ಕೃಷ್ಣಾ  ಭಾಗ್ಯ ಜಲ ನಿಗಮ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪುಟ್ಟ ಜಾಹೀರಾತು ಪ್ರಕಟಿಸಿದೆ. ಆಲಮಟ್ಟಿ ಅಚ್ಚುಕಟ್ಟು ಪ್ರದೇಶದ ಆಲಮಟ್ಟಿ ಎಡದಂಡೆ, ಬಲದಂಡೆ ಹಾಗೂ ಮುಳವಾಡ ಎತ ನೀರಾವರಿ ಯೋಜನೆಯ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಲ್ಲಿ ನೀರು ಬಿಡಲಾಗುತ್ತದೆ. ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಕಬ್ಬು ಮುಂತಾದ ಹೆಚ್ಚು  ನೀರು ಬೆಳಸುವ ಬೆಳೆ ಬೆಳೆಯುವದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧಿತ ಬೆಳೆ ಬೆಳೆದರೆ ಮುಂದಿನ ಆಗುಹೋಗುಗಳಿಗೆ ನಿಗಮವು ಜವಾಬ್ದಾರಿಯಾಗುವದಿಲ್ಲ. ರೈತರು ಅಲ್ಪಾವಧಿ ತಳಿಯ ಬೆಳೆಗಳನ್ನು, ಕಡಿಮೆ ನೀರು ಬಳಸುವ ಬೆಳೆಗಳನ್ನು ಈ ಸಂಕಷ್ಟದ ಸಮಯದಲ್ಲಿ ಬೆಳೆಯಬೇಕು, ನೀರನ್ನು ಸಮರ್ಪಕವಾಗಿ ಹಂಚಿಕೊಂಡು ಸದ್ಬಳಕೆ ಮಾಡುವಂತೆ  ಪ್ರಕಟಣೆ ವಿನಂತಿಸಿದೆ.

ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಬಿಡುವ ಮುಂಚೆ ಇಂತಹುದೊಂದು ಪ್ರಕಟಣೆ ನೀಡುವದು ಒಂದು ಕ್ರಮ. ಈ ಮಹತ್ವದ ಸಂಗತಿ ಇಂದು ರೈತ ಸಭೆ, ಪತ್ರಿಕಾ ಪ್ರಕಟಣೆಗಳಲ್ಲಿ ಕಾಣಿಸಿಕೊಳ್ಳುವದಕ್ಕಷ್ಟೇ ಸೀಮಿತವಾಗಿದೆ. ಹೊಸಪೇಟೆ ಸನಿಹ ತುಂಗಭದ್ರಾ  ಆಣೆಕಟ್ಟಿನಿಂದ ೧೯೫೩ರಲ್ಲಿ ನೀರು ಹರಿಯಿತು. ನೀರಾವರಿಗಿಂತ ಪೂರ್ವದಲ್ಲಿ ಇಲ್ಲಿ ಬಿಳಿಜೋಳ, ಜೈದರ ಹತ್ತಿ, ಸಜ್ಜೆ, ನವಣೆ ಬೆಳೆಯುತ್ತಿದ್ದರು. ಅತ್ಯಂತ ಕಡಿಮೆ ನೀರಿನಲ್ಲಿ ಆಹಾರ ಧಾನ್ಯ ಬೆಳೆಯುವ ಪರಂಪರೆ ಇಲ್ಲಿತ್ತು. ಬಳಿಕ ಭತ್ತದ ಬೆಳೆ ಅಂಕುರಿಸಿತು. ಆಂಧ್ರದ ಕೃಷಿಕರು ವಲಸೆ ಬಂದು ಭೂಮಿ ಖರೀದಿಸಿದರು, ಗುತ್ತಿಗೆ ಪಡೆದರು. ಸೋನಾಮಸೂರಿ ಭತ್ತಕ್ಕೆ ಗಂಗಾವತಿ, ಸಿಂಧನೂರು ಖ್ಯಾತವಾಯಿತು. ಗುಲ್ಬುರ್ಗಾದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿಯೂ ಇದೇ ಕತೆ. ಇಲ್ಲಿ  ಸರಿಸುಮಾರು ಒಂದು ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈ ವರ್ಷ ೩೦ ಸಾವಿರ ಎಕರೆ ಕಬ್ಬು ಗುಲ್ಬರ್ಗಾ ನೀರಾವರಿ ಕ್ಷೇತ್ರದಲ್ಲಿದೆ. ಕಾಲುವೆ ನೀರಿನ ಸಮಸ್ಯೆಯಿಂದ ಈಗ ಬೆಳೆ ಒಣಗತೊಡಗಿದೆ, ರೈತರು ಕಂಗಾಲಾಗಿದ್ದಾರೆ.

ನಮ್ಮ ನೀರಾವರಿ ಯೋಜನೆ ಕೃಷಿ ಭೂಮಿಯಲ್ಲಿ ಬೆಳೆ ಬದಲಾವಣೆಯ ಉದ್ದೇಶ ಹೊಂದಿಯೇ? ಪರಿಸ್ಥಿತಿ ಗಮನಿಸಿದರೆ ಹಾಗೇ ಕಾಣುತ್ತದೆ. ನೀರಾವರಿ ಯೋಜನೆಗಳ ಮೂಲ ಕರಡು ಓದಿದರೆ ಸಂಗತಿ ನಿಚ್ಚಳವಾಗುತ್ತದೆ. ಆಣೆಕಟ್ಟು ನೀರಾವರಿ ಸಾಮರ್ಥ್ಯ, ಅಚ್ಚುಕಟ್ಟಿನ ವಿಸ್ತಾರ ಗಮನಿಸಿ ಬೆಳೆ ಯೋಜನೆ ರೂಪುಗೊಳ್ಳುತ್ತದೆ. ನೀರಿನ ಸಮರ್ಥ ಬಳಕೆ ಹಿನ್ನೆಲೆಯಲ್ಲಿ ರೂಪುಗೊಳ್ಳುವ ವೈಜ್ಞಾನಿಕ ಯೋಜನೆ ಸಾಮಾನ್ಯವಾಗಿ ಅಲ್ಪಾವಧಿ ಬೆಳೆಗಳಿಗೆ ಮಾತ್ರ ಮೀಸಲಾಗಿದೆ. ನೀರಾವರಿಗಿಂತ ಪೂರ್ವದಲ್ಲಿರುವ ಸಾಂಪ್ರದಾಯಿಕ ಬೆಳೆಗಳಿಗೆ  ಇಲ್ಲಿ ಆದ್ಯತೆಯಿದೆ, ಸತತ ಬರಗಾಲದ ಮಧ್ಯೆ ಸಂಕಷ್ಟದಲ್ಲಿರುವ ರೈತರ ಬದುಕನ್ನು ಜಲಕ್ಷಾಮದಿಂದ ಬಚಾವು ಮಾಡುವದು ಯೋಜನೆ ಮುಖ್ಯ ಉದ್ದೇಶ. ಮಣ್ಣು, ಹವಾಮಾನ, ನೀರಿನ ಲಭ್ಯತೆ ಆಧರಿಸಿ ಈ ನಿರ್ಧಾರ. ವಿಚಿತ್ರವೆಂದರೆ ಒಮ್ಮೆ ಕಾಲುವೆಯಲ್ಲಿ ನೀರು ಹರಿಯಿತೆಂದರೆ ಬೆಳೆ ಯೋಜನೆ ಕೇಳುವವರಿಲ್ಲ. ಆರ್ಥಿಕವಾಗಿ ಲಾಭ ತರುವ ಅಡಿಕೆ, ತೆಂಗು, ಕಬ್ಬು, ಭತ್ತ  ಬೆಳೆಯತ್ತ  ಕೃಷಿಕರು  ಶರಣು. ಇಂದು ಶಿವಮೊಗ್ಗದ  ಭದ್ರಾವತಿ ಪ್ರಾಂತ್ಯದಲ್ಲಿ ಕಬ್ಬು, ಅಡಿಕೆ ಬೆಳೆ ಕ್ಷೇತ್ರ ಹೆಚ್ಚಲು ನೀರು ಮುಖ್ಯವಾಗಿದೆ. ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ತೋಟಗಳಿಗಿಂತ ಮೂರು ಪಟ್ಟು ಜಾಸ್ತಿ ತೋಟಗಳು ಇಂದು ನೀರಾವರಿ ಕ್ಷೇತ್ರದಲ್ಲಿವೆ.

