“ಈ ವರುಷ ನಮ್ಮ ದೇಶದ ೧೬೧ ಜಿಲ್ಲೆಗಳಲ್ಲಿ ಬರಗಾಲ ಸಂಭವ. ಬೀಜ ಬಿತ್ತನೆ ಆಗಬೇಕಿದ್ದ ಶೇಕಡಾ ೨೦ ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ” ಎಂದು ಕೇಂದ್ರ ವಿತ್ತ ಸಚಿವರು ತಿಳಿಸಿದ್ದಾರೆ. ಕರ್ನಾಟಕ ಸರಕಾರವು ೨೦ ಜಿಲ್ಲೆಗಳ ೮೬ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ.(೧೨ ಆಗಸ್ಟ್ ೨೦೦೯ರ ಪತ್ರಿಕಾ ವರದಿ) ಹಾಗಂತ, ನೀರನ್ನು ತಯಾರಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಹಾಗಾದರೆ, ನಾವೇನು ಮಾಡಬಹುದು?

ನಮಗೆ ಈಗ ಬೇಕಾಗಿರುವುದು ಸುರಕ್ಷಿತ ಭವಿಷ್ಯಕ್ಕಾಗಿ ಒಂದು “ನೀರಿನ ಧೋರಣೆ”. ಅದರ ಆರು ಮುಖ್ಯ ಅಂಶಗಳ ಬಗ್ಗೆ ಚಿಂತಿಸೋಣ.

ಒಂದನೆಯದಾಗಿ, ನಮ್ಮ ದೇಶದಲ್ಲೊಂದು ನೀರಿನ ಮಾಹಿತಿ ಮಿಷನ್ ಅಗತ್ಯ.  ದೇಶದ ಯಾವ ಭಾಗದಲ್ಲಿ ನೀರಿನ ಪರಿಸ್ಠಿತಿ ಹೇಗಿದೆ? ನಮಗೆ ಗೊತ್ತಿಲ್ಲ. ಈ ಮಿಷನ್ ಆ ಮಾಹಿತಿ ಒದಗಿಸಬೇಕು – ಉಪಗ್ರಹ ಮತ್ತು ಅಂತರ್ಜಲ ಸಂವೇದಿ ಉಪಕರಣಗಳ ಸಹಾಯದಿಂದ. ನೀರಿನ ಕೊರತೆ ಉಂಟಾಗಬಹುದಾದ ಸ್ಥಳಗಳ ಮನೆಮನೆಗೆ ಹಾಗೂ ಪ್ರತಿಯೊಬ್ಬ ರೈತನಿಗೆ ಈ ಮಿಷನ್ ಮಾಹಿತಿ ನೀಡಿ ಎಚ್ಚರಿಸಬೇಕು.

ಎರಡನೆಯದಾಗಿ, ನೀರಿನ ಬಳಕೆಗಾಗಿ ಯೋಜನೆ ಅಗತ್ಯ:  ಪ್ರತಿಯೊಂದು ಹಳ್ಳಿಗೆ, ನಗರಕ್ಕೆ ಮತ್ತು ಕಾರ್ಖಾನೆಗೆ. ಗ್ರಾಮ ಪಂಚಾಯತಿ ಕಚೇರಿ ಮತ್ತು ಶಾಲೆಯ ಗೋಡೆಗಳಲ್ಲಿ ಇರಬೇಕು –  ಅಲ್ಲಿಯ ಬಾವಿಗಳ ಭೂಪಟ ಮತ್ತು ಬಾವಿಗಳ ನೀರಿನ ಮಟ್ಟದ ಮಾಹಿತಿ.  ಆಯಾ ಹಳ್ಳಿಯ ನೆಲದಡಿಯ ನೀರಿನಾಸರೆಗಳಿಗೆ ಏನಾಗುತ್ತಿದೆ? ಇದು ಅಲ್ಲಿನ ಎಲ್ಲರಿಗೂ ತಿಳಿದಿರಬೇಕು – ಬಳಕೆ ವಿಧಾನದಲ್ಲಿ ಬದಲಾವಣೆ ರೂಪಿಸಲಿಕ್ಕಾಗಿ.

ಅದಲ್ಲದೆ, ಹಳ್ಳಿಹಳ್ಳಿಯ ಪ್ರತಿಯೊಬ್ಬರಿಗೂ ಗೊತ್ತಿರಬೇಕು – ಅಲ್ಲಿ ಬಿದ್ದ ಮಳೆನೀರು ಏನಾಗುತ್ತಿದೆ?  ಅಲ್ಲೆಲ್ಲ ನೆಲದಾಳದಿಂದ ನೀರು ಎತ್ತುತ್ತಲೇ ಇದ್ದೇವೆ. ಆದರೆ ನಮಗೆ ಗೊತ್ತಿಲ್ಲ: ನಮ್ಮ ಹಳ್ಳಿ ಅಥವಾ ಊರಿನಲ್ಲಿ ಎಷ್ಟು ತೆರೆದ ಬಾವಿ ಹಾಗೂ ಕೊಳವೆಬಾವೆಗಳಿವೆ? ಅವುಗಳ ನೀರಿನ ಮಟ್ಟ ಹಾಗೂ ನೀರಿನ ಗುಣಮಟ್ಟ ವರುಷದಿಂದ ವರುಷಕ್ಕೆ ಹೇಗೆ ಕುಸಿಯುತ್ತಿದೆ? ಈ ಮಾಹಿತಿ ಸಂಗ್ರಹಿಸಿ, ಸಮುದಾಯಕ್ಕೆ ತಿಳಿಸಿದರೆ ಹನಿಹನಿ ಮಳೆನೀರ ಕೊಯ್ಲಿಗೆ ಜನ ತಯಾರಾಗುತ್ತಾರೆ.

ಮೂರನೆಯದಾಗಿ, ಮುಂದಿನ ಎಲ್ಲ ಅಭಿವೃದ್ಧಿ ವೆಚ್ಚಗಳಿಗೆ ಗ್ರಾಮದ ನೀರಿನ ಸುರಕ್ಷತಾ ಯೋಜನೆಯೇ ಮೂಲಾಧಾರವಾಗಬೇಕು. ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಹಣ ವಿನಿಯೋಜನೆಯನ್ನು ಇದಕ್ಕಾಗಿ ಹೊಂದಿಸಬೇಕು – ಭವಿಷ್ಯದಲ್ಲಿ ಮನೆಮನೆಗೂ ಕುಡಿಯುವ ನೀರು ಸಿಗಲಿಕ್ಕಾಗಿ.

ನಾಲ್ಕನೆಯದಾಗಿ, ನಾವು ಗಮನ ನೀಡಬೇಕಾದ್ದು ಮುಂದಿನ ವರುಷಗಳಲ್ಲಿ ನೀರಿನ ಬೇಡಿಕೆ ಎಷ್ಟು ಹೆಚ್ಚಾಗಲಿದೆ? ಎಂಬುದಕ್ಕೆ. ಆದರೆ ಈಗ, ನೀರಿನ ಪೂರೈಕೆ ಎಷ್ಟಿದೆ ಎಂಬುದೇ ಮುಖ್ಯವಾಗಿದೆ. ಈ ಬಗ್ಗೆ ಸರಕಾರಗಳು ನೀಡುವ ಯಾವುದೇ ಅಂಕೆಸಂಖ್ಯೆಗಳನ್ನು ನಂಬಲಾಗದು. ಅವೆಲ್ಲ ಕಾಗದದ ಹಾಳೆಯ ಕಸರತ್ತುಗಳು. ಯಾಕೆಂದರೆ ಅವುಗಳ ಪ್ರಕಾರ ನಮ್ಮ ದೇಶದಲ್ಲಿ ಸಾಕಷ್ಟು ನೀರಿದೆ!

ಐದನೆಯದಾಗಿ, ನಮ್ಮ ನಗರಗಳ ನೀರಿನ ಮತ್ತು ಕಲ್ಮಷದ ನಿರ್ವಹಣಾ ವ್ಯವಸ್ಥೆಯ ಮರುಪರಿಶೀಲನೆ ಅಗತ್ಯ. ಈಗ ನಗರಗಳಿಗೆ ನೀರು ಎಲ್ಲಿಂದ ಬರುತ್ತಿದೆ? ವರುಷದಿಂದ ವರುಷಕ್ಕೆ ಇನ್ನಷ್ಟು ದೂರದ ನೀರಿನಾಸರೆಯಿಂದ. ಇದರಿಂದಾಗಿ ನೀರು ತರುವ ವೆಚ್ಚ ಅಗಾಧ; ನೀರನ್ನು ಸರಬರಾಜು ಮಾಡುವಾಗ ಸೋರಿಕೆಯೂ ಅಗಾಧ.

ನಗರಗಳ ಆಡಳಿತಗಳು ಅಲ್ಲಿನ ಗಣನೀಯ ಸಂಖ್ಯೆಯ ಜನರಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀರಿನ ಕೊರತೆ ಮತ್ತು ಸರಬರಾಜಿನ ಹೆಚ್ಚಳ ಎಂಬ ವಿಷವರ್ತುಲದಲ್ಲಿ ಸಿಲುಕಿದ್ದೇವೆ. ಎಲ್ಲರಿಗೂ ಕನಿಷ್ಠ ಪ್ರಮಾಣದ ನೀರಿನ ಸರಬರಾಜು ಎಂಬ ನಿಯಮ ಜ್ಯಾರಿಯಾಗಲಿ. ಭಾರೀ ನೀರು ಕಬಳಿಸುವ ಬಳಕೆದಾರರಿಗೆ, ಅವರ ನೀರಿನ ಬಳಕೆ ಪ್ರಮಾಣ ಹಾಗೂ ಅವರು ಹೊರಹಾಕುವ ಕಲುಷಿತ ನೀರಿನ ಪ್ರಮಾಣ ಅವಲಂಬಿಸಿ ಶುಲ್ಕ ವಸೂಲಿ ಆಗಲಿ. ಆಗ ಎಲ್ಲಿರಿಗೂ ತಿಳಿಯುತ್ತದೆ ನೀರಿನ “ಬೆಲೆ”.  ಕಾರು ಹಾಗೂ ಅಂಗಳ ತೊಳೆಯಲಿಕ್ಕಾಗಿ, ಹೂಗಿಡ-ಎಲೆಗಿಡಗಳಿಗೆ ಹಾಕಲಿಕ್ಕಾಗಿ ಕುಡಿಯುವ ನೀರು ಪೋಲಾಗುವುದು ತಪ್ಪುತ್ತದೆ.

ಆರನೆಯದಾಗಿ, ನೀರಿನ ಹನಿಹನಿಯ ಮರುಬಳಕೆ ಮಾಡೋಣ. ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಿ, ನೂರಾರು ಕಿಮೀ ದೂರಕ್ಕೆ ಸಾಗಿಸಿ ಸರಬರಾಜು ಮಾಡುವ ಯೋಜನೆಗಳು ಬೇಕಾಗಿಲ್ಲ. ಬದಲಾಗಿ,  ಮನೆಗಳ ಚರಂಡಿ ನೀರನ್ನು ಮತ್ತು ಕಾರ್ಖಾನೆಗಳ ಕಲುಷಿತ ನೀರನ್ನು ವಿಷರಹಿತವಾಗಿಸಿ ಅಲ್ಲಲ್ಲೇ ಮರುಬಳಕೆ ಮಾಡುವ ಯೋಜನೆಗಳು ಬೇಕಾಗಿವೆ.

ಇವೆಲ್ಲ “ಡೌನ್ ಟು ಅರ್ತ್” ಪತ್ರಿಕೆಯ ಇತ್ತೀಚೆಗಿನ ಸಂಚಿಕೆಯ ಸಂಪಾದಕೀಯದಲ್ಲಿ ಪ್ರಸ್ತಾಪಿಸಲಾದ ಅಂಶಗಳು. ನಮ್ಮೆಲ್ಲರಲ್ಲಿ ನೀರಿನ ಧೋರಣೆ ಬಗ್ಗೆ ಆಗಬೇಕಾದ ಬದಲಾವಣೆಗಳ ದಿಕ್ಸೂಚಿಗಳು.

ನೀರಿನ ಕೊರತೆಯ ಮಾತೆತ್ತಿದರೆ ಸಾಕು; ಭಾರೀ ಅಣೆಕಟ್ಟುಗಳನ್ನು ಕಟ್ಟುವ, ನೂರಾರು ಕಿಮೀ ಉದ್ದದ ಕಾಲುವೆಗಳನ್ನು ನಿರ್ಮಿಸುವ, ದೊಡ್ಡ ಗಾತ್ರದ ಪೈಪ್‍ಗಳನ್ನು ಜೋಡಿಸುವ ಪ್ರತಿಕ್ರಿಯಗಳ ಮೆರವಣಿಗೆ ಶುರು. ಇವೆಲ್ಲ ಕ್ರಿಯಾಶೀಲತೆ ಕಳಕೊಂಡ ಇಂಜಿನಿಯರಿಂಗ್ ಮನಸ್ಸುಗಳ ಪ್ರತಿಕ್ರಿಯೆಗಳು.

ನಾವೇನು ಮಾಡಬಹುದು? ಇಂತಹ ಸ್ವಯಂನಾಶದ ಯೋಚನಾಕ್ರಮದ ಸುಳಿಯಿಂದ ಹೊರಬರೋಣ. ನಮ್ಮ ಮಕ್ಕಳು-ಮೊಮ್ಮಕ್ಕಳ ಸಲುವಾಗಿ, ನಮ್ಮ ನೀರಿನ ಬಳಕೆಯ ವಿಧಾನದಲ್ಲಿ ಬದಲಾವಣೆಗಳನ್ನು ತರೋದು ನಮ್ಮ ಕೈಯಲ್ಲೇ ಇದೆ, ಅಲ್ಲವೇ?

ನೀರ ನೆಮ್ಮದಿಗೆ ಇವೆ ನೂರಾರು ದಾರಿಗಳು. ಅದಕ್ಕಾಗಿ, ನಿಮ್ಮ ಮನದಲ್ಲೊಂದಿಷ್ಟು ಜಾಗ ಕೊಡಿ.