ಕಾಲೇಜ ಜೀವನದ ಲೀಲ ಹೇಳುವೆನು ಆಲಿಸಿ ಕೇಳರಿ ಯಲ್ಲಾರ
ಮೂಲ ವಿಶ್ವ ವಿದ್ಯಾಲಯದ ವಿಸ್ತಾರ
ಹಾಲ ಮೇಲಿನ ಕೆನಿಯಂಥ ಮಜಕೂರ ||
ಮಾಲಿನಂಥ ವಿಶಾಲ ಕಟ್ಟಡದೊಳು ಕಾಲ ಕಳೆಯದೆ
ಕಲಿತರ ಮೇಲಾದ ಪದವಿಗೆ ಹೋಗುವರ   || ಪ ||

ಎಲ್ಲ ರೀತಿಯಿಂದ ಎಲ್ಲ ತರಹದ ಜ್ಞಾನಮಾಡಿ ಕೊಡುವ
ಗ್ರಂಥ ಭಾಂಡಾರ ಬಲ್ಲಿದ ಎಂಥೆಂಥ ಕವಿ ಪುಂಗವರ
ಮಿಲ್‌ಟನ್ ಬೈರನ್ನ ಶೆಲ್ಲಿ ಶೆಕ್ಸಪೀಯರ
ಟಾಲಸ್ಟಾಯನ ಲೆನಿನ್ನ ಮಾರ್ಕ್ಸ ಎಂಜೆಲ್ಸರ
ರಶಿಯಾ ದೇಶದ ಸಾಹಿತ್ಯ ಪೂರ
ಇಂಗ್ರೇಜಿಗೆ ತರ್ಜಿಮ ಮಾಡಿ ಇಟ್ಟಾರ ||

ಜರ್ಮನಿ ಗ್ರೀಕ ರೋಮ ದೇಶದ ಅರಿಷ್ಟಾಟಲ
ಪಾಶ್ಚಿಮಾತ್ಯ ವೇದಾಂತಗಳಸಾರ
ಮಾರ್ಮಿಕವಾದ ಇತಿಹಾಸ ಅರ್ಥಶಾಸ್ತ್ರ
ಕ್ರಮ ಕ್ರಮವಾಗಿ ವತ್ತಟ್ಟಗಿಟ್ಟಾರ
ಪ್ರೇಮದಿ ಓದವರಿಗೆ ಕಥೆ ಕಾದಂಬರಿ ಏನೇನ ಬೇಕ ಎಲ್ಲ ತಯ್ಯಾರ
ಕಾಮಿಕ ಫಲ ಸರಸ್ವತಿ ಮಂದಿರ ||

ಕನ್ನಡ ನಾಡಿನ ಕನ್ನಡ ಕವಿಗಳಾದ
ಜೈನ ಲಿಂಗಾಯತ ಬ್ರಾಹ್ಮಣ ಕುರುಬರ
ರನ್ನ ಪೊನ್ನ ಪಂಪ ರಾಘವಾಂಕ ಹರಿಹರ
ಕುಮಾರವ್ಯಾಸ ಲಕ್ಷ್ಮೀಶ ಷಡಕ್ಷರ ||

ಕನ್ನಡ ಕಂಪಿನ ನುಡಿ ಕರ್ಣಕ್ಕ ಇಂಪಾದ ನುಡಿ ಧನ್ಯ ಧನ್ಯ
ಬರದಿಟ್ಟ ಕವಿಗಾರ ಅದನ ಉಂಣುವಂಥವರು ಬೇಕ ರುಚಿಗಾರ ||

||ಚಾಲ||

ಇಂಥ ಜ್ಞಾನದ ರಾಶಿಯನು ನೋಡಿ
ಕುಂತ ಓದದವನು ಬುದ್ಧ್ದಿ ಗೇಡಿ ||
ತಂದಿ ಕಳಿಸಿದ ಹಣಾ ಖರ್ಚು ಮಾಡಿ
ತಿಂದ ತಿರಗವನ ಹಣೆಬಾರ ಖೋಡಿ ||

||ಶ್ಲೋಕ||

ಕೇಳಿರಿ ಜಗತ್ತಿಗೆ ಸುಖ ಕೊಡುವ ಗೆಳೆಯನೆಂದ್ರ ಪುಸ್ತಕ
ಗುಡ್ ಬುಕ್ಸ್ ಆರ್ ಗುಡ್ ಫ್ರೆಂಡ್ಸ ಅಂತ ಹೇಳಿದ
ಮಾತ ನೆನಪ ಇಟಕೊಂಡ ಕಾಲೇಜದೊಳಗ
ಕಾಲ ಇಟ್ಟವರಿಗೀಗ ಚಲೋ ಅಭ್ಯಾಸ ಮಾಡಿರೆಂದು ಹೇಳುವೆ ನಾ ||

||ಏರು||

ಸ್ವಲ್ಪ ಘಂಟಿ ಹೊಡದ ಕೂಡಲೆ ಅಚ್ಚುಕಟ್ಟನಲ್ಲಿ ಚೊಣ್ಣ
ಪ್ಯಾಂಟ ಪಾಟ್ಲೋನ ನೆಕ್‌ಟಾಯ ಬಿಗಿಯೂರ
ತರ ತರ ಬಣ್ಣ ಹಾಕಿಕೊಂಡ ಹುಡುಗರ ಹಣ್ಕೆ ಹಾಕುತ
ಕ್ಲಾಸಿನೊಳಗೆ ಹೋಗಿ ಕೂಡ್ರುವರ  || ೧ ||

ಒಳ್ಳೇ ಸಿಸ್ತಿಲೆ ಗಂಭಿರರಾಗಿ ಹ್ಯಾಟ ಬೂಟ ಪ್ಯಾಂಟ ತೊಟ್ಟ
ಐಟಬಾಳ ಆಗಿರತಾರ ಪ್ರೊಪೆಸರರ
ಕೈಲೆ ನೆಕ್ಟಾಯ ಜಗ್ಗುತ ಕಾಲಿಡತಾರ ಆ ಮೇಲೆ ಕ್ಲಾಸಿನೊಳಗ
ಸ್ತೀಯರ ಬರವುರ ಕಾಮನು ಕಾಲಸೋತ
ಕಾಲ ಮುರಕೊಂಡ ಇಲ್ಲೆ ಇರುವಂಗ ಸೌಂದರ್ಯದ ಕಾಮಿನಿಯರ
ಕಾಮನ ಬಿಲ್ಲಿನ ಬಣ್ಣ ತರ ತರ ಸೀರಿ ಉಟ್ಟವರ ||
ಶನಿವಾರಕ್ಕೊಮ್ಮೆ ಇಲ್ಲೆ ಅಸೋಸಿಯಶನ ಇರತದ
ಆಗ ನೋಡಬೇಕ ಇವರ ಶಡಗರ
ಮನಿಸಿಗಿ ಬಲ್ಲಾಂಗ ಚಲ್ಲಾಟ ಹುಡಗ ಹುಡುಗಿಯರ
ಆನಂದ ಸ್ವರ್ಗದ ಸುಖ ಇಲ್ಲದೂರ ||
ಅನುಮಾನವಿಲ್ಲದೆ ಕೇಕೆ ಹೊಡೆಯುತ ನಗನಗತ ಚೇಷ್ಟಾ ಮಾಡುತ
ಬರದೂರ ಕಣ್ಣ ಹುಬ್ಬಿಂದ ಆವಾಗ ಒಳೆ ವ್ಯಾಪಾರ ||
ಕನ್ನಡ ಇಂಗ್ಲೀಷ ಮರಾಠಿ ಗಣಿತ ನಾಟಕ ಇತಿಹಾಸ
ಅರ್ಥಶಾಸ್ತ್ರ ನಾನಾ ಬಗೆಯ ಸಂಸ್ಥೆಯ ಸಭಿಕರ
ಪಂಡೀತ ಪ್ರೋಪೆಸರರ ಲಕ್ಚರ ಒಂದೊಂದ ವಿಷಯಗಳು
ಚಂದಾಗಿ ನಡೆಯುವವು ಇಂದ್ರ ಭವನದಂಗ ಸುಂದರ
ಸಂದಿ ಸಾಧಕರಿಗೆ ಬಹುರುಚಿಕರ ||

||ಚಾಲ||

ಅಲ್ಲಿ ಮಿಟಂಗ ನಡಿತೈತಿ ಅಂದರ
ಚಲ್ಲಾಟ ವಿದ್ಯಾರ್ಥಿ ವಿದ್ಯಾರ್ಥಿನಿಯರ ||
ಒಳೆ ಹುರಪಿನ ಹಾಸ್ಯದ ಜೋರ
ನೃತ್ಯ ಮಾಡಿದಂಗ ರಂಬಾ ಊರ್ವಸಿಯರ ||

||ಶ್ಲೋಕ||

ಕೇಳಿರಿ ಕಾಲೇಜ ವೈಭವ ವಿಲಾಸ ಸ್ವರ್ಗದಾಗ
ಇಂಥ ಸುಖ ಸಾಧ್ಯವಿಲ್ಲಾ ಚಿಂತಿ ಇಲ್ಲದ ಕಾಲ
ಅಂದರ ಕಾಲೇಜ ವಿದ್ಯಾರ್ಥಿಯ ಕಾಲ
ತರುವ ಚಿಂತೆ ಇಲ್ಲಾ ಬರುವ ಚಿಂತಿ ಇಲ್ಲಾ ಬೀಸಾಕ
ಜೋಳ ಇಲ್ಲಾ ಹುಡುಗರ ನೆತ್ತಿಗೆ ಯಣ್ಣಿ ಇಲ್ಲಾ
ಸಾಲ ಕೇಳವರಿಲ್ಲಾ ಯಾರ ಕಾಟ ಇಲ್ಲಾ ಇಂಥಾ
ನಿಶ್ಚಿಂತ ಜೀವನ ನಮ ಯೌವನ ತುಂಬಿರತೈತಿ
ಸೌಂದರ್ಯ ಮುಖದ ಮೇಲೆ ವಿದ್ಯಾ
ಬುದ್ಧಿ ಜ್ಞಾನ ಭಾಂಡಾರ ತಲಿಯಾಗ ಜಗತ್ತಿನ ಎದುರಿಗೆ
ಇದರ ಹೊರತ ಮತ್ತೇನಿರುವದಿಲ್ಲಾ ||

||ಏರು||

ಭಾಷಣ ಮುಗಿದ ಕೂಡ್ಲೆ ಖುಷಿಯಾಗಿ ಕೋಟಿನ
ಕಿಸೇದೊಳಗಿನ ಕರವಸ್ತ್ರ ತಗಿಯುವರ ತುಸು
ಮುಖ ವರಿಸುತ ಹಾದಿ ಹಿಡಿಯುವರ
ಬಿಸಿ ಬಿಸಿ ರಕ್ತದ ತರುಣರ  || ೨ ||

ಒಬ್ಬೊಬ್ಬನ ತಲೆಯೊಳು ಉಬ್ಬುಬ್ಬಿ ಹೊರಡುವವು
ಅಬ್ಬರಲೆ ಹೊಸ ಹೊಸ ಕಲ್ಪನ ಅಭ್ಯಾಸ ಮಾಡ
ತೀನ ಪರಿಪೂರ್ಣ ಅರ್ಭಾಟ ಕೊಡಾಂವ ನಾ ವ್ಯಾಖ್ಯಾನ
ಸರೋಜಿನಿ ನಾಯ್ಡು ಸಿ. ಆರ್. ದಾಸ
ಮತ್ತ ಶ್ರೀನಿವಾಸ ಐಯ್ಯಂಗಾರನ
ಮೀರಿಸುವೆನು ಅಂತ ಮನದಾಗಂತಾನ ||
ಇನ್ನೊಬ್ಬ ಹುಡುಗನ ಆಶೆ ನಾ ಇನ್ನ ಮುಂದ
ಖರೋ ಖರ ಬ್ಯಾರಿಷ್ಟರ ಆಗತೇನ
ಆದ ಮೇಲೆ  ಮರಸತೀನ ಹಿಂದಿನವರನ್ನ
ಬಿರ್ಲಾ ಬುಲಾಭಾಯಿ ಜಯಕರ ಸೆಟಲ್ ವಾಡರನ ||
ಗಣಿತ ವಿಷಯ ತಗೊಂಡ ವಿದ್ಯಾರ್ಥಿ ಅಂತಾನ
ರಾಂಗ್ಲರ ಪರೀಕ್ಷೆ ಕಟ್ಟಿ ಹೊಡಿತೇನ ಬಿಡುದಿಲ್ಲ
ಟ್ರಾಯ ಪಾಸ ಪರೀಕ್ಷೆಯ ನಾ ||
ಆರ್ಥಿಕ ವಿಷಯ ತಕ್ಕೊಂಟ ಸಾಮರ್ಥ್ಯವಾನ ತರುಣನು
ನನ್ನ ಮುಂದ ಯಾರು ಇಲ್ಲ ಅಂತಾನ
ಯಾರು ಕೊಡದ ಆರ್ಥಿಕ ಯೋಜನೆ ಕೊಡತೇನ
ಕೇಂದ್ರ ಸರಕಾರ ತಜ್ಞ ಮಂತ್ರಿ ಯಾಗತೇನ
ಕವಿಯಾಗ ಬೇಕೆನ್ನುವ ಹಂಬಲಿದ್ದಾಂವ ಸೇಕ್ಸ
ಪೇಯರ ಕೀಟ್ಸ ಕಾಳಿದಾಸರನ
ಮೀರಿ ಬರೆಯ ಬೇಕಂತಾನ ಕವಿತೆಯನಾ ||

