ಸಂಪ್ರದಾಯಸ್ಥ ಕುಟುಂಬದಲ್ಲಿ ಪಿಟೀಲು ವಿದ್ವಾನ್‌ ಟಿ.ವಿ. ಕೃಷ್ಣಸ್ವಾಮಿ ಅಯ್ಯರ್ ಅವರ ಪುತ್ರಿಯಾಗಿ ಮದರಾಸಿನಲ್ಲಿ ೨೫-೫-೧೯೩೫ ರಂದು ಜನಿಸಿದವರು ನೀಲಾ. ವಿರುದುನಗರ ಗಣಪತಿ ಪಿಳ್ಳೆ ಕುಂಭಕೋಣದ ನೆಡುಂದೆರು ಷಡಗೋಪಾಲಾಚಾರ್, ಸುವಿಖ್ಯಾತ ಸಂಗೀತ ವಿಮರ್ಶಕ ಎನ್‌.ಎಂ. ನಾರಾಯಣ ಹಾಗೂ ಟಿ.ಕೆ. ರಂಗಾಚಾರ್ ಅವರುಗಳಲ್ಲಿ ಸಂಗೀತಾಭ್ಯಾಸ ಮಾಡಿ, ಸತತ ಅಭ್ಯಾಸದಿಂದ ಉತ್ತಮ ಗಾಯಕಿಯಾದರು.

ಭಾರತದ ಹಲವೆಡೆಗಳಲ್ಲಿ ಅನೇಕ ಕಛೇರಿಗಳನ್ನು ನೀಡಿದ್ದಾರೆ. ಅಮೇರಿಕ-ಇಂಗ್ಲೆಂಡ್‌ ಪ್ರವಾಸ ಮಾಡಿ ಕಛೇರಿಗಳನ್ನು ಕಾರ್ಯಾಗಾರಗಳನ್ನು ನಡೆಸಿ ಬಂದಿದ್ದಾರೆ. ಆಕಾಶವಾಣಿಯ ‘ಎ’ -ಟಾಪ್‌ ದರ್ಜೆಗೆ ಸೇರಿದ್ದು ಅವರ ಗಾಯನವು ಹಲವು ಕೇಂದ್ರಗಳಿಂದಲೂ ದೂರದರ್ಶನದ ಮೂಲಕವು ಪ್ರಸಾರವಾಗುತ್ತಿದೆ. ಭಾರತೀಯ ವಿದ್ಯಾಭವನವು ನವಗ್ರಹ ಕೃತಿಗಳನ್ನು ಅವರ ಧ್ವನಿಯಲ್ಲಿ ಮುದ್ರಿಸಿಕೊಂಡಿದೆ.

ಈಗಾಗಲೇ ಕಛೇರಿ ಮಾಡುವ ಮಟ್ಟ ತಲುಪಿರುವ ಹಲವಾರು ಸಂಗೀತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದಾರೆ. ಇವರ ಶಿಷ್ಯರು ಏಕತ್ರರಾಗಿ ಸ್ಥಾಪಿಸಿರುವ ‘ನೀಲಾಂಬರಿ’ಯ ಮೂಲಕ ವಿವಿಧ ವಾಗ್ಗೇಯಕಾರರ ೭೨ ಮೇಳ ರಾಗಗಳಲ್ಲಿನ ಕೃತಿಗಳನ್ನು ಆಲಾಪನಾ – ಸ್ವರ ಪ್ರಸ್ತಾರ ಸಹಿತ ನೀಲಾರವರು ಹಾಡಿರುವುದನ್ನು ಹಲವಾರು ಅಡಕ ಚಕ್ರ (ಸಿ.ಡಿ.) ಗಳಾಗಿ ಹೊರ ತಂದಿದ್ದಾರೆ.

ಸಂಗೀತದ ವಿವಿಧ ಅಂಶಗಳನ್ನು ಕುರಿತು ಪ್ರಾತ್ಯಕ್ಷಿಕೆ ಸೋದಾಹರಣ ಭಾಷಣಗಳನ್ನು ನೀಡಿರುವ ಶ್ರೀಮತಿಯವರಿಗೆ ಅನೇಕ ಸಂಘ-ಸಂಸ್ಥೆಗಳು ಹಲವು ವಿಧವಾಗಿ ಪುರಸ್ಕಾರ ಸಲ್ಲಿಸಿವೆ. ‘ಗಾನ ಪ್ರಕೀರ್ತಿ’ ‘ಸಂಗೀತ ಕಲಾ ಸಾಮ್ರಾಜ್ಞೆ’, ‘ಸಂಗೀತ ಚೂಡಾಮಣಿ’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ‘ಸಂಗೀತ ಕಲಾರತ್ನ’ ಮುಂತಾದವು ಉಲ್ಲೇಖಾರ್ಹವಾದುವು.

ಉತ್ತಮ ಮನೋಧರ್ಮ, ಸಂಗೀತದ ಸೌಂದರ್ಯ, ವಿಕಾಸ ಶುದ್ಧ ಶಾಸ್ತ್ರೀಯತೆ ನೀಲಾರವರ ಗಾಯನದಲ್ಲಿ ಎದ್ದು ಕಾಣುವ ಅಂಶಗಳು.