ನಮ್ಮ  ನೀರಾವರಿ  ಯೋಜನೆ ಕ್ಷೇತ್ರದ ಎಲ್ಲ ರೈತರಿಗೆ  ಹೇಗೆ ನೀರು ಒದಗಿಸಬೇಕು ಎಂದು ಯೋಚಿಸುತ್ತದೆ. ಆದರೆ ರೈತರಾದ ನಾವು ನಮ್ಮ ಭೂಮಿಗೆ  ಎಷ್ಟು ನೀರು ಬಾಚಿಕೊಳ್ಳಬೇಕು ಎಂದು ಪೈಪೋಟಿಗೆ ಇಳಿಯುತ್ತೇವೆ!. ಬೆಳೆ ಯೋಜನೆಗೆ ಕನಿಷ್ಠ ಗಮನ ನೀಡದೇ ಅಧಿಕ ನೀರು ಬಳಸುವ ಹೊಸ ಹೊಸ ಬೆಳೆಗೆ ಓಡುತ್ತೇವೆ. ಪರಿಣಾಮ ಯೋಜನೆಗೂ, ನೀರಾವರಿ ಕ್ಷೇತ್ರಕ್ಕೂ ತಾಳಮೇಳವಿಲ್ಲದಂತಾಗುತ್ತದೆ. ನೀರಾವರಿ ಕಾಲುವೆ  ಆರಂಭದ ರೈತರು ವರ್ಷಕ್ಕೆ ಎರಡು ಮೂರು ಬೆಳೆ ಭತ್ತ  ಬೆಳೆಯುತ್ತಾರೆ. ಕಟ್ಟಕಡೆಯಲ್ಲಿರುವವರಿಗೆ  ಒಂದು ಬೆಳೆಗೂ ತತ್ವಾರವಾಗುತ್ತದೆ. ನಮಗಿರುವ ನೀರನ್ನು  ಎಲ್ಲ ಸೇರಿ ಬಳಸೋಣ ಎಂಬ ಅರಿವು ಮೂಡಲು ಸಾಧ್ಯವೇ ಇಲ್ಲ ಎಂಬುದನ್ನು ಇಂದಿನ ಯೋಜನೆಗಳೇ ಸಾರುತ್ತಿವೆ!. ಆರ್ಥಿಕವಾಗಿ ಸುಧಾರಿಸಬೇಕು ಎಂಬ ಕನಸು ಎಲ್ಲರದು, ನೆರೆಯವರು ಏನೇ ಆಗಲಿ ತಾವು ಬೆಳೆಯಬೇಕು ಎಂಬ ನಿರ್ಧಾರ ಯೋಜನೆ ಕನಸುಗಳನ್ನು ನುಚ್ಚುನೂರು ಮಾಡುತ್ತದೆ. ಹೊಸ ಹೊಸ ಆಣೆಕಟ್ಟು ನಿರ್ಮಿಸುವದು, ಹೊಸ ಹೊಸ ಕಾಲುವೆ ತೆಗೆಯುವ ಕೆಲಸ ನಿರಂತರವಾಗಿದೆ. ಕೋಟ್ಯಾಂತರ ರೂಪಾಯಿ ಹಣವನ್ನು ನೀರಾವರಿಗೆ ತೊಡಗಿಸುವದು ರೈತಪರ ನಿರ್ಧಾರವೆಂಬ ಭ್ರಮೆಯಿದೆ. ಆದರೆ ಇರುವ ಯೋಜನೆಗಳ ಸಮರ್ಪಕ ಬಳಕೆ ಕುರಿತು ಚಿಂತಿಸಲು ಯಾರಿಗೂ  ಬಿಡುವಿಲ್ಲ !.

ಬಾಹುಬಲ, ಜಾತಿಬಲ, ರಾಜಕೀಯ ಬಲ ಮೇಲಾಗುವ ಈ ದಿನಗಳಲ್ಲಿ ನೀರಾವರಿ ಲಾಭ ಪಡೆಯಲು ಇಂತಹುದೇ ಪೈಪೋಟಿ ನಡೆದಿದೆ. ಹೋರಾಟ, ಚಳವಳಿಗೆ ಸಾವಿರಾರು ಜನರನ್ನು ಸೇರಿಸುವದು ಸುಲಭವಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಯೋಜನೆ ಕುರಿತು  ಅಜ್ಞಾನವಿದೆ. ಆದರೆ ರೈತರು ಯಾವ ಬೆಳೆ ಬೆಳೆಯುತ್ತಾರೆ? ಆಣೆಕಟ್ಟೆಯ ನೀರಾವರಿ ಸಾಮರ್ಥ್ಯ ಎಷ್ಟಿದೆ ಎಂದು ಯೋಚಿಸದೇ  ಹೋರಾಟದ ಭಾಷಣ ಬಿಗಿಯುವದು ಅನೇಕರಿಗೆ ಜನಪ್ರಿಯ ದಾರಿ, ರಾಜಕೀಯದ ಹೊಟ್ಟೆಪಾಡು. ಪರಿಣಾಮ ವಸ್ತುಸ್ಥಿತಿ ಮಸುಕಾಗುತ್ತದೆ. ಇತ್ತ ನಮ್ಮ ಮಾಧ್ಯಮಗಳು ಭತ್ತದ ಬೆಳೆ ಒಣಗಿದೆ, ಕಬ್ಬು ಒಣಗಿದೆ, ಅಡಿಕೆ ನೀರಾವರಿಯಿಲ್ಲದೇ ಸೊರಗಿದೆ, ರೈತರು ಕಂಗಾಲಾಗಿದ್ದರೆ ಎಂದು ಹೇಳುವುದರಲ್ಲೇ ಕಾಲಹರಣ ಮಾಡಿವೆ.  ಮೂಲ ಸಮಸ್ಯೆಯನ್ನು ಗುರುತಿಸಲು ಎಡವಿದ್ದೇವೆ. ನಿಷೇಧಿತ ಬೆಳೆ ಬೆಳೆದು ನೀರಾವರಿ ದೊರಕಿಲ್ಲ ಎಂದು ಪ್ರತಿಭಟಿಸುವದು ಎಷ್ಟು ಸರಿ ಎಂದು ಚಿಂತಿಸಬೇಕಾಗಿದೆ. ಇಂದು  ರಾಜ್ಯದಲ್ಲಿ ರಸಗೊಬ್ಬರ ಅಭಾವದ ಹಿಂದೆ ಬೆಳೆ ಬದಲಾವಣೆ ಪರಿಣಾಮವೂ ಪ್ರಮುಖವಾಗಿದೆ. ಮಿತಿಮೀರಿ ಒಂದೇ ಬೆಳೆಯನ್ನು ಸಮೂಹ ಸನ್ನಿಯಂತೆ ಬೆಳೆಯಲಾಗುತ್ತಿದೆ. ಫಸಲು ಬಂದ ಕಾಲಕ್ಕೆ ಮಾಮೂಲಿ ಬೆಲೆ ಕುಸಿತ.  ಈಗ  ಭತ್ತಕ್ಕೆ ಬೆಂಬಲ ಬೆಲೆ ಬೇಕು, ಕಬ್ಬಿಗೆ ಸಹಾಯಧನ ಬೇಕು ಎಂದು ಮತ್ತೆ  ಹೋರಾಟದಲ್ಲೇ ದಿನ ಕಳೆಯುವಂತಾಗಿದೆ. ಒಂದು ಎಕರೆ ಕಬ್ಬು ಬೆಳೆಯಲು ೨೦ ಸಾವಿರ ಖರ್ಚಾಗಬಹುದು. ಬೆಳೆ ಚೆನ್ನಾಗಿ ಬಂದರಷ್ಟೇ ಲಾಭ. ಆದರೆ ನೀರಿನ ಕೊರತೆಯಿಂದ ಬೆಳೆ ನಾಶವಾದರೆ ನೇರ ಪರಿಣಾಮ ರೈತರ ಮೇಲಾಗುತ್ತದೆ. ಹೀಗಾಗಿ ಬೆಳೆ ಯೋಜನೆಗೆ ರೈತರೆಲ್ಲ ಮಹತ್ವ ನೀಡುವ ಅಗತ್ಯವಿದೆ. 

