ಸಕಲ ಜೀವಿಗಳ ಅಸ್ತಿತ್ವಕ್ಕೆ ನೀರು ಮೂಲಾಧಾರ. ಭೂಮಂಡಲದ ಮುಕ್ಕಾಲು ಭಾಗದಲ್ಲಿ ನೀರೇ ಇರುವುದು ಸತ್ಯವಾದರೂ ಈ ನೀರಿನ ಅತ್ಯಲ್ಪಭಾಗ ಮಾತ್ರ ಭೂಮಿಯ ಮೇಲೆ ವಾಸಿಸುವ ಸಸ್ಯ ಮತ್ತು ಪ್ರಾಣಿಗಳಿಗೆ ಉಪಯುಕ್ತ ಎಂಬುದೂ ಅಷ್ಟೇ ಕಟು ಸತ್ಯ.

ನೀರು ಘನ, ದ್ರವ ಮತ್ತು ವಾಯು ರೂಪಗಳನ್ನು ತಾಳುತ್ತ, ನೆಲ, ಸಾಗರ ಮತ್ತು ವಾಯು ಮಂಡಲದಲ್ಲಿ ಅವಿರತವಾಗಿ ಸುತ್ತುತ್ತಿರುತ್ತದೆ. ಇದಕ್ಕೆ ಜಲಚಕ್ರವೆಂದು ಹೆಸರು. ಈ ಚಕ್ರದ ಒಂದು ಭಾಗವಾದ ಮಳೆ ನಮಗೆಲ್ಲ ಪರಿಚಿತ. ಮಳೆಯ ವೈವಿಧ್ಯತೆಯ ಸರಿಯಾದ ಪರಿಚಯವಿದ್ದರೆ ಮಾತ್ರ ಈ ಮಳೆಯಿಂದ ದೊರೆಯುವ ನೀರಿನ ಸಮರ್ಥ ನಿರ್ವಹಣೆ ಸಾಧ್ಯವಾದೀತು. ಉದಾಹರಣೆಗೆ, ಕೆಲವು ಪ್ರದೇಶಗಳಲ್ಲಿ ವಾರ್ಷಿಕವಾಗಿ ಬೀಳುವ ಮಳೆಯ ಪ್ರಮಾಣ ಕಡಿಮೆ. ಸಮಯ ಅನಿಶ್ಚಿತ ಮತ್ತು ವೇಗವು ಅಧಿಕ. ಇಂಥ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ನೀರಿನ ಭಾಗವನ್ನು ಮಣ್ಣಿನೊಳಗೆ ಮತ್ತು ಹೊರಗೆ ಸಂಗ್ರಹಿಸಿಟ್ಟುಕೊಳ್ಳುವ ಸೂಕ್ತ ವಿಧಾನಗಳನ್ನು ಸಂಯೋಜಿಸಬೇಕಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಅಧಿಕ ಮಳೆ ಬೀಳುವುದು ಸಾಮಾನ್ಯ.

ಮೇಲೆ ಸೂಚಿಸಿದ ಹಲವು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಇವುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಹಿಡಿದು ಪರಿಸ್ಥಿತಿಯನ್ನು ಲಾಭದಾಯಕವಾಗಿ ಪರಿವರ್ತಿಸಿಕೊಳ್ಳಲು ನೀರಿನ ಮೂಲಭೂತ ಗುಣಗಳನ್ನು ಮೊದಲು ಅರಿತುಕೊಳ್ಳುವುದು ಅವಶ್ಯ. ಇದರಿಂದ ಈ ಅಮೂಲ್ಯ ಸಂಪನ್ಮೂಲದ ಸರಿಯಾದ ನಿರ್ವಹಣೆ ವಿಧಾನಗಳನ್ನು ಅರಿಯಲು ಮತ್ತು ಹೊಸ ವಿಧಾನಗಳನ್ನು ಸಂಯೋಜಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಈ ಅಂಶಗಳನ್ನು ಕುರಿತು ಚರ್ಚಿಸಲಾಗಿದೆ.

ಈ ಪುಸ್ತಕದ ಸಿದ್ಧತೆಗೆ ಪೂರಕ ಗ್ರಂಥಗಳನ್ನು ಒದಗಿಸಿಕೊಟ್ಟ ಡಾ. ಎ.ಎಂ. ಚಂದ್ರಶೇಖರಯ್ಯ, ಶಿಕ್ಷಣ ನಿರ್ದೇಶಕರು (ನಿವೃತ್ತ), ಮತ್ತು ಡಾ.ಎಸ್‌.ಕೆ. ಪಾಟೀಲ, ಶಿಕ್ಷಣ ನಿರ್ದೇಶಕರು, ಅರಣ್ಯ ಮಹಾ ವಿದ್ಯಾಲಯ, ಶಿರಸಿ ಹಾಗೂ ಅಲ್ಲಿನ ಗ್ರಂಥಾಲಯ ಸಹಾಯಕರಾದ ಶ್ರೀ ಎಂ.ಆರ್.ನದಾಫ್‌ಮತ್ತು ಶ್ರೀ ಎಂ.ಪಿ. ದೊಡ್ಡಮನಿ ಇವರಿಗೆ, ಸ್ವಪ್ರೇರಣೆಯಿಂದ ಚಿತ್ರ ಬರೆದುಕೊಟ್ಟ ಡಾ. ಆರ್.ವಿ.ಶಾಮನೂರು ಕೃಷಿ ಅಧಿಕಾರಿಗಳು ಇವರಿಗೆ ಹಾಗೂ ಪುಸ್ತಕದ ಬರವಣಿಗೆಯ ಯಶಸ್ಸಿಗೆ ಕಾರಣರಾದ ಶ್ರೀಮತಿ ಸಾವಿತ್ರಿ ಎಲ್‌.ದೀಕ್ಷಿತ ಇವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ವಿದ್ಯಾರ್ಥಿಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆಯಾದರೂ ಕೃಷಿಕರಿಗೆ, ವಿಸ್ತರಣಾ ಕಾರ್ಯಕರ್ತರಿಗೆ ಮತ್ತು ಕೃಷಿಯಲ್ಲಿ ಆಸಕ್ತಿಯಿರುವ ಇತರರಿಗೆ ಈ ಪುಸ್ತಕದಲ್ಲಿರುವ ವಿವರಗಳು ಪ್ರಯೋಜನಕಾರಿಯಾಗಬಲ್ಲವು. ಓದುಗರು ಇದರ ಅತ್ಯಧಿಕ ಪ್ರಯೋಜನವನ್ನು ಪಡೆಯಲೆಂಬುದೇ ಲೇಖಕರ ಮಹದಾಸೆ.

ಡಾ.ಎಸ್‌.ವಿ.ಪಾಟೀಲ
ಡಾ.ಲ.ಅ.ದೀಕ್ಷಿತ