ಓ ನನ್ನ ಪ್ರಿಯ ಓದುಗರೆ
ನೀವೆಲ್ಲಾದರೂ ಅಕಸ್ಮಾತ್ತಾಗಿ ನನ್ನ ತಾಯನ್ನು ಕಂಡರೆ
ದಯಮಾಡಿ ತುರ್ತಾಗಿ ಸುದ್ದಿ ಕೊಡಿ ನನಗೆ
ಹಗಲು ಇರುಳೂ ನನಗೆ ಅವಳದೇ ಯೋಚನೆ.

ದಿನ-ಬೆಳಗು ಪತ್ರಿಕೆಯ ದಪ್ಪಕ್ಷರಗಳಲ್ಲಿ
ಓದಿದ್ದೇನೆ
ಬರೀ ಹೊಡೆದಾಟ ಬಡಿದಾಟಗಳ ಸುದ್ದಿ
ಕಾಮಾಖ್ಯದಿಂದ ಹಿಡಿದು ಅಕಾಲತಖ್ತ್
ಅಲಹಾಬಾದ್, ಹೊಸದೆಹಲಿ, ಮೀರಾಪಾನಿ,
ಇತ್ಯಾದಿ ಇತ್ಯಾದಿಗಳವರೆಗೆ
ಬರೀ ಬಡಿದಾಟಗಳ ಸುದ್ದಿ.

ನನಗೆ ನಮ್ಮಮ್ಮನದೇ ಚಿಂತೆ-ಹೇಗಿದ್ದಾಳೆ ಅವಳು ?
ನನಗೆ ನಮ್ಮಮ್ಮನದೇ ಚಿಂತೆ-ಹೇಗಿದ್ದಾಳೆ ಅವಳು ?
ಹೇಗಿದ್ದಾರೆ ನನ್ನ ತಂದೆ ಮತ್ತೆ ತಂಗಿಯರು ?
ನನಗೆ ಅವರದೇ ಚಿಂತೆ ಹಗಲೂ-ಇರುಳು.

ಆಕಾಶದಲ್ಲಿರುವ ಚಿಕ್ಕೆಗಳಿಗಿಂತಲೂ
ಅಸಂಖ್ಯವಾಗಿರುವ
ಈ ನನ್ನ ಜನಗಳ ಜತೆಗೆ
ನನಗೆ, ಬಿಚ್ಚಲಾರದ ಬೆಸುಗೆ
ತೊಪ್ಪನೆ ತೊಯ್ದು ಕರಗಿಹೋಗಿದೆ ಹೃದಯ
ಅವರ ಪ್ರೀತಿಯ ಹನಿಗೆ.

ನಿನ್ನೆಯ ರಾತ್ರಿ ಥಟ್ಟನೆಚ್ಚರವಾಗಿ ಎದ್ದು
ಕೂತಂಥ ನನಗೆ, ಮೊದಲು ನೆನಪಾದದ್ದು
ನನ್ನ ತಾಯಿಯ ಬಗ್ಗೆ.

ಹೌದು, ಅವಳು ಹೊರಟದ್ದು ಕಾಮಾಖ್ಯದಿಂದ
ಅಕಾಲ ತಖ್ತದ ಕಡೆಗೆ
ಹೇಗಿದ್ದಾಳೊ ಅವಳು ?
ಹೇಗಿದ್ದಾರೆ ಆ ನನ್ನ ತಮ್ಮಂದಿರು
ಹೇಗಿದ್ದಾರೆ ಆ ನನ್ನ ತಂಗಿಯರು,
ಗೌಹಾತಿಯಲ್ಲಿ, ಗುರುದಾಸಪುರದಲ್ಲಿ,
ಅಹ್ಮದಾಬಾದಿನಲ್ಲಿ, ಹೊಸದಿಲ್ಲಿಯಲ್ಲಿ,
ಸ್ಪಂದಿಸುತ್ತಿದ್ದಾರೆ ಅವರೆಲ್ಲರೂ
ನನ್ನ ನರ ನಾಡಿಯಲ್ಲಿ.

ಓ ನನ್ನ ಪ್ರಿಯ ಓದುಗರೆ
ನೀವೆಲ್ಲಾದರೂ ಅಕಸ್ಮಾತ್ತಾಗಿ ನನ್ನ ತಾಯನ್ನು ಕಂಡರೆ
ದಯಮಾಡಿ ತುರ್ತಾಗಿ ಸುದ್ದಿ ಕೊಡಿ ನನಗೆ
ಗುರುತು ಹೇಳಲೆ ನಿಮಗೆ ?
ನನ್ನಮ್ಮ ಎಲ್ಲರ ಹಾಗೆ
ತೀರಾ ಸಾಧಾರಣ ಭಾರತೀಯ ಮಹಿಳೆ
ಭಾರತೀಯಳು ಆಕೆ – ಧರ್ಮದಲ್ಲಿ
ಭಾರತೀಯಳು ಆಕೆ – ಜಾತಿಯಲ್ಲಿ
ಭಾರತೀಯಳು ಭಾಷೆಯಲ್ಲಿ ಮತ್ತು ವೇಷದಲ್ಲಿ
ಅವಳೇನಾದರೂ ಅಕಸ್ಮಾತ್ತಾಗಿ ನಿಮಗೆ ಸಿಕ್ಕರೆ
ದಯಮಾಡಿ ಕರೆದುಕೊಳ್ಳಿ – ನಿಮ್ಮ ತಾಯಿಯ ಹಾಗೆ.

ನಿನ್ನೆಯ ರಾತ್ರಿ ಥಟ್ಟನೆಚ್ಚರಗೊಂಡು
ಹಾಸಿಗೆಯ ಮೇಲೆ ಕೂತು ಯೋಚಿಸಿದೆ :
ನನ್ನ ಪ್ರೀತಿಯ ಈ ದೇಶವನ್ನು,
ಅದರಲ್ಲಿರುವ ಜನಸಮೂಹವನ್ನು
ನನ್ನ ತಾಯನ್ನು, ತಂದೆಯನ್ನು,
ಹಾಗೂ ಅಕ್ಕ-ತಂಗಿಯರನ್ನು.

ಹಾಗೆಯೇ ಕುರಿತು ಯೋಚಿಸಿದೆ
ಹಿಮಧವಳ ಶೃಂಗಗಳನ್ನು,
ಸೂರ್ಯನ ಕಿರಣ ಚುಂಬಿಸಿದಾಗ
ಗರಿಗೆದರುತ್ತ ಹಾರಾಡುವ ಚೆಲುವಿನ ಬಾವುಟವನ್ನು,
ವಿಸ್ತಾರವಾದ ಹಸಿರು ಹೊಲಗಳ ನಡುವೆ
ಜುಳು ಜುಳು ಹರಿವ ನದೀ ಜಲ ನೀಲಿಮೆಯನ್ನು,
ಅವುಗಳು ಬೆಸೆವ ಬಾಂಧವ್ಯವನ್ನು,
ಹಸಿರುಗಳ ಮೇಲೆ ಹಾರುವ ಚಿಟ್ಟೆಗಳನ್ನು
ಅವು ಪ್ರತಿಮಿಸುವ ಶಾಂತಿಯನ್ನು.

ಪ್ರಿಯ ಓದುಗರೆ
ನೀವೆಂದಾದರೂ ರೇಡಿಯೋ ಕೇಳುತ್ತ
ಕೂತಿರುವಾಗ,
ನನ್ನ ತಾಯಿಯ ಬಗ್ಗೆ
ನನ್ನ ತಂದೆಯ ಬಗ್ಗೆ
ನನ್ನಕ್ಕ ತಂಗಿಯರ ಬಗ್ಗೆ
ಏನಾದರೂ ಕಿವಿಗೆ ಬಿದ್ದರೆ ನಿಮಗೆ
ದಯಮಾಡಿ ತುರ್ತಾಗಿ ಸುದ್ದಿ ಕೊಡುವಿರ ನನಗೆ,
ಪ್ರಿಯ ಓದುಗರೆ, ಹಗಲೂ ಇರುಳು
ಅವರದೇ ಚಿಂತೆ ನನಗೆ.

(* ಮೂಲ : ಅಸ್ಸಾಮೀ. ಕವಿ : ಸನಂತ ತಂತಿ)