ಸರಕಾರ ನೀರಾವರಿ ನಿಯಮ ಹೇಳುವದು ಅದರ ಕರ್ತವ್ಯ. ಅದನ್ನು ಅನುಸರಿಸುವದು ಕಷ್ಟಸಾಧ್ಯ. ಇನ್ನೂ ರಾಗಿ, ಜೋಳ, ಸಜ್ಜೆ ಬೆಳೆಯುತ್ತಿದ್ದರೆ ತಮ್ಮ ಬದುಕು ಬದಲಾಗುವದು ಯಾವಾಗ ಎಂದು ರೈತರು ಕೇಳುತ್ತಾರೆ.  ನಮಗೆ ಲಾಭವಾಗುವದನ್ನು ನಾವು ಬೆಳೆಯುತ್ತೇವೆ, ತನ್ನ ಭೂಮಿಯ ಬೆಳೆ ಆಯ್ಕೆಯನ್ನು ರೈತನಾದವನು  ಮಾಡಬೇಕೇ ಹೊರತೂ ಸರಕಾರಿ ಅಧಿಕಾರಿಗಳು ಮಾಡಬಾರದು ಎಂಬ ಮಾತುಗಳೂ ಇವೆ. ಆದರೆ ಈ ಮಾತುಗಳು ಭಾಷಣಕ್ಕೆ  ಚೆಂದಾಗಿ ಕೇಳಿಸುತ್ತವೆ, ಹೋರಾಟಕ್ಕೆ ಕಾವುಕೊಡಲು ನೆರವಾಗುತ್ತವೆ. ಇಂದು ಯೋಜನೆ ಜಾರಿ ಬಳಿಕ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಕ್ರಮ ಕೈಗೊಳ್ಳುವತ್ತ ಗಮನ ನೀಡಬೇಕಾಗಿದೆ. ಇಂದು ಕಡಿಮೆ ನೀರು ಬಳಸಿ ಹೇಗೆ ಭೂಮಿಯಲ್ಲಿ ಬದಲಾವಣೆ ತರಲು ಸಾಧ್ಯವಿದೆ   ಎಂಬುದಕ್ಕೆ ಧಾರಾಳ ನಿದರ್ಶನಗಳಿವೆ. ಭತ್ತವನ್ನು ಮಿತ ನೀರಿನಲ್ಲಿ ಬೆಳೆಯುವ ಯಶೋಗಾಥೆಗಳಿವೆ. ಆದರೆ ನೀರಾವರಿ ಕ್ಷೇತ್ರದ ಎಲ್ಲ ಬೆಳೆಗಳೂ ಪ್ರವಾಹ ನೀರಾವರಿ ( ಫ್ಲಡ್ ಇರಿಗೇಶನ್) ಮಾದರಿಗೆ ತಗಲಿಕೊಂಡಿವೆ. ಒಂದು ಎಕರೆ ಕೃಷಿಗೆ ಬಳಸುವ ನೀರನ್ನು  ೫-೬ ಎಕರೆಗೆ ಬಳಸಲು ಸಾಧ್ಯವಿದೆ.  ಒಂದು ಕಾಲದಲ್ಲಿ ನೀರಿಲ್ಲದೇ ಬಡತನ ಬಂದ ನೆಲದಲ್ಲಿ ಈಗ ನೀರಿನ ಬಳಕೆಯ ಅಜ್ಞಾನ ಮಿತಿಮರಿದೆ. ಕೃಷಿ ಸಮಸ್ಯೆ ಬೆಳೆಯುತ್ತಿದೆ. ಜವುಗು ನೆಲ ವಿಸ್ತಾರವಾಗಿ ಶೇಕಡಾ ೩೦ರಷ್ಟು ನೀರಾವರಿ ನೆಲ ಏನೂ ಬೆಳೆ ಬೆಳೆಯಲಾಗದ ಸ್ಥಿತಿ ತಲುಪಿದೆ. ಬಂಗಾರದಂತಹ ಭೂಮಿ ಒದ್ದೆ ಮರುಭೂಮಿಯಾದುದನ್ನು ಸಿಂಧನೂರಿನಲ್ಲಿ ನೋಡಬಹುದಾಗಿದೆ.

ನೀರಾವರಿ ಎಂದರೆ ರೈತರೆಲ್ಲ  ಖುಷಿ ಪಡುತ್ತಾರೆ. ಸಾವಿರಾರು ಕೋಟಿ ಸುರಿದರೆ ಉದ್ದಾರವಾಗುತ್ತದೆ  ಎಂದು ನಾವು ನಂಬುತ್ತೇವೆ. ರೈತರ ಸುಸ್ಥಿರ ಅಭಿವೃದ್ಧಿಯ ಕನಸು ಕಂಡ ನೀರಾವರಿ ಮಾತ್ರ ಮತ್ತೆ ಮತ್ತೆ  ಹೊಸ ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನೀರಾವರಿ ಕ್ಷೇತ್ರದಲ್ಲಿ ನಿಯಮ ಪಾಲನೆ ಮುಖೇನ ಭೂಮಿ, ಬೆಳೆ ಉಳಿಸುವದು ಜರೂರಿದೆ.

(ಲೇಖನವನ್ನು ಬರೆದಿದ್ದು ೨೪-೭-೨೦೦೮)