ಗುರು ವಸ್ತಾದಿ ನಮಗ ಹೇಳತಾನ
ಪಟಂಗರ ಗೆಳೆತನ ಮಾಡಬಾರದು
ಮಾಡಿದರ‍್ಯಾಕ ಮಾಡವಲ್ಲರಿ ಮತ್ತೊಂದ ಹೇಳತೇನ
ಹೊಟ್ಟ್ಯಾನ ಮಾತ ಯಾರ ಮುಂದ ಹೇಳಬಾರದು | ಖೊಟ್ಟಿ ಆಗಬಾರದು ||

ಹರ‍್ಯಾಗ ಎದ್ದು ಹಾಳಮಾರೀಲೆ
ಬಾವಾನ ಮಠಕ ಹೋಗಬಾರದು
ಹೋದರ‍್ಯಾಕ ಹೋಗವಲ್ಲರಿ ಮತ್ತೊಂದ ಹೇಳತೇನ
ಗಾಂಜಿ ತಂಬಾಕ ಸೇದಬಾರದು | ಹುಚ್ಚ ಆಗಬಾರದು ||

ಗೌಡರು ಮಠದವರು ಹೊಲಾ ಹಚ್ಚ್ಯಾರಂತ
ಊರ ಮುಂದಿನ ಹೊಲಾ ಹಿಡದ ಮಾಡಬಾರದು
ಮಾಡಿದರ‍್ಯಾಕ ಮಾಡವಲ್ಲರಿ ಮತ್ತೊಂದ ಹೇಳತೇನ
ಮಂದಿಗೆ ಅಚ್ಚಾ ವಿಚ್ಚಾ ಬೊಗಳಬಾರದು | ಶ್ವಾನ ಆಗಬಾರದು ||

ದೇವರ ಪುಣ್ಯೇದಿಂದ ನೀವು ಎಂಟ ಎತ್ತಾ ಕಟ್ಟೇವಂತ
ಅದರಾಗ ಒಂದ ಕೋಣಾ ತಂದ ಕಟ್ಟಬಾರದು
ಕಟ್ಟಿದರ‍್ಯಾಕ ಕಟ್ಟವಲ್ಲರಿ ಮತ್ತೊಂದ ಹೇಳತೇನ
ಕೋಣಿನ ಹಿಂಬಾಲಿ ಎತ್ತಾ ಹೂಡಿ ಹೊಡಿಬಾರದು | ನಾಶ ಮಾಡಬಾರದು ||

ದೇವರ ಕೊಟ್ಟ ಕಾಲಕ್ಕ ಹೊಲಾ ಬೆಳೆದsದಂತ
ಹೊತ್ತ ಮುಳಗಿ ರಾಶಿ ನೀವು ತುಂಬಬಾರದು
ತುಂಬಿದರ‍್ಯಾಕ ತುಂಬವಲ್ಲರಿ ಮತ್ತೊಂದ ಹೇಳತೇನ
ದಾನ ಕೊಡದs  ರಾಶಿ ಮನಿಗಿ ತರಬಾರದು | ತುಡಗ ಆಗಬಾರದು ||

ಮದವಿ ಹೇಣತಿ ತಾ ಗರತೆಂತ
ತವರ ಮನ್ಯಾಗ ಆರ ತಿಂಗಳ ಬಿಡಬಾರದು
ಬಿಟ್ಟರ‍್ಯಾಕ ಬಿಡವಲ್ಲರಿ ಮತ್ತೊಂದ ಹೇಳತೇನ
ಎಂಟ ದಿನಕ್ಕೆ ಒಮ್ಮೆ ಹೋಗೋದು ಮರಿಬಾರದು | ಡೀಲ್ಯಾ ಆಗಬಾರದು ||

ಉಗರಲೆ ಹೋಗೋ ಕೆಲಸಕ್ಕ ಕೊಡ್ಲಿ ಹಚ್ಚಿ
ನೀವು ಸುಳ್ಳ ಒಣಾ ಖಟ್ಲೆ ಮಾಡಬಾರದು
ಮಾಡಿದರ‍್ಯಾಕ ಮಾಡವಲ್ಲರಿ ಮತ್ತೊಂದ ಹೇಳತೇನ
ನಡಕ ರಾಜಿ ಆಗಿ ಮನಿಗಿ ಬರಬಾರದು | ಸುಮಾರಾಗಬಾರದು ||

ಸೊಕ್ಕಿನ ಜನರು ಬಾಳ ರೊಕ್ಕಕ ಆಸೆ ಮಾಡಿ
ಸುಳ್ಳಸೊಟ್ಟ ಸಾಕ್ಷಿಯ ಹೇಳಬಾರದು
ಹೇಳಿದರ‍್ಯಾಕ ಹೇಳವಲ್ಲರಿ ಮತ್ತೊಂದ ಹೇಳತೇನ
ಲಂಚಾ ತಿಂದ ನಡಕ ಸಾಕ್ಷಿ ಒಡಿಬಾರದು | ಲುಚ್ಚ್ಯಾ ಆಗಬಾರದು ||

ತಿಗಡೊಳ್ಳಿ ಊರಾ ನಾಗಣ್ಣಬಾವಿ ನೀರಾ
ಗುರುವಿನ ಸ್ಮರಣಿ ಮರಿಬಾರದು
ಮರತರ‍್ಯಾಕ ಮರಿವಲ್ಲರಿ ಮತ್ತೊಂದ ಹೇಳತೇನ
ನಿತ್ಯ ಜಳಕಾ ಮಾಡೋದು ಬಿಡಬಾರದು | ಹೇಸಿ ಆಗಬಾರದು ||

ರಚನೆ : ರುದ್ರಪ್ಪ ಮಲಶೆಟಿ (ಮರಿಕಲ್ಲಪ್ಪನವರ ತಂದೆ)
ಹಾಡಿದವರು :
ಮರಿಕಲ್ಲಪ್ಪ ಮಲಶೆಟಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು