Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನೀಲ್‌ಗಾರರು ದೊಡ್ಡಗವಿಬಸಪ್ಪ

ಮಂಟೇಸ್ವಾಮಿ ಪದವನ್ನೇ ಸಾಧನೆಗೆ ಹದ ಮಾಡಿಕೊಂಡ ದೇಸೀ ಪ್ರತಿಭೆ ದೊಡ್ಡ ಗವಿಬಸಪ್ಪ.ಮೋಡಿ ಮಾಡುವ ತಂಬೂರಿ ಶೈಲಿಯ ನೀಲಗಾರರು.
ಚಾಮರಾಜನಗರ ತಾಲ್ಲೂಕಿನ ದೊಡ್ಡಮೋಳೆ ಗ್ರಾಮ ದೊಡ್ಡ ಗವಿಬಸಪ್ಪ ಅವರ ಹುಟ್ಟೂರು. ಅನಕ್ಷರಸ್ಥತೆ ಮತ್ತು ಬಡತನ ಬದುಕಿಗೇ ಅಂಟಿದ ಶಾಪ. ೧೭ನೇ ವಯಸ್ಸಿಗೆ ಅಪ್ಪ ಅಮ್ಮನ ಹರಕೆಯಂತೆ ದೇವರಗುಡ್ಡಕ್ಕೆ ಬಿಟ್ಟ ಪರಿಣಾಮ ಗವಿಬಸಪ್ಪ ನೀಲಗಾರರಾಗಿ ರೂಪಾಂತರ, ಯಳಂದೂರು ತಾಲ್ಲೂಕಿನ ಕೃಷ್ಣಪುರದ ಹಿರಿಯ ನೀಲಗಾರ ಕಲಾವಿದ ಕಾಳವಾರ ಸಿದ್ದಶೆಟ್ಟಿ ಅವರಿಂದ ಎರಡು ವರ್ಷಗಳ ಕಾಲ ಮಂಟೇಸ್ವಾಮಿ ಕಥೆ, ಸಿದ್ದಪ್ಪಾಜಿ ಕಥೆ, ಮಲೆಮಹಾದೇಶ್ವರನ ಕಾವ್ಯ, ಶರಣೆ ಶಂಕರಮ್ಮನ ಸಾಲು, ಜುಂಜೇಗೌಡನ ಸಾಲು, ಬಿಳಿಗಿರಿರಂಗಸ್ವಾಮಿ ಕಥೆ, ಮುಡುಕುತೊರೆ ಮಲ್ಲಿಕಾರ್ಜುನನ ಕಥೆಗಳ ಗಾಯನದ ತರಬೇತಿ, ಮುಂದಿನದ್ದು ಸಿದ್ದಪ್ಪಾಜಿ ತೋರಿದ ಸಾಧನೆಯ ಹಾದಿ. ಹಳ್ಳಿಗಾಡಿನ ಶುಭಕಾರ್ಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ನಿರಂತರ ಗಾನಸೇವೆ. ಕಾಲೇಜು ವಿದ್ಯಾರ್ಥಿಗಳಿಗೆ ನೀಲಗಾರ ಪದ ಹಾಡುವ ತರಬೇತಿ, ಬೀಸು ಕಂಸಾಳೆ ಪ್ರದರ್ಶನವೂ ಸೇರಿದಂತೆ ೪೩ ವರ್ಷಗಳಿಂದಲೂ ನಿಸ್ವಾರ್ಥ ಕಲಾಸೇವೆ. ಜಾನಪದ ಅಕಾಡೆಮಿಯ ಪ್ರಶಸ್ತಿ, ಹೆಚ್.ಎಲ್.ನಾಗೇಗೌಡ, ಮಂಟೇಸ್ವಾಮಿ ಪ್ರಶಸ್ತಿಗಳಿಂದ ಭೂಷಿತವಾದ ದೇಸೀ ಕಲಾಕುಸುಮ.