ಜೈನ ಧರ್ಮದ ಕ್ರಿಯಾ ಹೇಳತೇವ ತಗದ ಬಾಯಾ
ನನ್ನ ಮ್ಯಾಲ ನಿಮ್ಮ ದಯಾ ಇರಬೇಕ ಪೂರ್ಣ
ಶಾಂತದಿಂದ ಕೇಳರಿ ಸರ್ವಜನಾ ||

ಜೈನರಾಗಿ ಜನಿಸಿದ ಬಳಿಕ ಕ್ರಮ ನೋಡಿ ನಡಿಬೇಕ
ಪಾಪಪುಣ್ಯ ಅರಿಬೇಕ ತಿಳದ ನುಡಿ ಆಡಬೇಕ
ಆಹಾರ ನೋಡಿ ಮಾಡಬೇಕ ಭೋಜನಾ
ನೀರ ಸೋಸಿ ಕುಡೀರಿ ಪ್ರತಿದಿನಾ  ||

ಪಾತಾಳ ಬಟ್ಟಿ ತಗೋಬೇಕ ಜೋಡೊಪದರ ಮಾಡಬೇಕ
ಬಾಂವಿಯಲ್ಲಿ ಸೋಸಬೇಕ
ಅರವಿ ತೊಳದ ಮಾಡಬೇಕ ಹಸನಾ
ಇದರಂತ ಮಾಡ್ರಿ ಹಾಲುಹೈನಾ ||

ಮೈಲಿಗಿ ಬಟ್ಟಿ ಇರಬಾರದ ಉಪಯೋಗ ಮಾಡಿರಬಾರದ
ಚಿದ್ರ ಪದ್ರ ಆಗಿರಬಾರದ
ನಿಮ್ಮ ಮುಂದ ಮಾಡುವೆ ವರ್ಣನಾ
ಇಲ್ಲದಿದ್ರ ಕೊಲ್ಲುವಿರಿ ಕ್ರಿಮಿಗಳನಾ ||

ಮಲಿನ ಬಟ್ಟಿ ಇರಬಾರದಂತ ಹೇಳತೇನ ನಾನಿಂತ
ಕೇಳಬಹುದ ಯಾಕಂತ
ಭಗವಂತಗ ನೈವೇದ್ಯೆ ಆಗೋದ ಅನ್ನಾ
ಗುರುಗಳಿಗೆ ಕೊಡತೇರಿ ಆಹಾರವನ್ನಾ ||

ನೀರ ಸೋಸಿ ಕುಡಿದಿದ್ದರ ಆಹಾರ ನೋಡಿ ಉಣದಿದ್ದರ
ದಾರಿ ನೋಡಿ ನಡಿದಿದ್ದರ
ಊರ ಸುಟ್ಟ ಮಾಡಿದಂತೆ ದಹನಾ
ತಟ್ಟುವದು ಪಾಪದ ಬಂಧನಾ
ತಿಗಡೊಳ್ಳಿ ಊರಸಿಸ್ತ ಬಸ್ತಿಯಲ್ಲಿ ಭಗವಂತ
ಜಿನೇಶ್ವರ ಅರಿಹಂತ
ಮಾಡತೇನ ನಾವು ಧ್ಯಾನಾ
ಇದು ಮರಿಕಲ್ಲನ ಕವನಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು