ನೀಲಾಕಾಶದ ತಾರಗೆ ನೀನು
ನಿನ್ನನು ನೋಡುತ ಚಪ್ಪಳೆಯಿಕ್ಕುವ
ಮರ್ತ್ಯದ ಮಣ್ಣಿನ ಶಿಶು ನಾನು-

ದಿವ್ಯ ಬೃಹದ್‌ವೈಣಿಕ ನೀನು
ನಿನ್ನಯ ವಿಪಂಚಿಯಿಂಚರವಾಲಿಸಿ
ಮೈಮರೆಯುವ ಹರಿಣಿಯು ನಾನು-

ಬಂಧುರ ಮಂದಾನಿಲ ನೀನು
ನಿನ್ನಯ ಸ್ಪರ್ಶಕೆ ಪೊಂಪುಳಿವೋಗುತ
ಲಾಸ್ಯವನಾಡುವ ಲತೆ ನಾನು-

ಸಗ್ಗದ ಹೊಂಬಿಸಿಲಿನ ಕೃಪೆ ನೀನು
ನಿನ್ನಯ ಸ್ಪರ್ಶಕೆ ಎದೆಯನು ತೆರೆಯುವ
ಸುಂದರ ಹೊಂದಾವರೆ ನಾನು-

ಭುವನಾಕರ್ಷಣ ಮೂರ್ತಿಯು ನೀನು
ನಿನ್ನ ಸುತ್ತಲೂ ದಿನದಿನ ಸುತ್ತುವ
ಅಗಣಿತ ಹಣತೆಯೊಳೊಂದಾನು-