ಮಾಡೊ ಮನುಜಾ ಭಕ್ತಿಯ ಮಾಡೊ
ಭಕ್ತಿಯ ಮಾಡೊ ಮುಕ್ತಿಯ ಬೇಡೊ ||
ಸಿರಿಬಂದ ಸಮಯದಿ ಕರೆದು ದಾನವ ಮಾಡೊ
ಅನ್ನವ ನೀಡಿ ಪುಣ್ಯವ ಬೇಡೋ ||

ಮೂರು ದಿವಸದ ಸಂತಿ ವಿಷಮ ಸಂಸಾರ
ಹೆಂಡರು ಮಕ್ಕಳು ಮಾಯದವರಾ
ಯಮದೂತರ ದಾಳಿ ತಪ್ಪಿಸುವವರ‍್ಯಾರಾ
ಇದ್ದದ್ದು ತೀರುತನಕಾ ಪ್ರೀತಿ ಮಾಡವರಾ ||

ಬಂಧು ಬಳಗದವರು ಯಾರಿಲ್ಲ ಕಡಿತನಕ
ಸತ್ತಾಗ ಬರುವರೊ ಸುಡಗಾಡತನಕ
ನಿಂದ ನೀ ತಿಳದು ಹಾಕಿಕೊ ಲೆಕ್ಕ
ಮಾಯಾ ಭ್ರಾಂತಿ ಬಿಡದ ಬಳಲುವಿಯಾಕ ||

ದುಷ್ಟ ದುರ್ಜನರ ಸಹವಾಸ ಬ್ಯಾಡೊ
ಸಜ್ಜನರ ಸಹವಾಸ ತಪ್ಪದೆ ಮಾಡೊ
ತಿಗಡೊಳ್ಳಿ ಮಾರುತಿ ಸೇವೆಯ ಮಾಡೊ
ಮರಿಕಲ್ಲ ಹೇಳಿದ್ದ ಮರಿಯಲು ಬ್ಯಾಡೊ ||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು