ನೀಲಮ್ಮನವರು ೧೧.೭.೧೯೧೧ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಇವರ ತಂದೆ ವೀಣಾ ವಿದ್ವಾಂಸರಾಗಿದ್ದ ವೆಂಕಟಾಚಾರ್ಯರು ವೃತ್ತಿಯಲ್ಲಿ ಪೋಲೀಸ್‌ ಇನ್ ಸ್ಪೆಕ್ಟರ್ ಆಗಿದ್ದರು. ನಿವೃತ್ತರಾದ ಮೇಲೆ ಮೇಲುಕೋಟೆ ದೇವಸ್ಥಾನದ ಪೇಷ್ಕಾರ್ ಆಗಿದ್ದರು.

ನೀಲಮ್ಮನವರ ತಾಯಿಯವರೂ ವೈಣಿಕರೆ. ಇವರ ಅಣ್ಣ ಎಂ.ವಿ. ಶ್ರೀನಿವಾಸ ಐಯಂಗಾರ್ ರವರು. ಅಣ್ಣನವರೂ ಒಳ್ಳೆಯ ಸಂಗೀತ ವಿದ್ವಾಂಸರು. ಇವರದು ಉತ್ತಮ ಸುಸಂಸ್ಕೃತ ಕುಟುಂಬ. ನೀಲಮ್ಮನವರಿಗೆ ಚಿಕ್ಕಂದಿನಿಂದಲೇ ಅಣ್ಣನವರಲ್ಲಿ ವೀಣೆ ಪಾಠವಾಯಿತು. ತಂದೆಯವರೂ ಸಂಗೀತ ಶಿಕ್ಷಣ ನೀಡಿದರೆಂದು ಒಂದು ಪುಸ್ತಕದಲ್ಲಿದೆ. (ನಮ್ಮ ಸಂಗೀತ ಕಲಾವಿದರು ಪುಟ ೧೩೯) ಆದರೆ ನಂಬಲರ್ಹವಾದ ಮಾಹಿತಿ ದೊರೆಕಿದ ಪ್ರಕಾರ ಅಣ್ಣನವರಿಂದ ಸಂಗೀತ ಪಾಠವಾಯಿತೆಂದು ತಿಳಿದು ಬಂದಿದೆ.

ಮುಂದೆ ವಿದ್ವಾನ್‌ ಲಕ್ಷ್ಮಿನಾರಣಪ್ಪನವರಲ್ಲೂ ಅನಂತರ ವೀಣಾ ವೆಂಕಟಗಿರಿಯಪ್ಪನವರಲ್ಲೂ ವೀಣಾ ಪಾಠವನ್ನು ಮುಂದುವರಿಸಿದ ನೀಲಮ್ಮನವರು ಹಾಡುಗಾರಿಕೆಯನ್ನು ಮೈಸೂರು ವಾಸುದೇವಾಚಾರ್ಯರಲ್ಲಿ, ಮೈಸೂರು ಟಿ.ಚೌಡಯ್ಯನವರಲ್ಲಿ, ವಿ. ರಾಮರತ್ನಂ ಅವರಲ್ಲೂ ಕಲಿತರು. ಆ ಕಾಲದಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ವೀಣೆ ಅಥವಾ ಹಾಡುಗಾರಿಕೆ ಕಲಿಸುವುದು ಪದ್ಧತಿಯಾಗಿದ್ದು ಹಾಗೆಯೆ ವರ ದೊರಕಲು ಇದೊಂದು ಅನರ್ಹತೆಯಾಗಿದ್ದರಿಂದ ಪ್ರತಿಭಾನ್ವಿತರಾದ ವಿದುಷಿಯರಿಗೆ ಸುವರ್ಣಾವಕಾಶಕ ಲಭಿಸಿದಂತಾಯಿತು.

ನೀಲಮ್ಮನವರು  ಎತ್ತರವಾದ ಸ್ಫುರದ್ರೂಪಿ ಹೆಂಗಸು. ಮಾತು ನಿಷ್ಠುರವಾದರೂ ಹೃದಯ ಮೃದು. ಸ್ವತಂತ್ರ ಪ್ರವೃತ್ತಿ, ಇವರ ಪತಿ ಕಡಾಂಬಿ ಕೃಷ್ಣೈಯ್ಯಂಗಾರ್ಯರು ನಂಜನಗೂಡಿನಲ್ಲಿ ಪ್ರಸಿದ್ಧ ವಕೀಲರಾಗಿದ್ದು ಕೆಲ ವರ್ಷಗಳ ನಂತರ ಮೈಸೂರಿನಲ್ಲಿ ನೆಲೆಸಿದರು. ಪತಿಯ ಉತ್ತೇಜನ ಪ್ರೋತ್ಸಾಹದಿಂದ ವಾಸುದೇವಾಚಾರ್ಯರಲ್ಲಿ ಸಂಗೀತ ಮುಂದುವರಿಸಲು ಸಾಧ್ಯವಾಯಿತು. ಆ ಕಾಲದಲ್ಲಿ ಸಾರ್ವಜನಿಕವಾಗಿ ವೇದಿಕೆಯ ಮೇಲೆ ಸಂಗೀತ ಕಚೇರಿ ಮಾಡಿದ ಮೊದಲ ಮಹಿಳೆ ನೀಲಮ್ಮ ಕಡಾಂಬಿಯವರೇ ಎಂಬುದನ್ನಿಲ್ಲಿ ಸ್ಮರಿಸಬೇಕು.

ಕಚೇರಿಗಳು: ನೀಲಮ್ಮನವರು ಒಳ್ಳೆಯ ಯಶಸ್ವ ಈ ವೀಣಾವಾದಕಿ. ಇವರು ವೀಣಾವಾದನದ ಜೊತೆಗೆ ಹಾಡುತ್ತಿದ್ದರು. ಕೋಮಲವಾದ ಧ್ವನಿಯೊಂದಿಗೆ ವೀಣೆಯ ತಂತಿನಾದ ಎರಡೂ ಹದವಾಗಿ ಬೆರೆತು ವಿಶೇಷ ಅನುಭವ ಹುಟ್ಟಿಸುತ್ತಿತ್ತು. ಇವರ ಕಚೇರಿಗಳಲ್ಲಿ ಕರ್ನಾಟಕ ಸಂಗೀತ ಸಂಪ್ರದಾಯದೊಂದಿಗೆ ಕೊನೆಯಲ್ಲಿ ಹಿಂದುಸ್ತಾನಿ ಮಟ್ಟುಗಳನ್ನೂ ನುಡಿಸುತ್ತಿದ್ದುದು ಹೊಸ ಆಕರ್ಷಣೆಯಾಗಿತ್ತು.

ಮೈಸೂರು ಅರಮನೆಯಲ್ಲಿ ನೀಲಮ್ಮನವರ ಪತಿಯ ಭಾವಂದಿರಾದ ಕೆ. ನರಸಿಂಹ ಐಯ್ಯಂಗಾರ್ (ಪ್ರಸಿದ್ಧ ವಿಜ್ಞಾನಿ ರಾಜಾರಾಮಣ್ಣ ಅವರ ಮಾವಂದಿರು) ಹುಜೂರ್ ಸೆಕ್ರೆಟರಿ ಆಗಿದ್ದರು. ಅವರಿಂದಾಗಿ ಅರಮನೆ ಸಂಪರ್ಕ ಹೆಚ್ಚಾಗಿತ್ತು.

ಒಮ್ಮೆ, ೧೯೪೭ಕ್ಕೂ ಮುಂಚೆ ಸಂಗೀತ ಸಂರಕ್ಷಣ ಸಭಾ ಮಧುರೈ, ಇಲ್ಲಿ ಕಚೇರಿ ಏರ್ಪಟ್ಟಿತ್ತು. ಅಲ್ಲಿನ ಸಭಾಂಗಣ ಕಿಕ್ಕಿರಿದ ಶೋತೃಗಳಿಂದ ತುಂಬಿ ಅಲುಗಾಡಲು ಸ್ಥಳವಿಲ್ಲದಂತಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಮಿಳುನಾಡಿನಲ್ಲೇ ಇವರಿಗೆ ಸಂಗೀತ ಕಚೇರಿಗಳು ಹೆಚ್ಚಾಗಿ ನಡೆಯುತ್ತಿತ್ತು. ಮೈಸೂರು ಅರಮನೆಯಲ್ಲೂ ಅನೇಕ ಬಾರಿ ಕಚೇರಿಯನ್ನು ನೀಡಿದ್ದರು.

೧೯೫೪ರಲ್ಲಿ ದೆಹಲಿಯಲ್ಲಿ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ಮೈಸೂರಿನಿಂದ ನೀಲಮ್ಮನವರು ವೀಣಾವಾದನ ಕಚೇರಿ ನೀಡಲು ಆಯ್ಕೆಯಾಗಿದ್ದರು. ಆ ಕಚೇರಿಯಲ್ಲಿ ಅಂದಿನ ಪ್ರಧಾನಮಂತ್ರಿ ಪಂಡಿತ್‌ ಜವಹರಲಾಲ್‌ ನೆಹರು ಮತ್ತು ರಾಷ್ಟ್ರಪತಿ ಎಸ್‌. ರಾಧಾಕೃಷ್ಣನ್‌ರವರು ಉಪಸ್ಥಿತರಿದ್ದರು. ಎಲ್ಲರ ಮೆಚ್ಚುಗೆ ಗಳಿಸಿದ ವೀಣೆಯ ಕಾರ್ಯಕ್ರಮ ಸ್ಮರಣೀಯವಾಯಿತು.

ಬೆಂಗಳೂರಿನಲ್ಲಿ ಆಕಾಶವಾಣಿ ನಿಲಯ ಪ್ರಾರಂಭವಾದಾಗ ಮೊದಲ ವೀಣಾ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಯೂ ನೀಲಮ್ಮನವರದೆ, ಹಾಗೆಯೇ ಇವರು ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಅನೇಕ ವರ್ಷಗಳು ಕಾರ್ಯ ನಿರ್ವಹಿಸಿದ್ದರು.

೧೯೭೨ರಲ್ಲಿ ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್‌ನ ವಾರ್ಷಿಕ ಸಮ್ಮೇಳನದಲ್ಲಿ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಗೊಂಡ ನೀಲಮ್ಮ ಕಡಾಂಬಿಯವರು ಗಾನ ಕಲಾ ಭೂಷಣ ಎಂಬ ಬಿರುದು ಸ್ವೀಕರಿಸಿ ಅವರ ‘ಪ್ರಥಮ’ಗಳ ಶ್ರೇಣಿಗೆ ಮತ್ತೊಂದು ಸಾಧನೆಯ ರತ್ನವನ್ನು ಕೂಡಿಸಿದರು.

ಮೈಸೂರು ಅರಮನೆಯಲ್ಲೂ ಗಂಡಭೇರುಂಡ ಲಾಂಛನದ ಪೆಂಡೆಂಟ್‌ನ ಚಿನ್ನದ ಸರವನ್ನು  ನೀಡಿ ಗೌರವಿಸಲಾಯಿತು.

೧೯೮೭-೮೮ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಸನ್ಮಾನಿಸಲ್ಪಟ್ಟರು.

ಕರ್ನಾಟಕ ಸರ್ಕಾರದಿಂದ ಇವರಿಗೆ ರೂ. ೫೦೦/೦ಗಳ ಗೌರವಧನವೂ ಬರುತ್ತಿತ್ತು. ೧೯೨೩- ತಂಜಾವೂರಿನಲ್ಲಿ ಬಾಲಕೇಸರಿ ಎಂಬ ಬಿರುದು ಲಭಿಸಿತ್ತು. ೧೯೪೪-ಟಿ.ವಿ.ಎಸ್‌. ಗ್ರೂಪ್‌ವತಿಯಿಂದ ಇವರ ಸಂಗೀತ ಕಚೇರಿ ನಡೆದು ಉತ್ತಮ ಕುಸುರಿ ಕೆತ್ತನೆಯಿರುವ ಬೆಳ್ಳಿವೀಣೆಯನ್ನು ಪ್ರದಾನಿಸಿದ್ದರು. ಬೆಳ್ಳಿವೀಣೆಯಲ್ಲಿ ಎಲೆ, ಅಡಿಕೆ, ಏಲಕ್ಕಿ, ಲವಂಗ, ಸುಣ್ಣ ಇಟ್ಟುಕೊಳ್ಳಲು ಭಾಗಗಳಿದ್ದಂತಹ ಕರಂಡಿಕೆಯೂ ಇತ್ತು. ಇಷ್ಟೇ ಅಲ್ಲದೆ ಇವರಿಗೆ ಅನೇಕ ಕಡೆ ರಜತ ಪದಕಗಳನ್ನು, ಬೆಳ್ಳಿಯ ಫಲಕಗಳನ್ನು ನೀಡಿ ಪುರಸ್ಕರಿಸಲಾಗಿತ್ತು. ಆದರೆ ತಮ್ಮ ಅಂತ್ಯಕಾಲಕ್ಕೆ ಅವಾವುದನ್ನೂ ಉಳಿಸಿಕೊಳ್ಳಲಾರದ ಸ್ಥಿತಿಯನ್ನು ತಲುಪಿದ್ದು ಈಕೆಯ  ಬದುಕಿನ ಮತ್ತೊಂದು ಮಗ್ಗುಲು.

ಕೊಲಂಬಿಯಾ ಕಂಪೆನಿಯಿಂದ ನೀಲಮ್ಮ ಕಡಾಂಬಿಯವರ ಗಾನಮುದ್ರಿಕೆ (Disc) ಯೂ ಧ್ವನಿ ಮುದ್ರಣವಾಗಿತ್ತು. ಇದರಲ್ಲಿ ಒಂದು ಕಡೆ ‘ಏಮಯ್ಯರಾಮ’ ಎಂಬ ತ್ಯಾಗರಾಜರ ಕೃತಿ ಇನ್ನೊಂದು ಕಡೆ ‘ಜಾನಕಿ ಮನೋಹರಂ ಭಜೆ’ ಮತ್ತು ‘ಪಿಬರೆ ರಾಮರಸಂ ’ ರಚನೆಗಳಿಗವೆ.

‘ಸತಿ ತುಳಸಿ’ ಎಂಬ ಕನ್ನಡ ಚಲನಚಿತ್ರದಲ್ಲಿ (೧೯೪೩-೪೪) ನೀಲಮ್ಮ ಕಡಾಂಬಿಯವರ ವೀಣೆ ಕಚೇರಿಯ ದೃಶ್ಯವಿದೆ.

ಪಾಠಕ್ರಮ ಮತ್ತು ಶಿಷ್ಯರು: ನೀಲಮ್ಮನವರು ಸಂಗೀತ ಪಾಠ ಹೇಳುವುದರಲ್ಲಿ ಬಹಳ ಕಟ್ಟುನಿಟ್ಟು. ಶಿಷ್ಯರು ಹೇಳಿಕೊಟ್ಟ ಪಾಠವನ್ನು ಸರಿಯಾಗಿ ಒಪ್ಪಸದಿದ್ದರೆ ಅವರಿಗೆ ಬೈಗುಳವೇ. ಜೊತೆಗೆ ಶಿಷ್ಯರನ್ನು ಕಂಡರೆ ಅಷ್ಟೆ ವಾತ್ಸಲ್ಯ ಮತ್ತು ವಿಶ್ವಾಸವೂ ಇತ್ತು. ಒಮ್ಮೊಮ್ಮೆ ಶಿಷ್ಯರಿಗೆ ಊಟ ತಿಂಡಿಯೂ ಆಗುತ್ತಿತ್ತು. ಇವರಿಗೆ ಕಚೇರಿಯು ಹೆಚ್ಚಾಗಿ ಇದ್ದುದರಿಂದ ವೇಳೆ ಇಲ್ಲದ ಕಾರಣ ಸಂಗೀತ ಪಾಠವನ್ನು ಹೆಚ್ಚು ಜನರಿಗೆ ಹೇಳಿಕೊಡಲಾಗುತ್ತಿರಲಿಲ್ಲ.

ಟಿ.ವಿ.ಎಸ್‌. ಸಂಸ್ಥೆಯ ಮಾಲೀಕ ಟಿ.ವಿ. ಸುಂದರಂ ಅವರ ಮಗ ದೊರೆಸ್ವಾಮಿಯವರು ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಮೈಸೂರಿಗೆ ಬಂದು ಇವರಲ್ಲಿ ಸಂಗೀತವನ್ನು ಹೇಳಿಸಿಕೊಂಡು ಹೋಗುತ್ತಿದ್ದರು. ಮದರಾಸಿನಲ್ಲಿ ಕಚೇರಿಗಳನ್ನು ಏರ್ಪಡಿಸಿ ಗುರುಗಳನ್ನು ಕರೆಸಿಕೊಳ್ಳುತ್ತಿದ್ದರು.

ಇವರ ಶಿಷ್ಯರಲ್ಲಿ ಪ್ರಸಿದ್ಧರಾದ ಕೆಲವರು-ವೀಣಾ ವಿದುಷಿ. ದಿ. ಎಂ.ಎಸ್‌. ಜಯಮ್ಮ, ದಿ. ವತ್ಸಲರಾಮಕೃಷ್ಣ, ದಿ. ಶ್ರೀದೇವಿ (ಅಮೇರಿಕಾ), ದಿ.ಜಾನಕಮ್ಮ (ಇವರ ಶಿಷ್ಯೆ ಹಾಗೂ ಖಾಸಾ ಸ್ನೇಹಿತೆ), ವಿದುಷಿ ಜಿ.ವಿ. ರಂಗನಾಯಕಮ್ಮ (ಪ್ರಾರಂಭ ಶಿಕ್ಷಣ).

ಧಾರವಾಡ ಆಕಾಶವಾಣಿ ನಿಲಯದಲ್ಲೂ ಆಗಾಗ್ಗೆ ಇವರು ವೀಣೆಯ ಕಾರ್ಯಕ್ರಮವನ್ನು ನೀಡುತ್ತಿದ್ದರು. ದೂರದರ್ಶನದಿಂದಲೂ ಇವರ ಕಚೇರಿ ಪ್ರಸಾರವಾಗಿತ್ತು.

ನೀಲಮ್ಮನವರ ವೀಣಾವಾದನ ಕಚೇರಿಗೆ ಪಕ್ಕವಾದ್ಯದಲ್ಲಿ ಹೆಚ್ಚಗಿ ದಿ. ಎ.ವಿ. ಕೃಷ್ಣಮಾಚಾರ್, ದಿ.ಟಿ. ಗುರುರಾಜಪ್ಪ, ದಿ.ಬಿ. ಕೇಶವಮೂರ್ತಿ ಪಿಟೀಲಿನಲ್ಲೂ, ವಿ.ವಿ. ರಂಗನಾಥನ್‌, ದಿ. ಟಿ.ಕೆ.ವೈಯ್ಯಾಪುರಿದೇವರ್ ಮೃದಂಗದಲ್ಲೂ ಸಹಕರಿಸುತ್ತಿದ್ದರು. ಎಲ್ಲ ಕಚೇರಿಗಳಲ್ಲೂ ವೀಣಾವಾದನದೊಂದಿಗೆ ತಮ್ಮ ಮಧುರ ಕಂಠವನ್ನು ಮೇಳೈಸುತ್ತಿದ್ದುದರಿಂದ ಹಾಲು ಜೇನು ಬೆರೆತಂತೆ ಕೇಳಲು ಸುಮಧುರವಾಗಿರುತ್ತಿತ್ತು.

ಹೀಗೆ ಇವರು ಅನೇಕ ಸಭೆ, ಸಮಾರಂಭಗಳಲ್ಲಿ ಸಾವಿರಾರು ಕಚೇರಿಗಳನ್ನು ನಡೆಸಿದ್ದರು. ವಿಜಯವಾಡ, ಕಾಕಿನಾಡ, ರಾಜ ಮಹೇಂದ್ರಿ, ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್‌, ಮಲ್ಲೇಶ್ವರಂ ಸಂಗೀತ ಸಭಾ, ಮದರಾಸಿನ ರಸಿಕ ರಂಜನಿ ಸಭಾ, ಪಾರ್ಥಸಾರಥಿ ಸಂಗೀತ ಸಭಾ, ಬೊಂಬಾಯಿ, ದೆಹಲಿ, ನಾಗಪುರ ಮುಂತಾದ ಕಡೆಗಳಲ್ಲಿ ಯಶಸ್ವಿಯಾಗಿ ವೀಣಾಗಾಯನ ಕಚೇರಿಯನ್ನು ನಡೆಸಿದ್ದರು. ಇವರ ಕಚೇರಿಯಲ್ಲಿ ಸದಾಕಾಲವು ಸಭಾಂಗಣ ಶೋತೃಗಳಿಂದ ತುಂಬಿರುತ್ತಿತ್ತು.

ಇವರ ಸಾಂಸರಿಕ ಜೀವನ ಅಷ್ಟು ಸಮರ್ಪಕವಾಗಿರಲಿಲ್ಲ. ೧೯೮೧ರಲ್ಲಿ ಇವರ ಪತಿಯವರು ಸ್ವರ್ಗಸ್ಥರಾದ ನಂತರ ನೀಲಮ್ಮನವರು ಮೈಸೂರಿನ ಮನೆಯನ್ನು, ತಮ್ಮಲ್ಲಿದ್ದ ಅಮೂಲ್ಯ ವಸ್ತುಗಳನ್ನು ಮಾರಿಕೊಂಡು ಬೆಂಗಳೂರಿಗೆ ಹೋಗಿ ಪೋಲೀಸ್‌ ಕ್ವಾಟರ್ಸ್‌‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಬ್ಬರೇ ವಾಸವಾಗಿದ್ದರು. ವೀಣೆಯೊಂದನ್ನು ಮಾತ್ರ ಕೈ ಬಿಡದೆ ತಮ್ಮೊಡನಾಡಿಯಾಗಿರಿಸಿಕೊಂಡು ಕೊನೆಯವರೆಗು ಕಚೇರಿ ನಡೆಸಿದ್ದರು.

ನೀಲಮ್ಮನವರ ಜೀವಿತದ ಅಂತಿಮ ದಿನಗಳು ಯಾತನಾ ಮಯವಾಗಿದ್ದುವೆನ್ನುವುದೂ ಚಿತ್ತ ಭ್ರಮಣೆಯಾಗಿತ್ತೆನ್ನುವುದೂ ಅತ್ಯಂತ ವಿಷಾದನೀಯ. ಕ್ಷೀಣಿಸಿದ ಆರೋಗ್ಯದಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಯಾರ ಅರಿವಿಗೂ ಬರದೆ ಚಿಕಿತ್ಸೆ ಪಡೆಯುತ್ತಿದ್ದ ಇವರು ಆಸ್ಪತ್ರೆಯಲ್ಲೂ ಸಂಗೀತವನ್ನೇ ಹಾಡುತ್ತಿದ್ದರೆಂದೂ ಅದರಿಂದಲೇ ಒಬ್ಬ ದಾದಿಯು ಗುರುತು ಹಿಡಿದು ಸೋದರಳಿಯ ಶ್ರೀ ನಾರಾಯಣ್‌ ಅವರಿಗೆ ತಿಳಿಸಿದರೆಂದೂ ತಿಳಿದುಬರುತ್ತದೆ. ನೀಲಮ್ಮನವರು ಡಿಸೆಂಬರ್‌ ೧೪, ೧೯೯೮ರಂದು ತಾವು ನಂಬಿದ ನಾದದೇವಿಯಲ್ಲಿ ಐಕ್ಯವಾದರು.