ಸಂಗೀತ ಸಾಧನೆ ಒಂದು ತಪಸ್ಸು-ಸಂಗೀತ ಸಾಧನೆಯ ಗುರಿ ಮುಟ್ಟುವುದು ಗುರುವಿನ ಮೂಲಕ ಮಾತ್ರ ಸಾಧ್ಯ. ಸಂಗೀತ ಹಾಡಬಲ್ಲವರಿಗೆಲ್ಲ ಸಾಧಿಸುವಂಥ ಲಘುವಾದ ಕಲೆಯಲ್ಲ. ಅದಕ್ಕಾಗಿ ಜೀವನ ಸರ್ವಸ್ವವನ್ನೂ ಅರ್ಪಿಸಿಕೊಳ್ಳಬೇಕಾಗುತ್ತದೆ. ಎದುರಾದ ಅನೇಕ ಕಷ್ಟಗಳ  ಕುಲುಮೆಯಲ್ಲಿ ಸುಟ್ಟುಕೊಂಡು ಚೊಕ್ಕ ಚಿನ್ನವಾಗಬೇಕಾಗುತ್ತದೆ. ನೀಲಕಂಠಬುವಾ ಅವರ ಜೀವನ ಇದಕ್ಕೆ ನಿದರ್ಶನವಾಗಿದೆ.

ನೀಲಕಂಠಬುವಾ ಅವರ ಪೂರ್ವಜರು ಬಿಜಾಪುರ ಜಿಲ್ಲೆಯ ಹೊಳೆ ಆಲೂರಿನ ಹಿರೇಮಠ ಮನೆತನದವರು. ಕಾರಣಾಂತರಗಳಿಂದ ಈ ಹಿರೇಮಠದವರು ಸುಮರು ೧೯ನೆಯ ಶತಮಾನದಲ್ಲಿ ಮಿರಜ್ ಪಟ್ಟಣಕ್ಕೆ ಬಂದು ನೆಲೆಸಿದರು. ಮಿರಜ್‌ ಅಂದು ಮರಾಠಿ ಸಂಸ್ಥಾನಿಕರ ಅಧೀನಕ್ಕೆ ಒಳಪಟ್ಟ ಸಂಸ್ಥಾನವಾಗಿದ್ದು ಕನ್ನಡ ಮತ್ತು ಮರಾಠಿ ಮನೆತನಗಳು ಪರಸ್ಪರ ಬಂದು ಹೋಗಿ ನೆಲೆಸುವುದು ಸಾಮಾನ್ಯ ಸಂಗತಿಯಾಗಿತ್ತು. ಹೊಳೆ ಆಲೂರಿನ ಹಿರೇಮಠದ ಶ್ರೀ ದಾನಯ್ಯನವರ ಮನೆತನ ಮಿರಜ್‌ದಲ್ಲಿ ನೆಲೆಗೊಂಡಾಗ ಅಲ್ಲಿದ್ದ ಕೆಲವು ವೀರಶೈವ ಮನೆತನಗಳ ಜನ ದಾನಯ್ಯನವರನ್ನೇ ತಮ್ಮ ಗುರುಗಳನ್ನಗಿ ಸ್ವೀಕರಿಸಿದರು. ದಾನಯ್ಯ ಮತ್ತು ಮಹಾಲಿಂಗವ್ವ ದಂಪತಿಗಳ  ಮೊದಲನೆಯ ಮಗ ಶಂಭಯ್ಯ, ಎರಡನೆಯ ಮಗನೇ ನೀಲಕಂಠಯ್ಯನಾಗಿದ್ದು ಸುಮಾರು ೧೮೬೦ರಲ್ಲಿ ಜನಿಸಿದನು. ನೀಲಕಂಠಯ್ಯ ಬಾಲ್ಯದಲ್ಲಿಯೇ ಹೆತ್ತ ತಂದೆ ತಾಯಿಗಳನ್ನು ಕಳೆದುಕೊಂಡ. ಹೀಗಾಗಿ ಹಿರಿಯಣ್ಣ ಶಂಭಯ್ಯನ ಆಸರೆಯಲ್ಲಿಯೇ ನೀಲಕಂಠಯ್ಯ ಬೆಳೆದು ದೊಡ್ಡವನಾದ. ಹೆತ್ತವರನ್ನು ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಶಂಭಯ್ಯ ಜೀವನೋಪಾಯಕ್ಕೆ ವ್ಯಾಪಾರ ಮಾಡತೊಡಗಿದ. ತನ್ನ ಸೋದರ ನೀಲಕಂಠಯ್ಯ ವಿದ್ಯಾವಂತನಾಗಬೇಕೆಂಬುದು ಶಂಭಯ್ಯನ ಹಂಬಲ. ಆದರೆ ಬಾಲ್ಯದಿಂದಲೇ ನೀಲಕಂಠಯ್ಯನಿಗೆ ಸಂಗೀತದಲ್ಲಿ ಆಸಕ್ತಿ ಒಲವುಗಳಿದ್ದವು. ಆದಾಗ್ಯೂ ಅಣ್ಣನ ಬಲವಂತಕ್ಕೆ ಶಾಲೆಗೂ ಸೇರಿದ. ಸೋನಾರಗಲ್ಲಿಯ ತಮ್ಮ ಮನೆಯಿಂದ ಶಾಲೆಗೆ ಹೋಗುವಾಗ ಬರುವಾಗ ಕೇಳಿಬರುತ್ತಿದ್ದ ಹಾರ್ಮೋನಿಯಂವಾದನ, ಸಂಗೀತ ಸಾಧನೆಯ ಸ್ವರಾಲಾಪಗಳು ನೀಲಕಂಠಯ್ಯನಿಗೆ ಹುಚ್ಚು ಹಿಡಿಸುತ್ತಿದ್ದವು. ಹಾಗೂ ಹೀಗೂ ನಾಲ್ಕನೆಯ ತರಗತಿಗೆ ಬಂದಾಗ ತರಗತಿಗಳಲ್ಲಿ ಕೂಡದೆ ಸಂಗೀತ ಪಾಠ ನಡೆದಲ್ಲಿ ಹೋಗುವುದು ಸಾಮಾನ್ಯವಾಯಿತು. ಶಂಭಯ್ಯ ಇದನ್ನು ತಿಳಿದು ನೊಂದು “ಜಂಗಮರ ಮಕ್ಕಳು ಇಂಥ ಕಲೆಗಳಲ್ಲಿ ಆಸಕ್ತಿ ತಳೆಯಬಾರದು. ಸಂಗೀತ ನಮ್ಮ ಸೊತ್ತಲ್ಲ. ವಿದ್ಯಾವಂತನಾಗಿ ದೊಡ್ಡ ನೌಕರಿ ಮಾಡಬೇಕು” ಎಂದು ಬುದ್ಧಿ ಹೇಳಿದ. ಅಣ್ಣನೆದುರಿಗೆ ಹೂಗುಡುತ್ತಿದ್ದ ನೀಲಕಂಠಯ್ಯ ಹೊರಗೆ ಹೋಗಿ ಕೇಳುತ್ತಿದ್ದುದು ಶಾಲೆಯ ಪಾಠಗಳನ್ನಲ್ಲ, ನಾದದ ಅಲೆಗಳನ್ನು. ಒಂದು ದಿನ ನೀಲಕಂಠಯ್ಯ ತನ್ನ ಸಹಪಾಠಿಯಾಗಿದ್ದ ಅಣ್ಣೂ ಈಚಲಕರಂಜೀಕರರ ಜೊತೆ ಅವರ ಮನೆಗೆ ಹೋದ. ಆ ಮನೆಯಲ್ಲಿ ನಡೆದಿದ್ದ ಸಂಗೀತ ಸಾಧನೆ ಕೇಳುತ್ತ ಮನೆಯ ಹೊರಬದಿಯ ಕಟ್ಟೆಯ ಮೇಲೆ ಮೈಮರೆತು ಕುಳಿತು ಬಿಟ್ಟ. ಅಣ್ಣೂನ ತಂದೆ ಪ್ರಸಿದ್ಧ ಗ್ವಾಲ್ಹೇರ ಘರಾಣೆಯ ಗಾಯಕರಾದ ಶ್ರೀ ಬಾಳಕೃಷ್ಣಬುವಾ ಈಚಲಕರಂಜಿಕರವರು. ಈಚಲಕರಂಜಿ ಸಂಸ್ಥಾನದಿಂದ ಮಿರಜ್‌ಗೆ ಬಂದು ನೆಲಸಿದ್ದ ಬಾಳಕೃಷ್ಣಬುವಾ ಅವರು ಮಿರಜ್‌ ಸಂಸ್ಥಾನಿಕರ ಪ್ರೋತ್ಸಾಹ, ನೆರವುಗಳಿಂದಾಗಿ ಗುರುಕುಲ ಮಾದರಿಯ ಸಂಗೀತ ಶಾಲೆಯನ್ನು ತೆರೆದಿದ್ದರು. ಸಂಗೀತ ಕಲಿಯಲು ಬಂದ ಶಿಷ್ಯರನ್ನು ತಮ್ಮಲ್ಲಿರಿಸಿಕೊಂಡು ಅವರ ಎಲ್ಲ ಹೊಣೆಹೊತ್ತು ಮಕ್ಕಳಂತೆ ಪಾಲನೆ ಮಾಡುತ್ತ ಅವರಿಗೆ ಬೆಳಿಗ್ಗೆ ಹಾಗೂ ಸಂಜೆಗೆ ನಾಲ್ಕು ತಾಸು ಸಂಗೀತ ಶಿಕ್ಷಣದ ತರಬೇತಿ ನೀಡುತ್ತಿದ್ದರು. ಮೈಮರೆತು ಸಂಗೀತ ಕೇಳುತ್ತಿದ್ದ ನೀಲಕಂಠಯ್ಯನನ್ನು ಬಾಳಕೃಷ್ಣಬುವಾ ಅವರು ನೋಡಿ ಸಂಗೀತದಲ್ಲಿಲಯ ಅವನ ಆಸಕ್ತಿ ತಾದಾತ್ಮಭಾವಗಳನ್ನು ಗಮನಿಸಿದರು. ಕೂಡಲೇ ಶಂಭಯ್ಯನನ್ನು ಕರೆಸಿ ನೀಲಕಂಠಯ್ಯನಿಗೆ ಸಂಗೀತ ಕಲಿಸುವುದಾಗಿ ಹೇಳಿದಾಗ ಶಂಭಯ್ಯನಿಗೆ ತನ್ನ ತಮ್ಮನಿಗೆ ಒದಗಿಬಂದ ದೈವಕೃಪೆ ಎನಿಸಿತು. ಇಂಥ ಪ್ರಸಿದ್ಧ ಗಾಯಕರು ನಿರಪೇಕ್ಷಭಾವದಿಂದ ಸಂಗೀತ ಕಲಿಸಲು ಒಪ್ಪಿರುವುದು ತಮ್ಮನ ಸುಕೃತವೆಂದು ಬಗೆದು ಅವರಿಗೆ ಧನ್ಯತೆಯನ್ನರ್ಪಿಸಿದ. ಅಂದಿನಿಂದ ನೀಲಕಂಠಯ್ಯ ಬಾಳಕೃಷ್ಣಬುವಾ ಅವರ ಶಿಷ್ಯನಾದ.

ಯಾವುದೇ ಶಿಷ್ಟಾಚಾರಕ್ಕೆ ಮಹತ್ವಕೊಡದ ನೀಲಕಂಠಯ್ಯ ಏಕೋಭಾವದಿಂದ ಗುರುಸೇವೆ ಮಾಡುತ್ತಿದ್ದ. ನಿಷ್ಠೆಯಿಂದ ಸಂಗೀತ ಸಾಧನೆಯಲ್ಲಿ ತೊಡಗಿದ. ಇದನ್ನು ಮನಗಂಡು ಮೆಚ್ಚಿದ ಬಾಳಕೃಷ್ಣ ಬುವಾ ಅವರು ಮುಕ್ತ ಹೃದಯದಿಂದ ತಮ್ಮಲ್ಲಿದ್ದ ಸಂಗೀತ ಭಂಡಾರವನ್ನು ತಮ್ಮ ಮಗನ ಜೊತೆಗೆ ನೀಲಕಂಠಯ್ಯನಿಗೂ ಧಾರೆಯೆರೆದರು.

ಗ್ವಾಲ್ಹೇರ ಘರಾಣೆಯ ಗಾಯಕಿಯು ಸರ್ವಾಂಗ ಪರಿಪೂರ್ಣ ಗಾಯಕಿ ಎಂದರೆ ತಪ್ಪಾಗಲಾರದು. ನೀಲಕಂಠಯ್ಯನವರು ಈ ಗಾಯಕಿಯ ವೈಶಿಷ್ಟ್ಯಗಳಾದ ಸ್ವರ ಸಾಧನೆ, ಸ್ಥಾಯಿ, ಅಂತರಾಳಗಳ ಪ್ರಭಾವಿ ರೂಪ, ಠೇಕಾ ಹಾಗೂ ಲಯಗಳೊಂದಿಗೆ ಹಂಚಿ-ಆಲಾಪದ ಪ್ರಸ್ತುತಿ, ರಾಗದ ಸ್ಪಷ್ಟರೂಪ, ಗಮಕ ಪ್ರಯೋಗದೊಂದಿಗೆ ಗಾಯನವನ್ನು ಮನೋರಂಜಕಗೊಳಿಸುವುದು, ಆರೋಹ ಅವರೋಹಗಳಲ್ಲಿಯ ಪ್ರಧಾನ ತಾನ, ಟಪ್ಪಾ-ತಾನ, ಗಮಕ-ತಾನ, ಅಲಂಕಾರಿಕ-ತಾನ, ವಿಕೃತ-ತಾನ, ಸಪಾಟ-ತಾನ, ಮೂರೂ ಸಪ್ತಕಗಳಲ್ಲಿ ತಯಾರಿ ಫಿರತ, ಖುಲ್ಲಾಧ್ವನಿಯಿಂದ ಹಾಡುವುದು, ಪ್ರತಿ-ರಾಗದಲ್ಲಿ ೨೦-೩೦ ಬಂದಿಶ್‌ಗಳನ್ನು ಹಾಡುವುದು, ಇತ್ಯಾದಿ ಗಾಯಕಿಯ ಅಂಗಗಳನ್ನು ಗುರುಮುಖದಿಂದ ಕಲಿತು ಸಂಗೀತ-ಸಿದ್ಧಿಯನ್ನು ಪಡೆದರು. ಅದರಂತೆ ಸಂಗೀತ ಶಾಸ್ತ್ರವನ್ನೂ ಆತ್ಮಸಾತ್‌ ಮಾಡಿಕೊಂಡರು. ಸುಮಾರು ಎರಡು ದಶಕಗಳ ನಿರಂತರವಾದ ಬೋಧೆ ಸಾಧನೆಯಿಂಧಾಗಿ ಆಲೂರಮಠ ನೀಲಕಂಠಯ್ಯನವರು ನೀಲಕಂಠಬುವಾ ಎಂದು ಖ್ಯಾತರಾದರು. ಗುರುಸನ್ನಿಧಿಯಲ್ಲಿ೮ ಬೆಳೆದ ನೀಲಕಂಠಯ್ಯನವರ ಕಣ್ಣೆದುರು ನಾದಲೋಕದ ನೂತನ ಕ್ಷಿತಿಜ ಗೋಚರಿಸಿತು. ನಾದದ ಅಲೆ ಹುಡುಕಿ ಹೊರಟ ನೀಲಕಂಠಯ್ಯನವರಿಗೆ ಸಂಗೀತ ಸಾಧನೆಯ ಮೂಲಕ ತಮ್ಮ ಜೀವನದ ನಿಶ್ಚಿತ ನೆಲೆ ಪ್ರಾಪ್ತವಾಗಿತ್ತು.

ಸುಮಾರು ೧೯೧೦ರಲ್ಲಿ ನೀಲಕಂಠಬುವಾ ಅವರ ಮದುವೆ ಅಥಣಿಯ ಒಂದು ಜಂಗಮ ಮನೆತನದ ಶಿವವ್ವ ಅವರೊಡನೆ ನೆರವೇರಿತು. ಶಿವವ್ವ ತಮ್ಮ ಪತಿಗೆ ತುಂಬ ಮೆಚ್ಚಿನವರಾಗಿದ್ದರು. ಆದರೆ ಈ ಸಂತೋಷ ಬಹುಕಾಲ ಉಳಿಯಲಿಲ್ಲ. ೧೯೧೪ರ ಸುಮಾರು ಶಿವವ್ವ ಹೆರಿಗೆಯ ಕಾಲದಲ್ಲಿ ಅಸುನೀಗಿದರು. ಇದು ನೀಲಕಂಠಬುವಾ ಅವರಿಗೆ ಸಹಿಸದ ಆಘಾತವಾಗಿತ್ತು. ತಮ್ಮ ಸಂಗೀತ ಸಾಧನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತ ಸಮಾಧಾನ ತಂದುಕೊಂಡರು.

ನೀಲಕಂಠಬುವಾ ಅವರ ಎದೆಯಲ್ಲಿ ಹುದುಗಿದ ಹೆಂಡತಿಯ ಸಾವಿನ ನೋವು ಸಂಗೀತವಾಗಿ ಹೊರಹೊಮ್ಮಿತು. ಎರಡು ಮೂರು ವರ್ಷಗಳ ಈ ಅವಧಿಯಲ್ಲಿ ಅವರು ಮಿರಜ್‌ದಿಂದ ಹೊರಗೆ ಉತ್ತರ ಕರ್ನಾಟಕದ ಇತರ ಭಾಗಗಳಲ್ಲಿದ್ದ ನಾಟಕ ಕಂಪನಿಗಳಿಗೆ ಸಂಗೀತ ಕಲಿಸಲು, ಹಾಡು ಕೂಡಿಸಲು ಆಗಾಗ ಹೋಗಿ ಬರುತ್ತ ಹಾಗೂ ಹೀಗೂ ಕಾಲ ಕಳೆದರು. ಗುರು ಹಿರಿಯರ, ಆಪ್ತರ ಸಲಹೆಯಂತೆ-ನೀಲಕಂಠಬುವಾ ಅವರು ೧೯೧೭ ರಲ್ಲಿ ಚಿಕ್ಕೋಡಿಯ ಕಂಬಳಿಮಠ ಮನೆತನದ ಗಂಗಮ್ಮ ಎಂಬ ಕನ್ಯೆಯನ್ನು ಮದುವೆಯಾದಾಗ ಮನೆಯಲ್ಲಿ ಮತ್ತೆ ಗೆಲುವಿನ ವಾತಾವರಣ ಮೂಡಿತು. ನಿಷ್ಕಲ್ಮಶ ನಡವಳಿಕೆ ಮತ್ತು ಸಹಜ ಒಲವಿನಿಂದ ನೀಲಕಂಠಬುವಾ ಅವರ ಹೃದಯವನ್ನು ಅರಳಿಸಿದ ಪತ್ನಿ ಗಂಗಮ್ಮನಿಂದ ಆಲೂರಮಠ ವಂಶದ ಕುಡಿಯೊಡೆಯಿತು. ಗಂಗಮ್ಮ ಮೂರು ಗಂಡು ಮಕ್ಕಳನ್ನು ಹೆತ್ತು ಬುವಾ ಅವರ ವಂಶದ ದೀಪ ಬೆಳಗಿಸಿದರು. ಆದರೆ ಕೊನೆಯ ಮಗು ಕಾಲನ ತುತ್ತಾಯಿತು. ಮನೆಯ ಅಂಗಳ ತುಂಬಿ ಬೆಳೆದ ಇಬ್ಬರು ಮಕ್ಕಳೆಂದರೆ ಚಂದ್ರಶೇಖರಯ್ಯ ಮತ್ತು ಶಂಭುಲಿಂಗಯ್ಯ. ಇಳಿವಯಸ್ಸಿನಲ್ಲಿ (೧೯೩೮-೨೯) ಈ ಮಕ್ಕಳು ಜನಿಸಿದ್ದರಿಂದ ನೀಲಕಂಠಬುವಾ ಅವರ ಸಂಗೀತ ವಿದ್ಯಾ ಇವರಿಗೆ ಹತ್ತಲಿಲ್ಲ.

ಈ ನಡುವೆ ನೀಲಕಂಠಬುವಾ ಅವರಿಗ ಆಘಾತದ ಮೇಲೆ ಆಘಾತಗಳು ಜರುಗಿದವು. ಮೊದಲ ಹೆಂಡತಿಯ ಸಾವಿನ ನಂತರ ಗಂಗವ್ವನಿಂದ ಮನೆಯು ತುಂಬಿಕೊಂಡಾಗ್ಯೂ ಸುಮಾರು ೧೯೨೦ರಲ್ಲಿ ಪ್ಲೇಗ್‌ ಹಾವಳಿಗೆ ಬುವಾ ಅವರ ಮನೆಯ ಹಿರಿಯರೆಲ್ಲಾ ತುತ್ತಾದರು. ಮನೆತನಕ್ಕೆ ಇದ್ದ ಆಸ್ತಿ ಕೇವಲ ಮೂರು ಕೂರಿಗೆ ಎರಿ-ಜಮೀನು ಮಾತ್ರ. ಮನೆಯ ಜನ, ಸ್ವತಃ ಬುವಾ ಸಹ ಸಂಗೀತ ವ್ಯವಸಾಯದೊಂದಿಗೆ ಒಮ್ಮೊಮ್ಮೆ ಹೊಲದಲ್ಲಿ ಕೆಲಸ ಮಾಡಲು ಹೋಗುತ್ತಿದ್ದರು. ಯಾಕೆಂದರೆ ಕೇವಲ ಸಂಗೀತದಿಂದ ಉಪಜೀವನ ಸಾಗಿಸುವುದು ಕಷ್ಟಸಾಧ್ಯವಾಗಿತ್ತು.

ಇದೇ ಅವಧಿಯಲ್ಲಿ ಬಾಳಕೃಷ್ಣಬುವಾ ಅವರ ಒಬ್ಬನೇ ಮಗನಾದ ಅಣ್ಣಬುವಾ ಅಕಾಲ ಮರಣಕ್ಕೀಡಾದಾಗ ಬಾಳಕೃಷ್ಣಬುವಾ ಅವರು ಈ ಆಘಾತ ಸಹಿಸಲಾಗದೆ ಮಿರಜ್‌ ಬಿಟ್ಟು ಈಚಲಕರಂಜಿಯ ಹತ್ತಿರದ ತಮ್ಮ ಮಗಳ ಮನೆಗೆ ಹೋದರು. ಬಾಳಕೃಷ್ಣಬುವಾ ಮಿರಜ್‌ದಿಂದ ಹೋದಬಳಿಕ ನೀಕಂಠಬುವಾ ಅವರಿಗೆ ದಿಕ್ಕೇ ತೋಚದಂತಾಯಿತು. ಮಿರಜ್‌ ಸಂಸ್ಥಾನಿಕರಿಂದ ದೊರೆಯುತ್ತಿದ್ದ ಅಷ್ಟಿಷ್ಟು ಸಹಾಯವೂಫ ದೊರೆಯದಂತಾಯಿತು. ನೀಲಕಂಠಬುವಾ ಅವರು ಇದರಿಂದ ಧೃತಿಗೆಡಲಿಲ್ಲ. ಪ್ರತಿಯಾಗಿ ಸಂಗೀತ ಸಾಧನೆಯ ದಾರಿಯಲ್ಲಿ ಮತ್ತಷ್ಟು ಗಟ್ಟಿಯಾಗಿ ಮುನ್ನಡೆಯುವ ಸಂಕಲ್ಪ ಮಾಡಿದರು. ಧಾರ್ಮಿಕ ಕ್ರಿಯಾಚರಣೆ ಹಾಗೂ ಸಂಗೀಥ ಸೇವೆ ಎರಡರಲ್ಲೂ ಎಳ್ಳಷ್ಟೂ ಕುಂದುತಾರದೆ ತಮ್ಮ ಭವಿಷ್ಯ ರೂಪಿಸಿಕೊಂಡರು.

೧೯೨೦ರಲ್ಲಿ ನೀಲಕಂಠಬುವಾ ಅವರಿಗೆ ಹಾವೇರಿಯ ಹುಕ್ಕೇರಿ ಮಠದ ಶ್ರೀ ಶಿವಬಸವ ಸ್ವಾಮಿಗಳ ಪರಿಚಯವಾಯಿತು. ಈ ಆಕಸ್ಮಿಕ ಪರಿಚಯ ಸ್ನೇಹದಲ್ಲಿ ಅರಳಿತು. ಶ್ರೀಗಳು ನೀಲಕಂಠಬುವಾ ಅವರ ಸಂಗೀತವನ್ನು  ತುಂಬ ಮೆಚ್ಚಿಕೊಂಡರು. ನೀಲಕಂಠಬುವಾ ಅವರ ಸಂಗೀತ ಕಲೆ ಮಿರಜ್‌ದಲ್ಲಿಯ ಒಂದು ಪುಟ್ಟ ಶಾಲೆಗೆ ಸೀಮಿತವಾಗಬಾರದು, ಇವರಿಗೊಂದು ಒಳ್ಳೆಯ ಸ್ಥಾನ ಮತ್ತು ಉತ್ತಮ ಶಿಷ್ಯರನ್ನು ದೊರಕಿಸಿಕೊಡಬೇಕೆಂಬುದು ಶ್ರೀಗಳ ಹಂಬಲ. ರ್ಶರೀಗಳು ನೀಲಕಂಠಬುವಾ ಅವರನ್ನು ಒಮ್ಮೆ ಶಿವಯೋಗ ಮಂದಿರಕ್ಕೆ ಶ್ರೀ ಕುಮರ ಸ್ವಾಮಿಗಳೆಡೆಗೆ ಕರೆದುಕೊಂಡು ಹೋದರು. ಕುಮಾರಸ್ವಾಮಿಗಳ ಕೃಪಾಕಟಾಕ್ಷದಲ್ಲಿ ಕಾಡಶೆಟ್ಟಿ ಹಳ್ಳಿಯ, ಸುಶ್ರಾವ್ಯ ಕಂಠ ಹೊಂದಿದ್ದ ಹುಟ್ಟುಗುರುಡ ಗದಿಗೆಯ್ಯನು ಬೆಳೆಯುತ್ತಿದ್ದನು. ಕುಮಾರಸ್ವಾಮಿಗಳು ಗದಿಗೆಯ್ಯನನ್ನು ಮೈಸೂರಿಗೆ ಕಳಿಸಿ ಆಗಲೇ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿಸಿದ್ದರು. ಗದಿಗೆಯ್ಯನಿಗೆ ಹಿಂದುಸ್ತಾನಿ ಸಂಗೀತ ಕಲಿಸಬೇಕೆಂದು ಸ್ವಾಮಿಗಳಿಗೆ ಮನಸ್ಸಾಯಿತು. ಹೀಗಾಗಿ ಶ್ರೀಗಳು ನೀಲಕಂಠಬುವಾ ಅವರಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಸ್ವಾಮಿಗಳ ಇಚ್ಛೆಯಂತೆ ನೀಲಕಂಠಬುವಾ ಗದಿಗೆಯ್ಯನಿಗೆ ಹಿಂದುಸ್ತಾನಿ ಸಂಗೀತ ಕಲಿಸಲು ಒಪ್ಪಿದರು. ಶ್ರೀ ಕುಮಾರ ಶಿವಯೋಗಿಗಳು ನೀಲಕಂಠಬುವಾ ಅವರ ಸುಪರ್ದಿಗೆ ಒಪ್ಪಿಸಿದ ಯುವಕ ಚರಂತಿಮಠ ಗದಿಗೆಯ್ಯನೇ ಕರ್ನಾಟಕದ ಸಂಗೀತ-ಪ್ರಪಂಚದಲ್ಲಿ ಅಂಧರ ಬಾಳಿಗೆ ಬೆಳಕನ್ನು ನೀಡಿ ಸಂಗೀತ ಧಾರೆಯನ್ನೆರೆಯುವ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿದ, ಅಭಿಜಾತ ಸಂಗೀತ ಕಲಾ ನಿಪುಣರೆಂದು ಖ್ಯಾತಿ ಪಡೆದ ಗದುಗಿನ ಪಂಚಾಕ್ಷರಿ ಗವಾಯಿಗಳು. ಪಂಚಾಕ್ಷರಿಬುವಾ ಅವರ ಸಂಗೀತ ಶ್ರದ್ಧೆಯಿಂದ ಪ್ರಸನ್ನರಾದ ನೀಲಕಂಠಬುವಾ ತಮಗೆ ತಿಳಿದ ಗ್ವಾಲ್ಹೇರ ಘರಾಣೆಯ ನೂರಾರು ಚೀಚ್‌ಗಳನ್ನು ಪಂಚಾಕ್ಷರಿಬುವಾ ಅವರಿಗೆ ಕಲಿಸಿ ಪ್ರತಿಯೊಂದರ ವೈಶಿಷ್ಟ್ಯವನ್ನು ಮತ್ತೆ ಮತ್ತೆ ಸಾಧನೆ ಮಾಡಿಸಿದರು.

ಈ ಅವಧಿಯಲ್ಲಿ ನೀಲಕಂಠಬುವಾ ಅವರಿಗೆ ಶಿವಯೋಗ ಮಂದಿರಕ್ಕೆ ಬರುತ್ತಿದ್ದ ಉತ್ತರ ಕರ್ನಾಟಕ ಮಠಾಧೀಶರ ಪರಿಚಯವಾದಂತೆ ಕೆಲವು ನಾಟಕ ಕಂಪನಿ ಮಾಲೀಕರ ಪರಿಚಯವೂ ಆಯಿತು. ಕೆಲವರು ತಮ್ಮ ನಾಟಕ ಕಂಪನಿಗಳ ಪಾತ್ರಧಾರಿಗಳಿಗೆ ಹಾಡು ಕೂಡಿಸಿಕೊಡಲು ಹಾಗೂ ಸಂಗ ಈತ ಹೇಳಿಕೊಡಲು ನೀಲಕಂಠಬುವಾ ಅವರನ್ನು ವಿನಂತಿಸಿದರು.

ಪಂಚಾಕ್ಷರಿ ಗವಾಯಿಗಳಿಗೆ ಸಂಗೀತ ಹೇಳಿಕೊಟ್ಟ ನಂತರ ಉತ್ತರ ಕರ್ನಾಟಕದ ಯಾವುದಾದರೂ ಒಂದು ಊರಲ್ಲಿ ಸಂಗೀತ ಶಾಲೆ ಪ್ರಾರಂಭಿಸಬೇಕೆಂಬುದು ನೀಲಕಂಠಬುವಾ ಅವರ ಸಂಕಲ್ಪವಾಗಿತ್ತು. ಆದರೆ ಅದು ಈಡೇರಲಿಲ್ಲ. ಆದ್ದರಿಂದ ಅವರು ಮೀರಜದಲ್ಲಿಯೇ ಸಂಗೀತ ಶಾಲೆ ಆರಂಭಿಸಿ ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಟ್ಟರು. ಆಶ್ರಮದಲ್ಲೆ ವಾಸಿಸುತ್ತಿದ್ದ ಬಸವರಾಜ ರಾಜಗುರು ಅವರು ಪಂಚಾಕ್ಷರಿ ಗವಾಯಿಗಳಿಗೆ ಕಲಿಸುವಾಗ ತಾವೂ ಕಲಿಯುತ್ತಿದ್ದರು.

ಕೆಲದಿನಗಳ ನಂತರ ನೀಲಕಂಠಬುವಾ ಅವರಿಗೆ ಬಾಲಕೃಷ್ಣಬುವಾ ಅವರಿಂದ ಪತ್ರ ಬಂದಿತು. ವೃದ್ಧಾಪ್ಯದ ಒತ್ತಡ ಬಡತನದ ಬವಣೆಯ ಬಗ್ಗೆ ಬರೆದಿದ್ದ ಆ ಪತ್ರವನ್ನು ಓದಿ ನೀಲಕಂಠಬುವಾ ಅವರ ಮನ ನೊಂದಿತು. ಕೂಡಲೇ ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದೊಂದಿಗೆ ಈಚಲಕರಂಜಿಗೆ ಹೋದರು. ಬಾಲಕೃಷ್ಣಬುವಾ ಅವರು ತಮ್ಮ ಮಗಳ ಮನೆಯ ಅಂಗಳದಲ್ಲಿ ತುಳಸಿ ಕಟ್ಟೆಯ ಬದಿಯ ಒಂದು ಮರದ ಕೆಳಗೆ ಹರಿದ ಚಾಪೆಯ ಮೇಲೆ ಮಲಗಿದ್ದರು. ಗುರುಗಳ ಸ್ಥಿತಿ ಕಂಡು ನೀಲಕಂಠಬುವಾ ಅವರು ಮರುಗಿದರು. ಗುರು-ಶಿಷ್ಯರು ಒಬ್ಬರನ್ನೊಬ್ಬರು ತಬ್ಬಿಕೊಂಡು ಗಳಗಳನೆ ಅತ್ತರು. ಇಂಥ ಸ್ಥಿತಿಯಲ್ಲಿ ಗುರುಗಳಿಗೆ ತಾನು ಏನು ಸಹಾಯ ಮಾಡಬಲ್ಲೆನೆಂದು ನೀಲಕಂಠಬುವಾ ಯೋಚಿಸಿದಾಗ ಥಟ್ಟನೆ ಅವರಿಗೆ ಆ ಸಂದರ್ಭಕ್ಕೆ ನೆನಪಾದುದು ತಮ್ಮ ಕೊರಳೊಳಗಿದ್ದ ಬಂಗಾರದ ಗುಂಡುಗಡಿಗೆ. ಅದನ್ನೇ ನೇರವಾಗಿ ಕೊಟ್ಟರೆ ಗುರುಗಳು ಸ್ವೀಕರಿಸಲಾರರೆಂದು ತಿಳಿದು ಅದನ್ನು ಮಾರಿ ಬಂದ ಹಣವನ್ನು ಗುರುಗಳಿಗೆ ಕೊಟ್ಟು ಮಿರಜಕ್ಕೆ ಮರಳಿ ಬಂದರು. ನೀಲಕಂಠಬುವಾ ಅವರು ಮಿರಜಿಗೆ ಹಿಂತಿರುಗಿದ ಕೆಲವೇ ದಿನಗಳಲ್ಲಿ ಬಾಳಕೃಷ್ಣಬುವಾ ಕೈಲಾಸವಾಸಿಗಳಾದರೆಂಬ ಪತ್ರ ಬಂದಿತು. ಕೂಡಲೇ ಈಚಲಕರಂಜಿಗೆ ಹೋಗಿ ಗುರುಗಳ ಅಂತಿಮ ದರ್ಶನ ಪಡೆದುಕೊಂಡು ಬಂದರು.

ನೀಲಕಂಠಬುವಾ ಅವರಲ್ಲಿಗೆ ಶಾಸ್ತ್ರೀಯ ಸಂಗೀತ ಕಲಿಯಬಂದವರಲ್ಲಿ ಗುಣಬುವಾ ಗೋಂದಲಿ, ಮಂಗಳೂರಿನ ಇಬ್ಬರು ಶ್ರೀಮಂತ ವ್ಯಾಪಾರಿ ಬಂಧುಗಳು, ಎಲ್ಲೂಬಾಯಿ ಮಾನೆ, ಮಥುರಾಬಾಯಿ, ಗೋವಾದ ದೇವಿ ನಾಯ್ಕಿಣಿ, ಮಿರಜ್‌ ಹತ್ತಿರದ ಮೆಹತಾಬ್‌ ಜಾನ್‌ ಮುಂತಾದವರು ಮುಖ್ಯರು. ಇವರ ಶಿಷ್ಯರಾದ ಪಾಂಡೋಬಾ ಮಾಸ್ತರರು ನಾಟಕ ಕಂಪನಿಯಲ್ಲಿ ಸಂಗೀತ ಶಿಕ್ಷಕರಾಗಿದ್ದರು. ಕೆಲವು ಸಲ ಸಂಗೀತ ನಿರ್ದೇಶನ ಹಾಗೂ ತಾಲೀಮಿಗಾಗಿ ನಾಟಕ ಕಂಪನಿಯವರು ತಿಂಗಳು ಎರಡು ತಿಂಗಳ ಮಟ್ಟಿಗೆ ನೀಲಕಂಠಬುವಾ ಅವರನ್ನು ಕರೆಸುತ್ತಿದ್ದರು. ಒಮ್ಮೆಮ್ಮೆ ತಮ್ಮ ಶಿಷ್ಯರು ಕಲಿಸುತ್ತಿದ್ದ ಕಂಪನಿ ನಾಟಕಗಳನ್ನು ನೋಡಲೂ ಹೋಗುತ್ತಿದ್ದರು. ಒಮ್ಮೆ ವಾಮನರಾಯರ ವಿಶ್ವಗುಣಾದರ್ಶ ನಾಟಕ ಕಂಪನಿಯಲ್ಲಿ ಸಂಗೀತ ಮಾಸ್ತರರಾಗಿದ್ದ ಪಾಂಡೋಬಾ ಅವರ ಮುಖಾಂತರ ಬಾಲ ನಟ ಮನ್ಸೂರ ಮಲ್ಲೇಶಪ್ಪನ ಸಂಗೀತ ಕೇಳಿ ಅತೀವ ಸಂತಸದಿಂದ ಈತನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ತಮ್ಮಲ್ಲಿದ್ದ ಎಲ್ಲ ಸಂಗೀತ ಕಲೆಯನ್ನು ನಿರ್ವಂಚನೆಯಿಂದ ಈತನಿಗೆ ಧಾರೆ ಎರೆಯುವ ಸಂಕಲ್ಪ ಮಾಡಿದರು. ಗ್ವಾಲ್ಹೇರ ಘರಾಣೆಯ ಸಂಗೀತ ಕಲಿಯಬಲ್ಲ ಶಿಷ್ಯ ದೊರೆತಾನೇ ಎಂದು ಹಂಬಲಿಸುತ್ತಿದ್ದ ನೀಲಕಂಠಬುವಾ ಅವರನ್ನು ಮನ್ಸೂರ ಮಲ್ಲೇಶಪ್ಪ ಮನಸೂರೆಗೊಂಡಿದ್ದ. ನಂತರ ಬಾಲಕ ಮಲ್ಲೇಶಿಯನ್ನು ಸಂಗೀತ ಕಲಿಸಲೆಂದೇ ತಮ್ಮ ಜೊತೆಗೆ ಕರೆದೊಯ್ಡು ಮನೆಯಲ್ಲಿಟ್ಟುಕೊಂಡು ಮಗನಂತೆ ಪ್ರೀತಿಯಿಂದ ಸಂಗೀತ ಧಾರೆಯೆರೆದು ಸಂಗೀತದ ಅನರ್ಘ್ಯ ರತ್ನವನ್ನಾಗಿ ಮಾಡಿದರು. ಈ ಮಲ್ಲೇಶಿಯೇ ಮುಂದೆ ಡಾ. ಮಲ್ಲಿಕಾರ್ಜುನ ಮನ್ಸೂರರಾಗಿ ಅವರ ಶಿಷ್ಯರಲ್ಲಿ ಅಗ್ರಮಾನ್ಯರೆನಿಸಿದರು.

ಒಬ್ಬ ಸಂಗೀತ ಕಲಾವಿದನ ಜೀವನದಲ್ಲಿ ಆರಂಭದ ಕಾಲ ಅತ್ಯಂತ ಮಹತ್ವದ ಕಾಲ ಎನ್ನುವುದು ವಿವಾದಾತೀತ. ಸಂಗೀತ ಕಲೆ ರೂಪುಗೊಳ್ಳುವ ಕಾಲಾವಧಿ ಅದು. ಸ್ವರವಿನ್ಯಾಸ, ಲಯಕಾರಿ, ಸ್ವರಶುದ್ಧತೆ ಕ್ರಮವಾಗಿ ನೆಲೆಗೊಳ್ಳುವುದು ಅದೇ ಕಾಲದಲ್ಲಿ. ಇದರಿಂದ ಸಂಗೀತ ನಿಷ್ಕಳಂಕವಾಗಿ ರಸಪರಿಪೂರ್ಣವಾಗುತ್ತದೆ. ಇವೇ ಮುಂದಿನ ಸಂಗೀತ ಕಲಾವಿಕಾಸಕ್ಕೆ ಮೂಲದ್ರವ್ಯ, ಪ್ರಬಲ ಪ್ರೇರಣೆಗಳಾಗುತ್ತವೆ. ಮಲ್ಲಿಕಾರ್ಜುನ ಮನ್ಸೂರರಿಗೆ ನೀಲಕಂಠಬುವಾ ಅವರಂತ ಅಪ್ರತಿಮ ಸಂಗೀತಗಾರರು ಗುರುಗಳಾಗಿ ದೊರೆತುದು ಅವರ ಸುದೈವ. ಸುಮಾರು ಆರು ವರ್ಷಗಳ ಕಾಲದ ತರಬೇತಿಯಲ್ಲಿ ಮನ್ಸೂರರನ್ನು ಉಚ್ಚಮಟ್ಟದ ಗಾಯಕರನ್ನಾಗಿ ರೂಪಿಸಿದರು. ನೀಲಕಂಠಬುವಾ ಅವರದು ಸಿದ್ಧ ಸಂಗೀತ. ಅವರು ಕಲಿಸುತ್ತಿದ್ದ ಪದ್ಧತಿಯೂ ಅಪರೂಪದ್ದು. ರಾಗದ ವೈಶಿಷ್ಟ್ಯಗಳನ್ನು ಲಯಕಾರಿಯ ಚೌಕಟ್ಟಿನಲ್ಲಿ ಹಾಡಲು ಕಲಿಸುತ್ತಿದ್ದರು. ಬೇರೆ ಬೇರೆ ತಾಳಗಳ ಟೇಕಾ ಕೈಯಲ್ಲಿ ತಬಲಾ ನುಡಿಸುತ್ತಾ ಬೇರೆ ಬೇರೆ ಚೀಜುಗಳ ಅಭ್ಯಾಸ ಮಾಡಿಸುತ್ತಿದ್ದರು. ಅವರ ಧ್ವನಿ ಮಧುರ ಸುರೇಲವಾಗಿದ್ದು ತಾಲ ಬದ್ಧವಾದ ಚೀಚಿನ ರಾಗವಿಸ್ತಾರವನ್ನು ಲೀಲಾಜಾಲವಾಗಿ ಮಾಡುತ್ತಿದ್ದರು.

ನೀಲಕಂಠಬುವಾ ಅವರನ್ನು ಸಂಗೀತ ಭಂಡಾರಿ ಎಂದು ಕರೆಯುವಷ್ಟು ಅವರಲ್ಲಿ ಚೀಜುಗಳ ಸಂಗ್ರಹವಿತ್ತು. ಅವರಿಗೆ ಸುಮರು ಎರಡು ಸಾವಿರ ಚೀಜುಗಳ ಪ್ರದರ್ಶನ ಸಾಮರ್ಥ್ಯವಿತ್ತು. ಯಾವ ಚೀಜು ಹಾಡಿದರೂ ಲಯಕಾರಿ ಕೆಡುತ್ತಿದ್ದಿಲ್ಲ. ತಾಳ ತಪ್ಪುವಂತಿಲ್ಲ. “ತಾಲ್ ಗೆಯೆ ತೊ ಬಾಲ್‌ಗಯೆ” ಎನ್ನುವ ಪೂರ್ವ ಗಾಯಕರ ಮಾತನ್ನು ಯಾವಾಗಲೂ ಗಮನವಿಟ್ಟು ಹಾಡಬೇಕೆಂದು ಹೇಳುತ್ತಿದ್ದರು. ಹೋರಿ, ಟಪ್ಪಾ, ಖ್ಯಾಲಗಳನ್ನು ಪ್ರೌಢ ಗಾಯಕಿಯಲ್ಲಿ ಹಾಡುವ ಹಿರಿಮೆ ಅವರದಾಗಿತ್ತು. ಅನೇಕ ಪ್ರಚಲಿತ. ಅಪ್ರಚಲಿತ ರಾಗ ರಾಗಿನಿಗಳ ಸಂಚಯವು ಅವರ ಸೊತ್ತಾಗಿತ್ತು. ಸ್ವರಗಳ ಮೇಲೆ ನಿಯಂತ್ರಣವಿಟ್ಟು ಹಾಡಿದಾಗ ರಾಗದ ರೂಪುರೇಷೆ ಶ್ರೋತೃವಿನ ಅನುಭವಕ್ಕೆ ಬರುತ್ತಿತ್ತು. ಅವರ ಈ ಸ್ವರ ವೈಶಿಷ್ಟ್ಯ ರಾಗ ಸೃಷ್ಟಿಯ ಅದ್ಭುತ ಗುಣವೆನಿಸಿತ್ತು. ಒಂದೇ ರಾಗದಲ್ಲಿ ನಲವತ್ತು-ಐವತ್ತು ಚೀಜುಗಳನ್ನು ಬೇರೆ ಬೇರೆ ತಾಳಗಳಲ್ಲಿ ಹಾಡುವ ಸಾಮರ್ಥ್ಯವಿತ್ತು. “ಏನಾದರೂ ಒಂದಿಷ್ಟು ಸಂಗೀತ ತನಗೆ ಬರುತ್ತಿದ್ದರೆ ಅದು ಗುರುಗಳ ಪುಣ್ಯದಿಂದಲೇ, ಅವರು ಸಂಗೀತದ ಸಮುದ್ರ, ನಾನು ಅದರಲ್ಲಿಯ ನಾದ ಬಿಂದು ಮಾತ್ರ, ಅವರ ಹೆಸರು ಹೇಳಿ ತಂಬೂರಿ ಹಿಡಿಯಬೇಕು, ದೀಪಾ ಹಚ್ಚಬೇಕು” ಎಂದು ಹೇಳುವ ನೀಲಕಂಠಬುವಾ ಅವರ ಗುರುಭಕ್ತಿ ಅವರ ಘನ ವ್ಯಕ್ತಿತ್ವವನ್ನು ಎತ್ತಿ ತೋರುತ್ತದೆ.

ಸಂಗೀತ ಕಲೆಯನ್ನು ಒಂದು ನಾದಯೋಗದಂತೆ ಸಾಧಿಸಿಕೊಂಡ ನೀಲಕಂಠಬುವಾ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿಯೂ ಪರಿಣತರಾಗಿದ್ದರು. ಕೆಲವೊಮ್ಮೆ ನಾಟಕ ಕಂಪನಿಗಳೂ ಅವರಿಗೆ ಇಂಥ ಪ್ರಯೋಗರಂಗವಾಗಿ ಪ್ರೇರಣೆ ನೀಡಿದವು.

ನೀಲಕಂಠಬುವಾ ಅವರು ಕೆಲವರ್ಷ ನಾಟಕ ಕಂಪನಿಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮೊಗಲಾಯಿ ಕಂಪನಿ ಎಂದೇ ಹೆಸರಾಗಿದ್ದ ಬನ್ನಿಕೊಪ್ಪದ ಯರಾಸಿ ಭರಮಪ್ಪನವರ ವಾಣಿವಿಲಾಸ ನಾಟಕ ಕಂಪನಿಯಲ್ಲಿ ನೀಲಕಂಠಬುವಾ ಅವರು ತಮ್ಮ ಶಿಷ್ಯ ಮಲ್ಲಿಕಾರ್ಜುನ ಮನ್ಸೂರರೊಂದಿಗೆ ಇದ್ದರು. ೧೯೩೦-೩೧ರ ಸುಮಾರಿಗೆ ಕಂಪನಿ ಕಾರಣಾಂತರಗಳಿಂದ ಮುಚ್ಚಿತು. ಆಗ ನೀಲಕಂಠಬುವಾ ಅವರು ತಮ್ಮ ಶಿಷ್ಯನೊಂದಿಗೆ ಧಾರವಾಡದ ಶ್ರೀಪಾದರಾವ ಜೋಶಿಯವರ ಮನೆಯಲ್ಲಿ ಇದ್ದರು. ಸಂಗೀತ ತಜ್ಞರಾದ ಶ್ರೀಪಾದರಾವ ಜೋಶಿಯವರು ನೀಲಕಂಠಬುವಾ ಅವರನ್ನು ಗುರುಗಳೆಂದು ಸ್ವೀಕರಿಸಿದರು.

ನೀಲಕಂಠಬುವಾ ಅವರ ಶಿಷ್ಯರಲ್ಲಿ ಪಂಚಾಕ್ಷರ ಗವಾಯಿ, ಡಾ. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಶ್ರೀಪಾದರಾವ ಜೋಶಿ, ಪಾಂಡೋಬಾ ಮಾಸ್ತರ, ಆರ್.ಕೆ. ಬಿಜಾಪುರೆ, ಕೃಷ್ಣಾಬಾಯಿ ರಾಮದುರ್ಗ, ಕೃಷ್ಣಾಜಿ ಪವಾರ, ಒಂಟಮುರಿ ತಮ್ಮಣ್ಣ ಮುಂತಾದವರು ಉಲ್ಲೇಖನೀಯರಾಗಿದ್ದಾರೆ.

ನೀಲಕಂಠಬುವಾ ಅವರು ಧಾರವಾಡದಲ್ಲಿ ಕೆಲದಿನ ಇದ್ದು ನಂತರ ಮೀರಜಕ್ಕೆ ಹೋದರು. ಅಗಲೇ ಅವರಿಗೆ ವಯಸ್ಸಾಗಿತ್ತು. ವೃದ್ಧಾಪ್ಯದಲ್ಲಿ ಸರ್ವಾಂಗವಾತ ರೋಗವು ಅಂಟಿಕೊಂಡಿತು. ಸಾವು ಬದುಕಿನ ಜೊತೆ ಹೋರಾಟ ನಡೆಸಿ ೧೯೩೫ರಲ್ಲಿ ಶಿವಾಧೀನರಾದರು. ಕರ್ನಾಟಕದಲ್ಲಿ ಗ್ವಾಲ್ಹೇರ ಘರಾಣೆಯ ಬೀಜ ಅಂಕುರಿಸಿ ಅನೇಕ ಗಾಣರತ್ನಗಳನ್ನು ರೂಪಿಸಿದ ಶ್ರೇಯಸ್ಸು ನೀಲಕಂಠಬುವಾ ಅವರಿಗೆ ಸಲ್ಲುವುದು.

ಗ್ರಂಥಖುಣ

ನೀಲಕಂಠಬುವಾ: ದೇವೇಂದ್ರ ಕುಮಾರ ಹಕಾರಿ

ನನ್ನ ರಸಯಾತ್ರೆ: ಡಾ. ಮಲ್ಲಿಕಾರ್ಜುನ ಮನ್ಸೂರ.