1995ರಲ್ಲಿ  ನನ್ನ ತೆ೦ಗಿನ ತೋಟದಲ್ಲಿ ನೀರಿನ ಸಮಸ್ಯೆ ಆರ೦ಭವಾಯಿತು. ಆ ಹೊತ್ತಿಗೆ ಸುತ್ತಮುತ್ತಲು ಅನೇಕ ಹೊಸ ಮನೆಗಳೂ, ಹೊಸ ಬಾವಿಗಳೂ ನಿರ್ಮಾಣವಾಗಿದ್ದವು. ಅದರ ಪರಿಣಾಮವಾಗಿ ನಮ್ಮ ಬಾವಿಯಲ್ಲಿ ಎಪ್ರಿಲ್ ತಿ೦ಗಳಿನ ಆರ೦ಭದಲ್ಲೇ ನೀರು ತಳಕ೦ಡಿತು. ಅದಕ್ಕಾಗಿ ಹತ್ತು ಸಾವಿರ ರೂಪಾಯಿ ವೆಚ್ಚ ಮಾಡಿ ಬಾವಿಯನ್ನು ಇನ್ನೂ ಐದಡಿ ಆಳ ಮಾಡಿಸಿದೆ. ಮು೦ದಿನ ವರುಷದ ಬೇಸಿಗೆಯಲ್ಲಿ ಪುನ: ನೀರಿನ ಸಮಸ್ಯೆ ಎದುರಾದಾಗ ಎ೦ಟುಸಾವಿರ ರೂಪಾಯಿ ವೆಚ್ಚದಲ್ಲಿ ತೆ೦ಗಿನ ಮರಗಳಿಗೆ ನೀರುಣಿಸಲು ಪಿವಿಸಿ ಪೈಪ್‌ಗಳ ಜಾಲ ಮಾಡಿಸಿದೆ.

ಅನ೦ತರದ ಬೇಸಗೆಯಲ್ಲೂ ತೆ೦ಗಿನ ತೋಟದಲ್ಲಿ ನೀರಿನ ಸಮಸ್ಯೆ ಗ೦ಭೀರವಾಯಿತು. ಬ್ಯಾ೦ಕಿನಿ೦ದ  22,000 ರೂಪಾಯಿ ಸಾಲ ಪಡೆದು ಹನಿನೀರಾವರಿ ಜಾಲ ಅಳವಡಿಸಿದೆ. ಅನ೦ತರ ಹೊಸ ಸಮಸ್ಯೆಗಳು ಎದುರಾದುವು. ಕೆ೦ಪಿರುವೆಗಳು ಡ್ರಿಪ್ ಜಾಲದ ಮೈಕ್ರೋಟ್ಯೂಬ್ ಗಳನ್ನು ತೂತುಮಾಡತೊಡಗಿದವು. ಲಾಟರಲ್ (ಬೆರಳು ಗಾತ್ರದ) ಟ್ಯೂಬ್‌ಗಳನ್ನು ಇಲಿಗಳು ಕೊರೆಯತೊಡಗಿದವು.

ಒ೦ದಿನ ನಾನು ಮ೦ಗಳೂರಿಗೆ ಹೋಗಿದ್ದೆ.  ಮರಳುವಾಗ ಅನಾಹುತವಾಗಿತ್ತು. ಡ್ರಿಪ್ ಜಾಲದಲ್ಲಿ ಪ೦ಪ್ ಮೂಲಕ ನೀರು ಹಾಯಿಸುತ್ತಿದ್ದ ಆಳು, ಬಾವಿಯಲ್ಲಿ ನೀರು ತಳಮಟ್ಟ ತಲಪಿದ್ದನ್ನು ಗಮನಿಸಲೇ ಇಲ್ಲ. ಬಾವಿಯ ತಳದಿ೦ದ ನೀರಿನೊ೦ದಿಗೆ ಕೆಸರನ್ನೂ ಪ೦ಪು ಸೆಳೆದುಕೊ೦ಡಿತು. ಅದು ಮೈಕ್ರೋಟ್ಯೂಬ್‌ಗಳಲ್ಲಿ ತು೦ಬಿ, ಉರಿಬಿಸಿಲಿಗೆ ಒಣಗಿದಾಗ, ಅವುಗಳೊಳಗೆ ಕಾ೦ಕ್ರಿಟ್ ಜಡಿದ೦ತಾಯಿತು. ಇನ್ನೆಲ್ಲಿಯ ಹನಿ ನೀರಾವರಿ?

ಆ ವರುಷ ಹಾಯಿಸಿದ ನೀರು ಕಡಿಮೆಯಾಗಿ ತೆ೦ಗಿನ ಮರಗಳು ಒಣಗತೊಡಗಿದವು. ಮು೦ದಿನ ವರ್ಷ ಪುನ: ನೀರಿಗೆ ತತ್ವಾರ. ಡ್ರಿಪ್ ವ್ಯವಸ್ಥೆ ಸರಿಪಡಿಸಲು ಡ್ರಿಪ್ ಅಳವಡಿಸುವವರನ್ನು ಪುನ: ನನ್ನ ಮಗ ಕರೆತ೦ದ. ಅವರು ಅರೆವಾಸಿ ಮೈಕ್ರೋಟ್ಯೂಬ್ ಬದಲಾಯಿಸಿದರು. ಹಳೆಯ ಡ್ರಿಪ್ ವ್ಯವಸ್ಥೆಯ ಮುಖ್ಯ ಪೈಪ್‌ಗಳ ಜಾಲಕ್ಕೆ ಇನ್ನಷ್ಟು ಪಿವಿಸಿ ಪೈಪ್‌ಗಳನ್ನು ಜೋಡಿಸಿದರು.“ಹಳೆಯ 2500 ರೂಪಾಯಿಯ ಫಿಲ್ಟರ್ ಸರಿಯಾಗಿಲ್ಲ. ಜರ್ಮನಿಯ ಈ ಹೊಸ ಫಿಲ್ಟರ್ ಚೆನ್ನಾಗಿದೆ. ಬೆಲೆ 5000ರೂಪಾಯಿ ಮಾತ”ಎ೦ದೆಲ್ಲಾ ಹೇಳಿ ಹೊಸತನ್ನು ಜೋಡಿಸಿದರು.

ಇವೆಲ್ಲಾ ಬದಲಾವಣೆಗಳಿ೦ದ ಹಣ ಕೈಬಿಟ್ಟಿತೇ ವಿನಾ  ಡ್ರಿಪ್ ಜಾಲದಲ್ಲಿ ನೀರು ಹರಿಯಲಿಲ್ಲ. ಯಾಕೆ೦ದರೆ ಎಪ್ರಿಲ್ ಮೊದಲ ವಾರದಲ್ಲೇ ಬಾವಿ ಒಣಗಿ ತಳ ಕಾಣುತ್ತಿತ್ತು. ಕೊನೆಗೆ ಬಾವಿಯೊಳಗೆ ಕಾ೦ಕ್ರಿಟ್ ರಿ೦ಗ್‌ಗಳನ್ನು ಇಳಿಸಲು ನಿರ್ಧರಿಸಿದೆ. ಆ ವರುಷ ತೋಟದಲ್ಲೇ ರಿ೦ಗ್‌ಗಳನ್ನು ಮಾಡಿಸಿದರೂ ಅವನ್ನು ಬಾವಿಗೆ ಇಳಿಸಲಾಗಲಿಲ್ಲ. ಯಾಕೆ೦ದರೆ ಜೂನ್ ಮೊದಲ ವಾರದ ಬದಲಾಗಿ ಮೇ ತಿ೦ಗಳ ಮೂರನೇ ವಾರದಲ್ಲೇ ಮಳೆ ಶುರುವಾಯಿತು. ಅ೦ತೂ 2000ನೇ ವರುಷದ ಬೇಸಗೆಯ ಕೊನೆಯಲ್ಲಿ ಹತ್ತು ರಿ೦ಗ್‌ಗಳನ್ನು ಬಾವಿಯೊಳಗೆ ಇಳಿಸಿದ್ದಾಯಿತು. ಇದಕ್ಕಾದ ವೆಚ್ಚ 15000 ರೂಪಾಯಿಗಳು. ಈಗ ರಿ೦ಗ್‌ಗಳೊಳಗೆ ನೀರು ತು೦ಬಿಕೊ೦ಡಿದೆ.  ಆದರೆ ತೋಟದ ಎಲ್ಲ ತೆ೦ಗಿನ ಮರಗಳಿಗೆ ನೀರುಣಿಸಲು ಆ ನೀರು ಸಾಕಾಗುತ್ತಿಲ್ಲ.