ರಾಜಚಿಹ್ಮಂಗಳೊಳ್ ನಾಲ್ಕನೆಯ ದಂಡನೀತಿಯಂ ಪೇಳ್ವುದುತ್ತರವಾಕ್ಯಂ :

ಚಿಕಿತ್ಸಾಗಮ ಇವ ದೋಷವಿಶುದ್ಧಿ ಹೇತುರ್ದಂಡಃ || || ೨೬೯ ||

ಅರ್ಥ : ಚಿಕಿತ್ಸಾಗಮ ಇವ = ವೈದ್ಯಶಾಸ್ತ್ರದಂತೆ, ದೋಷವಿಶುದ್ಧಿಹೇತುಃ = ದೋಷದ ಸಂಶುದ್ಧಿಗೆ ಕಾರಣಮಪ್ಪುದು, ದಂಡಃ = ದಂಡವೆಂಬುದು || ದೋಷಕ್ಕೆ ತಕ್ಕ ಶಿಕ್ಷೆಯೇ ದಂಡವೆಂಬುದು ತಾತ್ಪರ್ಯಂ || ಈಯರ್ಥಮನೆ ವಿಶೇಷಿಸಿ ಪೇಳ್ವುದುತ್ತರಸೂತ್ರಂ :

ಯಥಾದೋಷಂ ದಂಡಸ್ಯ ಪ್ರಣಯನಂ ಹಿ ದಂಡನೀತಿಃ || || ೨೭೦ ||

ಅರ್ಥ : ಯಥಾದೋಷಂ = ದೋಷಕ್ಕೆ ತಕ್ಕಂತು, ದಂಡಸ್ಯ = ದಂಡಕ್ಕೆ, ಪ್ರಣಯನಂ, ಹಿ = ಮಾಟಂ, ದಂಡನೀತಿಃ = ದಂಡನೀತಿಯೆಂಬುದು || ದೋಷಕ್ಕಲ್ಲದೆ ದಂಡಮಂ ಮಾಡಲಾಗದೆಂಬುದು ತಾತ್ಪರ್ಯಂ || ದಂಡಮಂ ಮಾಳ್ಪುದಕ್ಕೆ ಕಾರಣಮಂ ಪೇಳ್ವುದುತ್ತರಸೂತ್ರ :

ಪ್ರಜಾಹಿತಾರ್ಥಂ[1]ರಾಜ್ಞಾ ದಂಡಃ ಪ್ರಣೀಯತೇ ನ ಧನಾರ್ಥಂ || || ೨೭೧ ||

ಅರ್ಥ : ಪ್ರಜಾಹಿತಾರ್ಥಂ = ಪ್ರಜೆಗಳ ಹಿತಂ ಕಾರಣಮಾಗಿ, ರಾಜ್ಞಾ = ಅರಸಿಂ, ದಂಡಃ = ದಂಡಂ, ಪ್ರಣೀಯತೇ = ಮಾಡಲ್ಪಡಗುಂ, ನ ಧನಾರ್ಥಂ = ಧನದ ಕಾರಣಮಾಗಿ ಮಾಡಲ್ಪಡದು || ದೃಷ್ಟಾಂತದಿನರ್ಥಾತಿಶಯಮಪ್ಪಡೆ ಪೊಲ್ಲೆಂಬುದುತ್ತರಸೂತ್ರಂ :

ಸ ಕಿಂ ರಾಜಾ ವೈದ್ಯೋ ವಾ ಯಃ ಸ್ವಜೀವನಾಯ ಪ್ರಜಾಸು ದೋಷಮ ನ್ವೇಷಯತೇ || || ೨೭೨ ||

ಅರ್ಥ : ಸಃ = ಆತಂ, ಕಿಂ ರಾಜಾ = ಏನರಸನೇ ವೈದ್ಯೋ ವಾ = ವೈದ್ಯನೇ ಮೇಣ್, ಯಃ = ಆವನೋರ್ವಂ, ಸ್ವಜೀವನಾಯ = ತನ್ನ ಬಾಳ್ಕೆ ಕಾರಣಮಾಗಿ, ಪ್ರಜಾಸು = ಪ್ರಜೆಗಳೊಳು, ದೋಷಂ = ದೋಷಮಂ, ಅನ್ವೇಷಯತೇ = ಅಱಸುಗುಂ || ಅರ್ಥಾರ್ಥಿಯಲ್ಲದೆ ನಿಯಮಿಸುದೆಂಬುದು ತಾತ್ಪರ್ಯಂ || ಇಂತಪ್ಪರ್ಥಮನರಸು ಕೊಳಲಾಗದೆಂಬುದುತ್ತರಸೂತ್ರ :

—-

೧. ವೈದ್ಯಶಾಸ್ತ್ರದಂತೆ ದಂಡವು ದೋಷಸಂಶುದ್ಧಿಗೆ ಕಾರಣವು.

೨. ಅಪರಾಧಕ್ಕೆ ತಕ್ಕಂತೆ ದಂಡವನ್ನು ವಿಧಿಸುವುದೇ ದಂಡನೀತಿ.

೩. ಪ್ರಜೆಗಳ ಹಿತ ರಕ್ಷಣೆಗಾಗಿ ರಾಜನು ದಂಡವನ್ನು ವಿಧಿಸುತ್ತಾನೆಯೇ ವಿನಾ ಧನಾರ್ಜನೆಗಲ್ಲ,

೪. ತನ್ನ ಜೀವನೋಪಾಯಕ್ಕಾಗಿ ಪ್ರಜೆಗಳಲ್ಲಿ ಇಲ್ಲದ ದೋಷಗಳನ್ನು ಆರೋಪಿಸಿ ದಂಡವನ್ನು ವಿಧಿಸುವವನು ರಾಜನೇ ಅಥವಾ ವೈದ್ಯನೆ?

—-

ದಂಡಭೂದಾಹದ್ಯೂತ[2]ಮೃತವಿಸ್ಮೃತಚೋರಪಾರದಾರಿಕಪ್ರಜಾವಿಪ್ಲವದ್ರವ್ಯಾಣಿ
ನ ರಾಜಾ ಸ್ವಯಂ ಉಪಯುಂಜೀತ
|| || ೨೭೩ ||

ಅರ್ಥ : ದಂಡ = ದಂಡಮುಂ, ಭೂದಾಹ = ನೆಲನ ಸುಡುವುದುಂ, ದ್ಯೂತ = ಜೂಜುಂ, ಮೃತ = ಸತ್ತರುಂ (ಅಪುತ್ರಿಕ), ವಿಸ್ಮೃತ = ಮಱೆದುದುಂ, ಚೋರ = ಕಳ್ಳರು, ಪಾರದಾರಿಕ = ಹಾದರಿಗರುಂ, ಪ್ರಜಾವಿಪ್ಲವದ್ರವ್ಯಾಣಿ = ಪ್ರಜೆಯ ಸುಯ್ಲುಗಳ (ಬಡಿಗೆಯಂ ಬಂದ) ಕ್ಲೇಶಕ್ಕೆ ಕಾರಣಮಪ್ಪ ದ್ರವ್ಯಂಗಳಂ, ರಾಜಾ = ಅರಸು, ಸ್ವಯಂ = ತಾಂ, ನ ಉಪಯುಂಜೀತ = ಕೊಳಲಾಗದು || ದ್ರವ್ಯಂಗಳ ಜೀರ್ಣೋದ್ಧಾರಕ್ಕೆ ಕೊಡುವುದೆಂಬುದು ತಾತ್ಪರ್ಯಂ || ಇಂತಪ್ಪ ದಂಡವಾಗಲಾಗದೆಂಬುದಂ ಪೇಳ್ವುದುತ್ತರಸೂತ್ರಂ :

ದುಃಪ್ರಣೀತೋ ಹಿ ದಂಡಃ ಕಾಮಕ್ರೋಧಾಭ್ಯಾಂ ಅಜ್ಞಾನಾದ್ವಾ ಸರ್ವವಿದ್ವೇಷಂ ಕರೋತಿ || || ೨೭೪ ||

ಅರ್ಥ : ಕಾಮಕ್ರೋಧಾಭ್ಯಾಂ = ಅರಿಷಡ್ವರ್ಗಂಗಳೊಳ್ ಪೇಳ್ದ ಕಾಮ ಕ್ರೋಧಗಳಿಂ, ಅಜ್ಞಾನಾದ್ವಾ = ಅಱಿಯದೆ ಮೇಣ್, ದುಃಪ್ರಣೀತಃ = ಪೊಲ್ಲದಾಗಿ ಮಾಡಿದ, ದಂಡಃ = ದಂಡಂ, ಹಿ = ನಿಶ್ಚಯದಿಂ, ಸರ್ವವಿದ್ವೇಷಣಂ = ಎಲ್ಲಾ ಮುನಿಸಂ, ಕರೋತಿ = ಮಾಳ್ಕುಂ || ಮರ್ಯಾದೆಯಿಂ ನೆಗಳೆ ದಂಡಮಂ ಮಾಡಲಾಗದೆಂಬುದು ತಾತ್ಪರ್ಯಂ || ದುಷ್ಟನಿಗ್ರಹಮಂ ಮಾಡದುದಕ್ಕೆ ದೋಷಮಂ ಪೇಳ್ವುದುತ್ತರಸೂತ್ರಂ :

—-

೫. ದಂಡ, ಭೂಮಿಯನ್ನು ಸುಡುವುದು, ಜೂಜು, ಅಪುತ್ರಿಕರಾಗಿ ಸತ್ತವರು, ಕಳೆದುಕೊಂಡವರು, ಕಳ್ಳರು, ಹಾದರಿಗರು, ಪ್ರಜಾವಿಪ್ಲವದಿಂದ ಬಂದ ಧನವನ್ನು ರಾಜನು ತನಗಾಗಿ ಉಪಯೋಗಿಸಿಕೊಳ್ಳಲಾಗದು.

೬. ಕಾಮದಿಂದಾಗಲಿ, ಕ್ರೋಧದಿಂದಾಗಲಿ, ಅಜ್ಞಾನದಿಂದಾಗಲಿ ತಪ್ಪಾಗಿ ವಿಧಿಸಲಾದ ದಂಡವು ಎಲ್ಲ ಪ್ರಜೆಗಳ ಕೋಪಕ್ಕೆ ಕಾರಣವಾಗುತ್ತದೆ.

—-

ಅಪ್ರಣೀತೋ ಹಿ ದಂಡೋ ಮಾತ್ಸ್ಯನ್ಯಾಯಮುದ್ಭಾವಯತಿ[3] ಬಲೀಯಾನ ಬಲಂ ಗ್ರಸತೇ || || ೨೭೫ ||

ಅರ್ಥ : ಅಪ್ರಣೀತಃ = ಮಾಡಲ್ಪಡದ, ದಂಡಃ = ದಂಡಂ, ಹಿ = ನಿಶ್ಚಯದಿಂ, ಮಾತ್ಸ್ಯನ್ಯಾಯಂ = ಮೀನಂಗಳೊಂದನೊಂದಂ. ತಿಂಬುದೆಂಬಂತೆ, ಉದ್ಭಾವಯತಿ = ಪುಟ್ಟಿಸುಗುಂ, ಬಲೀಯಾನ್ = ಬಲ್ಲಿದನಪ್ಪಂ, ಅಬಲಂ = ಬಡವನಂ, ಗ್ರಸತೇ = ನುಂಗುಗುಂ || ಅರಸಂ ದುಷ್ಟನಿಗ್ರಹಂ ಗೈಯಲನ್ಯಾಯಮಂ ವರ್ತಿಸದೆಂಬುದು ತಾತ್ಪರ್ಯಂ ||

ಇತಿ ದಂಡನೀತಿಸಮುದ್ದೇಶಂ || ||[4]

[5]ಎಂಟನೆಯ ಸಮುದ್ದೇಶದ ವಾಕ್ಯಂ|| ೭ || ಒಟ್ಟು || ೨೭೫ ||

೭. ದಂಡವನ್ನು ವಿಧಿಸದಿದ್ದರೆ ಮತ್ಸ್ಯನ್ಯಾಯಕ್ಕೆ ಕಾರಣವಾಗುತ್ತದೆ.

—-

 

[1]ಮೈ. ಚೌ. ಪ್ರಜಾಪಾಲನಾಯ

[2]ಮೈ., ಚೌ. ದಂಡದ್ಯೂತಾಹವ.

[3]ಮೈ., ಚೌ. ಬಲೀಯಾನಬಲಂ ಗ್ರಸತಿ ಇತಿ ಮಾತ್ಸ್ಯನ್ಯಾಯಃ ಎಂಬುದು ಬೇರೆ ವಾಕ್ಯವಾಗಿದೆ.

[4]ಇದುð ೯ ಎಂದಿರಬೇಕು.

[5]ಒಂಬತ್ತನೆಯ ಎಂದು ಓದಬೇಕು.