ಅಲೋಚನಗೋಚರೇ ಹ್ಯರ್ಥೇ ಶಾಸ್ತ್ರಂ ಪುರುಷಾಣಾಂ ತೃತೀಯಂ ಲೋಚನಂ || ೨೭ || ೧೧೩ ||

ಅರ್ಥ : ಅಲೋಚನಗೋಚರೇ = ಕಣ್ಗೆ ಪೊಲನಲ್ಲದ, ಅರ್ಥೇ = ಕಾರ್ಯದೊಳು, ಶಾಸ್ತ್ರ = ಶಾಸ್ತ್ರವು, ಪುರುಷಾಣಾಂ = ಪುರುಷರ್ಗೆ, ಹಿ = ಆವುದೊಂದು ಕಾರಣದಿಂ, ತೃತೀಯಂ ಲೋಚನಂ = ಮೂಱನೆಯ ಕಣ್ || ಶಾಸ್ತ್ರಮಿಲ್ಲದಿರ್ದೊಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ಅನಧೀತಶಾಸ್ತ್ರಶ್ಚಕ್ಷುಷ್ಮಾನಪಿ ಪುಮಾನಂಧ ಏವ || ೨೮ || ೧೧೪ ||

ಅರ್ಥ : ಅನಧೀತಶಾಸ್ತ್ರಃ = ಶಾಸ್ತ್ರಮನೋದದ, ಪುಮಾನ್ = ಪುರುಷಂ, ಚಕ್ಷುಷ್ಮಾನಪಿ = ಕಣ್ಗಳನುಳ್ಳಿನಾದೊಡಂ, ಅಂಧ ಏವ = ಅಂಧಕನೇ || ಇದನೇ ಸಮರ್ಥಿಪುದುತ್ತರವಾಕ್ಯಂ :

ನ ಹ್ಯಜ್ಞಾದಪರಃ[1] ಪಶುರಸ್ತಿ || ೨೯ || ೧೧೫ ||

ಅರ್ಥ : ಅನಧೀತಶಾಸ್ತ್ರಃ = ಅಱಿಯದನತ್ತಣಿಂ, ಪರಃ = ಮತ್ತೊಂದು, ಪಶುಃ = ಪ್ರಾಣಿಯುಂ, ಹಿ = ನೆಟ್ಟನೆ, ನಾಸ್ತಿ = ಇಲ್ಲವು || ಇನಿತಕ್ಕಂ ಶಾಸ್ತ್ರಂ ವೇಳ್ಕುಮೆಂಬುದು ತಾತ್ಪರ್ಯಂ || ಅರಸಂ ಮೂರ್ಖನಾಗಲಾಗದೆಂಬುದಂ ಪೇಳ್ವುದುತ್ತರವಾಕ್ಯಂ :

ವರಮರಾಜಕಂ ಭುವನಂ ನ ಮೂರ್ಖೋ ರಾಜಾ || ೩೦ || || ೧೧೬ ||

ಅರ್ಥ : ಅರಾಜಕಂ = ಅರಸಿಲ್ಲದ, ಭುವನಂ = ನಾಡುಂ, ಮೂರ್ಖಃ = ಮೂರ್ಖನಪ್ಪ, ರಾಜಾ = ಅರಸಂ, ನ ವರಂ = ಪ್ರಜೆಪರಿವಾರಕ್ಕೊಳ್ಳಿದನಲ್ಲಂ ||[2] ಇದನಲಂಕರಿಸಿದಪುದುತ್ತರವಾಕ್ಯಂ :

—-

೨೭. ಕಣ್ಣಿಗೆ ಕಾಣದ ವಿಷಯಗಳಲ್ಲಿ ಮನುಷ್ಯರಿಗೆ ಶಾಸ್ತ್ರವೇ ಮೂರನೆಯ ಕಣ್ಣು.

೨೮. ಶಾಸ್ತ್ರವನ್ನರಿಯದ ಮನುಷ್ಯನು ಕಣ್ಣಿದ್ದೂ ಕುರುಡನೇ ಸರಿ.

೨೯. ಅಜ್ಞಾನಿಗಿಂತ ಬೇರೆ ಪಶುವಿಲ್ಲ.

೩೦. ಮೂರ್ಖನಾದ ರಾಜನಿರುವುದಕ್ಕಿಂತ ದೇಶಕ್ಕೆ ರಾಜನಿಲ್ಲದಿರುವುದೇ ಮೇಲು.

—-

ಅಕೃತಸಂಸ್ಕಾರಂ[3] ರತ್ನಮಿವ ಸುಜಾತಮಪಿ ರಾಜಪುತ್ರಂ ನ ನಾಯಕಪದಾ ಯಾಮನಂತಿ[4] ನೀತಿಮಂತಃ[5]|| ೩೧ || || ೧೧೭ ||

ಅರ್ಥ : ಅಕೃತಸಂಸ್ಕಾರಂ = ಸಂಸ್ಕಾರಂಬಡೆಯದ, ರತ್ನಂ = ರತ್ನಮಂ, ಸುಜಾತಮಪಿ = ಉತ್ತಮಜಾತಿಯನುಳ್ಳದಾದೊಡಂ, ಇವ = ಎಂತಂತೆ, ರಾಜಪುತ್ರಂ = ಅರಮಗನಂ, ಸುಜಾತಮಪಿ = ಉತ್ತಮವಂಶವನುಳ್ಳನಾದೊಡಂ, ನಾಯಕಪದಾಯ = ನಾಯಕಪದವಿಗೆ ತಕ್ಕನೆಂದು, ಆಮನಂತಿ = ಪೇಳ್ವರು, ನ = ಅಲ್ಲದು, ನೀತಿಮಂತಃ = ನೀತಿಯನುಳ್ಳವರ್ಗಳು || ಸಂಸ್ಕಾರಹೀನಂ ನಾಯಕನಾದೊಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ಅ(ದುರ್)ವಿನೀತಾದ್ರಾಜ್ಞಃಪ್ರಜಾವಿನಾಶಾಯ[6]ನಾಪರೋsಸ್ತ್ಯುತ್ಪಾತಃ || ೩೨ || ೧೧೮ ||

ಅರ್ಥ : ಅವಿನೀತಾತ್ = ಅವಿನೀತನಾದ, ರಾಜ್ಞಃ = ಅರಸನತ್ತಣಿಂ ಅಪರಃ = ಮತ್ತೊಂದು, ಪ್ರಜಾವಿನಾಶಾಯ = ಪ್ರಜೆಯ ಕೇಡಿಂಗೆ ಕಾರಣಮಪ್ಪ, ಉತ್ಪಾತಃ = ಉತ್ಪಾತಂ, ನಾಸ್ತಿಂ = ಇಲ್ಲ || ದುರ್ವಿನೀತನಂ ಪೇಳ್ವುದುತ್ತರವಾಕ್ಯಂ :

ಯೋ ಯುಕ್ತಾಯುಕ್ತಯೋರವಿವೇಕ[7]ಮತಿರ್ವಿಪರ್ಯಸ್ತಮತಿರ್ವಾ ಸಃ ದುರ್ವಿನೀತಃ || ೩೩ || ೧೧೯ ||

ಅರ್ಥ : ಯಃ = ಆವನೋರ್ವಂ, ಯುಕ್ತಾಯುಕ್ತಯೋಃ = ತಕ್ಕುದು ತಗದುದೆಂಬೆಱಡಱೊಳು, ಅವಿವೇಕಮತಿಃ = ಅಱಿವಿಲ್ಲದಂ, ವಿಪರ್ಯಸ್ತಮತಿರ್ವಾ = ಯುಕ್ತಮನಯುಕ್ತಮೆಂಬ ನಯುಕ್ತಮಂ ಯುಕ್ತಮೆಂಬೊಂ ಮೇಣ್, ಸಃ = ಆತಂ, ದುರ್ವಿನೀತಃ = ದುರ್ವಿನೀತಮೆಂಬಂ || ನೀತಿಯಿಲ್ಲದಱಸು ತಾಂ ಕೆಡುಗುಂ ಪ್ರಜೆಗಳಂ ಕೆಡಿಸುಗುಮೆಂಬುದಿದಱ ತಾತ್ಪರ್ಯಂ || ಶಿಕ್ಷಾಯೋಗ್ಯನ ವ್ಯಪದೇಶದಿಂ ಪೇಳ್ವುದುತ್ತರವಾಕ್ಯಂ :

—-

೩೧. ಸಂಸ್ಕರಿಸದಿದ್ದ ರತ್ನವನ್ನು ನಾಯಕಮಣಿಯಾಗಿ ಸ್ವೀಕರಿಸದಿರುವಂತೆ ಒಳ್ಳೆಯ ವಂಶದಲ್ಲಿ ಹುಟ್ಟಿದವನಾದರೂ (ವಿದ್ಯಾ) ಸಂಸ್ಕಾರವಿಲ್ಲದ ರಾಜಪುತ್ರನ್ನು ನೀತಿವಂತರು ನಾಯಕ ಸ್ಥಾನಕ್ಕೆ ಸ್ವೀಕರಿಸುವುದಿಲ್ಲ.

೩೨. ಪ್ರಜೆಗಳ ವಿನಾಶಕ್ಕೆ ವಿನೀತನಲ್ಲದ ರಾಜನಿಗಿಂತ ಬೇರೆ ವಿಪತ್ತಿಲ್ಲ.

೩೩. ಯಾವನಿಗೆ ಯುಕ್ತಾಯುಕ್ತ ವಿವೇಕವಿರದೋ. ಯಾರು ಯುಕ್ತವನ್ನು ಅಯುಕ್ತವೆಂದೂ, ಅಯುಕ್ತವನ್ನು ಯುಕ್ತವೆಂದೂ ಭಾವಿಸುವನೋ ಆತನು ದುರ್ವಿನೀತನು.

—-

ಯತ್ರ ಸದ್ಭಿರಾಧೀಯಮಾನಾ ಗುಣಾಃ ಸಂಕ್ರಾಮಂತಿ ತದ್‌ದ್ರವ್ಯಂ || ೩೪ || ೧೨೦ ||

ಅರ್ಥ : ಯತ್ರ = ಆವುದೊಂದಱೊಳು, ಸದ್ಭಿಃ = ಸತ್ಪುರುಷರಪ್ಪವರ್ಗಳಿಂ, ಆಧೀಯಮಾನಾಃ = ಯೇಱಿಸಲ್ಪಡುತ್ತಿರ್ದ, ಗುಣಾಃ = ಗುಣಂಗಳು, ಸಂಕ್ರಾಮಂತಿ = ಸಲ್ವುವು, ತತ್ = ಅದು, ದ್ರವ್ಯಂ = ದ್ರವ್ಯಮೆಂಬುದು ||

ಯತೋ[8] ದ್ರವ್ಯಾದ್ರವ್ಯಪ್ರಕೃತಿರಪ್ಯಸ್ತಿ[9] ಕಶ್ಚಿತ್ಪುರುಷಃ ಸಂಕೀರ್ಣಗಜವತ್ || ೩೫ || ೧೨೧ ||

ಅರ್ಥ : ಯತಃ = ಆವನೋರ್ವನತ್ತಣಿಂದಂ, ದ್ರವ್ಯಾದ್ರವ್ಯಪ್ರಕೃತಿರಪಿ = ದ್ರವ್ಯಾದ್ರವ್ಯಂಗಳ ಸ್ವಭಾವವು, ಆಸ್ತಿ = ಉಂಟು, ಕಶ್ಚಿತ್ಪುರುಷಃ = ಆವನೋರ್ವ ಪುರುಷನು, ಸಂಕೀರ್ಣಗಜವತ್ = ಸಂಕೀರ್ಣಜಾತಿಯ ಆನೆಯ ಹಾಂಗೆ ||

ದ್ರವ್ಯಂ ಹಿ ಕ್ರಿಯಾಂ ವಿನಯತಿ ನಾದ್ರವ್ಯಂ || ೩೬ || ೧೨೨ ||

ಅರ್ಥ : ಹಿ = ಆವುದೊಂದು ಕಾರಣದಿಂ, ದ್ರವ್ಯಂ = ಒಳ್ಳಿತಪ್ಪ ವಸ್ತು, ಕ್ರಿಯಾಂ = ಮಾಟಮಂ, ವಿನಯತಿ = ಕೈಕೊಳ್ಗುಂ, ಅದ್ರವ್ಯಂ = ವಸ್ತುವಲ್ಲದುದು, ನ = ಒಳ್ಳಿತಪ್ಪ ಮಾಟಮಂ ಕೈಕೊಳ್ಳದು || ಅಲ್ಲಿ ಗುಣಂಗಳಂ ಕೈಕೊಳ್ವನೇ ಶಿಕ್ಷೆಗೆ ಯೋಗ್ಯಮೆಂಬುದು ತಾತ್ಪರ್ಯಂ || ಬುದ್ಧಿಯ ಗುಣಂಗಳಂ ಪೇಳ್ವುದುತ್ತರವಾಕ್ಯಂ :

ಶುಶ್ರೂಷಾಶ್ರವಣಗ್ರಹಣಧಾರಣವಿಜ್ಞಾನೋಹಾಪೋಹತತ್ತ್ವಾಭಿನಿವೇಶಾ ಹೃಷ್ಟಾಃ ಬುದ್ಧಿಗುಣಾಃ || ೩೭ || ೧೨೩ ||

—-

೩೪. ಸಜ್ಜನರು ನೆಲೆಗೊಳಿಸಿರುವ ಸದ್ಗುಣಗಳು ಎಲ್ಲಿ ಅಥವಾ ಯಾರಲ್ಲಿ ಒಟ್ಟಾಗಿ ಸೇರಿವೆಯೋ ಅದು ದ್ರವ್ಯ ಎಂದೆನಿಸಿಕೊಳ್ಳುತ್ತದೆ.

೩೫. ಸಂಕರಜಾತಿಯ ಆನೆಯಂತೆ ದ್ರವ್ಯಪ್ರಕೃತಿಯುಳ್ಳವನು ಅದ್ರವ್ಯಪ್ರಕೃತಿಯುಳ್ಳವನೂ ಆಗಿರುತ್ತಾನೆ.

೩೬. ಒಳ್ಳೆಯ ದ್ರವ್ಯದಿಂದ ಒಳ್ಳೆಯ ಕ್ರಿಯೆ ಉಂಟಾಗುತ್ತದೆ. ಒಳ್ಳೆಯದಲ್ಲದ್ದರಿಂದ ಆಗುವುದಿಲ್ಲ.

೩೭. ಶುಶ್ರೂಷಾ, ಶ್ರವಣ, ಗ್ರಹಣ, ಧಾರಣ, ವಿಜ್ಞಾನ, ಊಹಾ, ಆಪೋಹ ಮತ್ತು ತತ್ತ್ವಾಭಿನಿವೇಶ ಈ ಎಂಟು ಬುದ್ಧಿಯ ಗುಣಗಳು.

—-

ಶ್ರೋತುಮಿಚ್ಛಾ ಶುಶ್ರೂಷಾ || ೩೮ || ೧೨೪ ||

ಅರ್ಥ : ಶ್ರೋತುಂ = ಕೇಳಲ್ಕೆ, ಇಚ್ಛಾ = ಇಚ್ಛೇಯು, ಶುಶ್ರೂಷಾ = ಶುಶ್ರೂಷೆಯೆಂಬುದು ||

ಶ್ರವಣಮಾಕರ್ಣನಂ || ೩೯ || ೧೨೫ ||

ಅರ್ಥ : ಆಕರ್ಣನಂ = ಕೇಳ್ವುದು, ಶ್ರವಣಂ = ಶ್ರವಣಮೆಂಬುದು ||

ಗ್ರಹಣಂ ಶಾಸ್ತ್ರಾರ್ಥೋಪಾದಾನಂ || ೪೦ || ೧೨೬ ||

ಅರ್ಥ : ಗ್ರಹಣಂ = ಗ್ರಹಣಮೆಂಬುದು, ಶಾಸ್ತ್ರಾರ್ಥೋಪಾದಾನಂ = ಶಾಸ್ತ್ರದರ್ಥಮಂ ಕೈಕೊಳ್ವುದು ||

[10]ಕಾಲಾಂತರೇಷ್ವವಿಸ್ಮರಣಶಕ್ತಿರ್ಧಾರಣಾ || ೪೧ || ೧೨೭ ||

ಅರ್ಥ : ಕಾಲಾಂತೇನು = ಕಾಲಾಂತರಂಗಳಲ್ಲಿ, ಅವಿಸ್ಮರಣಶಕ್ತಿಃ = ಮರೆಯದ ಶಕ್ತಿ, ಧಾರಣಾ = ಧಾರಣೆ ಎಂಬುದು ||

ಮೋಹಸಂದೇಹವಿಪರ್ಯಾಸಮುದಾಸೀನಜ್ಞಾನಂ[11] ವಿಜ್ಞಾನಂ || ೪೨ || ೧೨೮ ||

ಅರ್ಥ : ಮೋಹ = ಅಜ್ಞಾನಮುಂ, ಸಂದೇಹ = ಕೊಱಡೋ ಪುರುಷನೋ ಎಂಬ ಸಂಶಯಮುಂ (ಚಿಪ್ಪಿನ ಕಡಿಕು ಬೆಳ್ಳಿ ಎಂಬ), ವಿಪರ್ಯಾಸ = ವಿಪರೀತಮೆಂಬಿವಱ, ಉದಾಸೀನ = ಕೇಡಿನಿಂದಪ್ಪ, ಜ್ಞಾನಂ = ಅಱಿತಂ, ವಿಜ್ಞಾನಂ = ವಿಶಿಷ್ಟಮಪ್ಪ ಜ್ಞಾನಮೆಂಬುದು ||

ವಿಜ್ಞಾತಮರ್ಥಮವಲಂಬ್ಯಾನ್ಕೇಷು ವ್ಯಾಪ್ತ್ಯಾತಥಾವಿಧವಿತರ್ಕಣ ಮೂಹಃ[12]|| ೪೩ || ೧೨೯ ||

ಅರ್ಥ : ವಿಜ್ಞಾತಂ = ಅಱಿದರ್ಥಂ, ವಸ್ತುವಂ, ಅವಲಂಬ್ಯ = ಆಧಾರವಂ ಮಾಡಿ, ಅನ್ಯೇಷು = ಅಱಿಯದಂತಪ್ಪ ವಸ್ತುಗಳೊಳು, ವ್ಯಾಪ್ತ್ಯಾ = ಆವುದೊಂದಿಂಥಾದೆಲ್ಲಮಿಂತಪ್ಪುದೆಂಬ ಬುದ್ಧಿಯಿಂ, ತಥಾವಿಧವಿತರ್ಕಣಂ = ಆ ತೆಱದ ಚರ್ಚೆಯುಂ, ಊಹಃ = ಊಹೆಯೆಂಬುದು ||

—-

೩೮. ಕೇಳುವ ಇಚ್ಛೆಯು ಶುಶ್ರೂಷೆ.

೩೯. ಕೇಳುವ ಕ್ರಿಯೆಯೇ ಶ್ರವಣ.

೪೦. ಶಾಸ್ತ್ರಗಳ ವಿಷಯಗಳನ್ನು ಸರಿಯಾಗಿ ಗ್ರಹಿಸುವುದು ಗ್ರಹಣ.

೪೧. ಕಾಲಾಂತರದಲ್ಲಿಯೂ ಮರೆಯದಿರುವುದು ಧಾರಣ.

೪೨. ಅಜ್ಞಾನ, ಸಂದೇಹ (ವಿಪರೀತ ಅರ್ಥ) ಇವಿಲ್ಲದೆ ಸರಿಯಾಗಿ ತಿಳಿದುಕೊಳ್ಳುವುದು ವಿಜ್ಞಾನ.

೪೩. ತಿಳಿದ ಅರ್ಥವನ್ನು ಆಧಾರಮಾಡಿಕೊಂಡು ಆ ರೀತಿಯಲ್ಲಿಯೇ ಇತರ ವಿಷಯಗಳಲ್ಲಿ ಸಮನ್ವಯ ಮಾಡಿಕೊಂಡು ಅಂಥ ವಿಷಯಗಳನ್ನು ತಿಳಿದುಕೊಳ್ಳುವುದು ಊಹೆ.

—-

ಉಕ್ತಿಯುಕ್ತಿಭ್ಯಾಂ ವಿರುದ್ಧಾದರ್ಥಾತ್ ಪ್ರತ್ಯವಾಯಸಂಭಾವನಯಾ ವ್ಯಾವರ್ತನಮಪೋಹಃ || ೪೪ || ೧೩೦ ||

ಅರ್ಥ : ಉಕ್ತಿ = ವಚನಮುಂ, ಯುಕ್ತಿಭ್ಯಾಂ = ಯುಕ್ತಿಯುಮೆಂಬಿವಱಿಂ, ವಿರುದ್ಧಾತ್ = ವಿಪರೀತಮಪ್ಪ, ಅರ್ಥಾತ್ = ಕಾರ್ಯದತ್ತಣಿಂ, ಪ್ರತ್ಯವಾಯಸಂಭಾವನಯಾ = ಕೇಡಕ್ಕುಮೆಂಬ ಬಗೆಯಿಂ, ವ್ಯಾವರ್ತನಂ = ಮಗುಳ್ಪುದುಂ, ಆಪೋಹಃ = ಆಪೋಹಮೆಂಬುದು || ಈ ಕಾರ್ಯಮಂ ನಿಶ್ಚಯಿಸಿ ನೆಗಳಲಕ್ಕುಮೆಂಬುದಂ ಯುಕ್ತಿ ವಚನಂಗಳಿಂ ನಿಶ್ಚಯಿಸಿ ಅದಂ ಮಾಳ್ಪುದೆಂಬುದು ತಾತ್ಪರ್ಯಂ || ಊಹಾಜ್ಞಾನಮಂ ಪೇಳ್ದಪರ್ :

ಅಥವಾ ಸಾಮಾನ್ಯ ಜ್ಞಾನಮೂಹೋ ವಿಶೇಷಜ್ಞಾನಮಪೋಹಃ || ೪೫ || ೧೩೧ ||

ಅರ್ಥ : ಅಥವಾ = ಅಂತಲ್ಲದೆ, ಸಾಮಾನ್ಯಜ್ಞಾನಂ = ಸಾಮಾನ್ಯದಿಂದಱಿವುದು, ಊಹಃ = ಊಹೆಯೆಂಬುದು, ವಿಶೇಷಜ್ಞಾನಂ = ಲೇಸಾಗಿ ಅಱಿವುದು, ಅಪೋಹಃ = ಆಪೋಹಮೆಂಬುದು || ತತ್ತ್ವಾಭಿನಿವೇಶಮಂ ಪೇಳ್ದಪರ್:

ವಿಜ್ಞಾನೋಹಾಪೋಹಾನುಗಮವಿಶುದ್ಧ ಮಿದಮಿತ್ಥ ಮೇವೇತಿ ನಿಶ್ಚಯಃ ತತ್ತ್ವಾಭಿನಿವೇಶಃ || ೪೬ || ೧೩೨ ||

ಅರ್ಥ : ವಿಜ್ಞಾನೋಹಾಪೋಹಾನುಗಮವಿಶುದ್ಧಂ = ವಿಜ್ಞಾನೋಹಾಪೋಹಂಗಳ ಬಳಿಸಲ್ವದಱಿಂ ಶುದ್ಧಮಪ್ಪ, ಇದಂ = ಇದು, ಇತ್ಥಮೇವೇತಿ = ಕಾರ್ಯಮಿಂತುಟೆಂಬ, ನಿಶ್ಚಯಃ = ನಿಶ್ಚಯದ ತಱೆಸಲವು ತತ್ತ್ವಾಭಿನಿವೇಶಃ = ತತ್ತ್ವಾಭಿನಿವೇಶಮೆಂಬುದು || ಈ ಪೇಳ್ದ ಗುಣವಿಶಿಷ್ಟಬುದ್ಧಿಯೆಂಬುದು ತಾತ್ಪರ್ಯಂ || ಬುದ್ಧಿಸಮೃದ್ಧಿಗೆ ಕಾರಣಮಪ್ಪ ವಿದ್ಯೆಗಳಂ ಪೇಳ್ವುದುತ್ತರವಾಕ್ಯಂ :

—-

೪೪. ಉಕ್ತಿ ಯುಕ್ತಿಗಳಿಂದ ಒಂದು ವಿಷಯವನ್ನು ಒಂದು ವಿಧದಲ್ಲಿ ಗ್ರಹಿಸಿದರೆ ಅನರ್ಥ ಅಥವಾ ದೋಷವುಂಟಾಗುವುದೆಂದು ಊಹಿಸಿ ಅದರಿಂದ ಹಿಂದೆಗೆಯುವುದು ಅಪೋಹ.

೪೫. ಅಥವಾ ಸಾಮಾನ್ಯವಾಗಿ ತಿಳಿದುಕೊಳ್ಳುವುದು ಊಹೆ, ಲೇಸಾಗಿ ತಿಳಿದುಕೊಳ್ಳುವುದು ಅಪೋಹ.

೪೬. ವಿಜ್ಞಾನ, ಊಹೆ, ಅಪೋಹ, ಇವುಗಳನ್ನು ಅನುಸರಿಸುವದರಿಂದ ಇದು ಹೀಗೆಯೇ ಎಂದು ನಿಶ್ಚಯಿಸುವುದು ತತ್ತ್ವಾಭಿನಿವೇಶ.

—-

ಯಾಃ ಸಮ್ಯಗಧಿಗಮ್ಯಾ [13]ತ್ಮನೋ ಹಿತಮವೈತ್ಯಹಿತಂ ಚಾಪೋಹತಿ ತಾ ವಿದ್ಯಾಃ || ೪೭ || ೧೩೩ ||

ಅರ್ಥ : ಯಾಃ = ಆವುವೋ ಕೆಲವುಂ, ಸಮ್ಯಕ್ = ಒಳ್ಳಿತ್ತಾಗಿ, ಅಧಿಗಮ್ಯ = ಅಱಿತು, ಆತ್ಮನಃ = ತನಗೆ, ಹಿತಂ = ಹಿತಮಪ್ಪುದಂ, ಅವೈತಿ = ಅಱಿವಂ, ಅಹಿತಂ = ಹಿತಮಲ್ಲದುದಂ, ಆಪೋಹತಿ ವಾ = ಪಿಂಗಿಸುಗುಂ ಮೇಣ್, ತಾಃ = ಅವೇ, ವಿದ್ಯಾಃ = ವಿದ್ಯೆಗಳು || ವಿದ್ಯೆಗಳಿಂದಮೆ ಹಿತಾಹಿತಮಱಿಯಲು ಬರ್ಕುಮೆಂಬುದು ತಾತ್ಪರ್ಯಂ || ಆ ರಾಜವಿದ್ಯೆಗಳ ಭೇದಮಂ ಪೇಳ್ವುದುತ್ತರವಾಕ್ಯಂ :

ಆನ್ವೀಕ್ಷಿಕೀತ್ರಯೀ ವಾರ್ತಾ ದಂಡನೀತಿರಿತಿ ಚತಸ್ರೋ ರಾಜವಿದ್ಯಾಃ || ೪೮ || ೧೩೪ ||

ಅರ್ಥ : ಆನ್ವೀಕ್ಷಿಕೀ = ಆನ್ವೀಕ್ಷಿಕಿಯುಂ, ತ್ರಯೀ = ತ್ರಯಿಯುಂ, ವಾರ್ತಾ = ವಾರ್ತೆಯುಂ, ದಂಡನೀತಿ = ದಂಡನೀತಿಯೆಂದಿಂತು, ಚತಸ್ರಃ = ನಾಲ್ಕುವಿಧಂ, ರಾಜವಿದ್ಯಾಃ = ರಾಜವಿದ್ಯೆಗಳುಂ || ಆನ್ವೀಕ್ಷಿಕಿಯ ಫಲಮಂ ಪೇಳ್ವುದುತ್ತರವಾಕ್ಯಂ :

[14]ಅಧೀಯಾನೋ ಹ್ಯಾನ್ವೀಕ್ಷಿಕೀಂ ಕಾರ್ಯಾಕಾರ್ಯಾಣಾಂ ಬಲಾಬಲಂ
ಹೇತುಭಿರ್ವಿಚಾರಯತಿ
|| ೪೯ || ೧೩೫ ||

ಅರ್ಥ : ಆನ್ವೀಕ್ಷಿಕೀಂ = ಆನ್ವೀಕ್ಷಿಕಿ ಎಂಬ ವಿದ್ಯೆಯಂ, ಅಧೀಯಾನಃ = ಓದುತ್ತಿರ್ದಂ, ಹಿ = ಸ್ಫುಟಮಾಗಿ, ಕಾರ್ಯಾಕಾರ್ಯಾಣಾಂ = ಕಾರ್ಯಾಕಾರ್ಯಗಳು, ಬಲಾಬಲ = ಪೆರ್ಚು-ಕುಂದಂ, ಹೇತುಭಿಃ = ಕಾರಣಂಗಳಿಂ, ವಿಚಾರಯತಿ = ವಿಚಾರಿಸುಗುಂ ||

ವ್ಯಸನೇಷು ನ ವಿಷೀದತಿ ನಾಭ್ಯುದಯೇನ ವಿಕಾರ್ಯತೇ ಸಮಧಿಗಚ್ಛತಿ ಚ
ಪ್ರಜ್ಞಾ
[15] ವಾಕ್ಯವೈಶಾರದ್ಯಂ || ೫೦ || ೧೩೬ ||

ಅರ್ಥ : ವ್ಯಸನೇಷು = ಎಡಱುಗಳೊಳು, ನ ವಿಷೀದತಿ = ದುಃಖಬಡುವನಲ್ಲ, ಅಭ್ಯುದಯೇನ = ಸಿರಿಯಿಂದಂ, ನ ವಿಕಾರ್ಯತೇ = ವಿಕಾರಕ್ಕೆ ಸಲಿಸಪಡಂ, ಪ್ರಜ್ಞಾವಾಕ್ಯವೈಶಾರದ್ಯಂ = ಪ್ರಜ್ಞಾವಚನದ ಪಟುತ್ವಮುಮಂ, ಸಮಧಿಗಚ್ಛತಿ = ಲೇಸಾಗಿ ಯೆಯ್ದುವಂ || ಆನ್ವೀಕ್ಷಿಕಿಯಿಂದಿನಿತುಮನ ಱಿಯಬರ್ಕುಮೆಂಬುದು ತಾತ್ರರ್ಯಂ || ತ್ರಯಿಯ ಫಲಮಂ ಪೇಳ್ವುದುತ್ತರವಾಕ್ಯಂ :

—-

೪೭. ಯಾವುದನ್ನು ಚೆನ್ನಾಗಿ ತಿಳಿಯುವುದರಿಂದ ತನಗೆ ಯಾವುದು ಹಿತ ಎಂಬುದು ತಿಳಿಯುವುದೋ ಹಿತವಲ್ಲದನ್ನು ಬಿಡುವದೋ ಅವು ವಿದ್ಯೆಗಳು (ವಿದ್ಯೆಯಿಂದಲೇ ಹಿತಾಹಿತಗಳನ್ನು ತಿಳಿಯುವುದು ಸಾಧ್ಯ).

೪೮. ಅನ್ವೀಕ್ಷಿಕೀ. ತ್ರಯೀ. ವಾರ್ತಾ, ದಂಡನೀತಿ ಎಂದು ನಾಲ್ಕು ರಾಜವಿದ್ಯೆಗಳು.

೪೯. ಅನ್ವೀಕ್ಷಿಕಿಯನ್ನು ಅಭ್ಯಸಿಸುವನು ಸ್ಡುಟವಾಗಿ ಕಾರ್ಯಾಕಾರ್ಯಗಳ ಬಲಾಬಲಗಳನ್ನು ಕಾರಣಸಹಿತವಾಗಿ ವಿಚಾರಿಸಬಲ್ಲವನಾಗುತ್ತಾನೆ.

೫೦. ಕಷ್ಟಗಳು ಬಂದರೆ ಕುಂದುವುದಿಲ್ಲ. ಸಿರಿಯಿಂದ ವಿಕಾರವನ್ನು ಹೊಂದುವುದಿಲ್ಲ. ಆಲೋಚನೆಗಳಲ್ಲಿ, ಮಾತುಗಳಲ್ಲಿ, ಸಾಮರ್ಥ್ಯವನ್ನು ಹೊಂದುವನು.

—-

 

[1]ಮೈ. ನ ಹ್ಯಜ್ಞಾನಿನೋನ್ಯಃ, ಚೌ: ನ ಹ್ಯಜ್ಞಾನಾದಪರಂ.

[2]ಇಲ್ಲಿ ಟೀಕಾಕಾರನು ಅಪೇಕ್ಷಿತ ಅರ್ಥಕ್ಕಿಂತ ಬೇರೆ ಅರ್ಥಕೊಟ್ಟಿದ್ದಾನೆ. ಭಾವಾನುವಾದವನ್ನು ನೋಡಿರಿ.

[3]ಚೌ. ಅಸಂಸ್ಕಾರಂ.

[4]ಚೌ. ಆನಯಂತಿ.

[5]ಮೈ., ಚೌ. ಸಾಧವಃ

[6]ಮೈ., ಚೌ. ಪ್ರಜಾವಿನಾಶಾತ್.

[7]ಮೈ., ಚೌ. ಅವಿವೇಕೀ.

[8]ಮೈ. ಚೌ: ಯತೋ ಎಂಬ ಅಕ್ಷರಗಳಿಲ್ಲ.

[9]ಮೈ. ಆಸ್ತಿ ಎಂಬ ಪದವಿಲ್ಲ.

[10]ಚೌ. ಕಾಲಾಂತರೇಷು ಇಲ್ಲ.

[11]ಮೈ. ಚೌ. ವ್ಯುದಾಸೇನ. ಈ ಪಾಠವೇ ಸರಿಯೆಂದು ತೋರುತ್ತದೆ.

[12]ಮೈ. ವಿತರ್ಕಣಂ.

[13]ಮೈ. ಚೌ. ಸಮಧಿಗಮ್ಯ.

[14]ಮೈ. ಚೌ. ಮತ್ತು ಮುಂದಿನ ವಾಕ್ಯವು ಒಂದೇ ವಾಕ್ಯವಾಗಿದೆ.

[15]ಮೈ. ಪ್ರಜ್ಞಾವಾಕ್ಯಕ್ರಿಯಾವೈಶಾರದ್ಯಂ.