ಬ್ರಿಟಿಷ್ ಪ್ರಭುತ್ವವನ್ನೇ ತಳಮಳಗೊಳಿಸಿದ ನೀಲಕಂಠ ಬ್ರಹ್ಮಚಾರಿ ಅವರ ಜೀವನ ಕತೆ, ದಕ್ಷಿಣ ಭಾರತದ ಕ್ರಾಂತಿಕಾರಿ ಚಳವಳಿಯ ಕತೆಯೊಂದಿಗೆ ಹಾಸುಹೊಕ್ಕಾಗಿದೆ.

ಬಾಲ್ಯ

ನೀಲಕಂಠರ ಜನನ ೧೮೮೯ನೇ ಡಿಸೆಂಬರ್ ೪ ರಂದು ಆಗಿನ ಮದರಾಸ್ ಪ್ರಾಂತದ ತಂಜಾವೂರು ಜಿಲ್ಲೆ ಶಿರ್ಕಾಲಿ ಪಟ್ಟಣದ ಮನೆಯೊಂದರಲ್ಲಿ. ಅವರ ತಂದೆ ಶಿವರಾಮಕೃಷ್ಣ ಅಯ್ಯರ್, ತಾಯಿ ಸುಬ್ಬುಲಕ್ಷ್ಮಿ. ಇವರು ಸರಳ ಸ್ವಭಾವದವರು. ಧರ್ಮಶೃದ್ಧೆಯುಳ್ಳವರು, ಮಹಾದೈವಭಕ್ತರು. ಶಿವರಾಮಕೃಷ್ಣ ಅಯ್ಯರ್ ಅವರು ಶಿರ್ಕಾಲಿ ಸಮೀಪ ಇರಕ್ಕೂರು ಗ್ರಾಮದಲ್ಲಿನ ಪ್ರಮುಖ ಜಮೀನ್ದಾರರು. ಅವರಿಗೆ ಮೂವರು ಗಂಡುಮಕ್ಕಳು ಮತ್ತು ಐದು ಮಂದಿ ಪುತ್ರಿಯರಿದ್ದರು. ಇವರಲ್ಲಿ ನೀಲಕಂಠರೇ ಮೊದಲನೆಯವರು.

ನೀಲಕಂಠರು ತಮ್ಮ ಬಾಲ್ಯವನ್ನು ಹಳ್ಳಿಯ ವಾತಾವರನದಲ್ಲಿ ಕಳೆದರು. ಶಿರ್ಕಾಲಿಯಲ್ಲೇ ಅವರ ವಿದ್ಯಾಭ್ಯಾಸ ಆರಂಭವಾಯಿತು. ಆದರೆ, ಪ್ರೌಢಶಾಲೆಗೆ ಅವರ ಶಿಕ್ಷಣ ನಿಂತಿತು. ಹೇಳದೆ ಕೇಳದೆಯೆ ಒಂದು ದಿನ ಮನೆಯಿಂದ ಹೊರಬಿದ್ದರು. ಅಲ್ಲಿ ಇಲ್ಲಿ ಅಲೆದಾಡಿದರು. ಕೊನೆಗೆ ತಿರುವನಂತಪುರ ತಲುಪಿದರು. ಆಗ ತಿರುವನಂತಪುರ ತಿರುವಾಂಕೂರು ರಾಜ್ಯದ ರಾಜಧಾನಿಯಾಗಿದ್ದಿತು. ಅನ್ನದಾನ ಮಾಡುವುದರಲ್ಲಿ ಆ ರಾಜ್ಯದ ಅರಸರು ಹೆರಾಗಿದ್ದರು. ನೀಲಕಂಠರು ಅಲ್ಲಿನ ಅನ್ನ ಛತ್ರದಲ್ಲಿ ಊಟಮಾಡಿಕೊಂಡು ಒಂದು ವರ್ಷಕಾಲ ಕಳೆದರು. ಆ ಜೀವನ ಅವರಿಗೆ ಒಗ್ಗಲಿಲ್ಲ. ಒಂದು ವರ್ಷದ ನಂತರ ಮನೆಗೆ ವಾಪಸ್ಸಾದರು. ಮಗನ ಆಸೆ ತೊರೆದಿದ್ದ ತಂದೆ ತಾಯಿಗಳಿಗೆ ನೀಲಕಂಠರ ಆಗಮನದಿಂದ ಅಪಾರ ಸಂತೋಷವಾಯಿತು.

ಇರುಕ್ಕೂರಿಗೆ ಬಂದ ನೀಲಕಂಠರು ಊರಿನಲ್ಲಿ ತಮ್ಮ ಜಮೀನಿನ ಕೆಲಸ ಕಾರ್ಯಗಳಲ್ಲಿ ನೆರವಾದರು. ಸ್ವಲ್ಪ ಸಮಯದ ನಂತರ ಅವರಿಗೆ ವ್ಯವಸಾಯ ಕೆಲಸ ಸರಿ ಕಾಣಲಿಲ್ಲ. ಪುನಃ ಅವರು ಮನೆಬಿಟ್ಟು ತೆರಳಿದರು. ಈ ಸಾರಿ ಅವರು ಬಂದಿದ್ದು ಮದರಾಸಿಗೆ.

ಸಹಕಾರ ಸಂಘದ ನೌಕರ

ನೀಲಕಂಠ ೧೯೦೬ ರಲ್ಲಿ ಮದರಾಸಿಗೆ ಬಂದರು. ನಗರ ಜೀವನಕ್ಕೆ ಅವರು ತೀರ ಹೊಸಬರಾಗಿದ್ದರು. ಜೇಬಿನಲ್ಲಿ ಇದ್ದ  ಸ್ವಲ್ಪ ಹಣ ಕೆಲವೇ ದಿನಗಳಲ್ಲಿ ಖರ್ಚಾಯಿತು. ಹೊಟ್ಟೆ ತುಂಬಿಸಿಕೊಳ್ಳಲು ಯಾವುದಾದರೊಂದು ಕೆಲಸ ಹುಡುಕುವುದು ಅನಿವಾರ್ಯವಾಯಿತು. ಪ್ರಮುಖ ಸಂಸ್ಥೆಯಾಗಿದ್ದ ಟ್ರಪ್ಲಿಕೇನ್ ಸಹಕಾರ ಸಂಘದ ದಾಸ್ತಾನು ಮಳಿಗೆಯಲ್ಲಿ  ಗುಮಾಸ್ತೆ ಕೆಲಸಕ್ಕೆ ಸೇರಿದರು. ಅದು ಅಕ್ಕಿಯಿಂದ ಹಿಡಿದು ಸಾಂಬಾರು ಪದಾರ್ಥಗಳವರೆಗೆ, ಸೋಪು, ಸಕ್ಕರೆ, ಕಾಫಿಬೀಜ ಹೀಗೆ ಎಲ್ಲಾ ಪದಾರ್ಥಗಳನ್ನು ಮಾರಾಟ ಮಾಡುವ ಸಹಕಾರ ಸಂಗವಾಗಿತ್ತು. ಉನ್ನತ ಅಧಿಕಾರಿಗಳು ನೀಲಕಂಠರ ಕಾರ್ಯದಕ್ಷತೆ, ನಿಷ್ಠೆಗಳನ್ನು ಮೆಚ್ಚಿಕೊಂಡರು. ನಿಲಕಂಠರಿಗೆ ಕೆಲಸದಲ್ಲಿ ಬಡ್ತಿ ದೊರಕಿತು. ತಮ್ಮ ನೂತನಹುದ್ದೆಯ ಕಾರ್ಯವನ್ನು ನೀಲಕಂಠರು ಬಹು ದಕ್ಷತೆಯಿಂದ ನಿರ್ವಹಿಸತೊಡಗಿದರು. ಇದರಿಂದ ಸಹಕಾರ ಸಂಘ ಹೆಚ್ಚಿನ ಲಾಭ ಗಳಿಸಿತು.

ಹೊಸ ಪ್ರಭಾವ

೧೯೦೭ನೇ ಮೇ ವರ್ಷದ ಕಡು ಬೇಸಿಗೆ ತಿಂಗಳು. ಖ್ಯಾತ ಕವಿ ಸುಬ್ರಹ್ಮಣ್ಯ ಭಾರತಿ ಮತ್ತು ಮದರಾಸಿನಲ್ಲಿದ್ದ ಲೋಕಮಾನ್ಯ ತಿಲಕರ ಅನುಯಾಯಿಗಳು ಸೇರಿ, ಬಂಗಾಳದ ಹಿರಿಯ ಕ್ರಾಂತಿಕಾರಿ ಬಿಪಿನ್ ಚಂದ್ರಪಾಲ್ ಅವರನ್ನು ನಗರಕ್ಕೆ ಆಹ್ವಾನಿಸಿದ್ದರು.

ಮೇ ತಿಂಗಳ ಕಡು ಬೇಸಿಗೆಯಷ್ಟೇ ಅಂದಿನ ದೇಶದ ರಾಜಕೀಯ ವಾತಾವರಣ ಬಿಸಿಯಾಗಿತ್ತು. ದೇಶದಲ್ಲಿ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಲು ರಾಷ್ಟ್ರೀಯ ಕಾಂಗ್ರೇಸ್ ಸಂಸ್ಥೆ ಚಳವಳಿ ನಡೆಸುತ್ತಿತ್ತು. ಪಂಜಾಬಿನ ಸಿಂಹ ಲಾಲಾ ಲಜಪತರಾಯ್, ಲೋಕಮಾನ್ಯರೆಂದು ಜನತೆಯ ವಿಶ್ವಾಸಕ್ಕೆ ಪಾತ್ರರಾಗಿದ್ದ ತಿಲಕರನ್ನು ಬಂಧಿಸಿ, ಮಾಂಡಲೆ ಜೈಲಿನಲ್ಲಿಡಲಾಗಿತ್ತು. ಬ್ರಿಟಿಷರ ತೀವ್ರ ಕ್ರಮಗಳಿಂದಾಗಿ ದೇಶದಲ್ಲಿ ಕ್ರಾಂತಿಯ ಹೊಗೆ ಕಾಣಬರುತ್ತಿತ್ತು.

ಕಂಚಿನ ಕಂಠದ ಪಾಲ್ ದೇಶದ ರಾಜಕೀಯ ಪರಿಸ್ಥಿತಿ ಕುರಿತು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ತರ್ಕ ಮತ್ತು ಇತಿಹಾಸಗಳ ಆಳವಾದ ಜ್ಞಾನ ಅವರಿಗಿತ್ತು. ಮದರಾಸಿನ ರಾಜಕೀಯ ಜೀವನದಲ್ಲಿ ಈ ಭಾಷಣಗಳು ಒಂದು ಹೊಸ ತಿರುವನ್ನು ಕೊಟ್ಟವು. ಬಿಪಿನ್ ಚಂದ್ರಪಾಲ್ ಅವರ ಕಾರ್ಯದರ್ಶಿ ಕುಂಜು ಬ್ಯಾನರ್ಜಿ ಅವರು ಕ್ರಾಂತಿಕಾರಿಯಾಗಿರಲಿಲ್ಲ. ಹಿಂದೆ ಇದ್ದುಕೊಂಡು ಕ್ರಾಂತಿಕಾರಿ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದರು. ಕುಮಜು ಬ್ಯಾನರ್ಜಿ ಮೂಲಕ ಕ್ರಾಂತಿಕಾರಕ ಚಟುವಟಿಕೆಗಳಿಗೆ ಯುವಜನರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಕುಂಜು ಬ್ಯಾನರ್ಜಿ ಮತ್ತು ಬಿಪಿನ್ ಚಂದ್ರಪಾಲ್ ಅವರನ್ನು ಭೇಟಿ ಮಾಡಿದ ದಿನವೇ ನೀಲಕಂಠರು ಕ್ರಾಂತಿಕಾರಿಯಾಗುವ ಪ್ರಮುಖ ನಿರ್ಧಾರ ಕೈಗೊಂಡರು.

ಮದರಾಸಿನಲ್ಲಿ ಭಾರತಿ ಅವರ ನಿಕಟ ಪರಿಚಯದಿಂದ ನೀಲಕಂಠರಿಗೆ ಅಂದಿನ ದೇಶದ ಪರಿಸ್ಥಿತಿ ತಿಳಿದುಕೊಳ್ಳಲು ಹೆಚ್ಚು ಸಹಾಯವಾಯಿತು. ತುತ್ತು ಕುಡಿಯಲ್ಲಿ ೧೯೦೬ರಲ್ಲಿ ಸ್ವದೇಶಿ ಸ್ಟೀಮ್ ನ್ಯಾವಿಗೇಷನ್ ಕಂಪೆನಿ ಸ್ಥಾಪಿಸಿ ಅಖಿ ಭಾರತ ಖ್ಯಾತಿ ಪಡೆದ ವಿ.ಒ. ಚಿದಂಬರಂ ಪಿಳ್ಳೆ ಅವರು ೧೯೦೭ರ ಡಿಸೆಂಬರ್ ನಲ್ಲಿ ಮದರಾಸಿಗೆ ಬಂದರು ಭಾರತಿ ಅವರು ನೀಲಕಂಠರನ್ನು ಪಿಳ್ಳೆಯವರಿಗೆ ಪರಿಚಯ ಮಾಡಿಕೊಟ್ಟರು. ಭಾರತಿ ಹಾಗೂ ಪಿಳ್ಳೆಯವರು ನಿಕಟ ಸ್ನೇಹಿತರಾಗಿದ್ದರು. ನೀಲಕಂಠರು ಜನವರಿ ಒಂದರಂದು ಸಹಕಾರ ಸಂಘದಲ್ಲಿ ತಮ್ಮ ಹುದ್ದೆಯನ್ನು ಬಿಟ್ಟರು. ಪಿಳ್ಳೆಯವರನ್ನು ಭೇಟ್ಟಿಯಾಗಿ ನ್ಯಾವಿಗೇಷನ್ ಕಂಪೆನಿಗೆ ಸೇರಲು ತಾವು ಸಿದ್ಧವೆಂದು ತಿಳಿಸಿದರು. ಕೆಲವೇ ದಿನಗಳಲ್ಲಿ ಇದಕ್ಕೆ ವ್ಯವಸ್ಥೆ ಮಾಡುವುದಾಗಿ ಪಿಳ್ಳೆ ತಿಳಿಸಿದರು.

ಆದರೆ ವಿಧಿಯ ಇಷ್ಟವೇ ಬೇರೆಯಾಗಿತ್ತು. ಚಿದಂಬರಂ ಅವರನ್ನು ಭೇಟಿ ಮಾಡಿದ ಮಾರನೇ ದಿನವೇ ನೀಲಕಂಠರು ಭಾರತಿ ಅವರನ್ನು ನೋಡಲು ಬ್ರಾಡ್ ವೇ ನಲ್ಲಿದ್ದ ತಮಿಳು ವಾರ ಪತ್ರಿಕೆ “ಇಂಡಿಯಾ”  ಕಚೇರಿಗೆ ಹೋದರು. ಸಮಯ ದೊರೆತಾಗಲೆಲ್ಲಾ ನೀಲಕಂಠರು ಭಾರತಿ ಅವರನ್ನು ಆಗಾಗ್ಗೆ ನೋಡುತ್ತಿದ್ದರು. ಭಾರತಿ ಅವರು ನೀಲಕಂಠನನ್ನು ಕಲ್ಕತ್ತದಿಂದ ಬಂದಿದ್ದ ಚಂದ್ರಕಾಂತ್ ಎಂಬುವರಿಗೆ ಪರಿಚಯ ಮಾಡಿಕೊಟ್ಟರು. ಚಂದ್ರಕಾಂತ್ ಅವರು ಬಿಪಿನ್ ಪಾಲ್ ಅವರ ಶಿಬಿರಕ್ಕೆ ಸೇರಿದವರು. ದಕ್ಷಿಣದಲ್ಲಿ ಕ್ರಾಂತಿಕಾರಕ ಚಟುವಟಿಕೆಗಳನ್ನು ಸಂಘಟಿಸಲು ಅವರು ಮದರಾಸಿಗೆ ಬಂದಿದ್ದರು. ಅವರ ಮಾತುಕತೆಗಳಿಂದ ನೀಲಕಂಠರ ಮನೋಭಾವನೆ ಬದಲಾವಣೆಯಾಯಿತು. ತಮ್ಮ ಇಡೀ ಸಮಯವನ್ನು ಕ್ರಾಂತಿ ಚಟುವಟಿಕೆಗಳಿಗೆ ಮೀಸಲಿಡಲು ನಿರ್ಧರಿಸಿದರು. ಚಿದಂಬರಂ ಪಿಳ್ಳೆ ಅವರ ಕಂಪೆನಿ ಸೇರುವುದಾಗಿ ಇತ್ತ ವಾಗ್ದಾನ ಅವರಿಗೆ ಸಂಪೂರ್ಣವಾಗಿ ಮರೆತು ಹೋಯಿತು.

ಚಂದ್ರಕಾಂತ್ ನೀಲಕಂಠರಿಗೆ ಮೈನವಿರೇಳಿಸುವ ಹಲವು ಸಂಗತಿಗಳನ್ನು ತಿಳಿಸಿದರು. “ಉನ್ನತ ಸ್ಥಾನಗಳಲ್ಲಿರುವ ಕೆಲವು ವ್ಯಕ್ತಿಗಳು ಆದಷ್ಟು ಶೀಘ್ರವಾಗಿ ಇಡೀ ದೇಶದಲ್ಲಿ ಕ್ರಾಂತಿಯನ್ನೆಬ್ಬಿಸಲು ಯತ್ನಿಸುತ್ತಿದ್ದಾರೆ. ಬ್ರಿಟಿಷರನ್ನು ಸಂಪೂರ್ಣವಾಗಿ ನಾಶಪಡಿಸಲು ಜರ್ಮನ್ ಸರಕಾರ ನೆರವು ನೀಡಲಿದೆ. ೧೯೧೪ರಲ್ಲಿ ಬ್ರಿಟನ್ ಜೊತೆ ಆರಂಭಿಸಬೇಕೆಂದಿರುವ ಪ್ರಮುಖ ಯುದ್ಧದಲ್ಲಿ ೧೦ ವರ್ಷಗಳ ಕಾಲವಾದರೂ ಹೋರಾಟ ನಡೆಸಲು ಜರ್ಮನಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೋರಾಟಕ್ಕೆ ಜರ್ಮನಿಯು ಅಧಿಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತದೆ. ಇನ್ನೂ ಅನೇಕ ವಿಧದಲ್ಲಿ ನೆರವು ನೀಡಲಿದೆ. ಸ್ವತಂತ್ರ ಸರಕಾರಕ್ಕೆ ಮನ್ನಣೆ ನೀಡುವುದಾಗಿಯೂ ಜರ್ಮನ್ ಸರಕಾರ ಬರೋಡಾ ಗಾಯಕವಾಡ ಅವರಿಗೆ ತಿಳಿಸಿದೆ. ಅದಕ್ಕೀಗ ದಕ್ಷಿಣ ಭಾರತದಲ್ಲಿರುವ ಸಣ್ಣ ಸಣ್ಣ ರಾಜರುಗಳು ಮತ್ತು ಇತರ ಕ್ರಾಂತಿಕಾರಿ ಶಕ್ತಿಗಳನ್ನು ಒಟ್ಟುಗೂಡಿಸಬೇಕು” ಎಂದು ಚಂದ್ರಕಾಂತ್ ತಿಳಿಸಿದರು. ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ನೀಲಕಂಠರ ಧಮನಿ-ಧಮನಿಗಳಲ್ಲಿ ರಕ್ತ ಉಕ್ಕಿ ಹರಿಯಿತು.

ಕ್ರಾಂತಿಕಾರಿ :

ಕ್ರಾಂತಿ ಚಟುವಟಿಕೆಗಳನ್ನು ವ್ಯವಸ್ಥೆ ಮಾಡುವ ಮಾರ್ಗಕ್ಕೆ ಚಂದ್ರಕಾಂತ್ ಅವರು ನೀಲಕಂಠರಿಗೆ ದೀಕ್ಷೆ ನೀಡಿದರು. ವೇಷ ಮರೆಸಿಕೊಂಡು ನೀಲಕಂಠರು ದಕ್ಷಿಣದ ಪ್ರಮುಖ ನಗರಗಳಿಗೆಲ್ಲ ಭೇಟ್ಟಿ ಕೊಟ್ಟರು. ರಾಜಕೀಯ ಪರಿಸ್ಥಿತಿ ಕುರಿತು ಅನೇಕ ಕಡೆ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಕ್ರಾಂತಿಕಾರಿ ಕೆಲಸಗಾರರ ರಹಸ್ಯಕೂಟವೊಂದನ್ನು ರಚಿಸಿದರು. ತಾವು ಭೇಟಿ ಮಾಡಿದವರೊಡನೆ ಸಂಪರ್ಕ ಇಟ್ಟುಕೊಳ್ಳುತ್ತಿದ್ದರು. ಅಂಚೆ ಮತ್ತು ತಂತಿ ಇಲಾಖೆಯವರಿಗೆ ಕ್ರಾಂತಿಕಾರಿಗಳ ಚಟುವಟಿಕೆಗಳು ಗೊತ್ತಾಗದಂತೆ ಗೋಪ್ಯವಾಗಿಡಲು ನೀಲಕಂಠರು ತಮ್ಮದೇ ಆದ ಭಾಷೆಯಲ್ಲಿ ವಿಷಯ ತಿಳಿಸುತ್ತಿದ್ದರು. ಉದಾಹರಣೆಗೆ ಪಿಸ್ತೂಲಿಗೆ ಬದಲಾಗಿ “ಲಡ್ಡು” ಎಂಬ ಪದ ಬಳಸುತ್ತಿದ್ದರು. ಕ್ರಾಂತಿಕಾರಿ ಚಟುವಟಿಕೆಗಳ ಗೋಪ್ಯ ಕಾಪಾಡಿಕೊಂಡು ಬರುವುದಾಗಿ ನಾಯಕರಿಗೆ ವಿಧೇಯತೆಯಿಂದ ವರ್ತಿಸುವುದಾಗಿ ರಹಸ್ಯ ಕೂಟದವರು ತಮ್ಮ ರಕ್ತದಲ್ಲಿ ಸಹಿ ಮಾಡಿ ಪ್ರತಿಜ್ಞೆ ಸ್ವೀಕರಿಸಬೇಕಾಗಿತ್ತು.

ನೀಲಕಂಠ ಕ್ರಾಂತಿಕಾರಿಯಾದರು. ಇದರ ಮೊದಲ ಚಿಹ್ನೆಯಾಗಿ ತನ್ನ ಉದ್ದನೆಯ ಕೂದಲನ್ನು ಕತ್ತರಿಸಿ ಕ್ರಾಪ್  ಮಾಡಿಸಿದರು. ೧೯೦೮ರಲ್ಲಿ ಆಂಗ್ಲರ ಶೈಲಿಯಲ್ಲಿ ಕ್ರಾಪ್  ಮಾಡಿಸುವುದು ಸಣ್ಣ ಸುಧಾರಣೆ ಆಗಿರಲಿಲ್ಲ. ಅದಕ್ಕೆ ಧೈರ್ಯ ಬೇಕಾಗಿತ್ತು. ಮದರಾಸ್ ನಗರದಲ್ಲೇ ಆಗ ತನ್ನ ತಲೆಕೂದಲನ್ನು ಕ್ರಾಪ್ ಮಾಡಿಸಿಕೊಂಡ ಪ್ರಥಮ ಬ್ರಾಹ್ಮಣ ಯುವಕ ನೀಲಕಂಠರು. ಎಲ್ಲರೂ ಅವರಿಗೆ ಛೀಮಾರಿ ಹಾಕತೊಡಗಿದರು.

ತಮ್ಮ ಕ್ರಾಂತಿಕಾರಿ ಸಂಸ್ಥೆ ಕಾರ‍್ಯದ ಸಂವಂಧದಲ್ಲಿ ಪ್ರಥಮವಾಗಿ ನೀಲಕಂಠರು ೧೯೦೮ನೇ ಫೆಬ್ರವರಿ ೧೫ ರಂದು ತುತ್ತು ಕುಡಿಗೆ ಪ್ರಯಾಣ ಬೆಳೆಸಿದರು. ಸುಮಾರು ಹತ್ತು ದಿನಗಳ ಕಾಲ ಅಲ್ಲಿ ಚಿದಂಬರಂ ಪಿಳ್ಳೆ ಅವರೊಂದಿಗೆ ಇದ್ದರು. ಪಿಳ್ಳೆಯವರು ಜಿಲ್ಲೆಯಲ್ಲಿ ನಡೆಸುತ್ತಿದ್ದ ರಾಷ್ಟ್ರೀಯ ಕಾರ್ಯ ಚಟುವಟಿಕೆಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.

ಪೊಲೀಸ್ ಅಧಿಕಾರಿಯೊಡನೆ :

ನೀಲಕಂಠರು ಪಟ್ಟಿಯದೈನಲ್ಲಿದ್ದಾಗ ಪೂಲಂ ಎಂಬಲ್ಲಿಗೆ ಭೇಟಿ ಇತ್ತರು. ಅದು ಡಕಾಯಿತರ ಪ್ರದೇಶವಾಗಿದ್ದರಿಂದ ಆಗ ಅಲ್ಲಿ ಪೊಲೀಸ್ ಔಟ್ ಪೋಸ್ಟ್ ಒಂದನ್ನು ಸ್ಥಾಪಿಸಲಾಗಿತ್ತು. ಡಕಾಯಿತರೆಲ್ಲ  ಪ್ರತಿದಿನ ಔಟ್‌ಪೋಸ್ಟ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್‌ಗೆ ವರದಿ ಮಾಡಿಕೊಳ್ಳಬೇಕಾಗಿತ್ತು. ಪೂಲಂ ಸಬ್ ಇನ್ಸ್‌ಪೆಕ್ಟರ್ ಸಣ್ಣ ಊರಿಗೆ ಹೊಸದಾಗಿ ಆಗಮಿಸಿದ ನೀಲಕಂಠರನ್ನು ಕೂಡಲೇ ಗುರುತಿಸಿದ, ಯಾವ ಕಾರಣಕ್ಕಾಗಿ ಬಂದಿರುವುದಾಗಿ ವಿಚಾರಿಸಿದ ಪೊಲೀಸ್ ಠಾಣೆಯಲ್ಲಿ ಹಾಜರಾದ ನೀಲಕಂಠರು ಕೂಡಲೇ ಪೊಲೀಸ್ ಅಧಿಕಾರಿಗೆ ಉತ್ತರ ನೀಡಿದರು. ತಾವು ಸಿ.ಐ.ಡಿ ಎಂದೂ ಈ ಪ್ರದೇಶದ ಡಕಾಯಿತರ ಬಗ್ಗೆ ವಿಶೇಷ ವರದಿ ಮಾಡುವಂತೆ ಅಧಿಕಾರಿಗಳು ತಮ್ಮನ್ನು ಇಲ್ಲಿಗೆ ಕಳುಹಿಸಿರುವುದೆಂದು ನೀಲಕಂಠರು ತಿಳಿಸಿದರು. ಈ ಕಟ್ಟುಕತೆಯನ್ನು ಪೊಲೀಸ್ ಅಧಿಕಾರಿ ನಂಬಿದ. ಈ ಪ್ರದೇಶದ ಡಕಾಯಿತರನ್ನು ನೋಡಲು ಅನುಕೂಲವಾಗುವಂತೆ ಅವರ ಪ್ರದರ್ಶವೊಂದನ್ನು ಏರ್ಫಡಿಸುವಂತೆ ಪೊಲೀಸ್ ಅಧಿಕಾರಿಗೆ ನೀಲಕಂಠರು ತಿಳಿಸಿದರು. ಕೂಡಲೇ ಪೊಲೀಸ್ ಅಧಿಕಾರಿ ಡಕಾಯಿತರುಗಳನ್ನೆಲ್ಲ ಕರೆಯಿಸಿದ. ಮರವ ಜನಾಂಗದ ನಾಯಕರನೇಕರನ್ನು ಗುರುತಿಸಿದ ನೀಲಕಂಠರು ಪೊಲೀಸ್ ಅಧಿಕಾರಿಗೆ ತಮ್ಮ ಕೃತಜ್ಞತೆಗಳನ್ನರ್ಪಿಸಿ ಅಲ್ಲಿಂದ  ಮರವಕುರಚ್ಚಿಗೆ ತೆರಳಿದರು. ಹೋರಾಟ ನಡೆಸುವ ಸ್ವಭಾವದ ಮರವ ಜನಾಂಗದವರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದರು. ಗುರಿಯತ್ತ ಬಂದೂಕದಿಂದ ಗುಂಡು ಹಾರಿಸುವುದರಲ್ಲಿ ತರಬೇತಿ ನೀಡಬೇಕೆಂದು ಮರುವ ಜನಾಂಗದ ನಾಯಕರಿಗೆ ತಿಳಿಸಿದರು. ಆದಷ್ಟು ಜಾಗ್ರತೆಯಾಗಿ ಸಾಧ್ಯವಾದಷ್ಟು ಹೆಚ್ಚು ಬಂದೂಕುಗಳನ್ನು    ಒದಗಿಸಲು ತಾವು ವ್ಯವಸ್ಥೆ ಮಾಡುವುದಾಗಿ ನೀಲಕಂಠರು ತಿಳಿಸಿದರು. ಮರುವ ಕುರಚ್ಚಿಗೆ ನೀಲಂಠರ ಭೇಟಿ ತುಂಬ ಫಲಪ್ರದವಾಯಿತು. ಜಿಲ್ಲೆಯ ಇತರ ಕಡೆಗಳಲ್ಲಿಯೂ ಇಂಥದೇ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದರು. ಮತ್ತೊಂದು ಕಡೆ ೨೦, ೦೦೦ ಹೋರಾಟಗಾರರಿಗೆ ತರಬೇತಿ ನೀಡಲು ವ್ಯವಸ್ಥೆ ಮಾಡಲಾಯಿತು. ಆದರೆ ಸಾಕಷ್ಟು ಬಂದೂಕುಗಳಿರಲಿಲ್ಲ.

ಬಂದೂಕುಗಳನ್ನು ಒದಗಿಸಲು ತಾವು ವ್ಯವಸ್ಥೆ ಮಾಡುವುದಾಗಿ ನೀಲಕಂಠರು ಹೇಳಿದರು

ರಹಸ್ಯ ಪಡೆಗಳನ್ನು ಸಂಘಟಿಸುವಾಗ ನೀಲಕಂಠರು ತಮ್ಮನ್ನು ‘ಬ್ರಹ್ಮಚಾರಿ’ ಎಂದು ಕರೆದುಕೊಂಡರು. ಕ್ರಮೇಣ ಅವರಿಗೆ “ನೀಲಕಂಠ ಬ್ರಹ್ಮಚಾರಿ” ಎಂಬ ಹೆಸರೇ ಉಳಿಯಿತು.

ಭಾರತದಲ್ಲೇ ೧೯೦೮ನೇ ಮಾರ್ಚ ೯ ರಂದು ಒಂದು ಮುಖ್ಯ ದಿನ. ಬಂಗಾಳದ ನಾಯಕ ಬಿಪಿನ್ ಚಂದ್ರಪಾಲ್ ಅವರನ್ನು ಜೈಲಿನಿಂದ ಅಂದು ಬಿಡುಗಡೆ ಮಾಡಲಾಯಿತು. ಬಿಪಿನ್‌ಪಾಲ್ ಅವರ ಬಿಡುಗಡೆಯನ್ನು ದೇಶಾದ್ಯಂತ ರಾಷ್ಟ್ರೀಯರು ಸ್ವರಾಜ್ಯ ದಿನವನ್ನಾಗಿ ಆಚರಿಸಿದರು. ದಕ್ಷಿಣದಲ್ಲಿ ಚಿದಂಬರಂ ಪಿಳ್ಳೆ ತಿಲಕರ ಉಗ್ರ ಬೆಂಬಲಿಗರು. ಆ ದಿನ ತುತ್ತುಕುಡಿ ಮತ್ತು ತಿರುನಲ್ವೇಲಿಯಲ್ಲಿ ಸಾಮೂಹಿಕ ಸಮಾರಂಭಗಳನ್ನು ಏರ್ಪಡಿಸಿದ್ದರು. ಜಿಲ್ಲೆಯ ಬಿಳಿ ಅಧಿಕಾರಿಗಳಿಗೆ ಇದನ್ನು ಸಹಿಸಲು ಸಾಧ್ಯವಾಗಲಿಲ್ಲ. ಪಿಳ್ಳೆ ಮತ್ತು ಅವರ ಸಂಗಡಿಗವ ಸುಬ್ರಹ್ಮಣ್ಯಶಿವ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಕಲೆಕ್ಟರ್ ಅವರು ಮಾರ್ಚ ೧೨ರಂದು ಪ್ರಕಟಿಸಿದರು. ಜನಪ್ರಿಯ ನಾಯಕರ ಅನಿರೀಕ್ಷಿತ ಬಂಧನ ಜನತೆಯನ್ನು ರೊಚ್ಚಿಗೆಬ್ಬಿಸಿತು. ನಾಯಕರ ಬಿಡುಗಡೆಗೆ ಜನ ಒತ್ತಾಯ ಮಾಡಿದರು. ಅದಕ್ಕೆ ಕಲೆಕ್ಟರ್ ಲಾಠಿ ಮತ್ತು ಗುಂಡಿನಿಂದ ಉತ್ತರ ನೀಡಿದರು. ನಾಲ್ಕು ಜನ ಸತ್ತರು. ಜನ ದಂಗೆ ಎದ್ದರು. ಲೂಟಿ, ಬೆಂಕಿ ಹಚ್ಚುವ ಘಟನೆಗಳು ಜರುಗಿದವು. ಸರಕಾರಿ ಕಟ್ಟಡಗಳನ್ನು ನಾಶಪಡಿಸಲಾಯಿತು. ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಲಾಯಿತು.

ಹೊಸ ಪ್ರಯತ್ನಗಳು :

ಉಗ್ರ ಪರಿಸ್ಥಿತಿ ಇರುವ ತಿರುನಲ್ವೇಲಿಗೆ ಹೋಗುವುದರಿಂದ ಪ್ರಯೋಜನವಾಗದೆಂದು ಬಗೆದ ನೀಲಕಂಠರು ಚಂಗಲ್ಪೇಟೆ ಜಿಲ್ಲೆಗೆ ಪ್ರವಾಸಕ್ಕೆ ಹೋದರು. ಒಂದು ದಿನ ಕಂಚಿಪುರಂ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದರು. ನಗರದಲ್ಲಿ ಯಾರ ಪರಿಚಯವೂ ಇಲ್ಲದ ಪ್ರಯುಕ್ತ ರೈಲ್ವೆ ನಿಲ್ದಾಣದಲ್ಲೇ ಕುಳಿತಿದ್ದರು. ತಮ್ಮ ಸಮೀಪದಲ್ಲಿ ಸಹಾನುಭೂತಿಯುಳ್ಳವರ ಗಮನ ಸೆಳೆಯುವುದಕ್ಕಾಗಿ ಬಂಕಿಮಚಂದ್ರ ಅವರ ಗೀತೆ “ವಂದೇ ಮಾತರಂ” ಅನ್ನು ಮೆಲ್ಲಗೆ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುವುದು ಅವರ ತಂತ್ರಗಳಲ್ಲಿ ಒಂದಾಗಿತ್ತು. ಆ ದಿನ ಆ ತಂತ್ರವನ್ನು  ಬಳಸಿದರು. ಕೆಲವೇ ನಿಮಿಷಗಳಲ್ಲಿ ಒಬ್ಬ ಅಯ್ಯಂಗಾರ್ ಯುವಕ ಮುಂದಿನ ಬೆಂಚಿನಲ್ಲಿ ಕುಳಿತಿದ್ದವನು, ನೀಲಕಂಠರನ್ನು ಮಾತನಾಡಿಸಿದ. ಆ ಯುವಕ ನೀಲಕಂಠರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ. ಆ ಯುವಕನ ನೆರವಿನಿಂದ ನಾಲ್ಕು ಸಭೆಗಳನ್ನುದ್ದೇಶಿಸಿ ಮಾತನಾಡಿದರು.

೧೯೦೮ನೇ ಮೇ ತಿಂಗಳ ಮಧ್ಯಭಾಗದಲ್ಲಿ ನೀಲಕಂಠರು ತಿರುನಲ್ವೇಲಿಗೆ ಹೋಗಲು ನಿರ್ಧರಿಸಿದರು. ಈ ಸಮಯದಲ್ಲಿ ತಿರುನಲ್ವೇಲಿ ಸೆಷನ್ಸ್ ನ್ಯಾಯಾಲಯದಲ್ಲಿ ಚಿದಂಬರಂ ಪಿಳ್ಳೆ ಮತ್ತು ಸುಬ್ರಹ್ಮಣ್ಯ ಶುಇವ ಅವರ ಮೇಲಿನ ಮೊಕದ್ದಮೆ ವಿಚಾರಣೆ ನಡೆಯುತ್ತಿತ್ತು. ಒಂದು ದಿನ ನೀಲಕಂಠರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಕೋರ್ಟಿನಿಂದ ಜೈಲಿಗೆ ಕುದುರೆ ಜಟಕಾದಲ್ಲಿ ಚಿದಂಬರಂ ಪಿಳ್ಳೆಯವರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಪಿಳ್ಳೆಯವರು ನೀಲಕಂಠರನ್ನು ಗುರುತಿಸಿ ಗಾಡಿ ಒಳಗಿನಿಂದಲೇ ನೀಲಕಂಠರನ್ನು  ‘ನಿಲ್ಲು ನಿಲ್ಲು’ ಎಂದು ಕೂಗಿದರು. ಜಟಕಾ ವೇಗವಾಗಿ ಹೋಗಿದ್ದರಿಂದ ಆ ಕೂಗು ನೀಲಕಂಠರಿಗೆ ಕೇಳಿಸಲಿಲ್ಲ. ಆದರೆ ಮಾರನೆಯ ದಿನ ನೀಲಕಂಠರನ್ನು  ಭೇಟಿಯಾಗಲು ಅವರು ಇಳಿದುಕೊಂಡಿದ್ದ ಅತಿಥಿ ಗೃಹಕ್ಕೆ ಹೊಸಬರೊಬ್ಬರು ಬಂದಿದ್ದರು. ಚಿದಂಬರಂ ಪಿಳ್ಳೆ ಅವರ ಕಡೆಯಿಂದ ಬಂದಿದ್ದ ಆ ವ್ಯಕ್ತಿ ನೀಲಕಂಠರಿಗೆ ಕೆಲವು ವಿಷಯಗಳನ್ನು ತಿಳಿಸಿದ. ನೀಲಕಂಠರು ಚಿದಂಬರಂ  ಪಿಳ್ಳೆ ಅವರ ಆದೇಶದಂತೆ ಆ ವ್ಯಕ್ತಿಯ ಜೊತೆ ತುತ್ತು ಕುಡಿಗೆ ತೆರಳಿದರು. ಅಲ್ಲಿಂದ ಆತ ಮಧ್ಯರಾತ್ರಿಯಲ್ಲಿ ನೀಲಕಂಠರನ್ನು ಎತ್ತಿನಗಾಡಿಯಲ್ಲಿ ಅಥನೂರ್‌ಗೆ ಕರೆದುಕೊಂಡು ಹೋದ. ಅಥನೂರ್ ಒಂದು ಕುಗ್ರಾಮ. ಮಾಪಿಳ್ಳೆ ಸ್ವಾಮಿ  ಎಂಬುವರು  ಅಲ್ಲಿ ವಾಸವಾಗಿದ್ದರು. ಅವರು ಸುಮಾರು ೪೦,೦೦೦ ಮಂದಿ ಕಂಬಲತ್ತರ್  ನಯ್ಕರ್ ಅವರ ನಾಯಕರಾಗಿದ್ದರು. ಈ ಜನಾಂಗದವರು ಭಾರಿ ಹೋರಾಟಗಾರರ ವಂಶಕ್ಕೆ ಸೇರಿದವರು. ಹದಿನೆಂಟನೆಯ ಶತಮಾನದ ಸ್ವಾತಂತ್ರದ ಹೊರಾಟಗಾರರ ಹಾಗೂ  ಪಾಳೇಗಾರರ ಮುಖ್ಯಸ್ಥರಾಗಿದ್ದ ಕಟ್ಟೆ ಬೊಮ್ಮ ಅವರ ವಂಶಸ್ಥರು.  ನೀಲಕಂಠರು ಮಾಪಿಳ್ಳೆ ಸ್ವಾಮಿ ಅವರೊಂದಿಗೆ  ಕ್ರಾಂತಿಕಾರಿ ಶಕ್ತಿಗಳ ಸಂಘಟನೆ ಕುರಿತು ಮಾತುಕತೆ ನಡೆಸಿದರು. ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದರೆ ತಾವು ಇಪ್ಪತ್ತು ಸಾವಿರ ಯೋಧರನ್ನು ಒದಗಿಸುವದಾಗಿ ಅವರು ತಿಳಿಸಿದರು. ಅಲ್ಲಿಂದ ನೀಲಕಂಠರು ಮದರಾಸಿಗೆ ವಾಪಸಾದರು. ಕಲ್ಕತ್ತದಲ್ಲಿರುವ ತಮ್ಮ ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದರು.

ಕ್ರಾಂತಿಕಾರಿಯ ಬಾಳು :

ನೀಲಕಂಠರು ಕ್ರಾಂತಿಕಾರಿಯಾಗಿ ತುಂಬ ಕಷ್ಟ ನೋವುಗಳನ್ನು ಅನುಭವಿಸಿದರು. ತಮ್ಮ ಮನೆಯವರೊಂದಿಗೆ ಸಂಪೂರ್ಣವಾಗಿ ತಮ್ಮ ಸಂಬಂಧವನ್ನು ಕಡಿದು ಕೊಂಡರು. ೧೯೦೮ರಲ್ಲಿ ಅವರ ತಂದೆಯಿಂದ ಪತ್ರವೊಂದು ಬಂತು ತುಂಬ ಕಷ್ಟಸ್ಥಿತಿಯಿಂದಾಗಿ ಮನೆಯಲ್ಲಿನ ಪಾತ್ರೆಗಳನ್ನು ಗಿರವಿ ಇಟ್ಟು ಬಂದ ಹಣದಿಂದ ದಿನನಿತ್ಯ ಸಂಸಾರ ನಿರ್ವಹಿಸಬೇಕಾಗಿದೆ. ಏನಾದರೂ ಸಹಾಯ ಮಾಡು ಎಂದು ತಂದೆಯವರು ನೀಲಕಂಠರಿಗೆ ಪತ್ರ ಬರೆದರು. ತಂದೆಯವರ ಪತ್ರಕ್ಕೆ ನೀಲಕಂಠ ಮೌನದಿಂದಿದ್ದರು. ಉತ್ತರವನ್ನಾಗಲಿ, ಹಣವನ್ನಾಗಲಿ ಕಳುಹಿಸಲಿಲ್ಲ. ಕೆಲವು ವರ್ಷಗಳ ನಂತರ ಪೂರ್ವಿಕರಿಂದ ಬಂದಿದ್ದ ತಮ್ಮ ಮನೆಯನ್ನು ಅವರ ತಂದೆಯವರು ಮಾರಿ ಮಾಯಾವರಂ ಪಟ್ಟಣಕ್ಕೆ ಬಂದರು. ಕೆಲವು ಮನೆಗಳಲ್ಲಿ ಪೌರೋಹಿತ್ಯ ನಡೆಸಿಕೊಂಡು ಜೀವನ ಹೊರೆಯುತ್ತಿದ್ದರು. ಆದರೆ ಕೊನೆಯವರೆವಿಗೂ ತಮ್ಮ ಮಗ ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿದ್ದುದನ್ನು ವಿರೋಧಿಸಲಿಲ್ಲ. ತಮಗೆ ಮಗ ಸಹಾಯ ಮಾಡಲಿಲ್ಲವೆಂದು ತಪ್ಪು ಎಣಿಸಲಿಲ್ಲ. ಅದರ ಬದಲು ಮಗನ ಬಗ್ಗೆ ಅಪಾರವಾದ ಹೆಮ್ಮೆ ತಳೆದಿದ್ದರು. ಮಗ ಅನುಭವಿಸುತ್ತಿದ್ದ ಕಷ್ಟಗಳ ಕಲ್ಪನೆ ಅವರಿಗಿರಲಿಲ್ಲ. ಕೆಲವು  ಸಾರಿ ಕ್ರಾಂತಿಕಾರಿಗಳು ಹಣವಿಲ್ಲದೆ ತುಂಬ ಕಷ್ಟ ಅನುಭವಿಸಬೇಕಾಯಿತು. ಗುಪ್ತ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದುದರಿಂದ ಅವರು ಬಹಿರಂಗವಾಗಿ ನೆರವಿಗಾಗಿ ಮನವಿ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಪ್ರಯಾಣದ ಖರ್ಚಿಗೆ ಹಾಗೂ ಇಡೀ ದಕ್ಷಿಣ ಭಾರತದಲ್ಲಿ ಕ್ರಾಂತಿಕಾರಿಗಳ ಜೊತೆ ಸಂಪರ್ಕವಿಟ್ಟುಕೊಳ್ಳಲು ಹಣ ಬೇಕಾಗುತ್ತಿತ್ತು. ತಿರನಲ್ವೇಲಿ ಪಟ್ಟಣದಲ್ಲಿ ಇಡ್ಲಿ ಕಾಫಿ ಅಂಗಡಿಗಳಲ್ಲಿ ನಿಲಕಂಠರು ಬಟ್ಟೆಗಳನ್ನು ಗಿರವಿ ಇಟ್ಟು ಸಂಜೆ ಬಿಡಿಸಿಕೊಂಡ ಪ್ರಸಂಗಗಳು ಅನೇಕ. ಕೊಡಕಲ್ಲೂರಿನಲ್ಲಿ ಒಮ್ಮೆ ರಾತ್ರಿ ಹೊತ್ತು ಆಹಾರಕ್ಕಾಗಿ ಮನೆ ಮನೆಗೆ ಹೋಗಿ ಭಿಕ್ಷೆ ಎತ್ತಿದ ಸಂದರ್ಭವೂ ಉಂಟು.

ಸೆರೆಮನೆಯಲ್ಲಿ ನೀಲಕಂಠ ಬ್ರಹ್ಮಚಾರಿ ಸದ್ಗುರು ಓಂಕಾರ್

ನೀಲಕಂಠರ ಹೆಸರು ಪೊಲೀಸಿನವರಿಗೆಲ್ಲ ತಿಳಿದುಹೋಗಿತ್ತು ಒಮ್ಮೆ ನೀಲಕಂಠರು ತಿರುನಲ್ವೇಲಿ ಯಿಂದ ಮದರಾಸಿಗೆ ರೈಲಿನಲ್ಲಿ ಎರಡನೇ ದರ್ಜೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ, ಮಧುರೆ ಜಂಕ್ಷನಿನಲ್ಲಿ ಸಿ.ಐ.ಡಿ. ಸೂಪರಿಂಟೆಂಡೆಂಟ್ ಖಾನ್ ಅಬ್ದುಲ್ ಗಫಾರ್ ಖಾನ್ ಗಾಡಿ ಹತ್ತಿದರು. ರೈಲು ಚಲಿಸಿತು. ಪೊಲೀಸ್ ಅಧಿಕಾರಿಯೊಬ್ಬ ನೀಲಕಂಠರನ್ನು ಗುರುತಿಸಿದ. ಗೊತ್ತಿಲ್ಲದಂತೆ ನಟಿಸಿ, ಅವರೊಡನೆ ಮಾತಿಗಿಳಿದ. ನೀಲಕಂಠರೂ ಸಹ ಕಾಲೇಜು ವಿದ್ಯಾರ್ಥಿಯಂತೆ ನಟಿಸಿದರು. ಮುಂದಿನ ಸ್ಟೇಷನ್ ಬಂದ ಕೂಡಲೇ ನೀಲಕಂಠರು ಆತುರವಾಗಿ ರೈಲಿನಿಂದ ಇಳಿದು ಗುಂಪಿನಲ್ಲಿ ಸೇರಿಕೊಂಡರು. ತಮ್ಮ ಮದ್ರಾಸ್ ಟಿಕೆಟ್ಟನ್ನು ಗೇಟಿನಲ್ಲಿ ಕೊಟ್ಟು ಹೊರಬಂದರು. ಅಲ್ಲಿಂದ ಜಟಕಾ ಬಂಡಿಯಲ್ಲಿ ದೇವಸ್ಥಾನಗಳ ಪಟ್ಟಣವಾದ ಶ್ರೀರಂಗಂಗೆ ತೆರಳಿದರು. ಅಲ್ಲಿ ಮೂರು ದಿನ ತಂಗಿದ್ದರು. ಕೆಲವು ದಿನಗಳ ನಂತರ ಮದರಾಸಿಗೆ ಬಂದರು.

೧೯೦೮ನೇ ಜುಲೈ ಎರಡನೇ ವಾರದಲ್ಲಿ ಚಿದಂಬರಂ ಪಿಳ್ಳೆಯವರಿಗೆ ಮತ್ತು ಅವರ ಸಹೋದ್ಯೋಗಿ ಸುಬ್ರಹ್ಮಣ್ಯ ಶಿವ ಅವರಿಗೆ ಹತ್ತುವರ್ಷಗಳ ಗಡಿಪಾರು ಶಿಕ್ಷೆ ವಿಧಿಸಲಾಯಿತು. ಇದನ್ನು ಪ್ರಕಟಿಸಿದ ಕೂಡಲೇ ಟ್ರಿಪ್ಲಿಕೇನ್ ನಲ್ಲಿ ಪ್ರತಿಭಟನಾ ಸಭೆಯನ್ನು ಏರ್ಪಡಿಸಲಾಗಿತ್ತು. ನಿಲಕಂಠರು ಸಭೆಯಲ್ಲಿ ಭಾಗವಹಿಸಿದ್ದರು.

ಬ್ರಿಟಿಷ್ ಪ್ರಭುತ್ವ ರಾಜಕಾರಣಿಗಳ ಮೇಲೆ ಅಲ್ಲದೆ, ಪತ್ರಿಕೆಗಳ ಮೇಲೆಯೂ ಕಣ್ಣಿಟ್ಟಿತ್ತು. ಸರಕಾರ ವಿರೋಧಿ ಲೇಖನ ಮತ್ತು ಸುದ್ದಿ ಪ್ರಕಟಣೆ ವಿರುದ್ಧ ಕ್ರಮ ಕೈಗೊಂಡಿತು. ಭಾರತಿ ಅವರು ಫ್ರೆಂಚರ ಆಡಳಿತದಲ್ಲಿದ್ದ ಪುದುಚೇರಿಗೆ ತೆರಳಿ ಅಲ್ಲಿಂದ ಪತ್ರಿಕೆ ಪ್ರಕಟಿಸಲು ಪ್ರಾರಂಭಿಸಿದರು. ಮದ್ರಾಸಿನಲ್ಲಿದ್ದ ವಾರಪತ್ರಿಕೆ “ಇಂಡಿಯಾ” ಕಾರ್ಯವನ್ನು ನೀಲಕಂಠರು ವಹಿಸಿಕೊಂಡು ಎರಡು ಸಂಚಿಕೆಗಳನ್ನು ಪ್ರಕಟಿಸಿದರು. ಪುದುಚೇರಿಯಿಂದ “ಭಾರತಿ” ಪ್ರಕಟವಾಗತೊಡಗಿತ್ತು. ಬ್ರಿಟಿಷರ ವಿರುದ್ಧ ಪ್ರಹಾರ ಆರಂಭವಾಯಿತು. ನೀಲಕಂಠರೂ ಕೂಡ ಬದಲಾವಣೆಗಾಗಿ ಪುದುಚೇರಿಗೆ ತೆರಳಿದರು. ೧೯೦೯ನೇ ಏಪ್ರಿಲ್‌ನಲ್ಲಿ ನೀಲಕಂಠರು ಪುದುಚೇರಿಯ ವಾರಪತ್ರಿಕೆ “ಸೂರ್ಯೋದಯ” ದ ಸಂಪಾದಕರಾದರು. ಬ್ರಿಟಿಷರ ಆಡಳಿತದ ಪಾಪಗಳನ್ನು ಎತ್ತಿ ತೋರಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ “ಸೂರ್ಯೋದಯ” ಮಾಡಿತು.

ಬ್ರಿಟಿಷ್ ಆಡಳಿತಕ್ಕೆ ಈ ಪತ್ರಿಕೆಗಳು ದೊಡ್ಡ ಮುಳ್ಳಾಗಿ ಪರಿಣಮಿಸಿದ್ದವು. ಈ ಪತ್ರಿಕೆಗಳು ಪುದುಚೇರಿಯಲ್ಲಿ ಪ್ರಕಟವಾಗುತ್ತಿದ್ದರೂ, “ಬ್ರಿಟಿಷ್” ಇಂಡಿಯಾದಲ್ಲೇ ಇವುಗಳಿಗೆ ಜಾಹೀರಾತು ದೊರಕುತ್ತಿತ್ತು. ಈ ಪತ್ರಿಕೆಗಳ ಪ್ರವೇಶಕ್ಕೆ ಸರಕಾರ ನಿಷೇದಾಜ್ಞೆ  ವಿಧಿಸಿತು.  ಪುದುಚೇರಿ ಬ್ರಿಟಿಷ ಇಂಡಿಯಾ ಗಡಿಯಲ್ಲಿ “ಸೂರ್ಯೋದಯ” ದ ಎಲ್ಲಾ ಪ್ರತಿಗಳನ್ನೂ ವಶಪಡಿಸಿಕೊಂಡಿತು. ಪೊಲೀಸರು ಪತ್ರಿಕೆಗಳ ಕಟ್ಟುಗಳನ್ನೆಲ್ಲ ವಶಪಡಿಸಿಕೊಂಡು ನಾಶ ಪಡಿಸುತ್ತಿದ್ದರು. ಎರಡೂ ಸಂಚಿಕೆಗಳಿಗೂ ಇದೇ ಗತಿಯಾಗಿದ್ದರಿಂದ “ಸೂರ್ಯೋದಯ” ಪ್ರಕಟಣೆಯನ್ನು ೧೯೧೦ನೇ ಜನವರಿಯಲ್ಲಿ ನಿಲ್ಲಿಸಲಾಯಿತು. ನೀಲಕಂಠರು ಅಲ್ಲಿಂದ ಪುದುಚೇರಿ ಬಿಟ್ಟು ತೆರಳಿದರು. ಜರ್ಮನರು ೧೯೧೪ರಲ್ಲಿ  ಬ್ರಿಟಿಷರೊಂದಿಗೆ ಆರಂಭಿಸಬೇಕೆಂದು ಇದ್ದ ಯುದ್ಧದ ದಿನಗಳು ಸಮೀಪಿಸತೊಡಗಿದವು. ನೀಲಕಂಠರು ಕ್ರಾಂತಿಕಾರಿಗಳು ಉತ್ಸಾಹ ಕುಂದದಂತೆ ನೋಡಿಕೊಳ್ಳಲು ಮತ್ತೊಮ್ಮೆ ದಕ್ಷಿಣದಲ್ಲಿ ಪ್ರವಾಸ ಮಾಡಲು ಆರಂಭಿಸಿದರು. ರಾಷ್ಟ್ರೀಯ ವಾದಿಗಳ ಸ್ಫೂರ್ತಿಯಂತಹ ಪಿ.ಓ. ಚಿದಂಬರಂ ಪಿಳ್ಳೆ ಮತ್ತು ಸುಬ್ರಹ್ಮಣ್ಯ ಶಿವ ಅವರನ್ನು ಸರಕಾರ ಜೈಲಿಗೆ ಹಾಕಿತು. ಪೊಲೀಸರು ಬೇರೆ ಉಡುಪು ಧರಿಸಿ ರಾಷ್ಟ್ರೀಯ ಕಾರ್ಯಕರ್ತರು ಕ್ರೂರಿಗಳೆಂದು, ಕೇಡಿಗಳೆಂದು ಪ್ರಚಾರ ಮಾಡಲಾಯಿತು. ಅಂಗಡಿ ಮಾಲೀಕರಿಗೆ, ಹೋಟೆಲ್ ಮಾಲೀಕರಿಗೆ ಮತ್ತು ಕ್ಷಾರಕರಿಗೆ ಸಹ  ಬೆದರಿಕೆ ಹಾಕಿ ರಾಷ್ಟ್ರೀಯ ಕಾರ್ಯಕರ್ತರಿಗೆ ನೆರವಾಗಬೇಡಿರೆಂದು ಆಜ್ಞಾಪಿಸಲಾಯಿತು. ಜೈಲಿನಲ್ಲಿದ್ದ ರಾಷ್ಟ್ರೀಯ ನಾಯಕರಿಗೆ ಕ್ರೂರ ಶಿಕ್ಷೆ ಕೊಡಲಾಗುತ್ತಿತ್ತು.

ಆಷ್ ಕೊಲೆ

ಕಲೆಕ್ಟರ್ ಆಷ್ ದೇಶಭಕ್ತರನ್ನು ಹತ್ತಿಕ್ಕುವ ಕಾರ್ಯದಲ್ಲಿ ಮುಂದಾದ. ಅವನ ಕೊಲೆಗೆ ಪ್ರಯತ್ನ ನಡೆಯುತ್ತಿತ್ತು. ಈ ಬಗ್ಗೆ ನೀಲಕಂಠರಿಗೆ ವಿಷಯ ತೀಳಿದ ಕೂಡಲೇ ಇಂತಹ ಕಾರ್ಯ ಮಾಡಬಾರದು. ೧೯೧೪ರಲ್ಲಿ ಇಡೀ ಭಾರತದಲ್ಲೇ ಒಟ್ಟಿಗೆ ಕ್ರಾಂತಿ ಎಬ್ಬಿಸಲು ಯೋಜನೆಯಿದೆ. ಈಗ ಒಬ್ಬನ ಕೊಲೆ ನಮ್ಮ ಈ ಯೋಜನೆಯನ್ನು ಹಾಳು ಮಾಡುತ್ತದೆ. ಇದು ಕೊಲೆಗೆ ಸಕಾಲವಲ್ಲ.  ಇಷ್ಟು ದಿನ ಮಾಡಿರುವ ನಮ್ಮ ಸಂಘಟನಾ ಕಾರ್ಯವೆಲ್ಲ ವ್ಯರ್ಥವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಆದರೆ ಈ ವಿಷಯ ಇಲ್ಲಿಗೆ ಮುಕ್ತಾಯವಾಗಲಿಲ್ಲ. ೧೯೧೧ನೇ ಜೂನ್ ೧೭ರಂದು ಕಲೆಕ್ಟರ್ ಆಷ್ ನ ಕೊಲೆ ಆಯಿತು. ಆಷ್ ಅವರ ಮೇಲೆ ಗುಂಡು ಹಾರಿಸಿದ ಯುವಕ ವಾಂಚಿ ಅಯ್ಯರ್ ಎಂಬಾತ. ಪೋಲಿಸರು ವಾಂಚಿ ಅಯ್ಯರನನ್ನು ಹಿಡಿಯಲು ಪ್ರಯತ್ನಿಸಿದರು. ಆತ ಪೊಲೀಸರಿಂದ ತಪ್ಪಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಕೂಡಲೇ ಪೊಲೀಸರು ಶಂಕೊಟ್ಟೈನಲ್ಲಿದ್ದ ವಾಂಚಿ ಅವರ ಮನೆ ಶೋಧಿಸಿದರು. ಮನೆಯಲ್ಲಿ ನೀಲಕಂಠ ಬ್ರಹ್ಮಚಾರಿ ಅವರು ಬರೆದ ಪತ್ರವೊಂದು ದೊರಕಿತು. ಜಿಂಕೆ ಚರ್ಮ ಒಂದನ್ನು ಕಳುಹಿಸಿಕೊಡುವಂತೆ ನೀಲಕಂಠರು ವಾಂಚಿ ಅವರಿಗೆ ಪತ್ರ ಬರೆದಿದ್ದರು. ಇದರಿಂದ ನೀಲಕಂಠರು ವಾಮಚಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ಸುಳಿವು ಪೊಲೀಸರಿಗೆ ದೊರಕಿತು. ತುತ್ತು ಕುಡಿ ಮತ್ತು ಇತರ ಕಡೆಗಳಲ್ಲಿ ನಡೆಸಿದ ಶೋಧನೆಗಳಿಂದ ವಾಂಚಿ ಅವರು ನೀಲಕಂಠರ ಜೊತೆ ನಿಕಟ ಸಂಪರ್ಕ ಹೊಂದಿದ್ದರೆಂಬುದು ಸ್ಪಷ್ಟವಾಯಿತು.

ಆಷ್ ಅವರ ಕೊಲೆ ಸುದ್ದಿ ಪ್ರಕಟವಾದಾಗ ನೀಲಕಂಠರು ವಾರಣಾಸಿಯಲ್ಲಿ ಇದ್ದರು. ಅಲ್ಲಿಯ ಸ್ನೇಹಿತರೊಬ್ಬರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ನಿಕಟವರ್ತಿಗಳಾಗಿದ್ದ ಶಂರಕಕೃಷ್ಣ ಮತ್ತಿತರ ಬಂಧನ, ತಮ್ಮನ್ನೂ ಬಂಧಿಸಲು ಪೊಳೀಸರ ಶೋಧ- ಈ ಕ್ರಮಗಳನ್ನು ನೀಲಕಂಠರನ್ನು ಚಕಿತಗೊಳಿಸಿದವು. ಏನು ಮಾಡಬೇಕೆಂಬುದು ಅವರಿಗೆ ತೋಚದಾಯಿತು.  ಕಲ್ಕತ್ತಾಗೆ ಹೋಗಿ ಸುರೇಂದ್ರ ನಾಥ ಬ್ಯಾನರ್ಜಿ ಮುಂತಾದವರೊಂದಿಗೆ ಸಮಾಲೋಚಿಸಿದರು. “ನೀವು ಪೊಲೀಸರ ವಶವಾಗುವುದೇ ಉತ್ತಮ. ಈ ಕೊಲೆಯಲ್ಲಿ ನಿಮ್ಮ ಕೈವಾಡ ಇಲ್ಲದಿರುವ ಕಾರಣ ನಿಮಗೆ ಸಾದಾ ಸಜ ವಿಧಿಸುತ್ತಾರೆ”. ಎಮದು ಸುರೇಂದ್ರನಾಥ ಬ್ಯಾನರ್ಜಿ ಅಭಿಪ್ರಾಯಪಟ್ಟರು. ಕಲ್ಕತ್ತ ಪೊಲೀಸರಿಗೆ ನೀಲಕಂಠರು ಶರಣಾದ ಸುದ್ದಿ ದೇಶಾದ್ಯಂತ ಪ್ರಕಟವಾಯಿತು. ೧೯೧೧ನೇ ಜುಲೈ ಮೊದಲನೆ ವಾರದಲ್ಲಿ ನೀಲಕಂಠರನ್ನು ಪೊಳೀಸರ ವಶಕ್ಕೆ ತೆಗೆದುಕೊಳ್ಳಲಾಯಿತು.

ಸೆರೆಮನೆಗೆ :

ನೀಲಕಂಠರ ವಿಚಾರಣೆಗಾಗಿ ಮದರಾಸ್ ಹೈಕೋರ್ಟಿನ ಮೂವರು ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಾಲಯವೊಂದನ್ನು ನೇಮಕ ಮಾಡಲಾಯಿತು. ದೇಶದಲ್ಲೇ ಆಷ್ ಮೊಕದ್ದಮೆ ವಿಚಾರಣೆ ಬಗ್ಗೆ ಸಾರ್ವಜನಿಕವಾಗಿ ಆಸಕ್ತಿ ಕೆರಳಿತ್ತು.

ಈ ಮೊಕದ್ದಮೆ ವಿಚಾರಣೆ ೧೯೧೧ನೇ ಸೆಪ್ಟಂಬರ್ ೧೧ ರಮದು ಆರಂಭವಾಯಿತು. ೭೯ ದಿನಗಳ ಕಾಲ ನಡೆದ ವಿಚಾರಣೆ ೧೯೧೨ನೇ ಫೆಬ್ರವರಿ  ೧೨ ರಂದು ಮುಕ್ತಾಯಗೊಂಡಿತು. ಎರಡೂ ಕಡೆಗಳಿಂದಲೂ ನೂರಾರು ಮಂದಿಯಿಂದ ಸಾಕ್ಷ್ಯ ಸಂಗ್ರಹಿಸಲಾಗಿತ್ತು. ಆಪಾದಿತರು ಆಷ್ ಕೊಲೆ ಸಂಬಂಧದಲ್ಲಿ ತಪ್ಪಿತಸ್ಥರಲ್ಲ ಎಂಬುದನ್ನು ಮೂವರು ನ್ಯಾಯಾಧೀಶರು ಸರ್ವಾನುಮತದಿಂದ ಒಪ್ಪಿಕೊಂಡರು.  ಸರಕಾರವನ್ನು ಬುಡಮೇಲು ಮಾಡುವ ಪ್ರಯತ್ನದ ಅಪರಾಧಕ್ಕೆ ನೀಲಕಂಠ ಬ್ರಹ್ಮಚಾರಿ, ಶಂಕರ ಕೃಷ್ಣ ಅಯ್ಯರ್ ಮತ್ತು ಇತರ ಏಳು ಮಂದಿಗೆ ಒಂದು ವರ್ಷದಿಂದ ಹಿಡಿದು ಏಳು ವರ್ಷದವರೆಗೆ ಕಠಿಣಶಿಕ್ಷೆ ವಿಧಿಸಲಾಯಿತು. ನೀಲಕಂಠರಿಗೆ ಏಳು ವರ್ಷ ಶಿಕ್ಷೆಯಾಯಿತು.

ನೀಲಕಂಠರನ್ನು ಮದರಾಸಿನಿಂದ ಕೊಯಮತ್ತೂರು ಜೈಲಿಗೆ ಕರೆದೊಯ್ಯಲಾಗಿತ್ತು. ತಮ್ಮ ಶಿಕ್ಷೆ ಅವಧಿಯಲ್ಲಿ ಅವರು ಮದರಾಸ್ ರಾಜ್ಯದ ಪ್ರಮುಖ ಜೈಲುಗಳಲ್ಲೆಲ್ಲ ಇದ್ದರು. ಜೈಲಿನಲ್ಲಿ ಅವರನ್ನೇ ಪ್ರತ್ಯೇಕವಾದ ಬಂದೀಖಾನೆಯಲ್ಲಿ ಇಡಲಾಗುತ್ತಿತ್ತು. ಅವರಿಗೆ ಸರಿಯಾದ ಊಟ ಕೊಡುತ್ತಿರಲಿಲ್ಲ. ಜೈಲಿನ ಅಧಿಕಾರಿಗಳು ನೀಲಕಂಠರನ್ನು ಕಂಡು ಹೆದರುತ್ತಿದ್ದರು. ಆದ ಕಾರಣ ಅವರನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ವರ್ಗಾಯಿಸುತ್ತಿದ್ದರು. ಕೆಲವು ದಿನಗಳ ನಂತರ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಕಳುಹಿಸಿ ಕೊಡಲಾಯಿತು. ಅವರ ಸಹೋದರ ದಂಡಪಾಣಿ ಎಂಬುವರು ಕಾಲರಾದಿಂದ ನಿಧನರಾದ ಸುದ್ದಿ ತಿಳಿಯಿತು. ತಮ್ಮ ಸಹೋದರನ ಸಾವು ನೀಲಕಂಠರ ಮೇಲೆ ಪ್ರಭಾವ ಬೀರಿತು. ತಂದೆ, ತಾಯಿ, ಸಹೋದರರು ಮತ್ತು ಸಹೋದರಿಯರ ಹಿತಾಸಕ್ತಿಗಳನ್ನು ಸ್ವಲ್ಪವೂ ಗಮನಿಸದಿದ್ದುದು ಮತ್ತು ತಮ್ಮನ ಸಾವು ಅವರನ್ನು ತುಂಬಾ ದುಃಖಕ್ಕೀಡು ಮಾಡಿತು.

ನೀಲಕಂಠರ ಮನಸ್ಸಿನ ಶಾಂತಿ ಕಲಕಿತು. ೧೯೧೪ನೇ ಫೆಬ್ರವರಿಯಲ್ಲಿ ಒಂದು ದಿನ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಳ್ಳಲು ನಿರ್ಧರಿಸಿದರು. ಬಂಧೀಖಾನೆಯಲ್ಲಿ ತಮ್ಮ ಪಂಚೆಯನ್ನು ಕಿಟಕಿ ಕಂಬಿ ಒಂದಕ್ಕೆ ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧತೆ ಮಾಡಿದರು. ರಾತ್ರಿ ೧೦.೩೦ರ ಸಮಯ, ಜೈಲು ಅಧಿಕಾರಿ ಆದಿಮೂಲಂ ಎಂಬುವವ ನೀಲಕಂಠರ ಬಂಧೀಖಾನೆಗೆ ಬಂದು ಬಾಗಿಲು ತಟ್ಟಿದರು. ಅವರ ಯೋಗಕ್ಷೇಮ ವಿಚಾರಿಸಿದರು. ಲಡ್ಡು ಮತ್ತು ಖಾರ ಬೂಂದಿ ಇದ್ದ ಪೊಟ್ಟಣವೊಂದನ್ನು ಕೊಟ್ಟು ಹೋದರು. ಅನಿರೀಕ್ಷಿತವಾಗಿ ನಡೆದ ಈ ಘಟನೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದ ಅವರ ನಿರ್ಧಾರವನ್ನು ಬದಲಿಸಿತು. ದೇವರಲ್ಲಿ ಅವರಿಗೆ ಅಪಾರವಾದ ನಂಬಿಕೆ ಉಂಟಾಯಿತು. ಹೊಸ ಮನೋಭಾವ, ತೃಪ್ತಿ ಅವರ ಮನಸ್ಸನ್ನು ಆವರಿಸಿತು.

ಸೆರೆಯಿಂದ ತಪ್ಪಿಸಿಕೊಂಡರು

೧೯೧೪ರ ಅಗಸ್ಟ್‌ದಲ್ಲಿ ವಿಶ್ವಸಂಗ್ರಾಮ ಆರಂಭವಾಯಿತು. ಎಲ್ಲಾ ಕ್ರಾಂತಿಕಾರಿಗಳು ಈ ಸಂಗ್ರಾಮವನ್ನು ಬಹಳ ದಿನಗಳಿಂದ ಎದುರು ನೋಡುತ್ತಿದ್ದರು. ಈ ಸಮಯದಲ್ಲಿ ಜೈಲಿನಲ್ಲಿ ಸೋಮಾರಿಯಾಗಿ ಕುಳಿತಿರುವುದು ಸರಿಯೇ ಎಂಬ ಯೋಚನೆ ನೀಲಕಂಠರನ್ನು ಕಾಡತೊಡಗಿತು. ಎಲ್ಲೂ ಇಲ್ಲದ ಉತ್ಸಾಹ ಬಂತು. ಕೊನೆಗೆ ಜೈಲಿನಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದರು. ನೀಲಕಂಠರನ್ನು ಜೈಲಿನಲ್ಲಿ ತುಂಬಾ ಸೌಜನ್ಯದಿಂದ ನೋಡಿಕೊಳ್ಳಲಾಗುತ್ತಿತ್ತು. ಹಗಲಿನಲ್ಲಿ ಅವರು ಜೈಲಿನ ಒಳಗಡೆ ಸ್ವತಮತ್ರವಾಗಿ ಅಡ್ಡಾಡಬಹುದಾಗಿತ್ತು. ಜೈಲು ಅಧಿಕಾರಿಗಳ ಈ ಪ್ರೀತಿ ವಿಶ್ವಾಸ ನೀಲಕಂಠರಿಗೆ ಜೈಲಿನಿಂದ ತಪ್ಪಿಸಿಕೊಳ್ಳಲು ನೆರವಾಯಿತು. ರಾತ್ರಿ ೧೦.೩೦ರ ಸಮಯ, ಅಮವಾಸ್ಯೆ ಕಳೆದು ಎರಡು ದಿನಗಳಾಗಿತ್ತು. ಕಗ್ತ್ತಲು. ಕೈದಿಗಳೆಲ್ಲ ಅವರವರ ಕೋಣೆಯಲ್ಲಿದ್ದರು. ನೀಲಕಂಠರು ಈ ಸಮಯದಲ್ಲಿ ಜೈಲಿನಲ್ಲಿದ್ದ ಕೆಲವು ಬಂಬುಗಳನ್ನು ಜೋಡಿಸಿ ಏಣಿ ಮಾಡಿದರು. ಸುಮಾರು ಆರು ಗಂಟೆಯ ಸತತ ಪರಿಶ್ರಮದ ಫಲವಾಗಿ ಜೈಲಿನಿಂದ ಪರಾರಿಯಾದರು. ಅವರು ಹೊರಗಡೆಗೆ ಬಂದಾಗ ಬೆಳಿಗ್ಗೆ ೫ ಗಂಟೆ. ಜೈಲು ಪಕ್ಕದಲ್ಲಿರುವ ಪೈರಿನಿಂದ ಕೂಡಿದ್ದ ಹೊಲದಲ್ಲಿ ಅವಿತುಕೊಂಡರು. ಅವರು ಪಂಚೆ, ಶರಟು ಧರಿಸಿದ್ದರು. ಯಾರೂ ಅವರನ್ನು ಖೈದಿ ಎಂದು ಗುರುತಿಸಲಾಗುತ್ತಿರಲಿಲ್ಲ. ಬೆಳಗಾಗುತ್ತಿದ್ದಂತೆಯೇ ಜನಸಂದಣಿ ಇರುವ ರಸ್ತೆಗಳನ್ನು ಬಿಟ್ಟು ಸೀಳು ಹಾದಿಯಲ್ಲಿ ನಡೆದರು. ದಾರಿಯಲ್ಲಿ ಸಿಕ್ಕ ಒಂಟಿ ಮನೆಯೊಂದರಲ್ಲಿ ಮೂರು ಆಣೆಗೆ (ಹತ್ತೊಂಬತ್ತು ಪೈಸೆ) ರೊಟ್ಟಿಯೊಂದನ್ನು ಕೊಂಡು ಹಸಿವು ನೀಗಿಸಿಕೊಂಡರು. ವ್ಯಾಪಾರ ಮಾಡುವ ಮಹಮ್ಮದೀಯಂತೆ ನಟಿಸಿದರು. ಮತ್ತೊಂದು ಹಳ್ಳಿಯಲ್ಲಿ ಒಂದು ರಾತ್ರಿ ಕಳೆದರು. ಒಬ್ಬ ಮುದುಕಿ ಅವರಿಗೆ ಆಹಾರ ಕೊಟ್ಟಳು. ಮಾರನೇ ದಿನವೂ ಯಾವ ತೊಂದರೆ ಇಲ್ಲದೆ ಕಳೆದರು. ಪೊಟ್ಟಿಪಡು ಎಂಬ ಹಳ್ಳಿಗೆ ಬಂದರು. ಅಲ್ಲಿ ಧಾರ್ಮಿಕ ಉತ್ಸವವೊಂದು ನಡೆಯುತ್ತಿತ್ತು. ಪೊಟ್ಟಿಪಡು ಗ್ರಾಮದಲ್ಲಿ ಜಮೀನ್ದಾರ್ ಲಿಂಗಾರೆಡ್ಡಿ ಎಂಬುವರಿದ್ದರು. ಅವರು ಮುದುಕರು. ಹಳ್ಳಿಯ ಗಲಭೆಯೊಂದರ ಸಂಬಂಧದಲ್ಲಿ ಅವರಿಗೆ ಶಿಕ್ಷೆಯಾಗಿತ್ತು. ಆರು ತಿಂಗಳ ಮೊದಲು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಲಿಂಗಾರೆಡ್ಡಿ ನೀಲಕಂಠರನ್ನು ಕಂಡ ಕೂಡಲೇ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದರು. ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟರು. ರಾತ್ರಿಯೇ ನೀಲಕಂಠರಿಗೆ ಹಣ ಕೊಟ್ಟು ಜೊತೆಗೆ ಒಬ್ಬನನ್ನು ಕಳಿಸಿ ನೀಲಕಂಠರನ್ನು ಸಮೀಪದ ರೈಲ್ವೆ ಸ್ಟೇಷನ್ಗೆ ಕಳುಹಿಸಿದರು. ನೀಲಕಂಠರು ಧರ್ಮಾವರಂಗೆ ತಲುಪಿದರು. ರೈಲಿನೀಂದಿಳಿದು ಪ್ರಯಾಣಿಕರ ಗುಂಪಿನಲ್ಲಿ ಸೇರಿಕೊಂಡರು. ಅಷ್ಟರಲ್ಲೇ ದೂರದಿಂದ ವ್ಯಕ್ತಿಯೊಬ್ಬ “ಬಳ್ಳಾರಿ ಜೈಲಿನಿಂದ ಎರಡು ದಿನಗಳ ಕೆಳಗೆ ತಪ್ಪಿಸಿಕೊಂಡ ನೀಲಕಂಠ “ಅವನೇ ಎಂದು ಗಟ್ಟಿಯಾಗಿ  ಕೂಗಿದ. ಕೂಡಲೇ ಇಬ್ಬರು ಪೊಲೀಸರು ಬಂದು ನೀಲಕಂಠರನ್ನು ಹಿಡಿದರು. ಅವರನ್ನು ಬಳ್ಳಾರಿ ಜೈಲಿಗೆ ಮತ್ತೆ ಕರೆದುಕೊಂಡು ಹೋದರು. ವಿಚಾರಣೆ ನಡೆಯಿತು. ತಪ್ಪಿಸಿಕೊಂಡಿದ್ದಕ್ಕೆ ಪುನಃ ಆರು ತಿಂಗಳು ಹೆಚ್ಚು ಕಾಲ ಅವರಿಗೆ ಜೈಲು ಶಿಕ್ಷೆ ವಿಧಿಸಲಾಯಿತು.

(ಇಬ್ಬರು ಪೊಲೀಸರು ನೀಲಕಂಠರನ್ನು ಹಿಡಿದರು)

ಪುನಃ ಜೈಲಿಗೆ ಬಂದ ನೀಲಕಂಠರು ಹತಾಶರಾದರು. ಅವರ ನಂಬಿಕೆಗಳೆಲ್ಲಾ ಕುಸಿದು ಬಿದ್ದವು. ದುಃಖ ಅತಿಯಾಯಿತು. “ನೀನೊಬ್ಬನೇ ನನಗೆ ಆಸರೆ ನನಗೆ ದಾರಿ ತೋರು ಕಾಪಾಡು ರಕ್ಷಿಸು” ಎಂದು ದೇವರನ್ನು ಮನತುಂಬಿ ಪ್ರಾರ್ಥಿಸಿದರು. ತಿರುನಲ್ವೇಲಿ ಕೊಲೆ ಮೊಕದ್ದಮೆ ಸಂದರ್ಭದಲ್ಲಿ ೧೯೧೨ನೇ ಫೆಬ್ರವರಿಯಲ್ಲಿ ಜೈಲು ಸೇರಿದ ನೀಲಕಂಠರು ೧೯೧೯ನೇ ಅಗಸ್ಟ್ ೧೪ ರಂದು ವಿಶಾಖಪಟ್ಟಣದ ಜೈಲಿನಿಂದ ಹೊರಬಂದರು.

ಮತ್ತೆ ಹತ್ತು ವರ್ಷ ಜೈಲಿಗೆ :

ಅವರಿಗೆ  ಹೊರಗಿನ ಪ್ರಪಂಚ ಬೇರೆಯಾಗಿ ಕಂಡಿತು. ವಿಶ್ವ ಸಂಗ್ರಾಮ ಮುಗಿದಿತ್ತು. ಭಾರತದ ರಾಜಕೀಯದಲ್ಲಿ ನವಚೈತನ್ಯ ಕಂಡು ಬಂತು. ಗಾಂಧೀಜಿಯವರು ರಾಜಕೀಯಕ್ಕೆ ಪ್ರವೇಶೀಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದರು. ನೀಲಕಂಠರ ಸಂಗಡಿಗರಾರೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರಲಿಲ್ಲ. ಎಲ್ಲರೂ ತಮ್ಮ ತಮ್ಮ ಉದ್ಯೋಗಗಳಲ್ಲಿ ನಿರತರಾಗಿ ಗೃಹ ಜೀವನಕ್ಕೆ ಮರಳಿದ್ದರು. ಆದರೆ  ನಿಲಕಂಠರು ಮಾತ್ರ ಇನ್ನೂ ಕ್ರಾಂತಿಕಾರಿಯಾಗಿಯೇ ಉಳಿದಿದ್ದರು. ೧೯೨೧-೧೯೨೨ರಲ್ಲಿ ನೀಲಕಂಠರು ಕಮ್ಯೂನಿಸ್ಟ್ ತತ್ವಗಳ ಪ್ರಚಾರ ಕೈಗೊಂಡರು. ಪ್ರಪಂಚದ ಕೇಡುಗಳಿಗೆಲ್ಲಾ ಸಮತಾವಾದವೇ ಮದ್ದು ಎಂದು ನಿರ್ಧಾರಕ್ಕೆ ಬಂದರು. ಮತ್ತೆ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಿದರು. ಪರಿಣಾಮ ಪೊಲೀಸ್ ಅಧಿಕಾರಿಗಳು ಅವರ ಶೋಧನೆಗೆ ತೊಡಗಿದರು. ನೀಲಕಂಠರು ತಲೆಮರೆಸಿಕೊಂಡರು. ಕೊನೆಗೂ ನೀಲಕಂಠರು ಪೊಲೀಸರ ಕೈಗೆ ಸಿಕ್ಕರು. ಅವರು ಕೂಡಲೇ ತಮ್ಮ ಬಳಿಯಿದ್ದ ರಿವಾಲ್ವರ್ ತೆಗೆದುಕೊಂಡು ಹಾರಿಸಿದರು. ಅದು ಪೊಲೀಸ್ ಅಧಿಕಾರಿಗೆ ತಾಗಲಿಲ್ಲ. ಮತ್ತೆ ಅವರನ್ನು ಬಂಧಿಸಲಾಯಿತು. ಲೈಸೆನ್ಸ್ ಇಲ್ಲದೆ ರಿವಾಲ್ವರ್ ಹೊಂದಿದ್ದು, ಪೊಲೀಸ್ ಅಧಿಕಾರಿ ಕೊಲೆ ಯತ್ನ, ಸರಕಾರವನ್ನು ಉರುಳಿಸುವ ರಾಜದ್ರೋಹ ಈ ಮೂರು ಆಪಾದನೆಗಳ ಮೇಲೆ ಪುನಃ ವಿಚಾರಣೆ ನಡೆಯಿತು. ಹತ್ತು ವರ್ಷಗಳ ಸೆರೆಮನೆ ಶಿಕ್ಷೆ ವಿಧಿಸಲಾಯಿತು. ಅವರನ್ನು ದೇಶದ ಅನೇಕ ಜೈಲುಗಳಲ್ಲಿ ಇಟ್ಟಿದ್ದು ಕೊನೆಗೆ ರಂಗೂನ್‌ಗೆ ಕರೆದೊಯ್ದರು.

೧೯೩೦ನೇ ಜೂನ್ ೩೦ರಂದು ರಂಗೂನ್ ಸೆಂಟ್ರಲ್ ಜೈಲಿನಿಂದ ನೀಲಕಂಠರ ಬಿಡುಗಡೆಯಾಯಿತು. ಆಗ ಅವರಿಗಿನ್ನೂ ನಲವತ್ತು ವರ್ಷ ವಯಸ್ಸು. ಈ ದೀರ್ಘಕಾಲ ಜೈಲುವಾಸದಿಂದ ಅವರು ಸಂಪೂರ್ಣವಾಗಿ ಬದಲಾಗಿದ್ದರು. ದುಃಖದಿಂದ ಅವರಿಗೆ ಶಾಂತಿ ದೊರಕಿತ್ತು. ಸತ್ಯದ ಅರಿವಾಗಿತ್ತು. ದುಃಖ, ಕಹಿ ಜೀವನ ಭವರೋಗಕ್ಕೆ ಔಷಧಿ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಅವರ ಮುಖದಲ್ಲಿ ಶಾಂತಿ ಅಚ್ಚೊತ್ತಿತ್ತು. ಹೋರಾಟದ ಪ್ರವೃತ್ತಿ ಸಂಪೂರ್ಣವಾಗಿ ಹೋಗಿತ್ತು. ಇಲ್ಲಿಂದ ನನ್ನ ನಿಜವಾದ ಜೀವನ ಆರಂಭವಾಗಿದೆ ಎಂದು ಅವರು ಹೇಳುತ್ತಿದ್ದರು.

ಪತ್ರಿಕೆಗಳಿಗೆ ಲೇಖನಗಳು :

ಜೈಲಿನಿಂದ ಹೊರಬಂದ ಮೇಲೆ ನೀಲಕಂಠರು ಮದರಾಸಿನಲ್ಲಿದ್ದ ತಮ್ಮ ಹಳೆಯ ಅನೇಕ ಮಿತ್ರರನ್ನು ಭೇಟಿಯಾದರು. ಕವಿ ಭಾರತಿ ಅವರನ್ನು ಟ್ರಪ್ಲಿಕೇನ್ನಲ್ಲಿದ್ದ ಅವರ ಮನೆಯಲ್ಲಿ ನೋಡಿದರು. ನೀಲಕಂಠರ ಸ್ಥಿತಿ ನೋಡಿ ಭಾರತಿ ಅವರಿಗೆ ತುಂಬ ಮರುಕ ಉಂಟಾಯಿತು. ದೇಶಪ್ರೇಮಿಯೊಬ್ಬರು ಊಟವಿಲ್ಲದೆ ಬಡತನ ಅನುಭವಿಸುತ್ತಿರುವುದು ಭಾರತೀಯರ ಮೇಲೆ ತುಂಬಾ ಪರಿಣಾಮ ಬೀರಿತು. ನೀಲಕಂಠರು “ಹೀಂದೂ” ಪತ್ರಿಕೆಯ ಕಸ್ತೂರಿ ಶ್ರೀನಿವಾಸನ್ ಅವರನ್ನು ಕಂಡರು. ಪತ್ರಕರ್ತರಾಗಿ ನೀಲಕಂಠರ ಅರ್ಹತೆಯನ್ನು ತಿಳಿದಿದ್ದ ಶ್ರಿನಿವಾಸನ್, ಹಿಂದೂ ಸಾಪ್ತಾಹಿಕಕ್ಕೆ ಲೇಖನಗಳನ್ನು ಬರೆದುಕೊಡುವಂತೆ ಸಲಹೆ ಮಾಡಿದರು. ಅವರ ಸಲಹೆಯಂತೆ ಹಲವಾರು ಲೇಖನಗಳನ್ನು ಸಾಪ್ತಾಹಿಕಕ್ಕೆ ಬರೆದರು. “ಸ್ವದೇಶಿ ಮಿತ್ರನ್” ತಮಿಳು ವಾರ ಪತ್ರಿಕೆಗೂ ಲೇಖನಗಳನ್ನೂ ಬರೆದರು.

ಸಂಚಾರಿ ಸಾಧು :

೧೯೩೧ರಲ್ಲಿ ಅವರ ಜೀವನದಲ್ಲಿ ಮತ್ತೊಂದು ತಿರುವು ಆರಂಭವಾಯಿತು. ಈ ಹೊಸ ವರ್ಷದಲ್ಲಿ ಅವರು “ಸಂಚಾರಿ ಸಾಧು” ಆದರು. ಪರಿವ್ರಾಜಕರಾಗಿ ಒಮದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸತೊಡಗಿದರು. ಜಿವನದ ಆಳ ಅವರಿಗೆ ಹೆಚ್ಚು ಹೆಚ್ಚಾಗಿ ಅರ್ಥವಾಗುತ್ತಾ ಬಂತು. ವಿಶ್ವವೇ ಅವರ ಮನೆಯಾಯಿತು. ಬೈರಾಗಿಯಂತೆ ಅವರು ಪಂಚೆಯನ್ನು ಕಟ್ಟಿಕೊಳ್ಳುತ್ತಿದ್ದರು. ಕೈ ಚೀಲದಲ್ಲಿ  ಒಂದು ಜೊತೆ ಬಟ್ಟೆಯನ್ನು, ಅವಶ್ಯಕ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳುತ್ತಿದ್ದರು. ಮರಗಳ ಕೆಳಗ, ಧರ್ಮ ಛತ್ರಗಳಲ್ಲಿ, ಮನೆಗಳ ವರಾಂಡದಲ್ಲಿ , ಬಯಲುಗಳಲ್ಲಿ ಮಲಗುತ್ತಿದ್ದರು. ಎಲ್ಲವೂ ಅವರಿಗೆ ಒಂದೇ ಆಗಿತ್ತು. ಅವರು ಸದಾ “ಓಂ” ಮಂತ್ರವನ್ನು ಜಪಿಸುತ್ತಿದ್ದರು. ತಮ್ಮ ಹೆಸರನ್ನು “ಓಂಕಾರ್” ಎಂದು ಇಟ್ಟುಕೊಂಡರು. ನೀಲಕಂಠ ಬ್ರಹ್ಮಚಾರಿ ಓಂಕಾರ್ ಆದರು. ಉದ್ದನೆಯ ಗಡ್ಡ ಅವರ ನಿಲುವಿಗೆ ಭೂಷಣವಾಯಿತು. ಅವರ ಜೊತೆ ಸೇರಲು ಮಾತನಾಡಲು ಎಲ್ಲ ವರ್ಗದ ಜನರೂ ಅಪೇಕ್ಷೆ ಪಡುತ್ತಿದ್ದರು.

ದೇಶದಲ್ಲಿ ಸಂಚರಿಸುತ್ತಿದ್ದ ನೀಲಕಂಠರು ಮೈಸೂರು ರಾಜ್ಯದ ಆನೆಗುಂದಿಗೆ ಆಗಮಿಸಿದರು. ಹಂಪೆ ಬಳಿ ಇರುವ ಆನೆಗುಂದಿಗೆ ನೀಲಕಂಠರು ಆಗಮಿಸಿದಾಗ ರಾಣಿ ಕುಪ್ಪಮ್ಮ ಎಂಬುವರು ಅವರಿಗೆ ಭವ್ಯ ಸ್ವಾಗತ ನೀಡಿದರು. ೯೫ ವರ್ಷ ವಯಸ್ಸಿನ ರಣಿ ಕುಪ್ಪಮ್ಮ ವಿಜಯನಗರದ ರಾಜರ ರಾಜರ ವಂಶಸ್ಥರಲ್ಲಿ ಕೊನೆಯವರಾಗಿದ್ದರು. ೧೯೩೨ರಲ್ಲಿ ಅವರು ಓಂಕಾರ್‌ನನ್ನು ಭೇಟಿಮಾಡಿದ ಕೂಡಲೇ ತಮ್ಮ ರಾಜಗುರುವನ್ನಾಗಿ ಅಂಗೀಕರಿಸಿದರು. ಅರಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡರು. ಓಂಕಾರ್ ಅದಕ್ಕೆ ಒಪ್ಪಿದರು. ಸ್ವಲ್ಪ ದಿನಗಳ ನಂತರ ಅವರಿಗೆ ಆನೆಗುಂದಿಯನ್ನು ಬಿಡಬೇಕೆನಿಸಿತು. ಆದರೆ ರಾಣಿ ಒಪ್ಪಲಿಲ್ಲ. ಯಾರಿಗೂ ಹೇಳದಂತೆ ಓಂಕಾರ್ ಅಲ್ಲಿಂದ ಜಾರಿಕೊಂಡರು.

ಓಂಕಾರ್‌ರವರು ಅರಮನೆಯನ್ನು ಬಿಟ್ಟು ಹೋಗುವಾಗ ಒಂದು ಜೊತೆ ಬಟ್ಟೆ ಮಾತ್ರ ತೆಗೆದುಕೊಂಡು ಹೋಗಿದ್ದರು. ಬೆಲೆಬಾಳುವ ಚಿನ್, ಬೆಳ್ಳಿ ಪಾತ್ರೆ, ಪೂಜೆಗಾಗಿ ನಿಡಿದ್ದ ಇತರ ವಸ್ತುಗಳನ್ನೆಲ್ಲಾ ತಮ್ಮ ಕೋಣೆಯಲ್ಲಿ ಬಿಟ್ಟು ಹೋಗಿದ್ದರು.

ನಂದಿಯಲ್ಲಿ :

ಓಂಕಾರ್ ತಮ್ಮ ನಲವತ್ತಯದನೆಯ ವಯಸ್ಸಿನಲ್ಲಿ ೧೯೩೩ನೇ ಡಿಸೆಂಬರ್ ೪ ರಂದು ಮೈಸೂರು ರಾಜ್ಯದ ನಂದಿ ಗ್ರಾಮಕ್ಕೆ ಬಂದರು.  ಗ್ರಾಮದ ಸಮೀ ಓಂಕಾರ್ ಆಶ್ರಮವೊಂದನ್ನು ನಿರ್ಮಿಸಿದರು. ಬೆಂಗಳೂರಿಗೆ ಉತ್ತರಕ್ಕೆ ಸುಮಾರು ೩೫ ಮೈಲಿ ದೂರದಲ್ಲಿರುವ ಈ ಆಶ್ರಮವು ಪ್ರಖ್ಯಾತ ಗಿರಿಧಾಮವಾದ ನಂದಿಬೆಟ್ಟದ ಪಕ್ಕದಲ್ಲೇ ಇದೆ. ನಂದಿ ಬೆಟ್ಟದ ಸುತ್ತ ಇನ್ನೂ ನಾಲ್ಕು ಬೆಟ್ಟಗಳಿವೆ. ಅವುಗಳ ಪೈಕಿ ಚನ್ನಗಿರಿ ಅತಿ ದೊಡ್ಡ ಬೆಟ್ಟ. ಆ ಬೆಟ್ದ ತಪ್ಪಲಲ್ಲಿ ಸದ್ಗುರು ಓಂಕಾರ್ ಆಶ್ರಮ ಸ್ಥಾಪಿಸಿದರು. ಓಂಕಾರ್‌ಅವರು ಹಳ್ಳಿಗರ ಸಹಾಯದಿಂದ ಆ ಜಾಗವನ್ನು ಸ್ವಚ್ಛಗೊಳಿಸಿದರು. ಅಲ್ಲಿ ಲಿಂಗ ಮತ್ತು ನಂದಿ  ವಿಗ್ರಹಗಳು ಅವರಿಗೆ ದೊರಕಿದವು. ದಕ್ಷಿಣ ಪೆನ್ನಾರ್ ನದಿಯ ಮೂಲವಾದ ಆ ಜಾಗದಲ್ಲಿ ಸಣ್ನ ದೇವಾಲಯ ಇದ್ದಿತೆಂದು ಹಳ್ಳಿಯ ಹಿರಿಯರು ಹೇಳಿದರು. ಒಳ್ಳೆ ಶುಭ ಸೂಚನೆಯೆಂದು ತಿಳಿದ ಓಂಕಾರ್ ನಂದಿಯಲ್ಲೇ ಉಳಿಯಲು ನಿರ್ಧರಿಸಿದರು. ಅಲ್ಲಿ ಸಣ್ಣ ದೇವಾಲಯ ನಿರ್ಮಿಸಿದರು. ದೇವರ ಪ್ರತಿಷ್ಠಾಪನೆ ಮಾಡಿದರು. ಓಂಕಾರೇಶ್ವರ ಎಂದು ಅದಕ್ಕೆ ನಾಂಕರಣ ಮಾಡಿದರು. ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದರು.

ನಂದಿಗ್ರಾಮದ  ನಂಜಪ್ಪ ಎಂಬುವನೊಬ್ಬ ದೀರ್ಘ ಕಾಲದಿಂದ ಉಬ್ಬಸ ರೋಗದಿಂದ ನರಳುತಿದ್ದ. ಎಲ್ಲಾ ರೀತಿಯ ಔಷಧಿ ತೆಗೆದುಕೊಂಡರೂ ಅವನ ಕಾಯಿಲೆ ವಾಸಿಯಾಗಲಿಲ್ಲ. ಅವನು ಓಂಕಾರ್ ಅವರ ಹತ್ತಿರ ಬಂದು ತೀರ್ಥ, ಪ್ರಸಾದ ಕೊಟ್ಟು ಆಶಿರ್ವದಿಸುವಂತೆ ಕೇಳಿಕೊಂಡ. ವಿಧಿಯಿಲ್ಲದೆ ಓಂಕರ್ ಅವನ ಮಾತನ್ನು ನಡೆಸಿಕೊಟ್ಟರು. ಮೂರು ದಿನಗಳ ನಂತರ ನಂಜಪ್ಪ ಸಂಪೂರ್ಣವಾಗಿ ಗುಣಮುಖನಾದ. ಇ ಸುದ್ದಿ ಹಳ್ಳಿಯಲ್ಲೆಲ್ಲಾ ಹಬ್ಬಿತು. ಎಲ್ಲಾ ರಿತಿಯ ಕಾಯಿಲೆ ಇರುವವರು ಆಶ್ರಮಕ್ಕೆ ಬರತೊಡಗಿದರು. ಓಂಕಾರ್ ಅವರಿಂದ ತೀರ್ಥ ಸೇವಿಸಿದ ಅನೇಕರು ಗುಣಮುಖರಾದರು. ರೋಗಿಗಳ ಹಿಂಡು ಬರುವುದು ಹೆಚ್ಚಾಯಿತು. ಇದರಿಂದ ಪಾರಾಗಿ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಲು ನಿರ್ಧರಿಸಿದರು. ತಮ್ಮ ಸಾಧನೆಯನ್ನು ಮುಂದುವರೆಸಲು ಚನ್ನಗಿರಿ ಬೆಟ್ಟದ ಮೇಲಕ್ಕೆ ತೆರಳಿದರು. ಇದರಿಂದ ಅವರು ಜನರ ಗದ್ದಲದಿಂದ ಪಾರಾದರು. ಹಣ್ಣು, ಹಂಪಲು, ಹಾಲನ್ನು ಮಾತ್ರ ಸೇವಿಸುತ್ತಿದ್ದರು.

೧೯೩೬ನೇ ಮಧ್ಯದಲ್ಲಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಗಾಂಧಿಜಿಯವರು ನಂದಿ ಬೆಟ್ಟಕ್ಕೆ ಬಂದಿದ್ದರು. ಅವರ ಜೊತೆ ಸರ್ದಾರ್ ವಲ್ಲಭ ಬಾಯಿ ಪಟೇಲ್, ಜೆ.ಸಿ. ಕುಮಾರಪ್ಪ ಮತ್ತು ಮಹದೇವ ದೇಸಾಯಿಯವರು ಇದ್ದರು. ಚನ್ನಗಿರಿ ಬೆಟ್ಟದ ಮೇಲೆ ಒಬ್ಬ ಸಾಧು ವಾಸವಾಗಿದ್ದಾರೆಂದು ತಿಳಿದ ಗಾಂಧೀಜಿ ತಂಡದವರಿಗೆ ಆಸಕ್ತಿ ಕೆರಳಿಸಿತು. ಅವರನ್ನು ಭೇಟ್ಟಿಯಾಗಲು ನಂದಿ ಬೆಟ್ಟಕ್ಕೆ ಹೋದರು. ಅಲ್ಲಿ ಓಂಕಾರ್ ಅವರು ಗಾಂಧಿಜಿ ಜೊತೆ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ಸಮಯದಲ್ಲಿ ಓಂಕಾರ್ ಅವರು ಆತ್ಮವಿಯೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಗಾಂಧೀಜಿಯವರು ಓಂಕಾರ್ ಅವರನ್ನು ವಾರ್ದಾಕ್ಕೆ ಭೇಟಿ ಕೊಡುವಂತೆ ಆಹ್ವಾನಿಸಿದರು.

ಓಂಕಾರ್ ಅವರು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದರು. ಹೋದ ಕಡೆಗಳಲ್ಲೆಲ್ಲ ಕೆಲವೇ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಉಪದೇಶ ನೀಡುತ್ತಿದ್ದರು. ಈ ಸಂಪರ್ಕ ಅವರಿಗೆ ಅನೇಕರನ್ನು ಪರಿಚಯ ಮಾಡಿಕೊಟ್ಟಿತು. ಅವರೊಂದಿಗೆಲ್ಲ ಓಂಕಾರ್  ಅವರು ತಪ್ಪದೇ ಪತ್ರ ವ್ಯವಹಾರ ನಡೆಸುತ್ತಿದ್ದರು. ಶಿವರಾತ್ರಿ ಸಮಯದಲ್ಲಿ ಅವರು ವಿಶೇಷ ಪೂಜೆ, ಹೋಮ, ಸಂತರ್ಪಣೆ ನಡೆಸುತ್ತಿದ್ದರು. ರಾಜ್ಯಪಾಲರು, ನ್ಯಾಯಾಧೀಶರು, ಉನ್ನತ ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು, ಪ್ರಾಧ್ಯಾಪಕರು, ಜನಸಾಮಾನ್ಯರು ಹೀಗೆ ಎಲ್ಲವರ್ಗದ ಜನರು ಆಶ್ರಮಕ್ಕೆ ಬರತೊಡಗಿದರು. ಅವರಿಗೆಲ್ಲರಿಗೂ ಒಂದೇ ರೀತಿಯ ಆತ್ಮೀಯ ಸ್ವಗತ. ಆಶ್ರಮಕ್ಕೆ ಭೇಟಿ ಕೊಟ್ಟವರಿಗೆಲ್ಲಾ ಏನೊ ಸಮಾಧಾನ.

ಹಿರಿಯ ಕ್ರಾಂತಿಕಾರಿ ಒಬ್ಬಂಟಿಯಾಗಿ ಆಶ್ರಮದಲ್ಲಿ ಇರುತ್ತಿದ್ದರು. ತಮ್ಮ ಆತ್ಮಾನುಭವವನ್ನು ಕುರಿತು ಅವರು “ಉಪದೇಶ್” ಮತ್ತು “ಸೆಲೆಕ್ಟೆಡ್ ಟಾಕ್ಸ್” ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಆತ್ಮ ವಿದ್ಯೆ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಗ್ರಂಥಗಳಲ್ಲಿ ಬರೆದಿದ್ದಾರೆ. ಆತ್ಮ ವಿದ್ಯೆ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಗ್ರಂಥಗಳಲ್ಲಿ ವ್ಯಕ್ತಪಡಿಸಿದ್ದಾರೆ.

೮೮ ವರ್ಷ ವಯಸ್ಸಿನ ಓಂಕಾರ್ ೧೯೭೭ನೇ ಏಪ್ರಿಲ್ ದಲ್ಲಿ ಲಘು ಪಾರ್ಶ್ವವಾಯುವಿಗೀಡಾದರು.

೧೯೭೮ರ ಮಾರ್ಚ ೪ ರಂದು ಸಂಜೆ ಸದ್ಗುರು ಓಂಕಾರ್ ಅವರು ತಮ್ಮ ನಂದಿ ಆಶ್ರಮದಲ್ಲಿ ಮಹಾ ಸಮಾಧಿಯನ್ನು ಪ್ರವೇಶಿಸಿದರು.

ಇಂದು ಸದ್ಗುರು ಓಂಕಾರ್ ಅವರು ಅವರ ಶಿಷ್ಯರಿಗೆ, ಅಭಿಮಾನಿಗಳಿಗೆ “ಓಂಕಾರ್” ದಷ್ಟೇ ಶಕ್ತಿ ಸ್ವರೂಪರಾಗಿದ್ದಾರೆ; ಮಾರ್ಗದರ್ಶಕರಾಗಿದ್ದಾರೆ.

* * * * *