ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೫.೦೭.೧೯೭೭ ರಿಂದ ೨೪.೦೭.೧೯೮೨

ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಫಲವಾಗಿಯೇ ರಾಷ್ಟ್ರದ ಅತ್ಯುನ್ನತ ಪದವಿಗೇರಿದ್ದು ಸಂಜೀವ ರೆಡ್ಡಿಯವರ ವೈಶಿಷ್ಟ್ಯ.

೧೯೧೩ರ ಮೇ ೧೯ನೇ ತಾರೀಖು, ಆಂಧ್ರಪ್ರದೇಶದ ಅನಂತರಪುರ ಜಿಲ್ಲೆಯ ಇಲ್ಲೂರು ಗ್ರಾಮದಲ್ಲಿ ನೀಲಂ ಸಂಜೀವರೆಡ್ಡಿಯವರ ಜನನ. ಕುಟುಂಬದ ವೃತ್ತಿ ಕೃಷಿ. ತಂದೆ ಚಿನ್ನಪ್ಪ ರೆಡ್ಡಿಯವರು ಅಖಿಲ ಭಾರತ ಕಾಂಗ್ರೆಸ್ ಸಂಸ್ಥೆಯಲ್ಲಿ (Indian National Congress) ಪ್ರತಿಷ್ಠಿತ ಸದಸ್ಯರು. ಸಂಜೀವ ರೆಡ್ಡಿಯವರು ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ಆರಂಭಿಕ ಶಿಕ್ಷಣವನ್ನೆಲ್ಲ ಮುಗಿಸಿ, ಅನಂತಪುರದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಿದರು. ೧೯೩೧ರಲ್ಲಿ ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ಕರೆ ವಿದ್ಯಾರ್ಥಿಯಾಗಿದ್ದ ಸಂಜೀವ ರೆಡ್ಡಿಯವರನ್ನು ಆಕರ್ಷಿಸಿತು. ಓದು ನಿಂತಿತು. ಚಳವಳಿಯಲ್ಲಿ ತೊಡಗಿಕೊಂಡರು. ವಿದ್ಯಾರ್ಥಿಗಳು ನಡೆಸುತ್ತಿದ್ದ ಸತ್ಯಾಗ್ರಹದಲ್ಲಿ ಭಾಗಿಯಾದರು.ಕೇವಲ ೨೦ನೆಯ ವಯಸ್ಸಿನಲ್ಲೇ ಕಾಂಗ್ರೆಸ್‌ವಲಯದಲ್ಲಿ ಒಬ್ಬ ಪ್ರಮುಖ ನೇತಾರರಾಗಿ ರೂಪುಗೊಂಡರು. ಕ್ರಮೇಣ ಕಾಂಗ್ರೆಸ್ ಸಂಸ್ಥೆಯಲ್ಲಿ ಮೇಲಕ್ಕೇರಿ, ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ೧೦ ವರ್ಷ ದುಡಿದರು. “ಭಾರತ ಬಿಟ್ಟು ತೊಲಗಿ” ಆಂದೋಳನದಲ್ಲೂ ಭಾಗವಹಿಸಿದರು.ಸತ್ಯಾಗ್ರಹ, ಪದೇಪದೇ ಸೆರೆಮನೆವಾಸ – ಇವೆರಡೂ ಸುಮಾರು ೬ ವರ್ಷಗಳ ಕಾಲ ಅವರ ಬದುಕಿನ ಅಂಗವಾಯಿತು. ಆ ಕಾಲದ ಅತ್ಯಂತ ಹಿರಿಯ ಸ್ವಾತಂತ್ರ್ಯ ವೀರರೆಲ್ಲರೂ ಸೆರೆಮನೆಯಲ್ಲಿ ಇವರ ಸಂಗಾತಿಗಳಾಗಿದ್ದರು.
೧೯೩೫ರಲ್ಲಿ ನಾಗರತ್ನಮ್ಮನವರೊಂದಿಗೆ ಅವರ ವಿವಾಹವಾಯಿತು.೧೯೪೬ರಲ್ಲಿ ಮದ್ರಾಸ್ ವಿಧಾನ ಸಭೆಯ ಸದಸ್ಯರಾದರು. ೧೯೪೭ರಲ್ಲಿ Constituent Assembly ಸದಸ್ಯರಾದರು. ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಜೀವ ರೆಡ್ಡಿಯವರನ್ನು ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಮಂತ್ರಿ ಪದವಿ ಅರಸಿ ಬಂದಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ಆಗಿನ ಮದ್ರಾಸ್ ರಾಜ್ಯದ ಮಂತ್ರಿ ಪದವಿ, ರಾಜ್ಯಸಭೆಯ ಸದಸ್ಯತ್ವ. ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿ ಪದವಿ. ಅಖಿಲಭಾರತ ಕಾಂಗ್ರೆಸ್ ಅಧ್ಯಕ್ಷ ಪದವಿ, ಕೇಂದ್ರ ಸರ್ಕಾರದಲ್ಲಿ ಮಂತ್ರಿ ಪದವಿ, ಲೋಕಸಭೆಯ ಅಧ್ಯಕ್ಷ ಪೀಠ-ಇವೆಲ್ಲವೂ ಅವರು ನಿರ್ವಹಿಸಿದ ಪ್ರಮುಖ ಹುದ್ದೆಗಳು.
೧೯೬೯ರಲ್ಲಿ ಸಂಜೀವ ರೆಡ್ಡಿಯವರು ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದರು. ಆ ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಒಂದು ಐತಿಹಾಸಿಕ ಘಟನೆ ನಡೆದುಹೋಯಿತು. ಪಕ್ಷವು ಇಂದಿರಾ ಕಾಂಗ್ರೆಸ್ (Congress I), ಸಂಘಟನಾ ಕಾಂಗ್ರೆಸ್ (Congress O) ಎಂದು ಎರಡು ಹೋಳಾಯಿತು. ರೆಡ್ಡಿಯವರು ಸಂಘಟನಾ ಕಾಂಗ್ರೆಸ್‌ನಲ್ಲಿ ಉಳಿದುಕೊಂಡರು. ರಾಷ್ಟ್ರಪತಿ ಚುನಾವಣೆಗಾಗಿ ಇವರು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರ ಅಭ್ಯರ್ಥಿಯಾದ ಶ್ರೀ ವಿ.ವಿ. ಗಿರಿಯವರ ವಿರುದ್ಧ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋತರು. ಅನಂತಪುರಕ್ಕೆ ಹಿಂದಿರುಗಿ ತಮ್ಮ ಕುಟುಂಬದ ವೃತ್ತಿಯಾದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಾಜಕೀಯವನ್ನು ಅವರು ಬಿಟ್ಟರೂ, ರಾಜಕೀಯ ಅವರನ್ನು ಬಿಡಲಿಲ್ಲ. ೧೯೭೭ರ ಸಾರ್ವತ್ರಿಕ ಚುನಾವನೆಯಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು. ಶ್ರೀಮತಿ ಇಂದಿರಾಗಾಂಧಿಯವರ ಪಕ್ಷ ತೀವ್ರವಾಗಿ ಸೋಲನ್ನು ಅನುಭವಿಸಿತು ಹಾಗೂ ಶ್ರೀ ಮೂರಾರ್ಜಿ ದೇಸಾಯವರ ಮುಖಂಡತ್ವದಲ್ಲಿ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಿತು. ಆಗ ಶ್ರೀಮಾನ ಸಂಜೀವರಡ್ಡಿಯವರು
ಸರ್ವಾನುಮತದಿಂದ ಲೋಕ ಸಭಾಧ್ಯಕ್ಷರಾದರು. ಅದೇ ವರ್ಷ ರಾಷ್ಟ್ರಪತಿ ಸ್ಥಾನಕ್ಕೆ ಎಲ್ಲ ರಾಜಕೀಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ, ಅವಿರೋಧವಾಗಿ ಆಯ್ಕೆಯಾದರು; ೧೯೭೭ರ ಜುಲೈ ೨೫ ರಂದು ರಾಷ್ಟ್ರಪತಿಯಾಗಿ ಪ್ರಮಾನ ವಚನ ಸ್ವೀಕರಿಸಿದರು.
ಸಂಜೀವ ರೆಡ್ಡಿಯವರಿಗೆ ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಅವರಲ್ಲಿ ಸ್ವಾಭಾವಿಕವಾಗಿಯೇ ಇದ್ದ ಕಾರ್ಯದಕ್ಷತೆ ಮತ್ತು ನ್ಯಾಯಪರತೆ-ಇವುಗಳು ಅವರ ಪ್ರತಿಯೊಂದು ನಿರ್ಧಾರ ಹಾಗೂ ಕಾರ್ಯಗಳಲ್ಲೂ ವ್ಯಕ್ತವಾಗುತ್ತಿತ್ತು. ಅವರು ರಾಷ್ಟ್ರಪತಿಗಳಾಗಿದ್ದ ಕಾಲದಲ್ಲಿ ಬೇರೆ ಬೇ‌ರೆ ಪಕ್ಷಗಳ ಮೂರು ಸರ್ಕಾರಗಳು ಅಸ್ತಿತ್ವಕ್ಕೆ ಬಂದವು. ಎಲ್ಲ ಪಕ್ಷಗಳೊಡನೆಯೂ ಸೌಹಾರ್ದವನ್ನು ಕಾಪಾಡಿಕೊಂಡು, ಕಠಿಣ ನಿರ್ಧಾರಗಳನ್ನು ತೆಗೆದುಕೊಂಡದ್ದು ಸಂಜೀವ ರೆಡ್ಡಿಯವರ ಕಾರ್ಯದಕ್ಷತೆಗೆ ನಿದರ್ಶನ.
ವಿಶ್ವದ ಅನೇಕ ದೇಶಗಳಿಗೆ ರೆಡ್ಡಿಯವರು ಸೌಹಾರ್ದ ಭೇಟಿ ನೀಡಿದರು. ೧೯೫೮ರಲ್ಲಿ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತು. ರಾಷ್ಟ್ರಪತಿಯಾಗಿ ಆಯ್ಕೆಯಾದ ಮೇಲೆ, ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು ಹೇಳಿದ ಮಾತುಗಳು ಅವರ ಮನೋಭಾವವನ್ನು ಬಿಂಬಿಸುತ್ತದೆ: “ಲೋಕ ಸಭಾಧ್ಯಕ್ಷರನ್ನು ನೋಡಬಹುದು. ಆದರೆ ಕೇಳಲಾಗುವುದಿಲ್ಲ; ರಾಷ್ಟ್ರಪತಿಯಾದವರನ್ನು ನೋಡಲೂ ಆಗುವುದಿಲ್ಲ. ಕೇಳಲೂ ಆಗುವುದಿಲ್ಲ. ನಾನು ನೋಡಲೂ ಆಗದ ಕೇಳಲೂ ಆಗದ, ಆದರೆ ನಿರ್ಧಾರಗಳನ್ನು ಕೈಗೊಳ್ಳುವಂತಹ ರಾಷ್ಟ್ರಪತಿಯಾಗಿರಲು ಬಯಸುತ್ತೇನೆ; ಸದ್ದಿಲ್ಲದೇ ಕೆಲಸ ಮಾಡಬಯಸುತ್ತೇನೆ.” ಎಂದು ಹೇಳಿದರು.
ಬದುಕಿನಲ್ಲಿ ಎಂತಹ ಏರು ಪೇರುಗಳು ಘಟಿಸಿದರೂ , ತಮ್ಮ ಸ್ಥಿತ ಪ್ರಜ್ಞೆಯನ್ನು ಕಾಯ್ದುಕೊಳ್ಳುವುದು ಸಂಜೀವ ರೆಡ್ಡಿಯವರ ಗುಣ. ಆಂಧ್ರಪ್ರದೇಶ ರಚನೆಗಾಗಿ ನಡೆದ ಚಳವಳಿಯಲ್ಲಿ ಪೂಟ್ಟಿ ಶ್ರೀರಾಮಲು ಆತ್ಮಾಹುತಿ ಮಾಡಿಕೊಂಡಿದ್ದು. ೧೯೬೯ರ ಕಾಂಗ್ರೆಸ್ ವಿಭಜನೆ, ರಾಷ್ಟ್ರಪತಿಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಮಗಾದ ಸೋಲು-ಇವೆಲ್ಲ ಘಟನೆಗಳೂ ತಮ್ಮ ಬದುಕಿನಲ್ಲಿ ಬಿರುಗಾಳಿಯಂತೆ ಬಂದರೂ ಅವನ್ನು ಎದುರಿಸಿ ಮಾನಸಿಕ ಸಮತೋಲವನ್ನು ಕಾಯ್ದುಕೊಂಡವರು ಸಂಜೀವ ರೆಡ್ಡಿಯವರು. ೧೯೮೭ರಲ್ಲಿ ರಾಷ್ಟ್ರಪತಿಯಾದ ಆರ್.ವೆಂಕಟರಾಮನ್ ತಮ್ಮ My Presidential Years ಪುಸ್ತಕದಲ್ಲಿ ತಮ್ಮ ಮತ್ತು ರೆಡ್ಡಿಯವರ ಮಧುರ ಬಾಂಧವ್ಯವನ್ನು ನೆನೆಸಿಕೊಂಡಿದ್ದಾರೆ. ರೆಡ್ಡಿಯವರು ಯಾವುದೇ ವಿಷಯವನ್ನಾದರೂ ಕೇವಲ ಕಾನೂನು-ಕಟ್ಟಳೆಗಳ ದೃಷ್ಟಿಯಿಂದಲ್ಲದೆ, ಒಂದು ಸಾಮಾನ್ಯ ನ್ಯಾಯದ ದೃಷ್ಷಿಯಿಂದ ನಿರ್ಧರಿಸುತ್ತಿದ್ದುದನ್ನು ಸ್ಮರಿಸಿದ್ದಾರೆ.ರೆಡ್ಡಿಯವರು ಒಬ್ಬ ಅತ್ಯಂತ ಉದಾರಿಯಾದ, ತುಂಬಾ ಸ್ನೇಹಪರರಾದ ವ್ಯಕ್ತಿ ಎಂದಿದ್ದಾರೆ.
ಸಂಜೀವ ರೆಡ್ಡಿಯವರು ೧೯೮೨ರಲ್ಲಿ ರಾಷ್ಟ್ರಪತಿಸ್ಥಾನದಿಂದ ನಿವೃತ್ತರಾಗಿ ಅನಂತಪುರದಲ್ಲಿ ನೆಲೆಸಿದರು.೧೯೯೬ರಲ್ಲಿ ಅವರು ಬೆಂಗಳೂರಿನಲ್ಲಿ ನಿಧನರಾದರು.