ಸಾದೂರ ಸಂಗ ಚೆಂದಾ ಸದ್ಗುರುವಿನ ಧ್ಯಾನ ಚೆಂದಾ
ಭಕ್ತಿ ಇದ್ರ ಭಜನಾ ಚೆಂದಾ ಶಕ್ತಿ ಇದ್ರ ಕುಸ್ತಿ ಚೆಂದಾ ||
ಯುಕ್ತಿಲಿಂದ ರಾಜ್ಯ ಆಳೋದು ಚೆಂದಾ ||

ಗಡ್ಡ ಇದ್ರ ಮಕಾ ಚೆಂದಾ ಗುಡ್ಡಕ್ಕ ಕಡ್ಡ ಚೆಂದಾ
ವಡ್ಡಗಿ ನೀರ ಚೆಂದಾ ಮಡ್ಡಗಿ ದಡ್ಡಿ ಚೆಂದಾ ||
ದಡ್ಡರ ಕೂಡ ಗುದ್ದ್ಯಾಡೋದಲ್ಲ ಚೆಂದಾ ||

ಮೀಸಿ ಇದ್ದ ಮಾರಿ ಚೆಂದಾ ಕುಂಕುಮ ಇದ್ದ ನಾರಿ ಚೆಂದಾ
ವಾರಿಗುಳ್ಳ ವಗತಾನ ಚೆಂದಾ ಸರಿ ಇದ್ದ ನೆರಿ ಚೆಂದಾ ||
ಹಿಂದಮುಂದ ನಿಂದಾ ಆಡೋದಲ್ಲ ಚೆಂದಾ ||

ಕೈಯೊಳು ಬಳಿ ಚೆಂದಾ ಮಮತೇವ ಮಾತ ಚೆಂದಾ
ಮಾತಿನಂತೆ ಕೃತಿ ಚೆಂದಾ ಮಕ್ಕಳಿದ್ರ ಮನಿ ಚೆಂದಾ ||
ಹಡ್ಯಾವರಿಗೆ ಚೇಷ್ಟಾ ಆಡೋದಲ್ಲ ಚೆಂದಾ ||

ತಿಗಡೊಳ್ಳಿ ಊರ ಚಂದಾ ಗ್ರಾಮದೇವಿ ಗುಡಿ ಚೆಂದಾ
ಬಲಭೀಮನ ದರ್ಶನ ಚೆಂದಾ ಮರಿಕಲ್ಲನ ಕವಿ ಚೆಂದಾ ||
ಯುಗಾದಿಗೇ ಕಲ್ಮೇಸೂರ ಜಾತ್ರಿ ಚೆಂದಾ ||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು