ಹೆಣ್ಣು ಮಕ್ಕಳೆಲ್ಲ ನೀವು ಚೆನ್ನಾಗಿ ಕೇಳಿರೆವ್ವಾ
ಸಣ್ಣ ಬಾಲಕ ನನ್ನ ವಚನವನಾ |
ಅಣ್ಣ ತಮ್ಮ ಭಾವ ಮೈದ್ನ ಗಂಡಂದಿರಿಗೆ |
ಕಿವಿ ಗಡ್ಡ ಹಿಂಡಿ ಕೇಳ್ರಿ ತಾಯಿ ಬುದ್ಧಿಯನಾ  || ಪಲ್ಲ ||

ಹೇಳಿದಾಂಗ ನಿಮ್ಮ ಗಂಡಸರು ಕೇಳತಾರ |
ನಿಮ್ಮ ಕೈಯಾಗೈತ್ರಿ ಮಹಾಮಂತ್ರಾ |
ಮಹಾಮಂತ್ರ  ಅಂದರೇನ ಮಹತ್ವದ ಮಾತಲ್ಲ |
ಅಡಿಗಿ ಮನಿಬಂದ ಮಾಡಬೇಕ್ರಿ ಜರಾ |
ಪರದೇಶಿ ಮಾಲ ತರಬಾರದಂತ ಬುದ್ಧಿ ಹೇಳ್ರಿ |
ಬಿಡಿಸ ಬೇಕರೆವ್ವಾ ನನ್ನ ತಾಯಿಗಳಿರಾ |
ತಂದರ ಸುದ್ದಾ ಅದನ ಕೈಲೆ ಹಿಡಿಯದಿರ |
ಮತ್ತೊಮ್ಮೆ ತರುದಿಲ್ರಿ ಗಂಡಸರಾ ||
ಚಹಾ ಕುಡಿಯುವರಿಗೆ ಛೀ ಹಾಕಿ ನೀವೆಲ್ಲಾ |
ನ್ಯಾರಿ ಮಾಡಲಾಕ ಕೊಡಿರಿ ರೊಟ್ಟಿ ಮಸರಾ |
ನ್ಯಾರಿ ಮಾಡಿ ಚಹಾದಂಗಡಿ ದಾರಿಹಿಡಿದ |
ಹೋಗುವರ ಮಾರಿ ನೋಡಿ ಆಗರೆವ್ವಾ ಬೆಂಕಿಚಾರಾ |
ಮಾತ ಕೇಳದಿರ ನಮ್ಮನ್ಯಾತಕ ತಂದಿಯೋ |
ಬ್ಯಾಸರೇನೊ ನಮಗ ನಮ್ಮ ತವರೂರಾ |
ತವರೂರ ಕಡೆ ನಾವಿ ಜಾವ ಬಡಿತೇವ ಅಂದ್ರ |
ನಾಯಿ ಹಂಗ ಚಾದಂಗಡಿ ಬಿಡುವವರಾ ||

||ಚಾಲ||

ನೀವ ಇದ್ದಲ್ಲೆ ಅವರ ಮನಿತಾನ |
ಇಲ್ಲದಿದ್ದರ ಅವರನ್ನ ಕೇಳುವದಿಲ್ಲ ಯಾರಾ |
ಗಂಡಗಿಚಡಿ ಹೊಡದ ಕುಂಡ್ರವರಾ |
ಚಹದಂಗಡಿ ಪೂರೋಸುದಿಲ್ಲ ಹೊಟ್ಟಿ ತುಂಬುದಿಲ್ಲ
ಹಾಕತಾರ ವುಸರಾ |
ಎಷ್ಟ ಕುಡುತಾರ ಬರೆ ಬಿಸಿನೀರಾ ||
ಉಂಡಿ ತಿಂದರ ಉದ್ರಿ ಕೊಡುದಿಲ್ಲ |
ರೊಕ್ಕ ಇರುದಿಲ್ಲ |
ಬಂತ್ರೆವ್ವಾ ಘೋರಾ |
ಹೊಲಾ ಇದ್ದವಗ ಉದ್ರಿ ಕೊಡತಾರ ||
ಹೊಲಾ ಹೋದರು ತಮ್ಮ ಚ್ಯಾಲ ಬಿಡುದಿಲ್ಲ |
ಮದಲಿಗೆ ಇರುವದಿಲ್ಲ ಶಾಣೆತನಾ
ಪರದೇಶದಿಂದ ಬಂದ ಅಂದ ಚಂದವಾದ |
ಬಳಿ ಹೊಂದಿಸಿ ಕಳಿವ್ಯಾರ ನಾನಾತರಾ |
ಹಗಲಚಿಕ್ಕಿ ಮುಗಲ ಬಣ್ಣ ಶ್ರೀಮಂತ ಕಾಫಿ |
ಕೊಳವಿಬಳಿ ರಾಣೆಗೋಟ ಬಿಲಾವರ ಅಂತ ಹೆಸರಾ |
ಚೌಲಕೊಂದ ಆದರಸುದ್ದಾ ಡೌಲ ಅಂತ ಇಡತೇರವ್ವಾ
ವಲತ್ತದಿಂದಾ ರೊಕ್ಕಾ ಸುಲಿಯುವರಾ |
ನಮ್ಮ ದೇಶದಲ್ಲಿ ಬಳಿ ನಾ ತರಾ ಮಾಡತಾರ |
ಮುರಗೋಡ ಮತ್ತು ಘೋಡಗೇರಿ ಯವರಾ ||
ಕೈ ತುಂಬ ಬಳಿ ಇಟ್ರ ಶೋಭಾ ಕಾಣುದತೆವ್ವಾ |
ಈಗಿನವರ ಇಡತಾರ ಎರಡ ಮೂರಾ |
ಲಗ್ನ ಆಗುವಾಗ ಉಡಿ ತುಂಬುವಾಗ |
ಇಡಸತಿದ್ರ ಕಾಜಿನ ಬಳಿ ಕೈತುಂಬಾ ಹಸರಾ ||
ಹಸರ ಬಳಿ ಇಟ್ಟ ದೇಶದ ಹೆಸರ ತರಬೇಕರೇವ್ವಾ
ಖುಸೆ ಆಗತಾರ ವಿನೋಬಾಭಾವೆಯವರಾ |
ಹಸಗೇಡಿ ಗಿರಿಣಿ ಹೊಸತರ ಬಂದಂಥ ಭಾಂಡ |
ಉಡಬ್ಯಾಡ್ರಿ ಹಡದವ್ವಗಳಿರಾ ||
ಹೇಳಿ ಸೀರಿ ನೇಸರಿ ಉಟ್ಟತರಾ |
ಬಾಳ ಘಟ್ಟಿ ತರಾ ಬಣ್ಣ ಒಳೆಪಕ್ಕಾ
ಅಂದ್ರ ಉಳಿತತಿ ನಿಮ್ಮ ರೊಕ್ಕ |
ನಿಬ್ಣ ಜಾತ್ರಿ ಹೋದಲ್ಲಿ ಹುಡುಗೋರಿಗಿ |
ಕೊಡಬ್ಯಾಡ್ರಿ ಸಲಗಿ |
ಬೇಡತಾವ ರೊಕ್ಕ ಪರದೇಶಿ ಮಾಲ ಕೊಳ್ಳುದಕಾ |
ಕಪ್ಪರದ ಚಾಳಿಸ ತಕ್ಕೊಂಡ |
ಕಣ್ಣಿಗಿ ಹಾಕಿಕೊಂಡ ಕೊಡತಾರೆವ್ವಾ ರೊಕ್ಕಾ |
ತಾಸಿನೊಳ ಮುರದ ಹಸನ ಚೊಕ್ಕಾ ||

||ಏರ||

ಇಂಥ ಮಾಲಿಗೆ ಸ್ವಂತ ರೊಕ್ಕಾ ಕೊಡಬ್ಯಾಡಿರೆಂತ |
ಕರುಹರ ಭೀಮಸಿಂಗ ಹೇಳಿದನು

ರಚನೆ – ಹುಲಕುಂದ ಭೀಮಕವಿ
ಕೃತಿ – ಸರ್ವೋದಯ ಗ್ರಾಮೀಣ ಜನಪದ ಗೀತೆಗಳು