ಈ ತಾತ್ವಿಕ ಹಿನ್ನೆಲೆಯಲ್ಲಿ ಜಾನಪದರ ನೀರಿನ ನಂಬಿಕೆಗಳನ್ನು ಅಧ್ಯಯನ ಮಾಡಲು ಪ್ರಯತ್ನಿಸಲಾಗಿದೆ. ನೀರು ಮತ್ತು ಮನುಷ್ಯನ ಸಂಬಂಧ ಮನುಕುಲದ ಚರಿತ್ರೆಯೊಂದಿಗೆ ಆರಂಭಗೊಂಡಿದೆ. ಮನುಷ್ಯನ ಚರಿತ್ರೆ ಅಂದರೆ ಪಂಚಭೂತಗಳಾದ ನೆಲ, ನೀರು, ಗಾಳಿ, ಬೆಂಕಿ ಮತ್ತು ಆಕಾಶಗಳ ಜೊತೆ ಮನುಷ್ಯ ನಡೆಸುತ್ತಾ ಬಂದ ನಿರಂತರ ಹೋರಾಟದ ಕತೆಯೇ ಆಗಿದೆ. ಕುತೂಹಲ, ಅನ್ವೇಷಣೆ ಮತ್ತು ಆಕ್ರಮಣ ಮನುಷ್ಯನ ಮೂಲ ಪ್ರವೃತ್ತಿಗಳ ಮೇಲೆ ದಾಳಿ ಮಾಡುತ್ತಿತ್ತು. ಪ್ರಕೃತಿಯ ಈ ಆಹ್ವಾನವೇ ಇಂದು ನಮ್ಮ ಚರಿತ್ರೆ. ಪಂಚಧಾತುಗಳಲ್ಲಿ ನೀರಿಗಿರುವ ಸುರಿಯುವ, ಹರಿಯುವ, ಪ್ರತಿಫಲಿಸುವ ವಿಲಾಸ ಶಕ್ತಿ ಬೇರಾವ ವಸ್ತುವಿಗೂ ಇಲ್ಲ. ನೀರಿನ ಈ ವಿಶಿಷ್ಟ ಗುಣವೇ ಆದಿ ಮಾನವನನ್ನು ಆಕರ್ಷಿಸಿರಬೇಕು. ಬೇಟೆಯಿಂದ ಹಸಿವು ಇಂಗಿಸಿಕೊಳ್ಳುತ್ತಿದ್ದ ಮಾನವ ನೆಲದ ಉಪಭೋಗ ಕಂಡುಕೊಂಡಿದ್ದು, ಕೃಷಿಕನಾಗಿದ್ದು, ಒಂದು ಕಡೆ ನೆಲೆನಿಂತದ್ದು ಇವೆಲ್ಲವು ನೀರಿನ ಉಪಭೋಗದಿಂದ ದಕ್ಕಿದ್ದು. ಪ್ರಪಂಚದ ಎಲ್ಲಾ ನಾಗರಿಕತೆಗಳು ಆರಂಭಗೊಂಡಿರುವುದು ನದಿಯ ದಂಡೆಗಳಿಂದ ಎಂಬ ಸಂಗತಿಗೆ ಸಾಕಷ್ಟು ಆಧಾರಗಳು ಇವೆ. ಪ್ರತಿಯೊಂದು ಪ್ರಕೃತಿಯ ನಿಗೂಢ ರಹಸ್ಯಗಳನ್ನು ಭೇದಿಸುವ ಹಠ ಮನುಷ್ಯನಲ್ಲಿ ಹುಟ್ಟಿಕೊಂಡಿದ್ದೇ ಮುಂದೆ ಸಹಸ್ರಾರು ವರ್ಷಗಳಲ್ಲಿ ಹಳ್ಳಿ, ಪಟ್ಟಣಗಳ ನಾಗರಿಕತೆಗಳು ಬೆಳೆದು ಇಂದು ವಿಜ್ಞಾನಯುಗದಲ್ಲಿ ಬಂದು ನಿಂತಿವೆ. ಈ ಎಲ್ಲಾ ಚಟುವಟಿಕೆಗಳ ಹಿಂದೆ ನೀರು ಮುಖ್ಯ ಪ್ರೇರಣೆಯಾಗಿರುವುದನ್ನು ನಾವು ಕಾಣುತ್ತೇವೆ. ಮನುಷ್ಯ ಮುಖಾಮುಖಿಯಾದ ಮೊದಲ ನಿಸರ್ಗದ ಶಕ್ತಿ ನೀರೇ ಆಗಿದೆ.

ನಂಬಿಕೆ ಒಂದು ಸಂಸ್ಕೃತಿಯನ್ನು ರೂಪಿಸುವ ಅನೇಕ ಅಂಶಗಳಲ್ಲಿ ಒಂದಾಗಿದೆ. ನಂಬಿಕೆಗಳನ್ನು ವೈಜ್ಞಾನಿಕ ಅಥವಾ ಇತರ ಸಮಾಜಶಾಸ್ತ್ರಗಳ ನೆಲೆಯಲ್ಲಿ ಇಟ್ಟು ಚರ್ಚಿಸುವುದಕ್ಕಿಂತ ನಂಬಿಕೆಯನ್ನು ಒಂದು ಸಂಸ್ಕೃತಿಯ ಸಂದರ್ಭದಲ್ಲಿ ಇಟ್ಟು ವಿವರಿಸಿಕೊಳ್ಳುವುದು ಸೂಕ್ತ.

ಜಾನಪದರಲ್ಲಿ ನೀರು ಜೀವನ ಪ್ರತಿಮೆಯಾಗಿ, ಸಮೃದ್ಧಿ ಸಂಕೇತವಾಗಿಯೂ, ಬಳಕೆಯಾಗುತ್ತಿದೆ. ಹುಟ್ಟಿನಿಂದ ಸಾಯುವವರೆಗಿನ ಪ್ರತಿಯೊಂದು ಚಟುವಟಿಕೆಯೂ ಒಂದಲ್ಲಾ ಒಂದು ಬಗೆಯಲ್ಲಿ ನೀರನ್ನು ಒಳಗೊಂಡೇ ಇದೆ. ಕೃಷಿಗೆ ನೀರೇ ಪ್ರಾಣಾಧಾರವಾದರೆ, ಜನಪದರ ಎಲ್ಲಾ ಆಚರಣೆಗಳು, ಶಾಸ್ತ್ರಗಳು, ಸಂಪ್ರದಾಯಗಳು, ವೈದ್ಯಕೀಯ ಉಪಚಾರ, ನೀರನ್ನು ಕೇಂದ್ರವಾಗಿ ಒಳಗೊಂಡಿವೆ ಎನ್ನುವುದು ಜನಪದರಲ್ಲಿ ನೀರಿನ ಮಹತ್ವವನ್ನು ತೋರುತ್ತದೆ.

ಜಾನಪದರಲ್ಲಿ ನೀರಿನ ನಂಬಿಕೆಗಳನ್ನು ಕುರಿತ ಈ ಲೇಖನವನ್ನು ಸಿದ್ಧಮಾಡಲು ಕನ್ನಡದಲ್ಲಿ ಈಗಾಗಲೇ ಪ್ರಕಟವಾಗಿರುವ ಶ್ರೀ ಡಿ. ಕೆ. ರಾಜೇಂದ್ರ, ಡಾ. ಮಲ್ಲಿಕಾರ್ಜುನ ಲಠ್ಠೆ, ಜಿ.ವಿ. ದಾಸೇಗೌಡ, ಶ್ರೀ ಎನ್. ಎಸ್. ತಿಮ್ಮೇಗೌಡ ಅವರ ಸಂಗ್ರಹಗಳಿಂದ ಕೆಲವು ನಂಬಿಕೆಗಳನ್ನು ಆರಿಸಿಕೊಂಡಿದ್ದೇನೆ. ಈ ವಿದ್ವಾಂಸರು ಯಾರೂ, ನಂಬಿಕೆಗಳನ್ನು ನೀರಿನ ಆಧಾರದ ಮೇಲೆ ಅಗಲಿ ಅಥವಾ ಭೂಮಿಯ ಆಧಾರದ ಮೇಲಾಗಲಿ ವರ್ಗೀಕರಿಸಿಲ್ಲ ಎನ್ನುವ ವಿಷಯ ಅಚ್ಚರಿ ಹುಟ್ಟಿಸುತ್ತದೆ. ಮೇಲೆ ಉಲ್ಲೇಖಿಸಿದ ಸಂಗ್ರಹಗಳಿಂದ ಎತ್ತಿಕೊಂಡ ನಂಬಿಕೆಗಳ ಜೊತೆ ನಾನು ಕೆಲವು ನಂಬಿಕೆಗಳನ್ನು ಸಂಗ್ರಹಿಸಿದ್ದೇನೆ. ನೀರಿಗೆ ಸಂಬಂಧಪಟ್ಟಂತೆ ಇನ್ನೂ ಅಸಂಖ್ಯಾತ ನಂಬಿಕೆಗಳು ಜನಪದರಲ್ಲಿ ಇವೆ. ಅವೆಲ್ಲವನ್ನೂ ಕಲೆ ಹಾಕಿ ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಈ ಲೇಖನವನ್ನು ತಯಾರಿಸಲು ಸುಮಾರು ೧೫೦ಕ್ಕಿಂತಲೂ ಹೆಚ್ಚು ನಂಬಿಕೆಗಳನ್ನು ಅಭ್ಯಾಸ ಮಾಡಿದ್ದೇನೆ. ನಾನು ೨೦೦ಕ್ಕೂ ಹೆಚ್ಚಿನ ನಂಬಿಕೆಗಳನ್ನು ಸಂಗ್ರಹಿಸಿದ್ದರೂ ರೂಪ ಮತ್ತು ಅರ್ಥ ಸಾಮ್ಯತೆಗಳನ್ನು ಗಮನಿಸಿ, ೫೦ ಕ್ಕೂ ಹೆಚ್ಚಿನ ನಂಬಿಕೆಗಳನ್ನು ಕೈಬಿಟ್ಟಿದ್ದೇನೆ. ಉಳಿದ ನಂಬಿಕೆಗಳಲ್ಲಿ ನೀರು ಬಳಕೆಯಾಗುವ ಉದ್ದೇಶ ಮತ್ತು ಸಂದರ್ಭಗಳನ್ನು ನೀರಿನ ಗುಣ ಧರ್ಮ, ಕ್ರಿಯೆಗಳನ್ನು ಆಧಾರವಾಗಿಟ್ಟುಕೊಂಡು ನೀರು ಯಾವ ರೂಪಗಳಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

೧. ಗಂಗೆ
೨. ಮಳೆ
೩. ನದಿ
೪. ತೀರ್ಥ
೫. ನೀರು

ಕೆಲ ಉದಾಹರಣೆಗಳ ಮೂಲಕ ಈ ನೀರಿನ ಜನಪದರ ಪರಿಕಲ್ಪನೆಗಳನ್ನು ಚರ್ಚಿಸಬಹುದು.

ಜನಪದರಲ್ಲಿ ಪಂಚಭೂತಗಳು ?

ನಮ್ಮ ಜನಪದ ಸಂಸ್ಕೃತಿಯಲ್ಲಿ ಜೀವನ ದರ್ಶನಗಳಲ್ಲಿ, ಆಚಾರ ವಿಚಾರಗಳಲ್ಲಾಗಲಿ ಪಂಚಭೂತಗಳ ಕಲ್ಪನೆ ಇಲ್ಲವೆಂದು ಹೇಳಬಹುದು. ಇದಕ್ಕೆ ಕಾರಣ ಜನಪದರು ಮಾತೃಪ್ರಧಾನ ಕುಟುಂಬ ಪರಂಪರೆಗೆ ಸೇರಿದವರು. ಈ ಸಂಪ್ರದಾಯದಲ್ಲಿ ಹೆಣ್ಣು ಅತ್ಯಂತಿಕ ಶಕ್ತಿ, ಸೃಷ್ಟಿಯು ಆಕೆಯ ಅಧೀನವೆಂದು ಇವರು ನಂಬುತ್ತಾರೆ. ಇವರ ಕಲ್ಪನೆಯಲ್ಲಿ ದೇವರೆಂದರೆ ಹೆಣ್ಣು. ಜೀವಸೃಷ್ಟಿಯ ಸಾದೃಶ್ಯದ ಕಾರಣ ಪ್ರಕೃತಿ ಕೂಡ ಇವರಿಗೆ ಹೆಣ್ಣೆ. ಆದ್ದರಿಂದಲೇ ಫಲಕೊಡುವ ನೆಲ ನೆಲತಾಯಿ, ಭೂಮಿತಾಯಿ ಆಗಿದ್ದಾಳೆ. ನೀರು ಗಂಗೆಯಾಗಿದ್ದಾಳೆ. ಗಾಳಿ ಗಾಳಿಯವ್ವ, ಗಾಳಿಮಾರಿಯಾಗಿ ಕಾಣಿಸಿಕೊಳ್ಳುತ್ತದೆ. ಇವರ ಗಂಗೆಯ ಆರಾಧಕರು. ಆದರೆ ಬರೀ ನಂಬಿಕೆಗಳಲ್ಲಿ ಅಲ್ಲದೆ ಜಾನಪದದ ಯಾವುದೇ ಪ್ರಕಾರದಲ್ಲೂ ಅಗ್ನಿ ಮತ್ತು ಆಕಾಶವನ್ನು ಹೆಣ್ಣಿನ ರೂಪದಲ್ಲಿ ಚಿತ್ರಿಸಿರುವುದನ್ನು ನಾವು ಕಾಣುವುದಿಲ್ಲ. ಪಂಚಭೂತಗಳ ಕಲ್ಪನೆ ವೈದಿಕ ಪರಂಪರೆಯದು. ಪುರುಷ ಪ್ರಧಾನ ಸಂಸ್ಕೃತಿ ಮುಖ್ಯ ಲಕ್ಷಣಗಳಲ್ಲಿ ಪಂಚ ಭೂತ ಪರಿಕಲ್ಪನೆಯೂ ಒಂದು. ಇವರು ಅಗ್ನಿ ಆರಾಧಕರು.

ಜನಪದ ನಂಬಿಕೆಗಳಲ್ಲಿ ಆಕಾಶ ಕುರಿತ ಕಲ್ಪನೆಗಳೇ ಇಲ್ಲ. ನೀರು ಬೆಂಕಿ ಪರಸ್ಪರ ವಿರುದ್ಧ ಸ್ಥಿತಿಗಳು. ಒಂದು ಇದ್ದ ಕಡೆ ಮತ್ತೊಂದು ಇರಲು ಸಾಧ್ಯವಿಲ್ಲ. ನೀರಿಗೆ ನೆಲದತ್ತ ತುಡಿತ-ಬೆಂಕಿಗೆ ಆಕಾಶದತ್ತ ತುಡಿತ ನೀರು ಮತ್ತು ಬೆಂಕಿಯ ಕುರಿತ ಕೆಲ ಉದಾಹರಣೆಗಳನ್ನು ನೋಡಬಹುದು.

೧. ಬೆಂಕಿ ನೀರು ಕನಸಿನಲ್ಲಿ ಕಾಣಿಸಿಕೊಳ್ಳಬಾರದು.
೨. ಬೆಂಕಿ ಮತ್ತು ನೀರು ಒಬ್ಬನೇ ತೆಗೆದುಕೊಂಡು ಹೋಗಬಾರದು.
೩. ಮಳೆ ಬಿಸಿಲು ಒಟ್ಟಿಗೆ ಬಂದರೆ ನರಿಗೂ ಕಾಗೆಗೂ ಮದುವೆ.
೪. ಶುಭ ಕಾರ್ಯಕ್ಕೆ ಅಥವಾ ಪ್ರಯಾಣಕ್ಕೆ ಹೊರಡುವಾಗ ಬೆಂಕಿ ಕಾಣಿಸಿಕೊಳ್ಳಬಾರದು.
೫. ನೆರೆ ಮನೆಗೆ ಬೆಂಕಿ ಕೊಡಬಾರದು.

ಜನಪದರಲ್ಲಿ ನೀರು ಮತ್ತು ಬೆಂಕಿ ಎರಡೂ ವಿರುದ್ಧ ಸಂಕೇತಗಳು. ನೀರು ಸೃಷ್ಟಿಯ, ಸುಖದ ಒಳ್ಳೆಯ ಶಕುನವಾದರೆ, ಬೆಂಕಿ ವಿನಾಶದ, ಕೆಡುಕಿನ ಚಿಹ್ನೆ. ಇವು ಪರಸ್ಪರ ದೂರವಿದ್ದರೆ ಕ್ಷೇಮ. ನೀರು ಬೆಂಕಿ ವೈರತ್ವವನ್ನು ವಿವರಿಸಲು ಬಳೆಸುವ ರೂಪಗಳು. ಕನಸಿನಲ್ಲಿಯೂ ಇವುಗಳ ಸಹಬಾಳ್ವೆಯನ್ನು ಜನಪದರು ಕಲ್ಪಿಸಲಾರರು. ನೀರು ಬೆಂಕಿಗಳು ವಿಶ್ವವನ್ನು ವಿವರಿಸುವ ಎರಡು ತತ್ವಗಳಾಗಿವೆ. ಈ ಜಗಳವನ್ನು ಆರ್ಯ (ಅಗ್ನಿ) ದ್ರಾವಿಡ (ನೀರು) ಸಂಘರ್ಷಗಳಲ್ಲಿ ಚರ್ಚಿಸಲಾಗಿದೆ. ಈ ದೃಷ್ಟಿಯಿಂದ ಗಮನಿಸಿದಾಗ ಮೇಲಿನ ನಂಬಿಕೆಗಳಲ್ಲಿ ಧ್ವನಿಸುವ ಆಶಯ ಕೇವಲ ವಾಚ್ಯದ ನೆಲೆಗೆ ನಿಲ್ಲದೇ ಮತ್ತೆ ಹೆಚ್ಚಿನದೇನೋ ಅಡಗಿರುವ ಹಾಗೆ ತೋರುತ್ತಿಲ್ಲವೆ? ಉದಾ : ಮಳೆ ಬಿಸಿಲುಗಳು ಒಟ್ಟಿಗೆ ಬರುವುದನ್ನು ನರಿ ಕಾಗೆಗಳ ಮದುವೆಗೆ ಹೋಲಿಸಿರುವ ರೂಪಕವನ್ನೇ ನೋಡಬಹುದು. ನರಿ ನೆಲದಲ್ಲಿ (ಇಹ) ಬದುಕುವ ಪ್ರಾಣಿ, ಕಾಗೆ ಆಕಾಶದಲ್ಲಿ ಹಾರಾಡುವ ಗಗನಗಾಮಿ (ಪರ)ಪಕ್ಷಿ ಇವುಗಳ ಮದುವೆ ಅಸಂಭವ. ಈ ವಿಷಮ ಬೆಸುಗೆಯನ್ನು ಹೇಳುವ ನಂಬಿಕೆಯನ್ನು ಎರಡು ಸಂಸ್ಕೃತಿಗಳ ಸಂಕೇತಗಳಾಗಿ ಇಟ್ಟು ನೋಡಲು ಸಾಧ್ಯವಿಲ್ಲವೆ?

ನೀರು ಜನಪದರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯವಾದ ಮಾದರಿಗಳನ್ನು ನೋಡೋಣ.

ಗಂಗೆಬಲಿ ಅತಿಕ್ರಮಣಪ್ರತಿಭಟನೆ.

ಜನಪದರ ಸ್ಮೃತಿಯಲ್ಲಿ ಗಂಗೆ ಕೇವಲ ನೀರನ್ನು ಸಂಕೇತಿಸುವ ಜಲದೇವತೆಯಲ್ಲ. ಈ ಇಡೀ ನಿಸರ್ಗದ ಪ್ರತೀಕ. ಮೇಲಾಗಿ ನೀರು ಸ್ತ್ರೀರೂಪಿ. ಕೃಷಿಗೆ ಸಂಬಂಧಿಸಿದ ಅಸಂಖ್ಯ ಜನಪದ ದೇವತೆಗಳಲ್ಲಿ ಹೆಚ್ಚಿನವರು ಹೆಣ್ಣುಗಳೇ. ಈ ಎಲ್ಲಾ ದೇವರುಗಳ ಆದಿದೇವತೆ ಗಂಗೆ.

ಶಿಷ್ಟ ಪರಂಪರೆ ಮತ್ತು ದರ್ಶನಗಳಲ್ಲೂ ನೀರು ಹೆಣ್ಣೇ. ಗಂಗೆ ಜಲದೇವತೆಯ ಹೆಸರು. ಆದರೆ ಆಕೆ ಪುರಷಶಕ್ತಿಯಿಂದ ನಿಯಂತ್ರಿಸಲ್ಪಡುವ, ಸ್ವತಂತ್ರ ಕ್ರಿಯೆ ಇಲ್ಲದ ಪರಾಧೀನೆ. ಆಕೆ ಸೃಷ್ಟಿಗೆ ಪೂರಕಳೇ ಹೊರತು ಸೃಷ್ಟಿಕರ್ತಳು ಅಲ್ಲ.

ಜನಪದರಲ್ಲಿ ಗಂಗೆ ಸೃಷ್ಟಿಯ ಮೂಲ ದೇವದ ಅತ್ಯಂತಿಕೆಯನ್ನು ವಿವರಿಸುವುದು ನೀರಿನ ಮೂಲಕ. ಯಾವುದೇ ದೇವರನ್ನು ಪೂಜಿಸಬೇಕಾದರು, ಕೊಡದಲ್ಲಿ ನೀರು ತುಂಬಿಟ್ಟು ಅದಕ್ಕೆ ಹರಿಕೆ ದೇವರ ಹೆಸರಿನಲ್ಲಿ ಪೂಜಿಸಿದರೆ ಅದು ಆ ದೇವರಿಗೆ ಸಲ್ಲುತ್ತದೆ ಎಂಬ ನಂಬಿಕೆ ಇಂದಿಗೂ ಗ್ರಾಮಾಂತರ ಪ್ರದೇಶದಲ್ಲಿ ಆಚರಣೆಯಲ್ಲಿರುವುದನ್ನು ಕಾಣಬಹುದು. ನೀರಿನ ಆದಿಮ ಶಕ್ತಿಗಳಾದ ಜೀವಸೃಷ್ಟಿ ಮತ್ತು ನಾಶ, ಗಂಗೆಯ ಎರಡು ಮುಖಗಳು. ಈ ಪ್ರಚಂಡ ಶಕ್ತಿ ಯಾರ ಆಧೀನತೆಗೂ ಒಳಪಡದು. ಮಳೆ, ಪ್ರವಾಹ ಮತ್ತು ಜೀವಸೃಷ್ಟಿಯ ಪವಾಡ ಈಕೆ ಸಾಮರ್ಥ್ಯವನ್ನು ನಿರಂತರವಾಗಿ ಸಾಬೀತುಪಡೆಸುತ್ತಿರುವ ನಿದರ್ಶನಗಳು. ಜನರ ನೆನೆಪಿನಲ್ಲಿ ಈಕೆಯ ಕಾಯುವ ಕಾರುಣ್ಯ ಮತ್ತು ಅಷ್ಟೇ ನಿರ್ಲಿಪ್ತವಾಗಿ ಕೊಲ್ಲುವ ಕಾಠಿಣ್ಯವನ್ನು ಮೈಯ ವೆತ್ತವಳು. ಗಂಗೆಯ ಜೊತೆಗಿನ ಮನುಷ್ಯನ ಅನುಸಂಧಾನದ ಕ್ರಮವನ್ನು ಪ್ರಬಂಧದ ಆರಂಭದಲ್ಲಿ ದಾಖಲಿಸಿದ್ದೇನೆ. ಜನಪದರ ಗಂಗಾಚರಣೆಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಕ್ರಿಯೆ ಬಲಿ. ಯಾವುದೇ ಆಚರಣೆಯ ಹಿಂದೆ ಅತ್ಯಂತ ಪ್ರಬಲ ನಂಬಿಕೆಯೊಂದು ಕೆಲಸಮಾಡುತ್ತಿರುತ್ತದೆ. ಈ ನೆಲೆಯಲ್ಲಿ ಬಲಿಯನ್ನು ಕುರಿತು ಆಲೋಚಿಸಿದರೆ ತೆರೆದುಕೊಳ್ಳುವ ಸಂಗತಿಗಳು ಬೆರಗು ಹುಟ್ಟಿಸುತ್ತವೆ.

ಬಲಿ ಆಚರಣೆಯನ್ನು ನೀರು ಮತ್ತು ಮನುಷ್ಯನ ಮೂಲ ಪ್ರವೃತ್ತಿಗಳು ಸಂದರ್ಭದಲ್ಲಿ ಇಟ್ಟು ಚರ್ಚಿಸಬೇಕು. ಕನ್ನಡದ ಪ್ರಸಿದ್ಧ ಜಾನಪದ ಕಥನವಾದ ಕೆರೆಗೆಹಾರದ ಪ್ರಕರಣವನ್ನು ಉದಾಹರಿಸಬಹುದು. ಗಂಗೆ ಕ್ಷುದ್ರ ದೇವತೆಯಾದ್ದರಿಂದ ಪ್ರಾಣ ಬಲಿಕೊಡುವ ಮೂಲಕ ಆಕೆಯನ್ನು ತೃಪ್ತಗೊಳಿಸಿದರೆ ತಮ್ಮ ಕುತ್ತು ನಿವಾರಣೆ ಆಗುತ್ತೆ, ಇದು ತನ್ನ ಅಸ್ತಿತ್ವ ಕಾಪಾಡಿಕೊಳ್ಳುವ ರಕ್ಷಣಾತ್ಮಕ ಆಚರಣೆಯ ಮಾದರಿ ಎಂದು ಜನಪದ ವಿದ್ವಾಂಸರು ಹೇಳುವುದನ್ನು ಕೇಳಿದ್ದೇನೆ.

ಬಲಿಯ ಪರಿಕಲ್ಪನೆಯೂ ಕೇವಲ ಕುತ್ತು ನಿವಾರಿಸಿಕೊಳ್ಳುವ ನೆಲೆಗೆ ನಿಲ್ಲದೆ ಇದರ ಒಳರಚನೆಯಲ್ಲಿ ಮತ್ತೊಂದೇನೋ ಮಹತ್ವದ ಸಂಘರ್ಷವೊಂದು ಹುದುಗಿರುವ ಸಾಧ್ಯತೆಯನ್ನು ಧ್ವನಿಸುತ್ತಿದೆ. ಈ ದಿಕ್ಕಿನಲ್ಲಿ ಬಲಿಯ ಹಿಂದಿನ ನಂಬಿಕಯನ್ನು ಶೋಧಿಸಿದಾಗ ನನಗೆ ಕಂಡು ಬಂದ ವಿಸ್ಮಯವನ್ನು ಮುಂದೆ ವಿವರಿಸುತ್ತೇನೆ.

ನೀರು, ನೀರು ಪ್ರತಿನಿಧಿಸುವ ಪ್ರಕೃತಿ, ಇತರ ಆದಿಭೌತಿಕ ಶಕ್ತಿಗಳಿಗೆ ತನ್ನದೇ ಆದ ಸಹಜ ಪ್ರವೃತ್ತಿಯ ಪಾತಳಿಯೊಂದಿದೆ. ಈ ಪಾತಳಿಯನ್ನು ಕವಿ ಬೇಂದ್ರೆ ಅವರು ಸಹಜ ಯೋಗವೆಂದು ತಮ್ಮ ಒಂದು ಕವನದಲ್ಲಿ ಗುರುತಿಸಿದ್ದಾರೆ. ಅಲ್ಲದೆ ಈ ಪಾತಳಿಯು ಮನುಷ್ಯ ಮೊದಲಗೊಂಡು ಸಸ್ಯ, ಪ್ರಾಣಿ, ಪರಿಸರಗಳ ಪೋಷಣೆಗೆ, ಜೀವ ನಿರ್ವಹಣೆಗೆ ಪೂರಕವಾಗಿಯೇ ರಚನೆಗೊಂಡಿದೆ.

ಈ ಪ್ರಕೃತಿಯ ಸಹಜಯೋಗದ ಪಾತಳಿಗೆ ಮನುಷ್ಯನ ಅತಿಕ್ರಮಣ ಪ್ರವೇಶವನ್ನು ನಿಸರ್ಗ ಪ್ರತಿಭಟಿಸಿದ ಸೂಕ್ಷ್ಮತೆಯನ್ನು ಬಲಿಯ ನಂಬಿಕೆ ಒಳಗೊಳ್ಳುತ್ತದೆ. ಮನುಷ್ಯನ ಆದಿ ಆಕಾಂಕ್ಷೆಯು ನಿಸರ್ಗವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿದೆ. ಆದರೆ ಇದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು ಆಗಿದೆ. ತನ್ನ ಪಾವಿತ್ರ್ಯಭಂಗ ಬಂದಾಗಲೆಲ್ಲ ನೀರು, ನೆಲ, ನಿಸರ್ಗ ತಮ್ಮ ಪ್ರಕೋಪಗಳಿಂದ ಮನುಷ್ಯನ ಅಹಂಕಾರವನ್ನು ಮುರಿದು ಹಾಕಿದೆ. ಕಾಯುವ ಕಾರುಣ್ಯವೇ ಕೊಲ್ಲುವ ಕ್ರೌರ್ಯವನ್ನು ಪ್ರದರ್ಶಿಸುತ್ತದೆ. ನದಿಯ ಸಹಜ ಪಾತಳಿಯನ್ನು ಭಂಗಪಡಿಸಿದ್ದರಿಂದಲೇ ಪ್ರಪಂಚದ ನದಿಯ ದಂಡೆಗಳ ನಾಗರಿಕತೆಗಳು ನಾಶವಾಗಿ ಹೋಗಿರುವ ಸಂಗತಿ ಲೋಕ ಪ್ರಸಿದ್ಧಿಯಾಗಿದೆ. ಕೆರೆ, ಬಾವಿ, ಒಡ್ಡುಗಳ ಕಟ್ಟುವಾಗ ಹುಟ್ಟಿಕೊಂಡಿರುವ ಕತೆಗಳಲ್ಲಿಯೇ ಸಾಕಷ್ಟು ಉದಾಹರಣೆಗಳು ಸಿಕ್ಕುತ್ತವೆ. ಆದಿಮಶಕ್ತಿಯನ್ನು ಕೆಣಕಿ ಎದುರು ಹಾಕಿಕೊಂಡ ಮನುಷ್ಯ ಯಾವುದನ್ನು ತನ್ನ ಆಕ್ರಮಣದಿಂದ ಭಂಗಗೊಳಿಸಿರುತ್ತಾನೋ ಅದರ ಪ್ರಾಯಶ್ಚಿತ್ತ ಮಾಡಿಕೊಳ್ಳುವ, ಪ್ರಕೃತಿಯ ಪ್ರಭುತ್ವವನ್ನು ಅಂಗೀಕರಿಸುವ ಸೂಚನೆಯಾಗಿ ಬಲಿಯ ಆಚರಣೆಯನ್ನು ನೋಡಬಹುದು. ಪ್ರಕೃತಿಯಲ್ಲಿ ಪ್ರಾಣಕ್ಕೆ ಪ್ರಾಣವೇ ಬೆಲೆ ಎಂಬ ನಿಯಮದಂತೆ ಗಂಗೆಪೂಜೆಯ ಸಂದರ್ಭದಲ್ಲಿ ನೀರಿಗೆ ಬಲಿಯಾಗಿ ಮತ್ತೊಂದು ನೀರಿನ ರೂಪವೇ ಆಗಿರುವ ರಕ್ತವನ್ನು ಸಂಕೇತಿಯಾಗಿ ತರ್ಪಣ ಬಿಡುತ್ತಾರೆ. ಇದು ಒಂದು ಹೊಳಹು.

ಆದರೆ ಇದರಲ್ಲಿ ಇನ್ನೂ ಒಂದು ಪ್ರಶ್ನೆ ಅಡಗಿದೆ. ಆ ಪ್ರಶ್ನೆ ಗಂಗೆಗೆ ಕೊಡುವ ಬಲಿಹಾರಗಳಲ್ಲಿ ಹೆಣ್ಣನ್ನು ಮಾತ್ರ ಏಕೆ ಬಲಿ ಕೊಡುತ್ತಾರೆ? ಗಂಗಾದೇವಿಯೂ ಹೆಣ್ಣಾಗಿರುವುದರಿಂದ ಹೆಣ್ಣು ಹೆಣ್ಣಿನ ಬಲಿಯನ್ನು ಹೇಗೆ ಆಪೇಕ್ಷಿಸುತ್ತಾಳೆ ಎನ್ನುವ ಅನುಮಾನ ಈ ಪ್ರಶ್ನೆಯಲ್ಲಿರುವ ತಾತ್ವಿಕ ವಿರೋಧವಾಗಿದೆ.

ಈ ಸಮಸ್ಯೆಯನ್ನು ಬಿಡಿಸಿಕೊಳ್ಳುವ ಮೊದಲು ನೀರಿಗೆ ಹೆಣ್ಣನ್ನು ಬಲಿ ಅಥವಾ ಹಾರ ಕೊಟ್ಟಿರುವ ಅತಿಹೆಚ್ಚಿನ ಪ್ರಕರಣಗಳು ಕೆರೆ ನಿರ್ಮಾಣಕ್ಕೆ ಸಂಬಂಧಿಸಿದವು ಆಗಿರುವುದನ್ನು ಗಮನಿಸಬಹುದು. ಒಂದು ಆದಿಮಶಕ್ತಿಯನ್ನು ಎದುರಿಸಲು ಅಥವಾ ಅದರ ಮೂಲ ಪಾತಳಿಯಿಂದ ಬದಲಿಸಲು ಮತ್ತೊಂದು ಆದಿಮ ಶಕ್ತಿಯಿಂದ ಮಾತ್ರ ಸಾಧ್ಯ ಎನ್ನುವ ನಂಬಿಕೆ ಹೆಣ್ಣಿನ ಬಲಗಳ ಹಿಂದೆ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ. ಇದಕ್ಕೆ ಈ ಪರಂಪರೆಯೇ ರೂಪಿಸಿರುವ ದರ್ಶನದಲ್ಲಿ ಕೂಡ ಉತ್ತರವಿದೆ. ಗಂಗೆ ನೀರು ಹೆಣ್ಣು ಶಕ್ತಿಯ ಸಮೀಕರಣವೂ ನೀರು ಮತ್ತು ಹೆಣ್ಣನ್ನು ಒಂದೇ ಮೂಲಶಕ್ತಿಯ ಎರಡು ರೂಪಗಳಾಗಿ ಚಿತ್ರಿಸುತ್ತಿದೆ. ಪ್ರಕೃತಿಯ ಎದರು ಪದೇಪದೇ ಮಣ್ಣು ಮುಕ್ಕುತ್ತಿದ್ದರೂ ಮನುಷ್ಯ ಪ್ರಕೃತಿಯನ್ನು ತನ್ನ ಆಧೀನಕ್ಕೆ ತೆಗೆದುಕೊಳ್ಳಬೇಕೆಂಬ ಪ್ರಯತ್ನದ ಮುಂದುವರಿಕೆಯಾಗಿ ಹೆಣ್ಣಿನ ಬಲಿ ಆಚರಣೆಯು ಕಂಡು ಬರುತ್ತದೆ. ಪ್ರಕೃತಿಯ ವಿರುದ್ಧ ಪ್ರಕೃತಿಯನ್ನು ಬಳಸುವ ತಂತ್ರಗಾರಿಕೆಯನ್ನು ಈ ಆಚರಣೆ ಧ್ವನಿಸುತ್ತದೆ. ಮತ್ತೊಂದು ಮುಖ್ಯ ಸಂಗತಿಯೆಂದರೆ ಹೆಣ್ಣನ್ನು ಕೊಲ್ಲದೆ ಜೀವಂತವಾಗಿ ಸಮಾಧಿ ಮಾಡುವುದನ್ನು ಕೆರೆ ಕಟ್ಟುಗಳ ಕುರಿತಾಗಿ ಇರುವ ಐತಿಹ್ಯಗಳಲ್ಲಿ ಜಾನಪದ ಕತೆಗಳಲ್ಲಿ ಉಲ್ಲೇಖವಾಗಿದೆ. ಹೆಣ್ಣನ್ನು ಹೀಗೆ ಕೊಲ್ಲದೆ ಕಟ್ಟಿನಲ್ಲಿ ಜೀವಂತವಾಗಿ ಸಮಾಧಿ ಮಾಡುವುದರ ಮೂಲಕ ಆ ಅಕ್ರಮ ತಡೆಯಲ್ಲಿ ಇನ್ನೊಂದು ಶಕ್ತಿಯನ್ನು ನೆಲೆಗೊಳಿಸುವ ಆಶಯ ಒಡೆದು ಕಾಣುತ್ತದೆ. ಇಂದಿಗೂ ಕೆಲವು ಕೆರೆಯ ಕೆಳಭಾಗದಲ್ಲಿ ಕಟ್ಟಿಗೆ ಹೊಂದಿಕೊಂಡಂತೆ ಶಕ್ತಿ ದೇವತೆಗಳನ್ನು, ಮಾಸ್ತಿಕಲ್ಲುಗಳನ್ನು ನಿಲ್ಲಿಸಿರುವುದನ್ನು ನಾನೇ ನೋಡಿದ್ದೇನೆ.

೧.       ಬಾವಿ ಹತ್ತಿರ ಹೋಗಬಾರದು, ಮನುಷ್ಯನ ಸೆಳೆದುಕೊಳ್ಳುತ್ತೆ.
೨.       ಕೆರೆ ಕಟ್ಟಡಕ್ಕೆ ಹೆಂಗಸಿನ ಬಲಿಕೊಡಬೇಕು.
೩.       ತುಂಬಿದ ಕೆರೆ ಕೂಗುತ್ತೆ

ಮುಂತಾದ ನೀರಿನ ಕುರಿತು ಜನಪದರಲ್ಲಿ ಸಿಗುವ ನಂಬಿಕೆಗಳೂ ಈ ವಿಚಾರದ ಅರಿವನ್ನು ಹೆಚ್ಚಿಸಿವೆ. ನನ್ನ ಆಲೋಚನೆಗಳನ್ನು ಪುಷ್ಟೀಕರಿಸಿವೆ.

ಮೂರುಸಾವಿರ ವಡ್ಡರ ಕರ್ಸಿ
ನಾಲ್ಕೂಸಾವಿರ ಕುಡುಗೋಲ ತರ್ಸಿ
ಕಲ್ಲು ಕಲ್ಲಿಗೂ ಕುರಿಯ ಕಡಿಸಯ್ಯೊ……!
ನಾ ನಿಲ್ಲುವಳಲ್ಲ…. ನಾ ನಿಲ್ಲುವಳಲ್ಲ.

ಮನುಷ್ಯನ ಈ ಎಲ್ಲಾ ಪ್ರಯತ್ನಗಳ ನಿಷ್ಫಲತೆಯನ್ನು ಸಾರುವ ಈ ಹಾಡಿನ ಸಾಲುಗಳ ಗಂಗೆಯ ಬಗೆಗಿನ ವಿಚಾರವನ್ನು ಮುಗಿಸುತ್ತೇನೆ.

ಮಳೆ = ಮಳೆರಾಯ

ಮಳೆ ನೀರಿನ ಪ್ರಾಕೃತಿಕ ರೂಪ. ನಿಜವಾದ ಅರ್ಥದಲ್ಲಿ ಮಳೆ, ನೀರಿನ ಮತ್ತೊಂದು ರೂಪವೇ ಆದರೂ ಇದಕ್ಕೆ ಜನಪದರ ಬದುಕಿನಲ್ಲಿ ಪ್ರತ್ಯೇಕವಾದ ಸ್ಥಾನವಿದೆ. ಮೋಡ ಕರಗಿ ನೆಲ ಸೇರುವ ಮುನ್ನ ಸುರಿವ ನೀರನ್ನು ಮಳೆ ಎಂದು ಕರೆಯುತ್ತಾರೆ. ನೆಲ ಸೇರಿದ ನಂತರ ಅದು ಬೇರೆಯದೇ ರೂಪವನ್ನು ಪಡೆಯುತ್ತದೆ. ಮಳೆ ಸಮೃದ್ಧಿಯ, ಫಲವಂತಿಕೆಯ ಸಂಕೇತ. (ಫರ್ಟಿಲಿಟಿ) ಗರ್ಭಕ್ಕೆ ಕಾರಣವಾಗುವ ವೀರ್ಯವನ್ನು ನೀರು ಅಂತ ಕರೆಯುವುದು ಜನಪದರಲ್ಲಿ ರೂಢಿಯಲ್ಲಿದೆ. ಇದೇ ಅರ್ಥದಲ್ಲಿ ಸ್ತ್ರೀ ಗರ್ಭಿಣಿಯಾಗಿದ್ದನ್ನು ಸೂಚಿಸಲು ‘ನೀರು ನಿಂತಿದೆ’ ‘ನೀರು ಹಾಕಿ ಕೊಂಡವಳೆ’ ಎನ್ನುವ ಪದ ಪ್ರಯೋಗಗಳನ್ನು ಕಾಣಬಹುದು. ಜನಪದರ ಜೀವನವು ಮಳೆಯೊಂದಿಗೆ ತಳಕು ಹಾಕಿಕೊಂಡಿದೆ. ಮಳೆಯಿಲ್ಲದೆ ಮನುಷ್ಯಪಟ್ಟಿರುವ ಪಾಡುಗಳನ್ನು ಜನಪದರ ಹಾಡು ಮತ್ತು ಆಚರಣೆಗಳಲ್ಲಿ ಕಾಣಬಹುದು. ಮುಖ್ಯವಾಗಿ ಬೇಸಾಯದ ಉಳಿವು ನಿಂತಿರುವುದೇ ಮಳೆಯಾಧಾರದ ಮೇಲೆ, ಸಕಾಲದಲ್ಲಿ ಮಳೆಯಾಗದೇ ಹೋದರೆ ಆಗುವ ಅನಾಹುತವನ್ನು ಅಲ್ಲೋಲ ಕಲ್ಲೋಲವಾಗುವ ಸ್ಥಿತಿಯನ್ನು ಸಾರಿರಾರು ಹಾಡುಗಳು ವರ್ಣಿಸುತ್ತವೆ. ಉದಾ: ಅಪ್ಪ ನೀನಿಲ್ಲದೆ ಬೆಪ್ಪಾದೊ ಈ ಭೂಮಿ, ಸಪ್ಪೆ ದಂಟಾದೋ ದನಕರ, ಮಳೆರಾಯ ಅಂಬರದ ಕರುಣೆಯೇ ದಯಮಾಡೋ, ಈ ಹಾಡುಗಳು ಮಳೆಗಾಗಿ ಅರ್ಚಿಸುವ ಆಚರಣೆಗಳ ಭಾಗವಾಗಿವೆ ಎನ್ನುವುದು ಕೂಡ ಕುತೂಹಲಕಾರಿ.

ಮಳೆಯ ಕುರಿತ ಕೇವಲ ಎರಡು ಬಗೆಯ ನಂಬಿಕೆಗಳನ್ನು ನೋಡಬಹುದು. ಒಂದು ಅನಾವೃಷ್ಟಿಯನ್ನು ಕೇಂದ್ರವಾಗಿ ಉಳ್ಳ ನಂಬಿಕೆಗಳು. ಎರಡು ಅತಿವೃಷ್ಟಿಯನ್ನು ಕೇಂದ್ರವಾಗಿವುಳ್ಳ ನಂಬಿಕೆಗಳು. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡು ನಾಶದ ನೆಲೆಗಳೇ. ಜನಪದರಲ್ಲಿ ಸಿಗುವ ನೀರಿಗೆ ಸಂಬಂಧಿಸಿದ ನಂಬಿಕೆಗಳು ಸಿಂಹಪಾಲು ಮಳೆಯ ಕುರಿತವು. ಸುಮಾರು ೧೦೦೦ಕ್ಕೂ ಹೆಚ್ಚಿನ ಮಳೆಯ ಆಚರಣೆಗಳು, ನಂಬಿಕೆಗಳು ಕೇವಲ ಕರ್ನಾಟಕದಲ್ಲಿ ಪ್ರಚಲಿತದಲ್ಲಿವೆ.

೧.       ಚಂದ್ರಮಂಡಲ ಹಾಕಿದರೆ ಮಳೆ ಬರುವುದಿಲ್ಲ.
೨.       ಕನಸಿನಲ್ಲಿ ಕುರಿಗಳ ಹಿಂಡು ಕಾಣಿಸಿದರೆ ಮಳೆ ಬರುತ್ತದೆ.
೩.       ಕಲ್ಲಡಿ ಕಪ್ಪೆಗಳು ಕೂಗಿದರೆ ಮಳೆ ಬರುತ್ತದೆ.
೪.       ದನಗಳು ಕತ್ತೆತ್ತಿ ಆಕಾಶವನ್ನು ಮೂಸಿದರೆ ಮಳೆ ಬರುತ್ತದೆ.
೫.       ಮಳೆರಾಯ್ನ ಮಾಡಿದರೆ ಮಳೆ ಬರುವುದೆಂಬ ನಂಬಿಕೆ.
೬.       ಸ್ವರಿವೆ ಮರಿ ಹಿಡಿಯುವುದು (ಕುರಿ ಅಥವಾ ಮೇಕೆಯನ್ನು ಆಕಾಶಕ್ಕೆ (ಮೋಡಗಳಿಗೆ) ಇಳೀ ತೆಗೆದು ಊರಿನ ಸರಹದ್ದನ್ನು ಮಳೆ ಹಾಡುಗಳನ್ನು ಹಾಡಿಕೊಂಡು ಪ್ರದಕ್ಷಿಣೆ ಬಂದು ಊರ ಬಾಗಿಲಲ್ಲಿ ಬಲಿ ಕೊಡಬೇಕು, ಆಗ ರಕ್ತ ನೆಲಕ್ಕೆ ಬೀಳುತ್ತಿದ್ದಂತೆ ಮಳೆ ಸುರಿಯುವುದು).

ಇಂಥ ಕೆಲವು ನಂಬಿಕೆಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವು ಆಚರಣೆಗಳು. ಮಳೆಯನ್ನು ಅಭಿನಯಿಸುವ, ಅನುಕರಿಸುವ, ಬಲಿ ನೀಡುವ ಉಗ್ರ ಆಚರಣೆಗಳು ಕಂಡುಬರುತ್ತವೆ. ಮಳೆಗಾಗಿ ಮಂತ್ರ ತಂತ್ರಗಳನ್ನು ಬಳಸುವುದು ರೂಢಿಯಲ್ಲಿದೆ. ಶಿಷ್ಟ ಪರಂಪರೆಯಲ್ಲೂ ಮಳೆಗಾಗಿ ನಡೆಸುವ ಪರ್ಜ್ಯನ್ನ ವ್ರತ ಮುಂತಾದ ವಿಧಿಗಳನ್ನು ನೇರವೇರಿಸುವುದು ಕಂಡು ಬರುತ್ತದೆ. ಇಂದು ಜನಪದರಲ್ಲಿ ಪ್ರಚಾರದಲ್ಲಿರುವ ಪುಣ್ಯಕತೆಗಳ ಪಠಣ (ವಿರಾಟಪರ್ವ ಓದುವುದು). ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೇರವೇರಿಸುವುದು ವೈದಿಕರ ಪ್ರಭಾವದಿಂದ ರೂಢಿಗೆ ಬಂದಿರುವ ಸಂಗತಿಗಳಾಗಿವೆ.

ಜನಪದ ಸಂಸ್ಕೃತಿಯು ದಾಖಲಿಸುವ ಮಳೆಯ ಪರಿಕಲ್ಪನೆಯಲ್ಲಿನ ದ್ವಂದ್ವ ಅಥವಾ ವಿಷಮ ನೆಲೆಯನ್ನು ಚರ್ಚಿಸುವುದರ ಮೂಲಕ ಒಂದು ಪ್ರಧಾನ ಸಂಸ್ಕೃತಿ ತನ್ನ ನೆರೆ ಸಂಸ್ಕೃತಿಯನ್ನು ತನ್ನ ಆಧೀನಕ್ಕೆ ಒಳಪಡಿಸಿಕೊಂಡಿರುವ ಸೂಕ್ಷ್ಮ ವಿಷಯವನ್ನು ತಾರ್ಕಿಕವಾಗಿ ವಿವರಿಸಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದೇನೆ. ಉದಾ : ಈ ಕೆಳಗಿನ ಎರಡು ಜಾನಪದ ಹಾಡುಗಳ ಒಂದೊಂದು ಚರಣವನ್ನು ಗಮನಿಸಿ.

ಮೋಡಾದ ಕಡೆಯಿಂದ, ಮಿಂಚಿನ ಸುಳಿಯಿಂದ
ಥಳ ಥಳ ಹೊಳೆಯುತ್ತ, ಬರುತ್ತಾಳೆ
ಗುಡುಗು ಗೂಡಾಗಿ ಸಿಡಿದಳೋ ಜಲಜಲ
ಗಂಗಮ್ಮ ತಾಯಿ ಬರುತ್ತಾಳೆ, ಧರೆಗೆ (ಮಾಯದಂತ ಮಳೆ ಬಂತಣ್ಣ)
ಅಂಬರದಲ್ಲಿ ಯಾಕೆ ನಿಂತೋ ಮಳಿರಾಯ……
ಅಪ್ಪ ನೀನಿಲ್ಲದೆ ಸೊಪ್ಪಾದೋ ಈ ಭೂಮಿ
ಸಪ್ಪೆ ದಂಟಾದೋ ದನಕರ ದೇವೇಂದ್ರರಾಯ
ಕಂಚಿನ ಹಣವಾಗಿ ಸುರಿಬಾರೋ (ಮಳೆರಾಯನಿಗೆ ಕರೆ)

ಭೂಮಿಯ ಮೇಲಿನ ನೀರನ್ನು ಹೆಣ್ಣೆಂದು ಶಕ್ತಿಯ ಪ್ರತಿರೂಪವೆಂದು ಒಪ್ಪಿಕೊಂಡಿರುವ ಜನಾಂಗವೊಂದರ ಸಂಸ್ಕೃತಿಯಲ್ಲಿ ಈ ಇಬ್ಬಗೆಯ ವಿಲಕ್ಷಣ ಹಾಗೂ ಅನ್ಯ ಸಂಸ್ಕೃತಿ ನಂಬಿಕೆಯನ್ನು ಆಚರಣೆಯಲ್ಲಿ ಇಟ್ಟುಕೊಂಡ ಸ್ಥಿತಿಯೊಂದು ಕಂಡು ಬಂದರೆ ಅದು ಆ ದೇಸಿಯ ಸಂಸ್ಕೃತಿಗೆ ಅಕ್ರಮ ಪ್ರವೇಶ ಪಡೆದ ಅನ್ಯ ಸಂಸ್ಕೃತಿಯೊಂದರ ಹೇರಲ್ಪಟ್ಟ ನೆಲೆಯನ್ನು ಒಳಗೊಂಡಿರುತ್ತದೆ. ಆರ್ಯ ಅಥವಾ ವೈದಿಕ ಪರಂಪರೆಯಲ್ಲಿ ಮಳೆಯ ದೇವರು ದೇವೇಂದ್ರ ಪುರುಷತ್ವಕ್ಕೆ ಸಂಕೇತನಾದವನು. ಆದ್ದರಿಂದಲೇ ಮಳೆ ಬೇಡುವಾಗ ಮಳೆರಾಯ, ಮಳೆರಾಜ, ದೇವೇಂದ್ರ, ಘನರಾಜ ಎಂದು ಪುರುಷವಾಚಕದಿಂದ ಸಂಬೋಧಿಸಿದ್ದಾರೆ. ಹಾಗೂ ಆಕಾಶ ದೇವೇಂದ್ರನ ಆವಾಸವಾದ್ದರಿಂದ ಆಕಾಶವೂ ಗಂಡೇ. ಈ ವಿಚಾರವನ್ನು ವ್ಯವಸ್ಥಿತವಾಗಿ ಪ್ರಸರಣ ಮಾಡುವ ಮೂಲಕ ತನ್ನ ನೆರೆ ಸಂಸ್ಕೃತಿಯ ಅನನ್ಯತೆಯನ್ನು ನಾಶಪಡಿಸಲು ಪ್ರಯತ್ನಿಸಿರುವ ಚಾರಿತ್ರಿಕ ಸಂಗತಿಯನ್ನು ಇದು ದಾಖಲಿಸುತ್ತದೆ. ಮಳೆ ಕೃಷಿಯ ಮೂಲ, ಕೃಷಿ ಸಂಸ್ಕೃತಿಯ ತಾಯಿಬೇರು. ಯಾವುದೇ ಸಂಸ್ಕೃತಿಯ ಮೂಲ ಪರಿಕಲ್ಪನೆಯನ್ನು, ಬದಲಿಸುವ ಮೂಲಕ, ಶ್ರೇಷ್ಠತೆಯನ್ನು ಹೇರುವುದರ ಮೂಲಕ, ಸ್ಥಳೀಯ ಸಂಸ್ಕೃತಿಯನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಸಾಧ್ಯ ಎನ್ನುವುದು ಇಂದಿನ ವಸಾಹತುಶಾಹಿಗಳ ನಂಬಿಕೆ. ಅಂದಿನ ವೈದಿಕರ ನಂಬಿಕೆಯೂ ಆ ನೆಲೆದೇ ಆಗಿರಬಹುದು ಎನ್ನುವುದಕ್ಕೆ ಹೆಣ್ಣಾಗಿದ್ದ ಮಳೆಯನ್ನು ಮಳೆರಾಜನನ್ನಾಗಿಸಿದ್ದು ಒಂದು ಉದಾಹರಣೆ ಮಾತ್ರ. ಬಹುಶಃ ವೈದಿಕರ ಪ್ರಭುತ್ವ ಮತ್ತು ಆಕ್ರಮಣ ಪ್ರವೃತ್ತಿಯ ಕಾರಣವಾಗಿ ಜನಪದರು ಆ ಪರ ಕಲ್ಪನೆಗಳನ್ನು ಒಪ್ಪಿಕೊಂಡಿರುವ ಹಾಗೆ ಕಾಣುತ್ತೆ. ಆದರೆ ಅದು ಸ್ವೀಕರಿಸಿದ್ದಲ್ಲ ಬಲವಂತದ ಏರಿಕೆ ಎನ್ನುವುದನ್ನು ಆ ಅಧೀನ ಪರಂಪರೆ ದಾಖಲಿಸಿರುತ್ತದೆ.

ನದಿ = ಜೀವನದಿ = ನಿರಂತರತೆ

ನದಿ ನೀರಿನ ಇನ್ನೊಂದು ಪ್ರಾಕೃತಿಕ ರೂಪ. ನದಿಯ ಗುಣ ಧರ್ಮ ಕ್ರಿಯೆಗಳಾದ ನಿರಂತರ ಚಲನೆ, ಸುಳಿಗಳ ಒಳಹರಿವು, ನಿರ್ನಾಮಗೊಳಿಸುವ ಪ್ರವಾಹ ಪ್ರಚಂಡ ಶಕ್ತಿ ಮತ್ತು ಬಾಚಿ ಸೆಳೆದುಕೊಳ್ಳುವ ವಿಲಕ್ಷಣ ಆಕರ್ಷಣೆ ಮತ್ತು ಬೆರಗು ಇವು ಮನುಷ್ಯ ಜೀವನದ ಗುಣಧರ್ಮ ಕ್ರಿಯೆಗಳಲ್ಲಿ ಪುನರಾವರ್ತನೆಗೊಳ್ಳುತ್ತವೆ. ಆದ್ದರಿಂದಲೇ ನದಿ ಜನಪದ ಹಾಗೂ ಶಿಷ್ಟ ಭೇದರಿಲ್ಲದೆ ಒಟ್ಟಾರೆ ಮನುಷ್ಯ ಜೀವನದಲ್ಲಿ ಮತ್ತೆ ಮತ್ತೆ ಕಾಡುವ ರೆಕರಿಂಗ್ ಇಮೇಜ್ ಆಗಿ ಕಾಣಿಸುತ್ತದೆ. ಇನ್ನೂ ಜನಪದರಲ್ಲಿ ನದಿ ಕೂಡ ಗಂಗೆಯೇ, ನದಿಯ ನೀರು ಪವಿತ್ರ ತೀರ್ಥ. ನದಿಯ ದಂಡೆ ಪುಣ್ಯ ಕ್ಷೇತ್ರ ಎನ್ನುವ ನಂಬಿಕೆಯಿದ್ದರೂ ನದಿಯ ಕುರಿತಾಗಿ ಇವರಿಗೆ ಇರುವ ಕಲ್ಪನೆಯೂ ಭಯದಿಂದ ಕೂಡಿದ ಭಕ್ತಿಭಾವ. ನದಿಯನ್ನು ಜೀವನ ಪ್ರತಿಮೆಯಾಗಿ ಬಳಸುತ್ತಿದ್ದರು ಎನ್ನುವುದು, ಜೀವನನದಿ ಪದ ಬಳಕೆಯಲ್ಲಿ ಕಾಣಬಹುದು.

ನದಿ ಜೀವನವನ್ನು ಹಸನಾಗಿಸುವ ಸಮೃದ್ಧಿಯ ಸಂಕೇತ. ನದಿಯ ಮುಖಜ ಭೂಮಿ ಪುಣ್ಯಕ್ಷೇತ್ರ ಎನ್ನುವುದು ಶಿಷ್ಟರಲ್ಲಿ ಧಾರ್ಮಿಕ ಅರ್ಥದಲ್ಲಿ ಆದರೆ ಜನಪದರಲ್ಲಿ ಭೂಮಿಯ ಫಲವಂತಿಕೆಯ ಅರ್ಥವೂ ಇದೆ. ಜನಪದ ಸಂಸ್ಕೃತಿಯಲ್ಲಿ ಅವರ ಕನಸಿನ ಸ್ಥಾಯಿಯಾಗಿರುವುದು ಕಂಡು ಬರುತ್ತಿದೆ. ಜನಪದರಲ್ಲಿ ಕಂಡುಬರುವ ನದಿ ಕುರಿತು ಕೆಲ ನಂಬಿಕೆಗಳನ್ನು ನೋಡಬಹುದು.

೧.       ಹರಿಯೊ ನೀರಿಗೆ ಮೈಲಿಗೆ ಇಲ್ಲ.
೨.       ಪ್ರಯಾಣದಲ್ಲಿ ನದಿ ಸಿಕ್ಕರೆ ಅದಕ್ಕೆ ಎಲೆ ಅಡಿಕೆ ಎಸದು ಕೈ ಮುಗಿಯಬೇಕು.
೩.       ಬಸುರಿಯನ್ನು ಒಮ್ಮೆಯಾದರೂ ನದಿ ದಾಟಿಸಬೇಕು.
೪.       ಮುಟ್ಟದ ಹೆಂಗಸು ನದಿಗೆ ಇಳಿಬಾರದು.
೫.       ನದಿ ಮೂಲ ಹುಡುಕಬಾರದು.
೬.       ನದಿಯ ದಂಡೆಯಲ್ಲಿ ದೇವರಿದ್ದರೆ ಮೊದಲು ಗಂಗೆ ಪೂಜೆ ಮಾಡಿ ಅನಂತರ ಆ ದೇವರಿಗೆ ಪೂಜೆ ಸಲ್ಲಿಸಬೇಕು.

ಹರಿವ ನೀರಿಗೆ ದೋಷವಿಲ್ಲ ಎನ್ನುವ ನಂಬಿಕೆ ಜನಪದರಲ್ಲಿ ಬಲವಾಗಿರುವುದನ್ನು ಕಾಣಬಹುದು. ನೀರು ಹರಿಯುವಾಗ ಅದರಲ್ಲಿನ ಕಲ್ಮಷಗಳು ದಡಗಳಿಂದ ಹೀರಲ್ಪಡುತ್ತವೆ ಎನ್ನುವುದು ವೈಜ್ಞಾನಿಕವಾಗಿಯೂ ಸತ್ಯ ಸಂಗತಿಯಾಗಿದೆ. ನದಿ ನೀರಿಗೆ ಮಲಿನತೆಯನ್ನು ಹೋಗಲಾಡಿಸುವ ಸಾಮರ್ಥ್ಯವಿದ್ದರೂ ನದಿಯನ್ನು ಅಂಟು ಸೂತಕಗಳಿಂದ ಮೈಲಿಗೆ ಮಾಡಬಾರದು. ಇದರಿಂದ ಗಂಗೆ ಕೋಪಗೊಳ್ಳುತ್ತಾಳೆ ಎನ್ನುವ, ಕಟ್ಟೆಚ್ಚರ ಜನರ ಸ್ಮೃತಿಯಲ್ಲಿ ಕ್ರಿಯಶೀಲವಾಗಿವುದು ಕಂಡುಬರುತ್ತದೆ.

ಜನರು ನೀರಿನ ಇತರ ಮೂಲಗಳ ಜೊತೆ ಸಲಿಗೆಯಿಂದ ವರ್ತಿಸುವಂತೆ ನದಿಯ ಜೊತೆ ವರ್ತಿಸುವುದಿಲ್ಲ. ಇದಕ್ಕೆ ನದಿಯ ನಿಗೂಢತೆ, ಸೆಳೆದುಕೊಳ್ಳುವ ಸೆಳವು, ಮೇಲೆ ಕಣ್ಣಿಗೆ ಕಾಣದ ಒಳ ಹರಿವು, ದಢೀರನೆ ಪ್ರವಾಹದ ರೂಪದಲ್ಲಿ ಉಕ್ಕಿ ಬಂದು ಎಲ್ಲವನ್ನು ಸರ್ವನಾಶಗೊಳಿಸುವ ಪ್ರಚಂಡ ಸಾಮರ್ಥ್ಯ ಕಾರಣವಾಗಿವೆ. ‘ದಡ ಮುಟ್ಟಿಸಪ್ಪ ದೇವರೆ’ ಈ ಸಾರಿ ‘ಗಡ್ಡಕ್ಯ ಬಿದ್ರೆ ಸಾಕು’ ಎನ್ನುವ ಆಡುನುಡಿ ಪ್ರಯೋಗಗಳು ಮನುಷ್ಯನ ಕಾಯಿಲೆ, ಸಂಕಷ್ಟಗಳನ್ನು ನದಿ ದಾಟುವಲ್ಲಿ ಇರುವ ರಿಸ್ಕ್‌ನ್ನು, ಸಮೀಕರಿಸಿ ಮಾತಾಡುವುದು ಸಾಮಾನ್ಯ ಸಂಗತಿಯಾಗಿದೆ.

ಮೇಲೆ ಉದಾಹರಿಸಿದ ಕೊನೆಯ ನಂಬಿಕೆಯಾದ ನದಿ ದಂಡೆಯಲ್ಲಿ ದೇವರಿಗಿಂತ ಮೊದಲು ಗಂಗೆ ಪೂಜೆ. ಹಿಂದೆ ಕೂಡ ಗಂಗೆ ಆದಿದೈವ ಕಲ್ಪನೆ ಕೆಲಸ ಮಾಡುತ್ತಿದೆ. ಇದನ್ನು Support ಮಾಡುವದಕ್ಕೆ ಇಂದಿಗೂ ಗ್ರಾಮಗಳಲ್ಲಿ ಜಾತ್ರೆ ಅಥವಾ ವಿಶೇಷ ಕಾರಣಗಳಿಗೆ ಪರ ಊರಿನ ಗ್ರಾಮದೇವತೆಗಳನ್ನು ಆಹ್ವಾನಿಸುವ ಪದ್ಧತಿ ಇದೆ. ಆದರೆ ಪರ ಊರಿನ ದೇವತೆ ಊರು ಪ್ರವೇಶಿಸುವ ಮೊದಲು ಊರಿನ ಗಡಿಯಲ್ಲಿಯೇ ಬಾವಿ ಅಥವಾ ಕೆರೆಗೆ ಗಂಗಾಪೂಜೆ ಮಾಡಿ ಬಲಿಕೊಟ್ಟ ಗ್ರಾಮ ಪ್ರವೇಶಿಸುವುದು ರೂಢಿಯಲ್ಲಿದೆ.

ಈ ಉದಾಹರಿಸಿರುವ ನಂಬಿಕೆಗಳಲ್ಲಿ ನದಿ ಒಂದು ಜೀವಂತ ಪಾತ್ರದಂತೆ ಮನುಷ್ಯ ನೆಲೆಯಲ್ಲಿ ಅನುಸಂಧಾನಕ್ಕೆ ಗುರಿಯಾಗುತ್ತಿರುವುದು ಜನಪದ ಸಂಸ್ಕೃತಿ ಅತಿ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ಎಂಥ ಅಲೌಕಿಕ ವಿಚಾರವಾದರೂ ಜನಪದರಲ್ಲಿ ನೆಲಕ್ಕೆ ಬದ್ಧವಾಗಿಯೇ ಅನುಭವಕ್ಕೆ ಪಕ್ಕಾಗುವುದು ಇದರ ವೈಶಿಷ್ಟ್ಯ.

ತೀರ್ಥಪರಿಶುದ್ಧಪ್ರಾಯಶ್ಚಿತಸೂತಕ

ಜನಪದರ ಅರ್ಥದಲ್ಲಿ ತೀರ್ಥ, ಯಾವುದೇ ಪೂಜೆಯ ಸಂದರ್ಭದಲ್ಲಿ ಬಳಕೆಯಾಗುವ ನೀರು, ತೆಂಗಿನ ನೀರು, ಯಾರೂ ಮುಟ್ಟುವ ಮುನ್ನ ಬಾವಿ ಅಥವಾ ನದಿಯಿಂದ ಸಂಗ್ರಹಿಸಿದ ನೀರು, ಬಲಿಕೊಟ್ಟ ಪ್ರಾಣಿಯ ರಕ್ತ, ಇವು ತೀರ್ಥದ ಪ್ರಮುಖ ರೂಪಗಳು. ಈ ತೀರ್ಥ ಅತ್ಯಂತ ಪವಿತ್ರವಾದದ್ದು ಇದು ದೇವರ ಅನುಗ್ರಹದ ಪ್ರತೀಕ. ತೀರ್ಥವೂ ದೈವಶಕ್ತಿಯಿಂದ ಕೂಡಿದೆ. ಇದರ ಸೇವನೆಯಿಂದ ಪಾಪ ಪರಿಹಾರವಾಗಬಲ್ಲದು. ತೀರ್ಥವನ್ನು ತಲೆ ಮೇಲೆ ಹಾಕಿಕೊಳ್ಳುವುದರಿಂದ ಕೇಡುಗಳು ನಿವಾರಣೆಯಾಗುತ್ತವೆ. ರೋಗ ರುಜಿನಗಳು ವಾಸಿಯಾಗುತ್ತವೆ. ಒಟ್ಟಾರೆಯಾಗಿ ತೀರ್ಥ ಮನುಷ್ಯನನ್ನು ಒಳಗೊಂಡಂತೆ ಪರಿಸರವನ್ನು ಶುದ್ಧಗೊಳಿಸುವ ದೈವಿಕ ಶಕ್ತಿಯನ್ನು ಪಡೆದಿದೆ ಎಂಬುದು ಜಾನಪದರ ಜೀವನ ತತ್ವವಾಗಿದೆ. ನಂಬಿಕೆಗಳಲ್ಲಿ ತೀರ್ಥದ ಕೆಲ ಪ್ರಾತಿನಿಧಿಕ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಬಹುದು.

೧.       ದೇವರಿಗೆ ಕುರಿ ಕಡಿಯುವ ಮುನ್ನ ಕುರಿಯ ತಲೆ ಮೇಲೆ ನೀರು ಸಿಂಪಡಿಸಬೇಕು.
೨.       ತೀರ್ಥವನ್ನು ಕಾಲಿನಿಂದ ತುಳಿಯಬಾರದು.
೩.       ತೀರ್ಥವನ್ನು ಸ್ವೀಕರಿಸಿದ ಕೈಯಿಂದ ತಲೆ ಸವರಿಕೊಳ್ಳಬೇಕು.
೪.       ಕೆಂಡ ಹಾಯುವ ಮೊದಲು ಕೆಂಡದ ಮೇಲೆ ತೊಟ್ಟಾದರೂ ತೀರ್ಥ ಚೆಲ್ಲಬೇಕು.
೫.       ತೀರ್ಥ ಮೈ ಮೇಲೆ ಹಾಕಿಕೊಂಡರೆ ಸೂತಕ ಕಳೆಯುತ್ತೆ, ಕೇಡು ಹರಿಯುತ್ತೆ.
೬.       ಕೊಳದ ನೀರು ಹೇಗಿದ್ದರೂ ಅಸಹ್ಯಪಡದೆ ಮುಳುಗೇಳಬೇಕು.

ಒಂದನೆಯ ನಂಬಿಕೆಯಲ್ಲಿ ದೇವರಿಗೆ ಬಲಿಕೊಡುವ ಪ್ರಾಣಿಯನ್ನು ಪರಿಶುದ್ಧಗೊಳಿಸುವ Purityಯ concept ಸಲುವಾಗಿ ಕುರಿಯ ತಲೆ ಮೇಲೆ ಪೂಜೆಗೆ ತಂದ ನೀರನ್ನು ಚಿಮುಕಿಸುತ್ತಾರೆ. ದೇವರಿಗೆ ಸಲ್ಲುವ ಜೀವ ಮಲಿನವಾಗಿದ್ದರೆ ಎಡೆ ಕೆಟ್ಟು ದೇವತೆ ಕೋಪಗೊಳ್ಳುತ್ತಾಳೆ ಎನ್ನುವ ಮುನ್ನೆಚ್ಚರಿಕೆಯನ್ನು ಕಾಣಬಹುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ವೈದಿಕರ ಯಜ್ಞ ಯಾಗಾದಿಗಳಿಗೆ ಹುಟ್ಟಿನಿಂದಲೇ ಶ್ರೇಷ್ಠವಾದ ವಸ್ತುವೇ ಬೇಕು. ಆದರೆ ಜನಪದರ ಆಚರಣೆಯಲ್ಲಿ ಎಂತಹುದೇ ಪ್ರಾಣಿ ಅಥವಾ ವಸ್ತುವಿಗೆ ಶ್ರೇಷ್ಠತೆಯನ್ನು ಕೊಟ್ಟು ತೀರ್ಥದಿಂದ ಕೊಡಲು ಸಾಧ್ಯವಿಲ್ಲ.

ಜನಪದರ ನಂಬಿಕೆಯೊಂದು ಒಂದು ಚಾರಿತ್ರಿಕ ಸನ್ನಿವೇಶದಲ್ಲಿ ರೂಪಗೊಂಡಿರುತ್ತದೆ ಎಂದು ನನ್ನ ಪ್ರಬಂಧದ ಆರಂಭದಲ್ಲಿ ಹೇಳಿದ ನನ್ನ ಮಾತನ್ನು ಒಂದು ನಂಬಿಕೆಯ ಉದಾಹರಣೆಯೊಂದಿಗೆ ವಿವರಿಸಲು ಇಷ್ಟಪಡುತ್ತೇನೆ.

ಉದಾ: ಕೊಳದ ನೀರು ಎಷ್ಟೇ ಕೊಳಕಾಗಿದ್ದರೂ ಅಸಹ್ಯಪಡದೆ ಸ್ನಾನಮಾಡಬೇಕು. (ಕೊಳದ ನೀರಿನಲ್ಲಿ ಸ್ನಾನ ಮಾಡಬೇಕು.)

ಕೊಳದ ನೀರಲ್ಲಿ ಮುಳುಗುವುದರಿಂದ ಪ್ರಾಯಶ್ಚಿತ್ತ ಹಾಗೂ ಪರಿಶುದ್ಧತೆಯನ್ನು ಗಳಿಸಬಹುದು ಎಂದು ಗಾಢವಾಗಿ ನಂಬುವ ಮನುಷ್ಯ ಇಂದಿನ ಮಲಿನತೆಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಒತ್ತಡವೇ, ತೀರ್ಥ ಕೊಳಕಾಗಿದ್ದರೂ ಅಸಹ್ಯಪಡದೆ ಸ್ನಾನ ಮಾಡು, ಕುಡಿ ಎನ್ನುವ ನಂಬಿಕೆಯನ್ನು ಸೃಷ್ಟಿಸುತ್ತದೆ. ಕೊಳದ ನೀರಲ್ಲಿ ಸ್ನಾನ ಮಾಡಬೇಕು ಎನ್ನುವ ನಂಬಿಕೆ ಈ ಹೊತ್ತು ನೀರು ಕೊಳಕಾಗಿದ್ದರೂ ಅಸಹ್ಯ ಪಡದೆ ಸ್ನಾನ ಮಾಡಬೇಕು ಎನ್ನುವ ನಂಬಿಕೆ ಈ ಹೊತ್ತು ನೀರು ಕೊಳಕಾಗಿದ್ದರೂ ಅಸಹ್ಯ ಪಡದೆ ಸ್ನಾನ ಮಾಡಬೇಕು ಎಂದು ಮಾರ್ಪಾಡಾಗಿದೆ. ಈ ಮಾರ್ಪಾಡಿನ ಒಳ ರಚನೆಯಲ್ಲಿ ಎಂಥ ಚಾರಿತ್ರಿಕ ಹಾಗೂ ಧಾರ್ಮಿಕ ಅನಿವಾರ್ಯಗಳು ಹುದುಗಿರುತ್ತವೆ ಎನ್ನುವುದನ್ನು ವಿವರಿಸಲು ಯತ್ನಿಸಿದ್ದೇನೆ ಅಷ್ಟೆ.

ನೀರು = ಪ್ರತಿಫಲನಗುಣಪ್ರವಹಣ ಶಕ್ತಿ

ಈ ವಿಭಾಗದಲ್ಲಿ ಬರುವ ಎಲ್ಲಾ ನಂಬಿಕೆಗಳಲ್ಲಿ ನೀರಿನ ಗುಣಧರ್ಮ, ಕ್ರಿಯೆ ಅನುಷಂಗಿಕವಾದದ್ದು. ನೀರನ್ನು ಬಳಸುವ ಮನುಷ್ಯನ ಗುಣಾವಾಗುಣಗಳು, ಸಣ್ಣತನ, ಉದಾರತೆಗಳು, ಕನಸುಗಳು, ನಿರೀಕ್ಷೆಗಳು, ಜಾತಿ, ವೃತ್ತಿಯ ಲಕ್ಷಣಗಳು ನಂಬಿಕೆಗಳ ರೂಪದಲ್ಲಿ ರಚನೆಯಾಗಿರುವುದನ್ನು ಕಾಣುತ್ತೇವೆ. ಇಲ್ಲಿ ಬಳಕೆಯಾಗುವ ನೀರಿಗೆ ನದಿ ಮಳೆ ತೀರ್ಥ ಹೀಗೆ ಸ್ವಯಂಸಿದ್ಧವಾದ ವ್ಯಕ್ತಿತ್ವವೊಂದು ಇಲ್ಲದೆ ಇರುವುದು ಮುಖ್ಯವಾದ ಸಂಗತಿ. ಮಳೆ ಮತ್ತು ನದಿಗೆ ಪ್ರಾಕೃತಿಕವಾದ ಸಹಜ ಪಾತಳಿಯಿಂದ ವ್ಯಕ್ತಿತ್ವ ದತ್ತರಾದರೆ, ತೀರ್ಥಕ್ಕೆ ಧಾರ್ಮಿಕ ಆಚರಣೆಯ ಭಾಗವಾಗಿ ಬಳಕೆಯಾಗುವುದರಿಂದ ಅದಕ್ಕೆ ಪಾವಿತ್ರ್ಯತೆ ಪ್ರಾಪ್ತವಾಗುತ್ತದೆ. ಆದರೆ ಮನುಷ್ಯನ ದೈನಂದಿನ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವ ನೀರು ಸ್ವತಂತ್ರ ವ್ಯಕ್ತಿತ್ವವಿಲ್ಲದೆ, ಬಳಸುವವನ ಉಪಯುಕ್ತತೆಯ ಗುಣಗಳನ್ನು ಪಡೆದುಕೊಳ್ಳುವುದನ್ನು ನೋಡಬಹುದು. ಈ ವಿಷಯವನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಲು ಕೆಳಗಿನ ಈ ಎರಡು ನಂಬಿಕೆಗಳನ್ನು ಗಮನಿಸಬಹುದು.

೧.       ಪ್ರಯಾಣಕ್ಕೆ ಹೊರಟಾಗ ತುಂಬಿದಗಡಿಗೆ ಹೊತ್ತ ಮುತ್ತೈದೆ ಎದುರಾದರೆ ಶುಭ.
೨.       ಪ್ರಯಣಕ್ಕೆ ಹೊರಡುವಾಗ ತುಂಬಿದ ಗಡಿಗೆ ಹೊತ್ತ ವಿಧವೆ ಎದುರಾದರೆ ಅಶುಭ.

ಈ ಎರಡೂ ನಂಬಿಕೆಗಳಲ್ಲಿ ಸಂಕೇತವಾಗುವ ನೀರು ಒಂದೇ ಆದರೂ ನೀರನ್ನು ಹೊತ್ತಿರುವ ನೀರನ್ನು ಹೊತ್ತಿರುವ ವ್ಯಕ್ತಿಗಳ ಲಕ್ಷಣಗಳನ್ನು ನೀರಿಗೆ ಆರೋಪಿಸಿ, ಶುಭ ಮತ್ತು ಅಶುಭದ ಕಲ್ಪನೆ ಮಾಡಲಾಗಿದೆ.

ಇಲ್ಲಿ ಪ್ರಸ್ತಾಪಿಸಿರುವ ನೀರಿಗೆ ಸ್ವಂತಿಕೆಯ ಗುಣವಿದಿದ್ದರೆ ನೀರನ್ನು ಹೊತ್ತವರು ಯಾರೇ ಆಗಿದ್ದರೂ ಅದು ಶುಭದ ಸಂಕೇತವಾಗಬೇಕಿತ್ತು. ಅದೇ ರೀತಿ ಎದುರಾಗುವ ಗಡಿಗೆ ತುಂಬಿದ ಗಡಿಗೆಯಾಗಿರಬೇಕು, ಮುಕ್ಕಾದ ಕೊಡವಾಗಿರಲಿ, ಅರೆ ತುಂಬಿದ ಕೊಡ ವಾಗಲಿ, ಅವಲಕ್ಷಣ ಚಿನ್ಹೆಯಾಗುತ್ತದೆ. ನೀರನ್ನು ಒಳಗೊಳ್ಳುವ ಪಾತ್ರೆಯ ದೋಷವನ್ನು, ಅಪರಿಪೂರ್ಣತೆಯನ್ನು ಅಶುಭವಾಗಿ ಗುರುತಿಸಲಾಗುತ್ತದಯೇ ವಿನಃ ಆ ಪಾತ್ರೆಯೊಳಗಿನ ನೀರನ್ನಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯಾಂಶವೆಂದರೆ ತನ್ನ ಮೂಲದಲ್ಲಿ ಪ್ರಚಂಡವಾದ ಶಕ್ತಿಯಾಗಿ ವಿಜೃಂಭಿಸುವ ತನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಉಳ್ಳ ನೀರೇ ಮನುಷ್ಯನ ಪ್ರವೇಶದ ನಂತರ ತನ್ನ ಮೂಲ ಸ್ವಂತಿಕೆಯನ್ನು ಕಳೆದುಕೊಂಡು ಸ್ವಾಧೀನಪಡಿಸಿಕೊಂಡ ಮನುಷ್ಯ ಅಥವಾ ಪದಾರ್ಥದ ಗುಣ ಲಕ್ಷಣವನ್ನು ಪಡೆದುಕೊಳ್ಳುವ ಸಲಿಲತೆ ಗಮನಾರ್ಹವಾದುದು.

ಮನುಷ್ಯನ ದೈನಂದಿನ ಚಟುವಟಿಕೆಗಳಾದ ಶುಚಿತ್ವ, ಅಡುಗೆ, ಪಶುಪಾಲನೆ, ಔಷಧಿ, ಮಾಟ, ಮಂತ್ರ, ಕೆಡಕು ನಿವಾರಣೆ ಮತ್ತು ಜೈವಿಕ ಅಗತ್ಯ. ಈ ಎಲ್ಲಾ ಕ್ರಿಯೆಗಳಲ್ಲಿ ನೀರು ಮುಖ್ಯ ವಸ್ತುವಾಗಿದೆ. ಈ ಗುಂಪಿಗೆ ಸೇರಿದ ೫೦ಕ್ಕೂ ಹೆಚ್ಚಿನ ನಂಬಿಕೆಗಳಿದ್ದು ಎಲ್ಲಾ ನಂಬಿಕೆಗಳು ಇದ್ದು ಘಟನಾ ಪ್ರಧಾನವಾದ ನೆಲೆಯುಳ್ಳವು ಆಗಿವೆ. ವೈಯಕ್ತಿಕ ನೆಲೆಯಲ್ಲಿ ಮಂಡಿತವಾಗುವ ನಂಬಿಕೆಗಳು ಸಮಷ್ಟಿ ನಿರೀಕ್ಷೆಯತ್ತ ತುಡಿಯುವುದನ್ನು ನಾವು ಕಾಣಬಹುದು. ಇಲ್ಲಿನ ಪ್ರತಿಯೊಂದು ನಂಬಿಕೆಯನ್ನು ವೃತ್ತಿ ಜಾತಿ ಆಚರಣೆಯ ನೆಲೆಯಲ್ಲಿಟ್ಟು ಬಿಡಿಯಾಗಿ ಚರ್ಚಿಸಲು ಸಾಧ್ಯವಿದೆ. ನೀರಿನ ಅಷ್ಟೂ ನಂಬಿಕೆಗಳನ್ನು ಕುರಿತು ಬರೆಯುವುದು ಈ ಲೇಖನದ ಮಿತಿಗೆ ಮೀರಿದ್ದು, ಆದ್ದರಿಂದ ನಂಬಿಕೆಗಳಲ್ಲಿ ಒಳಮೈ ಪಡೆದಿರುವ ಕೆಲ ಸಮೀಕರಣಗಳಿಗೆ ಮಾತ್ರ ನನ್ನನ್ನು ನಿಯಂತ್ರಿಸಿಕೊಂಡಿದ್ದೇನೆ.

ಅ. ಶಕುನ – ನಿರೀಕ್ಷ
ಕ. ಔಷಧಿ – ಆಧಿ – ವ್ಯಾಧಿ – ಮಾಟ – ಮಂತ್ರ
ಬ. ಕೇಡು – ಉಚ್ಚಾಟನೆ
ಡ. ನಿಷೇದ – ಕಟ್ಟುಪಾಡುಗಳು.

ಮೇಲೆ ಉಲ್ಲೇಖಿಸಿದ ವಿಷಯಗಳಿಗೆ ಸಂಬಂಧಿಸದ ಜೀವನದ ಬೇರೆ ನೆಲೆಗಳನ್ನು ಕುರಿತ ನಂಬಿಕೆಗಳು ಕೂಡ ನನ್ನ ಗಮನದಲ್ಲಿ ಇವೆ ಎಂಬುದನ್ನು ದಾಖಲಿಸಲು ಇಚ್ಛಿಸುತ್ತೇನೆ.