ಫಲವತ್ತಾದ ಮಣ್ಣು ಮತ್ತು ನೀರು ಕೃಷಿ ಉತ್ಪಾದನೆಯ ಜೀವಾಳ. ಲಭ್ಯ ನೀರಿನ ಸಮರ್ಥ ಬಳಕೆ ಹಾಗೂ ಸೂಕ್ತ ನಿರ್ವಹಣೆ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅವಶ್ಯಕ ಕಾರ್ಯವಾಗಿದೆ. ಜಮೀನಿನಲ್ಲಿ ಹೆಚ್ಚು ಇಳಿಜಾರಿರುವಾಗ ಬಿದ್ದ ಮಳೆ ನೀರು ತಗ್ಗಿನತ್ತ ಹರಿದುಹೋಗಿ ಪೋಲಾಗುವುದಲ್ಲದೆ, ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ. ಈ ಕಾರಣದಿಂದಾಗಿ ಸಾಗುವಳಿ ಜಮೀನುಗಳ ಫಲವತ್ತತೆ ಕಡಿಮೆಯಾಗಿ ಉತ್ಪಾದನೆ ಕುಗ್ಗುತ್ತದೆ. ಜಮೀನಿನಲ್ಲಿ ಇಳಿಜಾರಿಗೆ ಅಡ್ಡಲಾಗಿ ಸೂಕ್ತ ಅಂತರದಲ್ಲಿ ಬದುಗಳನ್ನು ನಿರ್ಮಿಸಿ ಸಾಗುವಳಿ ಜಮೀನನ್ನು ನಿರ್ವಹಿಸಿದಾಗ ಮಣ್ಣು ಕೊಚ್ಚಣೆ ತಪ್ಪುವುದಲ್ಲದೆ, ಬಿದ್ದ ಮಳೆ ನೀರು ಭೂಮಿಯಲ್ಲಿ ಸಂಗ್ರಹವಾಗುತ್ತದೆ ಹಾಗೂ ಕೃಷಿಯ ಅಧಿಕ ಉತ್ಪಾದನೆಗೆ ದಾರಿಯಾಗುತ್ತದೆ.

ಈ ಕೃತಿಯಲ್ಲಿ ಲೇಖಕರು ನೀರಿನ ನಿರ್ವಹಣೆಯ ಜೊತೆಗೆ ಲವಣ ಮತ್ತು ಸೋಡಿಯಂಯುಕ್ತ ಮಣ್ಣಿನ ಸುಧಾರಣೆ, ಭೂ ಸವಕಳಿ ಮತ್ತು ಸವಕಳಿಗೊಂಡ ಭೂಮಿಯ ಸುಧಾರಣೆ ಹಾಗೂ ಜಲಾನಯನ ಪ್ರದೇಶದ ನಿರ್ವಹಣೆಯ ಬಗೆಗಿನ ವೈಜ್ಞಾನಿಕ ವಿಚಾರಗಳನ್ನು ಅರ್ಥಪೂರ್ಣವಾಗಿ ಮಂಡಿಸಿದ್ದಾರೆ.

ಈ ಕೃತಿಯ ಮೂಲ ಆವೃತ್ತಿಯನ್ನು ದಿ|| ಡಾ.ಎಸ್‌.ವಿ. ಪಾಟೀಲ್‌ಮತ್ತು ಡಾ. ಲ.ಅ. ದೀಕ್ಷಿತ ಅವರು ರಚಿಸಿದ್ದು, ಡಾ.ಲ.ಅ.ದೀಕ್ಷಿತ ಅವರು ಸಮಗ್ರವಾಗಿ ಪರಿಷ್ಕರಿಸಿದ್ದಾರೆ. ಹೆಚ್ಚಿನ ಬೇಡಿಕೆ ಮೇರೆಗೆ ಪ್ರಸ್ತುತ ಕೃತಿಯನ್ನು ದ್ವಿತೀಯ ಮುದ್ರಣ ಮಾಡಲಾಗಿದ್ದು ಈ ಪುಸ್ತಕ ಕರಡೋದುವಿಕೆಯಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಸಿ. ಮಲ್ಲಿಕಾರ್ಜುನರವರು ಹಾಗೂ ಡಿ.ಟಿ.ಪಿ. ಸಿದ್ಧಪಡಿಕೆಯಲ್ಲಿ ಶ್ರೀ ಎಲ್‌.ಆರ್. ದೊಡ್ಡರಂಗಯ್ಯ, ಹಿರಿಯ ಬೆರಳಚ್ಚುಗಾರರು ಸಹಕರಿಸಿದ್ದಾರೆ.

ಈ ಪುಸ್ತಕ ಪ್ರಕಟಣೆಯಲ್ಲಿ ಮಾನ್ಯ ವಿಸ್ತರಣಾ ನಿರ್ದೇಶಕರಾದ ಡಾ.ಆರ್.ಎಸ್‌.ಕುಲಕರ್ಣಿಯವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲಗಳಿಗಾಗಿ ಅವರಿಗೆ ಆದರದ ಕೃತಜ್ಞತೆಗಳು ಸಲ್ಲುತ್ತವೆ.

ನೀರು ನಿರ್ವಹಣೆ ಕೃತಿಯು ದ್ವಿತೀಯ ಮುದ್ರಣವಾಗಿ ಹೊರಬರುತ್ತಿದ್ದು ಎಲ್ಲ ರೈತರು, ಬೋಧಕರು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳಿಗೆ ಸದುಪಯೋಗವಾಗುವುದೆಂದು ಆಶಿಸಲಾಗಿದೆ.

ಡಾ. ಉಷಾಕಿರಣ್‌
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕನ್ನಡ ಅಧ್ಯಯನ ವಿಭಾಗ
ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ, ಬೆಂಗಳೂರು-೨೪