ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿ ವರ್ಗಾವಣೆ ಇಂದು ತುರ್ತಾಗಿ ನಡೆಯಬೇಕಾದ ಕಾರ್ಯ. ಕೃಷಿ ಸಂಶೋಧನೆಗಳ ಫಲಿತಾಂಶಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗವು ಭಾರತ ಸರ್ಕಾರದ ನೆರವಿನಿಂದ ೧೯೬೯-೭೦ರಿಂದ ಕಾರ್ಯನಿರತವಾಗಿದೆ. ಕೃಷಿ ವಿದ್ಯಾರ್ಥಿಗಳಲ್ಲಿ ಮತ್ತು ರೈತರಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಪ್ರಜ್ಞಾಪೂರ್ವಕವಾದ ತಿಳಿವಳಿಕೆ ಮೂಡಿಸಲು ನೆರವಾಗುವಂತೆ ಕನ್ನಡ ಮಾತೃಭಾಷೆಯಲ್ಲಿ ಆಧುನಿಕ ಕೃಷಿ ವಿಜ್ಞಾನ ಸಾಹಿತ್ಯವನ್ನು ಪ್ರಕಟಿಸುವುದು ಕೃಷಿ ವಿಶ್ವವಿದ್ಯಾನಿಲಯದ ಒಂದು ವಿಶೇಷ ಹೊಣೆಯಾಗಿದೆ. ಈ ದಿಸೆಯಲ್ಲಿ ವಿಭಾಗದಿಂದ ೨೮೫ಕ್ಕೂ ಹೆಚ್ಚು ಪಠ್ಯ ಹಾಗೂ ಪರಾಮರ್ಶನ ಕೃತಿಗಳನ್ನು ಪ್ರಕಟಿಸಲಾಗಿದೆ.

ಪಠ್ಯಪುಸ್ತಕ ಪ್ರಕಟಣಾಕಾರ್ಯದೊಂದಿಗೆ ಕನ್ನಡದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಲೇಖಕರಿಗೆ ಹಾಗೂ ಬೋಧಕರಿಗೆ ಅನುವಾಗಲೆಂದು ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಪಾರಿಭಾಷಿಕ ಪದಕೋಶಗಳನ್ನು ಪ್ರಕಟಿಸಲಾಗಿದೆ. ಅಲ್ಲದೆ, ೨೦೦೩ನೇ ವರ್ಷದಿಂದ ಕನ್ನಡ ಅಧ್ಯಯನ ವಿಭಾಗವು ಕೃಷಿ ಜ್ಞಾನ ಭಂಡಾರ ಎಂಬ ವಿನೂತನ ಜನಪ್ರಿಯ ಮಾಲಿಕೆಯನ್ನು ಪ್ರಾರಂಭಿಸಿದ್ದು ಇದರಲ್ಲಿ ೩೩ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ರೈತರ ಜನಮನವನ್ನು ತಲುಪುವ ಉನ್ನತ ಉದ್ದೇಶದಿಂದ ರೈತರಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಕೃತಿಗಳನ್ನು ಸರಳ ಭಾಷೆ ಹಾಗೂ ಸುಂದರರೂಪದಲ್ಲಿ ಹೊರತರಲಾಗುತ್ತಿದೆ.

ಈ ಉದ್ದೇಶ ಸಾಧನೆಗಾಗಿ ಹೆಚ್ಚು ಹೆಚ್ಚು ಶಿಕ್ಷಕರು, ವಿಜ್ಞಾನಿಗಳು ಹಾಗೂ ಲೇಖಕರು ತಮ್ಮ ಪರಿಣತಿಯ ವಿಷಯಗಳಲ್ಲಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿ ಕೃಷಿ ವಿಜ್ಞಾನದ ಆಧುನಿಕ ಆವಿಷ್ಕಾರ, ತಂತ್ರಜ್ಞಾನ ಹಾಗೂ ಚಿಂತನೆಗಳನ್ನು ಕನ್ನಡ ನಾಡಿನ ರೈತಾಪಿ ವರ್ಗಕ್ಕೆ ತಲುಪಿಸಲು ಸಹಕರಿಸಬೇಕಾಗಿದೆ.

ನೀರು ನಿರ್ವಹಣೆ (ದ್ವಿ.ಮು.) ಪುಸ್ತಕವು ರೈತರಿಗೆ, ಕೃಷಿ ವಿಜ್ಞಾನಿಗಳಿಗೆ, ವಿಸ್ತರಣ ಕಾರ್ಯಕರ್ತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಇತರ ಆಸಕ್ತರಿಗೆ ಹೆಚ್ಚು ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ.ಕೆ.ನಾರಾಯಣಗೌಡ
ಕೃಷಿ ವಿಶ್ವವಿದ್ಯಾನಿಲಯ                                                            
ಗಾಂಧಿ ಕೃಷಿ ವಿಜ್ಞಾನ ಕೇಂದ್ರ
ಬೆಂಗಳೂರು-೫೬೦ ೦೬೫.