ನೀರು !
ಬೆಳಗಾಗ ಪೈಪಿನ ಒಳಗೆ ಜುಳು ಜುಳು ಹರಿದು
ನಲ್ಲಿಯಲ್ಲಿ ಸರಸರ ನುಗ್ಗಿ
ಹಂಡೆ ಕೊಡಗಳ ಒಳಗೆ ದಢ ದಢ ಧುಮುಕಿ
ತುಳುಕಿ ಹೊರಳುವ ನೀರು.

ಮುಖಮಜ್ಜನಕ್ಕೆಂದು ಹಂಡೆಯಲಿ ಕಾದು
ಬಿಸುಮಾತನುಸುರುವ ನೀರು.
ಊಟಕ್ಕೆ ಕೂತಿರುವಾಗ ಲೋಟದಲಿ ಸಪ್ಪಗೆ ತೆಪ್ಪಗೆ
ಮುದುಡಿರುವ ನೀರು.
ಹೊರಗೆ ತಲೆಯೆತ್ತಲಾಕಾಶದಲಿ
ತೇಲುವ ಮೋಡ.

ಕೆಳಗೆ ಹರಿದಿದೆ ನೀರು – ಕೆರೆ ಕಟ್ಟೆ ಹೊಳೆ ಹಳ್ಳ
ಕೊಳ್ಳಗಳಲ್ಲಿ.
ಮೇಲೆ ತೇಲಿದೆ ನೀರು – ಬಾನಿನ ತುಂಬ
ನೂರಾರು ಚಿತ್ರ – ವಿಚಿತ್ರ ರೂಪಗಳಲ್ಲಿ ;
ನಡು ಹಗಲಲ್ಲಿ ನೀಲಿಯ ತುಂಬ ಮೋಡದ ಹಿಂಡು :
ಬೆಚ್ಚನೆಯ ಬಿಸಿಲು ಕಾಸುತ್ತ ಎಲೆ ಅಡಿಕೆ ಜಗಿಯುತ್ತ
ಸಂತೆಗೆ ಬಂದು ಹರಟುತ್ತ ಕೂತಿರುವ
ಕಡಲು ನಾಡಿನ ಮಂದಿ !
ಸಾಯಂಕಾಲ ಇದ್ದಕ್ಕಿದ್ದಂತೆ ಗುಡುಗು ಗದ್ದಲ ;
ಆಕಾಶವನ್ನೆ ಪರಚುವ ಮಿಂಚು,
ತೊಟ್ಟಿಲಲಿ ಮಲಗಿದ್ದ ಮಗು ಕಿಟಾರನೆ ಕಿರುಚಿ
ಸೆರಗಿನೊಳಗವಿತಿರಲು,
ದೂರದ ಗಾಳಿ ಭೋರೆಂದು ಬೀಸಿ, ಮನೆಯಂಗಳದ ತೆಂಗು
ಥಕಥೋಂ ಕುಣಿದು,
ಬಂತು ಮಳೆ, ಮನೆಯ ಹಂಚಿನ ಮೇಲೆ ತಟಪಟ,
ದೂರದ ನೀಲಿಯಾಕಾಶದೊಳಗಿನ ಗುಟ್ಟುಗಳ ತಂದು
ರಟ್ಟು ಮಾಡುವ ಮಾಟ.

ಇರುಳೆಲ್ಲ ಟ್ರೋಂಟ್ರೋಂ ಕಪ್ಪೆ :
ಪಟ್ಟಾಗಿ ಕುಡಿದವನೊಬ್ಬ ಯದ್ವಾತದ್ವ ಬಾರಿಸುತ್ತಿದ್ದಾನೆ
ಹಾರ‍್ಮೋನಿಯಂ.
ಈ ಗಲಭೆ ಮುಗಿದು ಮುಂಜಾವಿನೆದೆ ಬಿರಿದಾಗ
ಹಳ್ಳಕೊಳ್ಳಗಳಲ್ಲಿ ಹಸುರ ಗಾಯಗಳಲ್ಲಿ
ಕೆಂಪು ನೀರು.
*     *     *     *
ಸೂರ್ಯನಿಗೆ ಮಂಜೂರಾಯ್ತು ಬಲವಂತದ ರಜಾ ;
ಚಂದ್ರನಿಗೆ ಸಜಾ, ನೀಲಿಯಾಕಾಶಕ್ಕೆ ಉಚ್ಛಾಟನೆ !
ಈ ಮೂರು ದಿನದಿಂದ ಬೆಪ್ಪು ಹಿಡಿದಾವರಣ,
ಬಿರುಗಾಳಿ ಚಾಟಿಯೇಟಿಗೆ ಕೆರಳಿ ನರಳಿ
ಮಳೆ ಹನಿಯ ಪಂಜರದಲ್ಲಿ ಅಬ್ಬರಿಸಿ ಹೊಯ್ದಾಡುತ್ತ
ತಲೆಗೆದರಿ ನಿಂತ ಗಿಡ-ಮರ.
ರಸ್ತೆಯ ತುಂಬ ನಿರಿ ನಿರಿ ನೀರು ; ಛಿಲ್ಲೆಂದು ನೀರೆರಚಿ
ನಡೆವ ಗಾಲಿಗಳುರುಳು
ಛತ್ರಿ ಮಳೆಕೋಟಿನೊಳಗೇ ಮೈ ಮರೆಸಿಕೊಂಡು
ತಿರುಗುವ ಮಂದಿ ;
ನರನರದೊಳಕ್ಕು ತೂತನು ಕೊರೆವ ಛಳಿಗಾಳಿ.
ಒಂದೇ ಸಮನೆ ಸುರಿವ ಈ ಮಳೆಯ ಮಬ್ಬಿನಲಿ
ಇಡೀ ನಗರ, ಎಂದೋ ಬರೆದು ಬೂಸಲು ಹಿಡಿದು
ಮಾಸಿರುವ ಹಳೆಯ ‘ಪೇಂಟಿಂಗು’.
ಕಾಗೆಯೂ ಸಹ ಕೂಗದಾಕಾಶದಲಿ ಉದಯಾಸ್ತಮಾನಗಳ
ಸದ್ದಿರದ ಸಂಚಾರ.
ಮನೆ ಮನೆಯ ದೀಪದೆದೆ ಝಲ್ಲೆನುವಂತೆ
ನಡು ನಡುವೆ ಮಿಂಚೂ – ಗುಡುಗು
ಊರೆಲ್ಲ ಯಾವುದೋ ಜಲ ಪ್ರಳಯದಲ್ಲಿ
ಮುಳುಗಿ ತೇಲುವ ಹಡಗು.
*     *     *     *
ಧೋ ಧೋ ಧೋ ಜಡಿಮಳೆ ಬಡಿತ
ಎಲ್ಲಿತ್ತು ಇಷ್ಟೊಂದು ನೀರು, ನೂರಾರು ಭಾವನಾ ಚಿತ್ರಗಳ
ಬರೆದ ಆ ಮೇಲಿನಾಕಾಶದಲಿ !
ಕಲ್ಪನೆಯ ಮೋಡ ಕರಗಿ ವಾಸ್ತವದ ನೆಲಕಿಳಿದಾಗ
ಮುಕ್ತಿ ಈ ಮಣ್ಣಿನಲ್ಲಿ.