ಆನ್ವೀಕ್ಷಿಕಿಯಲ್ಲಿ ಯೋಗಮಂ ಪೇಳ್ದಪರ್ :

ಆತ್ಮಮನೋಮರುತ್ತತ್ತ್ವಸಮ[1]ಸಮಾಯೋಗಃ || ೧ || ೧೫೭ ||

ಅರ್ಥ : ಆತ್ಮ ಮನೋಮರುತ್ತತ್ತ್ವ = ಆತ್ಮನುಂ, ಮನಮುಂ, ವಾಯುಮೆಂಬ ತತ್ವಂಗಳ, ಸಮಸಮಾಯೋಗಃ = ಸಮಸಮಾಯೋಗಲಕ್ಷಣಮಂ, ಸಮಾನಪ್ಪ ಮಾಟಮನೆ ಲಕ್ಷಣಮಾಗುಳ್ಳ, ಆತ್ಮಂ = ಆಧ್ಯಾತ್ಮ ಜ್ಞಾನಂ, ಯೋಗಃ = ಯೋಗಮೆಂಬುದು || ಪಂಚವಾಯುಗಳಡಗಲು ಮನಮಾತ್ಮ ಸ್ವರೂಪದೊಳ್ ಕೂಡಲು ಯೋಗಮೆಂಬುದಭಿಪ್ರಾಯಂ || ಬ್ರಹ್ಮಾದ್ವೈತದ ಯೋಗಲಕ್ಷಣಮಂ ಪೇಳ್ವುದುತ್ತರಸೂತ್ರಂ :

ಅಧ್ಯಾತ್ಮ ಜ್ಞೋ ಹಿ ರಾಜಾ ಸಹಜಶಾರೀರಮಾನಸಾಗಂತುಭಿರ್ದೋಷೈರ್ನ ಬಾಧ್ಯತೇ || || ೧೫೮ ||

ಅರ್ಥ : ಅಧ್ಯಾತ್ಮಜ್ಞಃ = ಅಧ್ಯಾತ್ಮ ಯೋಗಮಂ ಬಲ್ಲ, ರಾಜಾ = ಅರಸು, ಸಹಜ = ಸ್ವಭಾವದಿಂದಾದ (ಹಸಿವು ನೀರಡಿಕೆ ವಾತಪಿತ್ತಾದಿ) ಶಾರೀರ = ಶರೀರದೊಳಾದ, ಮಾನಸ = ಮನದೊಳಾದ, ಆಗಂತುಭಿಃ = ತೊಟ್ಟನೆಯಾದುವುಮೆಂದಿತು, ದೋಷ್ಠೆಃ = ದೋಷಂಗಳಿಂ, ಹಿ = ನಿಶ್ಚಯದಿಂ, ನ ಬಾಧ್ಯತೇ = ಬಾಧಿಸಲ್ಪಡದುಂ || ಆತ್ಮಸ್ವರೂಪಮಂ ಬಲ್ಲನಂ ದುಃಖಂಗಳು ಬಾಧಿಸಲಾಱವೆಂಬುದು ತಾತ್ಪರ್ಯಂ || ಆತ್ಮನ ಸಾಮಗ್ರಿಯಂ ಪೇಳ್ವುದುತ್ತರಸೂತ್ರಂ :

ಮನ ಇಂದ್ರಿಯಾಣಿ ವಿಷಯಾಃ ಜ್ಞಾನಾದಿಭೋಗಾಯತನಮಿತ್ಯಾತ್ಮಾ ರಾಮಃ || || ೧೫೯ ||

ಅರ್ಥಃ ಮನ-ಇಂದ್ರಿಯಾಣಿ = ಮನಸ್ಸು ಇಂದ್ರಿಯಂಗಳೂ, ವಿಷಯಾಃ = ವಿಷಯಂಗಳೂ, ಜ್ಞಾನಾದಿಭೋಗಾಯತನಂ = ಜ್ಞಾನಾದಿಗಳೂ ಭೋಗಂಗಳ ವಿಸ್ತೀರ್ಣವೂ ಎಂದು, ಆತ್ಮಾರಾಮಃ = ಆತ್ಮನಿಗೆ ಪರಿಗ್ರಹಂಗಳು || ಆತ್ಮನ ಸ್ವರೂಪಮಂ ಪೇಳ್ವುದುತ್ತರಸೂತ್ರಂ :

—-

೧. ಆತ್ಮ, ಮನಸ್ಸು, ವಾಯು ಎಂಬ ತತ್ವಗಳ ಸಮಾನವಾದ ಸೇರುವಿಕೆಯೇ ಲಕ್ಷಣವಾಗಿ ಉಳ್ಳ ಅಧ್ಯಾತ್ಮ ಜ್ಞಾನವು ಯೋಗ.

೨. ಆಧ್ಯಾತ್ಮ ಯೋಗವನ್ನು ಬಲ್ಲ ರಾಜನು ಆಗಾಗ್ಗೆ ಬರಬಹುದಾದ ಸಹಜವಾದ ಶಾರೀರಿಕ, ಮಾನಸಿಕ, ದೋಷಗಳಿಂದ ಬಾಧಿತನಾಗುವುದಿಲ್ಲ.

೩. ಇಂದ್ರಿಯಗಳು, ಮನಸ್ಸು, ಭೋಗ್ಯವಸ್ತುಗಳು, ಭೋಗಗಳಿಗೆ ಸ್ಥಾನವಾದ ಶರೀರ ಇವು ಆತ್ಮವು ಸುಖಿಸುವುದಕ್ಕಿರುವ ಆಶ್ರಯಗಳು.

—-

ಯತ್ರಾಹಮಿತ್ಯನುಪಚರಿತಃ ಪ್ರತ್ಯಯಃ ಸ ಆತ್ಮಾ || || ೧೬೦ ||

ಅರ್ಥ : ಯತ್ರ = ಆವುದೊಂದೆಡೆಯೊಳು, ಅಹಮಿತಿ = ಆನೆಂಬ, ಅನುಪಚರಿತಃ = ಉಪಚಾರಮಿಲ್ಲದ, ಪ್ರತ್ಯಯಃ = ಅಱಿವುಮಕ್ಕುಂ, ಸಃ = ಆತಂ, ಆತ್ಮಾ = ಆತ್ಮನೆಂಬೊಂ || ಸ್ವಸಂವೇದನ ಪ್ರತ್ಯಕ್ಷಗಮ್ಯನಾತ್ಮನೆಂಬುದು ತಾತ್ಪರ್ಯಂ || ಈ ಆತ್ಮಂಗೆ ಪರಲೋಕಮಿಲ್ಲದಿರ್ದೊಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ಆತ್ಮನಃ[2]ಪ್ರೇತ್ಯಭಾವೇ ವಿದುಷಾಂ ವಿಫಲಂ ಖಲು ಸರ್ವಮನುಷ್ಠಾನಂ || || ೧೬೧ ||

ಅರ್ಥ : ಆತ್ಮನಃ = ಜೀವಕ್ಕೆ, ಪ್ರೇತ್ಯಭಾವೇ = ಮಱುಭವಂ, ಇಲ್ಲದಿರ್ದೊಡೆ, ವಿದುಷಾಂ = ಪಂಡಿತರ್ಕಳ, ಸರ್ವಂ = ಎಲ್ಲಾ, ಅನುಷ್ಠಾನಂ = ನೆಗಳ್ತೆ, ವಿಫಲಂ = ನಿಷ್ಫಲಂ, ಖಲು = ನಿಶ್ಚಯದಿಂ || ಮತಿವಂತರ್ಫಲಮಿಲ್ಲದೊಡೆ ನೆಗಳರುಮದಱಿಂದಾತ್ಮಂಗೆ ಪರತ್ರೆಯೆಂಬುದು ತಾತ್ಪರ್ಯಂ || ಮನಸ್ಸಂ ಪೇಳ್ವುದುತ್ತರಸೂತ್ರಂ :

ಯತಃ ಸ್ಮೃತಿಃಪ್ರತ್ಯವಮರ್ಶನಮೂಹಾಪೋಹನಂ ಶಿಕ್ಷಾಲಾಪಕ್ರಿಯಾ ಗ್ರಹಣಂ ಚ ಭವತಿ ತನ್ಮನಃ || || ೧೬೨ ||

ಅರ್ಥ : ಯತಃ = ಆವುದೊಂದಱತ್ತಣಿಂ, ಸ್ಮೃತಿಃ = ನೆನವಿಯಂ, ಪ್ರತ್ಯವಮರ್ಶನಂ = ಆತನೀತಮೆಂಬುದು ಮೊದಲಾಗೊಡೆಯ ಪ್ರತ್ಯಭಿಜ್ಞಾನಮುಂ, ಉಹಾಪೋಹನಂ = ಸಾಮಾನ್ಯವಿಶೇಷಜ್ಞಾನಮುಂ, ಶಿಕ್ಷಾ = ಚರ್ಮಪುತ್ರಾದಿಗಳಿಂ ವಧವಿಧಾನಮುಂ[3] ಕಲಿಸುವುದು ಮೊದಲಾಗೊಡೆಯ ಶಿಕ್ಷೆಯುಂ, ಅಲಾಪ = ಶ್ಲೋಕಮನೋದುವುದು ಮೊದಲಾಗೊಡೆಯ ಮಾತುಗಳಂ ಕಲಿಸುವಾಳಾಪಮುಂ, ಕ್ರಿಯಾ = ಕರಚರಣಸಂಭಾವಾದಿ ಕ್ರಿಯೆಯುಮೆಂಬಿವಱ, ಗ್ರಹಣಂ ಚ = ಕೈಕೊಳುಹವುಂ, ಭವತಿ = ಅಕ್ಕುಂ, ತತ್ = ಅದು, ಮನಃ = ಮನಮೆಂಬುದು || ಇಂದ್ರಿಯಂಗಳಂ ಪೇಳ್ವುದುತ್ತರಸೂತ್ರಂ :

ಆತ್ಮನೋ ವಿಷಯಾನುಭವನದ್ವಾರಾಣೀಂದ್ರಿಯಾಣಿ || || ೧೬೩ ||

ಅರ್ಥ : ಆತ್ಮನಃ = ಆತ್ಮನ, ವಿಷಯಾನುಭವನದ್ವಾರಾಣಿ = ವಿಷಯಂಗಳನನುಭವಿಸುವ ಬಟ್ಟೆಗಳು, ಇಂದ್ರಿಯಾಣಿ = ಇಂದ್ರಿಯಂಗಳೆಂಬುದು || ವಿಷಯಂಗಳಂ ಪೇಳ್ವಪರ್

—-

೪. ಯಾವ ವಿಷಯದಲ್ಲಿ ನಾನು ಎನ್ನುವ ಜ್ಞಾನ ಉಂಟಾಗುವುದೋ ಆ ಜ್ಞಾನವೇ ಆತ್ಮ.

೫. ಜೀವಕ್ಕೆ ಪುನರ್ಜನ್ಮವು ಇಲ್ಲದಿರುವುದಾದರೆ ಪಂಡಿತರ ಎಲ್ಲ ಅನುಷ್ಠಾನಗಳೂ ವ್ಯರ್ಥ.

೬. (ಹಿಂದೆ ಅನುಭವಿಸಿದ್ದನ್ನು) ಸ್ಮರಿಸುವುದು. (ಜನರನ್ನು, ವಸ್ತುಗಳನ್ನು) ಗುರುತಿಸುವುದು ಗ್ರಹಿಸುವುದು ಯಾವುದರಿಂದ ಸಾಧ್ಯವೋ ಅದು ಮನಸ್ಸು.

೭. ಆತ್ಮನು ವಿಷಯಗಳನ್ನು ಅನುಭವಿಸುವ ದ್ವಾರಗಳು ಇಂದ್ರಿಯಗಳು.

—-

ಸ್ಪರ್ಶರಸಗಂಧರೂಪಶಬ್ದಾ ವಿಷಯಾಃ || || ೧೬೪ ||

ಅರ್ಥ : ಸ್ಪರ್ಶ = ತೀಟಮುಂ, ರಸ = ಸವಿಯುಂ, ಗಂಧ = ಗಂಧಮುಂ, ರೂಪ = ರೂಪಮುಂ, ಶಬ್ದಾ = ಧ್ವನಿಯುಮೆಂಬಿವು, ವಿಷಯಾಃ = ಇಂದ್ರಿಯಂಗಳ ಪೊಲಂಗಳು || ಜ್ಞಾನದ ಸ್ವರೂಪಮಂ ಪೇಳ್ವುದುತ್ತರಸೂತ್ರಂ :

ಸಮಾಧೀಂದ್ರಿಯದ್ವಾರೇಣ[4] ವಿಪ್ರಕೃಷ್ಟಸನ್ನಿಕೃಷ್ಟಾರ್ಥಾವಬೋಧೋ ಜ್ಞಾನಂ || || ೧೬೫ ||

ಅರ್ಥ : ಸಮಾಧಿ = ಮನದ ವಿಚಾರಸ್ಥಿರತೆಯುಂ, ಇಂದ್ರಿಯದ್ವಾರೇಣ = ಇಂದ್ರಿಯಮಾರ್ಗಮುಮೆಂಬಿ ವಱಿಂ, ವಿಪ್ರಕೃಷ್ಟ = ದೂರಮುಂ, ಸನ್ನಿಕೃಷ್ಟ = ಸಮೀಪಮುಮಪ್ಪ, ಅರ್ಥಾವಬೋಧಃ = ಅರ್ಥದಱಿತಂ, ಜ್ಞಾನಂ = ಜ್ಞಾನಮೆಂಬುದು || ಮನಃ ಪಂಚೇಂದ್ರಿಯಂಗಳಪ್ಪ ಱಿತಂ ಜ್ಞಾನಮೆಂಬುದು ತಾತ್ಪರ್ಯಂ || ಆದಿಶಬ್ಧಂಗಳಿಂ ಪೇಳ್ದರ್ಥಂಗಳೊಳ್ ಸುಖಮಂ ಪೇಳ್ವುದುತ್ತರಸೂತ್ರಂ :

ಸುಖಂ ಪ್ರೀತಿಃ || ೧೦ || ೧೬೬ ||

ಅರ್ಥ : ಸುಖಂ = ಸುಖಮೆಂಬುದು, ಪ್ರೀತಿಃ = ಸಂತೋಷಂ || ಇಂತಪ್ಪಲ್ಲಿ ಸುಖದುಃಖಮಲ್ಲೆಂ ಬುದುತ್ತರಸೂತ್ರಂ :

ತತ್ ಸುಖಮಪ್ಯಸುಖಂ ಯತ್ರ ನಾಸ್ತಿ ಮನೋನಿವೃತ್ತಿಃ[5]|| ೧೧ || ೧೬೭ ||

ಅರ್ಥ : ತತ್ = ಅದು, ಸುಖಮಪಿ = ಸುಖಮಾಗಿಯುಂ, ಆಸುಖಂ = ದುಃಖಂ, ಯತ್ರ = ಎಲ್ಲಿ, ಮನೋನಿವೃತ್ತಿಃ = ಮನದ ತಣಿವು, ನಾಸ್ತಿ = ಇಲ್ಲ || ಮನದ ತಣಿವಂ ಮಾಡಲಾಱದುದು ಸುಖಾಭಾಸಮೆಂಬುದು ಅಭಿಪ್ರಾಯಂ || ಸುಖದ ಕಾರಣಂಗಳಂ ಪೇಳ್ವುದುತ್ತರಸೂತ್ರಂ :

—-

೮. ಸ್ಪರ್ಶ, ರಸ, ಗಂಧ, ಶಬ್ದ, ರೂಪ ಇವು ವಿಷಯಗಳು.

೯. (ಮನಸ್ಸಿನ) ಏಕಾಗ್ರತೆಯಿಂದ ಇಂದ್ರಿಯಗಳ ಮೂಲಕ ದೂರದಲ್ಲಿಯೂ ಸಮೀಪದಲ್ಲಿಯೂ (ಇರುವ ವಸ್ತುಗಳನ್ನು) ಗ್ರಹಿಸುವುದು ಜ್ಞಾನ.

೧೦. ಸುಖ ಎಂಬುದು ಸಂತೋಷ.

೧೧. ಎಲ್ಲಿ ಮನಸ್ಸಿಗೆ ತೃಪ್ತಿ (ಆನಂದ) ಇಲ್ಲವೋ ಅದು ಸುಖವಾದರೂ ಸುಖವಲ್ಲ.

—-

ಅಭ್ಯಾಸಾಭಿಮಾನಸಂಪ್ರತ್ಯಯವಿಷಯಾಃ ಸುಖಸ್ಯ ಕಾರಣಾನಿ || ೧೨ || ೧೬೮ ||

ಅರ್ಥ : ಅಭ್ಯಾಸ = ಅಭ್ಯಾಸಮುಂ, ಅಭಿಮಾನ = ಅಭಿಮಾನಮುಂ, ಇದೆನ್ನದೆಂಬ ನಚ್ಚು, ಸಂಪ್ರತ್ಯಯ = ಸಂಪ್ರತ್ಯಯಮುಂ, ವಿಷಯಾಃ = ವಿಷಯವುಮೆಂಬಿವು, ಸುಖಸ್ಯ = ಸುಖಕ್ಕೆ, ಕಾರಣಾನಿ = ಕಾರಣಂಗಳು = ಅಭ್ಯಾಸಮಂ ಪೇಳ್ದಪರ್ :

ಕ್ರಿಯಾತಿಶಯಪರಿಪಾಕ[6]ಹೇತುರಭ್ಯಾಸಃ || ೧೩ || ೧೬೯ ||

ಅರ್ಥ : ಕ್ರಿಯಾ = ವ್ಯಾಪಾರದ, ಅತಿಶಯಪರಿಪಾಕ = ಒಳ್ಳಿತಪ್ಪ ನೆಱವಿಗೆ, ಹೇತುಃ = ಕಾರಣಮಪ್ಪುದು, ಅಭ್ಯಾಸಃ = ಅಭ್ಯಾಸಮೆಂಬುದು || ಅಭಿಮಾನಮಂ ಪೇಳ್ವುದುತ್ತರಸೂತ್ರಂ :

ಪ್ರಶ್ರಯಸತ್ಕಾರಾದಿಲಾಭೇನ ಆತ್ಮೋತ್ಕರ್ಷ[7]ಸಂಭಾವನಮಭಿಮಾನಃ || ೧೪ || ೧೭೦ ||

ಅರ್ಥ : ಪ್ರಶ್ರಯ = ವಿನಯಮಂ, ಸತ್ಕಾರಾದಿ = ಸತ್ಕಾರ ಮೊದಲಾಗೊಡೆಯವಱ, ಲಾಭೇನ = ಪದಪಿಂ, ಆತ್ಮೋತ್ಕರ್ಷ = ತನ್ನಧಿಕತೆಯಂ, ಸಂಭಾವನಂ = ಸಂಭಾವಿಪುದು, ಅಭಿಮಾನಃ = ಅಭಿಮಾನಮೆಂಬುದು || ಸಂಪ್ರತ್ಯಯಮಂ ಪೇಳ್ದಪರ್ :

ಅತದ್ಗುಣಿ ವಸ್ತುನಿ ತದ್ದುಣವತ್ವೇನಾಭಿನಿವೇಶಃ ಸಂಪ್ರತ್ಯಯಃ || ೧೫ || ೧೭೧ ||

ಅರ್ಥ : ಅತದ್ಗುಣಿ = ಗುಣವಿಲ್ಲದ, ವಸ್ತುನಿ = ವಸ್ತುವಿನೊಳು, ತದ್ಗುಣವತ್ವೇನ = ಆ ಗುಣಮನುಳ್ಳ ಸ್ವರೂಪದಿಂದಪ್ಪ, ಅಭಿನಿವೇಶಃ = ಮನದಾಗ್ರಹಂ, ಸಂಪ್ರತ್ಯಯಃ = ಸಂಪ್ರತ್ಯಯಮೆಂಬುದು || ವಿಷಯಮಂ ಪೇಳ್ವುದುತ್ತರಸೂತ್ರಂ :

—-

೧೨. ಅಭ್ಯಾಸ. ಅಭಿಮಾನ, ಸಂಪೂರ್ಣವಾದ ವಿಶ್ವಾಸಗಳಿಗೆ ಪಾತ್ರಗಳಾದ ವಿಷಯಗಳು ಇವು ಸುಖಕ್ಕೆ ಕಾರಣಗಳು.

೧೩. ಕ್ರಿಯೆಯ ಪರಿಪಕ್ವತೆಗೆ ಕಾರಣವಾದುದು ಅಭ್ಯಾಸ.

೧೪. ಇತರರು ಮಾಡುವ ಮರ್ಯಾದೆ, ಸತ್ಕಾರಾದಿಗಳಿಂದ ತಾನೊಬ್ಬ ಶ್ರೇಷ್ಠನೆಂದುಕೊಳ್ಳುವುದು ಅಭಿಮಾನ.

೧೫. ಗುಣವಿಲ್ಲದ ವಸ್ತುವಿನಲ್ಲಿ ಆ ಗುಣವಿರುವುದೆಂಬ ಆಗ್ರಹಪೂರ್ವಕವಾದ ಭಾವನೆ ಸಂಪೂರ್ಣವಾದ ವಿಶ್ವಾಸ.

—-

ಇಂದ್ರಿಯಮನಃಸಂತರ್ಪಣಭಾವೋ ವಿಷಯಃ || ೧೬ || ೧೭೨ ||

ಅರ್ಥ : ಇಂದ್ರಿಯ-ಮನಃ = ಇಂದ್ರಿಯ-ಮನಂಗಳು, ಸಂತರ್ಪಣ = ತಣಿಪುವ ಸ್ತ್ರೀತಾಂಬೂಲ ಪುಷ್ಟಾದಿವಸ್ತುಗಳ, ಭಾವಃ = ಭಾವಂ, ವಿಷಯಃ = ವಿಷಯಮೆಂಬುದು || ಈ ಪೇಳ್ದ ಕಾರಣಂಗಳು ವಿಕಲಮಾಗೆ ಸುಖಮಿಲ್ಲೆಂಬುದು ತಾತ್ಪರ್ಯಂ || ದುಃಖಮಂ ಪೇಳ್ದಪರು :

ದುಃಖಮಪ್ರೀತಿಃ || ೧೭ || ೧೭೩ ||

ಅರ್ಥ : ಅಪ್ರೀತಿಃ = ಸಂತಸಮಿಲ್ಲಮೆ, ದುಃಖಂ = ದುಃಖಮೆಂಬುದು || ಇಂತಪ್ಪ ದುಃಖಂ ದುಃಖಮಲ್ಲೆಂಬುದುಂ ಪೇಳ್ವುದುತ್ತರಸೂತ್ರಂ :

ತದ್ದುಃಖಮಪಿ ನ ದುಃಖಂ ಯತ್ರ ನ ಸಂಕ್ಲಿಷ್ಯತೇ[8] ಮನಃ || ೧೮ || ೧೭೪ ||

ಅರ್ಥ : ಯತ್ರ = ಎಲ್ಲಿ, ಮನಃ = ಮನಂ, ನ ಸಂಕ್ಲಿಷ್ಯತೇ = ದುಃಖಂ ಬಡುವುದಲ್ಲದು, ತತ್ = ಅದು, ದುಃಖಮಪಿ = ದುಃಖಮಾಗಿಯುಂ, ನ ದುಃಖಂ = ದುಃಖಮಲ್ಲದು || ಮನಮಂ ನೋಯಿಸದಡೆ ಸುಖಮೆಂಬುದು ತಾತ್ಪರ್ಯಂ || ದುಃಖದ ಭೇದಂಗಳಂ ಪೇಳ್ವುದುತ್ತರವಾಕ್ಯಂ :

ದುಃಖ ಚತುರ್ವಿಧಂ ಸಹಜಂ ದೋಷಜಮಾಗಂತುಕಮಂತರಂಗಜಂ ಚೇತಿ || ೧೯ || ೧೭೫ ||

ಅರ್ಥ : ದುಃಖಂ = ದುಃಖವು, ಚತುರ್ವಿಧಂ = ನಾಲ್ದೆಱಂ, ಸಹಜಂ = ಸಹಜಮೆಂದು, ದೋಷಜಂ = ದೋಷಜಮೆಂದು, ಆಗಂತುಕಂ = ಆಗಂತುಕಮೆಂದುಂ, ಅಂತರಂಗಜಂ ಚೇತಿ = ಅಂತರಂಗಜಮೆಂದಿಂತು || ಅವರೊಳ್ ಸಹಜದುಃಖಮಂ ಪೇಳ್ದಪರ್ :

ಸಹಜಂ ಕ್ಷುತ್ತೃಷಾಪ್ರಪೀಡಾ[9] ಮನೋಭೂರ್ಭಯಂ ಚೇತಿ || ೨೦ || ೧೭೬ ||

ಅರ್ಥ : ಸಹಜಂ = ಸಹಜದುಃಖಮೆಂಬುದು, ಕ್ಷುತ್ = ಪಸಿವುಂ, ತೃಷಾ = ನೀರಳ್ಕೆಮೆಂಬಿವಱ, ಪೀಡಾ = ಪೀಡೆಯುಂ, ಮನೋಭೂಃ = ಕಾಮಮುಂ, ಭಯಂ ಚೇತಿ = ಭಯಮಮೆಂಬಿವು || ದೋಷಜಮಂ ಪೇಳ್ವುದುತ್ತರವಾಕ್ಯಂ :

—-

೧೬. ಇಂದ್ರಿಯಗಳಿಗೆ, ಮನಸ್ಸಿಗೆ, ತೃಪ್ತಿಯನ್ನುಂಟುಮಾಡುವಂಥದು ವಿಷಯವು.

೧೭. ಸಂತೋಷವಿಲ್ಲದಿರುವುದು ದುಃಖವು.

೧೮. ಮನಸ್ಸಿನಲ್ಲಿ ಕ್ಲೇಶವನ್ನುಂಟುಮಾಡಲಾರದ ದುಃಖವು ದುಃಖವಲ್ಲ.

೧೯. ದುಃಖವು ನಾಲ್ಕು ವಿಧಃ ಸಹಜವಾದುದು. ದೋಷದಿಂದ ಉಂಟಾದುದು. ಹೊರಗಿನಿಂದ ಬಂದುದು ಮತ್ತು ಒಳಗಿನಿಂದಲೇ ಉಂಟಾದುದು.

೨೦. ಹಸಿವು, ಬಾಯಾರಿಕೆ, ಕಾಮ ಮತ್ತು ಭಯ ಇವು ಸಹಜ ದುಃಖಗಳು.

—-

ದೋಷಜಂ ವಾತಪಿತ್ತಪೀನಸಾನಾಂ[10] ವೈಷಮ್ಯಸಂಭೂತಂ || ೨೧ || ೧೭೭ ||

ಅರ್ಥ : ವಾತಪಿತ್ತಪೀನಸಾನಾಂ = ವಾತಪಿತ್ತಶ್ಲೇಷ್ಮಂಗಳ, ವೈಷಮ್ಯಸಂಭೂತಂ = ವಿಷಮದೊಳಾದುದು, ದೋಷಜಂ = ದೋಷಜಮೆಂಬುದು ದುಃಖಂ || ಆಗಂತುಕಮಂ ಪೇಳ್ದಪರು :

ಆಗಂತುಕಂ ವರ್ಷವಾತಾತಪಾದಿ[11]ಜನಿತಂ || ೨೨ || ೧೭೮ ||

ಅರ್ಥ : ವರ್ಷವಾತಾತಪಾದಿಜನಿತಂ = ಮಳೆಯುಂ, ಗಾಳಿಯುಂ, ಬಿಸಿಲುಮೆಂಬಿವು ಮೊದಲಾಗೊಡೆಯವಱಿಂ, ಪುಟ್ಟಿಸಲ್ಕೆಪಟ್ಟುದು, ಆಗಂತುಕಂ = ಆಗಂತುಕಮೆಂಬುದು || ಅಂತರಂಗಜಮಂ ಪೇಳ್ದಪರ್ :

ನ್ಯಕ್ಕಾರಾವಜ್ಞೇಚ್ಛಾವಿಘಾತಾದಿ ಸಮುತ್ಥ ಮಂತರಂಗಜಂ || ೨೩ || ೧೭೯ ||

ಅರ್ಥ : ನ್ಯಕ್ಕಾರ = ಇಳಿಕೆಗೆಯ್ವುದುಂ, ತಿರಸ್ಕಾರಂ, ಅವಜ್ಞಾ = ಮನ್ನಿಸದುದಂ, ಇಚ್ಛಾವಿಘಾತಾದಿ = ಇಚ್ಛೆಯಂ ಕೆಡಿಸುವುದಂ ಮೊದಲಾಗೊಡೆಯವಱಿಂ, ಸಮುತ್ಥಂ = ಪುಟ್ಟಿದುದು, ಅಂತರಂಗಜಂ = ಅಂತರಂಗದ ದುಃಖಮೆಂಬುದು || ಇನಿತಱೊಳೆಲ್ಲಾ ದುಃಖಂಗಳಂತರ್ಭೂತಂಗಳೆಂಬು ದಭಿಪ್ರಾಯಂ || ದುಃಖಕ್ಕಳ್ಕಿದಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ನ ತತ್ರೈ[12]ಹಿಕಮಾಮುತ್ರಿಕಂ ವಾ ಫಲಮಸ್ತಿ ಯಃ ಕ್ಲೇಶಾಯಾಸಾಭ್ಯಾಂ ಭವತಿ ವಿಕ್ಲಬಪ್ರಕೃತಿಃ || ೨೪ || ೧೮೦ ||

ಅರ್ಥ : ತತ್ರ = ಆತನೊಳು, ಐಹಿಕಂ = ಈ ಭವದೊಳಾದ, ಆಮುತ್ರಿಕಂ ವಾ = ಮಱು ಭವದೊಳಪ್ಪ, ಫಲಂ = ಫಲಮುಂ, ನಾಸ್ತಿ = ಇಲ್ಲವು, ಯಃ = ಆವನೋರ್ವಂ, ಕ್ಲೇಶ = ದುಃಖಮಂ, ಆಯಾಸಾಭ್ಯಾಂ = ಶರೀರಾಯಸಮುಮೆಂಬಿವಱಿಂ, ಭವತಿ = ಅಕ್ಕುಂ, ವಿಕ್ಲಬಪ್ರಕೃತಿಃ = ಬೇಸಱುವ (ಪರವಶವಾದ) ಸ್ವಭಾವವನುಳ್ಳಂ || ಕ್ಲೇಶಾಯಾಸಂಗಳಂ ಸೈರಿಸದಂಗೆ ಕಾರ್ಯಸಿದ್ಧಿಯಿಲ್ಲೆಂಬುದು ತಾತ್ಪರ್ಯಂ || ಈಯರ್ಥಮನೆ ಸಮರ್ಥಿಸಿ ಪೇಳ್ವುದುತ್ತರವಾಕ್ಯಂ :

—-

೨೧. ವಾತ, ಪಿತ್ತ, ಶ್ಲೇಷ್ಮಗಳೆಂಬ ತ್ರಿದೋಷಗಳ ವಿಷಮತೆಯಿಂದ ಉಂಟಾಗುವುದು ದೋಷಜ ದುಃಖ.

೨೨. ಮಳೆ, ಗಾಳಿ, ಬಿಸಿಲು ಮೊದಲಾದವುಗಳಿಂದ ಹುಟ್ಟುವುದು ಆಗಂತುಕ ದುಃಖ.

೨೩. ತಿರಸ್ಕಾರ, ಅವಮಾನ, ಇಚ್ಛೆ ಪೂರ್ಣವಾಗದಿರುವುದು ಇವುಗಳಿಂದ ಉಂಟಾಗುವುದು ಅಂತರಂಗ ದುಃಖ.

೨೪. ಕ್ಲೇಶ, ಆಯಾಸಗಳಿಂದ ಎದೆಗೆಡುವವನಿಗೆ ಈ ಲೋಕದಲ್ಲಿಯಾಗಲಿ, ಪರಲೋಕದಲ್ಲಿಯಾಗಲಿ ಫಲ ದೊರೆಯುವುದಿಲ್ಲ.

—-

ಸ ಕಿಂ ಪುರುಷೋ ಯಸ್ಯ ಮಹಾಭಿಯೋಗೇಪು ವಂಶ[13]ಧನುಷ ಇವಾಧಿಕಂ ನ ಜಾಯತೇ ಬಲಂ || ೨೫ || ೧೮೧ ||

ಅರ್ಥ : ಸಃ = ಆತಂ, ಕಿಂ ಪುರುಷಃ = ಏಂ ಪುರುಷನೋ, ಯಸ್ಯ = ಆವನೋರ್ವಂಗೆ, ಮಹಾಭಿಯೋಗೇಷು = ಪಿರಿದಪ್ಪ (ಮಹಾಸಂಕಟಂಗಳಲ್ಲಿ) ಕಾರ್ಯಂಗಳೊಳು, ವಂಶಧನುಷ ಇವ = ಬಿದಿರ ಬಿಲ್ಲೆಂತಂತೆ, ಅಧಿಕಂ = ಪಿರಿದಪ್ಪ, ಬಲಂ = ಶಕ್ತಿ, ನ ಜಾಯತೇ = ಆಗದು || ಎನಿತೆನಿತು ಕಾರ್ಯಂ ಸಂದಣಿಸಲನಿತನಿತೆ ಮನಂ ಪೆರ್ಚುವೇಳ್ಕಮೆಂಬುದು ಸೂತ್ರಾಭಿಪ್ರಾಯಂ || ಇಚ್ಛೆಯಂ ಪೇಳ್ದಪರ್ :

ಆಗಾಮಿಕ್ರಿಯಾಹೇತುರಭಿಲಾಷಾ ವಾ ಇಚ್ಛಾ || ೨೬ || ೧೮೨ ||

ಅರ್ಥ : ಆಗಾಮಿ = ಇನ್ನಪ್ಪ, ಕ್ರಿಯಾಹೇತುಃ = ನೆಗಳ್ತೆಗೆ ಕಾರಣಮಪ್ಪುದು, ಇಚ್ಛಾ = ಇಚ್ಛೆಯೆಂಬುದು, ಅಭಿಲಾಷಾ ವಾ = ಬಯಕೆಯುಂ ಮೇಣ್ || ದ್ವೇಷಮಂ ಪೇಳ್ವುದುತ್ತರಸೂತ್ರಂ :

[14]ಆತ್ಮಪ್ರತ್ಯವಾಯೇಭ್ಯಃ ಪ್ರತ್ಯವಾರ್ತನಹೇತುರ್ದ್ವೇಷೋನಭಿಲಾಷೋ ವಾ || ೨೭ || ೧೮೩ ||

ಅರ್ಥ : ಆತ್ಮಪ್ರತ್ಯವಾಯೇಭ್ಯಃ = ತನ್ನ ಕೇಡುಗಳತ್ತಣಿಂ, ಪ್ರತ್ಯಾವರ್ತನಹೇತುಃ = ಮಗುಳ್ವದಕ್ಕೆ ಕಾರಣಮಪ್ಪುದು, ದ್ವೇಷಃ = ದ್ವೇಷಮೆಂಬುದುಂ, ಅನಭಿಲಾಷೋ ವಾ = ಬಯಕೆ ಇಲ್ಲದುದು ಮೇಣ್ || ಇಂತಪ್ಪಲ್ಲಿ ಉತ್ಸಾಹಮಂ ಮಾಳ್ಪುದಂ ಪೇಳ್ವುದುತ್ತರಸೂತ್ರಂ :

ಹಿತಾಹಿತಪ್ರಾಪ್ತಿಪರಿಹಾರಹೇತುರತ್ಸಾಹಃ || ೨೮ || ೧೮೪ ||

ಅರ್ಥ : ಹಿತಪ್ರಾಪ್ತಿ = ಹಿತದೆಯ್ದುಗೆಯುಂ, ಅಹಿತಪರಿಹಾರಃ = ಹಿತಮಲ್ಲದುದಱ ಗಲ್ಕೆಯುಮೆಂಬಿವಲ್ಕೆ, ಹೇತುಃ = ಕಾರಣಮಪ್ಪುದು, ಉತ್ಸಾಹಃ = ಉತ್ಸಾಹಮೆಂಬುದು || ಪ್ರಯತ್ನಮಂ ಪೇಳ್ವುದುತ್ತರಸೂತ್ರಂ :

—-

೨೫. ಮಹಾಸಂಕಟವೊದಗಿಬಂದಾಗ ಬಿದಿರಿನಿಂದ ಮಾಡಿದ ಬಿಲ್ಲಿನಂತೆ ಯಾರಿಗೆ ಅಧಿಕ ಬಲವುಂಟಾಗದೋ ಅವನು ಎಂತಹ ಪುರುಷ?

೨೬. ಬರಲಿರುವ ಕೆಲಸಕ್ಕೆ ಕಾರಣವಾದುದು ಅಭಿಲಾಷೆ ಅಥವಾ ಇಚ್ಛೆ.

೨೭. ತನ್ನ ಕೇಡುಗಳ ದೆಸೆಯಿಂದ ಹಿಮ್ಮೆಟ್ಟುವುದಕ್ಕೆ ಕಾರಣವಾದುದು ದ್ವೇಷ ಅಥವಾ ಅಭಿಲಾಷೆಯು ಇಲ್ಲದುದು.

೨೮. ಹಿತವಾದುದು ಲಭಿಸುವುದಕ್ಕೂ, ಅಹಿತವಾದುದು ಪರಿಹಾರವಾಗುವುದಕ್ಕೂ ಕಾರಣವಾದುದು ಉತ್ಸಾಹ.

—-

ಪ್ರಯತ್ನಃ ಪರನಿಮಿತ್ತಕೋ ಭಾವಃ[15]|| ೨೯ || ೧೮೫ ||

ಅರ್ಥ : ಪರನಿಮಿತ್ತಕಃ = ಪೆಱತನೆ ಕಾರಣಮಾಗುಳ್ಳ, ಭಾವಃ = ಉದ್ಯೋಗಂ, ಪ್ರಯತ್ನಃ = ಪ್ರಯತ್ನಮೆಂಬುದು || ಸಂಸ್ಕಾರಮಂ ಪೇಳ್ದಪರ್ :

ಸಾತಿಶಯಲಾಭಃ ಸಂಸ್ಕಾರಃ[16]|| ೩೦ || ೧೮೬ ||

ಅರ್ಥ : ಸಾತಿಶಯಲಾಭಃ = ಅತಿಶಯದೊಡನೆ ಪಡೆದುದಱ ಪಡೆಪು, ಸಂಸ್ಕಾರಃ = ಸಂಸ್ಕಾರಮೆಂಬುದು || ಇನಿತುಮಾಗಿ ಶಬ್ಧಂಗಳರ್ಥಂ ಭೋಗಾಯತನಮಂ ಪೇಳ್ದಪರುಃ

ಭೋಗಾಯತನಂ ಶರೀರಂ || ೩೧ || ೧೮೭ ||

ಅರ್ಥ : ಭೋಗಾಯತನಂ = ಭೋಗಿಸಲ್ಪಡುವುದು, ಶರೀರಂ = ದೇಹಂ || ಆನ್ವೀಕ್ಷಿಕಿಯಲ್ಲಿ ಲೋಕಾಯತಮಂ ಪೇಳ್ವುದುತ್ತರಸೂತ್ರಂ :

ಐಹಿಕವ್ಯವಹಾರಪ್ರಸಾದನಪರಂ ಹಿ ಲೋಕಾಯತಂ[17]|| ೩೨ || ೧೮೮ ||

ಅರ್ಥ : ಐಹಿಕವ್ಯವಹಾರ = ಈ ಭವದ ಕಾರ್ಯಂಗಳಂ, ಪ್ರಸಾದನಪರಂ = ಸಾಧಿಸುವುದನಗ್ಗಳಮಾಗುಳ್ಳುದು (ಪ್ರಸನ್ನತೆಯಲ್ಲಿ ತಾತ್ಪರ್ಯನುಳ್ಳುದು) ಹಿ = ನೆಟ್ಟನೆ, ಲೋಕಾಯತಂ = ಲೋಕಾಯತಮೆಂಬುದು || ಲೋಕಾಯತದ ಫಲಮಂ ಪೇಳ್ದಪರ್ :

ಅಧೀತ[18]ಲೋಕಾಯತಮತೋ ಹಿ ರಾಜಾ ರಾಷ್ಟ್ರಕಂಟಕಾನುಚ್ಛೇತ್ತುಂ ಯತತೇ[19]|| ೩೩ || ೧೮೯ ||

ಮಾಳ್ಕುಂ || ಲೋಕಾಯತಮತಜ್ಞತೆಯಿಂ ಹಿಂಸಾನ್ವಿತನಕ್ಕುಮೆಂಬುದು ತಾತ್ಪರ್ಯಂ ||
ಹಿಂಸೆಯಿಲ್ಲದರಸಂಗೆ ಆವ ಕಾರ್ಯಮಂ ತೀರದೆಂಬುದಂ ಪೇಳ್ವುದುತ್ತರಸೂತ್ರಂ :

—-

೨೯. ಇನ್ನೊಂದನ್ನು ಸಾಧಿಸುವ ಕ್ರಿಯೆಯು ಪ್ರಯತ್ನ.

೩೦. ಅತಿಶಯವಾದ ಲಾಭವು ಸಂಸ್ಕಾರ.

೩೧. ಶರೀರವು ಸುಖ ದುಃಖಗಳನ್ನು ಭೋಗಿಸುವ ಕ್ಷೇತ್ರ.

೩೨. ಪ್ರಾಪಂಚಿಕ ವ್ಯವಹಾರಗಳ ನಿರ್ವಹಣೆಯಲ್ಲಿ ತೊಡಗುವುದು ಲೋಕಾಯತ.

೩೩. ಲೋಕಾಯತ ಮತವನ್ನು ಅಧ್ಯಯನ ಮಾಡಿದ ರಾಜನು ದೇಶಕಂಟಕರನ್ನು ನಾಶಗೊಳಿಸಲು ತೊಡಗುತ್ತಾನೆ.

—-

ನ ಖಲ್ವೇಕಾಂತತೋ ಯತೀನಾಮಪ್ಯನವದ್ಯಾಸ್ತಿ ಕ್ರಿಯಾ || ೩೪ || ೧೯೦ ||

ಅರ್ಥ : ಏಕಾಂತತಃ = ನಿಶ್ಚಯದಿಂ, ಯತೀನಾಮಪಿ = ಯತಿಗಳ್ಗಂ, ಅನವದ್ಯಾ = ದೋಷಮಿಲ್ಲದ, ಕ್ರಿಯಾ = ವ್ಯಾಪಾರಂ, ಖಲು = ನೆಟ್ಟನೆ, ನಾಸ್ತಿ = ಇಲ್ಲ || ವ್ಯಾಪಾರಮೆಲ್ಲಂ ದೋಷಪೂರ್ವಕ ಮೆಂಬುದಭಿಪ್ರಾಯಂ || ಪಿರಿದು ಕಾರುಣ್ಯಪರನಪ್ಪರಸಂಗೆ ದೋಷಮಂ ಪೇಳ್ದಪರು :

ಏಕಾಂತೇನ ಕಾರುಣ್ಯಪರಃ ಕರತಲಗತಮಪ್ಯರ್ಥಂ ನ ರಕ್ಷಿತುಂ ಕ್ಷಮಃ || ೩೫ || ೧೯೧ ||

ಅರ್ಥ : ಏಕಾಂತೇನ = ಎಲ್ಲತೆಱದಿಂ, ಕಾರುಣ್ಯಪರಃ = ಕಾರುಣ್ಯಪರನಗ್ಗಳಮಾಗುಳ್ಳಂ, ಕರತಲಗತಮಪಿ = ಕೈಯ ತಳದವಿರ್ದುದುಮಂ, ಅರ್ಥಂ = ಅರ್ಥಮಂ, ರಕ್ಷಿತುಂ = ರಕ್ಷಿಸಲ್ಕೆ, ನ ಕ್ಷಮಃ = ಆಱಂ || ದೋಷಿಗಳೊಳು ಕರಂ ಕಾರುಣ್ಯವಾಗಲಾಗದೆಂಬುದು ತಾತ್ಪರ್ಯ || ಉಪಸಮನಪ್ಪಂಗೆ ದೋಷಮಂ ಪೇಳ್ವುದುತ್ತರಸೂತ್ರಂ :

ಪ್ರಶಮೈಕಚಿತ್ತಂ ಕೋ ನಾಮ ನ ಪರಿಭವತಿ || ೩೬ || ೧೯೨ ||

ಅರ್ಥ : ಪ್ರಶಮೈಕಚಿತ್ತಂ = ಬಚ್ಚಬಱಿಯುಪಶಮಿಪಮಚಿತ್ತಂ, ಕೋ ನಾಮ = ಆವಂ ತಾಂ, ನ ಪರಿಭವತಿ = ಪರಿಭವಿಸಂ || ಇಂತಪ್ಪ ಕಾರುಣ್ಯನಾಗಲಾಗದೆಂಬುದಂ ಪೇಳ್ವುದುತ್ತರಸೂತ್ರಂ :

ಅಪರಾಧಕಾರಿಷು[20] ಪ್ರಶಮೋ ಯತೀನಾಂ ಭೂಷಣಂ ನ ಮಹೀಪತೀನಾಂ || ೩೭ || ೧೯೩ ||

ಅರ್ಥ : ಅಪರಾಧಕಾರಿಷು = ದೋಷಿಗಳೊಳು, ಪ್ರಶಮಃ = ಕ್ಷಮೆ, ಯತೀನಾಂ = ತಪಸ್ವಿಗಳ್ಗೆ, ಭೂಷಣಂ = ಅಲಂಕಾರಂ, ಮಹೀಪತೀನಾಂ = ಅರಸುಗಳ್ಗೆ, ನ = ಅಲಂಕಾರಮಲ್ಲ || ಇದನೇ ವಿಶೇಷಿಸಿ ಪೇಳ್ವುದುತ್ತರಸೂತ್ರಂ :

—-

೩೪. ಯತಿಗಳು ಮಾಡುವ ಕೆಲಸಗಳಲ್ಲಿಯೂ ಎಷ್ಟು ಮಾತ್ರವೂ ದೋಷವಿಲ್ಲದ ಕೆಲಸ ಎನ್ನುವುದಿಲ್ಲ.

೩೫. ಎಲ್ಲ ರೀತಿಯಲ್ಲಿಯೂ ಅತ್ಯಂತ ದಯಾಪರನಾದವನು ತನ್ನ ಕೈಯಲ್ಲಿದ್ದ ಅರ್ಥವನ್ನು ಸಹ ರಕ್ಷಿಸಿಕೊಳ್ಳಲಾರನು.

೩೬. ಕೇವಲ ಕ್ಷಮಾಗುಣವುಳ್ಳ ಯಾವನು ಅನಾದರಕ್ಕೆ ಗುರಿಯಾಗುವುದಿಲ್ಲ?

೩೭. ಅಪರಾಧಿಗಳಲ್ಲಿ ಕ್ಷಮೆಯ ಯತಿಗಳಿಗೆ ಭೂಷಣ. ರಾಜರಿಗಲ್ಲ.

—-

ಧಿಕ್ತಂ ಪುರುಷಂ ಯಸ್ಯಾತ್ಮಶಕ್ತ್ಯಾ ನ ಸ ಸ್ತಃ ಕೋಪಪ್ರಸಾದೌ || ೩೮ || ೧೯೪ ||

ಅರ್ಥ : ಧಿಕ್ತಂ ಪುರುಷಂ = ಪುರುಷಂ ಸುಡವನು, ಯಸ್ಯ = ಆವನೋರ್ವಂಗೆ, ಆತ್ಮಶಕ್ತ್ಯಾ = ತನ್ನ ಶಕ್ತಿಗೆ ತಕ್ಕಂತೆ, ನ ಸ್ತಃ = ಆಗವು, ಕೋಪಪ್ರಸಾದೌ = ಕೋಪಪ್ರಸಾದಂಗಳು || ಮತ್ತಮದನೇ ವಿಶೇಷಿಸಿ ಪೇಳ್ವುದುತ್ತರಸೂತ್ರಂ :

ಸ ಜೀವನ್ನಪಿ ಮೃತ ಏವ ಯೋ ನ ವಿಕ್ರಮತಿ[21] ಪ್ರತಿಕೂಲೇಷು || ೩೯ || ೧೯೫ ||

ಅರ್ಥ : ಸಃ = ಆತಂ, ಜೀವನ್ನಪಿ = ಬರ್ದುಂಕಿರ್ದುಂ, ಮೃತ ಏವ = ಸತ್ತವನೇ, ಯಃ = ಆವನೋರ್ವಂ, ನ ವಿಕ್ರಮತಿ = ಪರಾಕ್ರಮಮಂ ಮಾಡಂ, ಪ್ರತಿಕೂಲೇಷು = ಪಗೆವರೊಳು || ತೇಜಮಿಲ್ಲದಂಗಂಜದುದಂ ಪೇಳ್ದಪರ್ :

ಭಸ್ಮನೀವಾತೇಜಸಿ ಪುಂಸಿ ಕೋ ನಾಮ ನಿಃಶಂಕಂ ನ ದಧಾತಿ ಪದಂ[22]|| ೪೦ || ೧೯೬ ||

ಅರ್ಥ : ಭಸ್ಮನೀವ = ಬೂದಿಯೊಳೆಂತಂತೆ, ಅತೇಜಸಿ ಪುಂಸಿ = ತೇಜಮಿಲ್ಲದನೊಳು, ಕೋ ನಾಮ = ಆವಂ ತಾನೆ, ನಿಃಶಂಕಂ = ಅಂಜದೆ, ಪದಂ = ಪಾದಮಂ, ನ ದಧಾತಿ = ಇಕ್ಕನು? || ಕ್ಷತ್ರಿಯಂಗೆ ದೋಷಿಗಳೊಳು ಕಾರುಣ್ಯಮಾಗದೆಂಬುದಿದಱ ತಾತ್ಪರ್ಯಂ || ಧರ್ಮಾನುಬಂಧದಿಂದಾದ ಹಿಂಸೆಯುಂ ದೋಷಮಲ್ಲೆಂಬುದಂ ಪೇಳ್ವುದುತ್ತರಸೂತ್ರಂ :

ತತ್ಪಾಪಮಪಿ ನ ಪಾಪಂ ಯತ್ರ ಮಹಾನ್ ಧರ್ಮಾನುಬಂಧಃ[23]|| ೪೧ || ೧೯೭ ||

ಅರ್ಥ : ತತ್ = ಅದು, ಪಾಪಮಪಿ = ಪಾಪಮಾಗಿಯುಂ, ನ ಪಾಪಂ = ಪಾಪಮಲ್ತು, ಯತ್ರ = ಆವುದಾದರೊಂದಱೊಳು, ಮಹಾನ್ = ಪಿರಿದಪ್ಪ, ಧರ್ಮಾನುಬಂಧಃ = ಧರ್ಮದ ಪೆರ್ಚು || ಧರ್ಮಪರಿರಕ್ಷಣದಿಂದಾದ ಹಿಂಸೆಯಿಂ ದೋಷಮಿಲ್ಲೆಂಬುದು ತಾತ್ಪರ್ಯಂ || ಧರ್ಮರಕ್ಷಾರ್ಥಂ ದುಷ್ಟಶಿಕ್ಷೆಯಂ ಮಾಡದಿರ್ದೊಡೆ ದೋಷಮಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಚತುಷ್ಟಯಂ :

—-

೩೮. ಯಾವನಲ್ಲಿ ತನ್ನ ಶಕ್ತಿಗೆ ತಕ್ಕಂತೆ ಕೋಪ, ಅನುಗ್ರಹಗಳಿಲ್ಲವೋ ಅವನಿಗೆ ಧಿಕ್ಕಾರ.

೩೯. ಪ್ರತಿಕೂಲ ಪರಿಸ್ಥಿತಿಗಳನ್ನು ಯಾವನು ಎದುರಿಸುವುದಿಲ್ಲವೋ ಅವನು ಬದುಕಿದ್ದರೂ ಸತ್ತಂತೆ.

೪೦. ತೇಜಸ್ಸಿಲ್ಲದವನನ್ನು ಯಾರು ತಾನೆ ಶಂಕಿಸದೆ ಬೂದಿಯನ್ನು ಹೇಗೋ ಹಾಗೆ ತುಳಿಯರು?

೪೧. ಯಾವುದೊಂದು ಶಿಕ್ಷೆಯಿಂದ ಮಹತ್ತಾದ ಧರ್ಮಸಂಬಂಧವೇರ್ಪಡುವುದೋ ಅಂತಹ ಪಾಪವು (ಶಿಕ್ಷೆಯು) ಪಾಪವಲ್ಲ.

—-

ಅನ್ಯಥಾ ಪುನರ್ನರಕಾಂತಂ[24] ರಾಜ್ಯಂ || ೪೨ || ೧೯೮ ||

ಅರ್ಥ : ಅನ್ಯಥಾ ಪುನಃ = ದುಷ್ಟಶಿಕ್ಷೆಯಂ ಮಾಡದಿರ್ದೊಡೆ, ನರಕಾಂತಂ = ನರಕಮನೆ ಕಡೆಯಾಗುಳ್ಳುದು, ರಾಜ್ಯಂ = ರಾಜ್ಯಂ || ಉತ್ತರವಾಕ್ಯತ್ರಯದಿಂ ದೃಷ್ಟಾಂತದಿಂ ಪೇಳ್ದಪರುಃ

ಬಂಧನಾಂತೋ ನಿಯೋಗಃ || ೪೩ || ೧೯೯ ||

ಅರ್ಥ : ಬಂಧನಾಂತಃ = ಸೆಱೆಯನೆ ಕಡೆಯಾಗುಳ್ಳುದು, ನಿಯೋಗಃ = ಅಧಿಕಾರಂ ||

ವಿಪದಾಂತಾ[25] ಖಲಮೈತ್ರೀ || ೪೪ || ೨೦೦ ||

ಅರ್ಥ : ವಿಪದಾಂತಾ = ಕೇಡನೆ ಕಡೆಯಾಗುಳ್ಳುದು, ಖಲಮೈತ್ರೀ = ಪೊಲ್ಲದಱ ಕೆಳೆ ||

ಮರಣಾಂತಸ್ತ್ರೀಷು[26] ವಿಶ್ವಾಸಃ || ೪೫ || ೨೦೧ ||

ಅರ್ಥ : ಮರಣಾಂತ = ಸಾವನೆ ಕಡೆಯಾಗುಳ್ಳ, ಸ್ತ್ರೀಷು = ಸ್ತ್ರೀಯರೊಳು, ವಿಶ್ವಾಸಃ = ನಂಬುಗೆ ||

ಇತಿ ಚತುಷ್ಟಯಂ ಸಮಂ ಸ್ಯಾತ್

ಅರ್ಥ : ಇತಿ = ಇಂತು, ಚತುಷ್ಟಯಂ = ನಾಲ್ಕುಂ, ಸಮಂ = ಸಮಾನಂ, ಸ್ಯಾತ್ = ಅಕ್ಕುಂ ||

ಇತ್ಯಾನ್ವೀಕ್ಷಿಕೀ ಸಮುದ್ದೇಶಃ ಪಂಚಮಃ || ||[27]

ಈ ಸಮುದ್ದೇಶದ ವಾಕ್ಯಂಗಳು || ೪೫ || ಒಟ್ಟು || ೨೦೧ ||

—-

೪೨. ದುಷ್ಟ ಶಿಕ್ಷೆ ಮಾಡದಿದ್ದರೆ ರಾಜ್ಯವು ನರಕವಾಗುವುದು.

೪೩. ಇಲ್ಲವಾದರೆ ಅಧಿಕಾರವು ಬಂಧನದಲ್ಲಿ ಕೊನೆಗೊಳ್ಳುವುದು.

೪೪. ದುಷ್ಟರ ಸ್ನೇಹವು ವಿಪತ್ತಿನಲ್ಲಿ ಕೊನೆಗೊಳ್ಳುವುದು.

೪೫. ಸ್ತ್ರೀಯರನ್ನು ನಂಬುವುದು ಮರಣಾಂತಿಕವಾದುದು. ಹೀಗೆ ಇವು ನಾಲ್ಕೂ ಸಮಾನವಾದುವು.

—-

 

[1]ಮೈ., ಚೌ. ಸಮಸಮಾಯೋಗಲಕ್ಷಣೋ ಹ್ಯಾಧ್ಯಾತ್ಮ ಯೋಗಃ

[2]ಮೈ., ಚೌ. ಅಸತ್ಯಾತ್ಮ ನಿ.

[3]ಪಾಠ ಸ್ಪಷ್ಟವಿದೆ, ಅರ್ಥ ಸ್ಪಷ್ಟವಿಲ್ಲ.

[4]ಮೈ. ಸಮಾಧೀಂದ್ರಿಯಾಭ್ಯಾಂ.

[5]ಮೈ. ಜ. ನಿರ್ವೃತಿ: ಅಂದರೆ ಸಂಪೂರ್ಣ ಸ್ತಿಮಿತತೆ, ಸಮಾಧಾನ, ನಮ್ಮ ಹಸ್ತಪ್ರತಿಯಲ್ಲಿ ನಿವೃತ್ತಿ ಎಂದಿದ್ದು, ಟೀಕಾಕಾರನು ಅದಕ್ಕೆ ಮನದ ತಣಿವು ಎಂದು ಅದೇ ಅರ್ಥ ಹೇಳಿದ್ದರೂ ನಿರ್ವೃತಿ ಎಂಬ ಪಾಠ ಸರಿ ಎಂದು ತೋರುತ್ತದೆ. ಚೌ. ದಲ್ಲಿಯ ನಿವೃತಿ ಎಂಬ ಪಾಠವು ಮುದ್ರಣ ದೋಷದಿಂದಾಗಿರಬಹುದು.

[6]ಚೌ. ವಿಪಾಕ.

[7]ಚೌ. ಉತ್ಕೃಷ್ಟತ್ವ.

[8]ಮೈ., ಜ. ಸಂಕ್ಲಿಶ್ಯತೇ.

[9]ಮೈ. ತೃಷಾ ಮನೋಭೂಭವಂ. ಚೌ. ಕ್ಷುತ್ತರ್ಷಪೀಡಾಮನೋಭೂಭವಂ.

[10]ಮೈ., ಚೌ. ವಾತಪಿತ್ತಕಫವೈಷಮ್ಯ.

[11]ಮೈ., ಚೌ. ವರ್ಷಾತಪಾದಿ.

[12]ಮೈ., ಚೌ. ನ ತಸ್ಯ.

[13]ಮೈ., ಚೌ. ಸುವಂಶ.

[14]ಮೈ., ಚೌ. ಆತ್ಮನಃ.

[15]ಚೌ. ಪ್ರಯತ್ನಪರಿನಿಮಿತ್ತಕೋ ಭಾವಃ.

[16]ಮೈ., ಜ. ಅತಿಶಯಾಧಾನಂ ಸಂಸ್ಕಾರಃ.

[17]ಮೈ. ಲೋಕಾಯತಿಕಂ ಮತಂ ;  ಚೌ. ಲೋಕಾಯತಿಕಂ.

[18]ಚೌ. ಲೋಕಾಯತಜ್ಞೋ.

[19]ಮೈ. ಕಲ್ಪತೇ;  ಚೌ. ರಾಷ್ಟ್ರಕಂಟಕಾನುಚ್ಛೇದಯತಿ.

[20]ಮೈ. ಅಪರಾಧಿಷು.

[21]ಮೈ. ಚೌ. ವಿಕ್ರಾಮತಿ.

[22]ಚೌ. ಪದಂ ನ ಕುರ್ಯಾತ್,

[23]ಮೈ: ಇದು ಮತ್ತು ಮುಂದಿನ ವಾಕ್ಯವು ಕೂಡಿ ಒಂದೇ ವಾಕ್ಯವಾಗಿದೆ.

[24]ಮೈ., ರಾಜ್ಯಮಪಿ ನರಕಾಯ ಸ್ಯಾತ್ ;  ಚೌ. ನರಕಾಯ.

[25]ಮೈ., ಚೌ. ವಿಪದಂತಾ.

[26]ಮೈ., ಚೌ. ಮರಣಾಂತಃ ಸ್ತ್ರೀಷು ವಿಶ್ವಾಸಃ.

[27]ಇದು ನಿಜವಾಗಿ ಆರನೆಯದು.