ವಿಸ್ತಾರವಾದ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರುತ್ತಿತ್ತು ವಿಮಾನ. ಗಂಟೆಗೆ ಆರುನೂರು – ಏಳುನೂರು ಮೈಲಿಗಳ ವೇಗದಲ್ಲಿ ಅದು ವಾಯುಮಂಡಲವನ್ನು ಸೀಳಿಕೊಂಡು ಧಾವಿಸುತ್ತಿದ್ದರೂ, ಒಳಗೆ ಕಿಟಕಿ ಬದಿಗೆ ಕೂತು ಗಾಜಿಗೆ ಮುಖ ಕೊಟ್ಟು ಹೊರಗೆ ನೋಡುತ್ತಿದ್ದ ನನಗೆ, ಅದು ನಿಂತಲ್ಲೇ ನಿಂತಿದೆಯೇನೋ ಎಂಬ ಭ್ರಮೆಯನ್ನು ಮೂಡಿಸಿತ್ತು. ಸುತ್ತಲೂ ನೀಲಿ, ನಿರಭ್ರವಾದ ನೀಲಿ; ಕೆಳಗೆ ತೀರಾ ಸ್ಪಷ್ಟವಲ್ಲದಿದ್ದರೂ ಮೇರೆಯರಿಯದಂತೆ ಹಾಸಿಕೊಂಡ ಕಡಲಿನ ನೀಲಿ. ಒಂದೊಂದು ಸಲ ಕೆಳಗಿನ ಆ ಕಡಲ ನೀಲಿಯ ನಡುವೆ ಥಟ್ಟನೆ ಪ್ರತ್ಯಕ್ಷವಾಗುತ್ತಿದ್ದ ಸಣ್ಣ ಪುಟ್ಟ ದ್ವೀಪ-ಭೂಖಂಡಗಳ ನಸುಗಪ್ಪು ಆಕೃತಿಗಳಿಂದಾಗಿ, ಈ ವಿಮಾನ ನಿಜವಾಗಿಯೂ ಚಲಿಸುತ್ತಿದೆ ಎಂಬ ನಂಬಿಕೆ ಉಂಟಾಗುತ್ತಿತ್ತು. ಜತೆಗೆ ವಿಮಾನದ ನಿರಂತರವಾದ ಭೋರ್ಗರೆತ ಅದರ ಚಲನಶೀಲತೆಗೆ ಭಾಷ್ಯ ಬರೆಯುವಂತಿತ್ತು. ಆದರೆ ವಿಮಾನದ ವಿಸ್ತಾರದೊಳಗಿನ ಬಹುಮಂದಿ, ನಾನಾ ದೇಶದ, ನಾನಾ ಭಾಷೆಯ, ನಾನಾ ಬಣ್ಣದ ಪ್ರಯಾಣಿಕರು, ಈ ಏರ್‌ಫ್ರಾನ್ಸ್ ವಿಮಾನದಲ್ಲಿ ಸೀಟುಗಳಿಗೊರಗಿ  ತೂಕಡಿಸುವುದರಲ್ಲೋ, ನಿದ್ರೆ ಮಾಡುವುದರಲ್ಲೋ, ಸೀಟುಗಳಿಗೆ ಜೋಡಿಸಲಾದ ಶ್ರವಣ ಸಾಧನಗಳನ್ನು ಕಿವಿಗೆ ತಗುಲಿಸಿಕೊಂಡು, ವಿಮಾನದ ಮಧ್ಯಂತರದ ಭಿತ್ತಿಯ ಮೇಲೆ ತೋರಿಸಲಾಗುತ್ತಿದ್ದ ಚಲನಚಿತ್ರದ ಸಂಭಾಷಣೆ ಗೀತೆ ಇತ್ಯಾದಿಗಳನ್ನು ಕೇಳುವುದರಲ್ಲೋ ಮಗ್ನವಾಗಿದ್ದರು. ಬೆಳಿಗ್ಗೆ (೨೯.೮.೧೯೮೭) ಹತ್ತೂವರೆಗೆ ಪ್ಯಾರಿಸ್‌ನಲ್ಲಿ ವಿಮಾನವನ್ನು ಬದಲಾಯಿಸಿ ಕೂತ ನಾನು, ನಾನು ತಲುಪಲಿರುವ ದೂರದ ನ್ಯೂಯಾರ್ಕನ್ನೂ, ಹಿಂದಿನ ದಿನ ಬಿಟ್ಟ ಮುಂಬೈ ಅನ್ನೂ ಕುರಿತು ಯೋಚಿಸತೊಡಗಿದೆ :

ಹೌದು, ನಾನು ಮುಂಬೈನ ಸಹಾರ ವಿಮಾನ ನಿಲ್ದಾಣದಿಂದ, ವಿಮಾನವನ್ನೇರಿದ್ದು ನಟ್ಟ ನಡುರಾತ್ರಿ (೨೮.೮.೧೯೮೭ ರಂದು) ಒಂದು ಗಂಟೆಗೆ. ಬೆಂಗಳೂರಿನಿಂದ ಪ್ಯಾರಿಸ್‌ವರೆಗೆ ನನ್ನ ಜತೆಗೆ ಪ್ರಯಾಣ ಮಾಡಲಿದ್ದ ತರುಣ ಡಾಕ್ಟರೊಬ್ಬರು ನನ್ನ ಜತೆಗಿದ್ದುದರಿಂದ ಮುಂಬೈನಿಂದ ಪ್ರಾರಂಭವಾದ ಈ ನಡು ರಾತ್ರಿಯ ಪಯಣ ಅಷ್ಟೇನೂ ಬೇಸರಪಡಿಸುವ ಸಂಗತಿಯಾಗಿರಲಿಲ್ಲ, ಕೇವಲ  ಅಂಧಕಾರ ಶೂನ್ಯದ ನಡುವೆ ಮಹಾವೇಗದಿಂದ ನಮ್ಮ ವಿಮಾನ ಮುನ್ನಡೆದಿದ್ದರೂ, ಎಷ್ಟೋ ಗಂಟೆಗಳು ಉರುಳಿದರೂ, ಇರುಳು ಕಳೆದು ಬೆಳಗಾಗುವ ಸೂಚನೆಗಳೇ ಕಾಣಲಿಲ್ಲ. ಆದರೆ ನಮ್ಮ ಕೈಯೊಳಗಿನ ಗಡಿಯಾರ ಮಾತ್ರ ಬೆಳಗಿನ ಎಂಟನ್ನು ದಾಟಿ, ಒಂಭತ್ತನ್ನು ತೋರಿಸುತ್ತಿದ್ದರೂ, ನಾವಿನ್ನೂ ಕತ್ತಲಿನ ಹೊಟ್ಟೆಯೊಳಗೇ ಸಾಗುತ್ತಿರುವ ಅನುಭವವಾಗಿತ್ತು. ಕಡೆಗೆ ನಮ್ಮ ಗಡಿಯಾರಗಳು ಬೆಳಗಿನ ಹತ್ತು ಗಂಟೆಯನ್ನು ತೋರಿಸುವ ವೇಳೆಗೆ, ‘ಇನ್ನು ಸ್ವಲ್ಪ ಹೊತ್ತಿನಲ್ಲಿ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ನಮ್ಮ ಈ ವಿಮಾನ ಇಳಿಯಲಿದೆ. ದಯಮಾಡಿ ನಿಮ್ಮ ನಡುಪಟ್ಟಿಗಳನ್ನು ಬಿಗಿದುಕೊಂಡು ನೆಟ್ಟಗೆ ಕುಳಿತುಕೊಳ್ಳಿರಿ. ಫ್ರಾನ್ಸ್ ದೇಶದ ಕಾಲಮಾನದ ಪ್ರಕಾರ, ಈಗ ವೇಳೆ ಬೆಳಗಿನ ಐದೂವರೆ ಗಂಟೆ’- ಎಂದು ಕೋಮಲ  ಕಂಠವೊಂದು ಧ್ವನಿವರ್ಧಕದ ಮೂಲಕ ಘೋಷಿಸಿತು. ನಮ್ಮ ಗಡಿಯಾರಗಳನ್ನು ಪ್ಯಾರಿಸ್‌ನ ಕಾಲಮಾನಕ್ಕೆ ಅನುಸಾರವಾಗಿ ಸರಿಪಡಿಸಿಕೊಂಡು, ವಿಮಾನದ ಕಿಟಕಿ ಗಾಜಿಗೆ ಮುಖವೊತ್ತಿ ನೋಡಿದಾಗ, ಹಬ್ಬಿಕೊಂಡ ಅರುಣೋದಯದ ತಣ್ಣನೆ  ಬೆಳಕಿನಲ್ಲಿ ಫ್ರಾನ್ಸ್ ದೇಶದ ನೆಲ -ಜಲಗಳು ಗೋಚರಿಸತೊಡಗಿದವು. ಹತ್ತು ಗಂಟೆಗಳ ನಿಲ್ಲದ ಹಾರಾಟದ ನಂತರ, ಪ್ಯಾರಿಸ್ ವಿಮಾನ ನಿಲ್ದಾಣದ ‘ರನ್‌ವೇ’ಯಲ್ಲಿ ವಿಮಾನದ ಗಾಲಿಗಳು ನೆಲ ತಾಕಿ ಉರುಳಿ, ಆರೂಕಾಲು ಗಂಟೆಯ ವೇಳೆಗೆ ನಿಲುಗಡೆಗೆ ಬಂದ ವಿಮಾನದ ತೆರೆದ ಬಾಗಿಲ ಮೂಲಕ, ಸುರಂಗ  ಮಾರ್ಗದಾಕಾರದ ದಾರಿಯಲ್ಲಿ ನೇರವಾಗಿ, ಪ್ಯಾರಿಸ್ ವಿಮಾನ ನಿಲ್ದಾಣದ ಎರಡನೆಯ ಹಂತದ ವಿಸ್ತಾರವಾದ ಮೊಗಸಾಲೆಯನ್ನು ಪ್ರವೇಶಿಸಿದೆವು. ಎತ್ತರದ ಉದ್ದನೆಯ ಈ ಮೊಗಸಾಲೆಯ ಆಚೆ, ಇಳಿಯುವ ಹಾಗೂ ಏರುವ ವಿಮಾನಗಳ ಮೊರೆತವನ್ನಾಲಿಸುತ್ತಾ ಮುಂದುವರಿದಂತೆ, ಏರ್‌ಫ್ರಾನ್ಸ್ ವಿಮಾನದಿಂದ ಪ್ಯಾರಿಸ್‌ಗೆ ಬಂದು ಮುಂದಕ್ಕೆ ಪ್ರಯಾಣ ಮಾಡುವ ಭಾರತೀಯರನ್ನು ಸ್ವಾಗತಿಸುವ ಹಾಗೂ ನೆರವು ನೀಡುವ ಮಿಸೆಸ್ ಡಿಸೌಜಾ ಎಂಬ ನೀಲಿಯ ಸಮವಸ್ತ್ರ ಧರಿಸಿದ ತರುಣಿ, ಹೇಗೋ ನನ್ನನ್ನು ಪತ್ತೆ ಮಾಡಿ, ಹೆಸರು ಹೇಳಿ, ಕೈ ಕುಲುಕಿ, ತನ್ನ ಪರಿಚಯ ಹೇಳಿಕೊಂಡಳು. ನಾನು ನನ್ನ ಜತೆ ಪ್ಯಾರಿಸ್‌ವರೆಗೆ ಸಹ ಪ್ರಯಾಣಿಕರಾಗಿದ್ದ ತರುಣ ವೈದ್ಯರಿಗೆ ‘ಗುಡ್‌ಬೈ’ ಹೇಳಿ, ಡಿಸೌಜಾಳ ಜತೆಗೆ ಚಲಿಸುವ ಮೆಟ್ಟಿಲುಗಳ ಮೂಲಕ ಕೆಳ ಅಂತಸ್ತಿಗೆ ಹೋಗಿ, ಚಿಕ್ಕ ಮೊಗಸಾಲೆಯೊಂದರಲ್ಲಿ ಆಕೆಯ ಸೂಚನೆಯಂತೆ ಕೂತೆ. ಆಕೆ ನನ್ನ ಟಿಕೆಟ್ ಅನ್ನು ಬೆಳಗಿನ ಹತ್ತೂವರೆಯ ವೇಳೆಗೆ ನ್ಯೂಯಾರ್ಕಿಗೆ ಹೊರಡಲಿರುವ ವಿಮಾನಕ್ಕೆ ಬದಲಾಯಿಸಿಕೊಂಡು ಬರುವುದಾಗಿಯೂ, ಅಷ್ಟರಲ್ಲಿ ನಾನು ಮುಖ ಮಾರ್ಜನಾದಿಗಳನ್ನು ಮುಗಿಸಿಕೊಳ್ಳಬಹುದೆಂದೂ, ಮುಂಬೈನಿಂದ ನನ್ನ ಜತೆಗೆ ಬಂದ ನನ್ನ ಸೂಟ್‌ಕೇಸ್ ಇತ್ಯಾದಿಗಳನ್ನು ಏರ್‌ಫ್ರಾನ್ಸ್ ವಿಮಾನದ ಕಂಪನಿಯವರೇ ನ್ಯೂಯಾರ್ಕಿಗೆ ಹೊರಡುವ ವಿಮಾನಕ್ಕೆ ಸ್ಥಳಾಂತರಿಸಿ, ನೀವು ಇಳಿಯುವಲ್ಲಿಯೆ ವಿತರಣೆ ಮಾಡಲಿರುವುದರಿಂದ ಯಾವುದೇ ಆತಂಕಗಳು ಬೇಡವೆಂದೂ ತಿಳಿಸಿ ಹೊರಟುಹೋದಳು. ಒಂದರ್ಧ ಗಂಟೆಯ ನಂತರ, ಆಕೆ ಬಂದು ಬದಲಾದ ಟಿಕೆಟ್ ಅನ್ನು ನನ್ನ ಕೈಗೆ ಕೊಟ್ಟು ‘ನೀವು ಮೇಲೆ ಮೊಗಸಾಲೆಯ ಇಂಥ ಒಂದು ಕಡೆ ಕೂತಿರಿ. ನಾನು ಮತ್ತೆ ಬಂದು ನಿಮ್ಮನ್ನು ಕಾಣುತ್ತೇನೆ’- ಎಂದು  ಹೇಳಿ ತನ್ನ ಬೇರೆಯ ಕೆಲಸ ಕಾರ‍್ಯಗಳಿಗಾಗಿ ಹೋದಳು. ನಾನು ಆಕೆಗೆ ವಂದನೆಗಳನ್ನು ಹೇಳಿ, ಮತ್ತೆ ಮೇಲೆ ಬಂದು, ಆಕೆ ಗುರುತು ಹೇಳಿದ ಸ್ಥಳದಲ್ಲಿ ಕೂತೆ. ನನ್ನ ಎದುರಿನ, ಆ ಹಂತದಲ್ಲಿದ್ದ ಒಂದೊಂದೇ ಅಂಗಡಿಗಳು ತೆರೆಯತೊಡಗಿದವು. ಆದರೆ ಅವು ಯಾವುವೂ ನನ್ನ ಚುರುಗುಟ್ಟುವ ಹೊಟ್ಟೆಗೆ ಅಗತ್ಯವಾದ ಉಪಹಾರವನ್ನು ಒದಗಿಸುವಂಥವುಗಳಾಗಿರಲಿಲ್ಲ. ಎಲ್ಲಾ ಕೇವಲ ಶೋಕಿಯ ವಸ್ತುಗಳ ‘ಷೋಕೇಸ್’ ಆಗಿದ್ದವು. ಉಂಗುರಗಳು, ಮುತ್ತಿನ ಸರಗಳು, ಕಿವಿಯ ತೊಡವುಗಳು; ಬಗೆಬಗೆಯ ವಿಲಾಸ ವಸ್ತುಗಳು; ಗಡಿಯಾರಗಳು; ಬಹು ಬಗೆಯ ಮಾದಕ ಪಾನೀಯದ ಶೀಷೆಗಳು, ಕ್ಯಾಮರಾಗಳು- ಇತ್ಯಾದಿ ಇತ್ಯಾದಿ. ಬೆಳಗಿನ ಉಪಹಾರಕ್ಕೆ ಏನು ಮಾಡಬಹುದೆಂದು ಡಿಸೌಜಾಳನ್ನು ಕೇಳಬೇಕೆಂದುಕೊಂಡ ನನಗೆ, ಮತ್ತೆ ಬರುವುದಾಗಿ ಹೇಳಿದ ಆಕೆಯ ಹಾದಿಯನ್ನು ಕಾದೂ ಕಾದೂ ಸುಸ್ತಾಗಿತ್ತು. ಹೀಗಾಗಿ ಗಣಪತಿಯ ಹಾಗೆ ಕೂತಲ್ಲೇ ಕೂತ ನನಗೆ, ನನ್ನ ಕೈಚೀಲದಲ್ಲಿ ಬೆಂಗಳೂರಿನಿಂದ ನಾನು ಹೊರಡುವಾಗ ಇರಿಸಿಕೊಂಡ ಬಿಸ್ಕೆಟ್ ಪ್ಯಾಕೆಟ್ಟಿನ ನೆನಪು ಥಟ್ಟನೆ ಬಂತು. ಚುರುಗುಟ್ಟುವ ಹೊಟ್ಟೆಗೊಂದಿಷ್ಟು ಸಮಾಧಾನ ಮಾಡಿ, ಮತ್ತೆ ಗಡಿಯಾರ  ತಿರುಗುವುದನ್ನು ಕಾಯುತ್ತ ಕೂತಿದ್ದಾಗ, ಒಂಭತ್ತೂಮುಕ್ಕಾಲರ ವೇಳೆಗೆ ನ್ಯೂಯಾರ್ಕಿಗೆ ಹೊರಡಲಿರುವ ವಿಮಾನದ ವಿವರಗಳನ್ನೂ, ಅದಕ್ಕಾಗಿ ನಾವು ಹಾದು ಹೋಗಬೇಕಾದ ಗೇಟಿನ ನಂಬರ್ ಅನ್ನೂ ಘೋಷಿಸಲಾಯಿತು. ನನ್ನಂತೆಯೆ ಅಲ್ಲಲ್ಲಿ ಕಾದು ಕೂತು, ಎದ್ದು ನಿಂತ, ಇತರ ಪ್ರಯಾಣಿಕರ ಜಂಗುಳಿಯ ಜತೆಗೆ, ಘೋಷಿತವಾದ ನಿರ್ದೇಶನದ ಮೇರೆಗೆ, ಕೊಳವೆ ದಾರಿಯ ಮೂಲಕ, ವಿಮಾನದ ಬಾಗಿಲಲ್ಲೇ ನಿಂತ ಗಗನ ಸಖಿಯರ ನಸುನಗೆಯ ಪಸರದ ಮಧ್ಯೆ ವಿಮಾನವನ್ನು ಪ್ರವೇಶಿಸಿ, ಕಿಟಕಿಯ ಪಕ್ಕದ ಸೀಟೊಂದರಲ್ಲಿ ಕೂತು, ಕೊಂಚ ಹೊತ್ತಿನಲ್ಲೇ ಕೊಡಲಾದ ಉಪಹಾರವನ್ನು ಮುಗಿಸಿದ ನಂತರ, ವಿಮಾನದ ಒಳಗು – ಹೊರಗುಗಳೆಲ್ಲ ತುಂಬ ನಿಚ್ಚಳವಾಗಿ ಕಾಣತೊಡಗಿದವು.

ಬೆಳಗಿನ ಹತ್ತೂವರೆಯ ವೇಳೆಗೆ ಪ್ಯಾರಿಸ್‌ಅನ್ನು  ಬಿಟ್ಟ ವಿಮಾನ ಒಂದರ್ಧಗಂಟೆಯ ಹೊತ್ತಿಗೇ ವಿಸ್ತಾರವಾದ ಕಡಲ ಮೇಲಿತ್ತು. ಇನ್ನು ಮುಂದಕ್ಕೆ ನೆಲದ ನೋಟವೇ ಇಲ್ಲದ ಕಡಲ ನೀಲಿಯ ಮೇಲೆಯೇ ಇದರ ಪಯಣ – ನ್ಯೂಯಾರ್ಕ್ ತಲುಪುವವರೆಗೂ. ಉಪಹಾರದ ನಂತರ ಗಗನ ಸಖಿಯರು,

ಎಲ್ಲರಿಗೂ ಹೊದ್ದುಕೊಳ್ಳಲು ಪ್ಲಾಸ್ಟಿಕ್ ಕವರುಗಳಲ್ಲಿರಿಸಿದ ಶಾಲುಗಳನ್ನು ಕೊಟ್ಟಮೇಲಂತೂ, ನಾವು ನ್ಯೂಯಾರ್ಕ್‌ನ್ನು ತಲುಪುವುದು ಬಹುಶಃ ಮರುದಿನದ ಮುಂಜಾನೆಗೇ ಎಂದು ನಾನು ತಿಳಿದುಕೊಂಡೆ. ಮತ್ತೆ ಮಧ್ಯಾಹ್ನ ಒಂದೂವರೆಯ ವೇಳೆಗೆ ನನ್ನ ಪಾಲಿಗೆ ಬಂದ ಸಸ್ಯಾಹಾರಿ ಭೋಜನವನ್ನು ಮುಗಿಸಿ, ಆಗಾಗ ಒಂದಷ್ಟು ಹಣ್ಣಿನ ರಸವನ್ನು ಕೇಳಿ ಪಡೆಯುತ್ತಾ ಕಿಟಕಿಯ ಪಕ್ಕದಲ್ಲಿ ಕೂತು, ಮೇಲೆ  – ಕೆಳಗೆ – ಸುತ್ತ – ಮುತ್ತ ಒಂದೇ ಸಮನೆ ಮೆತ್ತಿಕೊಳ್ಳುತ್ತಿದ್ದ ಕೇವಲ ನೀಲಿಯನ್ನು ನೋಡಿ ನೋಡಿ ಬೇಸರ ಬಂದು, ಸೀಟಿಗೊರಗಿ ನಿದ್ರಿಸತೊಡಗಿದೆ. ಯಾವಾಗಲೋ ಮಧ್ಯೆ ಕಣ್ಣು ತೆರೆದಾಗ ವಿಮಾನದ ಮಧ್ಯಂತರದ ಭಿತ್ತಿಯ ಮೇಲೆ ಫ್ರೆಂಚ್ ಭಾಷೆಯ ಚಲನಚಿತ್ರವೊಂದು ಪ್ರದರ್ಶಿತವಾಗುತ್ತಿತ್ತು. ಅದನ್ನು ನೋಡಲು ನಿರಾಕರಿಸಿದ ಕಣ್ಣು ಮತ್ತೆ ನಿದ್ರೆಗೇ ಶರಣು ಹೋದವು. ಮತ್ತೆ ನಡುವೆ ಎಚ್ಚರವಾದಾಗ ಕಾಫಿಯ ಸರಬರಾಜು ನಡೆದಿತ್ತು. ಬಿಸಿಬಿಸಿ ಕಾಫಿಯ ನಂತರ, ನಾವು ಭರ್ತಿಮಾಡಬೇಕಾದ ಕೆಲವು ನಮೂನೆ(Form)ಗಳನ್ನು ಕೊಡಲಾಯಿತು.

ಭರ್ತಿ ಮಾಡಿದೆ. ಅದಾದ ಸ್ವಲ್ಪ ಹೊತ್ತಿಗೆ ಇನ್ನೊಬ್ಬಾಕೆ ಬಂದು ಬೆಳಿಗ್ಗೆ ನಮಗೆ  ಹೊದ್ದುಕೊಳ್ಳಲು ಕೊಡಲಾದ ಶಾಲುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಶುರುಮಾಡಿದಳು. ಗಡಿಯಾರ ನೋಡಿಕೊಂಡೆ. ಸಂಜೆಯ ಐದುಗಂಟೆ. ನನ್ನ ಶಾಲನ್ನು ಹಿಂದಕ್ಕೆ ಪಡೆಯಲು ಬಂದ ಗಗನ ಸಖಿಗೆ ಹೇಳಿದೆ : ‘ಈ ಶಾಲುಗಳು ಇವತ್ತು ರಾತ್ರಿಗೂ ಬೇಕಲ್ಲ?’’ ಆಕೆ ದೊಡ್ಡದಾಗಿ ನಕ್ಕು“Oh No, we are landing at New york in about half an hour, Now the New york time is 12 noon” (ಇಲ್ಲ ಇಲ್ಲ, ನಾವು ಕೇವಲ ಇನ್ನರ್ಧ ಗಂಟೆಯೊಳಗಾಗಿ ನ್ಯೂಯಾರ್ಕ್‌ನಲ್ಲಿ ಇಳಿಯಲಿದ್ದೇವೆ. ಈಗ ನ್ಯೂಯಾರ್ಕ್‌ನ ಪ್ರಕಾರ, ಸಮಯ ಮಧ್ಯಾಹ್ನ ಹನ್ನೆರಡು ಗಂಟೆ) – ಎಂದಳು. ಎಲಾ ಇದರ ಅಂದುಕೊಂಡು ಸಂಜೆಯ ಐದು ಗಂಟೆಯನ್ನು ತೋರಿಸುತ್ತಿದ್ದ ನನ್ನ ಗಡಿಯಾರವನ್ನು ಮಧ್ಯಾಹ್ನದ ಹನ್ನೆರಡು ಗಂಟೆಗೆ ಹೊಂದಿಸಿದೆ. ಪ್ಯಾರಿಸ್‌ನಿಂದ ನ್ಯೂಯಾರ್ಕಿಗೆ ಏಳು ಗಂಟೆಯ ನಿಲ್ಲದ ಪಯಣ ಮಾಡಿದ ಸಂಗತಿ ನನ್ನ ಲೆಕ್ಕಕ್ಕೆ ಜಮಾ ಆಯಿತು. ಆಗಸ್ಟ್ ೨೮ರ ನಡು ರಾತ್ರಿ, ಅಂದರೆ ವಾಸ್ತವವಾಗಿ ೨೯ರಂದು ಮುಂಬೈ ಬಿಟ್ಟರೂ, ಹದಿನೇಳು ಗಂಟೆಗಳ ಪ್ರಯಾಣ ಮತ್ತು ನಾಲ್ಕು ಗಂಟೆಗಳ ವಿರಾಮದ ಅನಂತರವೂ, ನಾನು ನ್ಯೂಯಾರ್ಕ್ ತಲುಪಿದಾಗ, ಅದೇ ಆಗಸ್ಟ್ ತಿಂಗಳ ೨೯ರ ಮಧ್ಯಾಹ್ನ ಹನ್ನೆರಡೂವರೆಯಾಗಿದೆ!

ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ಅವತರಿಸಿ ನಿಲುಗಡೆಗೆ ಬಂದ ವಿಮಾನದ ತೆರೆದ ಬಾಗಿಲನ್ನು ಹಾದು, ಸುಮಾರು ದೊಡ್ಡ ‘ಕ್ಯೂ’ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಿಂತು, ನನ್ನ ಪಾಸ್‌ಪೋರ್ಟ್ ವೀಸಾ ಇತ್ಯಾದಿಗಳ ಪರಿಶೀಲನೆಯ ಅನಂತರ, ಅಮೇರಿಕಾದಲ್ಲಿ ಆರು ತಿಂಗಳ ಕಾಲ ನಾನು ಇರಬಹುದೆಂಬ ಅನುಮತಿಯ ಮುದ್ರೆಯನ್ನು ನನ್ನ ವೀಸಾದ ಮೇಲೆ ಒತ್ತಿಸಿಕೊಂಡು, ನನ್ನ ಸಾಮಾನುಗಳನ್ನು ಪೋರ್ಟರ್ ಒಬ್ಬನ ನೆರವಿನಿಂದ ತಳ್ಳು ಗಾಡಿಯ ಮೇಲೆ ಹಾಕಿಸಿಕೊಂಡು ನಾನು ಹೊರಗೆ ಬರುವ ವೇಳೆಗೆ, ನಮ್ಮ ಉಮೇಶ್ ಮತ್ತು ಶ್ರೀ ರಾಮಕೃಷ್ಣ ಅವರು ನನಗಾಗಿ ಕಾದು ನಿಂತಿದ್ದರು. ನನ್ನ ಸಾಮಾನುಗಳನ್ನು ಉಮೇಶ್ ಅವರ ಕಾರಿನೊಳಗೆ ತುಂಬಿಸಿಕೊಂಡು, ಡ್ರೈವ್ ಮಾಡುವ ಅವರ ಬಲಬದಿಗೆ ಬೆಲ್ಟ್ ಬಿಗಿದುಕೊಂಡು ಕೂತು, (ಇಲ್ಲಿ ಪ್ರತಿಯೊಬ್ಬರೂ ಕಾರಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಪಟ್ಟಿ ಕಟ್ಟಿಕೊಳ್ಳಲೇಬೇಕು) ಹಿಂದಿನ ಸೀಟಿನಲ್ಲಿದ್ದ ಡಾ. ರಾಮಕೃಷ್ಣ ಅವರೊಂದಿಗೆ ಮಾತನಾಡುತ್ತಾ ನ್ಯೂಯಾರ್ಕಿನ ಬೀದಿಗಳ ಮೂಲಕ ಹಾದು ಒಂದರ್ಧ ಗಂಟೆಯೊಳಗಾಗಿ, ನ್ಯೂಜರ್ಸಿಯಲ್ಲಿರುವ ಹಾವೆಲ್ ಎಂಬ ಊರಿನ ಕಡೆಗೆ, ಗಂಟೆಗೆ ಐವತ್ತು ಅರವತ್ತು ಮೈಲಿಗಳ ವೇಗದಲ್ಲಿ ಧಾವಿಸತೊಡಗಿದೆವು. ಡಾ. ರಾಮಕೃಷ್ಣ ಅವರು ದೂರದಲ್ಲಿ ಕಾಣುತ್ತಿದ್ದ ನ್ಯೂಯಾರ್ಕಿನ ಗಗನಚುಂಬಿ ಸಮುಚ್ಚಯಗಳ ಕಡೆಗೆ ಕೈ ತೋರಿಸುತ್ತ, ಅದು ನೊಡಿ ಮನ್ ಹಾಟನ್, ಅದು ನೋಡಿ ಎಂಪೈರ್ ಸ್ಟೇಟ್ ಕಟ್ಟಡ, ಅದು ನೊಡಿ ವರ್ಲ್ಡ್‌ಟ್ರೇಡ್ ಸೆಂಟರ್ – ಎಂದು ಪರಿಚಯ ಮಾಡಿಕೊಡತೊಡಗಿದರು. ಏಕಕಾಲಕ್ಕೆ ಐದಾರು ಕಾರುಗಳು ಸಲೀಸಾಗಿ ಸಾಗಬಹುದಾದ, ಬಿಳಿ ಪಟ್ಟೆಗಳಿಂದ ಉದ್ದಕ್ಕೂ ಗುರುತು ಮಾಡಿದ ಏಕಮುಖ ಹೆದ್ದಾರಿಯ ಮೇಲೆ, ಅನೇಕ ಬೃಹದಾಕಾರದ ಸೇತುವೆಗಳನ್ನು ಏರಿ ಇಳಿದು, ಇಳಿದು ಏರಿ, ನದಿ ಹಾಗೂ ಕಡಲ ಕೊಲ್ಲಿಗಳನ್ನು ದಾಟಿ, ಎರಡೂ ಕಡೆ ದಟ್ಟವಾಗಿ ಕಿಕ್ಕಿರಿದ ಹಸುರ ತಂಪಿನ ನಡುವೆ ಆಗಸ್ಟ್ ತಿಂಗಳ ಮಧ್ಯಾಹ್ನದ ಹಿತವಾದ ಬಿಸಿಲಿನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲದ ಪಯಣದ ನಂತರ, ಹಾವೆಲ್ ಎಂಬ ಪುಟ್ಟ ಊರಿನ ಡಾ. ರಾಮಕೃಷ್ಣ ಅವರ ಮನೆಯನ್ನು ತಲುಪಿದೆವು. ಮನೆಯ ಬಾಗಿಲಲ್ಲಿ ರಾಮಕೃಷ್ಣ ಅವರ ಪುಟ್ಟ ಮಕ್ಕಳಿಬ್ಬರೂ, ಅರುಣ – ಕಿರಣ, ಬಿಳಿ ಹೂವಿನ ಗೊಂಚಲನ್ನು ಹಿಡಿದು ಮುಗುಳ್ನಗೆಯ ಸ್ವಾಗತವನ್ನು ಬಯಸಿದರು. ಆ ಮಕ್ಕಳತಾಯಿ ಉಮಾ ಅವರು ಮಾಡಿಕೊಟ್ಟ ಬಿಸಿ ಬಿಸಿ ಕಾಫಿಯನ್ನು ಕುಡಿದ ಅನಂತರ, ಆಕಾಶದ ಅಮೂರ್ತತೆಯ ಅನಿಶ್ಚಯತೆ ಕಳೆದು, ನಮ್ಮವರು ತಮ್ಮವರು ಎಂಬ ಪ್ರೀತಿವಿಶ್ವಾಸದ ಮೂರ್ತತೆಯ ವಾಸ್ತವದಲ್ಲಿ ನೆಲೆ ನಿಂತ ನೆಮ್ಮದಿಯೊಂದು ನನ್ನ ಮನಸ್ಸನ್ನು ತುಂಬಿಕೊಂಡಿತು.

* * *

ನೆಲದ ನಂಟನ್ನು ಸ್ಥಾಪಿಸಿಕೊಂಡ ನೆಮ್ಮದಿಯ ಇರುಳು ಕಳೆದು ಬೆಳಗಾಯಿತು. ಹಿಂದಿನ ದಿನದ ಪ್ರಯಾಣದ ಗುಂಗೆಲ್ಲವೂ ಸೊಗಸಾದ ಸ್ನಾನ, ಪುಷ್ಕಳವಾದ ಭೋಜನ ಹಾಗು ಗಡದ್ದಾದ ನಿದ್ರೆಯಿಂದ ಮಾಯವಾಗಿತ್ತು. ನಾನು ಇಲ್ಲಿಗೆ ಬರುವ ಮುನ್ನವೇ ಶ್ರೀಮತಿ ಉಮಾ-ನನಗೆ ಬರೆದಿದ್ದರು. ‘ನೀವು  ನಮ್ಮಲ್ಲಿಗೆ ತಲುಪಿದ ಮರುದಿನವೆ ಗಣಪತಿ ಹಬ್ಬ. ಅದನ್ನು ನಾವು – ನೀವೆಲ್ಲ ನ್ಯೂಯಾರ್ಕಿನ ಕನ್ನಡಿಗರ ಕೂಟದಲ್ಲಿ ಆಚರಿಸೋಣ’ – ಎಂದು. ಹೀಗಾಗಿ ಬೆಳಿಗ್ಗೆ ಸೊಗಸಾದ  ಇಡ್ಲಿ-ಸಾಂಬಾರಿನ ಉಪಹಾರದ ನಂತರ, ಹನ್ನೊಂದು ಗಂಟೆಯ ವೇಳೆಗೆ ಎರಡು ಕಾರುಗಳಲ್ಲಿ ನಾವು ನ್ಯೂಯಾರ್ಕಿಗೆ ಹೊರಟೆವು. ಒಂದು ಕಾರಿನಲ್ಲಿ ಉಮೇಶ್ ಮತ್ತು ಉಮಾ ಅವರ ಇಬ್ಬರು ಮಕ್ಕಳಾದ ಅರುಣ ಮತ್ತು ಕಿರಣ; ಮತ್ತೊಂದರಲ್ಲಿ ರಾಮಕೃಷ್ಣ, ಉಮಾ ಮತ್ತು ನಾನು.

ನ್ಯೂಜರ್ಸಿಯ ಹಾವೆಲ್ ಎಂಬ ಊರಿನಿಂದ ನ್ಯೂಯಾರ್ಕಿಗೆ ಅರವತ್ತು ಮೈಲಿ. ನ್ಯೂಜರ್ಸಿ ಅತ್ಯಂತ ದಟ್ಟ ಹಸುರಿನಿಂದ ತುಳುಕುವ ರಾಜ್ಯ. ವಿಸ್ತಾರವಾದ ಹೆದ್ದಾರಿಯ ಮೇಲೆ ಒಂದರ ಹಿಂದೊಂದು ಚಲಿಸುವ ಕಾರುಗಳ ಮಂದೆಯ ಮಧ್ಯೆ, ಅತ್ಯಂತ ವೇಗದ ಪ್ರಯಾಣ. ದಾರಿ ತುಂಬ ಬರೀ ಕಾರು; ಆಗಾಗ ಒಂದೊಂದು ಟ್ರಕ್ಕು, ದಾರಿ ಬದಿಯಲ್ಲಿ ನಮ್ಮ ದೇಶದಲ್ಲಿನಂತೆ ಜನರನ್ನು, ನಡೆದು ಹೋಗುವವರನ್ನು ಕಾಣುವಂತೆಯೆ ಇಲ್ಲ. ಹಾಗೆ ನಡೆದು ಹೋಗುವುದೂ ಶಿಕ್ಷಾರ್ಹವಾದ ಅಪರಾಧ ಇಲ್ಲಿ. ದಾರಿಯ ಎರಡೂ ಬದಿಗೆ ದಟ್ಟವಾದ ಹಸಿರು ಏರಿಳಿತ, ಅಲ್ಲಲ್ಲಿ ನದಿಗಳು; ಅವುಗಳನ್ನು ದಾಟಲು ವಿವಿಧ ವಿನ್ಯಾಸದ ಸೇತುವೆಗಳು; ನ್ಯೂಯಾರ್ಕನ್ನು ಪ್ರವೇಶಿಸುವಾಗಲೇ ಅಗಲವಾದ ನದಿಗಳ ಹಾಗೂ ಒತ್ತಿಕೊಂಡು ಬಂದ ಕಡಲ ಹಿನ್ನೀರುಗಳ ಹರಹನ್ನು ದಾಟಲು ಯೋಜಿಸಿರುವ ದೈತ್ಯಾಕಾರದ ಸೇತುವೆಗಳು. ನ್ಯೂಯಾರ್ಕ್ ವಾಸ್ತವವಾಗಿ ಒಂದು ದ್ವೀಪ. ಸುತ್ತಲೂ ಕಡಲು ನದಿಗಳಿಂದ ಜಲಾವೃತವಾದ ಈ ದ್ವೀಪನಗರದ ಕಟ್ಟಡಗಳು, ನೆಲದ ಅಭಾವದಿಂದಾಗಿ, ಆಕಾಶಕ್ಕೆ ಅಭಿಮುಖವಾಗಿ ಏರಿವೆ. ಜೇನುಗೂಡುಗಳಂತೆ, ಹಾವಿನ ಹುತ್ತಗಳಂತೆ, ಕಿಕ್ಕಿರಿದ ಕಟ್ಟಡಗಳು. ಈ ದಿನ ಭಾನುವಾರವಾದ್ದರಿಂದ, ಸಂಚಾರ ಸಹನೀಯವಾಗಿತ್ತು. ಅನೇಕ ಬೀದಿಯ ತಿರುವುಗಳ ನಡುವೆ,  ಕೆಲವೆಡೆ ಭಾರಿ ಕಟ್ಟಡಗಳ ಕೆಳಹಂತಗಳ ಮಧ್ಯೆ ಹಾದುಹೋಗುವ ದಾರಿಗಳಲ್ಲಿ ಉರುಳಿ, ಸುಮಾರು ಒಂದು ಗಂಟೆಯ ಹೊತ್ತಿಗೆ, ನ್ಯೂಯಾರ್ಕಿನ ಕನ್ನಡ ಕೂಟದ ಗಣೇಶೋತ್ಸವವನ್ನು ಏರ್ಪಡಿಸಿದ್ದ ದೊಡ್ಡ ಶಾಲೆಯೊಂದರ ಸಭಾಂಗಣವನ್ನು ಪ್ರವೇಶಿಸಿದೆವು. ಕಾರ‍್ಯಕರ್ತರು ಈ ಸಭಾಂಗಣದ ಪಕ್ಕದ ವಿಸ್ತಾರವಾದ ಕೋಣೆಗೆ ಕರೆದೊಯ್ದರು. ಅಲ್ಲಿ ಬಹು ಸಂಖ್ಯಾತ ಕನ್ನಡ ಬಾಂಧವರು ಸಾಲು ಸಾಲು ಮೇಜುಗಳ ಮುಂದೆ ಊಟಕ್ಕೆ ಕೂತಿದ್ದರು. ನಾವು ಅವರ ಜತೆ ಸೊಗಸಾದ ಊಟ ಮುಗಿಸಿದ ನಂತರ, ಮುಂದಿನ ಕಾರ‍್ಯಕ್ರಮ ಕರಾರುವಾಕ್ಕಾಗಿ ಎರಡು ಗಂಟೆಗೆ, ಪಕ್ಕದ ದೊಡ್ಡ ಸಭಾಂಗಣದಲ್ಲಿ. ನೋಡುತ್ತೇನೆ, ಸುಮಾರು ಆರುನೂರು ಏಳುನೂರು ಜನ ಕನ್ನಡಿಗರು ಸೇರಿದ್ದಾರೆ. ಝಗಝಗಿಸುವ ಜರತಾರೀ ಸೀರೆಗಳ ನಾರೀಮಣಿಯರು; ಪಂಚೆ ಜುಬ್ಬ ಬುಷ್ ಷರಟು, ಹಾಗೂ ಶುದ್ಧ ಅಮೆರಿಕನ್ ಉಡುಪುಗಳಲ್ಲಿ ರಾಜಿಸುವ ಮಹನೀಯರು; ವಿವಿಧ ಉಡುಗೆ ತೊಡುಗೆಗಳಲ್ಲಿ ಅಪ್ಪಟ ಇಂಗ್ಲಿಷಿನಲ್ಲಿ ಪರಸ್ಪರ ಹರಟೆ ಹೊಡೆಯುವ ಮಕ್ಕಳು. ಗಣೇಶನ ಹಬ್ಬದಂಥ ಸಂದರ್ಭವೊಂದು, ಇಷ್ಟು ಸಂಖ್ಯೆಯ ಇಲ್ಲಿನ ಕನ್ನಡಿಗರನ್ನು ಒಂದುಗೂಡಿಸಿದೆಯಲ್ಲ, ಅದೇ ಮಹತ್ವದ ಸಂಗತಿ ಎನ್ನಿಸಿತು ನನಗೆ. ಈ ಸಂದರ್ಭದಲ್ಲಿ ಹಿಂದೆ ನನ್ನನ್ನು ಕಂಡವರು, ಕೇಳಿದವರು, ಒಂದು ಕಾಲಕ್ಕೆ ನನ್ನ ವಿದ್ಯಾರ್ಥಿಗಳಾಗಿದ್ದ ಮತ್ತು ಇನ್ನೂ ಹಲವರು ಹೊಸಬರು ಎಲ್ಲರ ಪರಿಚಯವಾಯಿತು.

ಆ ಸಭಾಂಗಣದ ವಿಸ್ತಾರವಾದ ವೇದಿಕೆಯ ಮೇಲೆ ಒಂದು ಪಕ್ಕದಲ್ಲಿ ಗಣೇಶನ ಪಟವನ್ನಿಟ್ಟ ಮಂಟಪ. ಅದಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು.  ಎದುರಿಗೆ ಹಿತ್ತಾಳೆಯ ದೀಪದ ಕಂಬಗಳಲ್ಲಿ ತಣ್ಣಗೆ ಉರಿಯುವ ಎಣ್ಣೆ ಬತ್ತಿಗಳು, ಊದು ಬತ್ತಿಯ ಕಂಪು, ಬೆಳಗಿನಿಂದ ಹೋಮ-ಹವನ-ಭಜನೆ ಹಾಗೂ ಪ್ರವಚನ ಕಾರ‍್ಯಗಳು, ಈ ನಡುವೆ ನನ್ನ ಉಪನ್ಯಾಸವೂ ಒಂದು.

ನನಗೆ ಮಾತನಾಡಲು ಕೊಟ್ಟ ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಇಂಥ ಹಬ್ಬಗಳ ಸಾಂಸ್ಕೃತಿಕ ಮಹತ್ವ, ಹಾಗೂ ಈ ಹಬ್ಬದ ಸಾಂಕೇತಿಕತೆ ಇತ್ಯಾದಿಗಳನ್ನು ಕುರಿತು ಮಾತನಾಡಿದೆ. ಎಲ್ಲರೂ ತುಂಬ ಸಂತೋಷಪಟ್ಟರು. ಅನಂತರ ಕೆಲವು ಮಕ್ಕಳು ಕನ್ನಡ ಭಾವಗೀತೆಗಳನ್ನು, ಭಕ್ತಿಗೀತೆಗಳನ್ನು ವೃಂದಗಾನದಲ್ಲಿ ಹಾಡಿದರು. ಮೂರೂವರೆ ವೇಳೆಗೆ ನಾನು, ಅಮೆರಿಕಾದಲ್ಲಿ ಮೊದಲು ನನ್ನನ್ನು ಸ್ವಾಗತಿಸಿದ ರಾಮಕೃಷ್ಣ ದಂಪತಿಗಳಿಗೆ ಥ್ಯಾಂಕ್ಸ್ ಹೇಳಿ, ಇಂಡಿಯಾಕ್ಕೆ ಹಿಂದಿರುಗುವಾಗ ಮತ್ತೆ ಅವರ ಮನೆಯಲ್ಲಿ ಕೆಲವು ದಿನ ಇರುವುದಾಗಿ ತಿಳಿಸಿ, ಉಮೇಶ್ ಅವರ ಕಾರಿನಲ್ಲಿ ಕೂತು, ಪಟ್ಟಿ ಬಿಗಿದುಕೊಂಡು ಸ್ಯಾಲಿಸ್‌ಬರಿಯ ಕಡೆಗೆ ಹೊರಟಿದ್ದಾಯಿತು.

ನ್ಯೂಯಾರ್ಕಿನಿಂದ ಸ್ಯಾಲಿಸ್‌ಬರಿಗೆ ಇನ್ನೂರ ಐವತ್ತು ಮೈಲಿಗಳು. ಕಾರಿನಲ್ಲಿ ನಾಲ್ಕೂವರೆ ಗಂಟೆಗಳ ಡ್ರೈವ್. ದಾರಿ ಉದ್ದಕ್ಕೂ ಎರಡು ಮೂರು ರಾಜ್ಯಗಳನ್ನು ಹಾದು ಹೋಗಬೇಕು. ಸುದೀರ್ಘವಾಗಿ, ದಟ್ಟ ಹಸುರಿನ ನಡುವೆ ಹಾಸಿಕೊಂಡ ಹೆದ್ದಾರಿಯಲ್ಲಿ ಸಾಗಿತು ನಮ್ಮ ಪಯಣ. ಈ ಹೆದ್ದಾರಿಗಳು ಅಮೆರಿಕಾವನ್ನು ಪೂರ್ವದಿಂದ ಪಶ್ಚಿಮಕ್ಕೆ, ಹಾಗೂ ಉತ್ತರದಿಂದ ದಕ್ಷಿಣಕ್ಕೆ ಗೆರೆ ಎಳೆದಂತೆ ನೇರವಾಗಿ ಚಾಚಿಕೊಂಡವುಗಳು; ಮತ್ತು ನಿರ್ದಿಷ್ಟವಾದ ಸಂಖ್ಯೆಗಳನ್ನುಳ್ಳವು. ಪೂರ್ವದಿಂದ ಪಶ್ಚಿಮಕ್ಕೆ ಹೋಗುವ ಹೆದ್ದಾರಿಗಳು ‘ಸರಿ’ ಸಂಖ್ಯೆಯವುಗಳಾದರೆ, ಉತ್ತರದಿಂದ ದಕ್ಷಿಣಕ್ಕೆ ಹಾಯುವ ಹೆದ್ದಾರಿಗಳು ‘ಬೆಸ’ ಸಂಖ್ಯೆಯವುಗಳಾಗಿವೆ. ಇದರಿಂದಾಗಿ  ಕೈಯ್ಯಲ್ಲೊಂದು ‘ರೋಡ್ ಮ್ಯಾಪ್’ ಇತ್ತೆಂದರೆ, ಯಾರನ್ನೂ ವಿಚಾರಿಸದೆ ಈ ನಾಡಿನ ಉದ್ದ ಅಗಲಕ್ಕೂ ಸಲೀಸಾಗಿ ಪ್ರಯಾಣ ಮಾಡಬಹುದು. ಏಕಕಾಲಕ್ಕೆ ನಾಲ್ಕಾರು ಕಾರುಗಳು ಚಲಿಸಲು ಅನುಕೂಲವಾದ, ಸಮಾನಾಂತರವಾಗಿ ಹೋಗುವ ಹಾಗೂ ಬರುವ ಏಕಮುಖೀ ರಸ್ತೆಗಳಲ್ಲಿ, ಹಗಲು – ರಾತ್ರಿ ಉರುಳುವ ಗಾಲಿಗಳಿಗೆ ಲೆಕ್ಕವೇ ಇಲ್ಲ. ಯಾವುದೇ ವಾಹನದಿಂದ ಒಂದು ಚೂರು ಹೊಗೆ ಇಲ್ಲ. ಯಾರೂ ಯಾರನ್ನೂ ಮುಂದೆ ಹಾಕುವ ಸಲುವಾಗಿ ಹಾರ್ನ್ ಮಾಡುವ ಅಗತ್ಯವೇ ಇಲ್ಲ. ತನ್ನ ಪಾಡಿಗೆ ತಾನು ಆರಿಸಿಕೊಂಡ ಎರಡು ಬಿಳಿಯ ಪಟ್ಟೆಗಳ ನಡುವೆ ಗಂಟೆಗೆ ಐವತ್ತು – ಅರವತ್ತು ಮೈಲಿಗಳ ವೇಗದಲ್ಲಿ ಹೋಗುತ್ತಲೆ ಇರಬೇಕು. ನಿಲ್ಲಬಾರದು. ನಿಂತರೋ, ಕಾದಿದೆ ಅನಾಹುತ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಬಸವಣ್ಣನವರ ವಚನದ ಈ ಮಾತಿಗೆ ಇಲ್ಲಿ ಹೊರಡುವ ಅರ್ಥವಿಶೇಷವೇ ಬೇರೆಯದು. ಹೋಗುತ್ತಿರುವಾಗ ವೇಗವನ್ನು ತಗ್ಗಿಸುವ ಸಂದರ್ಭ ಬಂದರೆ, ವಾಹನದ ಯಂತ್ರಕ್ಕೇನಾದರೂ ತೊಂದರೆಯಾದರೆ, ವಾಹನವನ್ನು ನಿಲ್ಲಿಸಿಕೊಳ್ಳಲು ರಸ್ತೆಯ ಬಲತುದಿಗೆ ಅದಕ್ಕಾಗಿಯೆ ಮೀಸಲಾದ ಸ್ಥಳವಿರುತ್ತದೆ. ಎಲ್ಲೆಲ್ಲಿ ಯಾವ ಯಾವ ವೇಗದಲ್ಲಿ ಹೋಗಬೇಕೆಂಬ ನಿರ್ದೇಶನಗಳ ಜತೆಗೆ, ಮುಂದೆ ಬರುವ ಊರುಗಳ ಬಗ್ಗೆ, ಹೆದ್ದಾರಿ, ಉಪದಾರಿಗಳ ಸಂಖ್ಯೆಗಳನ್ನುಳ್ಳ ಸೂಚನಾ ಫಲಕಗಳಿರುತ್ತವೆ. ಡ್ರೈವ್ ಮಾಡುತ್ತಾ ಆಯಾಸವಾದರೆ, ಹಸಿವಾದರೆ, ಬಾಯಾರಿಕೆಯಾದರೆ, ಪೆಟ್ರೋಲ್ ತುಂಬಿಸಿಕೊಳ್ಳಬೇಕಾದರೆ ಚಿಂತಿಸಬೇಕಾಗಿಲ್ಲ. ಅದಕ್ಕಾಗಿ ಉದ್ದಕ್ಕೂ, ಹೆದ್ದಾರಿಯ ಬದಿಗೆ ‘ಸರ್ವಿಸ್ ಏರಿಯಾ’ಗಳಿವೆ. ನೀವು ಹೋಗುವ ಹೆದ್ದಾರಿಯಿಂದ ಮುಂದೆ ಇಷ್ಟು ದೂರದಲ್ಲಿ ಕವಲು ದಾರಿಯಿದೆ ಎಂಬ ಸೂಚನಾಫಲಕಗಳು, ಪ್ರತಿ ಇಪ್ಪತ್ತು ಮೂವತ್ತು ಮೈಲಿಗೊಂದರಂತೆ ಕಾಣಿಸಿಕೊಳ್ಳುತ್ತವೆ. ಹೆದ್ದಾರಿಯ ಬದಿಗೆ ಹೊರಳುವ ದಾರಿಯಲ್ಲಿ ಹೋದರೆ ಈ ‘ಸರ್ವಿಸ್ ಏರಿಯಾ’ಗಳಲ್ಲಿ, ಒಂದು ಸಣ್ಣ ಹೋಟಲು ಅಥವಾ ಸ್ಟೋರ್, ಶೌಚಾಲಯದ ಅನುಕೂಲಗಳು, ಪೆಟ್ರೋಲ್ ವ್ಯವಸ್ಥೆ – ಎಲ್ಲಾ ಇವೆ. ಹೀಗಾಗಿ ಎಷ್ಟು ದೂರದ ಪ್ರಯಾಣವನ್ನಾದರೂ ಇಂಥ ತಂಗುದಾಣಗಳ ನೆರವಿನಿಂದ ಅನಾಯಾಸವಾಗಿ ಕ್ರಮಿಸಬಹುದು.

ನಮ್ಮ ಉಮೇಶ್ ಅವರ ಕಾರು, ಹೀಗೆ ಅಲ್ಲಲ್ಲಿ ಸರ್ವಿಸ್ ಏರಿಯಾಗಳಲ್ಲಿ ನಿಂತು, ಕಾಫಿ, ಹಣ್ಣಿನರಸ ಇತ್ಯಾದಿಗಳಿಂದ ನಮ್ಮನ್ನು ತಣಿಸುತ್ತ, ದಟ್ಟ ಹಸುರಿನ ನಡುವಣ ಹೆದ್ದಾರಿಯಲ್ಲಿ ಉರುಳಿ, ರಾತ್ರಿ ಒಂಭತ್ತು ಗಂಟೆಯ ವೇಳೆಗೆ ಮೇರೀಲ್ಯಾಂಡ್ ರಾಜ್ಯದ ಸ್ಯಾಲಿಸ್‌ಬರಿಯನ್ನು ತಲುಪಿತು. ಮನೆಯಲ್ಲಿ ಉಮೇಶ್ ಅವರ ಸ್ನೇಹಿತ ಸುರೇಶ್ ನಮಗಾಗಿ ಅಡುಗೆ ಮಾಡಿಟ್ಟುಕೊಂಡು ಕಾಯುತ್ತಿದ್ದರು.