ಜಗದ್ವ್ಯಾಪಿ ಜಗದ್ಗುರು ಜಗದ್ರಕ್ಷಕಾ
ಸಾಂಬನಿಂದ ಆತ ಜಗದ ಉತ್ಪತ್ತಿ
ಸರ್ವ ಜೀವರಾಶಿಗಳಿಗೆ ಪರಮಾತ್ಮಗತಿ
ಸದಾ ನೆನಿಯಬೇಕ ಶಿವನಾಮ ಸ್ತುತಿ ||
ಗುರುವಿನ ಧ್ಯಾನಾ ಮರಿಬ್ಯಾಡೊ ಮಾನವಾ
ಗುರುವಿನಿಂದ ಆಗೋದು ಮುಕ್ತಿ
ಹೀಂಗ ಹೇಳತೈತಿ ಶಾಸ್ತ್ರದ ರೀತಿ ||
ಎಂಭತ್ತ ನಾಲ್ಕ ಲಕ್ಷ ಯೋನಿ ತಿರಗಿ ಬಂದಿ

ಆಗ ಜ್ಞಾನ ಇದ್ದಿದ್ದಿಲ್ಲ ನಿನ್ನಹಂತಿ
ಈಗ ಮತ್ತ ಮಾನವ ಜನ್ಮ ಬಂದೈತಿ ಹಿಂದಿಂದ ಮರತಿ
ತಿಳದನೋಡೊ ಸ್ಥಿರವಲ್ಲ ಮಂದಮತಿ ||
ಸಾಧು ಸಂತರು ಸಾರಿ ಸಾರಿ ಹೇಳತಾರ
ಹುಟ್ಟೋದು ಸಾಯೋದು ನಡದೈತಿ
ಎಂದ ಬಿಟ್ಟsತಿ ||
ಆಸೇಕ ಬಿದ್ದ ಸುಳ್ಳ ಗಾಸಿ ಆಗಬ್ಯಾಡ
ಸಂಸಾರಂಬೋದು ಮೂರದಿನದ ಸಂತಿ
ಮಂದಿ ಬಳಗಲ್ಲಾ ನನ್ನವರಂತಿ
ಮೆಚ್ಚಿಕೊಂಡ ನೀ ಕುಂತಿ ||
ಯಮನ ದೂತರು ಬಂದು ಎಳದ ಒಯ್ಯುವಾಗ
ಯಾರೂ ಎಲ್ಲ ನಿನ್ನ ಸಂಗಾತಿ
ಯಮನ ಮುಂದ ಕೊಡಬೇಕ ಜಡತಿ ||

ಅರುವಿನ ಜನ್ಮ ಇದು ಅರಿತಾಂವ ಬ್ರಹ್ಮಾ
ಅರಿಯದವಗ ಇಲ್ಲ ಸದ್ಗತಿ
ನಾನೇ ನಾನೇ ಅನ್ನೋದು ನರಕದ ಪ್ರಾಪ್ತಿ
ನಂದು ತಂದು ಅಂತ ಸುಳ್ಳ ಹೆಣಿಗ್ಯಾಡತಿ ||
ಬಾಳ ಹೇಳೋದೇನ ಗೋಳತಿ ಪೂರ್ತಿ
ಆಗೋದ ಶಾಂತಿ ||

ಒಂದನೆ ಚಾಲ

ದುಡದುಡದ ಗಳಿಸಿ ಜಿಂದಗಾನಿ ದೊಡ್ಡ ಹೊಲಾಮನಿ

ಅಂತೀಯೋ ನಂದಾ
ಎಲ್ಲಾ ಬಿಟ್ಟು ನಡದ್ಯೋ ಇಲ್ಲಿಂದಾ ||

ಇದರೊಳಗ ಕಳದಿ ಆಯುಷ್ಯ ಆದಿ ಬಲುಗಾಸಿ
ನೋಡಿಕೋ ತಿಳದಾ
ಸುಖ ಆಗಲಿಲ್ಲೊ ಎಂದೆಂದಾ

ಹಗಲಿರುಳು ಇಲ್ಲ ಮನಶ್ಯಾಂತಿ ಬಿಡದ ಬಯಲ ಭ್ರಾಂತಿ
ತುಂಬೇತಿ ಅಭಿಮಾನ ಮದಾ
ನಿಂದಾ ಆಡತೀಯೋ ಮಂದೀದಾ

ಸ್ವರ್ಗ ಮರ್ತ್ಯ ಪಾತಾಳ ಇರೋದು ತನ್ನ ಮನದೊಳು
ನಡದಕೋ ನೀ ತಿಳದಾ
ಇದರಿಂದ ಶಾಂತಿ ದೊತಕುವದಾ ||

ಎರಡನೆ ಚಾಲ

ಮರಿಯ ಬ್ಯಾಡೊ ಗುರುವಿನ ಚರಣಾ
ಇದರಿಂದ ಮುಕ್ತಿಯ ಸೋಪಾನಾ ||

ಆದದ್ದೆಲ್ಲಾ ಆತೊ ಇಲ್ಲಿತನಾ
ಸಾಕ ಮಾಡೊ ಭವ ಬಂಧನಾ||

ನಾಡೊಳು ತಿಗಡೊಲ್ಳಿ ಠಿಕಾಣಾ
ಮಾರುತಿ ಒಲದ ಮರಿಕಲ್ಲಗ ಪೂರ್ಣಾ ||

ಪದಾ ಮಾಡಿ ಹಾಡತೇವ ಹಸನಾ
ನಾಡೊಳು ಆದೀತ ವಾಹೀನಾ ||

||ಏರ||

ಬ್ರಹ್ಮಾನಂದ ಆನಂದ ಸ್ವರೂಪ ನೀನೆ
ತಿಳದ ನೋಡೋ ಮಂದಮತಿ
ನಿತ್ಯಾನಂದ ರೂಪ ನಿನ್ನೊಳಗೈತಿ
ಹಂತಿ ಎತ್ತಿನ್ಹಾಂಗ ಸುಳ್ಳ ಸುತ್ತ್ಯಾಡತಿ ||

ಗುರುವಿನ ದ್ಯಾಸಾ ಮರಿಬ್ಯಾಡೊ ಮಾನವಾ
ಗುರುವಿನಿಂದ ಆಗೋದು ಮುಕ್ತಿ
ಹೀಂಗ ಹೇಳತೈತಿ ಶಾಸ್ತ್ರದ ರೀತಿ ||


ರಚನೆ :
ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀಪದಗಳು