ಹಡದ ತಾಯಿಗಳ ಮುಂದ ಧೃಡವಾದ ಮಾತೊಂದ
ಜಡದ ಹೇಳತೇನ ಕೇಳ್ರಿಸರ‍್ವೆಲ್ಲಾ |
ಭಾಗ್ಯದ ಲಕ್ಷ್ಮಿ ನೀವೆ ವಿಧಿಲಕ್ಷಿ ನೀವೆ
ನಿಮ್ಮಿಂದ ನಡದದ ಜಗವೆಲ್ಲಾ  || ಪಲ್ಲ ||

ಗಂಟ ಮಾರಿ ಹಾಕಿದವರು ಎಂಟ ದಿನ ತೆಗೊದಿಲ್ಲ
ಬಂಟ ಗಂಡಸರು ಮಾಡತಾವ ಚಿಂತಿ |
ತಿಂದ ಕೂಳ ಅವರಿಗೆ ಎಂದು ಮೈಗೆ ಹತ್ತುದಿಲ್ಲ
ನೊಂದಿ ನೊಂದಿ ಆಗತಾವ ಫಜೀತಿ ||
ಹುಳು ಹುಳು ಮಾರಿ ನೋಡಿ ಹೇಳತಾವ
ಯಾರ ಮುಂದ ಗಳೀಕೊಗತಾವ ಎತ್ತಿನ ಬೆನ್ಹತ್ತಿ |
ಗಳೇದಿಂದ ಬಂದ ತೊಲಿಬಾಗಿಲದಾಗ
ಕಾಲಯಿಟ್ಟ ಮೇಲೆ ಹೇಣತಿಯ ಮೋತಿ ನೆನಪಾತಿ ||
ಎತ್ತ ಕಟ್ಟಿ ತುದಿಕಟ್ಟಿಗೆ ಕೂಡ್ರುದರೊಳು
ವಟವಟ ಪಿಟಿಪಿಟಿ ಸುರುವಾತಿ |
ಚಟಗಿ ಮುಚ್ಚಳಕೆಲ್ಲಾ ಶಟಕಿಬೇನಿ ಬಂತ ನೋಡ್ರಿ
ಘಟಪಟ ವಡುತಾಳ ದುರ್ಗದೇವತಿ ||
ನಮ್ಮಪ್ಪ ಕೊಟ್ಟ ಕೂತ ಈ ಮನಿ ಯಾವಲ್ಲಿತ್ತ
ಸಾಯುತನಕ ಅವನ ಹೆಣಕ ಅಳಳುದಾತಿ |
ಬಾವಾನ ಮನಿಯಾಗ ಒಂದ ಭಾಂಡೆಯಿರಬಾರದೇನ |
ಮಣ್ಣ ಕೊಡ ಕೂಡ ನನ್ನ ಜಲ್ಮಾತಿ ||

||ಚಾಲ||

ಹಿಂಗ ವದರ‍್ಯಾಡಿ ನೀವೆಲ್ಲ ತಗಿ ಬಾರದರೆವ್ವಾ ಜಗಳಾ |
ಯಿದರಿಂದ ಆಗುವದು ನಿಮ್ಮ ಮನಿತಾನೆಲ್ಲಾ ಹಾಳಾ ||
ಮೂಲಿ ಮೂಲಿಗೆ ಒಟ್ಟರತಿರಿ ಕಸದ ಗುಂಪಿಗಳಾ |
ಅದರಿಂದ ಹುಟ್ಟುವವು ನಾನಾ ಪ್ರಕಾರದ ಹುಳಾ ||
ಆರೋಗ್ಯವಿಲ್ಲದ ಆಗಿಂದಾಗ ರೋಗ ಬಹಳಾ |
ಕಸಾ ತುಂಬಿ ಒಗದ ಸಾರಿಸಿ ಮಾಡ್ರಿ ಝಳ ಝಳಾ ||
ಮಣ್ಣು ಮಡಿಕಿಯಿದ್ದರೇನ ಬಿಳಿಭಾಂಡೆಯಿದ್ದರೇನ
ತೊಳದ ಸ್ವಚ್ಛ ಮಾಡಬೇಕ್ರಿ ಅವನ್ನೆಲ್ಲಾ ||

ಹೊರಗಿನಿಂದ ಗಂಡಬಂದರ ಜರಾ, ನಕ್ಕ ಬಿಡರೆವ್ವಾ
ಹಲ್ಲ ತೆಗೆದ ನಿಮ್ಮ ಕೂಡಲಗ್ಗ |
ಹೇವಕಾಗಿ ಸುಮ್ಮನಿದ್ದರ ತಾವ ಮಾತಾಡಸತಾರ
ಕರುಣವಿರಬೇಕರಿ ತಾಯಿ ಅವರ ಮೇಲ ||
ಊಟಕ ಕೂತಗ ಎಟುತ್ರಾಸ ಮಾಡಬಾರದ
ಪ್ರೇಮದಿಂದ ನೀಡಬೇಕರಿ ತಾಯಿಯಂಗ ||
ಗಂಡ ಉಣ್ಣದಕ್ಕಿಂತ ಮೊದಲ ನೀವ ಉಂಡ ಕೂತರ
ಆಯುಷ್ಯ ಕಡಿಮಿ ನಿಮ್ಮ ಗಂಡಗ ||
ಗಂಡಗ ನಿಂದಾ ಮಾಡಿದವರು ಹಂದಿಯಾಗಿ
ಹುಟ್ಟಿತಾರ, ಎಂದ ಅಂದ್ರೆ ಮುಂದಿನ ಜಲ್ಮದಾಗ |
ಮದವಿ ಗಂಡ ಮರ ಮರ ಮರಗಿದರ
ತಿರಕೊಳ್ಳುದ ಅಕಿ ಭೋಗದಾಗ ||
ಪತಿಯಿಂದ ಈ ಲೋಕ ಪತಿಯಿಂದ ಪರಲೋಕ
ಪತಿ ಸೇವೆಯ ಮಾಡಿರಿ ಕ್ಷಿತಿ ಮೇಗ |
ಹುಚ್ಚ ಗಂಡನ ಕೂಡ ಮೆಚ್ಚಿ ನಡಕೊಂಡಲ್ಲಿ
ಕೀರ್ತಿ ಬಂತ ಹೇಮರಡ್ಡಿ ಮಲ್ಲಮ್ಮಗ ||

||ಚಾಲ||

ನಿಮಕ್ಕಿಂತ ಹಿರಿಯರಿಗಿ ನಡಿಯಬೇಕ್ರಿ ಶಿರಬಾಗಿ |
ಅತ್ತಿ ಮಾವ ಬಾವ ಅತ್ತಿಗಿ ನಾದಿನಿಯರಿಗಿ ||
ಗುರು ಹಿರಿಯರ ಬೀಗರ ಬರತಿರತಾರ ಮನಿಗಿ |
ಸರಳ ಸ್ವಭಾವದಿಂದ ಮರ್ಯಾದಿ ಕೊಡರಿ ಎಲ್ಲರಿಗಿ ||
ನೆರೆ ಹೊರೆಯಿದ್ದವರ ಕೂಡ ಪ್ರೀತಿ ಗಳಿಸಿರಿ ಹೊಸದಾಗಿ |
ಸಮಾಧಾನ ಗುಣದ ಮೇಲೆ ಪೂರ್ಣಯಿರಲಿ ನಂಬಿಗಿ ||

||ಏರ||

ಅನ್ನದಾನ ಕನ್ಯಾದಾನ ಚಿನ್ನದಾನ ವಸ್ತ್ರ ದಾನ
ಎಲ್ಲ ದನಕಿಂತ ಸಮಾಧಾನ ಮೇಲಾ ||
ತಾಯಿಯಂತೆ ಮಕ್ಕಳಂತ ಹೇಳತಾರ ಗಾದಿಮಾತ |
ನೋಡಿಕೊಂಡ ಹಡಿರೆವ್ವಾ ಕೂಸಿನ್ನ |
ವರುಷ ತುಂಬುದರೊಳಗ ಎರಡ ಹಡಿಯಬೇಡಿರಿ
ಶಗಣಿ ಮುದ್ದ್ಯಾಗಿನ ಹುಳಗಳನಾ ||
ಹತ್ತ ಹಡಿಯದೆ ಒಂದ ಮುತ್ತ ಹಡಿಯಬೇಕ |
ಜವಾಹರಲಾಲ ನೆಹರುನಂಥ ಪಂಡಿತನಾ ||
ಬಯಕಿ ಹತ್ತಿದಾಗ ಊಟ ಚಲೋ ಆದರ
ಹುಟ್ಟತಾವ ಸಕಲ ಗುಣ ಸಂಪೂರ್ಣ||
ಬೂದಿ ಕರಣಿ ಶೋಧಮಾಡಿ ದಾದಯಿಲ್ಲ ತಿಂತಿರಿ
ಗೋದಿ ಒಳಗಿನ ಹರಳ ಹುಡಿಕಿ ಎರಿಮಣ್ಣಾ |
ಬಾದ ಹುಡುಗರ ಹುಟ್ಟ ಹಾದಿ ಬಿಟ್ಟ ತಿರಗತಾವ
ಖಾದಿ ಹಾಕುದಿಲ್ಲ ಆಗತಾವ ಕೋಣಾ |
ಶ್ರೇಷ್ಠತ್ವ ಇರುದಿಲ್ಲ ಹುಟ್ಟಿದಾಗ ಖೊಟ್ಟಿ ಗುಣ
ತೊಟ್ಟಿಲದಾಗ ಕಲಿತಾವ ಘಟಿಂಗತನಾ |
ರೊಟ್ಟಿ ಕೆಡಿಸುವ ಆಳಯಿವ ನಿಷ್ಢಾವಂತರಲ್ಲರೆವ್ವಾ
ಭ್ರಷ್ಟರಿಂದ ರಾಷ್ಟ್ರದ ಅಪಮಾನಾ ||

||ಚಾಲ||

ಇಂಥ ರಾಷ್ಟ್ರ ಘಾತರಿದ್ದ ದೇಶವೆಲ್ಲಾ ಅಳಗಾಲ |
ಗಾಂಧಿ ಯಂಥವರ‍್ನ ಹಡದರ ಬೀಳತೇವ ಕಾಲಾ ||
ಕಿತ್ತೂರ ಚನ್ನಮ್ಮನಂಥ ಹೆಣ್ಣ ಮಕ್ಕಳು ಈಗ ಇಲ್ಲ |
ನೆನಿಸಿ ಕೋತ ಕೂಡ್ರುದಾತ ಹಿಂದಿನ ಹಿರಿಯರನೆಲ್ಲ |
ಈಗಿನವರು ಕಲತಾರ ಮಾಡಲಿಕ್ಕೆ ಬಾಳ ಡೌಲ |
ಡೌಲ ಬಿಡಿರಿ ಇನ್ನ ಮೇಲ ಹಾಳಾತ ಹಿಂದುಸ್ತಾನವೆಲ್ಲ ||

||ಏg||

ಮಂದಿಗೆ ಬುದ್ಧಿ ಹೇಳಿತಂದ ಹಾದಿಗೆ
ಹುಲಕುಂದ ಭೀಮರಾಯನ ಅಕಲ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು