ಜನಪದರ ನಂಬಿಕೆಗಳಲ್ಲಿ ಶಕುನ ಒಂದು ಮುಖ್ಯವಾದ ಮೋಟಿವ್ಹ್. ಈ ವಿಷಯಕ್ಕೆ ಸಂಬಂಧಿಸಿದ ಕೆಲವು ನಂಬಿಕೆಗಳನ್ನು ಗಮನಿಸಬಹುದು.

೧.       ಬಾವಿ ತೋಡುವಾಗ ಹಸುವನ್ನು ಪೂಜೆ ಮಾಡಿಬಿಡಬೇಕು. ಅದು ಎಲ್ಲಿ ನಿಲ್ಲುತ್ತದೊ ಅಲ್ಲಿ ಜಲಕಣ್ಣಿರುತ್ತದೆ.
೨.       ಅಕ್ಕಿಯನ್ನು ನೀರಿಗೆ ಹಾಕಿದ ತಕ್ಷಣ ಗುಳುಗುಳು ಶಬ್ದ ಮಾಡಿದರೆ ಊಟದ ವೇಳೆಗೆ ನೆಂಟರು ಬರುತ್ತಾರೆ.
೩.       ಪ್ರಯಾಣ ಹೊರಡುವಾಗ ತುಂಬಿದ ಕೊಡ ಎದಿರು ಬಂದರೆ ಶುಭ.
೪.       ಮಜಿಗ್ಯಾನ ಬೆಣ್ಣಿ ಮುಳಗಿದ್ರಾ ಜಗತ್ತಾ ಮುಳಗಿದಂಗಾ.
೫.       ಶಿವಗಂಗೆ ಬೆಟ್ಟದಲ್ಲಿ ಒಳಕಲ್ಲಿಗೆ ಕೈ ಹಾಕಿದಾಗ ನೀರು ಸಿಕ್ಕರೆ ಮಕ್ಕಳಾಗುತ್ತವೆ.

ಜನಪದರ ಅರ್ಥದಲ್ಲಿ ಶಕುನವೆಂದರೆ ಮುಂದಾಗುವ ಒಳ್ಳೆಯ-ಕೆಟ್ಟ, ಶುಭ-ಅಶುಭ ಘಟನೆಗಳನ್ನು ಪೂರ್ವಭಾವಿಯಾಗಿ ಸೂಚಿಸುವ ಎಚ್ಚರಿಸುವ ಮುನ್ಸೂಚನೆಯ ಚಿನ್ಹೆ. ಜನಪದರ ಪರಿಸರದ ಯಾವುದೇ ಪ್ರಾಣಿ, ಪಕ್ಷಿ, ನೀರು, ಗಾಳಿ ಮತ್ತು ಕೆಲ ವಸ್ತುಗಳು ಕೂಡ ಶಕುನ ನೀಡುವ ಹಿತೈಷಿಗಳಾಗಿ ವರ್ತಿಸುತ್ತವೆ.

ಔಷಧಿ = ಪರಿಹಾರ ಮತ್ತು ಮಾಟ

ಮನುಷ್ಯ ಪರಿಸರದಲ್ಲಿ ನೀರು ಬಳಕೆಯಾಗುವ ಇನ್ನೊಂದು ಮುಖ್ಯರೂಪ ಔಷಧಿ. ನೀರಿನ ಔಷಧಿಯ ಗುಣವನ್ನು ಮನುಷ್ಯ ಅರ್ಥಮಾಡಿಕೊಂಡಿರುವುದೇ ಜನಪದರ ಸಂಸ್ಕೃತಿ ಆಧುನಿಕ ಪ್ರಕ್ರಿಯೆಗೆ ಪಕ್ಕಾಗಿರುವುದರ ಫಲ. ಮನೆ ಔಷಧಿ ಅಂತ ಜನರು ಯಾವಾವೂದೋ ಬೇರುಗಳನ್ನು, ಬೀಜ, ಎಲೆಗಳನ್ನು ನೀರಿನಲ್ಲಿ ಅರೆದು, ಕಲೆಸಿ, ಕಾಯಿಸಿ ಕುಡಿಸುವ ಪದ್ಧತಿಯು ಆರ್ಯುವೇದದಿಂದ ಪಡಕೊಂಡ ಜ್ಞಾನವಾಗಿದೆ.

‘ಬಾದಾಮಿ ಗೊಂದನ್ನು ನೀರಿನಲ್ಲಿ ನೆನೆಸಿ ಕುಡಿದರೆ ಆಮಶಂಕೆ ರೋಗ ನಿಲ್ಲುತ್ತದೆ.’ “ವಿಷದಾರಿ ಸೊಪ್ಪನ್ನು ಅರೆದು ನೀರಿನೊಂದಿಗೆ ಕುಡಿದರೆ ರಕ್ತಶುದ್ಧವಾಗುತ್ತದೆ” ‘ದನಗಳಿಗೆ ಸೆಲೆಯಾದ್ರೆ ಬೆಳ್ಳುಳ್ಳಿ, ಈರುಳ್ಳಿ, ಕರಿಸೀಕರೆ ಇವುಗಳ ಹೊಗೆ ಇಟ್ಟು ಕಾಯಿಸಿದ ನೀರನ್ನು ಕುಡಿಸಬೇಕು. ಬೆನ್ನಮೇಲೆ ತಣ್ಣೀರನ್ನು ಹಾಕಬೇಕು’ ಈ ಬಗೆಯ ನಂಬಿಕೆಗಳು ರೋಗ ಪರಿಹಾರ ಮಾದರಿಯವು.

ನೀರಿನ ನಂಬಿಕೆಗಳಲ್ಲಿ ಕೆಲವು ಮಾಟ ಮಂತ್ರಗಳನ್ನು ಒಳಗೊಂಡ ನಂಬಿಕೆಗಳು ಕಂಡುಬರುತ್ತವೆ. ಈ ನಂಬಿಕೆಗಳು ರೋಗ ನಿಧಾನವನ್ನು ಸಾಧಿಸಬಲ್ಲವು. ಮಾಟ ಮಂತ್ರದ ಮೊರೆ ಹೋಗಲು ಮತ್ತೊಂದು ಕಾರಣವೆಂದರೆ ರೋಗ ಕಾಯಿಲೆ ಬರುವುದು ಕೆಲ ಕ್ಷುದ್ರ ದೇವತೆಗಳು ಗಾಳಿಧೂಳಿಗಳಿಂದ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಅಂತಹ ಸಂದರ್ಭಗಳಲ್ಲಿ ನೀರನ್ನು ಮಂತ್ರಿಸಿ ಕುಡಿಸುವುದರಿಂದ ಅಥವಾ ಮುಖಕ್ಕೆ ಎರಚುವುದರಿಂದ ಈ ರೋಗಗಳನ್ನು ಗುಣಪಡಿಸಬಹುದು ಎನ್ನುವುದು ಜನಪದರು ನಂಬಿದ್ದರು. ಉದಾ. ಈ ನಂಬಿಕೆಗಳನ್ನು ನೋಡಿ.

೧.       ಮೈಯಲ್ಲಿ ಬ್ಯಾನಿ ಬಂದ್ರ ಜಳಕ ಮಾಡಿ ಮೀಸಲು ನೀರು ತಂದು, ಬೇವಿನ ತಪ್ಪಲನೊಂದಿಗೆ ಅಗಸ್ಸಿಗೆ ದ್ಯಾಮವ್ವಗೆ ಪಲ್ಕಮಿಗ ನೀರು ಹಾಕಿದ್ರ ಬ್ಯಾನಿ ಹೋಗ್ತದ.
೨.       ದಿನ ತುಂಬಿ ಹೆರಿಗೆ ತಡವಾದರೆ ಅಂತರ ನೀರು ಕುಡಿಸಬೇಕು.
೩.       ಕಾಮಾಲೆ ಕಾಯಿಲೆ ಬಂದಾಗ ನೀರಿನಲ್ಲಿ ಸೂಜಿ ಚುಚ್ಚುವುದು.

ಈ ನಂಬಿಕೆಯಲ್ಲಿ ರೋಗಿಯನ್ನು ಕೂರಿಸಿ ಅವನ ಮುಂದೆ ಒಂದು ತಟ್ಟೆಯಲ್ಲಿ ನೀರು ತುಂಬಿಸಿಟ್ಟು, ರೋಗಿಯನ್ನು ತದೇಕ ದೃಷ್ಟಿಯಿಂದ ದೃಷ್ಟಿಸಲು ಹೇಳುತ್ತಾರೆ. ಇದನ್ನು ನಿರ್ವಹಿಸುವವನು ಸೂಜಿಯಿಂದ ಆ ತಟ್ಟಿಯಲ್ಲಿನ ನೀರಿಗೆ ಚುಚ್ಚಿತ್ತಾ ಹೋಗುತ್ತಾನೆ. ತಟ್ಟೆಯಲ್ಲಿನ ನೀರು ಹಳದಿ ಬಣ್ಣಕ್ಕೆ ತಿರುಗುವವರೆಗೂ ಈ ಕ್ರಿಯೆ ನಡೆಯುತ್ತದೆ. ಇದನ್ನು ಎರಡು ಮೂರು ಬಾರಿ ಪರಿವರ್ತಿಸಬೇಕು. ಮೂಲಭೂತವಾಗಿ ಇದು ಮಾಟದ ಮಾದರಿಯಾಗಿದ್ದು ನೀರಿನ ಮೂಲಕ ಕಾಯಿಲೆಯನ್ನು ಆಕರ್ಷಿಸುವ ಕ್ರಮವಾಗಿದೆ.

ನಿಷೇಧ = ಕಟ್ಟುಪಾಡು.

ನೀರಿಗೆ ಸಂಬಂಧಿಸಿದಂತೆ ಜನಪದರಲ್ಲಿ ಕೆಲವು ನಿಷಿದ್ಧಗಳು ರೂಢಿಯಲ್ಲಿವೆ.
೧.       ರಾತ್ರಿ ನೀರು ಕುಡಿದರೆ ವಿಷ ಕುಡದಂತೆ.
೨.       ನೀರು ಕೇಳಿದವರಿಗೆ ಕೊಡದೆ ಹೋದರೆ ಹಲ್ಲಿ ಜನ್ಮ ಬರುತ್ತೆ.
೩.       ಹೊನ್ನೇರು ಕಟ್ಟುವ ದಿನ ಹೊನ್ನೇರು ಬಿಡುವವರೆಗೂ ಹೊಸ ನೀರು ತರಬಾರದು.
೪.       ಹೆಣ ಊರಲ್ಲಿ ಇರುವಾಗ ನೀರು ತರಬಾರದು.
೫.       ಹಿಂದಿನಿಂದ ಬೆನ್ನಿಗೆ ನೀರು ಹಾಕಬಾರದು.

ಇಲ್ಲಿ ಉದಾಹರಿಸಿದ ನಂಬಿಕೆಗಳ ಹಿಂದೆ ಸಾವು ಮತ್ತು ಪಾಪ ಭೀತಿಗಳ ಲಕ್ಷಣಗಳು ಕಾಣುತ್ತವೆ. ಸಾವನ್ನು ನೆನಪಿಸುವ ಯಾವುದೇ ಅನುಕರಣೆಯು ಆಚರಣೆಯೋಗ್ಯವಲ್ಲ. ನಿಷೇಧದಲ್ಲಿ ಪ್ರಾಪ್ತವಾಗುವ ನೀರು ನಿಮ್ಮ ಸ್ವಂತದೇ ‘ಆದರೂ ಅದು ಸರ್ವರಿಗೂ ಸೇರಿದ್ದೂ ಎನ್ನುವ ಸಮಾಜವಾದಿ ಆಶಯಗಳು ಕಂಡು ಬರುತ್ತವೆ. ನೀರು ಪ್ರಾಣಾಧಾರವಾದ ದ್ರವ್ಯವಾದ್ದರಿಂದ ಕೇಳಿದವರಿಗೆ ನೀರು ನೀರಾಕರಿಸುವುದು, ನಿಸರ್ಗದತ್ತವಾಗುವ ಯಾವುದೇ ಪದಾರ್ಥದ ಮೇಲೆ ಮನುಷ್ಯನ ಒಡೆತನ ಸ್ಥಾಪಿಸುವುದು ತಪ್ಪ ಎನ್ನುವ ಅಂಶ ಗಮನಾರ್ಹ.

ಕೆಡಕು ನಿವಾರಣೆ = ಆಕರ್ಷಿಸುವ ಗುಣ

ತೀರ್ಥವಲ್ಲದೆ ಅಂದರೆ ಪೂಜೆಯಲ್ಲಿ ಬಳಸಿದ ನೀರನ್ನು ಹೊರತು ಪಡಿಸಿಯೂ, ನೀರು ಕೆಲವು ಕೇಡುಗಳನ್ನು ನಿವಾರಿಸುತ್ತದೆ.

ನಮ್ಮನ್ನು ಆವರಿಸಿಕೊಂಡಿರುವ ಅನೇಕ ಕ್ಷುದ್ರ ಸಂಗತಿಗಳನ್ನು, ಅಮ್ಮನೋರು, ನೆಲದ ಬಿರಸುಗಳು, ಮೈಹೊಕ್ಕಿದರೆ ಅಂತಹ ಅನ್ಯಶಕ್ತಿಗಳನ್ನು ನೀರಿನ ಮೂಲ ಉಚ್ಚಾಟಿಸಬಹುದು ಇಲ್ಲವೇ ಅಂತಹ ಅವಲಕ್ಷಣಗಳನ್ನು ನೀರು ಹೀರಿಕೊಳ್ಳುವ ಗುಣ ಪಡೆದಿದೆ ಎನ್ನುವ ವಿಶ್ವಾಸದ ಹಿನ್ನೆಲೆಯಲ್ಲಿ ಈ ಕೆಳಗಿನ ನಂಬಿಕೆಗಳು ರಚನೆಗೊಂಡಿವೆ.

೧. ತಂಗಿಯ ಮೊದಲ ಸೂಲಿನ ಮಗು ಗಂಡಾಗಿದ್ದರೆ ಅಣ್ಣನಾದವನು, ನೋಡುವ ಮೊದಲು ತಟ್ಟೆಯಲ್ಲಿ ನೀರು ತುಂಬಿಸಿ ಆ ನೀರಿನಲ್ಲಿ ಮಗುವಿನ ಪ್ರತಿಬಿಂಬ ನೋಡಿ ನಂತರ ನೇರವಾಗಿ ನೋಡಬೇಕು.

೨. ಹೊರಗಿನವರು ಮನೆಯನ್ನು ಪ್ರವೇಶಿಸುವ ಮುನ್ನ ಕಾಲು ತೊಳೆಯಲು ನೀರು ಕೊಡಬೇಕು. ಬಂದವರ ಕಾಲ್ಗುಣ ಒಂದೊಂದು ತರ ಇರ್ತದ, ಒಳ್ಳೆಯದು ಆಗಬಹುದು ಕೆಟ್ಟದ್ದು ಆಗಬಹುದು.

೩. ದೃಷ್ಟಿದೋಷಕ್ಕೆ ಕಣ್ಣ ಕೆಸರು ತೆಗಿಬೇಕು.

ಕೊನೆಯ ಮಾತು

ಮನುಷ್ಯ ಮತ್ತು ನೀರಿನ ನಡುವಿನ ಅನುಸಂಧಾನವನ್ನು, ಸಂಸ್ಕೃತಿಗಳ ನೆಲೆಯಲ್ಲಿಟ್ಟು, ಚರ್ಚಿಸಲು ಮಾಡಿರುವ ಈ ಲೇಖನ ಜಾನಪದದ ವಿದ್ಯಾರ್ಥಿಯಲ್ಲದ ನನ್ನ ಮೊದಲ ಮಾತು. ನೀರು ಜಾನಪದ ನಂಬಿಕೆಗಳಲ್ಲಿ ವಿಚಾರವನ್ನು ಕುರಿತು ಯಾವುದೇ ಅಂತಿಮ ಎನ್ನುವ ತತ್ವಗಳನ್ನು ಪ್ರತಿಪಾದಿಸಿಲ್ಲ. ನೀರಿನ ಆಳ ಬಲ್ಲವರಿಲ್ಲ ಎನ್ನುವ ನಂಬಿಕೆ. ನನಗೆ ರಕ್ಷೆ. ಇದು ನನ್ನ ಕಾಣ್ಕೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಿನ ಅರ್ಥಗಳನ್ನು, ಆಯಾಮಗಳನ್ನು ಈ ವಿಷಯ ಒಳಗೊಂಡಿದೆ.

ನಮ್ಮ ನಿಜ ಸಂಸ್ಕೃತಿಯ ಶೋಧ ಈ ಜಾನಪದ ಒಳಗೊಳ್ಳುವ ಎಲ್ಲ ಪರಿಕರಗಳನ್ನು ಸಂಸ್ಕೃತಿ ಸಂಘರ್ಷಗಳ ಮೂಲಕ ನಡೆಯುವ ಅನಿವಾರ್ಯವನ್ನು ನವ ವಸಾಹತು ಭಾರತ ನಿರ್ಮಾಣ ಮಾಡಿದೆ. ಈ ದಿಕ್ಕಿನಲ್ಲಿ ನಡೆಯುವ ಚರ್ಚೆಗೆ ನನ್ನ ತೊದಲ ಮಾತು ಪ್ರೇರಣೆಯಾದರೆ ಸಾಕು ಎನ್ನುವುದು ನನ್ನ ಆಶಯ.

ಜಾನಪದ ನಂಬಿಕೆಗಳಲ್ಲಿ ನೀರು

೧. ದೇವರಿಗೆ ಕುರಿ ಕಡಿಯುವ ಮುನ್ನ ಕುರಿಯ ತಲೆ ಮೇಲೆ ನೀರು ಸಿಂಪಡಿಸಬೇಕು. ಅದು ಒದರಿದ ಮೇಲೆ ಮಾತ್ರ ಕಡಿಯಬೇಕು.

೨. ದೇವಸ್ಥಾನದಿಂದ ಬಂದಾಗ ಕಾಲು ತೊಳೆದು ಮನೆಯೊಳಗೆ ಬರಬಾರದು.

೩. ದೇವರ ಕೊಳದ ನೀರು ಹೇಗಿದ್ದರೂ ಅಸಹ್ಯಪಡದೆ ಸ್ನಾನ ಮಾಡಬೇಕು.

೪. ನೀರಿಗೆ ಬಿದ್ದವರನ್ನು ಗಂಗಮ್ಮ ಮೂರು ಸಾರಿ ತೇಲಿಸಿ ಮೂರು ಸಾರಿ ಮುಳಗಿಸಿ ಮಡಲಿಗೆ ಹಾಕಿಕೊಳ್ಳುತ್ತಾಳೆ.

೫. ಕಾಲು ತೊಳೆಯುವಾಗ ಹಿಮ್ಮಡಿ ಪೂರ್ತಿ ನೆನೆಯುವಂತೆ ತೊಳೆಯಬೇಕು, ಇಲ್ಲದಿದ್ದರೆ ಶನಿಕಾಟ.

೬. ಒಡವೆಗಳಿಗೆ ನೀಲಿ ಹರಳು ಹಾಕಿಸಬಾರದು, ನೀಲಿ ಶನಿಯ ಮೂಲ ಅದರ ನೀರು ಮೈಮೇಲೆ ಬೀಳಬಾರದು.

೭. ಯಾತ್ರೆಗೆ ಹೊರಟಾಗ ದಾರಿ ಮಧ್ಯದಲ್ಲಿ ಯಾರಾದರು ಸತ್ತರೆ ಅವರನ್ನು ನಡುದಾರಿಯಲ್ಲಿಯೇ ಗಂಗೆಗೆ ಬಿಡಬೇಕು.

೮. ಪಕ್ಷದಲ್ಲಿ ಮೀಸಲು ನೀರು ತರುವಾಗ ಹೊಲೆಯರು, ಮಾದಿಗರು ಕಾಣಬಾರದು, ಮಾತಾಡಬಾರದು, ಹಾಗೇನಾದರೂ ಕಂಡರೆ ಮಾತನಾಡಿದರೆ ಮರು ನೀರನ್ನು ತರಬೇಕು.

೯. ಅಕಾಲದಲ್ಲಿ ಮಳೆಯಾದರೆ ಮಳೆಗಾಲದಲ್ಲಿ ಸಂವೃದ್ಧಿಯಾಗಿ ಮಳೆಯಾಗದು.

೧೦. ಚಂದ್ರನ ಸುತ್ತ ಮಂಡಲ ಹಾಕಿದರೆ ಅಂದು ಖಂಡಿತ ಮಳೆಯಾಗುವುದಿಲ್ಲ.

೧೧. ಊಟ ಮಾಡಿದ ಮೇಲೆ ಕೈ ತೊಳೆದ ನೀರನ್ನು ತಿಳಿಸಬಾರದು, ಹಾಗೇ ಮಾಡಿದರೆ ತಟ್ಟೆ ಒಣಗಿದ ಹಾಗೆ ಗಂಡಸರ ಎದೆ ಒಣಗುತ್ತದೆ.

೧೨. ಊಟ ಮಾಡುವಾಗ ಸೀನಿದರೆ ನೀರನ್ನು ನೆಲಕ್ಕೆ ಹಾಕಬೇಕು.

೧೩. ಮಳೆ, ಸಿಡಿಲು, ಬಂದಾಗ ಮನೆಯ ತೊಟ್ಟಿಗೆ ಅಥವಾ ಮನೆಯ ಹೊರಗೆ ಕಬ್ಬಿಣ (ಕೊಡಲಿ, ಗುಳ) ವನ್ನು ಎಸೆಯಬೇಕು.

೧೪. ಗಂಗೆಗೆ ಕಲ್ಲನ್ನು ಎಸೆಯಬಾರದು, ಹಾಗೆಯೇ ಉಗುಳಬಾರದು.

೧೫. ಮೆಟ್ಟಿನ ಕಾಲಿನಲ್ಲಿ ಗಂಗೆಯೊಳಗೆ ಇಳಿಯಬಾರದು.

೧೬. ತೀರ್ಥ ಮತ್ತು ದೇವರ ಪ್ರಸಾದದಲ್ಲಿ ರುಚಿಯನ್ನು ನೋಡಬಾರದು.

೧೭. ತೀರ್ಥ ತೆಗೆದುಕೊಂಡು ಕೈಯನ್ನು ಬಟ್ಟೆಗೆ ಒರೆಸಬಾರದು, ತಲೆಗೆ ಸವರಿಕೊಳ್ಳಬೇಕು.

೧೮. ತುಂಬಿದ ಗಡಿಗೆ ಎದುರಾದರೆ ಶುಭ.

೧೯. ಕನಸಿನಲ್ಲಿ ನೀರು ಬೆಂಕಿ ಕಾಣಿಸಿಕೊಳ್ಳಬಾರದು.

೨೦. ಮುಸ್ಸಂಜೆಯಲ್ಲಿ ನೀರಿನ ಬಳಿಗೆ ಹೋಗಬಾರದು.

೨೧. ಸ್ವಲ್ಪವಾದರೂ ನೀರನ್ನು ಬೆರೆಸದೇ ಹಾಲನ್ನು ಕಾಯಿಸಬಾರದು, ಅಥವಾ ಬೇರೆಯವರಿಗೆ ಕೊಡಬಾರದು.

೨೨. ನೀರನ್ನು ನಿಂತು ಕುಡಿದರೆ ವಿಷಕುಡಿದಂತೆ.

೨೩. ಊಟ ಮಾಡುವಾಗ ಹೆಚ್ಚು ನೀರು ಕುಡಿದರೆ ನೀರಮೈ ಆಗುತ್ತದೆ.

೨೪. ನೀರು ಕೇಳಿದವರಿಗೆ ಕೊಡದೆ ಹೋದರೆ ಹಲ್ಲಿ ಜನ್ಮ ಬರುತ್ತದೆ.

೨೫. ರಾತ್ರಿ ಹೊತ್ತು ಸುಣ್ಣದ ಗಡಿಗೆ ನೀರನ್ನು ಹಾಕಬಾರದು.

೨೬. ಹವಳದ ಮೇಲಿನ ನೀರು ಮೈಮೇಲೆ ಬಿದ್ದರೆ ಒಳ್ಳೆಯದು.

೨೭. ನೀರಿನಿಂದ ನೆಲದ ಮೇಲೆ ಬರೆದರೆ ಸಾಲ ಹೆಚ್ಚುತ್ತದೆ.

೨೮. ಹಾಲು ತಂದು ಕೊಡುವವನಿಗೆ ಹಾಲು ನೀರು ಎಂದು ಹೇಳಬಾರದು.

೨೯. ಮಕ್ಕಳಿಗೆ ಸ್ನಾನ ಮಾಡಿಸಿದ ನೀರನ್ನು ದಾಟಬಾರದು.

೩೦. ಬಿಸಿಲು ಮಳೆ ಒಟ್ಟಿಗೆ ಬಂದರೆ ಕಾಗೆಗೂ ನರಿಗೂ ಮದುವೆ.

೩೧. ಯಾವುದೇ ಪ್ರಾಣಿಯ ಕತ್ತು ಕೊಯ್ದ ಮೇಲೆ ಅದು ಬಾಯಿ ಬಿಡುವಾಗ ಬಾಯಿಗೆ ನೀರು ಬಿಡಬೇಕು.

೩೨. ಅಕ್ಕಿಯನ್ನನು ನೀರಿಗೆ ಹಾಕಿದ ತಕ್ಷಣ ಗುಳು ಗುಳು ಶಬ್ದ ಮಾಡಿದರೆ ಊಟದ ವೇಳೆಗೆ ನೆಂಟರು ಬರುತ್ತಾರೆ.

೩೩. ಸತ್ತವರ ಮನೆಯಸೂತಕ ಕಳೆಯುವವರೆಗೂ ಅವರ ಮನೆಯಲ್ಲಿ ನೀರು ಕುಡಿಯಬಾರದು.

೩೪. ಒಂದು ಕೊಳದಪ್ಪಲಿ/ಕೊಡದಲ್ಲಿನ ನೀರನ್ನು ಒಂದೇ ಸಾರಿ ಬಗ್ಗಿಸಿಕೊಳ್ಳಬಾರದು. ಸೂತಕದ ಮನೆಯವರು ಹಾಗೆ ಮಾಡುತ್ತಾರೆ.

೩೫. ಬಾಳೆ ಎಲೆಯನ್ನು ಕೊಯ್ಯುವಾಗ ಬುಡಕ್ಕೆ ಒಂದು ಚೆಂಬು ನೀರು ಹಾಕಿ ಅನಂತರ ಕೊಯ್ಯಬೇಕು.

೩೬. ಹೊರಗೆ ಊಟಮಾಡುವಾಗ ಎಲೆಯ ಸುತ್ತ ಒಂದು ಸುತ್ತು ನೀರು ಚಿಮುಕಿಸಬೇಕು.

೩೭. ಊಟ ಮಾಡುವಾಗ ಸೀನು ಬಂದರೆ ಒಂದು ಗುಟುಕು ನೀರು ಕುಡಿದು ಹಿಂಗೈಯ ಮೇಲೆ ಸ್ವಲ್ಪ ನೀರು ಹಾಕಿಕೊಳ್ಳಬೇಕು.

೩೮. ಉಂಡ ತಕ್ಷಣ ಸ್ನಾನ ಮಾಡಬಾರದು.

೩೯. ಒಲೆಯನ್ನು ನೀರು ಹಾಕಿ ಆರಿಸಬಾರದು.

೪೦. ಹೊಲೆಯರ ಮನೆಗೆ ಒಕ್ಕಲಿಗರು ನುಗ್ಗಿದಾಗ ಅವರು ನೀರು ಹುಗ್ಗಲು ಬರುತ್ತಾರೆ, ಆ ನೀರು ತಗುಲಿದರೆ ಒಕ್ಕಲಿಗನಿಗೆ ಕೇಡು.

೪೧. ಹೊಲಗೇರಿ ಹೊಕ್ಕವನು ಮನೆ ಒಳಗೆ ಬರುವ ಮುನ್ನ ಸಗಣಿ ನೀರು ಚಿಮುಕಿಸಿಕೊಂಡು ಬರಬೇಕು.

೪೨. ತೀರ್ಥ ತುಳಿದರೆ ಪಾಪ ಬರುತ್ತದೆ.

೪೩. ತೆಂಗಿನಕಾಯಿ ಕದ್ದು ತಿಂದರೆ ಮದುವೆಯಲ್ಲಿ ಮಳೆ ಬರುತ್ತದೆ.

೪೪. ಕೆರೆ ಮುಂದೆ ಶನಿದೇವರ ಗುಡಿ ಇದ್ದರೆ ಕೆರೆ ತುಂಬುವುದಿಲ್ಲ.

೪೫. ದೇವರಿಗೆ ನೈವೇದ್ಯ ಮಾಡುವಾಗ ಹೂವನ್ನು ನೀರಿನಲ್ಲಿ ಅದ್ದಿ ಎಡೆಯ ಸುತ್ತ ಹೂವಿನಿಂದ ನೀರನ್ನು ಬಿಡುತ್ತಾರೆ.

೪೬. ಕಾಲು ತೊಳೆಯುವಾಗ ಒಂದು ಕಾಲಿನಿಂದ ಮತ್ತೊಂದು ಕಾಲನ್ನು ಉಜ್ಜಿ ತೊಳೆಯಬಾರದು. (ಹೆಣ್ಣು ಮಕ್ಕಳು ಹಾಗೆ ಮಾಡಿದರೆ ತಂದೆ ಮನೆಗೆ ಬಡತನ)

೪೭. ಹೆಣ್ಣು ಮಕ್ಕಳು ತಲೆಗೆ ಸ್ನಾನ ಮಾಡಿ ಕೂದಲು ಬಿಚ್ಚಿಕೊಂಡು ಹೊಸಲು ದಾಟಬಾರದು, ದಾಟಿದರೆ ಹೊಸಲ ಮೇಲೆ ಕೂದಲು ನೀರು ಸರಾಗವಾಗಿ ಬಿದ್ದ ಮನೆಯೂ ಸರಾಗವಾಗಿ ನಾಶವಾಗುತ್ತೆ.

೪೮. ನೀರು ಇಲ್ಲದ ಮನೆಗೆ ಲಕ್ಷ್ಮಿ ಬರುವುದಿಲ್ಲ.

೪೯. ರಾತ್ರಿ ಹೊತ್ತಿನಲ್ಲಿ ಕೆರೆ ನೀರು ಮುಟ್ಟುವ ಮೊದಲು ಚಪ್ಪಾಳೆ ಹೊಡೆದು ಗಂಗಮ್ಮನನ್ನು ಎಬ್ಬಿಸಬೇಕು.

೫೦. ಹೊರಗಿನಿಂದ ಬಂದವರಿಗೆ ಬೆಲ್ಲ ನೀರು ಕೊಡಬೇಕು.

೫೧. ಹರಿಯೋ ನೀರು ಕುಡಿಯೋ ನೀರು.

೫೨. ಪ್ರಯಾಣದಲ್ಲಿ ನದಿ ಸಿಕ್ಕರೆ ಅದಕ್ಕೆ ಎಲೆ ಅಡಿಕೆ ಕಾಸು ಎಸೆದು ಕೈ ಮುಗಿಯಬೇಕು.

೫೩. ಕುರಿಗಳನ್ನು ಈಜಾಕಿದ ಮೇಲೆ ನೀರನ್ನು ಒಂದೆರಡು ನಿಮಿಷ ದಡಕ್ಕೆ ಹುಗ್ಗಬೇಕು.

೫೪. ಬಾವಿ ತೋಡುವಾಗ ಒಂದು ಹಸುವನ್ನು ಪೂಜೆ ಮಾಡಿ ಬಿಡುತ್ತಾರೆ, ಅದು ಎಲ್ಲಿ ನಿಲ್ಲುತ್ತದೋ ಅಲ್ಲಿ ಜಲಕಣ್ಣಿರುತ್ತದೆ.

೫೫. ದನಗಳಿಗೆ ಸೆಲೆಯಾದರೆ ಬೆಳ್ಳುಳ್ಳಿ ಈರುಳ್ಳಿ ಕರಿಸೀಕರೆ ಇವುಗಳ ಹೊಗೆ ಕೊಟ್ಟು ಕಾಯಿಸಿದ ನೀರನ್ನು ಕುಡಿಸಬೇಕು. ಬೆನ್ನ ಮೇಲೆ ತಣ್ಣೀರನ್ನು ಹಾಕಬೇಕು.

೫೬. ನೀರಾವು ಕಚ್ಚಿದರೆ ಕದಡಿದ ನೀರು ಕುಡಿಯಬೇಕು.

೫೭. ನೀರು ಹೊಯ್ದ ತೊಟ್ಟಲಲ್ಲಿ ಮಲಗಿಸಿದ ಮಗುವನ್ನು ಒಂದನ್ನೇ ಬಿಟ್ಟು ಆಚೆಗೆ ಹೋಗೋದಾದ್ರೆ ತೊಟ್ಟಿಲ ಕೆಳಗೆ ಒಂದುಪರಕೆ ಕುಡ್ಲು ಇಟ್ಟು ಹೋಗಬೇಕು. ಇಲ್ದಿದ್ರೆ ಗಾಳಿ ಮೆಟ್ಟುತೆ.

೫೮. ಮಗು ರಚ್ಚೆ ಹಿಡಿದರೆ ಕೆಂಪು ನೀರು ಕಪ್ಪು ನೀರುಗಳಿಂದ ನಿವಾಳಿಸಬೇಕು (ಕಂದ್ಲು ಮಾಡಬೇಕು).

೫೯. ಜೇನು ಹುಳುಗಳು ತಮ್ಮ ಗೂಡಿನಿಂದ ಎದ್ದು ಯಾವ ದಿಕ್ಕಿಗೆ ಹೋಗುವವೂ ಆದಿಕ್ಕಿನಿಂದ ಮಳೆ ಬರುತ್ತದೆ.

೬೦. ರಕ್ಕಸ ಕಿತ್ತಾಳೆ ತುದಿ ಮಲೆನಾಡಿನ ಕಡೆ ಬಾಗಿದ್ದರೆ ಮಳೆ ಹೆಚ್ಚು ಬಯಲು ಸೀಮೆಯ ಕಡೆ ಬಾಗಿದ್ದರೆ ಮಳೆ ಕಡಿಮೆ.

೬೧. ನೀರೊಡ್ಡು ಮೂಡಿದರೆ ಎರಡು ಮೂರು ದಿನಗಳಲ್ಲಿ ಮಳೆ ಬರುತ್ತದೆ.

೬೨. ದೊಡ್ಡವರಿಗೆ ಕನಸಿನಲ್ಲಿ ಕುರಿ ಹಿಂಡು ಕಾಣಿಸಿದರೆ ಮಳೆ ಬರುತ್ತದೆ.

೬೩. ಎತ್ತುಗಳು ತಂಪು ಹೊತ್ತಿನಲ್ಲಿ ಕತ್ತು ಮೇಲೆ ಎತ್ತಿ ಆಕಾಶ ಮೂಸಿದರೆ ಮಳೆ ಬರುತ್ತದೆ.

೬೪. ಕಪ್ಪೆ ಚಿಪ್ಪಿಗೆ ಸ್ವಾತಿ ಮಳೆ ಹನಿ ಸೇರಿದರೆ ಅದು ಮುತ್ತಾಗುತ್ತದೆ.

೬೫. ಹೊನ್ನೇರು ಕಟ್ಟುವ ದಿನ ಹೊನ್ನೇರು ಬಿಡುವವರಿಗೂ ಊರ ಬಾವಿಯಿಂದ ನೀರು ತರಬಾರದು.

೬೬. ಬಾದಾಮಿ ಗೊಂದನ್ನು ನೀರಿನಲ್ಲಿ ನೆನೆಸಿ ತಿಂದರೆ ಆಮಶಂಕೆ ರೋಗ ನಿಲ್ಲುತ್ತದೆ.

೬೭. ರಕ್ತ ಸೋರುತ್ತಿದ್ದರೆ ತಣ್ಣೀರಿನ ಬಟ್ಟೆ ಹಾಕಬೇಕು.

೬೮. ಗುಂಡು ತಗುಲಿದವನಿಗೆ ಜಾಸ್ತಿ ನೀರು ಕುಡಿಸಬಾರದು ಕುಡಿಸಿದರೆ ಕೀವು ಜಾಸ್ತಿ ಆಗುತ್ತೆ.

೬೯. ಶಿವಗಂಗೆ ಬೆಟ್ಟದ ಒಳಕಲ್ಲಿಗೆ ಕೈಹಾಕಿದಾಗ ನೀರು ಸೋಂಕಿದರೆ ಮಕ್ಕಳಾಗುತ್ತವೆ. (ಪುಣ್ಯವಂತರಿಗೆ ಮಾತ್ರ ನೀರು ಸೋಂಕುವುದು)

೭೦. ಸಾಯುವವನಿಗೆ ನೀರು ಬಿಟ್ಟಾಗ ಮೂರು ಬಾರಿ ಬಾಯಿ ಬಿಟ್ಟರೆ ನಿಸೂರಿನಿಂದ ಸತ್ತಂತೆ.

೭೧. ಊರಿನಲ್ಲಿ ಹೆಣ ಇಟ್ಟುಕೊಂಡು ನೀರು ತರಬಾರದು.

೭೨. ಅಮವಾಸೆ ದಿನ ಸ್ನಾನ ಮಾಡಬಾರದು.

೭೩. ನೀರು ಹುಯ್ದು ಕೊಂಡು ಹೊರಗೆ ಮಲಗಬಾರದು.

೭೪. ಉಪ್ಪು ನೀರಿನಲ್ಲಿ ಸ್ನಾನ ಮಾಡಿದರೆ ಕೂದಲು ಉದುರುತ್ತದೆ.

೭೫. ದಿನಕ್ಕೆ ೨-೩ ಬಾರಿ ತಲೆಗೆ ಸ್ನಾನಮಾಡಬಾರದು.

೭೬. ರೊಟ್ಟಿ ಸುಟ್ಟ ಹಂಚಿನ ಮೇಲೆ ನೀರು ಹಾಕಿ ತಣ್ಣಗೆ ಮಾಡಬಾರದು ತಾನಾಗಿಯೇ ಆರಬೇಕು. ನೀರು ಹಾಕಿದರೆ ತಾಯಿ ಹೊಟ್ಟೆಯ ಮೇಲೆ ಹೊಡೆದಂತೆ.

೭೭. ಮುಟ್ಟಿನ ನೀರು ಹಾಕಿಕೊಂಡ ಜಾಗದಲ್ಲಿ ತಿರುಗಾಡಿದರೆ ಕಾಲಲ್ಲಿ ಬೊಕ್ಕೆ ಬರುತ್ತದೆ.

೭೮. ಬಸುರಿಯನ್ನು ಒಮ್ಮೆಯಾದರೂ ಹೊಳೆ ದಾಟಿಸಬೇಕು.

೭೯. ಊರಾಗ ಥಂಡಿ ಹೆಚ್ಚಾದ್ರ ಎಲ್ಲಾ ದೇವರಿಗೆ ನೀರು ನೀಡಬೇಕು, ಅಂದ್ರ ದೇವ್ರಿಗೆ ಶಾಂತಿ ಆಗ್ತದ.

೮೦. ಗುಡ್ಯಾಗ ಸಪ್ತಾ ಮಾಡಿದ್ರ ಮಳಿ ಬೆಳಿ ಸರಿಯಾಗಿ ಬರ್ತಾದ.

೮೧. ಅಳ್ಯಾ ಬಂದ ಮನಿ ಹೊಳಿ ಬಂದಾಂಗ

೮೨. ಕಾಸಿನ ನೀರು ತಣ್ಣಗಿದ್ರೂ ಜಳಕಾ ಮಾಡ್ವಾಗ ಒಂದ ಹನಿ ಆದ್ರೂ ತಣ್ಣೀರು ಹಾಕ್ಬೇಕ.

೮೩. ನೀರು ಮತ್ತು ಬೆಂಕಿ ಒಬ್ಬರೆ ತಗೊಂಡು ಹೋಗಬಾರ್ದು.

೮೪. ಬಾವಿ ನೀರು ಕೊಡದಾಗ ಒಯ್ದಾಗ ಪೂರ್ತಿ ತುಂಬಿಕೊಂಡು ಒಯ್ಬೇಕು. ಅರ್ಧಮರ್ಧ ಒಯ್ಬಾರದು.

೮೫. ಮಜ್ಜಿಗ್ಯಾನ ಬೆಣ್ಣಿ ಮುಳಗಿದ್ರಾ ಜಗತ್ತಾ ಮುಳುಗಿದ್ದಾಂಗ.

೮೬. ಹಿಂದೂ ಮನಿ ಬಚ್ಚಲ ನೀರು ಮನಿ ಹಿಂದ ಹರಿಬೇಕು, ಮುಸ್ಲಿಂ ಬಚ್ಚಲ ನೀರು ಮನಿ ಮುಂದ ಹರೀಬೇಕ.

೮೭. ಹೆಚ್ಚು ಈಸಾಡಿದರೆ ಮುಂದಿನ ಜನ್ಮದಾಗ ಕಪ್ಪಿ ಆಗಿ ಹುಟ್ಟುತಾನ.

೮೮. ಹೊಳ್ಯಾಗ ತೆಪ್ಪ ಬಿಟ್ರೆ ಪಾಪ ಪರಿಹಾರ ಆಗ್ತದ.

೮೯. ಬಸರಿದ್ದಾಕಿ ದಿನಾ ತುಂಬಿ ಲಗೂ ಹಡೀದಿದ್ದರ ಆಕಿಗಿ ಅಂತರ ನೀರು ಕುಡಿಸಬೇಕು.

೯೦. ಬಾಣಂತಿ ಗಂಗಮ್ಮಗ ಹೋಗಿ ಬರೋದನ್ನ ಚುಕ್ಕೋಳ ನೋಡಬಾರದು.

೯೧. ಹೊಸ ಬಟ್ಟೀ ತುದಿ ನೀರಿನಲ್ಲೆದ್ದಿ ಬಡ…. ಪರಿಶೀಲಿಸಿ.

೯೨. ಹಾಲ ಕುಡಿದ ಮ್ಯಾಲ ನೀರು ಕುಡಿಬಾರದು ಹೊಟ್ಟೆ ಜಾಡಸ್ತಾದ.

೯೩. ಗಂಗೀ ದಿಕ್ಕಿನಿಂದ ಬಿತ್ತಿದ್ರ ಬೆಳಿ ಹೆಚ್ಚು ಬರ್ತಾದ.

೯೪. ಬನ್ನಿ ಗಿಡ ಇದ್ದಲ್ಲಿ ಬಾವಿ ತೋಡಿದ್ರ ನೀರು ಬರ್ತದ.

೯೫. ಹೊಸ ಬಾವಿಗಿನ ನೀರು ಶಾಂತಿ ಮಾಡಿದ ಮ್ಯಾಲ ಕುಡಿಬೇಕು.

೯೬. ಆಣೇ ಕಲ್ಲು ಆಡಿದ್ರ ಮಳೀ ಬರಾಂಗಿಲ್ಲ.

೯೭. ಉಗಾದಿ ದಿನ ಬೇವಿನ ತಪ್ಪಲಾ ನೀರಾಗ ಹಾಕಿ ಜಳಕ ಮಾಡ್ತಾರ.

೯೮. ಉಗಾದಿ ದಿನ ಮಳಿ ಬಂದ್ರ ಶುಭ.

೯೯. ಚಂದ್ರ ಗುಡಿ ಕಟ್ಟಿದ್ರ ಮಳಿ ಬರ್ತದ.

೧೦೦.   ಚಂದ್ರಮಣ ಕಣ ಸವರಿದ್ರ ಮಳಿ ಬರಾಂಗಿಲ್ಲ.

೧. ತೊಗಲ ಗೊಂಬಿ ಆಟ ಆಡಿದ್ರ ಮಳಿ ಬರ್ತದ.

೨. ಪ್ರಸ್ತಾ ಹಾಕಿದ್ರ ಮಳಿ ಬರ್ತದ.

೩. ಪೂರ್ವಕ್ಕ ಪಶ್ಚಿಮಕ್ಕ ಉಚ್ಚಿ ಹೊಯ್ಯಬಾರದು.

೪. ಮಳೆ ಬರಲಿಲ್ಲಂದ್ರ ಗುರ್ಚಿ ಅಡಕೋಂತ ಹೋಗಬೇಕು.

೫. ಮಳಿ ಹುಳ ಕುಂಡ್ಯಾಗ ಮುಳ್ಳು ಚು‌ಚ್ಚಿದ್ರ ಅದು ಶಿವನಿಗೆ ಹೇಳಿ ಮಳಿ ತರ್ತದ.

೬. ಮರುವಿನ್ಯಾಗ ಕುಂತಾಗ ನಾಯಿ ಉಚ್ಚಿ ಹೊಯ್ಯದ್ರ ಛಲೋ.

೭. ಊರಿಗೆ ಹೋಗುವರ್ನ ಕಳಸಿಬಂದು ಸ್ನಾನ ಮಾಡಬಾರ್ದು.

೮. ತಲೀ ತೊಳಕಂಡು ಪ್ರಯಾಣ ಮಾಡಬಾರ್ದು.

೯. ಮುಕ್ಕಾ ಹಳ್ಳದಾಗಿನ ನೀರು ಕುಡೀಲಾರದ ಹಳ್ಳ ದಾಟಬಾರದು.

೧೦. ಬೆರಳಿಂದ ನೀರು ಚಿಮಿದ್ರ ಉಗುರು ಸುತ್ತು ಆಗ್ತದ.

೧೧. ಮೈಯಲಿ ಬ್ಯಾನಿ ಬಂದ್ರ ಜಳಕಾ ಮಾಡಿ ಮೀಸಲು ನೀರು ತಂದು ಬೇವಿನ ತಪ್ಪಲಿನೊಂದಿಗೆ ಅಗಸ್ಸಿಗೆ, ದ್ಯಾಮವ್ವಗೆ, ಪಾಲ್ಕಮ್ಮನಿಗೆ ನೀರು ಹಾಕಿದ್ರ ಬ್ಯಾನಿ ಹೋಗ್ತದ.

೧೨. ಹೊರಗಿನಿಂದ ಬಂದ ಅತಿಥಿಗಳಿಗೆ ಕಾಲು ತೊಳೆಯಲು ನೀರು ಕೊಡಬೇಕು. ಒಬ್ಬರ ಕಾಲ್ಗುಣ ಒಂದೊಂದು ತರ ಇರ್ತದ ಒಳ್ಳೆಯದಾಗಬಹುದು. ಇಲ್ಲ ಕೆಟ್ಟದಾಗಬಹುದು. ಆದ್ದರಿಂದ ಕಾಲು ತೊಳೆದು ಮನೆ ಪ್ರವೇಶ ಮಾಡಬಹುದು.

೧೩. ಕಣ್ಣೆಸರು ಕಾಲ್ದೂಳಾಗಿ ಹೊಟ್ಟೆ ಕಡೆತ ಬಂದರೆ ಕುಡ್ಲನ್ನು ಖಣಿ ಖಣಿ ಕಾಯಿಸಿ ಮೂರು ಸಾರಿ ಮಕ್ವದಿಂದ ಇಳೀ ತೆಗೆದು ನೀರಿಗೆ ಅದ್ದಿ ಆ ನೀರನ್ನು ಕುಡಿದರೆ ವಾಸಿಯಾಗ್ತದೆ.

೧೪. ಮಕ್ಕಳಿಗೆ ಸ್ನಾನ ಮಾಡಿಸಿದ ಮೇಲೆ ಮನೆ ದೇವರಿಗೆ ಕೈಮುಗಿಸಬೇಕು.

೧೫. ಮಕ್ಕಳಿಗೆ ಸ್ನಾನ ಮಾಡಿಸಿ ಕಣ್ಣೆಸರು ಕಾಲಧೂಳು ಆಗದಂತೆ ಕೊನೆಯಲ್ಲಿ ಮಗುವಿನ ಸುತ್ತ ಮೂರು ಸಾರಿ ಬಳಸಿ ನೀರನ್ನು ಹಾಕಿದರೆ ಒಳ್ಳೆಯದಾಗುತ್ತದೆ.

೧೬. ಹಸವು ಈಯುವ ಘಳಿಗೆ ಹತ್ತಿರವಾದಾಗ ಒಂದೆರಡು ತೊಟ್ಟು ಹಾಲನ್ನು ಹಿಂಡಿ ನೀರಿನಲ್ಲಿ ಹಾಕಬೇಕು ಹಾಲು ತೇಲಿದರೆ ಹೆಂಗರ, ಹಾಲು ಮುಳಗಿದರೆ ಹೋರಿಗರವನ್ನು ಈಯುತ್ತೆ.

೧೭. ಕಾಗೆಗಳು ಊರ ಸುತ್ತ ಹಾರಾಡುತ್ತಾ ಕೂಗಿದರೆ ಮಳೆ ಬರುತ್ತೆ.

೧೮. ನೀರು ಸೇದುವಾಗ ಬಿಂದಿಗೆಗೆ ಪೂರ್ತಿ ನೀರು ಬಾರದೆ ಬಂದ ಅರ್ಧ ನೀರನ್ನು ಮನೆಗೆ ತಂದರೆ ನೆಂಟರು ಬರುತ್ತಾರೆ.

೧೯. ನೀರನ್ನು ಹೆಚ್ಚಾಗಿ ಸುರಿಯಬಾರ್ದು ನೀರು ಸುರಿದ ಕೈ ನಿಧಾನ.

೨೦. ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಒಂಟಿಯಾಗಿ ಕೆರೆ, ಹೊಳೆ, ಬಾವಿಗಳ ಬಳಿ ಹೋಗಬಾರದು.

೨೧. ಹೆಣ್ಣು ಮಕ್ಕಳಿಗೆ ಹರಿಶಿಣದ ನೀರು ಬಿದ್ದ ಮೇಲೆ ಬೆಳವಣಿಗೆ ಹೊಂದಾರ್ತೆ.

೨೨. ನೀರು ತುಂಬಿದ ಮಡಿಕೆ ಶುಭ ಸೂಚಕ.

೨೩. ಒಳಕಲ್ಲಿನಲ್ಲಿ ನೀರು ಬಿಡಬಾರದು ಸಾಲ ಹೆಚ್ಚುತ್ತದೆ.

೨೪. ರಾತ್ರಿ ನೀರು ಕುಡಿಯಬಾರದು.

೨೫. ರಾತ್ರಿ ಗಂಗಮ್ಮ ನಿದ್ದೆ ಮಾಡ್ತಾ ಇರ್ತಾಳೆ.

೨೬. ನೀರಿಗೆ ಕಲ್ಲು ಹಾಕಿದರೆ ತಾಯಿ ಹೊಟ್ಟೆಗೆ ಕಲ್ಲು ಹಾಕಿದಂತೆ.

೨೭. ನೀರಿನಲ್ಲಿ ಮುಖ ನೋಡಿಕೊಂಡು ಹೆಂಗಸರು ಹಣೆಗೆ ಕುಂಕುಮ ಹಚ್ಚಿಕೊಳ್ಳಬಾರದು.

೨೮. ದೇವಸ್ಥಾನದಿಂದ ಮನೆಗೆ ಬಂದಾಗ ಕಾಲು ತೊಳೆದು ಮನೆ ಪ್ರವೇಶ ಮಾಡಬಾರದು.

೨೯. ಊಟವಾದ ಮೇಲೆ ಕೈ ತೊಳೆದ ನೀರನ್ನು ತಿಳಿಸಬಾರದು ಹಾಗೆ ಮಾಡಿದರೆ ತಟ್ಟೆ ಒಣಗುವಂತೆ ಮನುಷ್ಯನ ಎದೆ ಶರೀರವು ಒಣಗುವುದಂತೆ.

೩೦. ತರ್ಪಣ ಬಿಟ್ಟಾಗ ತೆಪ್ಪವು ಮರಳಿ ದರ್ಶನವಿತ್ತರೆ ಆ ವ್ಯಕ್ತಿಯ ಬಗ್ಗೆ ತುಂಬಾ ಪ್ರೀತಿ ಇದೆ ಅಂತ.

೩೧. ಮಕ್ಕಳು ಮರಿ ಬಿದ್ದರೆ ಒಳ್ಳೆಯದಲ್ಲವೆಂದು ಹಣೆಗೆ ನೀರು ಹುಯ್ದು ಬಿದ್ದ ಜಾಗದಲ್ಲಿ ಮೂರು ಮೊಳೆಯನ್ನು ಹೊಡೆಯಬೇಕು.

೩೨. ಹಾವು ಕಡಿದಾಗ ನೀರು ಕುಡಿಸಬಾರದು, ನದೀ ದಾಟಿಸಬಾರದು.

೩೩. ಸಾವಿನಿಂದ ಹಿಂತಿರುಗಿ ಬರುವಾಗ ನೀರು ಮುಟ್ಟಿ ಬರಬೇಕು.

೩೪. ಮಣ್ಣು ಮಾಡಿದಮೇಲೂ ತಲೆಗೋರು ಇಕ್ಕಬೇಕು.

೩೫. ಸತ್ತ ಜಾಗದಲ್ಲಿ ತುಂಬಿದ ಚೆಂಬು ನೀರು ಇಡಬೇಕು.

೩೬. ಸಾಯುವಾಗ ಬಾಯಲ್ಲಿ ನೀರು ಬಿಡಬೇಕು.

೩೭. ಎಳ್ಳು ನೀರು ಬಿಟ್ಟರೆ ಆ ಸಂಬಂಧ ಕಡೆದು ಹೋದ ಹಾಗೆ

೩೮. ಭಯ ಪಟ್ಟಾಗ ದಾಳ ಹಾಕಬೇಕು. ಪೊರಕೆ ಕಡ್ಡಿಗಳಿಗೆ ಬೆಂಕಿ ಹಚ್ಚಿ ಭಯಗೊಂಡವರ ಮುಖದ ಮುಂದೆ ಹಿಡಿದು ಬೆಂಕಿಯ ಮೂಲಕ ಅವರ ಮುಖಕ್ಕೆ ನೀರು ಹಾಕಬೇಕು.

೩೯. ಬೇದಿ ಇದ್ದಾಗ ಚೆಂಬು ಕಚ್ಚು ಹಾಕಬೇಕು.

೪೦. ಪರ ಊರಿನ ದೇವತೆಗಳು ಊರ ಪ್ರವೇಶಕ್ಕೆ ಮುನ್ನ ಗಂಗೆ ಪೂಜೆ ಮಾಡಿ ಬರಬೇಕು.

೪೧. ತುಂಬಿದ ಕೊಡದ ಕಂಟ ಹಿಡಿದುಕೊಂಡ ಮುತ್ತೈದೆಯರು ಅಡ್ಡ ಬಂದರೆ ಶುಭ.

೪೨. ಕೆರೆ ತುಂಬಿದಾಗ ದೀಪಗಳ ಮಾಡಿ ಬಲಿಕೊಡಬೇಕು.

೪೩. ಕಾಮಾಲೆ ಕಾಯಿಲೆ ಬಂದಾಗ ನೀರಿನಲ್ಲಿ ಸೂಜಿ ಚುಚ್ಚುವುದರ ಮೂಲಕ ಕಾಯಿಲೆ ವಾಸಿಮಾಡಬಹುದು. ರೋಗಿಯ ಮುಂದೆ ಒಂದು ಕಂಚಿನ ತಟ್ಟೆಯಲ್ಲಿ ನೀರಿಟ್ಟು ಆ ನೀರನ್ನು ರೋಗಿ ದಿಟ್ಟಿಸುತ್ತಿರಬೇಕು, ವೈದ್ಯ ಮಾಡುವವನು ಆ ನೀರಿಗೆ ಸೂಜಿಯಿಂದ ಚುಚ್ಚುತ್ತಾ ಹೋಗುತ್ತಾನೆ.

೪೪. ದೇವರ ಸಿಕ್ಕು ಆಗಿದ್ದರೆ ನೀರಿನಲ್ಲಿ ಸುಣ್ಣ ಹಾಕಿದ ತಕ್ಷಣ ಕೆಂಪು ಬಣ್ಣಕ್ಕೆ ತಿರುಗುತ್ತದೆ.

೪೫. ಊರಲ್ಲಿ ಅಮ್ಮನು ಕಾಣಿಸಿಕೊಂಡರೆ ಗೋವು ಕಲ್ಲಿಗೆ ಬೇವು ಸೊಪ್ಪಿಕ್ಕಿ ದಿನ ಬೆಳಗ್ಗೆ ಹೊಸ ನೀರು ತಂದು ಗೋವು ಕಲ್ಲಿಗೆ ಸುರಿದರೆ ಅಮ್ಮನು ಶಾಂತವಾಗುತ್ತಾಳೆ.

೪೬. ಹರಿಯೋ ನೀರಿಗೆ ಮೈಲಿಗೆ ಇಲ್ಲಾ.

೪೭. ಮುಟ್ಟಾದ ಹೆಂಗಸರು ನೀರು ಮುಟ್ಟಬಾರದು.

೪೮. ನದೀ ಮೂಲ ಹುಡುಕಬಾರದು.

೪೯. ಮನೆಯಲ್ಲಿ ಯಾರಿಗಾದರೂ ಅಮ್ಮನು ಬಂದಿದ್ದರೆ ಹೊರಗಿನವರು ಮನೆ ಪ್ರವೇಶಕ್ಕೆ ಮುನ ಗಂಜಲ ಮೈ ಮೇಲೆ ಚಿಮುಕಿಸಿಕೊಂಡು ಬರಬೇಕು.

೫೦. ಒಗೆದ ಬಟ್ಟೆಯನ್ನು ನೀರು ಸೋರುವ ಹಾಗೆ ಒಣಗು ಹಾಕಬಾರದು.

೫೧. ಸಂಜೀವಿನಿ ಕಡ್ಡಿ ನೀರಿನಲ್ಲಿ ಎದುರು ಹರಿಯುತ್ತದೆ.

೫೨. ಕೊಂಡ ಹಾಯುವ ಮುನ್ನ ದೇವರು ತೀರ್ಥವನ್ನ ಕೊಂಡದ ಮೇಲೆ ಚಿಮುಕಿಸಬೇಕು.

೫೩. ಹೊಂಗ್ಲು ಹಾಕೋದು ಗಂಗೆಗೆ ರಕ್ತ ಬೆರಸಿ ಬೆಳಿಯ ಮೇಲೆ ಸಿಂಪಡಿಸಬೇಕು.

೫೪. ಕೆರೆ ತುಂಬಿದಾಗ ಕೋಡಿಯಲ್ಲಿ ಹೆಂಗಸರು ಜಲ ಪೂಜೆ ಮೂಡಬೇಕು.

೫೫. ಉಪವಾಸ ಮಾಡುವಾಗ ನೀರಿಲ್ಲದೆ ಬೇರೇನು ಕುಡಿಯಬಾರದು, ನೀರು ನಿಷಿದ್ಧವಲ್ಲ.

೫೬. ಸ್ನಾನ ಮಾಡಿಕೊಂಡು ನೀರನ್ನು ಮನೆಯಲ್ಲಾ ಸಿಂಪಡಿಸಿದರೆ ಮನೆ ಮಡಿಯಾಗುತ್ತದೆ.

೫೭. ಯಾರಾದರೂ ಪ್ರಯಾಣ ಹೋದ ಮೇಲೆ ಬಾಗಿಲಗೆ ನೀರು ಹಾಕಬಾರದು.

೫೮. ಸ್ನಾನ ಮಾಡುವಾಗ ಒಂದು ಚೂರು ನೀರನ್ನು ತಳದಲ್ಲಿ ಉಳಿಸಬೇಕು.

೫೯. ಪೂಜೆಗೆ ಬಾವಿ ಅಥವಾ ನದೀ ನೀರನ್ನು ಬಳಸಬೇಕು.

೬೦. ಗ್ರಹಣದ ದಿನ ನೀರು ಮೈಲಿಗೆಯಾಗುತ್ತದೆ.

೬೧. ನದೀ ದಂಡೆಯಲ್ಲಿ ಯಾವುದೇ ದೇವರಿದ್ದರೂ ಮೊದಲು ನದಿಗೆ ಪೂಜೆ ಸಲ್ಲಿಸಬೇಕು.

೬೨. ಮಗುವಿಗೆ ಹೆಸರಿಡುವಾಗ ಐದು ಜನ ಮುತ್ತೈದೆಯರು ಬಾವಿಯಿಂದ ತುಂಬಿದ ಕೊಡದಾಗ ನೀರು ತಂದು ತೊಟ್ಟಿಲ ಕೆಳಗಿಟ್ಟು ಹೆಸರಿಡಬೇಕು.

೬೩. ಹೊಸ ಮನೆಗೆ ಹೋಗುವಾಗ ಮುತ್ತೈದೆ ತುಂಬಿದ ಕೊಡದೊಡನೆ ಮೊದಲು ಪ್ರವೇಶ ಮಾಡಬೇಕು.

೬೪. ಸುರಗಿ ಕೊಡುವಾಗ ಬಾವಿ ನೀರು ತಂದು ಕೊಡಬೇಕು.

೬೫. ತುಂಬಿದ ಗಡಿಗೆ ಯಾವುದೇ ದೇವರ ಹೆಸರು ಹೇಳಿ ಪೂಜೆ ಮಾಡಿದರೆ ಆ ದೇವರಿಗೆ ಪೂಜೆ ಮಾಡಿದ ಹಾಗೆ.

೬೬. ಹೆರಿಗೆಯ ನಂತರ ತಣ್ಣೀರು ಮುಟ್ಟುವ ಮೊದಲು ಗಂಗೆ ಪೂಜೆ ಮಾಡಿ ಮುಟ್ಟಬೇಕು.

೬೭. ಬೆನ್ನ ಹಿಂದಿನಿಂದ ನೀರು ಹಾಕಬಾರದು.

೬೮. ತಂಗಿಯ ಮೊದಲ ಮಗುವನು ಅಣ್ಣ ನೀರಿನಲ್ಲಿ ಪ್ರತಿಬಿಂಬ ನೋಡಿ ಅನಂತರ ಮಗುವನ್ನು ನೋಡಬೇಕು.

೬೯. ಮದುವೆಯ ನಂತರ ಹೆಣ್ಣು ಗಂಡು ಬಾವಿಗೆ ಹೋಗಿ ಗಂಗಾ ಪೂಜೆ ಮಾಡಿ ಮೂರು ದಿನಸಿನ ಧಾನ್ಯವನ್ನು ಮೊಳಕ್ಕೆ ಹಾಕ್ಬೇಕು.

೭೦. ಏನೇ ಧಾನ ಕೊಟ್ಟರು ಧಾರೆ ಎರೆದು ಕೊಡಬೇಕು.

೭೧. ಮಳೆ ಬಾರದೆ ಇದ್ದಾಗ ಗ್ರಾಮದೇವತೆಗಳ ಬೆಟ್ಟಕ್ಕೆ ಹೋಗಿ ಅಲ್ಲಿ ಅಭಿಷೇಕ ಪೂಜೆ ಮಾಡಿದರೆ ಮಳೆ ಬರುವ ನಂಬಿಕೆ ಇದೆ.

೭೨. ಅಮರೇಶ್ನ ಮಿಂಚು ಮಿಂಚಿದರೆ ಮಳೆ ಖಂಡಿತ ಬರುತ್ತದೆ.

೭೩. ಮಳೆ ಬಾರದೆ ಇದ್ದಾಗ ಊರ ಜನರೆಲ್ಲಾ ಆಲದ ಮರದ ಗೊಂಬೆ, ನಾಲ್ಕು ಗಾಲಿಯ ಮಾಡಿಕೊಂಡು ಗೊಂಬೆಯನ್ನು ರಥದಲ್ಲಿ ಕೂಡಿಸಿಕೊಂಡು ಜನರ ಎಲ್ಲಾ ಹೊಲದ ಮೇರೆಗೆ ಇಡುತ್ತಾರೆ. ಅಲ್ಲಿಂದ ಇನ್ನೊಂದು ಊರವರು ಒಯ್ಯತ್ತಾರೆ. ಊರಿಗೆ ಬಂದ ಮಾರಿತೊಲಗಿ ಹೋಗಲೆಂದು ಗ ಮಾಡುತ್ತಾರೆ.

೭೪. ಇರಾಟ ಪರ್ವ ಮಳೆಯನ್ನು ಪ್ರಾರ್ಥಿಸುವುದಕ್ಕಾಗಿ ದೇವಾಲಯದಲ್ಲಿ ಓದುವುದು.

೭೫. ಉತ್ತರ ನಕ್ಷತ್ರ ಮಳೆ ಸ್ವಲ್ಪ ಬಿದ್ದರೂ ಹಸ್ತ ನಕ್ಷತ್ರ ಮಳೆ ಸುಭೀಕ್ಷವಾಗಿ ಬರುತ್ತದೆಂಬ ನಂಬಿಕೆ.

೭೬. ಊರ ಮುಡಿ ತುಂಬಲವುದು ಮಳೆ ಬರಿಸಲು ಮಾಡುವ ಪೂಜೆ.

೭೭. ಒನಕೆ ಈಮೂದು ಮಳೆ ಬಾ. ಬ. ಒಂದು ಬಗೆಯ ಪೂಜೆ. ಒನಕೆಯ ಎರಡು ತುದಿಗೆ ಬೇವಿನ ಟೊಂಗೆಗಳನ್ನು ಕಟ್ಟಿ ಕಪ್ಪೆಗಳಿಗೆ ಮದುವೆ ಮಾಡುವುದು.

೭೮. ಕಡ್ಲಿ ಗುಡ್ಡ ಮಿಂಚು, ಆಗ್ನೆಯ ದಿಕ್ಕಿಗೆ ಮಿಂಚಿದರೆ ಮಳೆ ಬರುತ್ತದೆಂಬ ನಂಬಿಕೆ.

೭೯. ಕಪ್ಪೆಗಳು ಕಲ್ಲಡಿ ಕೂಗಿದರೆ ಮಳೆ ಬರುವ ಸೂಚನೆ ಎಂಬ ನಂಬಿಕೆ.

೮೦. ಕರಿಹೋತ ಗಂಗೆ ಪೂಜೆಯೆಂದು ಕರೆ ಕೋಡಿಯ ಬಳಿ ಬಲಿ ಕೊಡುವ ಕರಿಹೋತ.

೮೧. ಕೃತ್ಗ ಕಾಯ್ಕ್ ಕೃತಿಕಾ ನಕ್ಷತ್ರದಲ್ಲಿ ಮಳೆ ಬರಬಾರದು.

೮೨. ತೊನ್ನು ಬಡದವರ ಹೆಣವನ್ನು ಹೂತರೆ ಮಳೆ ಬರುವುದಿಲ್ಲ.

೮೩. ಕೋಡ್ಮರಿ ಕೆರೆ ತುಂಬಿದಾಗ ಸಂತೋಷಕ್ಕಾಗಿ ಒಂದು ಕುರಿಯನ್ನು ಬಲಿಕೊಡುತ್ತಾರೆ.

೮೪. ಗಡಾರಿ ಬಡಿಯುವುದು ಮಳೆ ವಿಪರೀತವಾದಾಗ ಮಾಳಿಗೆಯ ಮೇಲಿಂದ ನೀರು ಹರಿದು ಕೆಳಗೆ ಬೀಳುವ ಸ್ಥಳದಲ್ಲಿ ಉದ್ದನೆಯ ಕಬ್ಬಿಣದ ತುಂಡನ್ನು ಹೊಡೆಯುತ್ತಾರೆ. ಹೀಗೆ ಮಾಡಿದರೆ ನಿಂತು ಹೋಗುತ್ತದೆ.

೮೫. ಗುಡ್ಡಿ ಕಲ್ಲಿಗೆ ನೀರು, ಮಳೆ ಬಾರದಿದ್ದಾಗ ಊರ ಅಗಸಿ ಬಾಗಿಲಲ್ಲಿ ಇರುವ ಕಲ್ಲಿಗೆ ೧೦೧ ಕೊಡ ನೀರು ಹಾಕಬೇಕು.

೮೬. ಮಳೆರಾಯ್ನ ಮಾಡುವುದು.

೮೭. ಒರಳಕಲ್ಲು ತೂತು ಬಿದಿದ್ದ ಊರಿನಲ್ಲಿ ಮಳೆ ಬರುವುದಿಲ್ಲ.

೮೮. ಬೆಂಕಿ ಕೇರೊದು ಮಳೆ ಜಾಸ್ತಿಯಾದಾಗ ಮಳೆ ನಿಲ್ಲಲು ಮಾಡುವ ಆಚರಣೆ.

೮೯. ಸೀತೆದಂಡು ಮಳೆಗಾಗಿ ಹೆಂಗಸರು ಮಾಡುವ ಪೂಜೆ.

೯೦. ಸುಂಕ್ಮಾರಿ ಮಳೆ ಬರದಿದ್ದಾಗ ಈ ದೇವತೆ ಮುನಿದಿದ್ದಳೆಂದು ಭಾವಿಸುತ್ತಾರೆ.

೯೧. ಹಕ್ಕ ಆಡುವುದು. ಮಳೆ ನಿಲ್ಲಲೆಂದು ಆಡುವ ಆಟ.

೯೨. ಸ್ವರಿವೆ ಮರಿ ಹಿಡಿಯುದು. ಮೋಡ ಕಟ್ಟಿದ್ದಾಗ ಕುರಿ ಅಥವಾ ಮೇಕೆಯನ್ನು ಮಳೆಗೆ ಇಳೀ ತೆಗೆದು ಊರು ಸುತ್ತಿಕೊಂಡು ಬಂದು ಊರಬಾಗಿಲಲ್ಲಿ ಕಡಿಯುವುದು ಬಲಿಯ ರಕ್ತ ನೆಲಕ್ಕೆ ಬೀಳುತ್ತಲ್ಲೇ ಮಳೆ ಸುರಿಯುತ್ತದೆ ಎನ್ನುವ ನಂಬಿಕೆ.