ತೃತೀಯ ಪುರುಷಾರ್ಥಮಂ ಪೇಳ್ವುದುತ್ತರವಾಕ್ಯಂ

ಆಭಿಮಾನಿಕರಸಾನುವಿದ್ಧಾ ಯತಃ ಸರ್ವೇಂದ್ರಿಯಪ್ರೀತಿಃ ಸಃ ಕಾಮಃ || || ೬೫ ||ನೀತಿವಾಕ್ಯಾಮೃತಂ

ಅರ್ಥ : ಆಭಿಮಾನಿಕರಸಾನುವಿದ್ಧಾ = ಆಭಿಮಾನಿಕರಸದೊಡನೆ ಕೂಡಿ, ತೃಪ್ತನಾದನೆಂಬ ಗರ್ವಸರ್ವಸ್ವದಿಂ ಕೂಡಿದ, ಸವೇಂದ್ರಿಯಪ್ರೀತಿಃ = ಎಲ್ಲ ಇಂದ್ರಿಯಗಳ ಸಂತೋಷಂ, ಯತಃ = ಆವುದೊಂದಱತ್ತಂಣಿಂದಪ್ಪುದು, ಸಃ = ಅದು, ಕಾಮಃ = ಕಾಮಮೆಂಬುದುಂ || ಸಕಲೇಂದ್ರಿಯಂಗಳ ಸಂತೋಷದ ತುತ್ತತುದಿಯನೆಯ್ದಿಸುವುದು ಕಾಮಮೆಂಬುದು ತಾತ್ಪರ್ಯಂ || ಕಾಮಾನುಭವನಮಂ ಪೇಳ್ವುದುತ್ತರವಾಕ್ಯಂ :

ಧರ್ಮಾರ್ಥಾವಿರೊಧೇನ ಕಾಮಂ ಸೇವೇತ ನ ನಿಃಸುಖಂ[1] ಸ್ಯಾತ್ || || ೬೬ ||

ಅರ್ಥ : ಧರ್ಮಾರ್ಥಾವಿರೋಧೇನ = ಧರ್ಮಾರ್ಥಗಳಂ ಕೆಡಿಸದೆ, ಕಾಮಂ = ಕಾಮಮಂ, ಸೇವೇತ = ಸೇವಿಸುಗೆ, ಆಗ, ನಿಃಸುಖಂ = ಸುಖಮಿಲ್ಲದಂ, ನ ಸ್ಯಾತ್ = ಆಗದಿರ್ಕೆ =

ಸಮಂ ವಾ ತ್ರಿವರ್ಗಂ ಸೇವೇತ || || ೬೭ ||

ಅರ್ಥ : ತ್ರಿವರ್ಗಂ = ಧರ್ಮಾರ್ಥಕಾಮಂಗಳಂ, ಸಮಂ ವಾ = ಸಮಾನಮಾಗಿ ಮೇಣ್‌ಸೇವೇತ = ಸೇವಿಸುಗೆ || ಧರ್ಮಾರ್ಥಂಗಳಂ ಕೆಡಿಸದಂತು ಕಾಮಮಂ ಸೇವಿಸುವುದೆಂಬುದು ತಾತ್ಪರ್ಯಂ || ಅವಱೊಳೊಂದಧಿಕಮಾಗೆ ದೋಷಮಂ ಪೇಳ್ವುದುತ್ತರವಾಕ್ಯಂ :

ಏಕೋ ಹ್ಯತ್ಯಾಸೇವಿತೋ ಧರ್ಮಾರ್ಥಕಾಮಾನಾಂ ಆತ್ಮಾನಮಿತರೌ ಚ ಪೀಡಯತಿ || || ೬೮ ||

ಅರ್ಥ : ಧರ್ಮಾರ್ಥಕಾಮಾನಾಂ = ಧರ್ಮಾರ್ಥಕಾಮಂಗಳೊಳ್, ಏಕಃ = ಒಂದು, ಹಿ = ನಿಶ್ಚಯದಿಂ, ಅತ್ಯಾಸೇವಿತಃ = ಪಿರಿದಾಗಿ ಸೇವಿಸೆಪಟ್ಟು, ಆತ್ಮಾನಂ = ತನ್ನುಮಂ, ಇತರೌ ಚ = ಉಳಿದೆರಡುಮಂ, ಹಿ = ಆವುದೊಂದು ಕಾರಣದಿಂ, ಪೀಡಯತಿ = ಪೀಡಿಸಗುಂ || ಕಾಮಂ ಏಂ ಬಾರ್ತೆಯೆಂದೊಡೆ ದೋಷಮಂ ಪೇಳ್ವದುತ್ತರವಾಕ್ಯಂ :

—-

೧. ನನ್ನದು ಎಂಬ ಅಭಿಮಾನದಿಂದ ಕೂಡಿದ ಸರ್ವೇಂದ್ರಿಯಪ್ರೀತಿ ಯಾವುದರಿಂದ ಉಂಟಾಗುವುದೋ ಅದು ಕಾಮ.

೨. ಧರ್ಮಕ್ಕೂ ಅರ್ಥಕ್ಕೂ ವಿರೋಧ ಉಂಟಾಗದಂತೆ ಕಾಮವನ್ನು ಸೇವಿಸಬೇಕು. ಸುಖಾನುಭವವಿಲ್ಲದೆ ಇರಬಾರದು.

೩. ಇಲ್ಲವೆ, ಧರ್ಮಾರ್ಥಕಾಮಗಳನ್ನು ಸಮವಾಗಿ ಸೇವಿಸಬೇಕು.

೪. ಧರ್ಮ, ಅರ್ಥ, ಕಾಮಗಳಲ್ಲಿ ಯಾವುದಾದರೂ ಒಂದನ್ನು ಅತಿಯಾಗಿ ಸೇವಿಸಿದರೆ ತನಗೂ ಉಳಿದ ಎರಡಕ್ಕೂ ಬಾಧೆ ಉಂಟಾಗುತ್ತದೆ.

—-

ಪರಾರ್ಥ ಭಾರವಾಹಿನಿ ಇವ ಆತ್ಮ ಸುಖಂ ನಿರುಂಧಾನಸ್ಯ ಅರ್ಥೋ ಪಾರ್ಜನಂ[2]|| || ೬೯ ||

ಅರ್ಥ : ಆತ್ಮಸುಖಂ = ತನ್ನ ಸುಖಮಂ, ನಿರುಂಧಾನಸ್ಯ = ಕಿಡಿಪನ, ಅರ್ಥೋಪಾರ್ಜನಂ = ಧನೋಪಾರ್ಜನೆಯುಂ, ಭಾರವಾಹಿನ ಇವ = ಪೋಱೆಕಾರನ ಪೊಱೆಯಂತಂತೆ, ಪರಾರ್ಥಂ = ಪೆಱ ರೊಡಮೆ || ಧನಮುಳ್ಳ ಸುಖಮನನುಭವಿಸಲುವೇಳ್ಕುಮೆಂಬುದು ತಾತ್ಪರ್ಯಂ || ಈಯರ್ಥಮನೆ ಸಮರ್ಥಿಸುವುದುತ್ತರವಾಕ್ಯಂ ||

ಇಂದ್ರಿಯಮನಃಪ್ರಸಾಧನಫಲಾಃ ಹಿ ವಿಭೂತಯಃ || || ೭೦ ||

ಅರ್ಥ : ಹಿ = ಆವುದೊಂದು ಕಾರಣದಿಂ, ಇಂದ್ರಿಯಮನಃಪ್ರಸಾಧನಫಲಾಃ = ಇಂದ್ರಿಯಮನಂಗಳಂ ತಣಿಪುದನೆ ಫಲಮಾಗುಳ್ಳವು, ವಿಭೂತಯಃ = ಶ್ರೀಗಳು || ಸಂತಸಮಂ ಪುಟ್ಟಿಸದ ವಿಭೂತಿ ಬಾರ್ತೆಯಲ್ಲೆಂಬುದು ತಾತ್ಪರ್ಯಂ || ನಿಯತಕಾಲಮನಲ್ಲದಂಗೆ ದೋಷಮಂ ಪೇಳ್ವುದುತ್ತರವಾಕ್ಯಂ :

ನಾಜಿತೇಂದ್ರಿ ಯಸ್ಯ[3] ಕಾಪಿ ಕಾರ್ಯಸಿದ್ಧಿರಸ್ತಿ || || ೭೧ ||

ಅರ್ಥ : ಅಜಿತೇಂದ್ರಿಯಸ್ಯ = ಇಂದ್ರಯಂಗಳಂ ಗೆಲ್ಲದಂಗೆ, ಕಾಪಿ = ಆವುದೊಂದು, ಕಾರ್ಯಸಿದ್ಧಿಃ = ಕಾರ್ಯದ ನಿಷ್ಟತ್ತಿಯುಂ, ನ ಆಸ್ತಿ = ಇಲ್ಲವು || ಇಂದ್ರಿಯಜಯಮಿಲ್ಲದಂಗೇನುಮಿಲ್ಲೆಂಬುದು ತಾತ್ಪರ್ಯ || ಇಂದ್ರಿಯಜಯಮಂ ಪೇಳ್ವುದುತ್ತರವಾಕ್ಯಂ :

ಇಷ್ಟೇsನಾಸಕ್ತಿರ್ವಿರುದ್ಧೇ ಚಾಪ್ರವೃತ್ತಿರಿಂದ್ರಿಯಜಯಃ ಅರ್ಥ ಶಾಸ್ತ್ರಾಧ್ಯಯನಂ ವಾ[4]|| || ೭೨ ||

ಅರ್ಥ : ಇಷ್ಟೇ = ಇಷ್ಟಮಪ್ಪ, ಅರ್ಥೇ = ವಸ್ತುಗಳೊಳ್, ಅನಾಸಕ್ತಿಃ = ಪಿರಿದು ಸೋಲಮಲ್ಲದುದು ಆಸಕ್ತಿಯಲ್ಲದುದು, ವಿರುದ್ಧೇ = ತಕ್ಕದಲ್ಲದಱೊಳು, ಅಪ್ರವೃತ್ತಿಶ್ಚ = ನೆಗಳದುದುಂ, ಇಂದ್ರಿಯಜಯಃ = ಇಂದ್ರಿಯಜಯಮೆಂಬುದು, ಅರ್ಥಶಾಸ್ತ್ರಾಧ್ಯಯನಂ ವಾ = ಧರ್ಮಶಾಸ್ತ್ರಂಗಳಂ ಕೇಳ್ವುದು ಮೇಣ್ || ಯೋಗ್ಯಮಪ್ಪಲ್ಲಿ ಮೇಣ್ ಮನಮಂ ನಿಯಮಿಸುವುದೆಂಬುದು ತಾತ್ಪರ್ಯಂ || ಈ ಯರ್ಥಮನಲಂಕರಿಸಿದಪುದುತ್ತರವಾಕ್ಯಂ :

—-

೫. ತಾನು ಸುಖಪಡದೆ ಮಾಡುವ ಧನಾರ್ಜನೆಯು ಇತರರಿಗಾಗಿ ಭಾರವನ್ನು ಹೊರುವಂತಾಗುವದು.

೬. ಇಂದ್ರಿಯಗಳಿಗೂ ಮನಸ್ಸಿಗೂ ಸೌಖ್ಯವನ್ನು ಉಂಟುಮಾಡುವುದೇ ಐಶ್ವರ್ಯದ ಪ್ರಯೋಜನ.

೭. ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳದವನು ಏನ್ನನ್ನೂ ಸಾಧಿಸಲಾರನು.

೮. ಇಷ್ಟವಾದದ್ದರಲ್ಲಿ ಆಸಕ್ತಿ ಇಲ್ಲದುದೂ. ಕೆಟ್ಟ ಕಾರ್ಯಗಳಲ್ಲಿ ಪ್ರವರ್ತಿಸದಿರುವುದೂ. ಧರ್ಮಶಾಸ್ತ್ರಗ್ರಂಥಗಳ ಅಧ್ಯಯನವೂ ಇಂದ್ರಿಯಜಯಕ್ಕೆ ಕಾರಣ.

—-

ಯೋsನಂಗೇನಾಪಿ ಜೀಯತೇ ಸಃ ಕಥಂ ಪುಷ್ಟಾಂಗಾನರಾತೀನ್ ಜಯೇತ್ || || ೭೩ ||

ಅರ್ಥ : ಯಃ = ಆವಂ, ಅನಂಗೇನಾಪಿ = ಅತನುವಿಂದಂ, ಜೀಯತೇ = ಗೆಲಲ್ಪಡುಗುಂ, ಸಃ = ಆತಂ, ಪುಷ್ಟಾಂಗನ್ = ನೆಱೆದಂಗಮನುಳ್ಳ, ಅಱಾತೀನ್ = ಪಗೆವರಂ, ಕಥಂ ಜಯೇತ್ = ಎಂತು ಗೆಲ್ಗುಂ || ಕಾಮಾಸಕ್ತಂಗೆ ದೂಷಣಮಂ ಪೇಳ್ವುದುತ್ತರವಾಕ್ಯದ್ವಯಂ :

ನ ಕಾಮಾಸಕ್ತಸ್ಯಾಸ್ತಿ ಕಿಂಚಿತ್ಚಿಕಿತ್ಸಿತಂ[5]|| ೧೦ || ೭೪ ||

ಅರ್ಥ : ಕಾಮಾಸಕ್ತಸ್ಯ = ಕಾಮದೊಳ್ ಸಿಲ್ಕಿದಂಗೆ, ಕಿಂಚಿತ್ = ಸ್ವಲ್ಪವೂ, ಚಿಕಿತ್ಸಿತಂ = ಚಿಕಿತ್ಸೆಯುಂ, ನಾಸ್ತಿ = ಇಲ್ಲವು, ಒಂದು ವೈದ್ಯಮಿಲ್ಲವು ||

ನ ತಸ್ಯ ಧನಂ ಧರ್ಮಂ[6] ಶರೀರಂ ವಾ ಯಸ್ಯ ಸ್ತ್ರೀಷ್ವತ್ಯಾಸಕ್ತಿ || ೧೧ || ೭೫ ||

ಅರ್ಥ : ಯಸ್ಯ = ಆವನೋರ್ವಂಗೆ, ಸ್ತ್ರೀಷು = ಸ್ತ್ರೀಯರೊಳ್, ಅತ್ಯಾಸಕ್ತಿ = ಕಡುಗೂರ್ಮೆ, ತಸ್ಯ = ಆತಂಗೆ, ಧನಂ = ಒಡಮೆಯುಂ, ಧರ್ಮಂ = ಅಱನುಂ, ಶರೀರಂ ವಾ = ಮೆಯ್ಯುಂ ಮೇಣ್, ನ = ಇಲ್ಲವು || ಕಾಮಾಸಕ್ತಂಗೆ ವಸ್ತುಮಿಲ್ಲೆಂಬುದು ತಾತ್ಪರ್ಯಂ || ವಿರುದ್ಧ ಕಾಮಂಗೈಹಿಕಮಿಲ್ಲೆಂಬುದುತ್ತರವಾಕ್ಯಂ :

ವಿರುದ್ಧ ಕಾಮವೃತ್ತಿಃ ಸಮೃದ್ಧೋsಪಿ ನ ಚಿರಂ ನಂದತಿ ರಾವಣವತ್[7]|| ೧೨ || ೭೬ ||

ಅರ್ಥ : ವಿರುದ್ಧ ಕಾಮವೃತ್ತಿಃ = ಯೋಗ್ಯಮಲ್ಲದ ಕಾಮದೊಳ್ನೆಗಳ್ವಂ, ಸಮೃದ್ಧೋsಪಿ = ಸಮೃದ್ಧನಾದೊಡಂ, ಚಿರಂ = ಪಲಕಾಲಂ, ನ ನಂದತಿ = ಪೆರ್ಚಂ, ರಾವಣವತ್ = ರಾವಣನೆಂತಂತೆ || ದುರ್ವ್ಯಸನದಿಂ ಕಿಡದಿರನೆಂದು ತಾತ್ಪರ್ಯಂ || ಧರ್ಮಾರ್ಥಕಾಮಂಗಳೊಳಿದಕ್ಕಿದು ಲೇಸೆಂಬುದುತ್ತರವಾಕ್ಯಂ :

—-

೯. ಅಂಗವಿಲ್ಲದವನಿಂದಲೇ (ಮನ್ಮಥ) ಸೋಲುವವನು ಪರಿಪುಷ್ಟವಾದ ಅಂಗವುಳ್ಳ ಶತ್ರುಗಳನ್ನು ಹೇಗೆ ಜಯಿಸುತ್ತಾನೆ?

೧೦. ಕಾಮಾಸಕ್ತನಿಗೆ ಯಾವ ಚಿಕಿತ್ಸೆಯೂ ಇಲ್ಲ.

೧೧. ಸ್ತ್ರೀಯರಲ್ಲಿ ಅತ್ಯಾಸಕ್ತಿ ಇರುವವನಿಗೆ ಧನವಾಗಲಿ, ಧರ್ಮವಾಗಲಿ, ಶರೀರವಾಗಲಿ ಉಳಿಯುವುದಿಲ್ಲ.

೧೨. ಯೋಗ್ಯವಲ್ಲದ ಕಾಮದಲ್ಲಿ ಆಸಕ್ತನಾದವನು ಸಮೃದ್ಧನಾದರೂ ರಾವಣನಂತೆ ಬಹುಕಾಲ ಸುಖದಿಂದ ಇರಲಾರನು.

—-

ಧರ್ಮಾರ್ಥಕಾಮಾನಾಂ ಯುಗಪತ್ಸಮವಾಯೋ[8] ಪೂರ್ವಃ ಪೂರ್ವೋ ಗರೀಯಾನ್ || ೧೩ || ೭೭ ||

ಅರ್ಥ : ಧರ್ಮಾರ್ಥಕಾಮಾನಾಂ = ಧರ್ಮಾರ್ಥಕಾಮಂಗಳ್ಗೆ, ಯುಗಪತ್ = ಒರ್ಮೆಯೆ, ಸಮವಾಯೋ = ಕೂಟಮಾದೊಡೆ, ಪೂರ್ವಃ ಪೂರ್ವಃ = ಮುನ್ನಿನ ಮುನ್ನಿನದು, ಗರೀಯಾನ್ = ಪಿರಿದು ||

ಕಾಲಾಸಹತ್ವೇ[9] ಪುನರರ್ಥ ಏವ[10]|| ೧೪ || ೭೮ ||

ಅರ್ಥ : ಕಾಲಾಸಹತ್ವೇ = ಕಾಲವು ಸೈರಿಸದಲ್ಲಿ, ಪುನಃ = ಮತ್ತೆ, ಅರ್ಥ ಏವ = ಅರ್ಥಮನೆ ಉಪಾರ್ಜಿಸುವುದು ||

ಧರ್ಮಕಾಮಯೋರರ್ಥಮೂಲತ್ವಾತ್ || ೧೫ || ೭೯ ||

ಅರ್ಥ : ಧರ್ಮಕಾಮಯೋ = ಧರ್ಮಕಾಮಂಗಳ್ಗೆ, ಅರ್ಥಮೂಲತ್ವಾತ್ = ಅರ್ಥಮನೆ ಕಾರಣಮಾಗುಳ್ಳ ಸ್ವಭಾವ ಉಂಟಪ್ಪುದಱೆಂ || ಅರ್ಥದಿಂ ಧರ್ಮಾದಿಗಳಂ ಪಡೆಯಲಕ್ಕುಮೆಂಬುದು ತಾತ್ಪರ್ಯಂ ||

ಇತಿ ಕಾಮಸಮುದ್ದೇಶಃ || ||

ಈ ಸಮುದ್ದೇಶದ ವಾಕ್ಯಂಗಳು || ೧೫ || ಒಟ್ಟು || ೭೯ ||

—-

೧೩. ಧರ್ಮಾರ್ಥಕಾಮಗಳಲ್ಲಿ ಒಂದಕ್ಕೊಂದು ಸ್ಪರ್ಧೆ ಏರ್ಪಡುವುದಾದರೆ ಮುಂದು ಮುಂದಿನದಕ್ಕಿಂತ ಹಿಂದು ಹಿಂದಿನದು ಹೆಚ್ಚಿನದು.

೧೪. ಸಮಯವಿಲ್ಲದಿದ್ದಲ್ಲಿ ಅರ್ಥಕ್ಕೇ ಪ್ರಾಧಾನ್ಯವಿರಬೇಕು.

೧೫. ಏಕೆಂದರೆ ಧರ್ಮ ಕಾಮಗಳಿಗೆ ಅರ್ಥವೇ ಮೂಲ.

—-

 

[1]ಮೈ. ನ ನಿಃಸುಖಃ ಚೌ. ತತಃ ಸುಖೀ.

[2]ಮೈ. ಚೌ. ಧನೋಪಾರ್ಜನಂ

[3]ಚೌ. ನಾಜಿತೇಂದ್ರಿಯಾಣಾಂ

[4]ಚೌ. ದಲ್ಲಿ ಅರ್ಥಶಾಸ್ತ್ರಾಧ್ಯಯನಂ ವಾ ಎಂಬದು ಬೇರೆ ವಾಕ್ಯವಾಗಿದೆ. ಅರ್ಥಶಾಸ್ತ್ರ ಅಂದರೆ ಧರ್ಮಶಾಸ್ತ್ರಗಳು ಎಂದು ಟೀಕಾಕಾರನು ಹೇಳುತ್ತಾನೆ. ಇವುಗಳ ಅಧ್ಯಯನದಿಂದ ಇಂದ್ರಿಯಗಳ ಮೇಲೆ ನಿಗ್ರಹ ಸಾಧಿಸುವುದು ಸಾಧ್ಯವಾಗುತ್ತದೆಂಬ ಸೂಚನೆಯಿದೆ. ಇದನ್ನು ಹೇಳುವ ಶ್ಲೋಕವೊಂದು ಚೌ. ದಲ್ಲಿ ಉದ್ಧೃತವಾಗಿದೆ.

[5]ಚೌ. ಕಾಮಾಸಕ್ತಸ್ಯ ನಾಸ್ತಿ ಚಿಕಿತ್ಸಿತಂ. ಚಿಕಿತ್ಸಾ ಶಬ್ದಕ್ಕೆ ವೈದ್ಯ ಎಂಬ ಪದವನ್ನು ಉಪಾಯ ಎಂಬ ಅರ್ಥದಲ್ಲಿ ಟೀಕಾಕಾರನು ಉಪಯೋಗಿಸಿದ್ದಾನೆ.

[6]ಮೈ., ಚೌ. ಧರ್ಮ.

[7]ಮೈ. ಚೌ. ಗಳಲ್ಲಿ ರಾವಣವತ್ ಎಂಬ ಪದವಿಲ್ಲ.

[8]ಮೈ. ಚೌ. ಸಮವಾಯೇ

[9]ಮೈ. ಕಾಲಸಹತ್ವ

[10]ಮೈ. ದಲ್ಲಿ ಈ ವಾಕ್ಯ ಮತ್ತು ಮುಂದಿನ ವಾಕ್ಯ ಕೂಡಿ ಒಂದೇ ಆಗಿದೆ. ಚೌ. ದಲ್ಲಿ ಮುಂದಿನದು ಪ್ರತ್ಯೇಕ ವಾಕ್ಯವಾಗಿರದೆ ಈ ವಾಕ್ಯದಲ್ಲಿಯೇ ಪ್ರತ್ಯೇಕವಾಗಿ ಕೊಡಲ್ಪಟ್ಟಿದೆ.