ನೀತಿವಂತ ಹೆಣ್ಣ ಮಕ್ಕಳು ಅಂತ ಯಾರಿಗೆ ಅನಬೇಕು
ತುರ್ತಾ ಹೇಳುವೆನು ಕೇಳಿರಿ ಕೂತಾ ||ಪಲ್ಲ||

ಪತಿಗಿಂತ ಮೊದಲು ಸೂರ‍್ಯ ಉದಯದೋಳು ಏಳಾಕ್ಕಿ
ಪ್ರತಿದಿನದ ಕೆಲಸವನು ನಿತ್ಯನೇಮ ಮಾಡಾಕ್ಕಿ ||
ದೇವರಲ್ಲಿ ಇಡುವ ಭಕ್ತಿ ಗಂಡನಮೇಲೆ ಇಟ್ಟಾಕಿ ದುರ್ವೆಶನಕಾಗಿ
ದುರ್ವೆಶನಕಾಗಿ ಆಕಿ ಮನಸನು ಹಾಕಬಾರದಂತಾ|| ೧ ||

ಮನೆತನದ ಆದಾಯನೋಡಿ ಹೆಚ್ಚು ಕಡಿಮಿ ಆಗದಂತೆ
ಪ್ರಪಂಚಮಾಡುವ ಹಿಡಿತಾ ಮನದೊಳು ಇದ್ರ ಸಿದ್ಧಾಂತಂ ||
ಒನಪ ಒಯ್ಯಾರ ಮೋಸತನ ಗೊತ್ತ ಇಲ್ಲದಂತಾಕ್ಕಿ
ಚಹಾ ಕಾಫಿಯ ಚಟವನು ಕಟ್ಟಾಮಾಡಿ ಬಿಟ್ಟಾಕ್ಕಿ
ಕಡುನಿದ್ರೆ ಆಲಸ್ಯತನ ಪೂರ್ಣ ಆಳಿದು ಬಿಟ್ಟಾಕ್ಕಿ
ದಾನಮಾಡುವ ದಾನಾಮಾಡುವ ಕೈಯ್ಯಾ ಇದ್ದರ ಇರಬೇಕಂತಾ|| ೨ ||

ಪರಪುರುಷರ ಕಂಡರ ಅಣ್ಣ ತಮ್ಮರನ್ನುವಾಕಿ
ಅತ್ತಿ – ಮಾವ ಭಾವಂದಿರನ ಪ್ರೇಮದಿಂದ ನೋಡಾಕ್ಕಿ ||
ಪತಿ ಭಂಗಾರಕ್ಕಿಂತ ಆಡಂಬರ ಮನದೊಳು ತರಬಾರದಂತಾ
ಹಿಂಗ ಹೇಳತದ ವೇದಾಂತಾ ||

ಯೌವ್ವನಕಾಲಕ್ಕ ಪತಿಯ ಆಜ್ಞೆ ಮೀರದಾಕ್ಕಿ
ವೃದ್ಧಾಪ್ಯದೊಳಗ ಮಕ್ಕಳಾಜ್ಞೆದಾಗ ಇರಾಕ್ಕಿ
ಸಿರಿ ಬಡತನವೆಂಬುವದು ಸುಂಟರಗಾಳಿ ಎನ್ನಾಕ್ಕಿ ||
ಚೆಂದ ಹುಲಕುಂದ ಚೆಂದ ಹುಲಕುಂದ
ಕಂದ ಭೀಮ ಮಾಡಿ ಹೇಳಿದ ಕವಿತಾ|| ೪ ||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು