ರಾಜವಿದ್ಯಂಗಳೊಳೆರಡನೆಯ ತ್ರಯಿಯೆಂಬ ವಿದ್ಯೆಯಂ ಪೇಳ್ವುದುತ್ತರವಾಕ್ಯಂ :

ಚತ್ವಾರೋ ವೇದಾಃ ಶಿಕ್ಷಾ ಕಲ್ಪೋ ವ್ಯಾಕರಣಂ ಛಂದೋವಿಚಿತಿರ್ಜೋತಿಷಂ ನಿರುಕ್ತ ಮಿತಿ ಷಡಂಗಾನೀತಿಹಾಸಪುರಾಣೆ ಮೀಮಾಂಸಾನ್ಯಾಯಶಾಸ್ತ್ರಂ ಚೇತಿ ಚತುರ್ದಶವಿದ್ಯಾಸ್ಥಾನಾನಿ ತ್ರಯೀ[1]|| || ೨೦೨ ||

ಅರ್ಥ : ಚತ್ವಾರ = ನಾಲ್ಕು, ವೇದಾಃ = ವೇದಂಗಳು, ಶಿಕ್ಷಾ = ಸ್ವರವರ್ಣಸಂಸ್ಕಾರಶಿಕ್ಷೆಯುಂ, ಕಲ್ಪಃ = ಪ್ರಾಯಶ್ಚಿತ್ತಗ್ರಂಥಮುಂ, ವ್ಯಾಕರಣಂ = ಶಬ್ದಸಿದ್ದಿಯಂ ಮಾಡುವ ವ್ಯಾಕರಣಮುಂ, ಛಂದೋಃವಿಚಿತಿಃ = ಛಂದಶಾಸ್ತ್ರಂ, ಜ್ಯೋತಿಷಂ = ಜೋತಿಷಶಾಸ್ತ್ರಮುಂ, ನಿರುಕ್ತಮಿತಿ ಉಪನಿಷದ್ವಾಕ್ಯಮುಮೆಂದಿಂತು, ಷಡಂಗಾನಿ = ಅಱು ಅಂಗಗಳು, ಇತಿಹಾಸಪುರಾಣೇ = ಇತಿಹಾಸ, ಪುರಾಣಮೆಂಬೆಱಡುಂ, ಮೀಮಾಂಸಾ = ಮೀಮಾಂಸಕಾರಿಕೆಯುಂ, ನ್ಯಾಯಶಾಸ್ತ್ರಂ ಚೇತಿ = ನ್ಯಾಯಶಾಸ್ತ್ರಮುಮೆಂದಿಂತು, ಚತುರ್ದಶ = ಪದಿನಾಲ್ಕು, ವಿದ್ಯಾಸ್ಥಾನಾನಿ = ವಿದ್ಯಾಸ್ಥಾನಂಗಳು, ತ್ರಯೀ = ತ್ರಯಿ ಎಂಬುದು || ತ್ರಯಿಯ ಫಲಮೆಲ್ಲಮಂ ಪೇಳ್ವುದುತ್ತರವಾಕ್ಯಂ :

ತ್ರಯೀತಃ ಖಲು ವರ್ಣಾಶ್ರಮಾಚಾರಾಣಾಂ ಧರ್ಮಾಧರ್ಮವ್ಯವಸ್ತಾಃ || || ೨೦೩ ||

ಅರ್ಥ : ತ್ರಯೀತಃ = ತ್ರಯಿಯತ್ತಣಿಂ, ಖಲು = ನೆಟ್ಟನೆ, ವರ್ಣಶ್ರಮಾಚಾರಾಣಾಂ = ವರ್ಣಾಶ್ರಮಂಗಳ ಆಚಾರದ, ಧರ್ಮಾಧರ್ಮ = ಧರ್ಮಾಧರ್ಮಂಗಳ, ವ್ಯವಸ್ಥಾ = ಅಱಿತಮಕ್ಕುಂ || ತ್ರಯಿಯನಱಿಯದೆ ಪುಣ್ಯ-ಪಾಪಂಗಳನಱಿಯನೆಂಬುದು ತಾತ್ಪರ್ಯಂ || ಲೋಕವ್ಯವಹಾರಕ್ಕುಚಿತಮಲ್ಲದವರಂ ಪೇಳ್ವುದುತ್ತರ ಸೂತ್ರಂ :

ಸ್ವಪಕ್ಷಾನುರಾಗಪ್ರವೃತ್ತಾಃ ಸರ್ವೇ ಸಮಯಾ ನ ಲೋಕವ್ಯವಹಾರೇಷ್ವಧಿ ಕ್ರೀಯಂತೇ[2]|| || ೨೦೪ ||

ಅರ್ಥ : ಸ್ವಪಕ್ಷಾನುರಾಗಪ್ರವೃತ್ತಾಃ = ತಂತಮ್ಮ ಪ್ರೀತಿಯೊಳ್ ಕೂಡಿದುದಂ, ಸರ್ವೇ ಸಮಯಾಃ = ಎಲ್ಲಾ ಸಮಯಂಗಳು, ಲೋಕವ್ಯವಹಾರೇಷು = ಲೋಕವ್ಯವಹಾರಂಗಳೊಳು, ನಾಧಿಕ್ರೀಯಂತೇ = ಅಧಿಕರಿಸಲ್ಪಡವು || ಸಮಯಪಕ್ಷಮನುಳ್ಳವರು ಯುಕ್ತಿಯಂ ಪೇಳರೆಂಬುದು ತಾತ್ಪರ್ಯಂ || ಧರ್ಮಶಾಸ್ತ್ರಪಕ್ಷದ ಸ್ಮೃತಿಗಳಂ ಪಠ್ಯಗಳೊಳು ಪೇಳದುದಕ್ಕೆ ಕಾರಣಮಂ ಪೇಳ್ದಪರು :

—-

೧. ನಾಲ್ಕು ವೇದಗಳು, ಶಿಕ್ಷೆ, ಕಲ್ಪ ವ್ಯಾಕರಣ ಛಂದಶ್ಯಾಸ್ತ್ರ, ಜ್ಯೋತಿಷ ಶಾಸ್ತ್ರ, ನಿರುಕ್ತ ಎಂಬೀ ಆರು ಅಂಗಗಳು, ಇತಿಹಾಸ, ಪುರಾಣಗಳೆಂಬೆರಡು ಮೀಮಾಂಸಾ, ನ್ಯಾಯಶಾಸ್ತ್ರ ಎಂಬ ಈ ಹದಿನಾಲ್ಕು ವಿದ್ಯಾಸ್ಥಾನಗಳು ತ್ರಯೀ ಎಂಬುದು.

೨. ತ್ರಯಿಯಿಂದ ವರ್ಣಾಶ್ರಮಾಚಾರಗಳ, ಧಮಾಧರ್ಮಗಳ ತಿಳುವಳಿಕೆಯುಂಟಾಗುವದು.

೩. ತಮ್ಮ ತಮ್ಮ ಪಕ್ಷಗಳಲ್ಲಿ ಆಸಕ್ತಿಯುಳ್ಳ ಸಮಯಗಳು ಲೋಕವ್ಯವಹಾರಗಳಲ್ಲಿ ಉಪಯುಕ್ತವಾಗುವುದಿಲ್ಲ.

—-

ಧರ್ಮಶಾಸ್ತ್ರಾಣಿ ಸ್ಮೃತಯೋ ವೇದಾರ್ಥಸಂಗ್ರಹಾ[3]ದ್ವೇದಾ ಏವ || || ೨೦೫ ||

ಅರ್ಥ : ಧರ್ಮಶಾಸ್ತ್ರಾಣಿ = ಧರ್ಮಶಾಸ್ತ್ರಂಗಳುಂ, ಸ್ಮೃತಯಃ = ಸ್ಮೃತಿಗಳುಂ, ವೇದಾರ್ಥಸಂಗ್ರಹಾತ್ = ವೇದಾರ್ಥಸಂಗ್ರಹಂಗಳಪ್ಪುದಱಿಂ, ವೇದಾ ಏವ = ವೇದಂಗಳೇ || ವೇದದರ್ಥದಿಂದವಕ್ಕೆ ಪೆಱತರ್ಥಮಿಲ್ಲೆಂಬುದು ತಾತ್ಪರ್ಯಂ || ಬ್ರಾಹ್ಮಣಕ್ಷತ್ರಿಯವೈಶ್ಯರ್ಗಳ ಸಮಾನಧರ್ಮಮಂ ಪೇಳ್ದಪರ್ :

ಅಧ್ಯಯನಂ ಯಜನಂ ದಾನಂ ಚ ಬ್ರಾಹ್ಮಣಕ್ಷತ್ರಿಯವಿಶಾಂ[4] ಸಮಾನೋ ಧರ್ಮಃ || || ೨೦೬ ||

ಅರ್ಥ : ಅಧ್ಯಯನಂ = ಸ್ವಾಧ್ಯಾಯಮುಂ, ಯಜನಂ = ಬೇಳುವುದುಂ, ದಾನಂ ಚ = ದಾನಮುಂ, ಬ್ರಾಹ್ಮಣಕ್ಷತ್ರಿಯವಿಶಾಂ = ಬ್ರಾಹ್ಮಣರುಂ, ಕ್ಷತ್ರಿಯರುಂ ವೈಶ್ಯರುಮೆಂದಿವರ್ಗೆ, ಸಮಾನಃ = ಸಮಾನ-ಸಾಧಾರಣಪ್ಪ, ಧರ್ಮಃ = ಧರ್ಮಂ || ಅಧ್ಯಯನಾದಿಗಳಿಲ್ಲದಂ ಬ್ರಾಹ್ಮಣಾಭಾಸನೆಂಬುದು ತಾತ್ಪರ್ಯಂ || ಅವರ್ಗೆ ವಿಶೇಷನಾಮಮಂ ಪೇಳ್ವುದುತ್ತರಸೂತ್ರಂ :

[5]ತ್ರಯೋ ವರ್ಣಾ ದ್ವಿಜಾತಯಃ || || ೨೦೭ ||

ಅರ್ಥ : ತ್ರಯಃ = ಮೂಱುಂ, ವರ್ಣಾಃ = ವರ್ಣಂಗಳು, ದ್ವಿಜಾತಯಃ = ದ್ವಿಜಾತಿಗಳಪ್ಪವು || ತ್ರಿವರ್ಣಂಗಳು ಜನನದಿಂ ಶುದ್ರರು ಕ್ರಿಯೆಯಿಂ ದ್ವಿಜರೆಂಬುದು ತಾತ್ಪರ್ಯಂ || ಅಲ್ಲಿ ಬ್ರಾಹ್ಮಣಂಗೆ ವಿಶೇಷಧರ್ಮಂ ಪೇಳ್ದಪರು :

—-

೪. ಧರ್ಮಶಾಸ್ತ್ರಗಳು, ಸ್ಮೃತಿಗಳು ವೇದಾರ್ಥವನ್ನು ಸಂಗ್ರಹರೂಪವಾಗಿ ಹೇಳುವುದರಿಂದ ಅವೂ ವೇದಗಳೇ.

೫. ಸ್ವಾಧ್ಯಾಯ, ಯಜ್ಞ ಮಾಡುವುದು, ದಾನ ಇವು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಎಂಬಿವರಿಗೆ ಸಾಧಾರಣ ಧರ್ಮ.

೬. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಈ ಮೂರು ವರ್ಣದವರು ದ್ವಿಜರು.

—-

ಅಧ್ಯಾಪನಯಾಜನಪ್ರತಿಗ್ರಹಾಃ ಬ್ರಾಹ್ಮಣಾನಾಮೇವ || || ೨೦೮ ||

ಅರ್ಥ : ಅಧ್ಯಾಪನ = ಓದಿಸುವುದು, ಯಾಜನ = ಬೇಳಿಸುವುದುಂ, ಪ್ರತಿಗ್ರಹಾಃ = ದಾನಂಗೊಳ್ವುದುಮೆಂದಿವು, ಬ್ರಾಹ್ಮಣಾನಾಮೇವ = ಬ್ರಾಹ್ಮಣರ ಜಾತಿಧರ್ಮಂಗಳು || ಪ್ರತಿಗ್ರಹಾದಿಗಳಂ ಕ್ಷತ್ರಿಯವೈಶ್ಯಾದಿಗಳು ಕೊಳಲಾಗದೆಂಬುದು ತಾತ್ಪರ್ಯ || ಕ್ಷತ್ರಿಯರ್ಗೆ ವಿಶೇಷಧರ್ಮಮಂ ಪೇಳ್ವುದುತ್ತರಸೂತ್ರಂ :

ಭೂತಸಂರಕ್ಷಣಂ ಶಸ್ತ್ರೋಪಜೀವನಂ[6] ಸತ್ಪುರುಷೋಪಕಾರೋ ದಿನೋದ್ಧರಣಂ, ಯುದ್ಧೇ ಚಾಪಲಾಯನಂ ಕ್ಷತ್ರಿಯಾಣಾಂ || || ೨೦೯ ||

ಅರ್ಥ : ಭೂತಸಂರಕ್ಷಣಂ = ಪ್ರಾಣಿಗಳಂ ರಕ್ಷಿಸುವುದುಂ, ಶಸ್ತ್ರೋಪಜೀವನಂ = ಕೈದುವಿನಿಂ ಜೀವಿಸುವುದುಂ, ಸತ್ಪುರುಷೋಪಕಾರಃ = ಉತ್ತಮರ್ಗುಪಕಾರಂ ಗೈಯ್ವುದುಂ, ಯುದ್ಧೇ ಅಪಲಾಯನಂ ಚ = ಕಾಳಗದೊಳೋಡದಿರ್ಪ್ಪುದು ದೀನೋದ್ಧರಣಂ ಚ = ಬಡವರೆಡರಂ ಮಾಣಿಸುವುದಂ, ಕ್ಷತ್ರಿಯಾಣಾಂ = ಕ್ಷತ್ರಿಯರ್ಗೆ, ಧರ್ಮಃ = ಧರ್ಮ || ದೀನೋದ್ದರಣಾದಿಗಳಿಲ್ಲದಂ ಆಪ್ತರಂ ಪಳೆಯರುಮಂ ರಕ್ಷಿಸದಂ ಕ್ಷತ್ರಿಯನಲ್ಲೆಂಬುದು ತಾತ್ಪರ್ಯಂ || ವೈಶ್ಯರ ಧರ್ಮಮಂ ಪೇಳ್ವುದುತ್ತರವಾಕ್ಯಂ :

ವಾರ್ತಾಜೀವನಮಾವೇಶಿಕ[7]ಪೂಜನಂ ಸತ್ರಪ್ರಪಾಪುಣ್ಯಾರಾಮೋದಪಾನ[8] ನಿರ್ಮಾಪಣಂ ಚ ವಿಶಾಂ || || ೨೧೦ ||

ಅರ್ಥ : ವಾರ್ತಾಜೀವನಂ = ಕೃಷಿವಾಣಿಜ್ಯಾದಿ ವ್ಯವಹಾರದಿಂ ಬದುಕುವುದುಂ, ಆವೇಶಿಕಪೂಜನಂ = ಲಿಂಗಿಗಳಂ ಪೂಜಿಸುವುದುಂ ಅತಿಥಿಸಂವಿಭಾಗಂ ಮಾಡುವುದು, ಸತ್ರ = ಸತ್ರಮುಂ, ಪ್ರಪಾ = ಅಱವಟಿಗೆಯುಂ, ಪುಣ್ಯಾರಾಮ = ಪುಣ್ಯಕ್ಕೆ ಕಾರಣಮಾಗಿ ಮಾಳ್ಪಾರವೆಯುಂ, ಉದಪಾನನಿರ್ಮಾಪಣಂ ಚ = ಬಾವಿ ಕೆಱೆ ಮೊದಲಾಗೊಡೆಯವನಗಳಿಸುವುದುಂ, ವಿಶಾಂ = ವೈಶ್ಯರ ಧರ್ಮಂ || ದಾನಾದಿಗಳಿಲ್ಲದಂ ವೈಶ್ಯನಲ್ಲೆಂಬುದು ತಾತ್ಪರ್ಯ || ಶೂದ್ರರ ವಿಶೇಷಧರ್ಮಂ ಪೇಳ್ದಪರು :

—-

೭. ಅಧ್ಯಾಪನ (ಓದಿಸುವುದು). ಯಾಜನ (ಯಜ್ಞಮಾಡಿಸುವುದು) ಪ್ರತಿಗ್ರಹ (ದಾನವನ್ನು ತೆಗೆದುಕೊಳ್ಳುವುದು) ಇವು ಬ್ರಾಹ್ಮಣರ ಧರ್ಮ.

೮. ಜೀವಿಗಳ ಸಂರಕ್ಷಣೆ, ಆಯುಧಗಳನ್ನು ಜೀವನೋಪಾಧಿಯಾಗಿ ಮಾಡಿಕೊಳ್ಳುವದು. ಸತ್ಪುರುಷೋಪಕಾರ, ಯುದ್ಧರಂಗದಿಂದ ಹಿಮ್ಮೆಟ್ಟದಿರುವುದು, ಬಡವರ ಕಷ್ಟ ನಿವಾರಣೆ ಇವು ಕ್ಷತ್ರಿಯರ ಧರ್ಮಗಳು.

೯. ಕೃಷಿ ವಾಣಿಜ್ಯಾದಿ ವ್ಯವಹಾರದಿಂದ ಜೀವಿಸುವುದು. ಅತಿಥಿ ಅಭ್ಯಾಗತರನ್ನು ಪೂಜಿಸುವುದು. ಸತ್ರ, ಅರವಟ್ಟಿಗೆ, ಪುಣ್ಯಾರಾಮಗಳು, ಬಾವಿ, ಕೆರೆ ಮೊದಲಾದವುಗಳನ್ನು ತೋಡಿಸುವುದು. ವೈಶ್ಯರ ಧರ್ಮಗಳು.

—-

ತ್ರೈವರ್ಣೋಪಜೀವನಂ [9]ಕಾರುಕಶೀಲಂ ಭೂಕರ್ಮ ಪಣ್ಯಘಟೋಪವಾಹನಂ ಚ ಶೂದ್ರಾಣಾಂ || ೧೦ || ೨೧೧ ||

ಅರ್ಥ : ತ್ರೈವರ್ಣೋಪಜೀವನಂ = ಮೊದಲ ಮೂಱು ಜಾತಿಯಂ ಪೊರ್ದಿ ಜೀವಿಸುವುದಂ, ಕಾರುಕಶೀಲಂ = ಪಂಚಕಾರುಸ್ವಭಾವಮುಂ, ಭೂಕರ್ಮ = ಆರಂಭಮಂ ಮಾಳ್ಪುದುಂ, ಪಣ್ಯಘಟೋಪವಾಹನಂ ಚ = ಮಾಱುವ ಮಾಱುಗೊಳ್ವ ವ್ಯವಹಾರದೊಳ್ ವರ್ತಿಸುಗುಂ, ಶೂದ್ರಾಣಾಂ = ಶೂದ್ರರ್ಗೆ ಧರ್ಮಂ || ವರ್ಣತ್ರಯಾದಿಗಳಿಲ್ಲದಂ ಶೂದ್ರಾಭಾಸನೆಂಬುದು ತಾತ್ಪರ್ಯಂ || ವಿಶಿಷ್ಟಶೂದ್ರವ್ಯವಹಾರಮಂ ಪೇಳ್ವುದುತ್ತರಸೂತ್ರಂ :

ಸಕೃತ್ಪರಿಣಯನವ್ಯವಹಾರಾಃ ಸಚ್ಛೂದ್ರಾಃ || ೧೧ || ೨೧೨ ||

ಅರ್ಥ : ಸಕೃತ್ಪರಿಣಯನವ್ಯವಹಾರಾಃ = ಒರ್ಮ್ಮೆ ಮದುವೆಯಾಳ್ಪ ವ್ಯವಹಾರಮನುಳ್ಳವರು, ಸಚ್ಛೂದ್ರಾಃ = ಒಳ್ಳಿಹ ಶೂದ್ರರು || ಸಚ್ಛೂದ್ರರ್ಗೊರ್ಮೆಯಲ್ಲದೆ ವಿವಾಹಮಂ ಮಾಡಲಾಗದೆಂಬುದು ತಾತ್ಪರ್ಯಂ || ಸದಾಚಾರಂ ಶೂದ್ರರುಮಂ ಶುದ್ಧಂ ಮಾಳ್ಕುಮೆಂಬುದಂ ಪೇಳ್ದಪರು :

ಆಚಾರಾನವದ್ಯತ್ವಂ ಶುಚಿರುಪಸ್ಕಾರಃ[10] ಶಾರೀರೀ ಚ ಶುದ್ಧಿಃ ಶೂದ್ರಾನಪಿ ದೇವ
ದ್ವಿಜತಪಸ್ವಿಪರಿಕರ್ಮಸು ಕರೋತಿ ಯೋಗ್ಯಾನ್
|| ೧೨ || ೨೧೩ ||

ಅರ್ಥ : ಆಚಾರಾನವದ್ಯತೃಂ = ನೆಗಳ್ತೆಯೊಳ್ ದೋಷಮಿಲ್ಲದೆಯುಂ, ಶುಚಿ = ಒಳ್ಳಿತ್ತಪ್ಪ ಉಪಸ್ಕಾರಃ = ಸಂಸ್ಕಾರಮುಂ, ಶಾರೀರೀ ಚ = ಶರೀರದೊಳಾದ, ಶುದ್ಧಿಃ = ಶುದ್ಧಿಯುಂ, ಶೂದ್ರಾನಪಿ = ಶೂದ್ರರುಮಂ, ದೇವದ್ವಿಜತಪಸ್ವಿಪರಿಕರ್ಮಸು = ದೇವ ಬ್ರಾಹ್ಮಣ ತಪಸ್ವಿಗಳ ಶುಶ್ರೂಷೆಗಳೊಳು, ಯೋಗ್ಯಾನ್ = ತಕ್ಕುದಂ, ಕರೋತಿ = ಮಾಳ್ಕುಂ || ಶೂದ್ರಂ ಸದಾಚಾರದಿಂ ದೇವಬ್ರಾಹ್ಮಣತಪಸ್ವಿಗಳ ಸೇವಾಧರ್ಮಕ್ಕೆ ತಕ್ಕನಕ್ಕುಮೆಂಬುದಭಿಪ್ರಾಯಂ || ವರ್ಣಸಾಧಾರಣಕರ್ಮಮಂ ಪೇಳ್ದಪರು :

—-

೧೦. ಮೂರು ವರ್ಣದವರ ಸೇವೆ. ಶಿಲ್ಪ ಮೊದಲಾದ ಕೈಕೆಲಸಗಳು. ಕೃಷಿ ಮಾರುವ ಸಾಮಾನುಗಳನ್ನು ಹೊತ್ತುಕೊಂಡು ಹೋಗುವುದು ಇವು ಶೂದ್ರರ ಧರ್ಮ.

೧೧. ಒಮ್ಮೆ ಮಾತ್ರ ಮದುವೆಯಾಗುವವರು ಸಚ್ಛೂದ್ರರು

೧೨. ದೋಷವಿಲ್ಲದ ನಡವಳಿಕೆ, ಒಳ್ಳೆಯ ಸಂಸ್ಕಾರ, ಶರೀರಶುದ್ಧಿ, ಇವುಗಳಿಂದ ಶೂದ್ರರೂ ದೇವ, ದ್ವಿಜ, ತಪಸ್ವಿಗಳ ಶುಶ್ರೂಷೆಗೆ ಅರ್ಹರಾಗುತ್ತಾರೆ.

—-

ಆನೃಶಂಸ್ಯಮಮೃಷಾಭಾಷಿತಂ ಪರಸ್ವನಿವೃತ್ತಿರಿಚ್ಛಾನಿಯಮಃ ಪ್ರತಿಲೋಮಾ
ವಿವಾಹೋನಿಷಿದ್ಧಾಸು ಚ ಸ್ತ್ರೀಷು ಬ್ರಹ್ಮಚರ್ಯಮಿತಿ ಸರ್ವೇಷಾಂ ಸಮಾನೋ ಧರ್ಮಃ
|| ೧೩ || ೨೧೪ ||

ಅರ್ಥ : ಆನೃಶಂಸ್ಯಂ = ಕೊಲ್ಲದುದಂ, ಅಮೃಷಾಭಾಷಿತ್ವಂ = ಪುಸಿಯದುದಂ, ಪರಸ್ವನಿವೃತ್ತಿಃ = ಪೆಱರೊಡಮೆಯಂ ಕೊಳದುದಂ, ಇಚ್ಛಾನಿಯಮಃ = ಬಯಕೆಯಂ ಕುಂದಿಸುವುದಂ, ಪ್ರತಿಲೋಮಾವಿವಾಹಃ = ಪೆಣ್ಣಿನ ಮಾತಾಪಿತೃಗಳು ಕೊಡಲ್ಪಡದೆ ವಿವಾಹವಾಗುಹವು, ನಿಷಿದ್ಧಾಸು = ಆಗಮದಿಂ ಮಾಣಿಸ್ಲಪಟ್ಟ, ಸ್ತ್ರೀಷು = ಸ್ತ್ರೀಯರೊಳು, ಬ್ರಹ್ಮಚರ್ಯಮಿತಿ = ಬ್ರಹ್ಮಚರ್ಯಮೆಂದಿಂತು, ಸರ್ವೇಷಾಂ = ಎಲ್ಲರ್ಗಂ, ಸಮಾನಃ = ಸಮಾನಮಪ್ಪ, ಧರ್ಮಃ = ಧರ್ಮಂ || ಧರ್ಮಮನೆಲ್ಲರುಮಂ ನೆಗಳಲಕ್ಕುಮೆಂಬುದು ತಾತ್ಪರ್ಯಂ || ಈ ಯರ್ಥಮಂ ದೃಷ್ಟಾಂತದಿಂ ಪೇಳ್ವುದುತ್ತರಸೂತ್ರಂ :

ಆದಿತ್ಯಾಲೋಕವದ್ಧರ್ಮಃ ಸರ್ವೇಷಾಂ ಸಾಧಾರಣೋ ವಿಶೇಷಾನುಷ್ಠಾನೇ ತು ನಿಯಮಃ || ೧೪ || ೨೧೫ ||

ಅರ್ಥ : ಆದಿತ್ಯಾಲೋಕವತ್ = ಆದಿತ್ಯನ ಬೆಳಗಿನಂತೆ, ಧರ್ಮಃ = ಧರ್ಮಂ, ಖಲು = ನೆಟ್ಟನೆ, ಸರ್ವೇಷಾಂ = ಎಲ್ಲರ್ಗೆ, ತ್ರಿವರ್ಣಕ್ಕೆ, ಸಾಧಾರಣಃ = ಸಮಾನಂ, ವಿಶೆಷಾನುಷ್ಠಾನೇ = ವಿಶೇಷಮಂ ನೆಗಳ್ಪಲ್ಲಿ, ತು = ಮತ್ತೆ, ನಿಯಮಃ = ನಿಯಮಂ ತಂತಮ್ಮ ಜಾತ್ಯನುಸಾರಿಯಾಗಿಹುದು || ತಂತಮ್ಮ ಸಮಯದ ಅಂದರೆ ಉಪನಯನ ಗರ್ಭಾಧಾನಾದಿಗಳಲ್ಲಿ ನಿಯಮ ವಿಶೇಷದ ನೆಗಳ್ತೆ ಪೊಱಗಾಗಿ ಧರ್ಮಮೆಲ್ಲರ್ಗಂ ಸಮಾನಮೆಂಬುದು ತಾತ್ಪರ್ಯಂ || ಯತಿಗಳ್ಗೆ ವಿಶೇಷಧರ್ಮಮಂ ಪೇಳ್ದಪರು :

—-

೧೩. ಕ್ರೌರ್ಯವಿಲ್ಲದಿರುವಿಕೆ (ದಯಾಶೀಲತ). ಸುಳ್ಳು ಹೇಳದಿರುವುದು (ಸತ್ಯವಂತಿಕೆ). ಪರರೊಡವೆಗಳನ್ನು ಅಪಹರಿಸದಿರುವುದು. ಆಶೆಗಳನ್ನು ಹದ್ದಿನಲ್ಲಿಟ್ಟುಕೊಳ್ಳುವುದು. ಮೇಲಿನ ವರ್ಣದ ಸ್ತ್ರೀಯರನ್ನು ಮದುವೆಯಾಗದಿರುವುದು. ಬ್ರಹ್ಮಚರ್ಯ ಇವು ಎಲ್ಲರಿಗೂ ಸಮಾನ ಧರ್ಮ.

೧೪. ಸೂರ್ಯನ ಬೆಳಕಿನಂತೆ ಧರ್ಮವು ಎಲ್ಲರಿಗೂ ಸಮಾನ. ವಿಶಿಷ್ಟಾನುಷ್ಠಾನಗಳಲ್ಲಿ ನಿಯಮವು ತಂತಮ್ಮ ಜಾತ್ಯನುಸಾರವಾಗಿರುವುದು.

—-

ನಿಜಾಗಮೋಕ್ತಮನುಷ್ಠಾನಂ ಸರ್ವಯತೀನಾಂ ಸ್ವೋ ಧರ್ಮಃ || ೧೫ || ೨೧೬ ||

ಅರ್ಥ : ನಿಜಾಗಮೋಕ್ತಂ = ತನ್ನಾಗಮದೊಳ್ ಪೇಳ್ದ, ಅನುಷ್ಠಾನಂ = ನೆಗಳ್ತೆ, ಸರ್ವಯತೀನಾಂ = ಎಲ್ಲಾ ತಪಸ್ವಿಗಳ್ಗೆ, ಸ್ವ = ತಮ್ಮ, ಧರ್ಮಃ = ಧರ್ಮಂ || ಚತುಃಸಮಯದ ಯತಿವ್ರತಿಗಳುಂ ತಂತಮ್ಮ ಸಮಯಾಚಾರದೊಳು ನೆಗಳ್ಪುದೆಂಬುದು ತಾತ್ಪರ್ಯಂ || ತಂತಮ್ಮ ಸಮಯಾಚಾರಮ ನತಿಕ್ರಮಿಸಿದೊಡೆ ಪ್ರಾಯಶ್ಚಿತ್ತಂ ಪೇಳ್ವುದುತ್ತರವಾಕ್ಯಂ :

ಸ್ವಧರ್ಮವ್ಯತಿಕ್ರಮೇ[11] ಯತೀನಾಂ ಆತ್ಮಾಗಮೋಕ್ತಾನುಷ್ಠಾನಮೇವ[12] ಪ್ರಾಯಶ್ಚಿತ್ತಂ || ೧೬ || ೨೧೭ ||

ಅರ್ಥ : ಸ್ವಧರ್ಮವ್ಯತಿಕ್ರಮೇ = ತಂತಮ್ಮಾಚಾರಮಂ ಮೀಱಿದೊಡೆ, ಯತೀನಾಂ = ಯತಿಗಳ್ಗೆ, ಆತ್ಮಾಗಮೋಕ್ತಾನುಷ್ಠಾನ ಮೇವ = ತಂತಮ್ಮ ಆಗಮದೊಳ್ ಪೇಳ್ದ ಅನುಷ್ಠಾನಮೇ, ಪ್ರಾಯಶ್ಚಿತ್ತಂ = ಪ್ರಾಯಶ್ಚಿತ್ತಮುಂ || ತಂತಮ್ಮಾಗಮದೊಳ್ ಪೇಳ್ದ ಪ್ರಾಯಶ್ಚಿತ್ತಮಲ್ಲದೆ ಪೆಱತಂ ನೆಗಳಲಾಗದೆಂಬುದು ತಾತ್ಪರ್ಯಂ || ತಂತಮ್ಮ ಸಮಯದ ದೈವಂಗಳಂ ಪ್ರತಿಷ್ಠೆಯಂ ಮಾಳ್ಪುದೆಬುದಂ ಪೇಳ್ದಪರು :

ಯೋ ಯಸ್ಮಿನ್ ದೇವೇ[13] ಶ್ರದ್ಧಾವಾನ್ ಸ ತಂ ದೇವಂ ಪ್ರತಿಷ್ಠಾಪಯೇತ್ || ೧೭ || ೨೧೮ ||

ಅರ್ಥ : ಯಃ = ಆವನೋರ್ವಂ, ಯಸ್ಮಿನ್ ದೇವೇ = ಆವ ದೇವನೊಳಾದೊಡಂ, ಶ್ರದ್ಧಾವಾನ್ = ಭಕ್ತಿಯುಳ್ಳಂ, ಸಃ = ಆತಂ, ತಂ ದೇವಂ = ಆ ದೇವನಂ, ಪ್ರತಿಷ್ಠಾಪಯೇತ್ = ಪ್ರತಿಷ್ಠೆಗೈಯಲಕ್ಕುಂ || ಭಕ್ತಿಯಿಲ್ಲದೆ ಪ್ರತಿಷ್ಠೆಗೈಯಲಾಗದೆಂಬುದು ತಾತ್ಪರ್ಯಂ || ಪೂಜ್ಯರೊಳು ಭಕ್ತಿಯಂ ಸನ್ಮಾನಮುಮಂ ಮಾಡದಿರ್ದೊಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ಅಭಕ್ತಿತಃ ಪೂಜ್ಯೋಪಚಾರಃ[14] ಸದ್ಯಃಶಾಪಾಯ || ೧೮ || ೨೧೯ ||

ಅರ್ಥ : ಅಭಕ್ತಿತಃ = ಭಕ್ತಿಯಿಲ್ಲದೆ, ಪೂಜ್ಯೋಪಚಾರಃ = ಪೂಜ್ಯರೊಳುಪಚಾರಂ, ಸದ್ಯಃ = ಆಗಳೆ, ಶಾಪಾಯ = ದೋಷಕ್ಕೆ ಕಾರಣಂ || ಪೂಜ್ಯರೊಳು ಭಕ್ತಿಯಿಲ್ಲದಿರ್ದೊಡೆ ದೋಷಮಕ್ಕುಮೆಂಬುದು ತಾತ್ಪರ್ಯಂ || ವರ್ಣಾಶ್ರಮಂಗಳ್ಗೆ ಪ್ರಾಯಶ್ಚಿತಕ್ರಮಮಂ ಪೇಳ್ದುದುತ್ತರಸೂತ್ರಂ :

—-

೧೫. ಯತಿಗಳಿಗೆ ತಮ್ಮ ತಮ್ಮ ಆಗಮಗಳಲ್ಲಿ ವಿಧಿಸಲಾಗಿರುವ ಅನುಷ್ಠಾನವು ಧರ್ಮ.

೧೬. ಯತಿಗಳು ಧರ್ಮವಿರುದ್ಧ ಕಾರ್ಯಗಳನ್ನು ಮಾಡಿದರೆ ಅವರವರ ಆಗಮಗಳಲ್ಲಿ ವಿಧಿಸಿರುವ ಅನುಷ್ಠಾನವೇ ಪ್ರಾಯಶ್ಚಿತ್ತವು.

೧೭. ಯಾರಿಗೆ ಯಾವ ದೇವರಲ್ಲಿ ಭಕ್ತಿಯಿದೆಯೋ ಅವನು ಆ ದೇವರನ್ನು ಪ್ರತಿಷ್ಠಾಪಿಸಬೇಕು.

೧೮. ಭಕ್ತಿಯಿಲ್ಲದೆ ಪೂಜ್ಯರನ್ನು ಉಪಚರಿಸುವುದು ತೀವ್ರ ಶಾಪಕ್ಕೆ ಕಾರಣ.

—-

ವರ್ಣಾಶ್ರಮಾಣಾಂ ಸ್ವಾಚಾರಪ್ರಚ್ಯವೇ[15] ತ್ರಯಿತೋ ವಿಶುದ್ಧಿಃ || ೧೯ || ೨೨೦ ||

ಅರ್ಥಃ ವರ್ಣಾಶ್ರಮಾಣಾಂ = ವರ್ಣಾಶ್ರಮಂಗಳ್ಗೆ, ಸ್ವಾಚಾರಪ್ರಚ್ಯವೇ = ತಂತಮ್ಮಾಚಾರಮನತಿಕ್ರಮಿಸೆ, ತ್ರಯಿತಃ = ತ್ರಯಿ(ವೇದಾರ್ಥದಿಂದ)ಯತ್ತಣಿಂ, ವಿಶುದ್ಧಿಃ = ದೋಷದಿಲ್ಲಮೆ || ಆ ತ್ರಯಿಯಾದಿಗಳೊಳು ಪೇಳ್ದ ಪ್ರಾಯಶ್ಚಿತ್ತದಿಂ ಶುದ್ಧರಕ್ಕುಮೆಂಬುದು ತಾತ್ಪರ್ಯಂ || ಪ್ರಜೆಗಳ ತಂತಮ್ಮ ಧರ್ಮದೊಳ್ ನೆಗಳೆ ಪೇಳ್ಚುದುತ್ತರಸೂತ್ರಂ :

ಸ್ವಧರ್ಮಾಸಂಕರಃ ಪ್ರಜಾನಾಂ ರಾಜಾನಂ ತ್ರಿವರ್ಗೇಣೋಪಸಂಧತ್ತೇ || ೨೦ || ೨೨೧ ||

ಅರ್ಥ : ಪ್ರಜಾನಾಂ = ಪ್ರಜೆಗಳ, ಸ್ವಧರ್ಮಾಸಂಕರಃ = ತಂತಮ್ಮ ಧರ್ಮದೊಳ್ ಬೆಱಕೆಯಿಲ್ಲಮೆ, ರಾಜಾನಂ = ಅರಸನಂ, ತ್ರಿವರ್ಗೇಣ = ತ್ರಿವರ್ಗದೊಡನೆ, ಉಪಸಂಧತ್ತೇ = ಪೊರ್ದಿಸುಗೆ || ಪ್ರಜೆಗಳ್ ತಂತಮ್ಮಾಚಾರಮಂ ಮೀರದಿರಲು ತ್ರಿವರ್ಗಸಿದ್ಧಿಯೆಂಬುದು ತಾತ್ಪರ್ಯ || ಪ್ರಜೆಯ ಪ್ರತಿಪಾಲಿಸದರಸಂಗರಸುತನಮಲ್ಲೆಂಬುದುಂ ಪೇಳ್ವುದುತ್ತರಸೂತ್ರಂ :

ಸ ಕಿಂ ರಾಜಾ ಯೋ ನ ರಕ್ಷತಿ ಪ್ರಜಾಃ || ೨೧ || ೨೨೨ ||

ಅರ್ಥ : ಸಃ = ಆತಂ, ರಾಜಾ ಕಿಂ = ರಾಜನೇನು, ಯಃ = ಆವನೋರ್ವಂ, ಪ್ರಜಾಃ = ಪ್ರಜೆಗಳಂ, ನ ರಕ್ಷತಿ = ಕಾಯಂ || ಕ್ಷತ್ರಪುತ್ರಂ ಪ್ರಜೆಪರಿವಾರಮಂ ಕಾಯಲೆವೇಳ್ಕುಮೆಂಬುದು ತಾತ್ಪರ್ಯಂ || ಪ್ರಜೆಗಳ ದುರಾಚಾರಮನರಸು ನಿರಾಕರಿಸವೇಳ್ಕುಮೆಂಬುದುತ್ತರಸೂತ್ರಂ :

ಸ್ವಧರ್ಮಮತಿಕ್ರಮತಾಂ ಸರ್ವೇಷಾಂ ಪಾರ್ಥಿವೋ ಗುರುಃ || ೨೨ || ೨೨೩ ||

ಅರ್ಥ : ಸ್ವಧರ್ಮ = ತಮ್ಮ ತಮ್ಮ ಧರ್ಮಮಂ, ಅತಿಕ್ರಮತಾಂ = ಮೀಱುವ, ಸರ್ವೇಷಾಂ = ಎಲ್ಲರ್ಗಂ, ಪಾರ್ಥಿವಃ = ಅರಸಂ, ಗುರುಃ = ಗುರುವಪ್ಪಂ[16] || ಅರಸನೆ ದುಷ್ಟನಿಗ್ರಹಮಂ ಮಾಡವೇಳ್ಕುಮೆಂಬುದು ತಾತ್ಪರ್ಯಂ || ಪ್ರಜೆಯಂ ರಕ್ಷಿಸಲ್ ಪುಣ್ಯಮಂ ಪೇಳ್ವುದುತ್ತರಸೂತ್ರಂ :

—-

೧೯. ವರ್ಣಾಶ್ರಮಗಳಲ್ಲಿ ತಂತಮ್ಮಾ ಚಾರವನ್ನತಿಕ್ರಮಿಸಿದರೆ ತ್ರಯೀ (ವೇದಗಳಲ್ಲಿ) ಯಲ್ಲಿ ಹೇಳಿರುವ ರೀತಿಯಲ್ಲಿ ನಡೆದರೆ ವಿಶುದ್ಧಯಾಗುತ್ತದೆ.

೨೦. ಪ್ರಜೆಗಳು ತಮ್ಮ ತಮ್ಮ ಧರ್ಮಗಳನ್ನು ಸಂಕರವಾಗದಂತೆ ನೋಡಿಕೊಂಡರೆ ರಾಜನು ತ್ರಿವರ್ಗ (ಧರ್ಮಾರ್ಥಕಾಮಗಳ) ಸಿದ್ಧಿಯನ್ನು ಹೊಂದುತ್ತಾನೆ.

೨೧. ಪ್ರಜೆಗಳನ್ನು ರಕ್ಷಿಸದವನು ರಾಜನೇ?

೨೨. ತಮ್ಮ ತಮ್ಮ ಧರ್ಮವನ್ನು ಮೀರುವವರೆಲ್ಲರಿಗೂ ರಾಜನೇ ಗುರು. (ಧರ್ಮಾತಿಕ್ರಮವನ್ನು ತಡೆಯುವುದು ರಾಜನ ಕರ್ತವ್ಯ).

—-

ಪ್ರಜಾಪರಿಪಾಲಕೋ[17] ಹಿ ರಾಜಾ ಸರ್ವೇಷಾಂ ಧರ್ಮಷಷ್ಠಾಂಶಮ ವಾಪ್ನೋತಿ || ೨೩ || ೨೨೪ ||

ಅರ್ಥ : ಪ್ರಜಾಪರಿಪಾಲಕಃ = ಪ್ರಜೆಯಂ ರಕ್ಷಿಸುವಂ, ರಾಜಾ = ಅರಸಂ, ಹಿ = ನೆಟ್ಟನೆ, ಸರ್ವೇಷಾಂ = ಎಲ್ಲರ, ಧರ್ಮಷಷ್ಠಾಂಶಂ = ಧರ್ಮದಾಱನೆಯ ಭಾಗಮಂ, ಅವಾಪ್ನೋತಿ = ಎಯ್ದುವಂ || ಪ್ರಜೆಯಂ ಪರಿವಾರಮಂ ರಕ್ಷಿಸದಂಗೆ ಪುಣ್ಯಮಿಲ್ಲೆಂಬುದು ತಾತ್ಪರ್ಯ || ಅದಕ್ಕೆ ಸಂವಾದಮಂ ತೋಱಿ ಪೇಳ್ವುದುತ್ತರವಾಕ್ಯದ ಪಾತನಿಕೆ :

ತದಾಹ ವೈವಸ್ವತೋ ಮನುಃ

ತತ್ = ಅದನು, ಆಹ = ಪೇಳ್ದ, ವೈವಸ್ಥತಃ = ವೈವಸ್ಥತನೆಂಬ, ಮನುಃ = ಮನು ||

[18]ಉಂಛಷಡ್ಭಾಗಪ್ರದಾನೇನ ವನಸ್ಥಾ ಅಪಿ ತಪಸ್ವಿನೋsಪಿ ರಾಜಾನಂ ಸಂಭಾವಯಂತಿ ಯೋsಸ್ಮಾನ್ ಗೋಪಾಯತಿ ತಸ್ಮೈ ತದ್ಭೂಯಾದಿತಿ ||

ಅರ್ಥ : ಉಂಛಷಡ್ಭಾಗಪ್ರದಾನೇನ = (ಹೊಡಹುಲ್ಲ ಭತ್ತದಾರನೆಯ ಭಾಗದೊಳೊಂದು ಭಾಗಮನು ಕೊಡುವುದಱಿಂದ) ಭತ್ತಮಂ ಮಿದಿವಲ್ಲಿ ಸಿಡಿಯಕ್ಕಿಯನಾಯ್ದುಕೊಳ್ವಲ್ಲಿನಿತು ಭಿಕ್ಷೆಯಾಱನೆಯ ಭಾಗಮಂ, ಅಥವಾ ದೂಸೆಯಕ್ಕಿಯಾಱನೆಯ ಭಾಗಮಂ ಕೊಡುವುದಱಿಂ, ವನಸ್ಥಾ = ಅಡವಿಯೊಳಿರ್ಪ, ತಪಸ್ವಿನೋsಪಿ = ಯತಿಗಳುಂ, ರಾಜಾನಂ = ಅರಸನಂ, ಸಂಭಾವಯಂತಿ = ಮನ್ನಿಪರು, ಯಃ = ಆವನೋರ್ವಂ, ಅಸ್ಮಾನ್ = ಎಮ್ಮಂ, ಗೋಪಾಯತಿ = ರಕ್ಷಿಸುವಂ, ತಸ್ಯ = ಆತಂಗೆ, ಏತತ್ = ಈ ಪುಣ್ಯ, ಭೂಯಾದಿತಿ = ಅಕ್ಕುಮೆಂದು || ಪ್ರಜಾಪರಿಪಾಲನದಿಂದವಶ್ಯಂ ಪುಣ್ಯಮಕ್ಕುಮೆಂಬುದಭಿಪ್ರಾಯಂ || ಮನದೆಱಕಮುಳ್ಳಲ್ಲಿ ಭಕ್ತಿಯಂ ಮಾಡವೇಳ್ಕುಮೆಂಬು ದುತ್ತರಸೂತ್ರಂ :

—-

೨೩. ಪ್ರಜೆಗಳನ್ನು ರಕ್ಷಿಸುವ ರಾಜನು ಪ್ರಜೆಗಳೆಲ್ಲರ ಧರ್ಮದ ಆರನೆಯ (ಒಂದು) ಭಾಗವನ್ನು ಪಡೆಯುವನು. ಇದು ನಮ್ಮ ರಕ್ಷಕನಿಗೆ ಸೇರಲಿ ಎಂದು ವನಗಳಲ್ಲಿರುವವರು, ತಪಸ್ವಿಗಳೂ ಕೂಡ ಉಂಛದ ಆರನೆಯ ಒಂದು ಭಾಗವನ್ನು ಸೇರಲಿ ಎಂದು ವನಗಳಲ್ಲಿರುವವರು, ತಪಸ್ವಿಗಳೂ ಕೂಡ ಉಂಛದ ಆರನೆಯ ಒಂದು ಭಾಗವನ್ನು ರಾಜನಿಗೆ ಕೊಟ್ಟು ಗೌರವಿಸುತ್ತಾರೆ. ಹೊಲಗದ್ದೆಗಳಲ್ಲಿ ಬೆಳೆಕೊಯ್ದವರು ಬಿಟ್ಟ ಧಾನ್ಯದ ತೆನೆಗಳನ್ನು ಕಾಳುಗಳನ್ನು ಆಯ್ದುಕೊಂಡದ್ದು ಅಥವಾ ಭಿಕ್ಷೆಯಿಂದ ತಂದ ಧಾನ್ಯವು ಉಂಛವು.

—-

ತದಮಂಗಲಮಪಿ ನಾಮಂಗಲಂ ಯತ್ತಾಸ್ತ್ಯಾತ್ಮ ನೋ ಭಕ್ತಿಃ || ೨೪ || ೨೨೫ ||

ಅರ್ಥ : ತತ್ = ಅದು, ಅಮಂಗಲಮಪಿ = ಅಮಂಗಲಮಾಗಿಯುಂ, ನಾಮಂಗಲಂ = ಅಮಂಗಲಮಲ್ಲ, ಯತ್ರ = ಆವುದೊಂದಱೊಳು, ಆತ್ಮನಃ = ತನಗೆ, ಭಕ್ತಿಃ = ಭಕ್ತಿಯು, ಅಸ್ತಿ = ಉಂಟು || ತಂತಮ್ಮಿಷ್ಟದೈವಂಗಳನಾರಾಧಿಸಲ್ವೇಳ್ಕುಮೆಂಬುದಭಿಪ್ರಾಯಂ || ವ್ರತಿಗಳುಮಂ ಪಿರಿಯರುಮಂ ಪೊರ್ದೆದೋಲಗಿಸುವುದೆಂದು ಪೇಳ್ವುದುತ್ತರಸೂತ್ರಂ :

ಸನ್ಯಸ್ತಾನಗ್ನಿಪರಿಗ್ರಹಾನಸ್ಪೃಶನ್[19]ಉಪಾಸೀತ || ೨೫ || ೨೨೬ ||

ಅರ್ಥ : ಸನ್ಯಸ್ತ = ಯತಿಗಳುಂ, ಅಗ್ನಿಪರಿಗ್ರಹಾನ್ = ಅಗ್ನಿಹೋತ್ರಿಯರುಮಂ, ಅಸ್ಪೃಶನ್ = ಮುಟ್ಟಿದೆ, ಉಪಾಸೀತ = ಓಲೈಸುಗೆ || ಶುಚಿಗಳನುಶುಚಿತ್ವದಿಂ ಮುಟ್ಟಲಾಗದೆಂಬುದು ತಾತ್ಪರ್ಯಂ ||

ಸ್ನಾತ್ವಾ ಆದೇವೋಪಾಸನಾನ್ನ ಕಂಚನ ಸ್ಪೃಶೇತ್ || ೨೬ || ೨೨೭ ||

ಅರ್ಥ : ಸ್ನಾತ್ವಾ = ಮಿಂದು, ಆದೇವೋಪಾಸನಾತ್ = ದೇವರನಾರಾಧಿಪನ್ನೆವರಂ, ಕಂಚನ = ಆವನಂ, ನ ಸ್ಪೃಶೇತ್ = ಮುಟ್ಟದಿರ್ಕೆ || ದೇವತಾರಾಧನೆಯಮಂ ಮಾಳ್ಪನ್ನೆವರಂ ಪೆಱರಂ ಮುಟ್ಟಲಾಗದೆಂಬುದು ತಾತ್ಪರ್ಯಂ || ದೇವಾಗಾರಮಂ ಪೊಕ್ಕು ಮಾಳ್ಪ ಪ್ರಯೋಜಮಂ ಪೇಳ್ವುದುತ್ತರಸೂತ್ರಂ :

ದೇವಗಾರಗತಃ ಸರ್ವಾನ್ಯತೀನಾತ್ಮಸಂಬಂಧಿನೀಶ್ಚ ಜರತೀಃ ಪಶ್ಯೇತ್ || ೨೭ || ೨೨೮ ||

ಅರ್ಥ : ದೇವಾಗಾರಗತಃ = ದೇಹಾರದ ಮನೆಗೆ ಪೋಗಿ ದೇವರಂ ಕಂಡಿಂ ಬಳಿಕ್ಕೆ, ಸರ್ವಾನ್ = ಎಲ್ಲಾ, ಯತೀನ್ = ಯತಿಗಳಂ, ಆತ್ಮಸಂಬಂಧಿನೀಶ್ಚ = ತಮ್ಮ ಸಂಬಂಧಿಗಳಪ್ಪ, ಜರತೀಃ = ವೃದ್ಧೆಯರುಮಂ, ಪಶ್ಯೇತ್ = ಪೊಡಮಡುಗೆ || ವಂದ್ಯರನುದಾಸೀನಂ ಮಾಡಲಾಗದೆಂಬು ದಭಿಪ್ರಾಯಂ ||

—-

೨೪. ಎಲ್ಲಿ ತನಗೆ ಭಕ್ತಿ ಉಂಟೋ ಅದು ಅಮಂಗಲವಾದರೂ ಅಮಂಗಲವಲ್ಲ. (ತಮ್ಮ ತಮ್ಮ ಇಷ್ಟ ದೈವಗಳನ್ನು ಆರಾಧಿಸಬೇಕೆಂಬುದು ಅಭಿಪ್ರಾಯ).

೨೫. ಯತಿಗಳನ್ನೂ ಅಗ್ನಿಹೋತ್ರಿಗಳನ್ನೂ ಮುಟ್ಟದೆ ಓಲೈಸಬೇಕು.

೨೬. ಸ್ನಾನಾನಂತರ ದೇವತಾರಾಧನೆಯಾಗುವವರೆಗೂ ಯಾರನ್ನೂ ಮುಟ್ಟಕೂಡದು.

೨೭. ದೇವರ ಮನೆಯಿಂದ ಬಂದು ಯತಿಗಳನ್ನು ಸಂಬಂಧಿಗಳನ್ನು, ವೃದ್ಧೆಯರನ್ನು ಕಾಣಬೇಕು.

—-

ದೇವಾಕಾರೋಪೇತಃ ಪಾಷಾಣೋಪಿ ನಾವಮಂತವ್ಯಃ ಕಿಂ ಪುನರ್ನ ಮನುಷ್ಯಃ[20]|| ೨೮ || ೨೨೯ ||

ಅರ್ಥ : ದೇವಾಕಾರೋಪೇತಃ = ದೇವತಾಕಾರದೊಡನೆ ಕೂಡಿದ, ಪಾಷಾಣಮಪಿ = ಕಲ್ಲಾದೊಡೆಯುಂ, ನಾವಮಂತವ್ಯಃ = ಮನ್ನಿಸಲ್ಪೇಕಾದುದು, ಮನುಷ್ಯಃ = ಮನುಷ್ಯನು, ಕಿಂ ಪುನರ್ನ = ಮನ್ನಿಸಲ್ಪೇಕಾದಾತನಲ್ಲವೆಯೇನು ||

ರಾಜಶಾಸನಮೃತ್ತಿಕಾಯಾಮಿವ ಕೋ ನಾಮ ಲಿಂಗಿಷು ವಿಚಾರಃ || ೨೯ || ೨೩೦ ||

ಅರ್ಥ : ರಾಜಶಾಸನಮೃತ್ತಿಕಾಯಾಮಿವ = ರಾಜಮುದ್ರೆಯಂ ಮಣ್ಣಿನಲ್ಲಿ ಹೆಂಗೆ ಹಾಂಗೆ, ಲಿಂಗಿಷು = ಲಿಂಗಿಗಳಲ್ಲಿ, ನಾಮ = ನಿಶ್ಚಯದಿಂದ, ಕಃ = ಆವ, ವಿಚಾರಃ = ವಿಚಾರವು ||

ಯತ್ ಸ್ವಯಂ ಮಲಿನೋsಪಿ ಖಲಃ ಪ್ರವರ್ಧಯತ್ಯೇವ ಕ್ಷೀರಂ ಧೇನೂನಾಂ || ೩೦ || ೨೩೧ ||

ಅರ್ಥ : ಯತ್ = ಆವುದೊಂದು ಕಾರಣಮಾಗಿ, ಸ್ವಯಂ = ತಾಣು, ಮಲಿನೋsಪಿ = ಮಲಿನವಾದಡೆಯೂ, ಖಲಃ = ಹಿಂಡಿ, ಧೇನೂನಾಂ = ಆಕಳಿಗೆ, ಕ್ಷೀರಂ = ಹಾಲನು, ಪ್ರವರ್ಧಯತ್ಯೇವ = ಪೆರ್ಚಿಸುವುದೇ ||

ನ ಖಲು ಪರೇಷಾಮಾಚಾರಃ ಸ್ವಸ್ಯ ಪುಣ್ಯಮಾರಭತೇ ಕಿಂತು ಮನೋವಿಶುದ್ಧಿಃ || ೩೧ || ೨೩೨ ||

ಅರ್ಥ : ಪರೇಷಾಂ = ಲೋಗರ, ಆಚಾರಃ = ಆಚಾರಮುಂ, ಸ್ವಸ್ಯ = ತನಗೆ, ಪುಣ್ಯಂ = ಪುಣ್ಯಮನು, ಖಲು = ಸ್ಫುಟವಾಗಿ, ನ ಆರಭತೇ = ಮಾಡದು, ಕಿಂತು = ಮತ್ತೇನೆಂದಡೆ, ಮನೋವಿಶುದ್ಧಿಃ = ಮನಸ್ಸಿನ ಶುದ್ಧಿಯೇ ಪುಣ್ಯಕ್ಕೆ ಕಾರಣವು || ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾದಿಗಳ ಸ್ವಭಾವಮಂ ಪೇಳ್ವುದುತ್ತರವಾಕ್ಯಂ :

ದೀನಾ ಪ್ರಕೃತಿಃ ಪ್ರಾಯೇಣ ಬ್ರಾಹ್ಮಣಾನಾಂ || ೩೨ || ೨೩೩ ||

ಅರ್ಥ : ದೀನಾ ಪ್ರಕೃತಿ = ದೈನ್ಯಸ್ವಭಾವಂ, ಪ್ರಾಯೇಣ = ಪ್ರಚುರದಿಂ, ಬ್ರಾಹ್ಮಣಾನಾಂ = ಬ್ರಾಹ್ಮಣರ್ಗೆ ||

—-

೨೮. ದೇವರ ಆಕಾರವನ್ನು ಹೊಂದಿದ ಕಲ್ಲನ್ನು ಪೂಜಿಸುತ್ತಿರುವಾಗ ಮನುಷ್ಯರನ್ನೇಕೆ ಮನ್ನಿಸಬಾರದು?

೨೯. ರಾಜಮುದ್ರೆಯು ಮಣ್ಣಿನ ಮೇಲೆ ಹೇಗೊ ಹಾಗೆ ಸನ್ಯಾಸಿಗಳ ಮೇಳೆ ರಾಜಶಾಸನ ನಡೆಯುವುದಿಲ್ಲ>

೩೦. ತಾನು ಮಲಿನವಾದರೂ ಹಿಂಡಿಯು ಹಸುವಿನ ಬಿಳಿಯದಾದ ಹಾಲನ್ನು ಹೆಚ್ಚಿಸುವುದಲ್ಲವೆ?

೩೧. ಇತರರ ಆಚಾರವು ತನಗೆ ಪುಣ್ಯವನ್ನುಂಟು ಮಾಡದು, ಮನಸ್ಸಿನ ಶುದ್ಧಿಯೇ ಪುಣ್ಯಕ್ಕೆ ಕಾರಣ.

೩೨. ಸಾಧಾರಣವಾಗಿ ಬ್ರಾಹ್ಮಣರ ಸ್ವಭಾವವು ಸೌಮ್ಯವಾದದ್ದು.

—-

ಬಲಾತ್ಕಾರಸ್ವಭಾವಃ ಕ್ಷತ್ರಿಯಾಣಾಂ || ೩೩ || ೨೩೪ ||

ಅರ್ಥ : ನಿಸರ್ಗತಃ = ಸ್ವಭಾವದಿಂ, ಶಾಠ್ಯಂ = ಕಪಟ, ವಕ್ರತ್ವ, ಕಿರಾಟಕಾನಾಂ = ಪರದರ್ಗೆ ||

ಋಜುವಕ್ರಶೀಲತಾ ಸಹಜಾ ಕೃಷೀವಲಾನಾಂ || ೩೫ || ೨೩೬ ||

ಅರ್ಥ : ಋಜುವಕ್ರಶೀಲತಾ = ಋಜುವುಂ ಕುಟಿಲಮುಮಪ್ಪ ಸ್ವಭಾವಂ, ಸಹಜಾ = ಒಡಹುಟ್ಟಿದುದು, ಕೃಷೀವಲಾನಾಂ = ಶೂದ್ರರ್ಗೆ || ಪ್ರಚುರದಿಂ ತಂತಮ್ಮ ಸ್ವಭಾವಮಂ ಬಿಡದೆ ವರ್ತಿಸುವರೆಂಬುದು ತಾತ್ಪರ್ಯಂ || ವರ್ಣಾಶ್ರಮಂಗಳ ಕೋಪಮಂ ಮಗ್ಗಿಸುವುಪಾಯಮಂ ಪೇಳ್ವುದುತ್ತರವಾಕ್ಯಚತುಷ್ಟಯಂ :

ದಾನಾವಸಾನಃ ಕೋಪೋ ಬ್ರಾಹ್ಮಣಾನಾಂ || ೩೬ || ೨೩೭ ||

ಅರ್ಥ : ದಾನಾವಸಾನಃ = ಕೊಡುವುದನು ಕಡೆಯಾಗುಳ್ಳ, ಕೋಪಃ = ಕೋಪಃ = ಕೋಪಂ, ಬ್ರಾಹ್ಮಣಾನಾಂ = ಬ್ರಾಹ್ಮಣರ್ಗೆ ||

ಪ್ರಣಾಮಾವಸಾನಃ ಕೋಪೋ ಗುರೂಣಾಂ || ೩೭ || ೨೩೮ ||

ಅರ್ಥ : ಪ್ರಣಾಮಾವಸಾನಃ = ಪೊಡಮಡುವುದಂ ಕಡೆಯಾಗುಳ್ಳುದು, ಕೋಪಃ = ಕೋಪಂ, ಗುರೂಣಾಂ = ಗುರುಗಳ್ಗೆ ||

ಪ್ರಾಣಾವಸಾನಃ ಕೋಪೋ ಕ್ಷತ್ರಿಯಾಣಾಂ || ೩೮ || ೨೩೯ ||

ಅರ್ಥ : ಪ್ರಾಣಾವಸಾನಃ = ಕೊಲ್ವುದಂ (ಪ್ರಾಣವನೆ) ಕಡೆಯಾಗುಳ್ಳುದು, ಕೋಪಃ = ಕೋಪಂ, ಕ್ಷತ್ರಿಯಾಣಾಂ = ಕ್ಷತ್ರಿಯರ್ಗೆ ||

—-

೩೩. ಬಲಪ್ರಯೋಗವು ಕ್ಷತ್ರಿಯರ ಸ್ವಭಾವ.

೩೪. ವೈಶ್ಯರು ಸ್ವಭಾವದಿಂದ ಕಪಟಿಗಳು.

೩೫. ಋಜುವೂ ಕುಟಿಲವೂ ಆದ ಸ್ವಭಾವವು ಒಕ್ಕಲಿಗರದು.

೩೬. ಬ್ರಾಹ್ಮಣರ ಕೋಪವು ದಾನದಿಂದ ಇಳಿಯುವದು.

೩೭. ಗುರುಗಳ (ಹಿರಿಯರ) ಕೋಪವು ನಮಸ್ಕಾರದಿಂದ ಕೊನೆಗೊಳ್ಳುವುದು.

೩೮. ಕ್ಷತ್ರಿಯರ ಕೋಪಕ್ಕೆ ಕೊಲ್ಲುವುದೇ ಕೊನೆ.

—-

ಪ್ರಿಯವಚನಾವಸಾನಃ ಕೋಪೋ ವಣಿಜಾಂ[21]|| ೩೯ || ೨೪೦ ||

ಅರ್ಥ : ಪ್ರಿಯವಚನಾವಸಾನಃ = ಪ್ರಿಯವಚನಂ ಕಡೆಯಾಗುಳ್ಳದು, ಕೋಪಃ = ಕೋಪಂ, ವಣಿಜಾಂ = ಪರದರ್ಗೆ || ಉಪಚಾರದಿಂ ಕೋಪಶಮನೋಪಾಯಮೆಂಬುದೀ ನಾಲ್ಕಱ ತಾತ್ಪರ್ಯಂ || ಪರದರ್ಸುಖೋಪಾಯದಿಂ ಪಡೆವುಪಾಯಮಂ ಪೇಳ್ವುದುತ್ತರವಾಕ್ಯಂ :

ವಿಶ್ವಸ್ತೈಶ್ಚಿರ[22]ಪರಿಚಿತೈಶ್ಚ ಸಹ ವ್ಯವಹಾರೋ ವಣಿಜಾಂ ನಿಧಿಃ || ೪೦ || ೨೪೧ ||

ಅರ್ಥ : ವಿಶ್ವಸ್ತೈಃ = ನಂಬಿದವರ್ಗಳ, ಚಿರಪರಿಚಿತೈಶ್ಚ = ಪಲಕಾಲಮಱಿವವರ್ಗಳ, ಸಹ = ಒಡನೆ, ವ್ಯವಹಾರಃ = ವ್ಯವಹಾರಂ, ವಣಿಜಾಂ = ಪರದರ್ಗೆ, ನಿಧಿಃ = ನಿಧಿಯು || ಪರದರ್ಗೆ ನಂಬದವರಂ ನಂಬಿಸುವುದು ಸ್ವಭಾವಮೆಂಬುದು ತಾತ್ಪರ್ಯಂ || ಶೂದ್ರಾದಿ ವರ್ಣಂಗಳಂ ನಿಯಮಿಸುವುಪಾಯಮಂ ಪೇಳ್ವುದತ್ತರವಾಕ್ಯಂ :

ದಂಡಭಯೋಪದಿ[23] ವಶೀಕರಣಂ ನೀಚಾನಾಂ || ೪೧ || ೨೪೨ ||

ಅರ್ಥ : ದಂಡಭಯೋಪದಿ = ದಂಡ (ತನು-ಧನದಂಡ)ಮುಂ, ಭಯಮುಮಂ ಮಾಳ್ಪುದು, ವಶೀಕರಣಂ = ವಶಕ್ಕೆ ಬರಿಸುವುದುಪಾಯಂ, ನೀಚಾನಾಂ = ನೀಚರ್ಗೆ || ನೀಚರ್ದಂಡಭಯಂಗಳಿಲ್ಲದೆ ವಶಕ್ಕೆ ಬಾರರೆಂಬುದು ತಾತ್ಪರ್ಯಂ ||

ಇತಿ ತ್ರಯೀಸಮುದ್ದೇಶಃ || ||[24]

ಈ ಸಮುದ್ದೇಶದ ವಾಕ್ಯಂಗಳು || ೪೧ || ಒಟ್ಟು || ೨೪೨ ||

—-

೩೯. ವರ್ತಕರ ಕೋಪವು ಪ್ರಿಯವಾದ ಮಾತುಗಳಿಂದ ಇಳಿಯುವುದು.

೪೦. ನಂಬಿಗೆಯ. ಚಿರಪರಿಚಿತರೊಡನೆ ವ್ಯವಹಾರವು ವರ್ತಕರಿಗೆ ನಿಧಿ ಇದ್ದಂತೆ.

೪೧. ದಂಡದಿಂದ ಭಯಪಡಿಸುವುದು ನೀಚರನ್ನು ವಶಪಡಿಸಿಕೊಳ್ಳುವ ವಿಧಾನವು.

—-

 

[1]ಮೂರು ಪ್ರತಿಗಳಲ್ಲಿ ಅಲ್ಪ ಸ್ವಲ್ಪ ಪಾಠಭೇದಗಳಿದ್ದು ಶಬ್ದಗಳು ಹಿಂದು ಮುಂದಾಗಿವೆ. ಮೈ. ಚೌ ಗಳಲ್ಲಿ ಧರ್ಮಶಾಸ್ತ್ರದ ಹೆಸರಿದೆ, ನಮ್ಮ ಹಸ್ತಪ್ರತಿಯಲ್ಲಿಲ್ಲ. ನಮ್ಮ ಹಸ್ತಪ್ರತಿಯಲ್ಲಿ ಛಂಧೋವಿಚಿತಿ ಎಂದಿದೆ.

[2]ಮೂರು ಪ್ರತಿಗಳಲ್ಲಿ ಬೇರೆ ಬೇರೆ ಪಾಠಗಳಿದ್ದು, ಅರ್ಥವು ಬೇರೆಯಾಗಿದೆ. ತಮ್ಮ ತಮ್ಮ ಮತ ಧರ್ಮಗಳಲ್ಲಿ ಅನುರುಕ್ತರಾಗಿ ಲೌಕಿಕ ಅಂದರೆ ರಾಜಕಾರಣದ ವ್ಯವಹಾರದಲ್ಲಿ ತೊಡಗಬಹುದೆಂಬುದು, ಮೈ. ಚೌ. ಗಳ ವಾಕ್ಯದ ಆಶಯವಾದರೆ ಸ್ವಪಕ್ಷಗಳಲ್ಲಿ ಆಸಕ್ತರಾದವರು ಲೌಕಿಕ ವ್ಯವಹಾರಕ್ಕೆ ತಕ್ಕವರಲ್ಲ ಎಂಬ ಅಭಿಪ್ರಾಯ ನಮ್ ಪ್ರತಿಯಲ್ಲಿಯ ವಾಕ್ಯದ್ದಾಗಿದೆ. ಒಂದೊಂದು ಮತಕ್ಕೆ ಕಟ್ಟು ಬಿದ್ದವರು ಸರಿಯಾದ ಮಾರ್ಗದರ್ಶನ ಮಾಡಲಾರರೆಂಬುದು ಟೀಕಾಕಾರನ ಅಭಿಪ್ರಾಯವಾಗಿದೆ.

[3]ಮೈ., ಜ. ಸಂಗ್ರಹರೂಪತ್ವಾತ್.

[4]ಮೈ. ಜಿ: ಬ್ರಹ್ಮಕ್ಷತ್ರಿಯವಿಶಾಂ, ಚೌ: ವಿಪ್ರಕ್ಷತ್ರಿಯವೈಶ್ಯಾನಾಂ.

[5]ಮೈ. ಬ್ರಹ್ಮಕ್ಷತ್ರಿಯವಿಶಿಃ. ಮೊದಲ ಮೂರು ವರ್ಣಗಳು ದ್ವಿಜರೆಂದು ಕರೆಯಲ್ಪಡುತ್ತವೆಂಬುದು ವಾಕ್ಯದ ಅರ್ಥವಾದರೂ ಟೀಕಾಕಾರನು ತ್ರಿವರ್ಣಗಳು ಜನನದಿಂ ಶೂದ್ರರು. ಕ್ರಿಯೆಯಿ ದ್ವಿಜರೆಂದು ಹೇಳುವುದು ವಿಶೇಷವಾಗಿದೆ. ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ ಎಂಬ ಮಾತನ್ನು ನೆನೆಯಬಹುದು.

[6]ಮೈ., ಚೌಃ ಶಸ್ತ್ರಾಜೀವನಃ.

[7]ಆವೇಶಿಕ ಅಂದರೆ ಅತಿಥಿ, ಟೀಕಾಕಾರನು ಈ ಅರ್ಥವನ್ನು ಕೊಟ್ಟಿದ್ದಾನಲ್ಲದೆ ಲಿಂಗ ಎಂಬ ಇನ್ನೊಂದು ಅರ್ಥವನ್ನೂ ಕೊಟ್ಟಿದ್ದಾನೆ. ಸನ್ಯಾಸಿ ಎಂಬ ಅರ್ಥದಲ್ಲಿ.

[8]ಮೈ. ಪುಣ್ಯಾರಾಮಾದಿನಿರ್ಮಾಪಣಂ ಚೌ. ಪುಣ್ಯಾರಾಮದಯಾದಾನಾದಿ ನಿರ್ಮಾಪಣಂ.

[9]ಮೈ., ಚೌ., ಜ. ಕಾರಕುಶೀಲವಕರ್ಮ ಶಕಟೋಪವಾಹನಂ ಚ. ಈ ಪಾಠಭೇದಗಳಿಂದಾಗಿ ವಾಕ್ಯದ ಅರ್ಥದಲ್ಲಿಯೂ ಬಹಳಷ್ಟು ಭೇದವಿದೆ.

[10]ಉಪಸ್ಕಾರ ಎಂಬ ಪದಕ್ಕೆ ಸಂಸ್ಕಾರ ಎಂಬ ಹೊಸ ಅರ್ಥವನ್ನು ಟೀಕಾಕಾರ ಕೊಟ್ಟಿದ್ದಾನೆ.

[11]ಮೈ. ಧರ್ಮವ್ಯತಿಕ್ರಮೇ.       ಚೌ. ಸ್ವಧರ್ಮವ್ಯತಿಕ್ರಮೇಣ.

[12]ಮೈ. ನಿಜಾಗಮೋಕ್ತಮೇವ. ಚೌ. ಸ್ವಾಗಮೋಕ್ತಂ.

[13]ಮೈ. ಯೋ ಯಸ್ಯ ದೇವಸ್ಯ ಭವೇತ್

[14]ಮೈ. ಅಭಕ್ತೈಃ ಕೃತಃ ಪೂಜೋಪಚಾರಃ. ಚೌ. ಅಭಕ್ತ್ಯಾ ಪೂಜೋಪಚಾರಃ. ಟೀಕಾಕಾರನು ಪೂಜ್ಯೋಪಚಾರ ಎಂಬುದನ್ನು ಪೂಜ್ಯರಲ್ಲಿ ಭಕ್ತಿಯಿರುವುದು ಎಂದು ವಿವರಿಸಿದ್ದಾನೆ.

[15]ಮೈ. ಸ್ವಾಚಾರಪ್ರಚ್ಯುತಾ;  ಚೌ. ಸ್ವಾಚಾರ ಪ್ರಚ್ಯವನೇ.

[16]ಗುರು ಎಂಬ ಶಬ್ದವನ್ನು ದುಷ್ಟನಿಗ್ರಹ ಮಾಡುವವನು ಎಂದು ಟೀಕಾಕಾರನು ವಿವರಿಸಿದ್ದನ್ನು ಗಮನಿಸಬೇಕು.

[17]ಮೈ. ಚೌ. ಪ್ರಜಾ ಎಂಬ ಶಬ್ದವಿಲ್ಲ.

[18]ಮೈ. ದಲ್ಲಿ ಇದು ಪ್ರತ್ಯೈಕ ವಾಕ್ಯವಾಗಿದೆ. ಚೌ. ದಲ್ಲಿ ಇದು ಪಾಠಾಂತರಗಳೊಂದಿಗೆ ಎರಡಾಗಿ ವಿಭಜಿಸಲ್ಪಟ್ಟಿದೆ.

[19]ಮೈ. ಸನ್ಯಸ್ಯಾಗ್ನಿಂ ಅಗ್ನಿಪರಿಗೃಹಾಂ. ಚೌ. ಸನ್ಯಸ್ಯಾಗ್ನಿಂ ಪರಿಗ್ರಹಾನುಪಾಸೀತ.

[20]ಈ ಮತ್ತು ಮುಂದಿನ ಮೂರು ವಾಕ್ಯಗಳು ಚೌ. ದಲ್ಲಿ ಒಂದರಲ್ಲೇ ಅಡಕವಾಗಿವೆ.

[21]ಮೈ., ಚೌ. ವಣಿಗ್ಜನಾನಾಂ. ಈ ವಾಕ್ಯದ ನಂತರ ಚೌ. ದಲ್ಲಿ ಈ ಹೆಚ್ಚಿನ ವಾಕ್ಯವಿದೆ: ವೈಶ್ಯಾನಾಂ ಸಮುದ್ಧಾರಕಪ್ರದಾನೇನ ಕೋಪೋಪಶಮಃ.

[22]ಮೈ. ವಿಸ್ವಸ್ತೈಃ ಸಹ ವ್ಯವಹಾರಃ

[23]ಮೈ. ದಂಡಭಯೋಪದಿಭಿಃ

[24]ಇದು ೭ ಎಂದಿರಬೇಕು.