||ಚಾಲ||

ಅಖಲ ಹಾಕುದಕ್ಕ ಇಲ್ಲ ಘೋರ
ಶೇಖ ಮಮ್ಮದನ ವಿಚಿಯಾರ ||
ಸಾಕಾಗಿ ಇಷ್ಟೆಲ್ಲ ವ್ಯಾಪಾರ
ಬೇಕಂತಾನ ವಿಶ್ರಾಂತಿ ವಿಹಾರ ||

||ಶ್ಲೋಕ||

ಕೇಳಿರಿ ಅಲ್ಲಿಂದ ಸಿನೇಮಾ ಚತ್ರ ತೂಗ ಹಾಕಿದ
ಗೋಡಿಯ ಮೇಲಿನ ಚಿತ್ರ ನೋಡಿ ಅಂತಾನ
ಸುರೈ ಕಾಮಿನಿ ಕೌಸಲ್ಯ ಇವರೇನು ಸೌಂದರ್ಯದ
ಹುಡುಗಿಯರು ಅಲ್ಲಾ ತನ್ನ ಕ್ಲಾಸಿನ ವಳಗಿನ
ತನ್ನ ಪ್ರೀತಿಯ ಹುಡಿಗಿನ್ನ ತಲಿಯಲ್ಲಿ ನೆನಪ ಮಾಡಿಕೊಂಡ
ಚಿತ್ರದಲ್ಲಿ ನಟ ನಟಿಯರು ಆಕೆಯಷ್ಟು
ಸೌಂದರ್ಯ ಅಲ್ಲ ಅಂತಾನ ಮನದಾಗ ಆಕಸ್ಮಾತ
ಕ್ಲಾಸಿನ ಹುಡುಗಿ ಇವನ್ನ ನೋಡಿದ ಕೂಡ್ಲೆ
ಮುಗಿಲ ಮೂರಗೇಣ ಉಳದ ಆನಂದದಿಂದ
ಕುಣದಾಡತಾನ ತನ್ನ ಗೆಳೆಯನ ಚಹಾ ಕುಡ
ಸತಾನ ಯಾಕಂತ ಕೇಳಿದರ ಮುಂಜಾನೆ
ಎದ್ದ ರತ್ನ ಪಕ್ಷಿ ನೋಡೀನ ಅದಕ ಚಹಾ ಕುಡಿ
ಅಂತಾನ ಇಂಥ ಕಾಲೇಜ ಜೀವನ
ತುಲನೆಗೆ ಮೀರಿದ ಜೀವನಾ ||

||ಏರು||

ಖಾಲಿ ವಿಷಯ ಸುಖ ಬಿಟ್ಟ ಅನುಭವ ತಕ್ಕೊಂಡ
ಸೋಸಿ ನೋಡಿಕೊಳ್ಳಿ ಜ್ಞಾನ ಭಾಂಡಾರ
ಕಾಲ ಕಳೆಯದೆ ಇದ್ಯಾಗಳಿಸಿರೆಲ್ಲಾರ
ಹುಲಕುಂದ ಭೀಮೇಶ ಹೇಳಿದ ಶಾಹೀರ  || ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು