ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

 

 

(ಕ್ರಿ.ಶ. ೧೮೮೫-೧೯೬೨) (ಪರಮಾಣುವಿಗೆ ಸ್ಪಷ್ಟ ಭೌತ ಪ್ರತಿರೂಪ)

 

ಪರಮಾಣುವಿಗೆ ಸ್ಷಪ್ಟ ಭೌತ ಪ್ರತಿರೂಪ ನೀಡಿ ಪರಮಾಣುವಿಕ ಪ್ರಪಂಚದ ವೈಜ್ಞಾನಿಕ ಅಧ್ಯಯನಕ್ಕೆ ಹೊಸ ಹಾದಿ ಹಾಕಿದವರು, ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್. ಇವರು ಪರಮಾಣು ಪ್ರಪಂಚದ ದಾರ್ಶನಿಕನೆಂದು ಖ್ಯಾತರಾದವರು. ಪರಮಾಣು ಇರುವುದು ಪ್ರಯೋಗಗಳಿಂದ ಖಾತರಿಯಾಗಿ ದೃಢಪಟ್ಟಿದೆ. ಆದರೆ ಎಂಥ ಪ್ರಬಲ ಸೂಕ್ಷ್ಮದರ್ಶಕದಲ್ಲೂ ಅದು ಕಾಣಸಿಗದು. ಹಾಗಾದರೆ ಅದರ ಬಗ್ಗೆ ಹೇಗೆ ಅಧ್ಯಯನ ಮಾಡಬೇಕು? ಈ ಪ್ರಶ್ನೆಗೆ “ಬೋರ್ ಪರಮಾಣು” ಉತ್ತರ ಒದಗಿಸಿತು.

‘h’ (ಫ್ಲಾಂಕ್ ನಿಯತಾಂಕ), ‘c’ (ಬೆಳಕಿನ ವೇಗಸೂಚಕ ಪ್ರತೀಕ ಮತ್ತು ಬೋರ್ ಪರಮಾಣು-ಇವು ಆಧುನಿಕ ಭೌತ ವಿಜ್ಞಾನದ ಮೂಲ ಮಂತ್ರಗಳಾಗಿ ಮಾನವನಿಗೆ ನವದೃಷ್ಟಿ ನೀಡಿದ ಬೀಜಾಕ್ಷರಗಳಾಗಿವೆ. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ಅಕ್ಟೋಬರ್ ೭, ೧೮೮೫ರಂದು ಜನಿಸಿದರು. ತಂದೆ ಕ್ರಿಶ್ಚಿಯನ್ ಬೋರ್ ಡೆನ್ಮಾರ್ಕಿನ ಕೋಪನ್ ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ತಾಯಿಯ ಹೆಸರು ಎಲನ್.

ನೀಲ್ಸ್ ಗೆ ಚಿಕ್ಕಂದಿನಿಂದಲೇ ಮರಗೆಲಸ, ಲೋಹ ಕೆತ್ತನೆ, ಮಾದರಿ ತಯಾರಿಕೆ, ಕುಸುರಿ ಕೆಲಸ ಮುಂತಾದುವುಗಳಲ್ಲಿ ಆಸಕ್ತಿ. ಶಾಲೆಯಲ್ಲಿ ಲಚೂಟಿ. ಹಿಡಿದ ಕೆಲಸದಲ್ಲಿ ಮಗ್ನನಾಗಿಬಿಡುವ ಪ್ರವೃತ್ತಿ.

ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದ ವ್ಯಾಸಂಗ ಮಾಡುತ್ತಿದ್ದಾಗ ಪ್ರಯೋಗಗಳಿಗೆ ಸಾಕಷ್ಟು ಸೌಲಭ್ಯಗಳಿರಲಿಲ್ಲ. ತಂದೆಯ ಶರೀರ ವೈಜ್ಞಾನಿಕ ಪ್ರಯೋಗಾಲಯದಲ್ಲೇ ಸಮಯ ಕಳೆಯುತ್ತಿದ್ದರು. ಬೋರ್ ೧೯೦೯ರಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ೧೯೧೧ರಲ್ಲಿ ಡಾಕ್ಟರೇಟ್ ಅನ್ನು ಪಡೆದರು. ಮುಂದೆ ಪರಮಾಣು ವಿಷಯವಾಗಿ ಮಾಡಿದ ಅವರ ಸಂಶೋಧನೆಗಳು ಅವರಿಗೆ ವಿಶ್ವಖ್ಯಾತಿಯನ್ನು ತಂದವು.

ನೀಲ್ಸ್ ಬೋರ್ ನವೆಂಬರ್ ೧೮, ೧೯೬೨ರಂದು ಕೋಪನ್ ಹೇಗನ್ ನಲ್ಲಿ ನಿಧನರಾದರು.

 

ಪರಿಷ್ಕರಿಸಿದವರು: ಡಾ. ಎಸ್.ಕೆ. ನಟರಾಜು

 

This page was last modified on 05 December 2009 at 10:33.