ಸೋಹಂ ಶಿವನೇ ನಿನ್ನ ಹೊರತು ದೇವರೇ ಇಲ್ಲ ||
ನಿನ್ನ ಬಿಟ್ಟು ಯಾವ ದೇವರು ಇಲ್ಲ |
ಕಲ್ಲು ಮಣ್ಣು ಕಟಗೀವೇ ಎಲ್ಲಾ |
ಜನನ ಮರಣ ನಿನಗೆರಡೂ ಇಲ್ಲ |
ತಾಯಿ ತಂದಿ ನಿನಗ್ಯಾರ‍್ಯಾರಿಲ್ಲ |
ನಿನಗ ಯಾರೂ ಹಡದಿಲ್ಲ|

ಕಲ್ಲ ಇರುವರು ಮಡ್ದ್ಯಾಗ
ಕಲ್ಲ ದೇವರು ಹುಟ್ಟೂದು ಒಡ್ಡರ ತಿಮ್ಮಯ್ಯನ ಕೈಯಾಗ |
ತಾಮ್ರ ಹಿತ್ತಾಳಿ ದೇವರ ಹುಟ್ಟುವದು ಪತ್ತಾರನ ಮನಿಯಾಗ |
ಕಟ್ಟಗಿ ದೇವರ ಹುಟ್ಟುವದು ಬಡಿಗ್ಯಾನ ಕೈಯಾಗ |
ಮಣ್ಣ ದೇವರ ಹುಟ್ಟುವದು ಕುಂಬಾರ ಗುಂಡಯ್ಯನ ಮನೆಯಾಗ |

ಇಂಥ ದೇವರ ಆಗುವದಿಲ್ಲ |
ಈ ಮಂದಿಗಿ ತಿಳಿಯುವದಿಲ್ಲ |
ಸುಳ್ಳೆ ಆಗತಾರ ಖರ್ಚಿಗೆ ಮೂಲ |
ದೇವರಂಬವ ಒಬ್ಬ ಹಾನ ಮ್ಯಾಲ |
ಅವನ ಹೊರತು ದೇವರೇ ಇಲ್ಲ |
ಸೋಹಂ ಶಿವನೇ ನಿನ್ನ ಹೊರತು ದೇವರೇ ಇಲ್ಲ ||


ಕಲಬುರ್ಗಿ ಕಲ್ಯಾಣ ಹಂಪಿ ಹದರಿಯ ಪೀರಾ
ಹುಲಜೆಂತಿ ಉಮರ್ಜಿ ಸೊಲ್ಲಾಪುರ ಸಿದ್ರಾಮೇಶ್ವರ |
ಇವರು ದೇವರೇ ಅಲ್ಲ | ಇವರು ಹಾರೊ ಮಾನೂ ಮನುಸ್ಯಾರ |
ದುಡಕೊಂಡು ದುಡಕೊಂಡು ಇವರು ಆಗ್ಯಾರ ದೊಡ್ಡ ದೊಡ್ಡ
ಶರಣರ |

ಸಾವು ಹೊತ್ತಿಗಿ ಯಾವ ದೇವರಿಲ್ಲ |
ಏನು ಮಾಡತಾವ ಗುಡಿಯಾನ ಕಲ್ಲಾ |
ಕೊರಳಿಗೆ ಕೊರಳ ಬಿದ್ದು ಅಳತಾವ ಎಲ್ಲಾ |
ಅಲ್ಲಾನ ಹೊರತು ಬಿಗಿ ಹರಿಯುದಿಲ್ಲ |
ಅವನ ಹೊರತು ದೇವರೇ ಇಲ್ಲ |
ಸೋಹಂ ಶಿವನೇ ನಿನ್ನ ಹೊರತು ದೇವರೇ ಇಲ್ಲ |

ಸೃಷ್ಟಿಯೊಳಗೆ ಶ್ರೇಷ್ಠಾಗಿ ಮೆರೆವುದಾ |
ಈ ಕರ್ನಾಟಕದಾಗ ಹಲಸಂಗಿ ಈಶನ ಬಿರದ |
ಈ ಅಂತರಂಗದ ಗುರುಮಾರ್ಗ ಅವನೇ ತಿಳಿಸಿದ |
ಶಿಶ್ಯಾರ ಜೋಡಿ ರಾಮಚಂದ್ರ ಮೌಲ |
ಕವಿ ಖಾಜಾ ಹೀಂಗ ಹೇಳಿದ ಅಕಲ |
ಎಷ್ಟು ಹೇಳಲಿ ನನ್ನ ಗುರುವಿನ ಲೀಲಾ |
ಹಲಸಂಗಿ ಈಶಾ ತಾನೇ ಬಲ್ಲಾ |
ಸೋಹಂ ಶಿವನೇ ನಿನ್ನ ಹೊರತು ದೇವರೇ ಇಲ್ಲ |

ರಚನೆ : ಖಾಜಾಭಾಯಿ
ಕೃತಿ : ಜೀವನ ಸಂಗೀತ