ಇಂತು ರಾಜ್ಯದ ಫಲಮಪ್ಪ ಪುರುಷಾರ್ಥತ್ರಯಮಂ ಪೇಳ್ದು ರಾಜ್ಯದಂತರಂಗಾರಿಗಳಂ ಪೇಳ್ವುದುತ್ತರವಾಕ್ಯಂ:

ಆಯುಕ್ತಿತಃ ಪ್ರಣೀತಾಃ ಕಾಮಕ್ರೋಧಲೋಭಮಾನಮದಹರ್ಷಾಃ
ಕ್ಷಿತೀಶಾನಾಂ ಅಂತರಂಗೋ
sರಿಷಡ್ವರ್ಗಃ || || ೮೦ ||

ಅರ್ಥ : ಅಯುಕ್ತಿತಃ = ಕ್ರಮುದಪ್ಪಿ, ಪ್ರಣೀತಾಃ = ಪ್ರಯೋಗಿಸಿದ, ಕಾಮಕ್ರೋಧಲೋಭಮಾನ ಮದಹರ್ಷಾಃ = ಕಾಮಮುಂ, ಕ್ರೋಧಮುಂ, ಲೋಭಮುಂ, ಮಾನಮುಂ, ಮುದಮುಂ, ಹರ್ಷಮೆಂಬಿವು, ಕ್ಷಿತೀಶಾನಾಂ = ಅರಸುಗಳ್ಗೆ, ಅಂತರಂಗಃ ಒಳಗಣ, ಅರಿಷಡ್ವರ್ಗಃ = ಪಗೆವರಱುವರ ನೆರವಿಗಳ್ || ಅವರೊಳ್ ಕಾಮಮಂ ಪೇಳ್ವುದುತ್ತರವಾಕ್ಯಂ :

ಪರಪರಿಗ್ರಹೀತಾನೂಢಾಸು ವಾ[1] ಸ್ತ್ರೀಷು ದುರಭಿಸಂಧಿಃ ಕಾಮಃ || || ೮೧ ||

ಅರ್ಥ : ಸ್ತ್ರೀಷು = ಸ್ತ್ರೀಯರೊಳ್, ಪರಪರಿಗ್ರಹೀತಾಸು + ಪೆಱರಿಂ ಕೈಕೊಳಲ್ಕೆಪಟ್ಟವರ್ಗಳೊಳ್, ಅನೂಢಾಸು ವಾ = ಕನ್ನಿಕೆಯರೊಳಂ ಮೇಣ್, ದುರಭಿಸಂಧಿಃ = ನೆರೆವುದು, ಕಾಮಃ = ಕಾಮಮೆಂಬುದು || ಕ್ರೋಧಮಂ ಪೇಳ್ವುದುತ್ತರವಾಕ್ಯಂ :

ಅವಿಚಾರ್ಯ ಪರಸ್ಯಾತ್ಮನೋ ವಾಪಾಯಹೇತುಃ ಕ್ರೋಧಃ || || ೮೨ ||

ಅರ್ಥ : ಅವಿಚಾರ್ಯ = ವಿಚಾರಿಸದಾದ ಮುನಿಸುಂ, ಪರಸ್ಯ = ಪೆಱಂಗಂ, ಆತ್ಮನೋ ವಾ = ತನಗಂ ಮೇಣ್, ಅಪಾಯಹೇತುಃ = ಕೇಡಿಂಗೆ ಕಾರಣಮಪ್ಪುದು, ಕ್ರೋಧಂ = ಕ್ರೋಧಮೆಂಬುದುಂ || ಲೋಭಮಂ ಪೇಳ್ವುದುತ್ತರವಾಕ್ಯಂ :

ದಾನಾರ್ಹೇಷು ಸ್ವಧನಾಪ್ರದಾನಮಕಾರಣಂ ಪರಧನಗ್ರಹಣಂ ವಾ ಲೋಭಃ || || ೮೩ ||

ಅಥ : ದಾನಾರ್ಹೇಷು = ಕೊಡಲ್ಕೆ ತಕ್ಕವರೊಳು, ಸ್ವಧನಾಪ್ರದಾನಂ = ತನ್ನೊಡಮೆಯಂ ಕುಡದುದುಂ, ಅಕಾರಣಂ = ನಿರ್ನೆರಂ ಕಾರಣಮಿಲ್ಲದೆ, ಪರಧನಗ್ರಹಣಂ ವಾ = ಪೆಱರೊಡಮೆಯಂ ಕೊಳ್ವುದು ಮೇಣ್, ಲೋಭಃ = ಲೋಭಮೆಂಬುದು || ಮಾನಮಂ ಪೇಳ್ವುದುತ್ತರವಾಕ್ಯಂ :

—-

೧. ವಿವೇಚನೆಯಿಲ್ಲದೆ ಅನುಸರಿಸಲಾಗುವ ಕಾಮ, ಕ್ರೋಧ, ಲೋಭ, ಮಾನ, ಮದ, ಹರ್ಷ ಎಂಬಿವು ಅರಸುಗಳಿಗೆ ಅಂತರಂಗದ ಆರು ಶತ್ರುಗಳು.

೨. ಪರರ ಹೆಂಡಿಯರಲ್ಲಿ ಅಥವಾ ಅವಿವಾಹಿತರಾದ ಸ್ತ್ರೀಯರಲ್ಲಿ ಅಕ್ರಮ ಸಂಬಂಧವು ಕಾಮ.

೩. ಪರನಿಗಾಗಲಿ ತನಗಾಗಲಿ ಅಪಾಯವನ್ನುಂಟುಮಾಡುವ ವಿಚಾರರಹಿತವಾದ ಕೋಪವು ಕ್ರೋಧವು.

೪. ದಾನಾರ್ಹರಿಗೆ ತನ್ನ ಧನವನ್ನು ಕೊಡದಿರುವುದೂ, ಕಾರಣವಿಲ್ಲದೆ ಪರಧನವನ್ನು ಅಪಹರಿಸುವುದೂ ಲೋಭವು.

—-

ದುರಭಿನಿವೇಶಾಮೋಕ್ಷೋ ಯುಕ್ತೋಕ್ತಾಗ್ರಹಣಂ ವಾ[2] ಮಾನಃ || || ೮೪ ||

ಅರ್ಥ : ದುರಭಿನಿವೇಶಾಮೋಕ್ಷಃ = ದುರಾಗ್ರಹಮಂ ಬಿಸುಡದದುಂ, ಯುಕ್ತೋಕ್ತಾಗ್ರಹಣಂ ವಾ = ಉಚಿತಮಪ್ಪ ವಚ(ನ)ಮಂ ಕೈಕೊಳ್ಳದುದಂ ಮೇಣ್, ಮಾನಃ = ಮಾನಮೆಂಬುದು || ಮದಮಂ ಪೇಳ್ವುದುತ್ತರ ವಾಕ್ಯಂ :

ಕುಲಬಲೈಶ್ವರ್ಯರೂಪವಿದ್ಯಾಭಿರಾತ್ಮಾಹಂಕಾರಕರಣಂ ಪರಪ್ರಧರ್ಷನಿ ಬಂಧನಂ ವಾ ಮದಃ || || ೮೫ ||

ಅರ್ಥ : ಕುಲಬಲೈಶ್ವರ್ಯರೂಪವಿದ್ಯಾದಿಭಿಃ = ಕುಲಮುಂ, ಬಲಮುಂ, ಸಿರಿಯುಂ, ರೂಪಂ, ವಿದ್ಯೆಯುಮೊದಲಾಗೊಡೆಯವಱಿಂ, ಆತ್ಮಾಹಂಕಾರಕರಣಂ = ತನಗೆ ತಾನಗ್ಗಳಿಕೆಯಂ ಮಾಳ್ಪುದುಂ, ಪರಪ್ರಧರ್ಷನಿಬಂಧನಂ ವಾ = ಪೇಱರನಿಳಿಕೆಯ್ವುದಕ್ಕೆ (ಜಱೆವ) ಕಾರಣಮಪ್ಪ ಕುಲಾದಿಗರ್ವಂ ಮೇಣ್, ಮದಃ = ಮದಮೆಂಬುದು || ಹರ್ಷಮಂ ಪೇಳ್ವುದುತ್ತರವಾಕ್ಯಂ :

ನಿರ್ನಿಮಿತ್ತಮನ್ಯಸ್ಯ ದುಃಖೋತ್ಪಾದನೇನ ಸ್ವಸ್ಯಾನರ್ಥಸಂಶಯೇನ ವಾ ಮನಃ ಪ್ರೀತಿಜನೋ[3] ಹರ್ಷಃ || || ೮೬ ||

ಅರ್ಥ : ನಿರ್ನಿಮಿತ್ತಂ = ನಿರ್ನೆರಂ ನಿಷ್ಕಾರಣಂ, ಅನ್ಯಸ್ಯ = ಪೆಱಂಗೆ, ದುಃಖೋತ್ಪಾದನೇನ = ದುಃ ಖಮಂ ಪುಟ್ಟಿಸುವುದಱಿಂದಂ, ಸ್ವಸ್ಯ = ತನಗೆ, ಅನರ್ತಸಂಶಯೇನ ವಾ = ಕೇಡಾದಹುದೆಂಬ ಸಂದೇಹದಿಂದಂ ಮೇಣ್, ಮನಃಪ್ರೀತಿಜನಃ = ಮನಕ್ಕೆ ಸಂತಸಮಂ ಪುಟ್ಟಿಸುವನುರಾಗಂ, ಹರ್ಷಃ = ಹರ್ಷಮೆಂಬುದು || ಇನಿತುಮಾದಡೆ ರಾಜ್ಯಂ ಕೆಡುಗುಮೆಂಬುದು ತಾತ್ಪರ್ಯಂ ||

|| ಇತಿ ಅರಿಷಡ್ವರ್ಗಸಮುದ್ದೇಶಃ || ||

೪ ನೆಯ ಸಮುದ್ದೇಶವಾಕ್ಯಂ || || ಒಟ್ಟು || ೮೬ ||

—-

೫. ದುರಾಗ್ರಹವನ್ನು ಬಿಡದಿರುವುದೂ, ಉಚಿತವಾದ ಸಲಹೆಯನ್ನು ಗ್ರಹಿಸದಿರುವುದೂ ದುರಭಿಮಾನವು.

೬. ಕುಲ, ಬಲ, ಐಶ್ವರ್ಯ, ರೂಪ, ವಿದ್ಯೆ ಮೊದಲಾದವುಗಳಿಂದ ಅಹಂಕಾರ ಪಡುವುದೂ ಇತರರನ್ನು ಜರೆಯುವುದೂ ಮದವು.

೭. ನಿಷ್ಕಾರಣವಾಗಿ ಅಥವಾ ಅನರ್ಥವುಂಟಾದೀತೆಂಬ ಸಂದೇಹದಿಂದ ಇತರರಿಗೆ ದುಃಖವನ್ನುಂಟು ಮಾಡಿ ಮನಸ್ಸಿನಲ್ಲಿ ಸಂತೋಷಪಡುವುದು ಹರ್ಷ ಅಥವಾ ಮತ್ಸರ.

—-

 

[1]ಮೈ. ಚೌ. ಚ.

[2]ಮೈ. ದಲ್ಲಿ ಈ ವಾಕ್ಯವು ಮುಂದಿನ ವಾಕ್ಯದ ನಂತರ ಬಂದಿದೆ. ಮೈ. ಚೌ. ಯಥೋಕ್ತಾಗ್ರಹಣಂ.

[3]ಮೈ. ಚೌ. ಸ್ವಸ್ಯಾರ್ಥಸಂಚಯೇನ ವಾ ಮನಃಪ್ರತಿರಂಜನಃ.