ವೈಜ್ಞಾನಿಕ ಸಂಶೋಧನೆಯಿಂದ ವೈರಿಗಳ ಮೇಲೆ ದಾಳಿಯವರೆಗೆ ಸಮುದ್ರದಾಳದಲ್ಲಿ ಯಾವುದೇ ಕೆಲಸವಾಗಬೇಕಾದರೂ ನೆನಪಿಗೆ ಬರುವ ಮೊದಲ ಹೆಸರು ಸಬ್‌ಮರೀನ್ ಹಡಗಿನದು. ಈ ವಿಶಿಷ್ಟ ವಾಹನದ ಕಲ್ಪನೆಯೇ ಅದೆಷ್ಟು ರೋಚಕ ಎಂದರೆ ಅದು ನಮ್ಮಲ್ಲಿ ಉಂಟುಮಾಡುವ ಕುತೂಹಲಕ್ಕೆ ಕೊನೆಯೇ ಇಲ್ಲ.

ನೀರಿನೊಳಗೆ ಚಲಿಸಬಲ್ಲ ವಾಹನಗಳನ್ನು ರಚಿಸುವ ಹಂಬಲ ಬಹಳ ಹಿಂದಿನಿಂದಲೇ ಇತ್ತು. ಈ ನಿಟ್ಟಿನಲ್ಲಿ 1500ನೇ ಇಸವಿಯ ಸುಮಾರಿನಿಂದಲೇ ಪ್ರಯತ್ನಗಳೂ ನಡೆಯುತ್ತಿದ್ದವು. ಹದಿನಾರು-ಹದಿನೇಳನೇ ಶತಮಾನಗಳಲ್ಲೇ ಹಲವಾರು ಸಣ್ಣಪುಟ್ಟ ಸಬ್‌ಮರೀನ್‌ಗಳು ತಯಾರಾಗಿದ್ದವು. ಯುದ್ಧಗಳ ಸಂದರ್ಭದಲ್ಲಿ ಸಬ್‌ಮರೀನ್‌ಗಳ ಬಳಕೆ 1864ರಷ್ಟು ಹಿಂದೆಯೇ ಕಲ್ಪನೆಯಲ್ಲಿದ್ದಿತು.

ಸಬ್‌ಮರೀನ್‌ಗಳು ಸದಾ ನೀರಿನೊಳಗೇ ಸಂಚರಿಸಬೇಕಾಗಿರುವುದರಿಂದ ಅವುಗಳ ರಚನೆ ಬಹಳ ಗಟ್ಟಿಮುಟ್ಟಾಗಿ, ನೀರು ಯಾವ ಕಾರಣಕ್ಕೂ ಒಳಬಾರದಂತೆ ಇರಬೇಕಾಗುತ್ತದೆ. ಸಮುದ್ರದಾಳದಲ್ಲಿರುವ ಅಪಾರ ಒತ್ತಡವನ್ನು ಸಹಿಸಿಕೊಳ್ಳಲು ಇಂತಹ ಸದೃಢ ರಚನೆ ಅನಿವಾರ್ಯವೂ ಕೂಡ. ಅದಲ್ಲದೆ ಸಮುದ್ರದಾಳದಲ್ಲೇ ಕೆಲಸಮಾಡುವ ಈ ಸಬ್‌ಮರೀನ್‌ಗಳಿಗೆ ಹೆಚ್ಚಿನ ಗಾಳಿಯನ್ನು ಬಳಸದ ಎಂಜಿನ್‌ಗಳೂ ಬೇಕು! ಹೀಗಾಗಿಯೇ ಹೆಚ್ಚಿನ ಸಬ್‌ಮರೀನ್‌ಗಳು ಬ್ಯಾಟರಿ ಅಥವಾ ಅಣುಶಕ್ತಿ ಚಾಲಿತವಾಗಿರುತ್ತವೆ.

ಸಬ್‌ಮರೀನ್‌ಗಳಲ್ಲಿ ಉಪಯೋಗವಾಗುವ ಉಪಕರಣಗಳು ಕೂಡ ಸಬ್‌ಮರೀನ್‌ನಷ್ಟೇ ಕುತೂಹಲ ಮೂಡಿಸುವಂಥವು. ಸದಾ ನೀರಿನಡಿಯಲ್ಲೇ ಇರುವ ಸಬ್‌ಮರೀನ್ ಚಾಲಕವರ್ಗದವರು ತಮ್ಮ ಸುತ್ತಮುತ್ತಲೂ ನೀರಿನ ಮೇಲೆ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು ಪೆರಿಸ್ಕೋಪ್ ಎಂಬ ಉಪಕರಣವನ್ನು ಬಳಸುತ್ತಾರೆ. ಇದು ಸಬ್‌ಮರೀನ್ ‘ಕಣ್ಣು’ ಎನ್ನುವುದಾರೆ ಸೋನಾರ್ ಎಂಬ ಉಪಕರಣ ಸಬ್‌ಮರೀನ್‌ನ ‘ಕಿವಿ’ (‘ಸೋನಾರ್’ ಎಂಬ ಸಂಕೇತದ ಪೂರ್ಣರೂಪ ಸೌಂಡ್ ನ್ಯಾವಿಗೇಷನ್ ಅಂಡ್ ರೇಂಜಿಂಗ್). ಈ ಉಪಕರಣ ಶಬ್ದದ ಅಲೆಗಳ ಸಹಾಯದಿಂದ ಸಬ್‌ಮರೀನ್‌ನ ಸುತ್ತಮುತ್ತ ಏನೇನಿದೆ ಎಂಬುದನ್ನು ಪತ್ತೆಹಚ್ಚುತ್ತದೆ.

ಈಗಾಗಲೇ ಹೇಳಿದಂತೆ ಸಬ್‌ಮರೀನ್‌ಗಳ ಬಳಕೆ ಕೇವಲ ಮಿಲಿಟರಿ ಉಪಯೋಗಕ್ಕೆ ಸೀಮಿತವಲ್ಲ. ವೈಜ್ಞಾನಿಕ ಸಂಶೋಧನೆ ಹಾಗೂ ಸಮುದ್ರದಾಳದಲ್ಲಿ ನಡೆಯುವ ಶೋಧನಾ ಕಾರ್ಯಗಳಲ್ಲೂ ಸಬ್‌ಮರೀನ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಉದಾಹರಣೆಗೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳ ಪತ್ತೆ, ಮುಳುಗಿಹೋದ ಹಡಗುಗಳ ಅನ್ವೇಷಣೆ. ಆದರೆ ಇಲ್ಲಿ ಉಪಯೋಗಿಸುವ ಸಬ್‌ಮರೀನ್‌ಗಳ ಗಾತ್ರ ಕೊಂಚ ಚಿಕ್ಕದಾಗಿರುತ್ತದೆ, ಅಷ್ಟೆ! ಹೀಗಾಗಿ ಈ ವಾಹನಗಳನ್ನು ‘ಸಬ್‌ಮರ್ಸಿಬಲ್’ಗಳೆಂದು ಕರೆಯುತ್ತಾರೆ. 1912ರಲ್ಲಿ ಅಪಘಾತಕ್ಕೀಡಾಗಿ ಮುಳುಗಿಹೋದ ಟೈಟಾನಿಕ್ ಹಡಗು ಮತ್ತೆ ಪತ್ತೆಯಾದದ್ದು ಇಂತಹುದೊಂದು ಸಬ್‌ಮರ್ಸಿಬಲ್ ವಾಹನದ ನೆರವಿನಿಂದಲೇ.

ದೊಡ್ಡದೊಂದು ಕೇಬಲ್‌ನ ಸಹಾಯದಿಂದ ಹಡಗಿಗೆ ಅಂಟಿಕೊಂಡು ದೂರನಿಯಂತ್ರಿತವಾಗಿ ಕೆಲಸ ಮಾಡುವ ಸಬ್‌ಮರೀನ್‌ಗಳೂ ಇವೆ. ಇವುಗಳನ್ನು ‘ರಿಮೋಟ್‌ಲಿ ಆಪರೇಟೆಡ್ ವೆಹಿಕಲ್’ ಅಥವಾ ‘ಆರ್‌ಒವಿ’ಗಳೆಂದು ಕರೆಯುತ್ತಾರೆ.

ಹಕ್ಕಿಯಂತೆ ಹಾರುವ, ಮೀನಿನಂತೆ ಈಜುವ ಮಾನವನ ಆಸೆಗೆ ಸಾಕ್ಷಿಯಾಗಿ ರೂಪಗೊಂಡಿರುವ ಸಬ್‌ಮರೀನ್‌ಗಳ ಈ ಲೋಕ ಅದೆಷ್ಟು ರೋಚಕವೆಂದರೆ ಅನುಭವಿಸಿಯೇ ತಿಳಿಯಬೇಕು.