ವಾರ್ತೆಯೆಂಬ ಮೂಱನೆಯ ರಾಜವಿದ್ಯೆಯಂ ಪೇಳ್ವುದುತ್ತರಸೂತ್ರಂ :

ಕೃಷಿಪಾಶುಪಾಲ್ಯೇ ವಾಣಿಜ್ಯಾ ಚ ವಾರ್ತಾ || || ೨೪೩ ||

ಅರ್ಥ : ಕೃಷಿ = ಆರಂಭಮುಂ, ಪಾಶುಪಾಲ್ಕೇ = ಜೀವಧನಂಗಳನಾಳ್ವುದುಮೆಂಬಿವು, ವಾಣಿಜ್ಯಾ ಚ = ಪರದುಗೈಯ್ವುದುಂ, ವಾರ್ತಾ = ವಾರ್ತೆ ಎಂಬುದು || ವಾರ್ತೆಯ ಫಲಮಂ ಪೇಳ್ವುದುತ್ತರವಾಕ್ಯಂ :

ವಾರ್ತಾಸಮೃದ್ಧೌ ಹಿ ಸರ್ವಾಃ ಸಮುಋದ್ಧಯಃ[1]|| || ೨೪೪ ||

ಅರ್ಥ : ತಸ್ಯ ಖಲು = ಆತಂಗೆ ತಾನೆ, ಸಂಸಾರಸುಖಂ = ಸಂಸಾರಸುಖಮಕ್ಕುಂ, ಯಸ್ಯ = ಆವನೋರ್ವಂಗೆ, ಕೃಷಿ = ಆರಂಭಮುಂ, ಧೇನವಃ = ಪಯಂಗಳುಂ, ಶಾಕವಾಟಃ = ಬಾಡಿನ (ಮೇಲೋಗರ) ತೋಟಮುಂ, ಸದ್ಮನಿ = ಮನೆಯೊಳು, ಉದಪಾನಂ ಚ = ಬಾವಿಯುಂ || ಕೃಷಿಯಿಲ್ಲದಿರ್ದೊಡೆ ದೋಷಮಂ ಪೇಳ್ವುದುತ್ತರಸೂತ್ರಂ :

ವಿಶಾದ್ಯ ರಾಜ್ಞಸ್ತಂತ್ರಪೋಷಣೇ ನಿಯೋಗೀನಾಮುತ್ಸವೋ ಮಹಾಂಶ್ಚ ಕೋಶಕ್ಷಯಃ || || ೨೪೬ ||

ಅರ್ಥ : ವಿಶಾದ್ಯ = ಬಿಲ್ತು (ಮಾಱಗೊಂಡು ಇಕ್ಕುದು), ತಂತ್ರಪೋಷಣೇ = ತಂತ್ರ(ಚತುರಂಗಬಲ)ಮಂ ಪೊಱೆವಲ್ಲಿ, ರಾಜ್ಞಃ = ಅರಸಿನ, ನಿಯೋಗೀನಾಂ = ನಿಯೋಗಿಗಳ್ಗೆ, ಉತ್ಸವಃ = ಉತ್ಸಾಹಮುಂ, ಮಹಾನ್ = ಪಿರಿದಪ್ಪ, ಕೋಶಕ್ಷಯಶ್ಚ = ಭಂಡಾರದ ಕೇಡುಮಕ್ಕುಂ || ಬಿಳ್ತುಂ ಬೋಡೆನುಂ ನೆಱೆಯದೆಂಬುದು[2] ತಾತ್ಪರ್ಯಂ || ಈಯರ್ಥಮಂ ವಿಶೇಷಿಸಿ ಪೇಳ್ವುದುತ್ತರವಾಕ್ಯ :

—-

೧. ಕೃಷಿಯೂ, ಪಶುಪಾಲನೆಯೂ, ವಾಣಿಜ್ಯವೂ ಎಂಬವು ವಾರ್ತೆ.

೨. ವಾರ್ತೆಯು ಸಮೃದ್ಧಿಯಾಗಿದ್ದರೆ ಎಲ್ಲ ವಿಧಗಳ ಸಮೃದ್ಧಿಯೂ ಲಭಿಸುವುದು.

೩. ಯಾರಿಗೆ ಕೃಷಿ (ಭೂ ವ್ಯವಸಾಯ) ಧೇನುಗಳು (ಹಯನು) ಸೊಪ್ಪಿನ ಮಡಿ. ಮನೆಯಲ್ಲಿ ಬಾವಿ ಇವುಗಳಿರುವವೋ ಆತನ ಸಂಸಾರವೇ ಸುಖಿಯಾದುದು.

೪. ಕೃಷಿಯಿಲ್ಲದಿದ್ದರೆ ಸೈನ್ಯ ಮತ್ತು ರಾಜ್ಯಾಧಿಕಾರಿಗಳ ಪೋಷಣೆಯಲ್ಲಿ ಕೋಶಕ್ಷಯವು ಆಗುತ್ತದೆ.

—-

ನಿತ್ಯಂ ಹಿರಣ್ಯವ್ಯಯೇನ ಮೇರುರಪಿ ಕ್ಷೀಯತೇ || || ೨೪೭ ||

ಅರ್ಥ : ನಿತ್ಯಂ = ನಿಚ್ಚಲು, ಹಿರಣ್ಯವ್ಯಯೇನ = ಪೊನ್ನಿನ ಬೀಯದಿಂ, ಮೇರುರಪಿ = ಮಂದರಮುಂ, ಕ್ಷೀಯತೇ = ತವುಗುಂ ||

ತತ್ರ ಸದೈವ ದುರ್ಭಿಕ್ಷಂ ಯತ್ರ ರಾಜಾ ವಿಶಾದಯತಿ[3]|| || ೨೪೮ ||

ಅರ್ಥ : ತತ್ರ = ಅಲ್ಲಿ, ಸದೈವ = ಎಲ್ಲಾ ಕಾಲಮುಂ, ದುರ್ಭಿಕ್ಷಂ = ಪಸವು, ಯತ್ರ = ಆವುದೊಂದು ನಾಡೊಳು, ರಾಜಾ = ಅರಸು, ವಿಶಾದಯತಿ = ಬಿಲ್ತುಗುಂ (ಮಾರುಗೊಂಬ) ||

ಸಮುದ್ರಸ್ಯ ಪಿಪಾಸಾಯಾಂ ಕುತೋ ಜಗತಿ ಜಲಾನಿ || || ೨೪೯ ||

ಅರ್ಥ : ಸಮುದ್ರಸ್ಯ = ಸಮುದ್ರಕ್ಕೆ, ಪಿಪಾಸಾಯಾಂ = ನೀರಳ್ಕೆಯಾದೊಡೆ, ಕುತಃ = ಎತ್ತಣವು, ಜಗತಿ = ಲೋಕದೊಳು, ಜಲಾನಿ = ಉದಕಂಗಳು || ಪಶುರಕ್ಷೆ ಇಲ್ಲದಿರೆ ದೋಷಮಂ ಪೇಳ್ವುದುತ್ತರವಾಕ್ಯಂ :

ಸ್ವಯಂ[4] ಜೀವಧನಮಪಶ್ಯತೋ[5] ಮಹತೀ ಹಾನಿರ್ಮನಸ್ತಾಪಃ ಕ್ಷುತ್ತರ್ಷಾs[6] ಪ್ರತೀಕಾರಾತ್ ಪಾಪಂ ಚ || || ೨೫೦ ||

ಅರ್ಥ. ಸ್ವಯಂ = ತಾನೆ, ಜೀವಧನಂ = ಜೀವಧನಮಂ, ಅಪಶ್ಯತಃ = ನೋಡದಂದು, ಮಹತೀ = ಪಿರಿದಪ್ಪ, ಹಾನಿಃ = ಕೇಡುಂ, ಮನಸ್ತಾಪಃ = ಮನದುಮ್ಮಳಿಕೆಯುಂ, ಕ್ಷುತ್ = ಪಸಿವುಂ, ತರ್ಪಾ = ನೀರಳ್ಕೆಯುಮೆಂದಿವಱ. ಅಪ್ರತೀಕಾರಾತ್ = ಪ್ರತೀಕಾರದಿಲ್ಲಮೆಯುಂ, ಪಾಪಂ ಚ = ದೋಷಮುಮುಕ್ಕುಂ || ಜೀವಧನಂಗಳನಾರಯ್ಯದಿರಲಾಗದೆಂದು ತಾತ್ಪರ್ಯಂ || ಈಯರ್ಥಮನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

—-

೫. ನಿತ್ಯವೂ ಹಣವನ್ನು ವ್ಯಯಿಸುವುದರಿಂದ ಮೇರು ಪರ್ವತವೂ ಸವೆದುಹೋಗುತ್ತದೆ.

೬. ಯಾವ ರಾಜ್ಯದಲ್ಲಿ ರಾಜನು (ಧಾನ್ಯಾದಿಗಳನ್ನು ಸಂಗ್ರಹಿಸದೆ, ಆದಾಯಕ್ಕಿಂತ ಹೆಚ್ಚು ವ್ಯಯಮಾಡಿ) ಕ್ಷೀಣ ಸ್ಥಿತಿಗೆ ಬರುತ್ತಾನೋ ಅಲ್ಲಿ ಎಲ್ಲ ಕಾಲದಲ್ಲಿಯೂ ದುರ್ಭಿಕ್ಷದ ಸ್ಥಿತಿಯೇ ಇರುತ್ತದೆ.

೭. ಸಮುದ್ರಕ್ಕೆ ನೀರಡಿಕೆ (ಬಾಯಾರಿಕೆ) ಯಾದರೆ ಜಗತ್ತಿನಲ್ಲಿ ನೀರನ್ನು ಎಲ್ಲಿಂದ ತರುವುದು?

೮. ಪಶುಸಂಪತ್ತನ್ನು ತಾನೇ ನೋಡಿಕೊಳ್ಳದಿರುವುದರಿಂದ ಬಹಳ ಹಾನಿ. ಮನಸ್ತಾಪ, ಹಸಿವು, ನೀರಡಿಕೆ ಹೆಚ್ಚುತ್ತವೆ. ಅವನ್ನು ಎದುರಿಸಲಾರದೆ ರಾಜನಿಗೆ ಪಾಪ ಉಂಟಾಗುತ್ತದೆ.

—-

ವೃದ್ಧಬಾಲವ್ಯಾಧಿತಕ್ಷೀಣಾನ್ ಪಶೂನ್ ಬಾಂಧವಾನಿವ ಪೋಷಯೇತ್ || || ೨೫೧ ||

ಅರ್ಥ : ವೃದ್ಧ = ಮುದುಕಂಗಳಂ, ಬಾಲ = ಎಳೆಯವುಂ, ವ್ಯಾಧಿತ = ಕುತ್ತಗೂಳಿಗಳಂ, ಕ್ಷೀಣಾನ್ = ಬಡವುಗಳುಮಪ್ಪ, ಪಶೂನ್ = ಪಶುಗಳಂ, ಬಾಂಧವಾನಿವ = ನಂಟರನೆಂತಂತೆ, ಪೋಷಯೇತ್ = ರಕ್ಷಿಸುಗೆ || ಪಶುಗಳಂ ರಕ್ಷಿಸಲ್ ಪುಣ್ಯಮಕ್ಕುಮೆಂಬುದು ತಾತ್ಪರ್ಯಂ || ಪಶುಗಳಂ ರಕ್ಷಿಸದಿರೆ ಬಾಧೆಯಕ್ಕುಮೆಂಬುದಂ ಪೇಳ್ವುದುತ್ತರವಾಕ್ಯಂ :

ಅತೀವ ಭಾರೋ ಮಹಾನ್ಮಾರ್ಗಶ್ಚ ಪಶೂನಾಮಕಾಂಡೇsಪಿ ಮರಣಕಾರಣಂ || ೧೦ || || ೨೫೨ ||

ಅರ್ಥ : ಅತೀವ ಭಾರಃ = ಪಿರಿದಪ್ಪ ಭಾರಮುಂ, ಮಹಾನ್ = ಪಿರಿದಪ್ಪ (ವಿಷಮವಾದ), ಮಾರ್ಗಶ್ಚ = ಬಟ್ಟೆಯುಂ, ಪಶೂನಾಂ = ಪಶುಗಳ್ಗೆ, ಅಕಾಂಡೇsಪಿ = ಅಕಾಲದೊಳುಂ, ಮರಣಕಾರಣಂ = ಸಾವಿಂಗೆ ಕಾರಣಂ || ಅಳವಲ್ಲದ ಪೊಱೆಯುಂ ಬಟ್ಟೆಯಿಲ್ಲದೆ ಪೋಗಲಾಗದೆಂಬುದು ತಾತ್ಪರ್ಯಂ || ಅಕ್ರಮದಿಂ ಮಾಱುಗೊಳಲಾಗದೆಂಬುದಂ ಪೇಳ್ವುದುತ್ತರಸೂತ್ರಂ :

ಶುಲ್ಕವೃದ್ಧಿ ರ್ಬಲಾತ್ ಪಣ್ಯಗ್ರಹಣಂ ಚ ದೇಶಾಂತರಭಾಂಡಾನಾಮ ಪ್ರವೇಶಹೇತುಃ || ೧೧ || ೨೫೩ ||

ಅರ್ಥ : ಶುಲ್ಕವೃದ್ಧಿಃ = ಸುಂಕಂಗಳ ಪೆರ್ಚು, ಬಲಾತ್ = ಬಲ್ಲಾಳಿಕೆಯಿಂ, ಪುಣ್ಯಗ್ರಹಣಂ ಚ = ಭಂಡಂಗಳಂ ಸೆಳೆದುಕೊಳ್ವುದುಂ, ದೇಶಾಂತರಭಾಂಡಾನಾಂ = ಪೆಱತೆಡೆಯಿಂ ಬಪ್ಪ ಭಾಂಡಂಗಳ, ಅಪ್ರವೇಶಹೇತುಃ = ಪೊಗುವುದಕ್ಕೆ ಕಾರಣಮಲ್ಲ ||[7] ಉಚಿತಮಲ್ಲದ ಸುಂಕಮುಮೊಡಂಬಡಿಸದೆ ಮಾಱುಗೊಳ್ವುದು ಪೊಗಲಾಗದೆಂಬುದು[8] ತಾತ್ಪರ್ಯಂ || ಅದಕ್ಕೆ ದೃಷ್ಟಾಂತಮಂ ಪೇಳ್ವುದುತ್ತರಸೂತ್ರಂ :

—-

೯. ವೃದ್ಧ, ಎಳೆಯ, ವ್ಯಾಧಿಗ್ರಸ್ಥ, ಬಡವಾದ ಪಶುಗಳನ್ನು ನೆಂಟರನ್ನು ಹೇಗೋ ಹಾಗೆ ಪೊಷಿಸಬೇಕು.

೧೦. ಅತಿಯಾದ ಭಾರವನ್ನು ಹೇರುವುದು, ಧೀರ್ಘವಾದ ಮಾರ್ಗದಲ್ಲಿ ನಡೆಸುವುದು, ಪಶುಗಳ ಅಕಾಲಮರಣಕ್ಕೆ ಕಾರಣ.

೧೧. ಸುಂಕವನ್ನು ಹೆಚ್ಚಿಸುವುದು, ಬಲಾತ್ಕಾರದಿಂದ ಸರಕುಗಳನ್ನು ವಶಪಡಿಸಿಕೊಳ್ಳುವುದು, ಇವು ಸರಕುಗಳು ದೇಶಾಂತರದಿಂದ ಬರುವುದಕ್ಕೆ ಅಡ್ಡಿಯುಂಟಾಗುತ್ತದೆ.

—-

ಕಾಷ್ಠಪಾತ್ರ್ಯಾಮೇಕದೈವ ಹಿ ಪಚ್ಯತೇ[9] || ೧೨ || ೨೫೪ ||

ಅರ್ಥ : ಕಾಷ್ಠಪಾತ್ರ್ಯಾಂ = ಮರನ ಮಡಕೆಯೊಳು, ಏಕದೈವ = ಒರ್ಮೆಯೇ, ಪಚ್ಯತೇ = ಅಡುಗೆ || ಅನ್ಯಾಯದಿಂದೊರ್ಮೆಯೇ ಲಾಭಮಕ್ಕುಂ || ಮರ್ಯಾದೆಯಿಂ ಪುನಃ ಪುನರ್ಲಾಭಮಕ್ಕುಮೆಂಬುದು ತಾತ್ಪರ್ಯಂ || ತುಲಾಮಾನಂಗಳ್ಕಿಱಿಯವಾದಡೆ ದೋಷಂಗಳಂ ಪೇಳ್ವುದುತ್ತರವಾಕ್ಯಂ :

ತುಲಾಮಾನಯೋರವ್ಯವಸ್ಥಾ ವ್ಯವಹಾರಂ ದೂಷಯತಿ || ೧೩ || ೨೫೫ ||

ಅರ್ಥ : ತುಲಾಮಾನಯೋಃ = ತೊಲೆಯುಂ, ಮಾನಮುವೆಂಬಿವಱ, ಅವ್ಯವಸ್ಥಾ = ಮಾನಂಗಳ್ ಪಿರಿಯವು ಕಿರಿಯವುವಾದಡೆ, ವ್ಯವಹಾರಂ = ಬೆವಹಾರಮಂ, ದೂಷಯತಿ = ಕೆಡಿಸುಗುಂ || ಒಂದೇ ತೆಱದಿ ತೊಲೆಯುಂ ಮಾನಮುಮಾಗವೇಳ್ಕುಮೆಂಬುದು ತಾತ್ಪರ್ಯಂ || ಪರದರರ್ಘಮಂ ಮಾಡೆ ದೋಷಮಂ ಪೇಳ್ವುದುತ್ತರಸೂತ್ರಂ :

ವಣಿಕ್ಕೃತೋರ್ಘಃ ಸ್ಥಿತಾನಾಗಂತುಕಾಂಶ್ಚ ಪೀಡಯತಿ || ೧೪ || ೨೫೬ ||

ಅರ್ಥ : ವಣಿಕ್ಯೃತ = ಪರದನಿಂ ಮಾಡಲ್ಪಟ್ಟ, ಅರ್ಘಃ = ಅರ್ಘಂ, ಸ್ಥಿತಾನ್ = ಇರ್ದರುಮಂ, ಆಗಂತುಕಾಂಶ್ಚ = ಬರ್ಪರುಮಂ, ಪೀಡಯತಿ = ಪೀಡಿಸುಗುಂ || ಅರ್ಘಮನರಸು ತಾನಾರಯ್ದು ಮಾಡವೇಳ್ಕುಮೆಂಬುದು ತಾತ್ಪರ್ಯಂ || ಅರ್ಘಂ ನಿಯತಮಲ್ಲೆಂಬುದಂ ಪೇಳ್ವುದುತ್ತರವಾಕ್ಯಂ :

ದೇಶಕಾಲಭಾಂಡಾಪೇಕ್ಷಯಾರ್ಘೋ ಯೋ ವಾ ಸ ಭವೇತ್[10]|| ೧೫ || ೨೫೭ ||

ಅರ್ಥ : ದೇಶಕಾಲಭಾಂಡಾಪೇಕ್ಷಯಾ = ದೇಶಮುಂ, ಕಾಲಮುಂ, ಭಾಂಡಮುಮನಪೇಕ್ಷಿಸಿ, ಅರ್ಘಃ = ಅರ್ಘಂ, ಯೋ ವಾ ಸಃ = ಆವುದೊಂದು, ಭವೇತ್ = ಅಕ್ಕುಂ || ದೇಶಕಾಲದಿಂದರ್ಘಂಗಳ್ ಕುಂದಲುಂ ಪೆರ್ಚಲುಂ ಅಕ್ಕುಮೆಂಬುದು ತಾತ್ಪರ್ಯಂ || ವ್ಯವಹಾರದೊಳಂ ಮರ್ಯಾದಾಪ್ರಯೋಜನಮಂ ಪೇಳ್ವುದುತ್ತರಸೂತ್ರಂ :

—-

೧೨. ಮರದ ಪಾತ್ರೆಯಲ್ಲಿ ಅಡುಗೆಯನ್ನು ಒಂದೇ ಸಲ ಬೇಯಿಸುವ ಹಾಗೆ ಅನ್ಯಾಯದಿಂದ ಲಾಭವಾಗುವುದು ಒಮ್ಮೆ ಮಾತ್ರ.

೧೩. ತೂಕ, ಅಳತೆಗಳ ಅವ್ಯವಸ್ಥೆಯು ವ್ಯವಹಾರವನ್ನು ಕೆಡಿಸುವುದು.

೧೪. ಬೆಲೆಯನ್ನು ವರ್ತಕರೇ ನಿರ್ಣಯಿಸುವುದಾದರೆ (ದೇಶದಲ್ಲಿ) ಇರುವವರಿಗೂ (ಹೊರಗಿನಿಂದ) ಬರುವವರಗೂ ತೊಂದರೆಯಾಗುತ್ತದೆ.

೧೫. ವಸ್ತುಗಳ ಬೆಲೆಯನ್ನು ದೇಶ, ಕಾಲ, ಸರಕುಗಳ ಸಂಗ್ರಹ. ಇವುಗಳನ್ನನುಸರಿಸಿ ನಿಷ್ಕರ್ಷಿಸಬೇಕು.

—-

ಪಣ್ಯತುಲಾಮಾನವಿಶುದ್ಧೌ ತು ರಾಜಾ ಸ್ವಯಂ ಜಾಗರ್ಯಾತ್ || ೧೬ || ೨೫೮ ||

ಅರ್ಥ : ಪಣ್ಯತುಲಾಮಾನವಿಶುದ್ಧೌ = ಬೆಲೆಯುಂ, ತೊಲೆಯುಂ ಮಾನಮುಮೆಂಬಿ ವಱಾರೈಕೆಯೊಳ್, ರಾಜಾ = ಅರಸಂ, ಸ್ವಯಂ = ತಾಂ, ಜಾಗರ್ಯಾತ್ = ಎಚ್ಚೆತ್ತಿರ್ಕೆ || ಅರಸಂ ತಾನಾರಯ್ಯದೊಡಂ ವ್ಯವಹಾರಮವ್ಯವಸ್ಥೆಯಕ್ಕುಮೆಂಬುದು ತಾತ್ಪರ್ಯಂ || ಅದಕ್ಕೆ ಕಾರಣಮಂ ಪೇಳ್ವುದುತ್ತರಸೂತ್ರಂ :

ವಣಿಗ್ಭ್ಯಃ ಪರೇ ನ ಸಂತಿ ಪಶ್ಯತೋಹರಾಃ || ೧೭ || ೨೫೯ ||

ಅರ್ಥ : ವಣಿಗ್ಭ್ಯಃ = ಪರದರತ್ತಣಿಂ, ಪರೇ = ಪರರು, ನ ಸಂತಿ = ಇಲ್ಲ, ಪಶ್ಯತೋಹರಾಃ = ನೋಡೆ ನೋಡೆ ಕಳ್ವವರ್ಗಳು[11] || ಪರದರೆಲ್ಲಂ ತಂತಮ್ಮ ಮೆಯ್ಯೊಳು ವಂಚಕರೆಂಬುದು ತಾತ್ಪರ್ಯಂ || ಪುರುಡಿಂಗೆಡೆಯಂ ಪೆರ್ಚಿಸಲಾಗದೆಂಬುದಂ ಪೇಳ್ದಪರ್ :

ಸ್ಪರ್ಧಯಾ ಮೂಲ್ಯ [12]ವೃದ್ಧಿರ್ಭಾಂಡೇಷು ರಾಜ್ಞಃ ಯಥೋಚಿತಂ ತು ಮೂಲ್ಯಂ ಭಾಂಡವಿಕ್ರೇತುಃ[13]|| ೧೮ || ೨೬೦ ||

ಅರ್ಥ : ಸ್ವರ್ಧಯಾ = ಮಚ್ಚರದಿಂ, ಮೂಲ್ಯವೃದ್ಧಿಃ = ಬೆಲೆಯ ಪೆರ್ಚು, ಭಾಂಡೇಷು = ಭಾಂಡಂಗಳೊಳು, ರಾಜ್ಞಃ = ಅರಸಂಗೆ ತಕ್ಕುದು, ಯಥೋಚಿತಂ = ತಕ್ಕ, ಮೂಲ್ಯಂ = ಬೆಲೆ, ತು = ಮತ್ತೆ, ಭಾಂಡವಿಕ್ರೇತುಃ = ಭಾಂಡಮಂ ಮಾಱುವಂಗೆ || ಪರದ ಮಚ್ಚರದಿಂ ಬೆಲೆಯಂ ಪೆರ್ಚಿಸಲಾಗದೆಂಬುದು ತಾತ್ಪರ್ಯಂ || ಬೆಲೆಯಂ ಕರಂ ಕುಂದಿಸಲಾಗದೆಂಬುದಂ ಪೇಳ್ವುದುತ್ತರಸೂತ್ರಂ :

ಅಲ್ಪದ್ರವ್ಯೇಣ ಮಹಾಭಾಂಡಂ ಗೃಹ್ಣತೋ ಮೂಲ್ಯವಿನಾಶಃ ತದ್ಭಾಂಡಂ ತು ರಾಜ್ಞಃ || ೧೯ || ೨೬೧ ||

ಅರ್ಥ : ಅಲ್ಪದ್ರವೇಣ = ಕಿಱಿದಪ್ಪ ಬೆಲೆಯಿಂ, ಮಹಾಭಾಂಡಂ = ಪಿರಿದಪ್ಪ ಭಾಂಡಮಂ, ಗೃಹ್ಣತಃ = ಮಾಱುಗೊಳ್ವಂಗೆ, ಮೂಲ್ಯವಿನಾಶಃ = ಬೆಲೆಯ ಕೇಡು, ತದ್ಭಾಂಡಂ ತು = ಆ ಭಂಡಂ ಮತ್ತೆ ರಾಜ್ಞಃ = ಆರಸಂಗಕ್ಕುಂ || ಅನ್ಯಾಯದಿನಾದ ವ್ಯವಹಾರಮುಂ ವ್ಯಾಜದ ಭಂಡಂಗಳರಸಂಗಕ್ಕುಮೆಂಬುದು ತಾತ್ಪರ್ಯಂ || ಅರಸನನ್ಯಾಯಮನುಪೇಕ್ಷಿಸಿರ್ದೊಡೆ ದೋಷಮಂ ಪೇಳ್ವುದುತ್ತರಸೂತ್ರಂ :

—-

೧೬. ಮಾರಾಟದ ತೂಕ ಅಳತೆಗಳು ಶುದ್ಧವಾಗಿರುವಂತೆ ರಾಜನು ತಾನೇ ಎಚ್ಚರದಿಂದ ಇರಬೇಕು.

೧೭. ನೋಡು ನೋಡುತ್ತಿದ್ದಂತೆಯೇ ಕದಿಯುವವರು ವರ್ತಕರಿಗಿಂತ ಬೇರೆಯವರಿಲ್ಲ.

೧೮. ಸ್ಪರ್ಧೆಯಿಂದ ಸರಕುಗಳ ಬೆಲೆಯನ್ನು ರಾಜನು ಹೆಚ್ಚಿಸಬಹುದು. ಆದರೆ ವರ್ತಕನಿಗೆ ಉಚಿತವಾದ ಬೆಲೆಯನ್ನು ಕೊಡಬೇಕು.

೧೯. ಕಡಮೆ ಹಣದಿಂದ ಬಹಳ ಸರಕನ್ನು ಕೊಳ್ಳುವುದರಿಂದ ಬೆಲೆಯ ಕೇಡು. ಆ ಸರಕು ಅರಸನಿಗೆ ಸೇರುತ್ತದೆ.

—-

ಅನ್ಯಾಯೋಪೇಕ್ಷಾ ಸರ್ವಂ ವಿನಾಶಯತಿ || ೨೦ || ೨೬೨ ||

ಅರ್ಥ : ಅನ್ಯಾಯೋಪೇಕ್ಷಾ = ಅನ್ನಯ ಉಪೇಕ್ಷೆ (ಉದಾಸೀನ), ಸರ್ವಂ = ಯೆಲ್ಲಮಂ, ವಿನಾಶಯತಿ = ಕೆಡಿಸುಗಂ || ನ್ಯಾಯಮನತಿಕ್ರಮಿಸಿದೊಡೆ ಅರಸಂಗೆ ಕೇಡಕ್ಕುಮೆಂಬುದು ರಾಜನೀತಿಯಭಿಪ್ರಾಯಂ || ಅರಸನನ್ಯಾಯಮನುಪೇಕ್ಷಿಸಿರ್ದೊಡೆ ದೋಷಮಂ ಪೇಳ್ವುದುತ್ತರಸೂತ್ರಂ :

ಚೋರಚರಟಮನ್ನೆಯದವನ[14] ರಾಜವಲ್ಲಭಾಟವಿಕತಳಾರಕಿರಾಟಾಕ್ಷ [15]ಶಾಲಿಕನಿಯೋಗಿಗ್ರಾಮ[16]ಕೂಟಕವಾರ್ದ್ದುಷಿಕಾ ಹಿ ರಾಷ್ಟ್ರಕಂಟಕಾಃ || ೨೧ || ೨೬೩ ||

ಅರ್ಥ : ಚೋರ = ಕಳ್ಳರು, ಚರಟ = ಬಂಡಿಕಾಱು, ಮನ್ನೆಯ = ಮನ್ನೆಯರುಂ, ದವನ = ದವನಿಗಳುಂ, ರಾಜವಲ್ಲಭ = ಅರಸನ ಪಸಾಯಿತ (ಅರಸಂಗೆ ಪ್ರಿಯವಾದವರು)ರು, ಅಟವಿಕ = ಬೇಡರುಂ, ತಳಾರ = ತಳಾಱರುಂ, ಕಿರಾಟ = ಪರದರುಂ, ಅಕ್ಷಶಾಲಿಕ = ಅಕ್ಕಸಾಲಿಗರುಂ (ಅಕ್ಷ = ಜೂಜುಗಾಱ), ನಿಯೋಗಿ = ಅಧಿಕಾರಿಗಳುಂ, ಗ್ರಾಮಕೂಟಕ = ಗ್ರಾಮಿಣಿಗಳುಂ, ಊರಿಂಗೆ ಮುಖ್ಯರು, ವಾರ್ದ್ದುಷಿಕಾ = ಬಡ್ಡಿಗೊಟ್ಟಾಡುವರುಮೆಂದಿವರ್ಗಳು, ಹಿ = ನೆಟ್ಟನೆ, ರಾಷ್ಟ್ರಕಂಟಕಕಾಃ = ಇಂತಿನಿಬರುಂ ದೇಶಕ್ಕೆ ಕಂಟಕರು || ಇಂತಿನಿಬರಂ ಪೆರ್ಚಿಸಲಾಗದೆಂಬುದು ನಾಡು ಕಿಡುವುದೆಂಬುದು ತಾತ್ಪರ್ಯಂ || ವಾರ್ದ್ದುಷಿಕರಲ್ಲಿ ವಿಶೇಷಮಂ ಪೇಳ್ವುದುತ್ತರಸೂತ್ರಂ :

[17]ಅನ್ಯಾಯವೃದ್ಧಯೋ[18] ವಾರ್ದ್ಧುಷಿಕಾಸ್ತಂತ್ರಂ ಪರಿಗ್ರಹಂ ದೇಶಂ ಕೋಶಂ ಚ ನಾಶಯತಿ[19]|| ೨೨ || || ೨೬೪ ||

ಅರ್ಥ : ಅನ್ಯಾಯವೃದ್ಧಯಃ = ಅನ್ಯಾಯದೈಶ್ವರ್ಯಮನುಳ್ಳ, ವಾರ್ದೂಷಿಕಾಃ = ಬಡ್ಡಿಗೊಡುವವರ್ಗಳು, ತಂತ್ರಂ = ತಂತ್ರಮಂ, ಪರಿಗ್ರಹಂ = ಪರಿವಾರಮಂ, ದೇಶಂ = ನಾಡುಮಂ, ಕೋಶಂ = ಭಂಡಾರಮುಮಂ, ನಾಶಯತಿ = ಕೆಡಿಸುವರು || ಅನ್ಯಾಯದ ಬಡ್ಡಿಯಂ ಸೈರಿಸಲಾಗದೆಂಬುದು ತಾತ್ಪರ್ಯಂ || ಈಯರ್ಥಮನೆ ವಿಶೇಷಿಸಿ ಪೇಳ್ವುದುತ್ತರಸೂತ್ರಂ :

—-

೨೦. ಅನ್ಯಾಯವು ನಡೆಯುತ್ತಿರುವಲ್ಲಿ ಉಪೇಕ್ಷೆಯಿಂದಿದ್ದರೆ ಎಲ್ಲರಿಗೂ ಹಾನಿ.

೨೧. ಚೋರರು, ಚರಟರು, ಮನ್ನೆಯರು, ದವನಿಗಳು, ಅರಸನ ಹಿಂಬಾಲಕರು, ಆಟವಿಕರು, ತಳಾರರು, ವ್ಯಾಪಾರಿಗಳು, ಅಕ್ಕಸಾಲಿಗರು, ಜೂಜುಗಾರರು, ಅಧಿಕಾರಿಗಳು, ಗ್ರಾಮಕೂಟರು, ಬಡ್ಡಿವ್ಯವಹಾರ ಮಾಡುವವರು, ಇವರೆಲ್ಲರೂ ರಾಷ್ಟ್ರಕಂಟಕರು.

೨೨. ಅನ್ಯಾಯದೈಶ್ವರ್ಯವುಳ್ಳ ಬಡ್ಡಿವ್ಯವಹಾರ ಮಾಡುವವರು ಆಡಳಿತವನ್ನು, ಪರಿವಾರವನ್ನು, ದೇಶವನ್ನು, ಭಂಡಾರವನ್ನು ನಾಶಮಾಡುತ್ತಾರೆ.

—-

ಪ್ರತಾಪವತಿ[20] ನ್ಯಾಯನಿಷ್ಠುರೇ ಚ ರಾಜ್ಞಿ ನ ಪ್ರಭವಂತಿ ಸರ್ವೇs ಪಿ ರಾಷ್ಟ್ರಕಂಟಕಾಃ || ೨೩ || ೨೬೫ ||

ಅರ್ಥ : ಪ್ರತಾಪವತಿ = ಪ್ರತಾಪಮನುಳ್ಳ, ನ್ಯಾಯನಿಷ್ಠುರೇ ಚ = ನ್ಯಾಯನಿಷ್ಠುರನಪ್ಪ ಕೂಡಾ, ರಾಜ್ಞಿ = ಅರಸನೊಳು, ನ ಪ್ರಭವಂತಿ = ತಮ್ಮ ತೇಜಸಮಂ (ಅನ್ಯಾಯವ ಮಾಡಲ್ಕೆ ಸಮರ್ಥರಲ್ಲ) ಸೈಸಿಸಲಾಱರು, ಸರ್ವೇsಪಿ = ಎಲ್ಲಾ, ರಾಷ್ಟ್ರಕಂಟಕಾಃ = ದೇಶಕಂಟಕರು || ಅರಸಂ ತೇಜೋಧಿಕನಾಗಲೆವೇಳ್ಕುಮೆಂಬುದು ತಾತ್ಪರ್ಯಂ ||

ಕಾರ್ಯಾಕಾರ್ಯಯೋರ್ನಾಸ್ತಿ ದಾಕ್ಷಿಣ್ಯಂ[21]|| ೨೪ || ೨೬೬ ||

ಅರ್ಥ : ಕಾರ್ಯಾಕಾರ್ಯಯೋಃ = ತಕ್ಕದುಂ ತಗದುದುಮೆಂಬೆಱಡಱೊಳು, ದಾಕ್ಷಿಣ್ಯಂ = ಕಾರುಣ್ಯಂ, ನಾಸ್ತಿ = ಇಲ್ಲವು || ಅನುಚಿತದಾಕ್ಷಿಣ್ಯಂ ಬೇಡೆಂಬುದಭಿಪ್ರಾಯಂ || ಈಯರ್ಥಕ್ಕೆ ದೃಷ್ಟಾಂತಮಂ ಪೇಳ್ದಪರ್ :

ಅಪ್ರಿಯಮಪ್ಯೌಷಧಂ ಪೀಯತೇ || ೨೫ || ೨೬೭ ||

ಅರ್ಥ: ಅಪ್ರಿಯಮಪಿ = ಸೊಗಯಸದಿರ್ದೊಡಂ, ಔಷಧಂ = ಮರ್ದು, ಪೀಯತೇ = ಕುಡಿಸಲ್ಕೆಪಡುವುದು ||

ಅಹಿದಷ್ಟಾಸ್ವಾಂಗುಲೀರಪಿ ಛಿದ್ಯತೇ || ೨೬ || ೨೬೮ ||

ಅರ್ಥ: ಅಹಿದಷ್ಟಾ = ಪಾವಿಂ ಕಚ್ಚಲ್ಪಟ್ಟವಂ, ಸ್ವಾಂಗುಲೀರಪಿ = ತನ್ನ ಬೆರಳುಮನಪ್ಪೊಡಂ, ಛಿದ್ಯತೇ = ಕಡಿಯಲ್ಪಡುಗುಂ || ತನಗೆ ಬರೆಯೆನ್ನದೆ ಅನ್ಯಾಯಮಂ ಸೈರಿಸಲಾಗದೆಂಬುದಭಿಪ್ರಾಯಂ ||

ಇತಿ ವಾರ್ತಾ ಸಮುದ್ದೇಶಃ || ೭ ||[22]

[23]ಏಳನೆಯ ಸಮುದ್ಧೇಶವಾಕ್ಯಂಗಳು|| ೨೬ || ಒಟ್ಟು || ೨೬೮ ||

—-

೨೩. ಪ್ರತಾಪಶಾಲಿಯೂ, ನ್ಯಾಯನಿಷ್ಠುರನೂ ಆದ ರಾಜನಿದ್ದರೆ ರಾಷ್ಟ್ರಕಂಟಕರು ಅನ್ಯಾಯವನ್ನು ಮಾಡಲು ಸಮರ್ಥರಾಗುವುದಿಲ್ಲ.

೨೪. (ಬಡ್ಡಿ ವ್ಯಾಪಾರ ಮಾಡುವವರಿಗೆ ಆಕ್ರಮ ದಾಸ್ತಾನುಗಾರರಿಗೆ) ಮಾಡಬಹುದಾದ. ಮಾಡಬಾರದ ಕಾರ್ಯಗಳ ವಿಚಾರದಲ್ಲಿ ದಾಕ್ಷಿಣ್ಯವಿರುವುದಿಲ್ಲ.

೨೫. ಇಷ್ಟವಿಲ್ಲದಿದ್ದರೂ ಔಷಧಿಯನ್ನು ಕುಡಿಯುವದಿಲ್ಲವೆ ?

೨೬. ಹಾವು ಕಚ್ಚಿದರೆ ತನ್ನ ಬೆರಳನ್ನೇ ಕತ್ತರಿಸುವುದಿಲ್ಲವೆ ?

—-

 

[1]ಮೈ., ಜ. ಸಮೃದ್ಧಯೋ ರಾಜ್ಞಾಂ.

[2]ಈ ವಾಕ್ಯದ ಅರ್ಥ ಸ್ಪಷ್ಟವಿಲ್ಲ.

[3]ಮೈ ವಿಸಾದಯತಿ. ಇಲ್ಲಿ ಪಾಠಭೇದದೊಂದಿಗೆ ಅರ್ಥಭೇದವೂ ಇದೆ. ಮೈ. ದಲ್ಲಿ ಈ ಶಬ್ದಕ್ಕೆ ಧಾನ್ಯ ಸಂಗ್ರಹ ಮಾಡದಿರುವುದು, ಅತಿ ವೆಚ್ಚ ಮಾಡುವುದು ಎಂದು ಹೇಳಲಾಗದೆ. ಟೀಕಾಕಾರನು ಮಾರಾಟ ಎಂಬ ಅರ್ಥವನ್ನು ಕೊಟ್ಟಿದ್ದಾನೆ.

[4]ಮೈ., ಜ. ಪ್ರಜಾನಾಂ ಸ್ವಯಂ.

[5]ಮೈ. ಜ. ಆದರ್ಶಯತೋ.

[6]ಮೈ. ಕ್ಷುತ್ಪಿಪಾಸಾ.

[7]ಹೋಗದಿರುವದಕ್ಕೆ ಕಾರಣವಾಗುತ್ತದೆ ಎಂಬುದು ನಿಜವಾದ ಅರ್ಥ.

[8]ಇದು ಮಾಡಲಾಗದೆಂಬುದು ಎಂದಿರಬೇಕೇಂದು ತೋರುತ್ತದೆ.

[9]ಮೈ., ಜ. ಪದಾರ್ಥೋರದ್ಧ್ಯತೇ.

[10]ಮೈ. ವಾ ಸರ್ವಾರ್ಘೋ ಭವೇತ್.

[11]ಪಶ್ಯತೋಹರಾಃ = ಕಣ್ಣೆದುರಿಗೇ ಕಳುವು ಮಾಡುವವರು.

[12]ಮೈ. ಸ್ಪರ್ಧಯಾ ವೃದ್ಧಂ ಮೂಲ್ಯಂ.

[13]ಮೈ. ಚೌ. ಮೂಲ್ಯಂ ವಿಕ್ರೇತುಃ.

[14]ಮೈ. ಚರಟಾನ್ವಯಧಮನ ಮನ್ನಪಧಮನ. ಚೌ, ಚರಟಾನ್ವಯಧಮನ.

[15]ಚೌ. ತಳಾರಾಕ್ಷಶಾಲಿಕ.

[16]ಮೈ. ಗ್ರಾಮಕಂಟಕ, ಈ ಮೂರರಲ್ಲಿ ಪಾಠಭೇದದ ಜತೆಗೆ ಅರ್ಥವ್ಯತ್ಯಾಸವೂ ಇದೆ.

[17]ನಮ್ಮಲ್ಲಿರುವ ಪ್ರತಿಗಳಲ್ಲಿಯ ೨೨ ಮತ್ತು ೨೩ ನೇ ವಾಕ್ಯಗಳು ಮೈ. ಮತ್ತು ಚೌ. ಗಳಲ್ಲಿ ೨೩ ಮತ್ತು ೨೨ ಆಗಿವೆ.

[18]ಮೈ. ಚೌ. ಅನ್ಯಾಯವೃದ್ಧಿತೋ.

[19]ಮೈ. ತಂತ್ರಂ ಕೋಶಂ ದೇಶಂ ಚ ನಾಶಯಂತಿ;  ಚೌ. ತಂತ್ರಂ ದೇಶಂ ಚ ನಾಶಯಂತಿ.

[20]ಮೈ. ತೇ ಹಿ ಪ್ರತಾಪವತಿ ಕಂಕಟಶೋಧನಾದಿಕರಣಜ್ಞೇ ರಾಜ್ಞಿನ ಪ್ರಭವಂತಿ. ಚೌ. ಪ್ರತಾಪವತಿ ರಾಜ್ಞಿ ನಿಷ್ಠುರೇ ಸತಿ ನ ಭವಂತಿ ರಾಷ್ಟ್ರಕಂಟಕಾಃ.

[21]ಮೈ., ಚೌ. ದಾಕ್ಷಿಣ್ಯಂ ವಾರ್ಧುಷಿಕಾಣಾಂ.

[22]ಇದು ೮ ಎಂದಿರಬೇಕು.

[23]ಎಂಟನೆಯ ಎಂದು ಓದಬೇಕು.