ಮಗನ ತೂಗುವ ತಾಯಿ ಜಗವ ತೂಗುವಳೆಂದು |
ತಗದ ಹೇಳುವೆ ಕಲಿಯುಗದ ಕಥಾ |
ಗಲಿರುಳೆನ್ನದೆ ತಗಬಗಿಸುವ ಮನ
ಬಿಗಿ ಹಿಡಿದವರಿಗೆ ಲಗು ಒಳಿತಾ || ಪ ||

ಬಾಲಕಿಯರು ಮನಿ ಮಾಲಕರಾಗಿ ದೇಶ |
ಪಾಲಕರಾಗುದ ತಾವೇ ಸ್ವತಾ |
ಪಲ್ಲಕ್ಕಿಯೋಳು ಕೂತ ಲೋಲಾಡುವದಕ್ಕೆಲ್ಲಾ |
ಮೂಲ ಇವರೇ ಕಾರಣ ಭೂತಾ ||
ತ್ಯಾಗಿ ಯೋಗಿಗಳು ಜೋಗಿ ಜಂಗಮರು |
ಆಗುದು ಇವರಿಂದ ಉತ್ಪತ್ತಾ |
ಕವಿ ವಚನ ಶಿವ ವಾಙ್ಮಯಗಾರ |
ಇವರೆಲ್ಲಾ ಸ್ತ್ರೀಯರಿಂದ ಪ್ರಖ್ಯಾತಾ ||
ಮೆರೆವ ಅರಸು ತಿರುಕ ಹರಿಜನರು |
ಸಿರಿವಂತರಿಗೆಲ್ಲಾ ಇವರೇ ಮಾತಾ |
ಭರತ ಖಂಡದಲ್ಲಿರುವ ನಾರಿಯರನ್ನ |
ವರ್ಣಿಸುವದು ಆಗದ ಮಾತಾ ||

||ಚಾಲ||

ಸ್ವಾಮಿ ರಾಮಕೃಷ್ಣ ಪರಮಹಂಸ ವಿವೇಕಾನಂದ ಪುರುಷ |
ಇವರನ್ನ ಹಡದವರಾ ಅಂಥವರಿಂದ ದೇಶದುದ್ಧಾರಾ ||
ಶಿವಾಜಿ ಮಹಾರಾಜ ತಾಯಿ ಅನಬೇಕ ಜೀಝಾಬಾಯಿ |
ಮನಸ ನಿರ್ಧಾರಾ ಧೈರ್ಯವಂತಿ ಇದ್ಲ ಭರಪೂರಾ ||
ಮೋತಿಲಾಲ ನೇಹರು ಅವರ ಸತಿ ಸ್ವರೂಪರಾಣಿ |
ಹೆತ್ತ ಕುವರಾ ಜವಹರಲಾಲ ನೋಡ್ರಿ ಸತ್ಪುತ್ರಾ ||

||ಏರು||

ಧೀರ ಮಾತೆಯರ ವೀರರಕ್ತದಿಂದ ಶೂರ |
ಪುರುಷರು ಜನಿಶಾರ ಮಸ್ತಾ
ಸತ್ಯವಂತ ಸತ್ಪುರುಷ ಗಾಂಧಿಜಿ ತಾಯಿ |
ಪುತಳಾಬಾಯಿ ಅಂತ ಆಕಿ ಹೆಸರಾ |
ನಿತ್ಯ ನೇಮದ ವೃತಾ ತಪ್ಪದೆ ಇದ್ದಲ್ಲೆ |
ಹುಟ್ಟಿದ್ದನು ಅಂಥ  ಕುವರಾ ||
ಸೂರ್ಯ ನಾರಾಯಣನ ಮಾರಿ ನೋಡಿದಲೆ |
ಬಾಯಾಗ ಹಾಕತಿದ್ದಿಲ್ಲ ನೀರಾ |
ಮೂರ ದಿವಸ ಮಾಡ ಮುಚ್ಚಿದರು |
ಸುದ್ದಾ ಉಪವಾಸ ಇರತಿದ್ಲ ನಿರ್ಧಾರಾ ||
ಬಿಸಲ ಬಿದ್ದತಿ ಅಂತ ಚೇಷ್ಟಾ ಮಾಡಿದರ |
ಹೊರಟ ನಕ್ಕ ಮಾತಾಡಿ ಹೋಗತಿದ್ಲ |
ಸಿಟ್ಟಿಗೇಳತಿದ್ದಿಲ್ಲ ಚೂರಾ ||

||ಚಾಲ||

ಇಂಥಾ ಭಾವನಾದಿಂದ ಇದ್ದಲ್ಲೆ ಅಕಿಯ ಹೊಟ್ಟಲಿ |
ಬಾಪೂಜಿ ಜನಸಿದನು ಕಲಿಯುಗದಿ ಕೀರ್ತಿ ಹೊಂದ್ಯಾನು ||
ಹೊಟ್ಟೆಯೊಳಗ ಪಿಂಡ ಮೂಡಿದಾಗ ತಾಯಿ ಮನಸಿನಾಗ |
ಇದ್ದಂಥ ಗುಣವನ್ನು ಕೂಸ ಅನುಕರಣ ಮಾಡುವದು ತಾನು ||
ಇದನ ತಿಳಿದ ನೋಡಿ ಅನಗುಣ ಬಿಟ್ಟ ಸಂಪೂರ್ಣ |
ಹಿಡಿರಿ ಶಾಂತಿಯನು ಮುಂದ ಪಡಿರಿ ಮುಕ್ತಿ ಮಾರ್ಗವನು ||

||ಏರು||

ಭಾವದಂತೆ ಭಕ್ತಿ ಜೀವ ಇದ್ದಂತೆ ಶಿವ |
ಮನ ಇದ್ದಂತೆ ಘನವೆಂಬ ಗಣಿತಾ
ವ್ಯಾಳೆ ವ್ಯಾಳೆಕ ಘಾಳಿ ಬಿಟ್ಟಂತೆ |
ಹಾಳ ಮಾಡುದು ನಿಮ್ಮನೀ ಮನಸಾ |
ಬುದ್ಧಿಯಿಂದ ತಿದ್ದಿ ಬದ್ಧ ಮಾಡಿದರ
ಶುದ್ಧವಾಗಿ ಕಾಂಬುದು ಹಸಾ
ಬುದ್ಧಿವಾಗಿ ಕಾಂಬುದು ಹಸಾ ||
ಮನಸ್ವಚ್ಛ ಆಗುದಕ್ಕ ಮೈ ಸ್ವಚ್ಛ ಇರಬೇಕ |
ನಿತ್ಯ ಸ್ನಾನದಿ ಕಳಿಬೇಕ ಹೊಲಸಾ |
ಹೊಲಸ ಇರವರಿಗೆ ಕೆಲಸ ನೀಗುದಿಲ್ಲ |
ಆಲಸ್ಯತನದಿಂದ ಕುಲನಾಶಾ ||
ಕುಲಾ ಚಲು ಮನಿ ಹೊಲಾ ಗಳಿಸಿ ಹೊಟ್ಟಿ |
ಫಲಾ ಇದ್ದರ ಅತಿ ಹರುಷಾ |
ಹರುಷ ಮಾತ ಸಂವಿ ಬೆರಸಿ ಆಡಿದರ |
ಸರಸದಿಂದ ವಲಿಯಾಂವ ಪುರುಷಾ ||

||ಚಾಲ||

ಹಿಂದಾಡಿ ಕೋತಿರಿ ಗಂಡಗ ನಾನು ದುಡದಾಗ |
ನನ್ನ ಬಾಳ್ವೆ ಸರಳಾ ಇವಗೆಷ್ಟ ಬಡೀಲಿ ಮೂರ ಕೂಳಾ ||
ಮಾಡಿದಾಗ ಬಂದ ತಿನ್ನಾಂವ ಹೊರಗ ಹೋಗಾಂವ |
ಇವಗ ಇಲ್ಲಾ ಕಳ್ಳಾ ಕರಕೊಳ್ಳುವದಿಲ್ಲ ಮಕ್ಕಳಾ ||
ತನ್ನ ಮನಿಯಾಗ ಇಟಕೊಂಡ ರಾಡಿ ಹಿರೇತನ ಮಾಡಿ |
ಬರತಾನಿವ ಕಳ್ಳಾ ನನ್ನ ಮುಂದ ಹೇಳತಾನ ಸುಳ್ಳಾ ||

||ಏರು||

ಅನಕ ಆಡುದು ಬಿಡರೆಂತ ಹುಲಕುಂದ |
ಭೀಮೇಶ ಹೇಳಿದ ಮಾತಾ

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು