ಪ್ರಸ್ತಾವನೆಯಲ್ಲಿ ವಿಸ್ತಾರ ಪೂರ್ವಾಕವಾಗಿ
ಮಸ್ತ ಹೇಳುವ ನಾನು ಮನಕರಿಗಿ
ಸುಸ್ತಿ ಮಾಡದೆ ಮಾಸ್ತರ ಜನರಿಗೆ
ಸಿಸ್ತಾಗಿ ತಿಳಿಸುವೆ ಸಿರಬಾಗಿ  || ಪಲ್ಲ||

ಸಾಧಾರಣ ವ್ಯಕ್ತಿಗಳಲ್ಲ ಆದರ್ಶ ಗುರುಗಳು
ಬುದ್ಧಿ ಕಲಿಸುವವರು ಕೂಸುಗಳಿಗಿ
ಬಾದ ಹುಡುಗರನ್ನ ಬೋಧಾಮೃತದಿಂದ
ಹಾದಿಗೆ ತರುವದು ನಿಮ್ಮ ಪಾಲಿಗಿ ||
ಶಾರೀರಿಕ ಬೌದ್ಧಿಕ ನೈತಿಕ ಅಧ್ಯಾತ್ಮಿಕ
ಶಿಕ್ಷಣ ಕೊಡಬೇಕ್ರಿ ಚನ್ನಾಗಿ
ಸರ್ವಾಂಗ ಸುಂದರವಾದ ಧೈರ್ಯವಂತರನ್ನ
ಮಾಡ್ರಿ ಹೊಸ ರಾಷ್ಟ್ರ ನಿರ್ಮಾಣಕ್ಕಾಗಿ ||
ಮನೆತನದಲ್ಲಿ ಶಾಲೆಯಲ್ಲಿ ಸಮಾಜದಲ್ಲಿ ಸರಕಾರದಲ್ಲಿ
ಪ್ರಪಂಚದಲ್ಲಿ ಪ್ರಗತಿ ಪರರನ್ನಾಗಿ
ಮನಸಿನ ಒಲವಿನಂತೆ ಕಲಿಸಿ ವಿದ್ಯಾರ್ಥಿಗಳು
ನೆನಸುವಂತೆ ಮಾಡ್ರಿ ದೇಶ ಹಿತಕಾಗಿ ||

||ಚಾಲ||

ನೌಕರಿ ಅಂತ ತಿಳಿಕೊಳ್ಳತಕ್ಕದ್ದಲ್ಲಾ
ಮಕ್ಕಳ ಹೊಣೆ ಐತಿ ನಿಮ್ಮ ತಲಿಮ್ಯಾಗ
ಚೌಕಾಸಿ ಮಾಡಿರಿ ಇದನ್ನೆಲ್ಲಾ
ರಕ್ಷಕರು ನೀವೆ ಸರ್ವಕೆಲ್ಲಾ ||

||ಏರು||

ಹೆತ್ತ ಮಾತೆ ಕಲಿಸಿದ ಊಟ ತಾತ ಕಲಿಸಿದ ಬುದ್ಧಿ
ಶಿಕ್ಷಕ ಕಲಿಸಿದ ವಿದ್ಯಾ ಸರ್ವರಿಗಿ  || ೧ ||

ಕಲಿಸುವಂಥವರಿಗೆ ಚಲೋ ಗುಣಬೇಕ
ಮೂವತ್ತಕ್ಕಂಥ ಮೇಲ್ಪಟ್ಟಾಗಿ
ಕಲಿಸತಕ್ಕಂತ ಧ್ವನಿಯ ಗಾಂಭೀರ್ಯ
ಸರಳತೆ ಸತ್ಯ ದಯಾನಿಧಿಯಾಗಿ ||
ಪರೋಪಕಾರ ಬುದ್ಧಿ ಸಮಯ ಚಿತ್ತತೆ
ನಿರ್ಮಲ ಮನಸ್ಸು ಸೌಜನ್ಯ ತ್ಯಾಗಿ
ಗೌರಾಭಿಲಾಸೆಯನ್ನು ಕಾಯ್ದುಕೊಳ್ಳುವ ಗುಣ
ಪ್ರಾಮಾಣಿಕ ನಿಷ್ಟುರತೆ ಸ್ಥಿರವಾಗಿ
ಚೊಕ್ಕಟವಾದ ವೇಷ ಆಶಾವಾದಿತ್ವ
ಅಚ್ಚುಕಟ್ಟುತನ ಒಳ್ಳೇ ಸರಿಯಾಗಿ
ಮಕ್ಕಳ ಮೇಲೆ ಮಮತೆ ಆಳಿಕೆಯ ಸಾಮರ್ಥ್ಯ
ಸದ್ವರ್ತತನ ಮಿತವ್ಯಯ ಮೊದಲಾಗಿ ||

||ಚಾಲ||

ಸಮಾಜಕ್ಕೆ ಸಹಾಯ ಮಾಡಬೇಕ
ನ್ಯಾಯ ಮೂರ್ತಿಯಂತೆ ವರ್ತಿಸುವದು ಸುಖ ||
ಪಾರ್ಟಿ ಪಂಗಡಗಳ ಸನಿಯಕ್ಕ
ಖೊಟ್ಟಿ ಜನರ ಸಹವಾಸದಲ್ಲ್ಯಾಕ ||

||ಏರು||

ಕತೃತ್ವ ಶಕ್ತಿ ದೀರ್ಘ ಸಾಹಸ ನಿರಪೇಕ್ಷ
ಬುದ್ಧಿ ಸೀಲವಂತರಾಗಿ   || ೨ ||

ಒಳ್ಳೆ ಚಟಗಳುಳ್ಳಂಥ ಗುರುಗಳು
ಥಳಥಳಿಸುವ ಸದ್ಗುಣಿಯಾಗಿ
ಎಳಿ ವಯಸ್ಸಿನಲ್ಲಿ ಬೆಳೆಯುವ ಮಕ್ಕಳಿಗೆ
ತಿಳಿಸಿ ಹೇಳುವರು ಒಳಿತಾಗಿ ||
ಕೀಳ ಚಟಕ್ಕೊಳಗಾದ ಮನುಜರು
ಹಾಳ ಮಾಡುವ ಶಾಲೆ ಹಸನಾಗಿ
ಕೂಳಬಕ್ಕ ಉಢಾಳ ಹುಡುಗರ ಮ್ಯಾಳ ತಯ್ಯಾರ ತಾಳಾ ಭ್ರಷ್ಟಾಗಿ ||
ಇಳೆಯೊಳು ದೇಶದ ಏಳಿಗೆ ಆಗುದಕ್ಕ
ಕಳಕಳಿ ಬೇಕ ನಿಮ್ಮ ಮನಸಿಗಿ
ಗಳಿಸಿದ ಜ್ಞಾನಾ ಬಳಿಸಿ ವಿದ್ಯಾರ್ಥಿ ಮಾನ
ಉಳಿಸಿಕೊಳ್ಳಿರಿ ಪುಣ್ಯವಂತರಾಗಿ ||

||ಚಾಲ||

ನಿಮ್ಮಿಂದ ಜಗದ ಕಲ್ಯಾಣ
ಸುಮ್ಮ ಮಾಡಬ್ಯಾಡ್ರಿ ಕಾಲಹರಣ ||
ಒಮ್ಮನಸ್ಸಿನಿಂದ ನೀಡ್ರಿ ವಿದ್ಯಾದಾನ
ದಾನವಂತಗ ದೇವರಲ್ಲಿ ಸ್ಥಾನ ||

||ಏರು||

ವಾಸ್ತವ್ಯ ಕವಿಯಾದ ವಸ್ತಾದಿ ಹುಲಕುಂದ
ಮುತ್ಸದ್ದಿ ಭೀಮ ಹೇಳಿದ ಯೋಗಿ|| ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು