ದ್ವಿತೀಯಪುರುಷಾರ್ಥಮಂ ಪೇಳ್ವಲ್ಲಿ ಅರ್ಥಸ್ವರೂಪಮಂ ಪೇಳ್ವುದುತ್ತರವಾಕ್ಯಂ

ಯತಃ ಸರ್ವಪ್ರಯೋಜನಸಿದ್ಧಿ ಸೋsರ್ಥಃ || || ೫೪ ||

ಅರ್ಥ : ಯತಃ = ಆವುದೊಂದಱತ್ತಣಿಂ, ಸರ್ವಪ್ರಯೋಜನಸಿದ್ಧಿಃ = ಎಲ್ಲಾ ಪ್ರಯೋಜನಸಿದ್ಧಿಯೋ, ಸಃ = ಅದು ಅರ್ಥಃ = ಅರ್ಥಮೆಂಬುದು || ಪ್ರಯೋಜನಸಿದ್ಧಿಯಂ ಮಾಡದುದರ್ಥಮಲ್ಲೆಂಬುದು ತಾತ್ಪರ್ಯಂ || ಇಂತಪ್ಪಂಗರ್ಥೋಪಾರ್ಜನಮಕ್ಕುಮೆಂಬು ದುತ್ತರವಾಕ್ಯಂ :

ಸೋsರ್ಥಸ್ಯ ಭಾಜನಂ ಯೋsರ್ಥಾನುಬಂಧೇನಾರ್ಥಮನುಭವತಿ || || ೫೪ ||

ಅರ್ಥ : ಸಃ = ಆತಂ, ಅರ್ಥಸ್ಯ = ಅರ್ಥಕ್ಕೆ, ಭಾಜನಂ = ಭಾಜನನಕ್ಕುಂ, ಯಃ = ಆವನೋರ್ವಂ, ಅರ್ಥಾನುಬಂಧೇನ = ಅರ್ಥಾನುಬಂಧದಿಂ, ಅರ್ಥಂ = ಅರ್ಥಮಂ, ಅನುಭವತಿ = ಅನುಭವವಿಸುಗುಂ = ಅರ್ಥಮಂ ಪೆರ್ಚಿಸುತ್ತಮನುಭವಿಸುಗೆಂಬುದು ತಾತ್ಪರ್ಯಂ || ಅರ್ಥಾನುಬಂಧಮಂ ಪೇಳ್ವುದುತ್ತರವಾಕ್ಯಂ :

ಅಲಬ್ಧಲಾಭೋ ಲಬ್ಧ ಪರಿರಕ್ಷಣಂ ರಕ್ಷಿತವಿವರ್ಧನಂ[1] ಚ ಅರ್ಥಾನುಬಂಧಃ || || ೫೬ ||

ಅರ್ಥ : ಅಲಬ್ಧಲಾಭಃ = ಮುನ್ನಿಲ್ಲದುದಂ ಪಡೆವುದುಂ, ಲಬ್ಧಪರಿರಕ್ಷಣಂ = ಪಡೆವುದದಂ ಕಾವೊಡಂ, ರಕ್ಷಿತವಿವರ್ಧನಂ ಚ = ಕಾವುದಂ ಪೆರ್ಚಿಸುವುದುಂ, ಅರ್ಥಾನುಬಂಧಃ = ಅರ್ಥಾನುಬಂಧಮೆಂಬುದುಂ || ಉಚಿತವ್ಯಯಮಂ ಮಾಡಿದೊಡ್ಡಲ್ಲದರ್ಥಮೇಂ ಕಾಯಬಾರದೆಂಬುದುಮಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ತೀರ್ಥಮರ್ಥೇನಾಸಂಭಾವಯನ್ ಮಧುಚ್ಛತ್ರಮಿವ ಸರ್ವಾತ್ಮನಾ ಸಹ ವಿನಶ್ಯತಿ || || ೫೭ ||

ಅರ್ಥ : ತೀರ್ಥಂ = ತೀರ್ಥಮಂ, ಅರ್ಥೇನ = ಅರ್ಥದಿಂ, ಅಸಂಭಾವಯನ್ = ತಣಿಪದದು, ಮಧುಚ್ಛತ್ರಮಿವ = ಜೇನ ಪುಟ್ಟಿಯಂತೆ, ಸರ್ವಾತ್ಮನಾ = ನೆಱೆಯೆ, ವಿನಶ್ಯತಿ = ಕೆಡುಗುಂ || ತಕ್ಕುದಱಿದು ಕುಡವೇಳ್ಕುಮೆಂಬುದು ತಾತ್ಪರ್ಯಂ || ತೀರ್ಥಮ ಸಮರ್ಥಿಸಿ ಪೇಳ್ವುದುತ್ತರವಾಕ್ಯಂ :

—-

೧. ಯಾವುದರಿಂದ ಎಲ್ಲ ಪ್ರಯೋಜನಗಳು ಕೈಗೂಡುವವೋ ಅದೇ ಅರ್ಥ.

೨. ಯಾವನು ಅರ್ಥವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಾನೋ ಅವನು ಅರ್ಥಕ್ಕೆ ಅರ್ಹನು.

೩. ಇಲ್ಲದ್ದನ್ನು ಸಂಪಾದಿಸುವುದು. ಸಂಪಾದಿಸಿದ್ದನ್ನು ರಕ್ಷಿಸುವುದು. ರಕ್ಷಿಸಿದ್ದನ್ನು ಹೆಚ್ಚಿಸುವುದು. ಅರ್ಥದ ನಿರ್ವಹಣೆಯು.

೪. ಅರ್ಥದಿಂದ ತೀರ್ಥರನ್ನು (ದಾನಾರ್ಹರನ್ನು) ಗೌರವಿಸದವನು ಜೇನಿನ ಗೂಡಿನಂತೆ ಪೂರ್ತಿಯಾಗಿ ನಶಿಸಿ ಹೋಗುತ್ತಾನೆ.

—-

ಧರ್ಮಸಮಾಯಿನಃ ಕಾರ್ಯಸಮವಾಯಶ್ಚ[2] ಪುರುಷಾಸ್ತೀರ್ಥಂ || || ೫೮ ||

ಅರ್ಥ : ಧರ್ಮಸಮವಾಯಿನಃ = ಧರ್ಮಕ್ಕೆ ನೆರಮಪ್ಪವರ್ಗಳುಂ, ಕಾರ್ಯಸಮವಾಯಿನಶ್ಚ = ಕಾರ್ಯಾಸಹಾಯರುಮಪ್ಪ, ಪುರುಷಾಃ = ಪುರುಷರ್ಕಳುಂ, ತೀರ್ಥಂ = ತೀರ್ಥಮೆಂಬುದು || ಇಂತಪ್ಪವರ್ಗಗಳರ್ಥಮಂ ನಿರರ್ಥಕಮೆಂಬುದಂ ಪೇಳ್ವುದುತ್ತರವಾಕ್ಯಂ :

ತಾದಾತ್ವಿಕಮೂಲಹರಕದರ್ಯೇಷು ನಾಸುಲಭಃ ಪ್ರತ್ಯವಾಯಃ || || ೫೯ ||

ಅರ್ಥ : ತಾದಾತ್ವಿಕಮೂಲಹರಕದರ್ಯೇಷು = ತಾದಾತ್ವಿಕ ಮೂಲಹರ ಕದರ್ಯರೊಳು, ನಾಸುಲಭಃ = ಪಡೆಯಲ್ಬಾರದೆಂಬುದಿಲ್ಲ. ಪ್ರತ್ಯವಾಯಃ = ಕೇಡು = || ಅವರೊಳ್ ತಾದಾತ್ವಿಕನಂ ಪೇಳ್ವುದುತ್ತರವಾಕ್ಯಂ :

ಯಃ ಕಿಮಪ್ಯಸಂಚಿತ್ಯೋತ್ಪನ್ನಮರ್ಥಮಪವ್ಯಯತೇ ಸ ತಾದಾತ್ವಿಕಃ || || ೬೦ ||

ಅರ್ಥ : ಯಃ = ಆವನೋರ್ವಂ, ಕಿಮಪಿ = ಏನುಮಂ, ಸಂಚಿತ್ಯ[3] = ನೆರಪದೆ, ಉತ್ಪನ್ನಂ = ಪುಟ್ಟಿದ, ಅರ್ಥಂ = ಅರ್ಥಮಂ, ಅಪವ್ಯಯತೇ = ಉಚಿತಮನಱಿಯದೆ ಬೀಯಂ ಗೆಯ್ವಂ, ಸಃ = ಆತಂ, ತಾದಾತ್ವಿಕಃ = ತಾದಾತ್ವಿಕನೆಂಬಂ || ಮೂಲಹರನಂ ಪೇಳ್ವುದುತ್ತರವಾಕ್ಯಂ :

ಯಃ ಪಿತೃಪೈತಾಮಹಮರ್ಥಮನ್ಯಾಯೇನ ಕ್ಷಯತಿ[4] ಸ ಮೂಲಹರಃ || || ೬೧ ||

ಅರ್ಥ : ಯಃ = ಆವನೋರ್ವಂ, ಪಿತೃ-ಪೈತಾಮಹಂ – ತಂದೆಯಿಂ, ಮುತ್ತೈಯ್ಯನಿಂ ಬಂಧ, ಅರ್ಥಂ = ಅಥಮಂ ಅನ್ಯಾಯೇನ = ಉಚಿತಮಱಿಯದೆ, ಕ್ಷಯತಿ = ತಿಂಬಂ, ಸಃ = ಆತಂ, ಮೂಲಹರಃ = ಮೂಲಹರನೆಂಬಂ || ಕದರ್ಯನಂ ಪೇಳ್ವುದುತ್ತರವಾಕ್ಯಂ :

—-

೫. ಧರ್ಮಕ್ಕೆ ಸಹಾಯವಾಗುವವರು. ಕಾರ್ಯಕ್ಕೆ ಸಹಾಯವಾಗುವವರು ತೀರ್ಥರು ಎನಿಸಿಕೊಳ್ಳುತ್ತಾರೆ.

೬. ತಾದಾತ್ವಿಕ, ಮೂಲಹರ, ಕದರ್ಯರಿಂದ ಸುಲಭವಾಗಿ ಅನರ್ಥಗಳುಂಟಾಗುತ್ತವೆ.

೭. ಏನನ್ನೂ ಕೂಡಿಡದೆ ಬಂದದ್ದನ್ನೆಲ್ಲ ವ್ಯಯಿಸುವವನು ತಾದಾತ್ವಿಕ.

೮. ತಂದೆ ತಾತಂದಿರ ಧನವನ್ನು ಅನ್ಯಾಯದಿಂದ ನಾಶಮಾಡುವವನು ಮೂಲಹರ.

—-

ಯೋ ಭೃತ್ಯಾತ್ಮಪೀಡಾಭ್ಯಾಂ ಅರ್ಥಂ ಸಂಚಿನೋತಿ ಸಃ ಕದರ್ಯಃ || || ೬೨ ||

ಅರ್ಥ : ಯಃ = ಆವನೋರ್ವಂ, ಭೃತ್ಯಾತ್ಮಪೀಡಾಭ್ಯಾಂ = ಬಂಟರುಮಂ ತನ್ನಮುಮಂ ಪೀಡಿಸುವುದಱಿಂದೆ, ಅರ್ಥಂ = ಅರ್ಥವನ್ನು, ಸಂಚಿನೋತಿ = ನೆರಪುವಂ, ಸಃ = ಆತಂ, ಕದರ್ಯಃ = ಕದರ್ಯನೆಂಬವಂ || ಅಲ್ಲಿ ಇವರ್ಗೆ ದೋಷಮಂ ಪೇಳ್ವುದುತ್ತರವಾಕ್ಯಂ :

ತಾದಾತ್ವಿಕಮೂಲಹರಯೋರಾಯತ್ಯಾಂ ಕಿಮಪಿ ನಾಸ್ತಿ ಕಲ್ಯಾಣಂ || ೧೦ || ೬೩ ||

ಅರ್ಥ : ತಾದಾತ್ವಿಕ-ಮೂಲಹರಯೋಃ = ತಾದಾತ್ವಿಕ – ಮೂಲಹರರೆಂಬಿರ್ವರ್ಗೆ, ಅಯತ್ಯಾಂ = ಮುಂದೆ, ಕಿಮಪಿ ಕಲ್ಯಾಣಂ = ಏನಾನುಂ ಕಲ್ಯಾಣಂ ಶುಭಂ, ನಾಸ್ತಿ = ಇಲ್ಲ ||

ಕದರ್ಯಸ್ಯಾಪ್ಯರ್ಥಸಂಗ್ರಹೋ ರಾಜದಾಯಾದಭೂತತಸ್ಕರಾಣಾಂ ಅನ್ಯತಮಸ್ಯ ನಿಧಿಃ || ೧೧ || ೬೪ ||

ಅರ್ಥ : ಕದರ್ಯ್ಯಸ್ಯ = ಕದರ್ಯನ, ಅರ್ಥಸಂಗ್ರಹಃ = ಅರ್ಥದ ನೆರಪುವು, ರಾಜ = ರಾಜರುಂ, ದಾಯಾದ = ದಾಯಾದರುಂ, ಭೂತ = ಭೂತಂಗಳುಂ ತಸ್ಕರಾಣಾಂ = ಕಳ್ಳರುಮೆಂದಿವರ್ಗಳೊಳು, ಅನ್ಯತಮಸ್ಯ = ಅವನಾನುಮೋರ್ವನ, ನಿಧಿಃ = ಬೈಕೆಯಪ್ಪುದು ||

ಇತಿ ಅರ್ಥಸಮುದ್ದೇಶಃ || ||

ಈ ಸಮುದ್ದೇಶದ ವಾಕ್ಯಗಳು || ೧೧ || ಒಟ್ಟು || ೬೪ ||

—-

೯. ಭೃತ್ಯವರ್ಗವನ್ನು ಪೀಡಿಸಿ ತಾನೂ ಕಷ್ಟಪಟ್ಟು ಹಣವನ್ನು ಕೂಡಿಸಿಡುವವನು ಕದರ್ಯ.

೧೦. ತಾದಾತ್ವಿಕ ಮೂಲಹರರಿಗೆ ಭವಿಷ್ಯದಲ್ಲ ಯಾವ ಒಳಿತೂ ಆಗುವದಿಲ್ಲ.

೧೧. ಕದರ್ಯನು ಕೂಡಿಟ್ಟ ಧನವು ರಾಜರು, ದಾಯಾದಿಗಳು ಮತ್ತು ಕಳ್ಳರಲ್ಲಿ ಯಾರಿಗಾದರೂ ಸೇರಿ ಹೋಗುವ ನಿಧಿ.

—-

 

[1]ಚೌ. ರಕ್ಷಿತಪರಿವರ್ಧನಂ. ಮೈ. ರಕ್ಷಿತವಿವರ್ಧನಂ ವೃದ್ಧಸ್ಯ ತೀರ್ಥೇಷು ಪ್ರತಿಪಾದನಂ ಚಾರ್ಥಾನುಬಂಧಃ.

[2]ಚೌ. ಮೈ. ಕಾರ್ಯಸಮವಾಯಿನಶ್ಚ. ನಮ್ಮ ಪ್ರತಿಯಲ್ಲಿಯ ಕಾಐðಸಮವಾಯಶ್ಚ ಎಂಬ ಪಾಠದಲ್ಲಿ ತಪ್ಪಿದೆ. ಟೀಕೆಯಲ್ಲಿ ಸಮವಾಯಿನಶ್ಚ ಎಂದೇ ಇದೆ.

[3]ಟೀಕಾಕಾರನು ಈ ವಾಕ್ಯಕ್ಕೆ ಕೊಟ್ಟ ಅರ್ಥದಲ್ಲಿ ಸಂಚಿತ್ಯ ಎಂಬುದು ಅಸಂಚಿತ್ಯ ಎಂದಿರಬೇಕು. ಸಂಗ್ರಹಿಸದೆ ಎಂಬ ಅರ್ಥದಲ್ಲಿ. ಇದು ಲಿಪಿಕಾರನ ತಪ್ಪಿರಬೇಕು. ತಾದಾತ್ವಿಕನೆಂದರೆ ಮುಂಧೋರಣೆಯಿಲ್ಲದೆ ತತ್ಕಾಲಕ್ಕೆ ಮಾತ್ರ ಲಕ್ಷ್ಯಕೊಟ್ಟು ವರ್ತಿಸುವವನು.

[4]ಮೈ. ಚೌ. ಭಕ್ಷ್ಯಯತಿ. ಮೂಲಹರನೆಂದರೆ ಮೂಲವನ್ನೇ, ಅಂದರೆ ಪಿತ್ರಾರ್ಜಿತ ಆಸ್ತಿಯನ್ನೇ ನುಂಗಿಹಾಕುವವನು.