯಯಃ || ೧೦ ||

ಅರ್ಥ : ಪಾತ್ರೇಷು = ಪಾತ್ರವಲ್ಲದವರ್ಗಳಲ್ಲಿ, ಅರ್ಥವ್ಯಯಃ = ಅರ್ಥಮಂ ಕುಡುಹಂ, ಭಸ್ಮನಿ ಹುತಮಿವ = ಬೂದಿಯೊಳ್ ಬೆಳ್ದಂತೆ || ಅವರೊಳರ್ಥದ ತವಿಲಿಂ ಕಾರ್ಯಮುಂ ಪುಣ್ಯಮುಮಿಲ್ಲೆಂಬುದು ತಾತ್ಪರ್ಯಂ || ಅರ್ಥಮಂ ಪಾತ್ರಮನಱಿದು ಬೀಯಂ ಗೆಯ್ವ, ಸ್ಥಳಮಂ ಪೇಳ್ವುದುತ್ತರವಾಕ್ಯಂ :

ಪಾತ್ರಂ ತ್ರಿವಿಧಂ ಧರ್ಮಪಾತ್ರಂ ಕಾರ್ಯಪಾತ್ರಂ ಕಾಮಪಾತ್ರಂ ಚೇತಿ || ೧೧ ||

ಅರ್ಥ : ಧರ್ಮಪಾತ್ರಂ = ದೇಗುರುದ್ವಿಜಾದಿಗಳು ಧರ್ಮಪಾತ್ರಂಗಳು, ಕಾರ್ಯಪಾತ್ರಂ = ದಾಸಿ, ಭೃತ್ಯಾದಿಗಳ್, ಕಾಮಪಾತ್ರಂ = ಸ್ತ್ರ್ಯಾದಿಗಳ್, ಧರ್ಮಪಾತ್ರಂ = ಧರ್ಮಪಾತ್ರಮುಂ, ಕಾರ್ಯಪಾತ್ರಂ = ಕಾರ್ಯಪಾತ್ರಮುಂ, ಕಾಮಪಾತ್ರಂ = ಕಾಮಪಾತ್ರಮುಮೆಂದಿಂತು, ಪಾತ್ರಂ = ಪಾತ್ರವು, ತ್ರಿವಿಧಂ = ಮೂದೆಱಂ || ಪೆಱವು ಪಾತ್ರಮಲ್ಲೆಂಬುದು ತಾತ್ಪರ್ಯಂ || ಅಪಾತ್ರದಾನದಿಂದಾದ ಕೀರ್ತಿ ನಿಃ ಫಲಮೆಂಬುದುತ್ತರವಾಕ್ಯಂ[4]

—-

೮. ಶರೀರಕ್ಕಾಗಲಿ ಮನಸ್ಸಿಗಾಗಲಿ, ಏನು ಅನರ್ಥವುಂಟಾಗುವುದೋ ಎಂಬ ಸಂಶಯಕ್ಕೆ ಕಾರಣವಿಲ್ಲದ ವ್ರತವನ್ನು ಆಚರಿಸಬೇಕು.

೯. ಇಹದಲ್ಲೂ ಪರದಲ್ಲೂ ಲಭಿಸುವ ಫಲಕ್ಕಾಗಿ ಧನವ್ಯಯಮಾಡುವುದೇ ತ್ಯಾಗ.

೧೦. ಅಪಾತ್ರರಿಗಾಗಿ ಧನವ್ಯಯ ಮಾಡುವುದು ಬೂದಿಯಲ್ಲಿ ಹೋಮ ಮಾಡಿದಂತೆ.

೧೧. ಧರ್ಮಪಾತ್ರ, ಕಾರ್ಯಪಾತ್ರ, ಕಾಮಪಾತ್ರ ಎಂದು ಪಾತ್ರರು ಮೂರು ವಿಧ.

—-

ಕಿಂ ತಯಾ ಕೀರ್ತ್ಯಾ ಯಾಶ್ರಿತಾನ್ನ ಬಿಭರ್ತಿ ಪ್ರತಿರುಣದ್ಧಿ ವಾ ಧರ್ಮಂ || ೧೨ ||

ಅರ್ಥ : ಯಾ = ಆವುದೊಂದು, ಆಶ್ರಿತಾನ್ = ಪೊರ್ದಿದರಂ, ನ ಬಿಭರ್ತಿ = ಪೊರೆಯದು, ಧರ್ಮಂ = ಧರ್ಮಮಂ, ಪ್ರತಿರುಣದ್ಧಿ ವಾ = ಕೆಡಿಸುಗುಂ ಮೇಣ್, ತಯಾ ಕೀರ್ತ್ಯಾ = ಆ ಕೀರ್ತಿಯಂ, ಕಿಂ ಏನು ಪ್ರಯೋಜನಂ? ಧರ್ಮಮುಮಾಶ್ರಿತರಕ್ಷಣಮುಮಂ ಮಾಳ್ಪುದೆಂಬು ದಭಿಪ್ರಾಯಂ || ತ್ಯಾಗಮಿಲ್ಲದೆ ಪ್ರಸಿದ್ಧಿಯಕ್ಕುಮೆಂಬುದಂ ಪೇಳ್ವುದುತ್ತರವಾಕ್ಯಂ

ಭಾಗೀರಥೀಶ್ರೀಪರ್ವತಾದಿವದ್ ಭಾವಾನಾಮನ್ಯದೇವ ಪ್ರಸಿದ್ಧೇಃ ಕಾರಣಂ ನ ಪುನಸ್ತ್ಯಾಗಃ[5]|| ೧೩ ||

ಅರ್ಥ : ಭಾಗೀರಥೀ = ಗಂಗೆಯುಂ, ಶ್ರೀಪರ್ವತಾದಿವತ್ = ಶ್ರೀಪರ್ವತಂ ಮೊದಲಾದವಕ್ಕಂತಂತೆ = ಭಾವಾನಂ = ಪದಾರ್ಥಂಗಳ್ಗೆ, ಅನ್ಯದೇವ = ಪೆಱತು, ಪ್ರಸಿದ್ಧೇಃ ಕಾರಣಂ = ಪ್ರಸಿದ್ಧಿಗೆ ಕಾರಣಂ, ಪುನಃ ಮತ್ತೆ, ನ ತ್ಯಾಗಃ = ತ್ಯಾಗಮಲ್ಲದು || ಕುಡೆ ಕೀರ್ತಿಯಾಗದೆಂಬುದರ್ಥಂ ||

ಯತೋ ನ ಖಲು ಗ್ರಹೀತಾರೋ ಲೋಕವ್ಯಾಪಿನಸ್ಸನಾತನಾಶ್ಚ[6] || ೧೪ ||

ಅರ್ಥ : ಯತೋ = ಆವುದೊಂದು ಕಾರಣದಿಂ, ಗ್ರಹೀತಾರಃ = ಈಸಿಕೊಂಬವರ್ಗಳ್, ಲೋಕವ್ಯಾಪಿನಃ = ಎಲ್ಲೆಡೆಯೊಳಿರ್ದರುಂ, ಸನಾತನಾಶ್ಚ = ನಿತ್ಯರು, ಖಲು = ನಿಶ್ಚಯದಿಂ, ನ = ಅಲ್ಲರು, ಪೊಗಳ್ತೆಗಂತರಂಗಯಶಃಕೀರ್ತಿನಾಮಮೆ ಕಾರಣಮೆಂಬುದು ತಾತ್ಪಯಂ || ಶರಣಾರ್ಥಿಗಳ್ಗೆ ಕುಡದರ್ಥಂ ನಿರರ್ಥಕವೆಂಬುದಂ ಪೇಳ್ದುದುತ್ತರವಾಕ್ಯದ್ವಯಂ

—-

೧೨. ಆಶ್ರಿತರನ್ನು ಪೋಷಿಸಿದ ಅಧರ್ಮವನ್ನು ತಡೆಯದ ಕೀರ್ತಿಯಿಂದ ಏನು ಪ್ರಯೋಜನ ?

೧೩. ಗಂಗೆ ಮತ್ತು ಶ್ರೀಪರ್ವತಗಳಿದ್ದಂತೆ ಹೇಗೋ ಹಾಗೆ ಪ್ರಸಿದ್ಧಿಗೆ ತ್ಯಾಗವೊಂದೇ ಕಾರಣವಲ್ಲ.

೧೪. ಯಾವುದೋ ಕಾರಣದಿಂದ ಸ್ವೀಕರಿಸುವವರು ಎಲ್ಲೆಡೆಗಳಲ್ಲಿಯೂ ಇರಬಹುದಾದರೂ ಅವರೆಲ್ಲರೂ ನಿಶ್ಚಯವಾಗಿಯೂ ಸತ್ಪಾತ್ರರಲ್ಲ.

—-

[7]ಖಲು ಕಸ್ಯಾಪಿ ಮಾಭೂದರ್ಥೋಯತ್ರಾಶಾಭಂಗಃ[8] ಶರಣಾಗತಾನಾಂ || ೧೫ ||

ಅರ್ಥ : ಯತ್ರ = ಆವುದೊಂದರ್ಥದೊಳು, ಶರಣಾಗತಾನಾಂ = ಶರಣ್ ಬೊಕ್ಕರ್ಗೆ, ಆಶಾಭಂಗಃ = ನಿರಾಸೆಯು, ಸಃ = ಆ, ಅರ್ಥಃ = ಅರ್ಥಂ, ಕಸ್ಯಾಪಿ = ಆವಂಗೆಯುಂ, ಮಾ ಭೂತ್ = ಆಗದಿರ್ಕೆ, ಖಲು = ನಿಕ್ಕುವದಿಂ.

ಅರ್ಥಿಷು ಷಂವಿಭಾಗಃ ಸ್ವಯಮುಪಭೋಗಶ್ಚಾರ್ಥಸ್ಯ ಹಿ ದ್ವೇ ಫಲೇ|| ೧೬ ||

ಅರ್ಥ : ಹಿ = ಆವುದೊಂದು ಕಾರಣದಿಂದಂ, ಅರ್ಥಿಷು = ಅರ್ಥಿಗಳಲ್ಲಿ, ಸಂವಿಭಾಗಃ = ಬೇರ್ಕ್ಕೆಯ್ವುದುಂ, ಸ್ವಯಮುಪಭೋಗಶ್ಚ = ತಾನುಪಭೋಗಿಸುವುದುಂ, ಅರ್ಥಸ್ಯ = ಅರ್ಥಕ್ಕೆ, ದ್ವೇ ಫಲೇ = ಎರಡುಂ ಫಲಂಗಳ್ || ತಾನುಪಭೋಗಿಸುವುದುಮಾಶ್ರಿತರಾಶೆಯಂ ಪೂರೈಸುವುದೆಂಬುದಭಿಪ್ರಾಯಂ || ಎಂತುಂ ಕುಡದಿರ್ದೊಡೆ ದೋಷಮಂ ಪೇಳ್ವುದುತ್ತರವಾಕ್ಯಂ

ನಾಸ್ತ್ಯೌಚಿತ್ಯಮೇಕಾಂತಲುಬ್ಧಸ್ಯ[9]|| ೧೭ ||

ಅರ್ಥ : ಔಚಿತ್ಯಂ = ಉಚಿತತ್ವಂ, ನಾಸ್ತಿ = ಇಲ್ಲ, ಏಕಾಂತಲುಬ್ಧಸ್ಯ = ಕಡುಲೋಭಗೆ || ಕಡುಲೋಭತೆ ಉಚಿತಮಲ್ಲಮೆಂಬುದಭಿಪ್ರಾಯಂ || ಔಚಿತ್ಯಲಕ್ಷಣಂ ಪೇಳ್ದಪರ್

ದಾನಪ್ರಿಯವಚನಾಭ್ಯಾಮನ್ಯಸ್ಯ ಸಂತೋಷೋತ್ಪಾದನಮೌಚಿತ್ಯಂ|| ೧೮ ||

ಅರ್ಥ : ದಾನ = ಕೊಡುವುದುಂ, ಪ್ರಿಯವಚನಾಭ್ಯಾಂ = ಮನ್ನಣೆಯುಮೆಂಬಿವಱಿಂ, ಅನ್ಯಸ್ಯ = ಪೆಱರ್ಗೆ, ಸಂತೋಷೋತ್ಪಾದನಂ = ಸಂತಸಮಂ ಮಾಳ್ಪುದು, ಔಚಿತ್ಯಂ = ಔಚಿತ್ಯಮೆಂಬುದುಂ || ಮನ್ನಿಸಿ ಕೊಡುವುದೆಂಬುದು ಹೃದಯಂ || ತ್ಯಾಗಿಗೆ ನಿಂದಾಸ್ತುತಿಗೆಯ್ದಪರ್ :

—-

೧೫. ಶರಣಾಗತರಿಗೆ ಆಶಾಭಂಗವನ್ನುಂಟುಮಾಡುವ ಅರ್ಥವು ನಿಶ್ಚಯವಾಗಿಯೂ ಯಾರ ಪ್ರಯೋಜನಕ್ಕೂ ಆಗುವುದಿಲ್ಲ.

೧೬. ಯಾಚಕರಿಗೆ ಹಂಚಿಕೊಡುವುದು. ತಾನೇ ಉಪಭೋಗಿಸುವುದು ಇವೆರಡೇ ಧನವಿರುವುದರ ಪ್ರಯೋಜನಗಳು.

೧೭. ಕಡುಲೋಭಿಗೆ ಔಚಿತ್ಯವೆನ್ನುವುದಿಲ್ಲ.

೧೮. ದಾನ ಮತ್ತು ಪ್ರಿಯವಚನಗಳಿಂದ ಇತರರಲ್ಲಿ ಸಂತೋಷವನ್ನುಂಟುಮಾಡುವುದೇ ಔಚಿತ್ಯ.

—-

ಸ ಖಲು ಲುಬ್ಧೋ[10] ಯಃ ಸತ್ಸು ವಿನಿಯೋಗಾದಾತ್ಮನಾ ಸಹ ಜನ್ಮಾಂತರೇಷು ನಯತ್ಯರ್ತ್ಥಂ || ೧೯ ||

ಅರ್ಥ : ಯಃ = ಆವನೋರ್ವಂ, ಸತ್ಸು = ಸತ್ಪುರುಷರೊಳ್, ವಿನಿಯೋಗಾತ್ ಕೊಡುವುದಱತ್ತಣಿಂ, ಅರ್ತ್ಥಂ = ಅರ್ತ್ಥಮಂ, ಜನ್ಮಾಂತರೇಷು = ಮರುಭವಂಗಳಲ್ಲಿ, ಆತ್ಮನಾ ಸಹ = ತನ್ನೊಡನೆ, ನಯತಿ = ಒಯ್ವಂ, ಸ ಖಲು = ಆತನೇ ನಿಶ್ಚಯದಿಂ, ಲುಬ್ಧಃ = ಲೋಭಿಯು || ಸತ್ಪಾತ್ರಕ್ಕೆ ಧನಮಂ ಕುಡಲೆವೇಳ್ಕುಮೆಂಬುದು ತಾತ್ಪರ್ಯಂ || ಬಱಿದಾಸೆದೋರ್ಪೊಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ಅದಾತುಃ ಪ್ರಿಯಾಲಾಪೋsನ್ಯತ್ರ ಲಾಭಸ್ಯಾಂತರಾಯಃ || ೨೦ ||

ಅರ್ಥ : ಅದಾತುಃ = ಕುಡದಾತನ, ಪ್ರಿಯಾಲಾಪಃ = ಆದರದ ನುಡಿ, ಅನ್ಯತ್ರ = ಪೆಱವೆಡೆಯ, ಲಾಭಸ್ಯ = ಪೆಡೆಪಿಂಗೆ, ಅಂತರಾಯಃ = ವಿಘ್ನಂ || ಕುಡದೊಳ್ನುಡಿ ಬೇಡೆಂಬುದು ತಾತ್ಪಯಂ || ಇಂತಪ್ಪ ತ್ಯಾಗಮಾಗದೆಂಬುದುತ್ತರವಾಕ್ಯಂ :

ಸ ಖಲು ತ್ಯಾಗೋ ದೇಶತ್ಯಾಗಾಯ ಯಸ್ಮಿನ್ ಕೃತೇ ಭವತ್ಯಾತ್ಮನೋ ದೌಸ್ಥಿತ್ಯಂ[11] || ೨೧ ||

ಅರ್ಥ : ಯಸ್ಮಿನ್ = ಆವುದೊಂದು ತ್ಯಾಗವು, ಕೃತೇ = ಮಾಡಲ್ಪಟ್ಟದಾದೊಡೆ, ಆತ್ಮನಃ = ತನಗೆ ದೌಸ್ಥಿತ್ಯಂ = ಬಡತನಂ, ಭವತಿ = ಅಕ್ಕುಂ, ಸ ತ್ಯಾಗಃ = ಆ ತ್ಯಾಗವು, ದೇಶತ್ಯಾಗಾಯ = ದೇಶತ್ಯಾಗಕ್ಕೆ ಕಾರಣಂ ಖಲು = ನಿಕ್ಕುವುದಿಂ || ತಕ್ಕುದನಱಿದು ವಿತ್ತಮನಱಿದೀವುದೆಂಬುದು ತಾತ್ಪರ್ಯ || ಇಂತಪ್ಪ ಬಯಕೆ ಪೊಲ್ಲೆಂಬುದುತ್ತರವಾಕ್ಯಂ :

—-

೧೯. ತನ್ನ ಧನವನ್ನು ಸಜ್ಜನರಲ್ಲಿ ವಿನಿಯೋಗಿಸದೆ. ಯಾವನು ಅದನ್ನು ಜನ್ಮಾಂತರಗಳಿಗೂ ತೆಗೆದುಕೊಂಡು ಹೋಗುವನೋ ಆತನೇ ನಿಶ್ಚಯವಾಗಿಯೂ ಲೋಭಿ.

೨೦ ಕೊಡದಾತನ ಅದರದ ಮಾತುಗಳು ಬೇರೆ ಕಡೆ ಪಡೆಯುವುದಕ್ಕೂ ಅಡ್ಡಿಯಾಗುತ್ತವೆ.

೨೧. ತನಗೇ ದುಸ್ಥಿತಿಯನ್ನುಂಟುಮಾಡುವಷ್ಟು ತ್ಯಾಗನಿರತನಾದರೆ ಅವನು ದೇಶವನ್ನೇ ಬಿಟ್ಟು ಹೋಗಬೇಕಾಗಿ ಬರುತ್ತದೆ.

—-

ಸ ಖಲು ಪರಿಪಂಥ್ಯರ್ಥೀಯಃ[12]ಪರಸ್ಯ ದೌಸ್ಥಿತ್ಯಂ ಜಾನನ್ನಷ್ಯಭಿ ಲಷತ್ಯರ್ಥಂ || ೨೨ ||

ಅರ್ಥ : ಯಃ = ಆವನೋರ್ವಂ, ಪರಸ್ಯ = ಪೆಱನ, ದೌಸ್ಥಿತ್ಯಂ = ಬಡತನಮಂ, ಜಾನನ್ನಪಿ = ಲಱಿವುತ್ತುಂ, ಅರ್ಥಂ = ಅರ್ಥಮಂ, ಅಭಿಲಷತಿ = ಬಯಸುವಂ, ಸಃ = ಆ, ಅರ್ಥೀ = ಬೇಳ್ವಂ, ಪರಿಪಂಥೀ ಖಲು = ಆಱಡಿಕಾರನಂತೆ || ಕಡುಬಡವನಂ ಬೇಡಲಾಗದೆಂಬುದು ಹೃದಯಂ || ಇಂತಪ್ಪಂಗೆ ಬಂಧುಗಳಿಲ್ಲೆಂಬುದುತ್ತರವಾಕ್ಯಂ :

ಸದೈವ ದುಸ್ಥಿ ತಾನಾಂ ಕೋ ನಾಮ ಬಂಧುಃ || ೨೩ ||

ಅರ್ಥ : ಸದೈವ = ಎಲ್ಲಾ ಕಾಲಮುಂ, ದುಃಸ್ಥಿತಾನಾಂ = ಬಡವರ್ಗೆ, ಕೋ ನಾಮ = ಆವಂ ನಿಶ್ಚಯದಿಂ, ಬಂಧುಃ = ನೆಂಟಂ || ಎಲ್ಲಾ ಕಾಲಮಿಲ್ಲಮೆಯಾಗಿರ್ಪಂಗಾರುಮಿಲ್ಲೆಂಬುದು ತಾತ್ಪರ್ಯಂ || ನಿಚ್ಚಲುಂ ಬೇಡಲಾಗದೆಂಬುದುತ್ತರವಾಕ್ಯಂ :

ನಿತ್ಯಮರ್ಥಯಮಾನಾತ್[13] ಕೋ ನಾಮ ನೋದ್ವಿಜತೇ || ೨೪ ||

ಅರ್ಥ : ನಿತ್ಯಂ = ಆವಾಗಳುಂ, ಅರ್ಥಯಮಾನಾತ್ = ಅರ್ಥಮಂ ಬೇಳ್ವನತ್ತಣಿಂ, ಕೋ ನಾಮ = ಆವಂ, ನೋದ್ವಿಜತೇ = ಬೇಸಱಂ ಸಲೆ ಬೇಳ್ವಂ || ಆವನಾದೊಡಂ ಬೇಸಱುವನೆಂಬುದು ತಾತ್ಪಯಂ || ಧರ್ಮಾಧಿಗಮೋಪಾಯದಲ್ಲಿ ತಪಮಂ ಪೇಳ್ವುದುತ್ತರವಾಕ್ಯಂ :

ಇಂದ್ರಿಯ ಮನಸೋರ್ನಿಯಮಾನುಷ್ಠಾನಂ ತಪಃ || ೨೫ ||

ಅರ್ಥ : ಇಂದ್ರಿಯಮನಸೋಃ = ಇಂದ್ರಿಯಮುಂ ಮನಮುಮೆಂಬಿವಱ, ನಿಯಮಾನುಷ್ಠಾನಂ = ನಿಯಮಿಸುವ ನೆಗಳ್ತೆ, ತಪಃ = ತಪಮೆಂಬುದು || ನಿಯಮಿತನಾಗಲೆವೇಳ್ಕುಮೆಂಬುದು ತಾತ್ಪರ್ಯಂ || ನಿಯಮಂ ಪೇಳ್ವುದುತ್ತರವಾಕ್ಯದ್ವಯಂ ||

ವಿಹಿತಾಚರಣಂ ನಿಷಿದ್ಧ ಪರಿವರ್ಜನಂ ಚ ನಿಯಮಃ || ೨೬ ||

ಅರ್ಥಃ ವಿಹಿತಾಚರಣಂ = ಆಗಮದೊಳ್ ಪೇಳ್ವುದಂ ನೆಗಳ್ವುದುಂ, ನಿಷಿದ್ಧಪರಿವರ್ಜನಂ ಚ = ಆಗದೆಂಬುದಂ ಮಾಣ್ಪುದುಂ, ನಿಯಮಃ = ನಿಯಮಮೆಂಬುದು ||

—-

೨೨. ಇನ್ನೊಬ್ಬನು ಕಷ್ಟ೨ಪರಿಸ್ಥಿತಿಯಲ್ಲಿರುವುದನ್ನು ತಿಳಿದೂ ಆತನಿಂದ ಏನಾದರೂ ಪ್ರಯೋಜನವನ್ನು ಪಡೆಯಲಿಚ್ಛಿ ಸುವವನು ಶತ್ರುವೇ.

೨೩. ಯಾವಾಗಲೂ ಹೀನಸ್ಥಿತಿಯಲ್ಲಿರುವವರಿಗೆ ಬಂಧುಗಳುಂಟೆ?

೨೪. ಯಾವಾಗಲೂ ಬೇಡುವವರಿಂದ ಬೇಸರವುಂಟಾಗದೆ ?

೨೫. ಇಂದ್ರಿಯಗಳ ಮತ್ತು ಮನಸ್ಸಿನ ಮೇಲಿನ ಹಿಡಿತವೇ ತಪಸ್ಸು

೨೬. ಶಾಸ್ತ್ರಗಳಲ್ಲಿ ವಿಧಿಸಿರುವ ಕಾರ್ಯಗಳನ್ನು ಮಾಡುವುದೂ, ನಿಷಿದ್ಧವಾದವುಗಳನ್ನು ಬಿಡುವುದೂ ನಿಯಮ.

—-

ವಿಧಿನಿಷೇಧಾವೈತಿಹ್ಯಾಯತ್ತೌ || ೨೭ ||

ಅರ್ಥ : ವಿಧಿ ನಿಷೇಧೌ = ವಿಧಿಯುಂ, ನಿಷೇಧಮುಮೆಂಬಿವು, ಐತಿಹ್ಯಾಯತ್ತೌ[14] = ಆಗಮಾಧೀನಂಗಳ್ || ಆಗಮದೊಳ್ ಪೇಳ್ದುದಂ ನೆಗಳ್ವುದು, ಬೇಡೆಂಬುದಂ ಮಾಣ್ಪುದೆಂಬುದು ತಾತ್ಪರ್ಯಂ || ಇಂತಪ್ಪುದಾಗಮಮೆಂಬುದಂ ಪೇಳ್ವುದುತ್ತರವಾಕ್ಯಂ

ತತ್ ಖಲು ಸದ್ಫಃ ಶ್ರದ್ಧೇಯಮೈತಿಹ್ಯಂ ಯತ್ರ ಪ್ರಮಾಣಬಾಧಾ ಪೂರ್ವಾಪರವಿರೋಧೋ ವಾ || ೨೮ ||

ಅರ್ಥ : ಯತ್ರ ಆವುದೊಂದಾಗಮದೊಳು, ಪ್ರಮಾಣಬಾಧಾ = ಪ್ರತ್ಯಕ್ಷಾನುಮಾನೋಪಮಾನಾ ಗಮಾರ್ಥಾಪತ್ಯಭಾವಂಗಳೆಂಬಾಱುಂ ಪ್ರಮಾಣಂ ಪ್ರತ್ಯಕ್ಷಾದಿ ಪ್ರಮಾಣಬಾಧೆಯುಂ ಪೂರ್ವಾಪರವಿರೋಧೋ ವಾ = ಪೂರ್ವಾಪರಂಗಳೊಳ್ ವಿರೋಧಂ ಮೇಣ್, ನ = ಇಲ್ಲ, ತತ್ ಖಲು = ಅಂತಪ್ಪುದು, ಐತಿಹ್ಯಂ = ಆಗಮಂ, ಸದ್ಭಿಃ = ಸತ್ಪುರುಷರಿಂ, ಶ್ರದ್ಧೇಯಂ = ನಂಬಲಕ್ಕುದು || ದೃಷ್ಟಾದೃಷ್ಟಬಧೆಯಿಲ್ಲದುದೇ ಸಿದ್ಧಾಂತಮೆಂಬುದು ತಾತ್ಪರ್ಯಂ || ನಿರಿಹಮಿಲ್ಲದವರ್ಗೆ ದೂಷಣಮಂ ಪೇಳ್ವುದುತ್ತರವಾಕ್ಯಂ :

ಹಸ್ತಿಸ್ನಾನಮಿವ[15] ಸರ್ವಮನುಷ್ಠಾನಮನಿಯಮಿತೇಂದ್ರಿಯಮನೋ ವೃತ್ತೀನಾಂ || ೨೯ ||

ಅರ್ಥ : ಅನಿಯಮಿತಂ = ನಿಯಮಿಸದು, ಇಂದ್ರಿಯಮನೋವೃತ್ತೀನಾಂ = ಇಂದ್ರಿಯ ಮನಂಗಳ ನೆಗಳ್ತೆಯನ್ನುಳ್ಳವರ್ಗಳ, ಸರ್ವಂ = ಎಲ್ಲಾ, ಅನುಷ್ಠಾನಂ = ನೆಗಳ್ತೆಗಳ್, ಹಸ್ತಿಸ್ನಾನಮಿವ = ಆನೆಯ ಮೀಹದಂತೆ || ನಿಯಮಮಿಲ್ಲದನುಷ್ಠಾನಂ ಪಾಪಮಂ ಕೆಡಿಸಲಾಱದೆಂಬುದು ತಾತ್ಪರ್ಯ || ಜ್ಞಾನಿಗಂ ನಿಯಮಮಿಲ್ಲದಿರ್ದೊಡೆ ದೋಷಮಂ ಪೇಳ್ವುದುತ್ತರವಾಕ್ಯಂ :

—-

೨೭. ವಿಧಿ ನಿಷೇಧಗಳು ಸಂಪ್ರದಾಯಾನುಸಾರವಾಗಿರುವಂಥವು.

೨೮. (ಶಾಸ್ತ್ರಾದಿ) ಪ್ರಮಾಣಗಳಿಗೆ ಬಾಧೆಯೂ. ಪೂರ್ವಾಪರ ವಿರೋಧವೂ ಇಲ್ಲದ ಪರಂಪರಾಗತ ವಿಷಯಗಳನ್ನು ಸತ್ಪುರುಷರು ನಂಬಬೇಕು.

೨೯. ಇಂದ್ರಿಯಗಳ ಮತ್ತು ಮನಸ್ಸಿನ ಪ್ರವೃತ್ತಿಯನ್ನು ಹಿಡಿತದಲ್ಲಿಟ್ಟುಕೊಳ್ಳದವರ ಅನುಷ್ಠಾನಗಳು ಗಜಸ್ನಾನದಂತೆ ನಿಷ್ಫಲ.

—-

 

[1]ಇದೇ ಅರ್ಥದ ವಿಸ್ತೃತವಾದ ಶ್ಲೋಕವು ಚೌಖಂಬಾ ಪ್ರತಿಯಲ್ಲಿ ಹೀಗಿದೆ. ನಮೋಸ್ತು ರಾಜ್ಯವೃಕ್ಷಾಯ ಷಾಡ್ಗುಣ್ಯಾಯ ಪ್ರಶಾಪಿನೇ ಸಾಮಾದಿಚಾರುಪುಷ್ಟಾಯ ತ್ರಿವರ್ಗಫಲದಾಯಿನೇ. ಷಡ್ಗುಣಗಳ ಶಾಖೆಗಳುಳ್ಳ ಸಾಮ ಮುಂತಾದ ಉಪಾಯಗಳ ಪುಷ್ಪಗಳುಳ್ಳ ಧರ್ಮ, ಅರ್ಥ, ಕಾಮಗಳೆಂಬ ತ್ರಿವರ್ಗ ಫಲಗಳನ್ನು ಕೊಡುವ ರಾಜ್ಯವೃಕ್ಷಕ್ಕೆ ನಮಸ್ಕಾರಗಳೆಂದು ಇದರ ಅರ್ಥ.

ಷಾಡ್ಗುಣ್ಯ, ಸಾಮ, ದಾನ ಮುಂತಾದ ಉಪಾಯಗಳು ಧರ್ಮ, ಅರ್ಥ, ಕಾಮಗಳೆಂಬ ಪುರುಷಾರ್ಥಗಳು ಇವುಗಳನ್ನು ಕುರಿತು ಮುಂದೆ ವಿವರಗಳಿವೆ.

ಮೈ. ಧರ್ಮಾರ್ಥಕಾಮಮೋಕ್ಷರೂಪಸರ್ವಪುರುಷಾರ್ಥಫಲಮಿದಂ ರಾಜ್ಯಂ ನಮ್ಮ ಪ್ರತಿಯಲ್ಲಿ ಮೋಕ್ಷ ಎಂಬ ಪದವಿಲ್ಲ ಎಂಬುದನ್ನು ಗಮನಿಸಬೇಕು.

[2]ಅಭ್ಯುದಯ ಎಂದರೆ ಐಹಿಕ ಸುಖವೆಂದೂ ನಿಃಶ್ರೇಯಸ್ ಎಂದರೆ ಪಾರಮಾರ್ಥಿಕ ಶ್ರೇಯಸ್ಸು ಎಂದೂ ಮೈ. ಯಲ್ಲಿ ಅರ್ಥೈಸಲಾಗಿದೆ. ವ್ಯಾಖ್ಯಾನಕಾರನು ಇವನ್ನು ಸಾಂಸಾರಿಕ ಸುಖ ಮತ್ತು ಮೋಕ್ಷ ಸುಖ ಎಂದು ಕರೆದಿದ್ದಾನೆ.

[3]ಧರ್ಮವನ್ನು ಸಾಧಿಸುವ ಉಪಾಯಗಳನ್ನು ಈ ವಾಕ್ಯವು ತಿಳಿಸುತ್ತದೆ. ಅವುಗಳಲ್ಲಿ ತನ್ನಂತೆ ಪರರ ಹಿತವನ್ನು ಬಗೆಯುವುದು ಎಂಬುದು ಒಂದು, ಇದಕ್ಕೆ ದಯೆ ಎಂದು ವ್ಯಾಖ್ಯಾನಕಾರನು ಅರ್ಥೈಸಿದ್ದಾನೆ.

[4]ಮುಂದಿನ ವಾಕ್ಯದ ಸಾರಾಂಶವನ್ನು ವ್ಯಾಖ್ಯಾನಕಾರನು ಅಪಾತರದಾನದಿಂದಾದ ಕೀರ್ತಿ ನಿಷ್ಪಲ ಎಂದು ಕೊಡುತ್ತಾನೆ;  ಆದರೆ, ಅದು ಆಶ್ರಿತರ ರಕ್ಷಣೆ ಮತ್ತು ಧರ್ಮವನ್ನು ಪಾಲಿಸುವ ಬಗ್ಗೆ ಇದೆ.

[5]ಚೌ. ದಲ್ಲಿ ಭಾಗೀರಥೀ ಶ್ರೀಪರ್ವತವತ್ ಎಂಬ ಪಾಠವಿದ್ದು ಗಂಗಾ ಲಕ್ಷ್ಮೀ, ವಿಂಧ್ಯ, ಹಿಮಾಲಯ ಮುಂತಾದ ಪರ್ವತಗಳು ಎಂದು ಅರ್ಥಮಾಡಲಾಗಿದೆ. ಮೈ: ಶ್ರೀ ಪಾರ್ವತಿವತ್ ಎಂಬ ಪಾಠವಿದ್ದು ಅಡಿಟಿಪ್ಪಣಿಯಲ್ಲಿ ಶ್ರೀಪರ್ವತವತ್ ಎಂಬ ಇನ್ನೊಂದು ಪಾಠವನ್ನು ಕೊಡಲಾಗಿದೆ.

[6]ಮೈ. ಮತ್ತು ಚೌ. ಗೃಹೀತಾರೋ ವ್ಯಾಪಿನಃ.

ಇಲ್ಲಿಯ ೧೨, ೧೩, ೧೪ ನೇ ವಾಕ್ಯಗಳು ಚೌ. ದಲ್ಲಿ ಒಂದೇ ವಾಕ್ಯದಲ್ಲಿ ಅಡಕವಾಗಿದೆ. ಮೈ. ವಾಕ್ಯದಲ್ಲಿ ಎರಡು ವಾಕ್ಯಗಳಲ್ಲಿ ಸೇರಿವೆ.

೧೩, ೧೪ನೇ ವಾಕ್ಯಗಳ ಅರ್ಥ ಸ್ಪಷ್ಟವಿಲ್ಲ. ವ್ಯಾಖ್ಯಾನಕಾರನು ಅದರ ಭಾವಾರ್ಥವನ್ನು ಸ್ಪಷ್ಟಪಡಿಸಿಲ್ಲ. ‘ಕುಡೆ ಕೀರ್ತಿಯಾಗದೆಂಬುದರ್ಥಂ’ ಎಂದು ಹೇಳುತ್ತಾನೆ. ಕೀರ್ತಿ ಬರಬೇಕಾದರೆ ತ್ಯಾಗಕ್ಕಿಂತ ಅಂತರಂಗ ಯಶಃಕೀರ್ತಿ ಕಾರಣ, ಯಾಕಂದರೆ ಪಡೆದುಕೊಳ್ಳುವರು ಎಲ್ಲೆಲ್ಲಿಯೂ ಯಾವಾಗಲೂ ಇರುವುದಿಲ್ಲ ಎಂದು ಹೇಳುತ್ತಾನೆ. ಬಹುಶಃ ತ್ಯಾಗವೊಂದೇ ಕೀರ್ತಿಗೆ ಕಾರಣವಲ್ಲ ಎಂದು ಹೇಳುವಂತೆ ತೋರುತ್ತದೆ.

[7]ಮೈ. ಚೌ. (ಜಯಪುರ) : ಸಃ ಖಲು.

[8]ಮೈ. ಚೌ. ಯತ್ರಾಸಂವಿಭಾಗ

[9]ಎಕಾಂತಲುಬ್ಧ. ಇತರರಿಗೆ ಕೊಡದೆ ಎಲ್ಲವನ್ನೂ ತಾನೇ ಉಪಭೋಗಿಸುವವನು;  ಕಡುಲೋಭಿ ಚೌ. ದಲ್ಲಿ ಇಲ್ಲಿಯ ೧೬, ೧೭ ನೇ ವಾಕ್ಯಗಳು ಒಂದೇ ವಾಕ್ಯದಲ್ಲಿ ಅಡಕವಾಗಿದೆ.

[10]ಲುಬ್ಧ ಎಂಬ ಪದಕ್ಕೆ ಮೈ. ದಲ್ಲಿಯ ಅಭಿನಂದನೀಯ ಇತ್ಯಾದಿ ಎಂಬ ಅರ್ಥವು ಸರಿಯಲ್ಲ. ಧನವನ್ನು ಇತರರಿಗೆ ಕೊಡದೆ ತಾನೇ ಜನ್ಮಾಂತರದಲ್ಲಿಯೂ ಕೊಂಡೊಯ್ಯುವವನು ಲೋಭಿಯು ಎಂಬುದು ಭಾವಾರ್ಥ. ೧೭ನೆಯ ವಾಕ್ಯದ ಔಚಿತ್ಯವನ್ನು ೧೮ನೆಯ ವಾಕ್ಯದಲ್ಲಿ ತಿಳಿಸಿ ‘ಏಕಾಂತಲುಬ್ಧಾಯ’ ವೈಶಿಷ್ಟ್ಯವನ್ನು ೧೯ನೆಯ ವಾಕ್ಯದಲ್ಲಿ ವ್ಯಂಗವಾಗಿ ವಿವರಿಸಿರುವುದು ಚೆನ್ನಾಗಿದೆ.

[11]ಈ ವಾಕ್ಯವು ಮೈ. ಮತ್ತು ಚೌ. ಗಳಲ್ಲಿ ೮ನೇ ವಾಕ್ಯವಾಗಿದೆ.

[12]ಮೈ. ಚೌ. ಸ ಖಲ್ವರ್ಥೀ ಪರಿಪಂಥೀ.

[13]ಚೌ : ನಿತ್ಯಮರ್ಥಯತಾಂ.

[14]ಐತಿಹ್ಯ ಎಂಬ ಪದಕ್ಕೆ ವ್ಯಾಖ್ಯಾನಕಾರನು ಆಗಮ ಎಂದು ಅರ್ಥಮಾಡಿದ್ದಾನೆ.

[15]ಮೈ. ಹಸ್ತಿಸ್ನಾನಮಿವ ವಿಫಲಂ.