ನೀನಿದ್ದಾಗ, ಬಾನ ನೀಲಿಯಲಿ ಮೋಡವೇ ಇರಲಿಲ್ಲ,
ಎಲ್ಲ ಹರುಗಾಗಿತ್ತು ಗಾಳಿಯೊಳಗೆ,
ಹೆಚ್ಚೆಂದರೊಂದೆರಡು ಗೊಣಗು ಮೋಡದ ನಡಿಗೆ,
ಎಲ್ಲ ಹಸುರಾಗಿತ್ತು ಇಲ್ಲಿ ಕೆಳಗೆ.

ನೀನಿದ್ದಾಗ, ಬೆಳುದಿಂಗಳಿತ್ತು ಬಾನಲ್ಲಿ ;
ಹಗಲ ಬೇಗೆಯು ತುಳಿದ ತಿಳಿಮುಗಿಲ ಜಗುಲಿಯಲಿ
ನೂರು ನಕ್ಷತ್ರಗಳ ರಂಗವಲ್ಲಿ.
ತೆಂಗು ಮರ‍್ಮರಿಸಿತ್ತು, ಕನಸು ತೂಗುತಲಿತ್ತು
ಮರಮರದ ಎಲೆ ಎಲೆಯ ಮನಸಿನಲ್ಲಿ !

ಈಗ ನೀನಿಲ್ಲ ಮನೆಯಲ್ಲಿ-
ಗೂಡುಕಟ್ಟಿವೆ ಮೋಡ ಬಾನ ತುಂಬ
ಸುತ್ತ ಮಿಂಚೂ ಗುಡುಗು, ಜೊತೆಗೆ ಬಿರುಗಾಳಿ,
ಮೂಗುದಾರವ ಕಿತ್ತ ದೊಡ್ಡ ಗೂಳಿ.

ಇಲ್ಲ, ನೀನಿಲ್ಲ ಈ ಮನೆಯಲ್ಲಿ-
ದೀಪವೊಂದೂ ಈಗ ನೆಟ್ಟಗಿಲ್ಲ !
ಕತ್ತಲಿನ ಹುತ್ತದಲಿ ಹೆಡೆಯನೆತ್ತಿವೆ ತೆಂಗು ;
ಇರುಳು-ಕಪ್ಪೆಯ ಕೊರಳು ಕುದಿವ ಪಾತ್ರೆ,
ಸುತ್ತ ನೆರೆದಿದೆ ಈಗ ಗೊಂದಲದ ಜಾತ್ರೆ.

‘ನೀನಿದ್ದಾಗ’, ‘ನೀನಿರದಿದ್ದಾಗ’ – ಎಂಥ ವ್ಯತ್ಯಾಸ !
ಬಂದುಬಿಡು ಬೇಗ ಹಿಂದಕ್ಕೆ,
ಈ ಮಳೆಗಾಳಿ ತಗ್ಗಿ, ವಾತಾವರಣ ಹದವಾಗಿ
ತಿಂಗಳು ಹಬ್ಬಿ ತಬ್ಬಿಕೊಳ್ಳಲಿ ನಿನ್ನ ಮುಗ್ಧಹಾಸ.