ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ೧೧-೭-೧೯೧೧ ರಂದು ಜನಿಸಿದ ನೀಲಮ್ಮನವರ ತಂದೆ ವೃತ್ತಿಯಿಂದ ಪೊಲೀಸ್‌ ಅಧಿಕಾರಿ ಹಾಗೂ ಪ್ರವೃತ್ತಿಯಿಂದ ವೀಣಾ ವಿದ್ವಾಂಸರಾಗಿದ್ದ ವೆಂಕಟಾಚಾರ್ಯರು. ನೀಲಮ್ಮನವರ ತಾಯಿ, ಅಣ್ಣ ಎಲ್ಲರೂ ವೈಣಿಕರೇ! ತಂದೆ ಹಾಗೂ ಅಣ್ಣನವರಿಂದಲೇ ಶಿಕ್ಷಣ ಪಡೆದ ನೀಲಮ್ಮ ಮುಂದೆ ಭೈರವಿ ಲಕ್ಷ್ಮೀನಾರಾಯಣಪ್ಪ ವೀಣಾ ವೆಂಕಟಗಿರಿಯಪ್ಪ ಮೈಸೂರು ವಾಸುದೇವಾಚಾರ್, ಟಿ. ಚೌಡಯ್ಯ ಹಾಗೂ ಪ್ರೊ. ವಿ. ರಾಮರತ್ನಂ ಅವರುಗಳಿಂದ ಗಾಯನ- ವೀಣಾ ವಾದನಗಳೆರಡರಲ್ಲೂ ಅಭ್ಯಾಸ ಪಡೆದು ನಮ್ಮ ನಾಡಿನ ವಿದ್ವನ್ಮಣಿಗಳಲ್ಲಿ ಶ್ರೇಷ್ಠರಾದರು.

ಕರ್ನಾಟಕ ಮತ್ತು ತಮಿಳುನಾಡಿನ ಹಲವೆಡೆಗಳಲ್ಲಿ ಕಿಕ್ಕಿರಿದ ಜನ ಸಮುದಾಯದಲ್ಲಿ ವೀಣೆಯೊಡನೆ ತಮ್ಮ ಮಧುರ ಧ್ವನಿಯನ್ನೂ ಬೆರೆಸಿ ಇವರು ನೀಡಿದ ಕಛೇರಿಗಳು ಚಿರಸ್ಮರಣೀಯ. ೧೯೫೪ ರಲ್ಲಿ ದೆಹಲಿಯ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ನಡೆದ ಇವರ ಕಛೇರಿಯಲ್ಲಿ ಅಂದಿನ ಪ್ರಧಾನಿ ನೆಹರೂ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್‌ ಅವರೂ ಉಪಸ್ಥಿತರಿದ್ದು ಬಹುವಾಗಿ ಮೆಚ್ಚುಗೆ ಪ್ರದರ್ಶಿಸಿದರು.

ಸಾರ್ವಜನಿಕವಾಗಿ ವೇದಿಕೆಯಿಂದ ಕಛೇರಿ ಮಾಡಿದ ಪ್ರಪ್ರಥಮ ಮಹಿಳೆ. ಬೆಂಗಳೂರು ಆಕಾಶವಾಣಿಯಿಂದ ಮೊಟ್ಟ ಮೊದಲ ವೀಣಾ ವಾದನ ಕಾರ್ಯಕ್ರಮ ನೀಡಿದ ಕಲಾವಿದೆ. ಕರ್ನಾಟಕ ಗಾನಕಲಾ ಪರಿಷತ್ತಿನಿಂದ ‘ಗಾನ ಕಲಾ ಭೂಷಣ’ ಗೌರವ ಸ್ವೀಕರಿಸಿದ ಪ್ರಪ್ರಥಮ ಮಹಿಳೆ – ಹೀಗೆ ಹಲವು ಪ್ರಥಮಗಳಿಗೆ ಪಾತ್ರರಾದ ನೀಲಮ್ಮ ಕಡಾಂಬಿಯವರು ಗಳಿಸಿದ ಪಾರಿತೋಷಕಗಳೂ, ಗೌರವಗಳೂ ಅಪಾರ. ‘ಸತಿ ತುಳಸಿ’ ಎಂಬ ಕನ್ನಡ ಚಲನಚಿತ್ರದಲ್ಲಿ ನೀಲಮ್ಮನವರ ವೀಣಾ ಕಛೇರಿಯ ದೃಶ್ಯವಿದೆ.

ಸಮಯಾಭಾವದಿಂದ ಕೆಲವರಿಗಷ್ಟೇ ಶಿಕ್ಷಣ ನೀಡಲು ಇವರಿಗೆ ಸಾಧ್ಯವಾಗಿತ್ತು. ನೀಲಮ್ಮನವರ ಅಂತಿಮ ದಿನಗಳು ಅತ್ಯಂತ ದಯನೀಯವಾಗಿದ್ದು ಗಳಿಸಿದ್ದ ರಜತ-ಸುವರ್ಣ ಪದಕಗಳನ್ನೂ ಫಲಕಗಳನ್ನೂ ಕಳೆದುಕೊಂಡಿದ್ದು  ಕೇವಲ ವೀಣೆಯನ್ನು ಸಂಗಾತಿಯಾಗಿ ಹೊಂದಿದ್ದು ನಿಜಕ್ಕೂ ದುರ್ದೈವವೇ ಸರಿ. ೧೯೮೭-೮೮ರ ಸಾಲಿನಲ್ಲಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ಪಡೆದಿದ್ದ ಈ ನಾದಾನುಸಂಧಾನ ರಕ್ಷೆಯನ್ನು ನಾದದೇವಿಯು ೧೪-೧೨-೧೯೯೮ ರಂದು ತನ್ನಲ್ಲಿಯೇ ಐಕ್ಯ ಮಾಡಿಕೊಂಡಳು.