ತ್ರಯೀಂ ಪಠನ್ ವರ್ಣಾಶ್ರಮಾಚಾರೇಷ್ವತೀವ[1]ಪ್ರಗಲ್ಫತೇ ಜಾನಾತಿ ಚ
ಸಮಸ್ತಾಮಪಿ ಧರ್ಮಾಧರ್ಮಸ್ಥಿತಿಂ
[2]|| ೫೧ || ೧೩೭ ||

ಅರ್ಥ : ವಾರ್ತಾಂ = ವಾರ್ತೆಯೆಂಬ ವಿದ್ಯೆಯಂ, ಯುಕ್ತಿತಃ = ಕ್ರಮದಿಂ, ಪ್ರವರ್ತಯನ್ = ನೆಗಳುತ್ತಿರ್ದ, ಜೀವಲೋಕಂ = ಜೀವಂಗಳ ನೆರವಿಯಂ, ಸರ್ವಮಪಿ = ಎಲ್ಲಮುಮಂ, ಅಭಿನಂದಯತಿ = ತಣಿಪುಗುಂ, ಸ್ವಯಂ = ತಾಂ, ಕಾಮಾನ್ = ಬಯಕೆಗಳಂ, ಸರ್ವಾನಪಿ = ಎಲ್ಲಮಂ, ಲಭತೇ = ಪಡೆವನುಮಕ್ಕುಂ || ಕೃಷ್ಯಾದಿಗಳ್ ಪೆರ್ಚಿ ಪಲರ ಸಂತೋಷಮುಮರಸುಗಳ ಬಯಸಿದ ಬಯಕೆಯುಮಕ್ಕುಮೆಂಬುದಭಿಪ್ರಾಯಂ || ದಂಡನೀತಿಯ ಫಲಮಂ ಪೇಳ್ವುದುತ್ತರವಾಕ್ಯಂ :

ಯಮ ಇವಾಪರಾಧಿಷು ದಂಡಪ್ರಣಯನೇನ[3] ವಿದ್ಯಮಾನೇ ರಾಜ್ಞಿ
ಪ್ರಜಾಃ ಸ್ವಮರ್ಯಾದಾಂ ನಾತಿಕ್ರಾಮಂತಿ ಪ್ರಸೀದಂತಿ ಚ ತ್ರಿವರ್ಗಫಲಾ ವಿಭೂತಯಃ
|| ೫೩ || ೧೩೯ ||

ಅರ್ಥ : ರಾಜ್ಞಿ = ಅರಸಂ, ವಿದ್ಯಮಾನೇ = ಉಳ್ಳನಾಗುತ್ತಿರಲು, ಅಪರಾಧಿಷು = ದೋಷಿಗಳೊಳು, ಯಮ ಇವ = ಯಮನಂತೆ, ದಂಡಪ್ರಣಯನೇನ = ದಂಡಮಂ ಮಾಳ್ಪುದಱಿಂ, ಪ್ರಜಾಃ = ಪ್ರಜೆಗಳು, ಸ್ವಮರ್ಯಾದಾಂ = ತಂತಮ್ಮ ಮೇರೆಯಂ, ನಾತಿಕ್ರಮಾಂತಿ = ದಾಂಟುವರಲ್ಲರು, ತ್ರಿವರ್ಗಫಲಾಃ = ಧರ್ಮಾರ್ಥಕಾಮಂಗಳಂ ಫಲಮಾಗುಳ್ಳ, ವಿಭೂತಯಃ = ಸಿರಿಗಳು, ಪ್ರಸೀದಂತಿ ಚ = ಪ್ರಸನ್ನಂಗಳಪ್ಪುವು || ಅರಸಿಂದಾದ ದಂಡನೀತಿಯಿಂ ಮರ್ಯಾದೆಯುಮೈಶ್ವರ್ಯಮುಮಕ್ಕು ಮೆಂಬುದು ತಾತ್ಪರ್ಯಂ || ಅನ್ವೀಕ್ಷಿಕಿಯ ಭೇದಮಂ ಪೇಳ್ವುದುತ್ತರಸೂತ್ರಂ :

—-

೫೧. ತ್ರಯಿಯನ್ನು ಓದಿಕೊಂಡವನು ವರ್ಣಾಶ್ರಮಗಳ ಆಚಾರಣೆಗಳಲ್ಲಿ ಹೆಚ್ಚಿನ ತಿಳುವಳಿಕೆಯನ್ನು ಎಲ್ಲ ಧರ್ಮಾಧರ್ಮಗಳ ಸ್ವರೂಪವನ್ನು ತಿಳಿದುಕೊಳ್ಳುತ್ತಾನೆ.

೫೨. ವಾರ್ತೆಯನ್ನು ಯುಕ್ತಿ ಪೂರ್ವಕವಾಗಿ ನಡೆಸುವವನು ಸಮಸ್ತ ಜೀವಲೋಕವನ್ನೂ ತೃಪ್ತಿ ಪಡಿಸುವನು. ತಾನೂ ಕೂಡ ತನ್ನ ಬಯಕೆಗಳೆಲ್ಲವನ್ನೂ ಪೂರೈಸಿಕೊಳ್ಳುವನು.

೫೩. ಅಪರಾಧಿಗಳನ್ನು ಯಮನಂತೆ ದಂಡಿಸುವ ರಾಜನಿದ್ದಲ್ಲಿ ಪ್ರಜೆಗಳು ತಮ್ಮ ತಮ್ಮ ಮೇರೆಗಳನ್ನು ಮೀರುವುದಿಲ್ಲ. ಧರ್ಮ. ಅರ್ಥ. ಕಾಮಗಳು ಫಲವಾಗಿ ಉಳ್ಳ ಐಶ್ವರ್ಯಗಳು ಅಭಿವೃದ್ಧಿ ಹೊಂದುತ್ತವೆ.

—-

ಸಾಂಖ್ಯಂ ಯೌಗೋ[4] ಲೋಕಾಯತಮಿತಿ ಚಾನ್ವೀಕ್ಷಿಕೀ || ೫೪ || ೧೪೦ ||

ಅರ್ಥ : ಸಾಂಖ್ಯ = ಸಾಂಖ್ಯಮತಮುಂ, ಯೌಗಃ = ಆಧ್ಯಾತ್ಮಮುಂ, ಲೋಕಾಯತಮಿತಿ ಚ = ಚಾರ್ವಾಕಮತಮೆಂದಿಂತು, ಆನ್ವೀಕ್ಷಿಕೀ = ಆನ್ವೀಕ್ಷಿಕೀ ಎಂಬ ವಿದ್ಯೆಯ ಭೇದಂಗಳು ||

ಬೌದ್ಧಾರ್ಹತಯೋಃ ಶ್ರುತೇಃ ಪ್ರತಿಪಕ್ಷತ್ವಾತ್ || ೫೫ || ೧೪೧ ||

ಅರ್ಥ : ಬೌದ್ಧಾರ್ಹತಯೋಃ ಭೌದ್ಧ-ಅರ್ಹತಮೆಂಬೆಱಡಕ್ಕೆ, ಶ್ರುತೇಃ = ವೇದಕ್ಕೆ, ಪ್ರತಿಪಕ್ಷತ್ವಾತ್ = ಪ್ರತಿಪಕ್ಷವುಂಟಪ್ಪುದಱೆಂದ || ಆನ್ವೀಕ್ಷಿಕಿಯಲ್ಲಿ ಸಾಂಖ್ಯಮಂ ಪೇಳ್ದಪರ್ :

ಪ್ರಕೃತಿಪುರುಷಜ್ಞೋ ಹಿ ರಾಜಾ ಸತ್ವಮವಲಂಬತೇ ರಜಃಫಲಂ ಚಾಪಲಂ ಪರಿಹರತಿ
ತಮೋಭಿರ್ನಾಭಿಭೂಯತೇ ಯತತೇ ಚ ವಿದ್ಯಾವೃದ್ಧಸೇವಾಯಾಂ
|| ೫೬ || ೧೪೨ ||

ಪ್ರಕೃತಿ-ಸತ್ವರಜಸ್ತಮಂಗಳ ಸಮಾವಸ್ಥೆಯಪ್ಪ ಪ್ರಕೃತಿಯಂ ಗ್ರಂಥಾಂತರದಿಂ ಪೇಳೆಪಡುವುದುತ್ತರ ಶ್ಲೋಕಂ :

ಸತ್ವಂ ಲಘುಪ್ರಕಾಶಕಮಿಷ್ಟಮವಷ್ಟಂಭಕಂ ಚಲಂ ಚ ರಜಃ ||
ಉರುವರಣಕಮೇ ಸಾಮ್ಯಾವಸ್ಥಾ ಭವೇತ್ ಪ್ರಕೃತಿಃ
||

ಪುರುಷಂ ಕರ್ತೃತ್ವ ಭೋಕ್ತೃಕ್ರಿಯಾಗುಣರಹಿತನುಂ ಸರ್ವಗತನುಂ ಶುದ್ಧನುಮಮೂರ್ತನುಂ ಚೇತನನುಮಪ್ಪ ಸಾಂಖ್ಯಪುರುಷನುಂ || ಅನ್ಯಗ್ರಂಥಾಂತರದಲ್ಲಿ ಪೇಳಲ್ಪಟ್ಟುದು ಶ್ಲೋಕಃ ||

—-

೫೪. ಸಾಂಖ್ಯ, ಯೋಗ, ಲೋಕಾಯತ ಇವು ಅನ್ವೀಕ್ಷಿಕೀ.

೫೫. ಬೌದ್ಧ. ಅರ್ಹತ (ಜೈನ) ಇವೆರಡು ವೇದ ವಿರುದ್ಧವು.

೫೬. ಪ್ರಕೃತಿ ಪುರುಷರನ್ನರಿವ ರಾಜನು ಸತ್ವ ಗುಣವನ್ನು ಅವಲಂಬಿಸುವನು. ರಜೋಗುಣದ ಫಲವಾದ ಚಪಲಿಕೆಯನ್ನು ಪರಿಹರಿಸುವನು. ತಮೋಗುಣಗಳಿಂದ ತಿರಸ್ಕೃತನಾಗನು. ವಿದ್ಯೆಗಳನ್ನೂ ವೃದ್ಧರನ್ನೂ ಸೇವಿಸುವಲ್ಲಿ ಪ್ರಯತ್ನಶೀಲನಾಗುವನು.

—-

ಅಕರ್ತೋ ನಿರ್ಗುಣಃ ಶುದ್ಧೋ ನಿತ್ಯಃ ಸರ್ವಗತೋ ಕ್ರಿಯಃ ||
‌ಅಮೂರ್ತಶ್ಚೇತನೋ ಭೋಕ್ತಾ ಹ್ಯಾತ್ಮಾ ಕಪಿಲದರ್ಶನೇ
||

ಅಂತು ಪ್ರಕೃತಿಪುರುಷಜ್ಞೋ = ಪ್ರಕೃತಿಪುರುಷರನಱಿವ, ರಾಜಾ = ಅರಸಂ, ಹಿ = ನೆಟ್ಟನೆ, ಸತ್ವಂ = ಸತ್ವಗುಣಮಂ, ಅವಲಂಬತೇ = ಆಧಾರಂ ಮಾಡಿಕ್ಕುಂ, ರಜಃಫಲ = ರಜೋಗುಣದ ಫಲಮಪ್ಪ, ಚಾಪಲಂ ಚ = ಚಪಲತೆಯುಮಂ, ಪರಿಹರತಿ = ಮಾಣ್ಗುಂ, ತಮೋಭಿಃ = ತಮೋಗುಣಂಗಳಿಂ, ನಾಭಿಭೂಯತೇ = ಒಟ್ಟಯ್ಸಲ್ಪಡದಂ (ತಿರಸ್ಕರಿಸ), ವಿದ್ಯಾವೃದ್ಧಸೇವಾಯಾಂ ಚ = ವಿದ್ಯೆಯುಮಂ (ವಿದ್ಯೆಯಂ ಪೆರ್ಚಿದವರ) ವೃದ್ಧರುಮಂ ಪೊರ್ದುವಲ್ಲಿಯುಂ, ಯತತೇ = ಪ್ರಯತ್ನಮಂ ಮಾಳ್ಕುಂ || ವಿದ್ಯಾವೃದ್ಧ ಸೇವೆಯಿಲ್ಲದಂಗೆ ದೋಷಮಂ ಪೇಳ್ವುದುತ್ತರವಾಕ್ಯಂ :

ಅಜಾತವಿದ್ಯಾವೃದ್ಧ ಸಂಯೋಗೋ ಹಿ ರಾಜಾ ನಿರಂಕುಶೋ ಗಜ ಇವ ಸದ್ಯೋ ವಿನಶ್ಯತಿ || ೫೭ || ೧೪೩ ||

ಅರ್ಥ : ಅಜಾತವಿದ್ಯಾವೃದ್ಧಸಂಯೋಗಃ = ವಿದ್ಯೆಯ, ವೃದ್ಧರ ಪ್ರಸಂಗಮಿಲ್ಲದ, ರಾಜಾ = ಅರಸು, ಹಿ = ನೆಟ್ಟನೆ, ನಿರಂಕುಶಃ = ಅಂಕುಶಮಿಲ್ಲದ, ಗಜ ಇವ = ಆನೆಯಂತೆ, ಸದ್ಯಃ = ತೊಟ್ಟನೆ, ವಿನಶ್ಯತಿ = ಕಿಡುಗುಂ || ವೃದ್ಧಸೇವೆಯ ಫಲವಿಶೇಷಮಂ ದೃಷ್ಟಾಂತದಿಂ ಪೇಳುದುತ್ತರವಾಕ್ಯಂ :

ಅನಧೀಯಾನೋಪಿ[5] ವಿಶಿಷ್ಟಜನಸಂಸರ್ಗಾತ್ ಪರಾಂ ವ್ಯಾಪತ್ತಿಂ[6]
ಅವಾಪ್ನೋತಿ ಅನ್ಯೈವ
[7]ಖಲು ಚ್ಛಾಯಾ ಟಪಜಲತರೂಣಾಂ || ೫೮ || ೧೪೪ ||

ಅರ್ಥ : ಅನಧೀಯಾನೋಪಿ = ತಾನು ಓದದನುಂ, ವಿಶಿಷ್ಟಜನಸಂಸರ್ಗಾತ್ = ಒಳ್ಳಿದಱ ಕೂಟದಿಂ, ಪರಾಂ = ಮಿಕ್ಕ, ವ್ಯಾಪತ್ತಿಂ = ಪ್ರೌಢಿಯಂ, ಅವಾಪ್ನೋತಿ = ಯೆಯ್ದುಗುಂ, ಟಪಜಲತರೂಣಾಂ = ನೀರ್ದಡಿಯ ಮರಂಗಳ, ಚ್ಛಾಯಾ = ಕಾಂತಿ, ಅನ್ಯೈವ ಖಲು = ದೂರದಲಿ ಇರ್ದ ಮರಂಗಳ ಕಾಂತಿಯಿಂದ ಬೇಱೆ || ಉಪಾಧ್ಯಾಯನ ಗುಣಮಂ ಪೇಳ್ವುದುತ್ತರವಾಕ್ಯಂ :

—-

೫೭. ಜ್ಞಾನವೃದ್ಧರ ಸಂಪರ್ಕವಿಲ್ಲದ ಅರಸನು ಅಂಕುಶವಿಲ್ಲದ ಆನೆಯಂತೆ ತಟ್ಟನೆ ನಶಿಸುತ್ತಾನೆ.

೫೮. ಅನ್ವೀಕ್ಷಿಕಿಯನ್ನು ಅಧ್ಯಯನ ಮಾಡದಿದ್ದರೂ ವಿಶಿಷ್ಟರಾದ ಜನಗಳ ಸಂಪರ್ಕದಿಂದ ಹೆಚ್ಚಿನ ಪ್ರೌಢಿಮೆಯನ್ನು ಹೊಂದವನು. ನೀರ ಹತ್ತಿರವಿರುವ ಮರಗಳ ಕಾಂತಿಯ ದೂರದಲ್ಲಿರುವ ಮರಗಳ ಕಾಂತಿಗಿಂತ ಬೇರೆಯದೇ ಅಲ್ಲವೆ?

—-

ವಂಶವೃತ್ತವಿದ್ಯಾಭಿಜನವಿಶುದ್ಧಾ ಹಿ ರಾಜ್ಞಾಮುಪಾಧ್ಯಾಯಾಃ || ೫೯ || ೧೪೫ ||

ಅರ್ಥ : ವಂಶಃ = ಕುಲಮಂ, ವೃತ್ತ = ಚಾರಿತ್ರಮುಂ, ವಿದ್ಯಾ = ವಿದ್ಯೆಯುಂ, ಅಭಿಜನ = ಪರಿವಾರಜನ (ನಂಟರುಂ)ಮುಮೆಂಬಿವಱಿಂ, ವಿಶುದ್ಧಾಃ = ಶುದ್ಧರಪ್ಪವರ್ಗಗಳು, ಹಿ = ನೆಟ್ಟನೆ, ರಾಜ್ಞಾಂ = ಅರಸುಗಳ್ಗೆ, ಉಪಾಧ್ಯಾಯಾಃ = ಉಪಾಧ್ಯಾಯರಪ್ಪರು || ಈ ಗುಣಂಗಳಿಲ್ಲದವಂ ಉಪಾಧ್ಯಾಯನಲ್ಲೆಂಬುದಭಿಪ್ರಾಯಂ ||

[8]ವ್ರತವಿದ್ಯಾವಯೋಧಿಕೇಷು ನೀಚೈರಾಚರಣಂ ವಿನಯಃ || ೬೦ || ೧೪೬ ||

ಅರ್ಥ : ವ್ರತವಿದ್ಯಾವಯೋಧಿಕೇಷು = ವ್ರತದಿಂ, ವಿದ್ಯೆಯಿಂ ವಯಸ್ಸಿನಿದಧಿಕವಾದವರುಗಳಲ್ಲಿ, ನೀಚ್ಯೆರಾಚರಣಂ = ಕೆಳಗಾಗಿ ಆಚರಿಸುವುದು, ವಿನಯಃ = ವಿನಯಮೆಂಬುದು || ಗುಣಾಧಿಕರ್ಗೆ ವಿನಯಮಂ ಮಾಳ್ಪಲ್ಲಿ ಫಲಮಂ ಪೇಳ್ದಪರ್ :

ಶಿಷ್ಟೇಷು ನೀಚೈರಾಚರನ್ನರಪತಿರಿಹ ಲೋಕೇ ಸ್ವರ್ಗೇ ಚ ಮಹೀಯತೇ || ೬೧ || ೧೪೭ ||

ಅರ್ಥಃ ಶಿಷ್ಟೇಷು = ಉತ್ತಮರೊಳ್, ನೀಚೈಃ = ವಿನಯಂವೆರಸು, ಆಚರನ್ = ನೆಗಳುತ್ತಿರ್ದ್ದ, ನರಪತಿಃ = ಅರಸು, ಇಹಲೋಕೆ = ಈ ಭವದೊಳಂ, ಸ್ವರ್ಗೇಚ = ಸ್ವರ್ಗದೊಳು, ಮಹೀಯತೇ = ಪೂಜಿಸಲ್ಪಡುವಂ || ಇಹಪರಲೋಕಖ್ಯಾತಿಯುಮಂ ಸುಖಂಗಳುಮಂ ವಿನಯಮೆ ಮಾಳ್ಕುಮೆಂಬುದು ತಾತ್ಪರ್ಯಂ || ಕ್ಷತ್ರಿಯಂಗೆ ಪೊಡಮಡುವ ಸ್ಥಾನಕಮಂ ಪೇಳ್ವುದುತ್ತರಸೂತ್ರ :

ರಾಜಾ ಹಿ ಪರಂ ದೈವಂ ನಾಸೌ ಕಸ್ಮೈಚಿತ್ ಪ್ರಣಮತ್ಯನ್ಯತ್ರ[9]
ದೇವದ್ವಿಜಗುರುಜನೇಭ್ಯಃ
|| ೬೨ || ೧೪೮ ||

ಅರ್ಥ : ರಾಜಾ ಹಿ = ಅರಸನಲಾ, ಪರಂ = ಮಿಕ್ಕ, ದೈವಂ = ದೈವಂ, ಅಸೌ = ಈತಂ, ದೇವದ್ವಿಜಗುರುಜನೇಭ್ಯಃ = ದೇವದ್ವಿಜಗುರುಜನಂಗಳತ್ತಣಿಂ, ಅನ್ಯತ್ರ = ಪೆಱಱೊಳು, ಕಸ್ಮೈಚಿತ್ = ಆವಂಗಂ, ನ ಪ್ರಣಮತಿ = ಪೊಡವಡಂ || ಕ್ಷತ್ರಿಯಂಗೆ ದೇವದ್ವಿಜಗುರುಜನಂಗಳೆ ಸ್ತುತ್ಯರೆಂಬುದು ತಾತ್ಪರ್ಯಂ || ಇಂತಪ್ಪಲ್ಲಿ ವಿದ್ಯೆಯಂ ಕಲಿಯಲಾಗದೆಂಬುದಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

—-

೫೯. ವಂಶದಿಂದ, ಚಾರಿತ್ರ್ಯದಿಂದ, ವಿದ್ಯೆಯಿಂದ, ಪರಿವಾರ ಜನರಿಂದ, ಪರಿಶುದ್ಧರಾಗಿರುವವರು ಅರಸುಗಳಿಗೆ ಉಪಾಧ್ಯಾಯರಾಗಿರಬೇಕು.

೬೦. ವ್ರತ. ವಿದ್ಯಾ, ವಯಸ್ಸುಗಳಲ್ಲಿ ಶ್ರೇಷ್ಠರಾದವರ ಎದುರಿಗೆ ತಗ್ಗಿ ನಡೆಯುವುದು ವಿನಯವು.

೬೧. ಶಿಷ್ಟರ ವಿಷಯದಲ್ಲಿ ವಿನಯದಿಂದ ನಡೆದುಕೊಳ್ಳುವ ಅರಸನು ಈ ಲೋಕದಲ್ಲಿಯೂ ಸ್ವರ್ಗದಲ್ಲಿಯೂ ಪೂಜಿಸಲ್ಪುಡುವನು.

೬೨. ರಾಜನು ಪರದೇವತೆ. ಈತನು ದೇವ ದ್ವಿಜಗುರುಜನರಲ್ಲದೆ ಬೇರೆ ಯಾರಿಗೂ ಪೊಡಮಡನು.

—-

ವರಮಜ್ಞಾನಂ ನಾಶಿಷ್ಟಜನಸೇವಯಾ ವಿದ್ಯಾ || ೬೩ || ೧೪೯ ||

ಅರ್ಥ : ಅಜ್ಞಾನಂ = ಅಱಿತಮಿಲ್ಲದುದು, ವರ = ಒಳ್ಳಿತ್ತು, ಅಶಿಷ್ಟಜನಸೇವಯಾ = ಕಷ್ಟ (ದುರ್ಜನ)ರ ಪೊರ್ದುಗೆಯಿಂದಾದ, ವಿದ್ಯಾ = ವಿದ್ಯೆಯು, ನ = ಒಳ್ಳಿತ್ತಲ್ಲದು ||

ಅಲಂ ತೇನಾಮೃತೇನ ಯತ್ರಾಸ್ತಿ ವಿಷಸಂಸರ್ಗಃ || ೬೪ || ೧೫೧ ||

ಅರ್ಥ : ಪ್ರಾಯೇಣ = ಪ್ರಚುರದಿಂ, ಶಿಷ್ಯಾಃ = ಶಿಷ್ಯರ್ಕಳು, ಗುರುಜನಶೀಲಂ = ಗುರುಜನಂಗಳ ಸ್ವಭಾವಮಂ, ಅನುಸರಂತಿ = ಕೈಕೊಳ್ವರು ||

ನವೇಷು ಭಾಜನೇಷು[10] ಲಗ್ನಃ ಸಂಸ್ಕಾರೋ ಬ್ರಹ್ಮಣಾಪ್ಯನ್ಯಥಾ ಕರ್ತುಂ ನ ಶಕ್ಯತೇ || ೬೬ || || ೧೫೨ ||

ಅರ್ಥ : ನವೇಷು = ಪೊಸತಪ್ಪ, ಭಾಜನೇಷು = ಮಡಕೆಗಳೊಳು, ಲಗ್ನಃ = ಪತ್ತಿದ, ಸಂಸ್ಕಾರಃ = ಮಾಡಿದ ಗಂಧಂ, ಬ್ರಹ್ಮಣಾಪಿ = ಬ್ರಹ್ಮನಿಂದೆಯುಂ, ಅನ್ಯಥಾ = ಮತ್ತೊಂದು ತೆಱನಾಗಿ, ಕರ್ತುಂ = ಮಾಡಲ್ಕೆ, ನ ಶಕ್ಯತೇ = ಬಾರದು || ಕ್ಷತ್ರಿಯಪುತ್ರಂಗೆ ದುಷ್ಟಸಂಗತಿಯಾಗದೆಂಬುದು ರಾಜನೀತಿಯಭಿಪ್ರಾಯಂ || ಕಿಱಿದಪ್ಪಱಿತಂ ಪೊಲ್ಲಮೆಂಬುದಂ ಪೇಳ್ದಪರ್ :

ಅಂಧ ಇವ ವರಂ ಪರಪ್ರಣೇಯೋ ರಾಜಾ ನ ಜ್ಞಾನಲವದುರ್ವಿದಗ್ಧಃ || ೬೭ || ೧೫೩ ||

ಅರ್ಥ : ಅಂಧ ಇವ = ಅಂಧಕನಂತೆ, ಪರಪ್ರಣೇಯಃ = ಪೆಱರಿಂ ನಡೆಯಿಸಲ್ಪಡುವ, ರಾಜಾ = ಅರಸು, ವರಂ = ಒಳ್ಳಿತ್ತು, ಜ್ಞಾನಲವ = ಕಿಱಿದಪ್ಪ ಜ್ಞಾನದಿಂ, ದುರ್ವಿದಗ್ಧಃ = ನಾನೇ ಬಲ್ಲನೆಂಬೊಂ (ಅಱಿಯದವನು) ನ = ಲೇಸಲ್ಲ || ನಿರುತಮನಱಿಯಲೆವೇಳ್ಕುಮೆಂಬುದು ತಾತ್ಪರ್ಯಂ || ಇಂತಪ್ಪ ದುರ್ವಿದಗ್ಧನಂ ತಿಳಿಪಲಾಗದೆಂಬುದಂ ಪೇಳ್ವುದುತ್ತರವಾಕ್ಯಂ :

—-

೬೩. ದುರ್ಜನರನ್ನು ಸೇವಿಸಿ ವಿದ್ಯಾರ್ಜನೆ ಮಾಡುವುದಕ್ಕಿಂತ ಅಜ್ಞಾನಿಯಾಗಿರುವುದೇ ಮೇಲು.

೬೪. ವಿಷಬೆರೆತ ಅಮೃತ ಬೇಡ.

೬೫. ಸಾಧಾರಣವಾಗಿ ಶಿಷ್ಯರು ಗುರುಜನರ ಶೀಲ ಸ್ವಭಾವಗಳನ್ನು ಅನುಸರಿಸುತ್ತಾರೆ.

೬೬. ಹಸಿ ಮಡಕೆಗೆ ಅಂಟಿಕೊಂಡ ಗುರುತುಗಳನ್ನು ಬ್ರಹ್ಮನಾದರೂ ಅಳಿಸಲಾರನು.

೬೭. ಅಲ್ಪಜ್ಞಾನಿಯಾದರೂ ತಾನೇ ಜ್ಞಾನಿಯೆಂದುಕೊಳ್ಳುವ ರಾಜನಿಗಿಂತ ಕುರುಡನಂತೆ ಇತರರಿಂದ ನಡೆಸಲ್ಪಡುವ ರಾಜನು ಮೇಲು.

—-

ನೀಲಿರಕ್ತೇ ವಸ್ತ್ರ ಇವ ಕೋ ನಾಮ ದುರ್ವಿದಗ್ಧೇ ರಾಜ್ಞಿ ರಾಗಾಂತರಮಾದತ್ತೇ || ೬೮ || ೧೫೪ ||

ಅರ್ಥ : ನೀಲಿರಕ್ತೇ = ನೀಲಿಯನೂಡಿದ, ವಸ್ತ್ರೇ[11] = ಸೀರೆಯೊಳ್, ಇವ = ಎಂತಂತೆ, ದುರ್ವಿದಗ್ಧೇ = ಅಱಿಯದೆಯುಮಱಿವೆನೆಂಬ, ರಾಜ್ಞಿ = ಅರಸಿನಲ್ಲಿ, ರಾಗಾಂತರಂ = ಬೇಱೊಂದು ಬಣ್ಣಮಂ, ಕೋ ನಾಮ = ಆವಂ ತಾನೆ, ಆದತ್ತೇ = ಮಾಡುವಂ || ದುರ್ವಿದಗ್ಧನಂ ತಿಳಿಪಬಾರದೆಂಬುದಭಿಪ್ರಾಯಂ || ಸ್ವಾಮಿಗೆಂತಾದೊಡಂ ಹಿತಮಂ ಪೇಳಲ್ವೇಳ್ಕುಮೆಂಬು ದುತ್ತರಸೂತ್ರಂ :

ಯಥಾರ್ಥವಾದೋ ವಿದುಷಾಂ ಶ್ರೇಯಸ್ಕರೋ ಯದಿ ನ ರಾಜಾ ಗುಣಪ್ರದ್ವೇಷೀ || ೬೯ || ೧೫೫ ||

ಅರ್ಥ : ಯಥಾರ್ಥವಾದಃ = ತಕ್ಕುದಂ ನುಡಿವುದು, ವಿದುಷಾಂ = ಬುದ್ಧಿವಂತರ್ಗೆ, ಶ್ರೇಯಸ್ಕರಃ = ಒಳ್ಪಂ ಮಾಳ್ಪುದು, ರಾಜಾ = ಅರಸಂ, ಗುಣಪ್ರದ್ವೇಷೀ = ಗುಣಮುಳಿವಂ, ಯದಿ ನ = ಅಲ್ಲದಿರ್ದೊಡೆ || ತನಗೆ [12]ಹಿತಮಾಗದಂತರಸಂಗೆ ಹಿತಮಂ ಪೇಳ್ವುದು ತಾತ್ಪರ್ಯಂ || ಸ್ವಾಮಿಗೆ ಅಹಿತಮಂ ಪೇಳಲಾಗದೆಂಬುದುತ್ತರವಾಕ್ಯಂ :

ವರಮಾತ್ಮನೋ ಮರಣಂ ನಾಹಿತೋಪದೇಶಃ ಸ್ವಾಮಿಷು || ೭೦ || ೧೫೬ ||

ಅರ್ಥ : ಆತ್ಮನಃ = ತನಗೆ, ಮರಣಂ = ಸಾವು, ವರಂ = ಲೇಸು, ಸ್ವಾಮಿಷು = ಆಳ್ದನಲ್ಲಿ, ಅಹಿತೋಪದೇಶಃ = ಹಿತಮಲ್ಲದುದಂ ಪೇಳ್ವುದು, ನ = ಒಳ್ಳಿತ್ತಲ್ತು || ಆವ ಪ್ರಕಾರದಿಂ ಸ್ವಾಮಿಗಹಿತಮಂ ಪೇಳಲಾಗದೆಂಬದು ತಾತ್ಪರ್ಯ ||

(ಇಲ್ಲಿಗೆ ವಿದ್ಯಾವೃದ್ಧ ಸಮುದ್ದೇಶವು ಮುಗಿಯುತ್ತದೆ) [13]

ಈ ಸಮುದ್ದೇಶದ ವಾಕ್ಯಂಗಳು || ೭೦ || ಒಟ್ಟು || ೧೫೬ ||

—-

೬೮. ನೀಲಿಬಣ್ಣದ ವಸ್ತ್ರಕ್ಕೆ ಬೇರೆ ಬಣ್ಣವನ್ನು ಹಾಕುವುದಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೆ ತಿಳಿವಿಲ್ಲದೆಯೂ ತಿಳಿದಿರುವೆನೆನ್ನುವ ರಾಜನನ್ನು ಯಾರು ತಾನೇ ಬದಲಿಸಿಯಾರು ?

೬೯. ರಾಜನು ಗುಣದ್ವೇಷಿಯಾಗಿರದಿದ್ದಲ್ಲಿ ವಿದ್ವಾಂಸರು ಇದ್ದುದನ್ನು ಇದ್ದಂತೆ ಹೇಳುವುದು ಒಳ್ಳೆಯದು.

೭೦. ಅರಸನಿಗೆ ದುರಪದೇಶ ಮಾಡುವುದಕ್ಕಿಂತ ತಾನೇ ಸಾಯುವುದು ಲೇಸು.

—-

 

[1]ಮೈ., ಚೌ. ವರ್ಣಾಚಾರೇಷು.

[2]ಚೌ. ಧರ್ಮಸ್ಥಿತಿಂ.

[3]ಮೈ. ದಂಡಪ್ರಣಯನೇ ರಾಜ್ಞಿನ ಪ್ರಜಾಃ.

[4]ಮೈ., ಚೌ. ಈ ಮತ್ತು ಮುಂದಿನ ಎರಡು ವಾಕ್ಯಗಳು ಇಲ್ಲ, ಈ ವಾಕ್ಯಗಳಲ್ಲಿ ಸಾಂಖ್ಯ ವಿಚಾರವನ್ನು ಪ್ರಸ್ತಾಪಿಸಿ ಪ್ರಕೃತಿ, ಪುರುಷ ಅಂದರೆ ಸಾಂಖ್ಯ ತತ್ವಜ್ಞಾನದ ಅರಿವಿದ್ಧ ರಾಜನು ಸತ್ವಗುಣವನ್ನು ರೂಢಿಸಿಕೊಂಡು ರಜಸ್ ಮತ್ತು ತಮೋ ಗುಣಗಳಿಂದ ಭಾಧಿಸಲ್ಪಡುವುದಿಲ್ಲವೆಂದು, ವಿದ್ಯೆಯನ್ನು ಗಳಿಸುವಲ್ಲಿ, ವೃದ್ಧರನ್ನು ಸೇವಿಸುವಲ್ಲಿ ಯತ್ನಿಸುವನೆಂದು ಹೇಳಿದೆ. ಮೈ ಮತ್ತು ಚೌ. ಗಳಲ್ಲಿ ವಿವರಗಳಿಲ್ಲ.

[5]ಮೈ. ಅನಿಧೀಯಾನೋಪ್ಯಾನ್ವಿಕ್ಷಿಕೀಂ.

[6]ಮೈ. ಚೌ. ವ್ಯುತ್ಪತ್ತಿಂ.

[7]ಮೈ. ಚೌ ಗಳಲ್ಲಿ ಅನ್ಯೈವ …. …. …. . . ಬೇರೆ ವಾಕ್ಯವಾಗಿದೆ.

[8]ಮೈ., ಚೌ. ಈ ಸೂತ್ರವಿಲ್ಲ.

[9]ಮೈ. ಚೌ. ಅನ್ಯತ್ರ ಗುರುಜನೇಭ್ಯಃ

[10]ಮೈ. ಚೌ. ಮೃದ್ಭಾಜನೇಪು

[11]‘ವಸ್ತ್ರ’ ಪದಕ್ಕೆ ಸೀರೆ ಎಂಬ ಅರ್ಥ ಕೊಟ್ಟಿದ್ದನ್ನು ಗಮನಿಸಬೇಕು. ಸಂಸ್ಕೃತ ‘ಚೇರ’ವು (ತದ್ಭವ) ಸೀರೆಯಾಗಿ ವಸ್ತ್ರ, ಬಟ್ಟೆ ಎಂಬ ಅರ್ಥದಲ್ಲಿ ಉಪಯೋಗಿಸಲ್ಪಡುತ್ತಿದ್ದು ಕ್ರಮೇಣ ಹೆಂಗಸರು ಉಡುವ ಬಟ್ಟೆಗೆ ಸೀಮಿತವಾಯಿತು.

[12]ಅಹಿತ ಎಂದು ಓದಬೇಕು.

[13]ಇತರ ಪ್ರತಿಗಳಲ್ಲಿ ವಿದ್ಯಾವೃದ್ಧ ಸಮುದ್ದೇಶವು ಈ ವಾಕ್ಯದೊಂದಿಗೆ ಮುಗಿದು ಮುಂದಿನ ವಾಕ್ಯದಿಂದ ಅನ್ವೀಕ್ಷಿಕೀ ಸಮುದ್ದೇಶವು ಶುರುವಾಗುತ್ತದೆ. ಆದರೆ, ಈ ಹಸ್ತಪ್ರತಿಯಲ್ಲಿ ಈ ಮುಕ್ತಾಯ ಸೂಚಿತವಾಗಿಲ್ಲ, ಅಲ್ಲದೆ ಮುಂದಿನ ಸಮುದ್ದೇಶದಲ್ಲಿ ವಾಕ್ಯದ ಸಂಖ್ಯೆಯೂ ಮುಂದುವರೆದಿದೆ. ಓದುಗರ ಅನುಕೂಲಕ್ಕಾಗಿ, ಈ ಎರಡೂ ಸಮುದ್ದೇಶಗಳು ಬೇರ್ಪಡಿಸಲ್ಪಟ್ಟಿವೆ.