ಆಧ್ಯಾತ್ಮ ವಿಚಾರಗಳ ಉದ್ದೇಶಗಳ ಸರಳ
ಶ್ರದ್ಧಾದಿಂದ ಕೂತ ಕೇಳಬೇಕ
ಬುದ್ಧಿವೃದ್ಧಿಯಾಗುದಕ್ಕ ಶುದ್ಧಾಚರಣೆ ಮುಖ್ಯ
ಮುದ್ದಾಂ ತಿದ್ದಿ ನೋಡ ಚೊಕ್ಕ               || ಪ ||

ಪ್ರತಿನಿತ್ಯ ತಪ್ಪದಲೆ ಸ್ವತಾ ಏಳಬೇಕ
ಪ್ರಾಥಃಕಾಲ ನಾಲ್ಕ ಘಂಟೇಕ
ಅತಿ ಉತ್ತಮನಾದ ಪ್ರಾರ್ಥನೆ ಸಮಯ ಅದು
ಚಿತ್ತ ಶುದ್ಧಿಯಾಗುವದಕ್ಕ ||
ಪೂರ್ವಾಭಿಮುಖವಾಗಿ ಸರ್ವಾಂಗ ಆಸನ ಹಾಕ
ಸರ್ವೇಶನ ಧ್ಯಾನಕ ಠೀಕ
ಸರ್ವ ವಿಧದಿಂದ ಪ್ರಾಣಾಯಾಮ ಮಾಡ
ಭರಪೂರ ಶರೀರ  ರಕ್ಷಣಕ ||
ಶ್ರೀರಾಮ ಹರಿ ಓಂ ನಮಃ ಶಿವಾಯ
ಯಾವದಾದರು iಂತ್ರ ಜಪಿಸುದಕ್ಕ
ನೂರಾ ಎಂಟರಿಂದ ಎಪ್ಪತೋಂದ ಸಾವಿರದಾ
ಆರನೂರ ಲೆಖ್ಖ ಆಗಲಿ ಪಕ್ಕ ||

||ಚಾಲ||

ವ್ಯಾಯಾಮ ಜಪತಪ ಮಾಡುದಕ
ಖಾಯಮ ಪರಭಾರ ಖೋಲಿ ಬೇಕ ||
ಮಿತ ಆಹಾರ ಇರಬೇಕ ಸಾತ್ವಿಕ
ಅತಿ ಉಂಡರ ತಟ್ಟುದು ಪಾಪದ ಶಕ ||
ಪ್ರತಿ ತಿಂಗಳ ಪ್ರತಿ ದಿವಸಕ
ಶಕ್ತ್ಯಾನುಸಾರ ದಾನಕೊಟ್ರ ಸುಖ ||

||ಏರ||

ಶುದ್ಧ ವಿಚಾರದಿಂದ ಗ್ರಂಥ ಅಧ್ಯಯನ ಮಾಡ
ದಿನಂಪ್ರತಿ ಅರ್ಧಘಂಟೆಯಾದರು ಸಾಕ|| ೧ ||

ಬ್ರಹ್ಮಚರ್ಯವೇ ಜೀವನ ವೀರ್ಯ ನಾಶವೇ ಮೃತ್ಯು
ಸಾರುವದು ಹಿಂಗ ಶಾಸ್ತ್ರದೊಳಗ
ಬ್ರಹ್ಮಜ್ಞಾನಿಯಾಗುದಕ್ಕ  ವೀರ್ಯ ಕಾಪಾಡಬೇಕ
ಸರ್ವ ಸುಖ ದೊರಿಯುದು ಅವಗ ||
ದುರಾಚಾರ ದುರ‍್ಚಟ ದುರ್ಗುಣ ದುರಭ್ಯಾಸ
ಇರಬಾರ‍್ದ ಕೆಟ್ಟ ದುಸ್ಸಂಗ
ಪರೋಪಕಾರ ಸುವಿಚಾರ ಸದಾಚಾರ ಬರೋಬರಿ
ಪರಿಶುದ್ಧವಾದ ಸತ್ಸಂಗ ||
ಪ್ರಾರ್ಥನ ಸ್ತೋತ್ರ ಶ್ಲೋಕ ಬಾಯಿಪಾಠ ಮಾಡಿಕೊಂಡ
ಅರ್ಥ ತಿಳಿಕೊಂಡು ಆರಂಭವಾಗಲಿ
ಆಸನ ಮೇಲೆ ಕುಳತಾಗ ||

||ಚಾಲ||

ದರವಂದ ಏಕಾದಶಿ ದಿವಸ
ನಿರಾಹಾರ ಇದ್ದರ ಫಾಸ
ಹಾಲು ಹಂಣ ತಕ್ಕೊಂಡರ ತುಸ
ಚಲೋ ಆಗುದು ಸರಳ ಮನಸ ||
ದಿನ ಎರಡ ಘಂಟೆ ಮೌನ ಪಾಲಿಸ
ಏನೇನು ಆಗುದಿಲ್ಲ ತ್ರಾಸ ||

||ಏರು||

ಸದಾ ಸತ್ಯ ನುಡಿ ಮಧುರ ವಚನಗಳಾಡಿ
ಉದಾರತನದಲ್ಲಿ ಮನ ನೂಕ  || ೨ ||

ಸಾಮಾನ್ಯ ಜೀವನ ಪಾಡ ಸಾದಾ ಅರಿವಿ
ಉಡತೊಡ ಭಾವನೆ ಸ್ವಚ್ಛ ಇರಬೇಕ ತ್ಯಾಗಿ
ಪ್ರೇಮ ದಯ ಕ್ಷಮೆಯಿಂದ ಕಾಮ ಕ್ರೋಧವ
ತಡದ ಅಹಿಂಸಾ ಮಾರ್ಗಕೆ ಹೋಗ ಸಾಗಿ ||
ಸೇವಾ ಮಾಡಿಸಿಕೊಳ್ಳುವ ಅವಲಂಬನೆಯ ಬಿಟ್ಟು
ಕಾಯಕ ಸ್ವಾವಲಂಬನೆಯಾಗಿ
ದೇವರ ಧ್ಯಾನ ನಿವಳ ಮಲಗುವಾಗ ಏಳುವಾಗ
ಕಾಯುವನು ಭಕ್ತರ ಆಳಾಗಿ ||
ಮಾಡಿದಂಥ ಕಾರ್ಯಗಳು ಮಲಗುವಾಗ ಡಾಯರಿ ಬರಿ
ಪ್ರಾಯಶ್ಚಿತ ಹೊಂದ ತಪ್ಪಿಗಾಗಿ
ನೋಡಿಕೊಂಡ ಅಪರಾಧ ಮೊದಲಿನಂತೆ ಮತ್ತೊಮ್ಮೆ
ಆಗದಂತೆ ಇರ ಎಚ್ಚರಾಗಿ ||

||ಚಾಲ||

ಸ್ಮರಣೆ ಇರಲಿ ಮರಣ ತಪ್ಪಿದ್ದಲ್ಲಾ
ಶರೀರಿರುದರೊಳು ಅರಿತರ ಮೇಲಾ ||
ಮನಸ್ಸಿಗೆ ಸಲಿಗಿ ಕೊಡುದಲ್ಲಾ
ಜ್ಞಾನಿಗಳು ಹೇಳ್ಯಾರ ಈ ಕುಶಲಾ ||
ಕನ್ನಡ ನಾಡಿನಲ್ಲಿ ಹುಲಕುಂದ ಮಿಗಿಲಾ
ಭೀಮೇಶ ಹೇಳಿದ ಅಖಲಾ ||

||ಏರು||

ಸಾಧ್ಯವಿದ್ದ ಅನುಭವ ಪದ್ಯರೂಪದಿಂದ ಕೇಳಿ
ತಜ್ಞರಿಗೆ ಆಯ್ತ ಮನಸಿನ ತಕ್ಕಾ|| ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು