ಬರಿಯಲಿಕ್ಕೆ ಕಲಿಯದೆ ಓದೇವ ಕಮ್ಮ
ಕರಿಯದವರ ಮನಿಗೆ ಹೋಗಾವ ಕಮ್ಮ ||
ಏನು ತಿಳಿಯದೆ ಗೋಣ ಹಾಕಿಕೊಂತ
ಶಾಸ್ತ್ರಪುರಾಣ ಕೇಳಾಂವ ಕಮ್ಮ ||

ಜಂಬ ಪೋಷಕಗಳ ಹಾಕಾವ ಕಮ್ಮ
ಕೆಲಸವಿಲ್ಲದೆ ಖಾಲಿ ತಿರಗಾಂವ ಕಮ್ಮ ||
ಸಾಧುಸಂತರ ಸಂಗವ ಮರತು
ವೇಶೇರ ಸಹವಾಸ ಮಾಡುವ ಕಮ್ಮ ||

ಸುಳ್ಳ ಖರೆ ಚಾಡಿ ಹೇಳಾವ ಕಮ್ಮ
ಜಗಳಾ ಬೆಳಿಸಿ ಮೋಜ ನೋಡಾವ ಕಮ್ಮ ||
ವಿಶ್ವಾಸ ಇದ್ದಲ್ಲಿ ನಂಬಿ ನಡೆಯಬೇಕ
ಕದ್ದಿಲಿ ಕಾಯಕಾ ಮಾಡಾವ ಕಮ್ಮ ||

ನೀತಿ ನೇಮ ಬಿಟ್ಟ ನಡ್ಯಾವ ಕಮ್ಮ
ಜಾತಿ ಭೂತ ಬೆನ್ನ ಹತ್ತಾಂವ ಕಮ್ಮ
ಜನಿಸಿ ಬಂದವರೆಲ್ಲಾ ಒಂದs ಸ್ವರೂಪಾ
ನಾವು ನೀವಂತ  ಅನ್ನಾಂವಾ ಕಮ್ಮ

ತರಕ ತಪ್ಪಿ ಪದಾ ಮಾಡಾಂವ ಕಮ್ಮ
ಸುರತಿ ನಾದ ಬಿಟ್ಟ ಹಾಡಾಂವ ಕಮ್ಮ
ಅಬ್ಬರದಿಂದ ಬಂದ ಸಭಾದೊಳಗ ನಿಂತ
ಅಗ್ಗ ಆಗಿ ಮನಿಗಿ ಹೋಗಾಂವ ಕಮ್ಮ ||

ತಿಗಡೊಳ್ಳಿ ಮರಿಕಲ್ಲಗ ಅಹಂಕಾರ ಕಮ್ಮ
ಪ್ರಾಸ ಇಲ್ಲದೆ ಪದಾ ಮಾಡೋದ ಕಮ್ಮ ||
ಬಲಭೀಮನ ಶಿಷ್ಯರಾಗಬೇಕ ಆಗದಿದ್ದರ
ನಿಮ್ಮ ದೈವಾನ ಕಮ್ಮ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು