ಇದನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ಯೋsನುಕೂಲಪ್ರತಿಕೂಲಯೋರಿಂದ್ರಯಮಸ್ಥಾನಂ ಸ ರಾಜಾ || || ೮೭ ||

ಅರ್ಥ : ಅನುಕೂಲಪ್ರತಿಕೂಲಯೋಃ = ಬೆಸಕೆಯ್ವ ಬೆಸಗೈಯದರೊಳು, ಯಃ ಆವನೋರ್ವಂ, ಇಂದ್ರಯಮಸ್ಥಾನಂ = ಕ್ರಮದಿಂದಿಂದ್ರನುಮಂ ಯಮನುಮಂ ಪೋಲ್ಕುಂ, ಸಃ = ಆತಂ, ರಾಜಾ = ಅರಸಂ || ತನ್ನನೊಲ್ವರಂ ರಕ್ಷಿಸುವುದುಂ ತನ್ನನೊಲ್ಲದವರಂ ಕಿಡಿಸುವುದೆಂಬುದು ತಾತ್ಪರ್ಯಂ || ಇದನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ರಾಜ್ಞೋ ಹಿ ದುಷ್ಟನಿಗ್ರಹಶಿಷ್ಟಪ್ರತಿಪಾಲನಂ ಚ ಧರ್ಮೋ ನ ಪುನಃ
ಶಿರೋಮುಂಡನಂ ಜಟಾಧಾರಣಂ
[1] ವಾ || || ೮೮ ||

ಅರ್ಥ : ಆವುದೊಂದು ಕಾರಣದಿಂ ರಾಜ್ಞಃ = ಅರಸಂಗೆ; ದುಷ್ಟನಿಗ್ರಹಃ = ದುಷ್ಟರಂ ಕಿಡಿಪುದುಂ, ಶಿಷ್ಟಪ್ರತಿಪಾಲನಂ ಚ = ಶಿಷ್ಟರಂ ರಕ್ಷಿಪುದುಂ, ಧರ್ಮಃ = ನೆಗಳ್ತೆಯು, ಪುನಃ = ಮತ್ತೆ, ಶಿರೋಮುಂಡನಂ = ಮಂಡೆಬೋಳಿಪುದುಂ, ಜಟಾಧಾರಣಂ ವಾ = ಜಟೆಯುಂ ತಾಳ್ಪುದುಂ ಮೇಣ್, ನ = ನೆಗಳ್ತೆಯಲ್ಲದು || ರಾಜ್ಯಮಂ ಪೇಳ್ವುದುತ್ತರವಾಕ್ಯಂ :

ರಾಜ್ಞಃ ಪೃಥ್ವೀಲಾಭಪಾಲನೋಚಿತಂ[2] ಕರ್ಮ ರಾಜ್ಯಂ || || ೮೯ ||

ಅರ್ಥ : ರಾಜ್ಞಃ = ಅರಸಂಗೆ, ಪೃಥ್ವೀಲಾಭಪಾಲನೋಚಿತಂ = ನೆಲನಂ ಪಡೆವುದಕ್ಕೆ ಉಚಿತಮಪ್ಪ, ನೆಲನಂ ಕಾವುದಕ್ಕೆ ತಕ್ಕ, ಕರ್ಮ = ನೆಗಳ್ತೆ, ರಾಜ್ಯಂ = ರಾಜ್ಯಮೆಂಬುದು || ಮುನ್ನುಳ್ಳ ನೆಲನಂ ಕಾವುದು ಇದಿಲ್ಲದುದಂ ಪಡೆವುದುಂ ರಾಜ್ಯಮೆಂಬುದು ತಾತ್ಪರ್ಯಂ || ಪೃಥ್ವಿಯಂ ಪೇಳ್ದಪರ್ :

—-

೧. ತನಗೆ ಅನುಕೂಲವಾದವರ ವಿಷಯದಲ್ಲಿ ಇಂದ್ರನಂತೆಯೂ ಪ್ರತಿಕೂಲವಾದವರ ವಿಷಯದಲ್ಲಿ ಯಮನಂತೆಯೂ ಇರುವವನು ಅರಸನು.

೨. ದುಷ್ಟನಿಗ್ರಹವೂ ಶಿಷ್ಟಟರಕ್ಷಣೆಯೂ ಅರಸನ ಧರ್ಮ. ತಲೆಯನ್ನು ಬೋಳಿಸಿಕೊಳ್ಳುವುದೂ, ಜಟೆಯನ್ನು ಧರಿಸುವುದೂ ರಾಜಧರ್ಮವಲ್ಲ.

೩. ರಾಜನು ಭೂಮಿಯನ್ನು ಪಡೆಯುವದಕ್ಕೆ ಮತ್ತು ಅದನ್ನು ರಕ್ಷಿಸುವದಕ್ಕೆ ಮಾಡಬೇಕಾದ ಉಚಿತವಾದ ಕಾರ್ಯವು ರಾಜ್ಯ.

—-

ವರ್ಣಾಶ್ರಮವತೀ ಧಾನ್ಯಹಿರಣ್ಯಪಶುಕುಪ್ಯಕೃಷಿವಿಷ್ಟಿಪ್ರಧಾನಫಲಾ[3] ಚ ಪೃಥ್ವೀ || || ೯೦ ||

ಅರ್ಥ : ವರ್ಣಾಶ್ರಮವತೀ = ಬ್ರಾಹ್ಮಣಾದಿವರ್ಣಭೇಧಂಗಳನು, ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಭಿಕ್ಷುವೆಂಬ ನಾಲ್ಕಾಶ್ರಮವನುಳ್ಳುದು, ಧಾನ್ಯ = ನೆಲ್ಲು ಮೊದಲಾದ ಧಾನ್ಯಂಗಳು, ಹಿರಣ್ಯ = ಹಿರಣ್ಯಾದಿ ದ್ರವ್ಯಂಗಳು, ಪಶು = ಗೋ- ಮಹಿಷಾದಿ ಪಶುಗಳು, ಕುಪ್ಯ = ವಸ್ತ್ರ ಕಂಬಳಿ[4] ಮೊದಲಾದುವು, ಕೃಷಿ = ಆರಂಭ, ವಿಷ್ಟಿ = ಬಿಟ್ಟಿಯುಮೆಂಬಿವಂ, ಪ್ರಧಾನ = ಪ್ರಮುಖವಾದ, ಫಲಾ = ಫಲಮಾಗುಳ್ಳುದು, ಹಿ = ನೆಟ್ಟನೆ, ಪೃಥ್ವೀ = ಪೃಥ್ವಿಯೆಂಬುದು || ಇನಿತರೊಳಂ ವಿಕಲಮಾದುದು ಪೃಥ್ವಿಯಲ್ಲೆಂಬುದು ತಾತ್ಪರ್ಯಂ || ವರ್ಣಂಗಳಂ ಪೇಳ್ವುದುತ್ತರವಾಕ್ಯಂ :

ಬ್ರಾಹ್ಮಣಕ್ಷತ್ರಿಯ ವಿಶಃ[5]ಶೂದ್ರಾಶ್ಚ ವರ್ಣಾಃ || || ೯೧ ||

ಅರ್ಥ : ಬ್ರಾಹ್ಮಣ = ಬ್ರಾಹ್ಮಣರುಂ, ಕ್ಷತ್ರಿಯಂ = ಕ್ಷತ್ರಿಯರುಂ, ವಿಶಃ = ವೈಶ್ಯರುಂ, ಶೂದ್ರಾಶ್ವ = ಶೂದ್ರರುಮೆಂಬಿವರ್ಗಳು, ವರ್ಣಾಃ = ವರ್ಣಂಗಳು || ಆಶ್ರಮಮಂ ಪೇಳ್ವುದುತ್ತರವಾಕ್ಯಂ :

ಬ್ರಹ್ಮಚಾರೀ ಗೃಹಸ್ಥೋ[6]ವಾನಪ್ರಸ್ಥೋ ಯತಿರಿತ್ಯಾಶ್ರಮಾಃ || || ೯೨ ||

ಅರ್ಥ : ಬ್ರಹ್ಮಚಾರೀ = ಬ್ರಹ್ಮಚಾರಿಯುಂ, ಗೃಹಸ್ಥಃ = ಗೃಹಸ್ಥನುಂ, ವಾನಪ್ರಸ್ಥಃ = ವಾನಪ್ರಸ್ಥನುಂ, ಯತಿರಿತಿ = ಯತಿಯುಮೆಂದಿಂತು, ಆಶ್ರಮಾಃ = ಆಶ್ರಮಂಗಳು || ಉಪಕುರ್ವಾಣ ಬ್ರಹ್ಮಚಾರಿಯಂ ಪೇಳ್ವುದುತ್ತರವಾಕ್ಯಂ :

ಉಪಕುರ್ವಾಣಬ್ರಹ್ಮಚಾರೀ[7] ಯೋ ವೇದಮಧೀತ್ಯ ಸ್ನಾಯಾತ್ || || ೯೩ ||

ಅರ್ಥ : ಯಃ = ಆವನೋರ್ವಂ, ವೇದಂ = ವೇದಮಂ, ಅಧೀತ್ಯ = ಓದಿ, ಸ್ನಾಯಾತ್ = ಮೀ ವಂ (ವಿವಾಹವಹನು), ಸಃ = ಆತಂ, ಬ್ರಹ್ಮಚಾರೀ = ಬ್ರಹ್ಮಚಾರಿ, ಉಪಕುರ್ವಾಣಕಃ = ಉಪಕುರ್ವಾಣಕಮೆಂಬವಂ || ಸ್ನಾನಮಂ ಪೇಳ್ವುದುತ್ತರವಾಕ್ಯಂ :

—-

೪. ವರ್ಣಾಶ್ರಮಗಳೂಳ್ಳುದು ಧಾನ್ಯಗಳು ಹಿರಣ್ಯಾದಿ ದ್ರವ್ಯಗಳು, ಗೋ ಮಹಿಷಾದಿ ಪಶುಸಂಪತ್ತು. ವಸ್ತ್ರಾದಿಗಳು. ಕೃಷಿ. ವಿಷ್ಟಿ ಇವುಗಳು ಪ್ರಧಾನ ಫಲವುಳ್ಳುದು ಪೃಥ್ವಿ.

೫. ಬ್ರಾಹ್ಮಣ. ಕ್ಷತ್ರಿಯ ವೈಶ್ಯ, ಶೂದ್ರ ಇವು ವರ್ಣಗಳು.

೬. ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಯತಿ ಎಂಬಿವು ಆಶ್ರಮಗಳು.

೭. ಯಾವ ಬ್ರಹ್ಮಚಾರಿಯು ವೇದಾಭ್ಯಾಸದ ನಂತರ ವಿವಾಹಪೂರ್ವವಾದ ಸ್ನಾನವನ್ನಾಚರಿಸುವನೋ ಅವನು ಉಪಕುರ್ಮಾಣ ಬ್ರಹ್ಮಚಾರಿ.

—-

ಸ್ನಾನಂ ವಿವಾಹದೀಕ್ಷಾಭಿಷೇಕಃ || || ೯೪ ||

ಅರ್ಥ : ವಿವಾಹದೀಕ್ಷಾಭಿಷೇಕಃ = ವಿವಾಹಮಂಗಲದ ಮೀಹಂ, ಸ್ನಾನಂ = ಸ್ನಾನಮೆಂಬುದು || ಉಪನಯನವಾದಿಯಾಗಿ ವಿವಾಹಂಬರಂ ವೇದಾಧ್ಯಯನಮಂ ಮಾಡುತ್ತಿರ್ದ ಬ್ರಹ್ಮಚಾರಿಯುಪಕುರ್ವಾಣಕನೆಂಬುದು ತಾತ್ಪರ್ಯಂ || ನೈಷ್ಠಿಕ ಬ್ರಹ್ಮಚಾರಿಯಂ ಪೇಳ್ವುದುತ್ತರವಾಕ್ಯಂ :

ಸ ನೈಷ್ಠಿಕೋ ಬ್ರಹ್ಮಚಾರೀ ಯಸ್ಯ ಪ್ರಾಣಾಂತಿಕಮದಾರಕರ್ಮ[8]|| || ೯೫ ||

ಅರ್ಥ : ಯಸ್ಯ = ಆವಂಗೆ, ಪ್ರಾಣಾಂತಿಕಂ = ಪ್ರಾಣದ ಕಡೆವರಂ, ಅದಾರಕರ್ಮ = ಮದುವೆಯಿಲ್ಲದುದು, ಸಃ = ಆ, ಬ್ರಹ್ಮಚಾರೀ = ಬ್ರಹ್ಮಚಾರಿಯು, ನೈಷ್ಠಿಕಃ = ನೈಷ್ಠಿಕನೆಂಬಂ || ಎಲ್ಲಾ ಕಾಲಂ ಸ್ತ್ರೀನಿವೃತ್ತನುಂ ನೈಷ್ಠಿಕನೆಂಬುದು ತಾತ್ಪರ್ಯಂ || ವಿವಾಹಕ್ಕೆ ಫಲಮಂ ಪೇಳ್ವುದುತ್ತರವಾಕ್ಯಂದ್ವಯಂ ||

ಯ ಉತ್ಪನ್ನಃ ಪುನೀತೇ ವಂಶಂ ಸಃ ಪುತ್ರಃ || ೧೦ || ೯೬ ||

ಅರ್ಥ : ಯಃ = ಆವನೋರ್ವಂ, ಉತ್ಪನ್ನಃ = ಪುಟ್ಟಿ, ವಂಶಂ = ತನ್ನ ವಂಶಮಂ, ಪುನೀತೇ = ಪವಿತ್ರಂ ಮಾಳ್ಕುಂ, ಸಃ = ಆತಂ, ಪುತ್ರಃ = ಪುತ್ರನೆಂಬುದು ||

ಅಪುತ್ರಃ ಪುಮಾನ್ ಪಿತೃಣಾಮೃಣಭಾಜನಂ, ಅನಧ್ಯಯನೋ ಬ್ರಾಹ್ಮಣೋ ಋಷೀಣಾ[9]ಮಯಜಮಾನೋ ದೇವಾನಾಂ[10]|| ೧೧ || ೯೭ ||

ಅರ್ಥ : ಅಪುತ್ರಃ = ಮಕ್ಕಳಿಲ್ಲದ, ಪುಮಾನ್ = ಪುರುಷಂ, ಪಿತೃಣಾಂ = ಪಿತೃಗಳ್ಗೆ, ಋಣಭಾಜನಂ = ಋಣಕ್ಕೆ ಭಾಜನನಕ್ಕುಂ, ಅನಧ್ಯಯನಃ = ಸ್ವಾಧ್ಯಾಯಮಿಲ್ಲದ, ಬ್ರಾಹ್ಮಣಃ = ಬ್ರಾಹ್ಮಣಂ, ಋಷೀಣಾಂ = ಋಷಿಗಳ್ಗೆ ಋಣಭಾಜನನಕ್ಕುಂ, ಅಯಜಮಾನೋ = ದೇವಪಿತೃಪೂಜಾದಿ ಗಳಿಲ್ಲದಂ, ದೇವಾನಾಂ = ದೇವರ್ಕಳ್ಗೆ, ಋಣಭಾಜನಂ = ಋಣಕ್ಕೆ ಭಾಜನನಕ್ಕುಂ || ಕಲತ್ರದಿಂ ಪುತ್ರನಕ್ಕುಂ, ಆತಂ ದೇವತಾಪಿತೃಸಂತರ್ಪಣಾದಿಗಳಂ ಮಾಡಲವರ ಋಣಂ ಪಿಂಗೆ ವಂಶಂ ಪವಿತ್ರಂ ಸ್ವರ್ಗಾದಿಪುಣ್ಯಪಾತ್ರಮುಕ್ಕುಮೆಂಬುದು ತಾತ್ಪರ್ಯಂ || ನೈಷ್ಠಿಕಪುಣ್ಯೋಪಾರ್ಜನಶ್ರೇಯಮಂ ಪೇಳ್ವುದುತ್ತರವಾಕ್ಯಂ :

—-

೮. ವಿವಾಹಮಂಗಲದ ಮೀಹವು ಸ್ನಾನವು.

೯. ಜೀವಿತಾವಧಿ ಮದುವೆಯಾಗದವನು ನೈಷ್ಠಿಕ ಬ್ರಹ್ಮಚಾರಿ.

೧೦. ಹುಟ್ಟಿದ ಕುಲವನ್ನು ಪವಿತ್ರಗೊಳಿಸುವವನು ಪುತ್ರ.

೧೧. ಮಕ್ಕಳಿಲ್ಲದ ಪುರುಷನು. ಪಿತೃಗಳಿಗೆ ಯಜ್ಞ ಮಾಡದವನು ದೇವತೆಗಳಿಗೆ, ವೇದಾಧ್ಯಯನ ಮಾಡದವನು ಋಷಿಗಳಿಗೆ ಋಣಿಯಾಗಿರುತ್ತಾನೆ.

—-

ಆತ್ಮಾ ವೈ ಪುತ್ರೋ ನೈಷ್ಠಿಕಸ್ಯ[11]|| ೧೨ || ೯೮ ||

ಅರ್ಥ : ನೈಷ್ಠಿಕಸ್ಯ = ನೈಷ್ಠಿಕಂಗೆ, ಆತ್ಮಾ = ತಾನೇ, ವೈ = ನೆಟ್ಟನೆ, ಪುತ್ರಃ = ಮಗಂ ||

ಅಯಮಾತ್ಮಾ ಹ್ಯಾತ್ಮನಾತ್ಮನಮಾತ್ಮನಿ ಸಂದಧಾನಃ ಪರಾಂ ಪೂತತಾಂ ಪ್ರತಿಪದ್ಯತೇ[12]|| ೧೩ || ೯೯ ||

ಅರ್ಥ : ಹಿ = ಆವುದೊಂದು ಕಾರಣದಿಂ, ಅಯಮಾತ್ಮಾ = ಈ ನೈಷ್ಠಿಕಂ, ಆತ್ಮಾನಂ = ತನ್ನಂ, ಆತ್ಮನಾ = ತನ್ನಿಂ, ಆತ್ಮನಿ = ತನ್ನೊಳ್, ಸಂದಧಾನಃ = ತಾಳುತ್ತಿರ್ದನಾಗಿ, ಪರಾಂ = ಮಿಕ್ಕ, ಪೂತತಾಂ = ಪವಿತ್ರತೆಯಂ, ಪ್ರತಿಪದ್ಯತೇ = ಎಯ್ದುವಂ || ನೈಷ್ಠಿಕಂ ಧ್ಯಾನನಿಷ್ಠೆಯಿಂದಮೆ ಪವಿತ್ರಂ, ಪಿತೃಕಾರ್ಯಾದಿಗಳಂ ಮಾಡನೆಂಬುದು ತಾತ್ಪರ್ಯ || ಗೃಹಸ್ಥನಂ ಪೇಳ್ವುದುತ್ತರವಾಕ್ಯಂ :

ನಿತ್ಯನೈಮಿತ್ತಿಕಾನುಷ್ಠಾನಸ್ಥೋ ಗೃಹಸ್ಥಃ || ೧೪ || ೧೦೦ ||

ಅರ್ಥ : ನಿತ್ಯ = ನಿಚ್ಚಂ, ನೈಮಿತ್ತಿಕ = ವಿವಕ್ಷಿತ ಕಾಲಾದಿಗಳಂ ಕುಱಿತ್ತು ಮಾಳ್ಪ, ಅನುಷ್ಠಾನಸ್ಥಃ = ನೆಗಳ್ತೆಯಂ ಕೂಡಿದನಂ, ಗೃಹಸ್ಥಃ = ಗೃಹಸ್ಥನೆಂಬಂ ನಿತ್ಯಾನುಷ್ಟಾನಮಂ ಪೇಳ್ದಪರ್ ||

ಬ್ರಹ್ಮದೇವಪಿತೃತಿಥಿಭೂತಯಜ್ಞಾ ಹಿ ನಿತ್ಯಾನುಷ್ಠಾನಂ[13]|| ೧೫ || ೧೦೧ ||

ಅರ್ಥ : ಬ್ರಹ್ಮ = ಬ್ರಹ್ಮನುಂ, ದೇವ = ದೇವರುಂ, ಪಿತೃ = ಪಿತೃಗಳುಂ, ಅತಿಥಿ = ಅತಿಥಿಗಳುಂ, ಭೂತ = ಭೂತಜಲಾನಲಾದಿಗಳುಮೆಂಬಿವಱ, ಯಜ್ಞಾಃ = ಪೂಜೆಗಳು, ಹಿ = ನೆಟ್ಟನೆ, ನಿತ್ಯಾನುಷ್ಠಾನಂ = ನಿತ್ಯಾನುಷ್ಠಾನಮೆಂಬುದು || ನೈಮಿತ್ರಕಮಂ ಪೇಳ್ವುದುತ್ತರವಾಕ್ಯಂ :

—-

೧೨. ನೈಷ್ಠಿಕ ಬ್ರಹ್ಮಚಾರಿಯೂ ತನಗೆ ತಾನೇ ಪುತ್ರನು

೧೩. ಹೇಗೆಂದರೆ ಇವನು ತನ್ನನ್ನು ತಾನೇ ನೋಡಿಕೊಳ್ಳುತ್ತಾ ಹೆಚ್ಚಿನ ಪವಿತ್ರತೆಯನ್ನು ಸಂಪಾದಿಸಿಕೊಳ್ಳುತ್ತಾನೆ.

೧೪. ನಿತ್ಯ, ನೈಮಿತ್ತಿಕ ಕರ್ಮಗಳನ್ನು ಆಚರಿಸುವವನು ಗೃಹಸ್ಥ.

೧೫. ಬ್ರಹ್ಮಯಜ್ಞ ದೇವಯಜ್ಞ, ಪಿತೃಯಜ್ಞ, ಅತಿಥಿಯಜ್ಞ, ಭೂತಯಜ್ಞ ಇವುಗಳು ಪ್ರತಿದಿನ ಮಾಡಬೇಕಾದವುಗಳು.

—-

ದರ್ಶಪೌರ್ಣಮಾಸ್ಯಾದ್ಯಾಶ್ರಯಂ[14] ನೈಮಿತ್ರಕಂ || ೧೬ || ೧೦೨ ||

ಅರ್ಥ : ದರ್ಶಃ = ಅಮವಾಸೆಯಂ, ಪೌರ್ಣಮಾಸ್ಯಾದಿ = ಪೂರ್ಣಮೆ ಮೊದಲಾಗೊಡೆಯವಂ, ಆಶ್ರಯಂ = ಆಶ್ರಯಿಸಿದುದು, ನೈಮಿತ್ತಿಕಂ = ನೈಮಿತ್ತಿಕಾನುಷ್ಠಾನಮೆಂಬುದು || ನಿತ್ಯನೈಮಿತ್ತಿಕಾನುಷ್ಠಾನಂಗಳಂ ಗೃಹಸ್ಥಂ ಮಾಡಲ್ವೇಳ್ಕುಮೆಂಬುದು ತಾತ್ಪರ್ಯಂ || ವಾನಪ್ರಸ್ಥಮಂ ಪೇಳ್ದಪರ್ :

ಯಃ[15] ಖಲು ಯಥಾವಿಧಿ ಜಾನಪದಮಾಹಾರಂ ಸಂಸಾರವ್ಯವಹಾರಂ ಚ ಪರಿತ್ಯಜ್ಯ
ಸಕಲತ್ರೋ
sಕಲತ್ರೋ ವಾ ವನೇ ಪ್ರತಿಷ್ಠತೇ ಸ ವಾನಪ್ರಸ್ಥಃ || ೧೭ || || ೧೦೩ ||

ಅರ್ಥ : ಯಃ = ಆವನೋರ್ವಂ, ಖಲು = ನೆಟ್ಟನೆ, ಯಥಾವಿಧಿ = ಕ್ರಮವನತ್ರಿಕ್ರಮಿಸದೆಯುಂ, ಜಾನಪದಂ = ದೇಶಂಗಳೊಳಾದ, ಆಹಾರಂ = ಆಹಾರಮಂ, ಸಂಸಾರವ್ಯವಹಾರಂ ಚ = ಸಂಸಾರವ್ಯವಹಾರಮುಮಂ, ಪರಿತ್ಯಜ್ಯ = ತೊಱೆದು, ಸಕಲತ್ರಃ = ಸ್ತ್ರೀವೆರಸು, ಅಕಲತ್ರೋ ವಾ = ಸ್ತ್ರೀಯಿಲ್ಲದೆ ಮೇಣ್, ವನೇ = ಅಡವಿಯೊಳ್, ಪ್ರತಿಷ್ಠತೇ = ಇರ್ಪಂ, ಸಃ = ಆತಂ, ವಾನಪ್ರಸ್ಥಃ = ವಾನಪ್ರಸ್ಥಮೆಂಬೊಂ || ಲೋಕವ್ಯವಹಾರಸಂಸಾರವ್ಯವಹಾರದೂರನಾಗಿ ವಿರಾಗತೆಯಿಂದರಣ್ಯದೋಳಿರ್ಪನೆಂಬುದು ತಾತ್ಪರ್ಯಂ || ಯತಿಸ್ವರೂಪಮಂ ಪೇಳ್ದಪರು :

ಯೋ[16] ದೇಹಮಾತ್ರಾರಾಮಪರಿಗ್ರಹಃ[17] ಸಮ್ಯಗ್ವಿದ್ಯಾನೌಲಾಭೇನ
ತೃಷ್ಣಾಸರಿತ್ತರಣಾಯ ಯೋಗಾಯ ಯತತೇ ಸ ಯತಿಃ
|| ೧೮ || ೧೦೪ ||

ಅರ್ಥ : ಯಃ = ಆವನೋರ್ವಂ, ದೇಹಮಾತ್ರಾರಾಮಪರಿಗ್ರಹಃ = ಶರೀರದನಿತೇ ಪರಿಗ್ರಹಮನುಳ್ಳ, ಸಮ್ಯಗ್ವಿದ್ಯಾ = ಸಮ್ಯಗ್‌ಜ್ಞಾನಮೆಂಬ, ನೌ = ಭೈತ್ರದ, ಲಾಭೇನ = ಪದಪಿಂ, ತ್ವಷ್ಣಾಸರಿತ್ತರಣಾಯ = ಕಾಂಕ್ಷೆ ಎಂಬ ತೊಱೆಯಂ ದಾಂಟುವುದುಂ ಮಾಳ್ಪ, ಯೋಗಾಯ = ಧ್ಯಾನಕಾರಣಮಾಗಿ, ಯತತೇ = ನೆಗಳ್ವಂ, ಸಃ = ಆತಂ, ಯತಿಃ = ಯತಿಯೆಂಬೊಂ || ಚರಮಪುರುಷಾರ್ಥಾರ್ಥಿ ಯತಿ ಯೆಂಬುದು ತಾತ್ಪರ್ಯಂ || ರಾಜ್ಯಕ್ಕೆ ಉತ್ಪತ್ತಿಕಾರಣಂ ಪೇಳ್ವುದುತ್ತರವಾಕ್ಯಂ :

—-

೧೬. ಅಮಾವಾಸ್ಯೆ ಹುಣ್ಣಿಮೆ ಇತ್ಯಾದಿ ದಿನಗಳಂದು ಮಾಡುವ ಅನುಷ್ಠಾನವು ನೈಮಿತ್ತಿಕವು.

೧೭. ರೂಢಿಗತವಾಗಿ ಊರುಗಳಲ್ಲಿ ಲಭಿಸುವ ಆಹಾರವನ್ನು, ಸಂಸಾರವ್ಯವಹಾರವನ್ನು ಪರಿತ್ಯಜಿಸಿ. ಪತ್ನೀ ಸಮೇತನಾಗಿ ಅಥವಾ ಪತ್ನಿಯಿಲ್ಲದೆ ಅಡವಿಯಲ್ಲಿ ವಾಸಿಸುವವನು ವಾನಪ್ರಸ್ಥನು.

೧೮. ದೇಹಕ್ಕೆ ಅವಶ್ಯಕವಾದಷ್ಟು ಮಾತ್ರ ಆರಾಮನ್ನು ಪಡೆದು, ಒಬ್ಬನೇ ಒಂಟಿಯಾಗಿ ಸಮ್ಯಗ್‌ಜ್ಞಾನವೆಂಬ ನೌಕೆಯನ್ನು ಪಡೆದು ಆಶೆ ಎಂಬ ನದಿಯನ್ನು ದಾಟುವ ಯೋಗಸಾಧನೆಯಲ್ಲಿ ತೊಡಗಿರುವವನೇ ಯತಿ.

—-

ರಾಜ್ಯಸ್ಯ[18] ಮೂಲಂ ಕ್ರಮೋ ವಿಕ್ರಮಶ್ಚ || ೧೯ || ೧೦೫ ||

ಅರ್ಥ : ರಾಜ್ಯಸ್ಯ = ರಾಜ್ಯಕ್ಕೆ, ಮೂಲಂ = ಕಾರಣಂ, ಕ್ರಮೋ ವಿಕ್ರಮಶ್ಚ = ಅನ್ವಯಮುಂ, ಶೌರ್ಯಮುಂ || ಕ್ರಮಕ್ಕೆ ಕಾರಣಮಂ ಪೇಳ್ವುದುತ್ತರವಾಕ್ಯಂ :

ಆಚಾರಸಂಪತ್ತಿನಃ ಕ್ರಮಸಂಪತ್ತಿಂ ಕರೋತಿ || ೨೦ || ೧೦೬ ||

ಅರ್ಥ ಆಚಾರಸಂಪತ್ತಿಃ = ನೆಗಳ್ತೆಯ ಪೆರ್ಚುಗೆ, ಕ್ರಮಸಂಪತ್ತಿಂ ವಂಶದ ಪೆರ್ಚಂ, ಕರೋತಿ = ಮಾಳ್ಕುಂ || ಸಚ್ಚರಿತ್ರದಿಂದನ್ವಯಶುದ್ಧಿಯಕ್ಕುಮೆಂಬುದು ತಾತ್ಪರ್ಯಂ || ವಿಕ್ರಮಕ್ಕೆ ದೂಷಣಮಂ ಪೇಳ್ವುದುತ್ತರವಾಕ್ಯಂ :

ಅನುತ್ಸೇಕಃ ಖಲು ವಿಕ್ರಮಸ್ಯಾಲಂಕಾರಃ || ೨೧ || ೧೦೭ ||

ಅರ್ಥ : ಅನುತ್ಸೇಕಃ = ತನ್ನ ತಾಂ ಪೊಗಳದಿರ್ಪ್ಪುದೆ, ಖಲು = ನಿಕ್ಕುವದಿಂ, ವಿಕ್ರಮಸ್ಯ = ಪರಾಕ್ರಮಕ್ಕೆ, ಅಲಂಕಾರಃ = ತೊಡವು || ತನ್ನಂ ತಾಂ ಪೊಗಳ್ದಂಗೆ ಪೆಂಪಳಿಗು[19]ಮೆಂಬುದು ತಾತ್ಪರ್ಯಂ || ಕ್ಷತ್ರಿಯಂಗೆ ಕ್ರಮವಿಕ್ರಮಮಿಲ್ಲದಿರ್ದೊಡೆ ದೋಷಮಂ ಪೇಳ್ವುದುತ್ತರವಾಕ್ಯ :

ಕ್ರಮವಿಕ್ರಮಯೋರನ್ಯತರಪರಿಗ್ರಹೋ[20] ರಾಜ್ಯಸ್ಯ ದುಃಕರಃ ಪರಿಣಾಮಃ || ೨೨ || ೧೦೮ ||

ಅರ್ಥ : ಕ್ರಮವಿಕ್ರಮಯೋಃ = ಕ್ರಮವಿಕ್ರಮಂಗಳೊಳಗೆ, ಅನ್ಯತರಪರಿಗ್ರಹಃ = ಆವುದಾನುಮೊಂದಂ ಕೈಕೊಂಡೊಡೆ, ರಾಜ್ಯಸ್ಥ = ರಾಜ್ಯಕ್ಕೆ, ದುಃಕರಃ = ಅರಿದು, ಪರಿಣಾಮಃ = ನೆಗಳ್ತೆ || ವಂಶ, ಪರಾಕ್ರಮಂಗಳಿಂದಮೆ ರಾಜ್ಯಂ ಪೆರ್ಚುಗುಮೆಂಬುದು ತಾತ್ಪರ್ಯ || ಕ್ರಮವಿಕ್ರಮಂಗಳಿಂತಪ್ಪನಲ್ಲಿಯಪ್ಪುಮೆಂಬುದಂ ಪೇಳ್ವುದುತ್ತರವಾಕ್ಯಂ :

—-

೧೯. ವಂಶಪರಂಪರೆ ಮತ್ತು ಶೌರ್ಯ ಇವು ರಾಜ್ಯಕ್ಕೆ ಆಧಾರಗಳು.

೨೦. ಉತ್ತಮ ಆಚರಣೆಯು ವಂಶದ ಗೌರವವನ್ನು ಹೆಚ್ಚಿಸುತ್ತದೆ.

೨೧. ಗರ್ವವಿಲ್ಲದಿರುವುದೇ ಪರಾಕ್ರಮಕ್ಕೆ ಭೂಷಣ.

೨೨. ಕ್ರಮ.(ವಂಶ) ಮತ್ತು ವಿಕ್ರಮಗಳಲ್ಲಿ ಯಾವುದಾದರೂ ಒಂದನ್ನೇ ಅವಲಂಬಿಸಿದರೆ ರಾಜ್ಯಕ್ಕೆ ಕೇಡುಂಟಾಗುತ್ತದೆ.

—-

ಕ್ರಮವಿಕ್ರಮಯೋರಧಿಷ್ಠಾನಂ ಬುದ್ಧಿ ಮಾನಾಹಾರ್ಯಬುದ್ಧಿರ್ವಾ || ೨೩ || ೧೦೯ ||

ಅರ್ಥ : ಕ್ರಮವಿಕ್ರಮಯೋ = ಕ್ರಮವಿಕ್ರಮಂಗಳ್ಗೆ, ಅಧಿಷ್ಠಾನಂ = ಎಡೆಯುಂ, ಬುದ್ಧಿಮಾನ್‌ : = ಸಹಜಬುದ್ಧಿಯನುಳ್ಳಂ, ಆಹಾರ್ಯಬುದ್ಧಿರ್ವಾ = ಪೆಱರ ಶಿಕ್ಷೆಯಿಂದಾದ ಬುದ್ಧಿಯನ್ನುಳ್ಳಂ ಮೇಣ್ || ಬುದ್ಧಿಯಲ್ಲದಂಗೆ ಕ್ರಮವಿಕ್ರಮಂಗಳ್ ನಿರರ್ಥಕಮೆಂಬುದು ತಾತ್ಪರ್ಯಂ || ಸಹಜಬುದ್ಧಿಯಂ ಪೇಳ್ವುದುತ್ತರವಾಕ್ಯಂ :

ಯೋ ವಿದ್ಯಾವಿನೀತಮತಿಃ ಸ ಬುದ್ಧಿಮಾನ್ || ೨೪ || ೧೧೦ ||

ಅರ್ಥ : ಯಃ = ಅವನೋರ್ವಂ ವಿದ್ಯಾವಿನೀತಮತಿಃ = ವಿದ್ಯಂಗಳಿಂದಱಿತಮನುಳ್ಳಂ, ಸಃ = ಆತಂ, ಬುದ್ಧಿಮಾನ್ = ಬುದ್ಧಿವಂತರನೆಂಬೊಂ = ಬುದ್ಧಿಯಿಲ್ಲದ ವಿಕ್ರಮಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ :

ಸಿಂಹಸ್ಯೇವ ಕೇವಲಂ ಪೌರುಷಾವಲಂಬಿನೋ ರಾಜ್ಯೋ[21] ನ ಚಿರಂ ಕುಶಲಂ || ೨೫ || ೧೧೧ ||

ಅರ್ಥ : ಸಿಂಹಸ್ಯೇವ = ಸಿಂಹದಂತೆ, ಕೇವಲಂ = ಬಱಿದೆ, ಪೌರುಷಾವಲಂಬಿನಃ = ಗಂಡಮಾತಂ ಕೊಂಡಾಡುವ, ರಾಜ್ಞಃ = ಅರಸಂಗೆ, ಕುಶಲಂ = ಒಳ್ಪು, ಚಿರಂ = ಪಲಕಾಲಂ, ನ = ಇಲ್ಲವು || ಈಯರ್ಥಮನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ಅಶಸ್ತ್ರಃ ಶೂರ ಇವಾಶಾಸ್ತ್ರಜ್ಞಃ ಪ್ರಜ್ಞಾವಾನಪಿ ಭವತಿ ಸರ್ವೇಷಾಂ ಗೋಚರಃ[22]|| ೨೬ || ೧೧೨ ||

ಅರ್ಥ : ಅಶಸ್ತ್ರಃ = ಕೈದುವಿಲ್ಲದ, ಶೂರ ಇವ = ಕಲಿಯಂತೆ, ಅಶಾಸ್ತ್ರಜ್ಞಃ = ಶಾಸ್ತ್ರಮನರಿಯದಂ, ಪ್ರಜ್ಞಾವಾನಪಿ = ಪ್ರಜ್ಞೆಯುಳ್ಳಾತನಾದೊಡಂ, ಸರ್ವೇಷಾಂ = ಎಲ್ಲರ್ಗಂ, ಗೋಚರಃ = ಎಡೆ, ಭವತಿ = ಅಕ್ಕುಂ || ಈ ಅರ್ಥಮನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

—-

೨೩. ಕ್ರಮ, ವಿಕ್ರಮಗಳಿರುವವನು ಸ್ವಯಂ ಸಹಜವಾಗಿ ಬುದ್ಧಿವಂತನಾಗಿರಬಹುದು ಇಲ್ಲವೇ ಪ್ರಯತ್ನಪೂರ್ವಕವಾಗಿ ಸಂಪಾದಿಸಿಕೊಂಡ ಬುದ್ಧಿಯುಳ್ಳವನಾಗಿರಬಹುದು.

೨೪. ವಿದ್ಯೆಯಿಂದ ವಿನೀತನಾದವನೇ ಬುದ್ಧಿವಂತನು.

೨೫. ಸಿಂಹದಂತೆ ಕೇವಲ ಪೌರುಷವನ್ನೆ ಅವಲಂಬಿಸಿದ ಅರಸನಿಗೆ ಚಿರಕಾಲ ಕ್ಷೇಮವಿರದು.

೨೬. ಆಯುಧವಿಲ್ಲದ ಶೂರನಂತೆ, ಶಾಸ್ತ್ರಜ್ಞಾನವಿಲ್ಲದವನು ಪ್ರಜ್ಞಾವಂತನಾದರೂ ಎಲ್ಲರ ಕಣ್ಣಿಗೂ ಎದ್ದು ಕಾಣುತ್ತಾನೆ.

—-

 

[1]ಮೈ. ಜಟಾಧಾರಣಾದಕಂ. ವಾ.

ಚೌ. ದಲ್ಲಿ ನ ಪುನಃ ಶಿರೋಮಂಡನಂ ಜಟಾಧಾರಣಾದಿಕಂ ವಾ ಎಂಬುದು ಬೇರೆ ವಾಕ್ಯವಾಗಿದೆ.

[2]ಮೈ., ಚೌ. ಪೃಥಿವೀಪರಿಪಾಲನೋಚಿತಂ.

[3]ಮೈ. ಕುಪ್ಯವಿ(ಷ್ಟಿ) ಶಿಷ್ಟಫಲದಾ. ಚೌ. ಕುಪ್ಯವೃಷ್ಟಿಪ್ರಧಾನಫಲಾ.

[4]ಕುಪ್ಯ ಎಂದರೆ ಖನಿಜಗಳು ಎಂಬ ಅರ್ಥವಿದೆ. ಟೀಕಾಕಾರನು ಅದಕ್ಕೆ ವಸ್ತ್ರ, ಕಂಬಳಿ ಮೊದಲಾದವು ಎಂದು ಅರ್ಥೈಸಿದ್ದಾನೆ.

[5]ಚೌ. ವೈಶ್ಯ.

[6]ಚೌ. ಗೃಹೀ.

[7]ಮೈ., ಚೌ. ಸಃ ಉಪಕುರ್ವಾಣೋ ಬ್ರಹ್ಮಚಾರೀ.

[8]ಚೌ. ದಲ್ಲಿ ಕೃತುಪ್ರದ ಎಂಬ ಬ್ರಹ್ಮಚಾರಿಯನ್ನು ವರ್ಣಿಸುವ ಹೆಚ್ಚಿನ ವಾಕ್ಯವಿದೆ: ಕೃತೋದ್ವಾಹಃ ಕೃ(ಋ) ತುಪ್ರದಾತಾ ಕೃತುಪ್ರದಃ.

[9]ಮೈ. ದಲ್ಲಿ ಋಷೀಣಾಂ ಎಂಬ ಪದವಿಲ್ಲ. ಅಹಂತಕರೋ ಮನುಷ್ಯಾಣಾಂ ಎಂಬುದು ಸೇರಿದೆ.

[10]ಚೌ. ದಲ್ಲಿ ಈ ವಾಕ್ಯವು ಮೂರಾಗಿ ವಿಭಜಿಸಲ್ಪಟ್ಟಿದೆ.

[11]ಮೈ ದಲ್ಲಿ ಈ ವಾಕ್ಯವು ಮತ್ತು ಮುಂದಿನದು ಕೂಡಿ ಒಂದೇ ವಾಕ್ಯವಾಗಿದೆ.

[12]ಚೌ. ಅಪದ್ಯತೇ.

[13]ಮೈ. ದಲ್ಲಿ ವಾಕ್ಯವು ಮತ್ತು ಮುಂದಿನದು ಕೂಡಿ ಒಂದೇ ಆಗಿದೆ.

[14]ಮೈ. ದಲ್ಲಿ ಆಶ್ರಯಂ ಎಂಬ ಪದವಿಲ್ಲ.

[15]ಮೈ. ಚೌ. ವೈವಾಃಇಕಃ ಶಾಲೀನಃ ಜಾಯಾವನರೋsಘೋರ ಇತಿ ಗೃಹಸ್ಥಾ ಎಂಬ ಹೆಚ್ಚಿನ ಸೂತ್ರವಿದೆ. ಮೈ. ದಲ್ಲಿ ಇದನ್ನು ಕಂಸಗಳಲ್ಲಿ ತೋರಿಸಿ ಪ್ರಕ್ಷಿಪ್ತವಿರಬೇಕೆಂದು ಸೂಚಿಸಲಾಗಿದೆ.

[16]ಮೈ. ಇದಕ್ಕೆ ವಾಲಖಿಲ್ಯಃ ಔದುಂಬರಃ ವೈಶ್ವಾನಿರಃ ಸದ್ಯಃ ಪ್ರಕ್ಷಲ್ಯಕಶ್ಚೇತಿ ವಾನಪ್ರಸ್ಥಾಃ ಎಂಬ ಹೆಚ್ಚಿನ ವಾಕ್ಯವಿದ್ದು ಕಂಸಗಳಲ್ಲಿ ತೋರಿಸಲ್ಪಟ್ಟಿದೆ.

[17]ಮೈ. ‘ದೇಹಮಾತ್ರಾರಮಪರಿಗ್ರಹಃ’ ಎಂಬುದಿಲ್ಲ.

[18]ಮೈ. ಇದಕ್ಕೆ ಮೊದಲು ‘ಕುಟೀರಕ ಬಹ್ವೋದಕ ಹಂಸ ಪರಮಹಂಸಾಃ ಯತಹಃ’ ಎಂಬ ಹೆಚ್ಚಿನ ವಾಕ್ಯವಿದ್ದು, ಅದು ಕಂಸಗಳಲ್ಲಿ ತೋರಿಸಲ್ಪಟ್ಟಿದೆ.

[19]ಪೆಂಪುಳಿಗುಂ ಎಂದಿರಬೇಕು.

[20]ಮೈ., ಚೌ. ಪರಿಗ್ರಹೇಣ.

[21]ಮೈ. ಚೌ. ರಾಜೋ ಎಂಬ ಪದವಿಲ್ಲ.

[22]ಮೈ., ಚೌ. ವಿದ್ವಿಷಾಂ ವಶಃ.