ನನ್ನದು ಒಂದೂವರೆ ಎಕರೆ ಹೊಲದಲ್ಲಿ ಸಣ್ಣ ತೋಟ. ಅದರಲ್ಲಿ ಮಾವು ಮುಖ್ಯ ಬೆಳೆ. ತೆಂಗು, ಚಿಕ್ಕು, ಕರಿಬೇವು, ಗುಲಾಬಿ, ಸಾಗುವಾನಿ, ಹಲಸು, ಬಾಳೆ ಮತ್ತು ನುಗ್ಗೆ ಗಿಡಗಳುಳ್ಳ ವೈವಿಧ್ಯಮಯವಾದ ಬೆಳೆ ಮಾಡಿರುವೆ. ನೈಸರ್ಗಿಕ ಬೇಸಾಯ ಅಳವಡಿಸಿ ಅರಣ್ಯ ಮಾದರಿ ಕೃಷಿ ಇದಾಗಿದೆ. ತೋಟದಲ್ಲಿ ಮಾವಿನ ಗಿಡದ ಸಾಲಿನ ನಡುವೆ ಅಂತರ ಬಹಳ ಇತ್ತು.ಮಾವಿನ ಗಿಡಗಳ ಸಾಲಿನ ನಡುವೆ ಬಾಳೆ ಬೆಳೆದೆ. ಮಾವಿನ ಗಿಡಗಳು ದೊಡ್ಡವು ಆಗುವ ತನಕ ಬಾಳೆ ಬೆಳೆ ಮುಂದುವರಿಸಬೇಕೆಂದಿದ್ದೆ. ಕೊಳಿವೆ ಬಾವಿಯ ನೀರು ಕಡಿಮೆ ಆಗಿತ್ತು. ಬಾಳೆಗೆ ನೀರು ಬಹಳ ಬೇಕು. “ನನ್ನನ್ನು  ನೀರಾಗ ನಿಲ್ಲಿಸಿದರೆ ನಿನ್ನ(ಬೆಳೆದವನ)ನ್ನು  ಊರಾಗ ನಿಲ್ಲಿಸುವೆ” ಎಂಬ ಮಾತಿನಂತೆ ಬಾಳೆಗೆ ನೀರು ಕಡಿಮೆ ಆದರೆ ಮುಗಿಯಿತು. ಬಾಳೆ ಒಣಗತೊಡಗಿತು. ಕಡಿಮೆ ನೀರನ್ನು ಕೊಟ್ಟು ಬಾಳೆಯ ಬದಲಾಗಿ ಏನನ್ನಾದರೂ ಬೆಳೆಯುವ ಬಗ್ಗೆ ನಿರ್ಧರಿಸಿದೆ. ಕಡಿಮೆ ನೀರಿನಲ್ಲಿ ನುಗ್ಗೆಯನ್ನು ಬೆಳೆಯಬಹುದೆಂದು ಕೆಲವರು ಹೇಳಿದರು.

ನುಗ್ಗೆ ಬೆಳೆಯುವ ಮೊದಲು ಬಾಳೆ ಹಚ್ಚುವಾಗ ನನಗೆದುರಾದ ಸಮಸ್ಯೆಯ ಬಗ್ಗೆ ಹೇಳುವುದು ಸೂಕ್ತ ಎನಿಸುತ್ತದೆ. ಬಾಳೆ ಬೆಳೆಯಲು ‘ಒಮ್ಮು’ ಬರಬೇಕು. ಇದೊಂದು ಮೂಢನಂಬಿಕೆ. ಒಮ್ಮು ಬಾರದೇ ಇದ್ದರೆ ಬಾಳೆ ಬೆಳೆಯಬಾರದು. ಒಂದು ವೇಳೆ ಬಾಳೆಯನ್ನು ಒಮ್ಮು ಬಾರದೆ ಬೆಳೆದದ್ದೇ ಆದರೆ ಒಳ್ಳೆಯದಾಗದು. ಯಾರಿಗೆ ಒಮ್ಮು ಬಂದಿವೆಯೋ ಅವರಷ್ಟೇ ಹಚ್ಚಬೇಕು ಎಂದು ಅನೇಕರು ಸಲಹೆ ಕೊಟ್ಟರು. ಸಲಹೆ ಅಷ್ಟೇ ಅಲ್ಲ ಎಚ್ಚರಿಕೆಯನ್ನೂ ಕೊಟ್ಟರು. ನನ್ನನ್ನು ಅಂಜಿಸಿದರು. ದೇವರಲ್ಲಿ ಇಟ್ಟಿರುವ ನಂಬಿಕೆ ಹಾಗೂ ಶ್ರದ್ಧೆಯಷ್ಟೇ ಮೂಢನಂಬಿಕೆಗಳಲ್ಲೂ ಬಲವಾಗಿ ಹಳ್ಳಿಯ ಜನ ಇಟ್ಟಿದ್ದಾರೆ. ಪಂಚಾಂಗ ಕೇಳಿ ಬಾಳೆ ಬೆಳೆಯಬೇಕೆಂಬ ನಂಬಿಕೆ ಆಳವಾಗಿ ಬೇರೂರಿದೆ. ಕೆಲವರು ಮಾವಿನಗಿಡ ಹಚ್ಚಲೂ ಒಮ್ಮು ಬರಬೇಕೆಂದು ನಂಬಿದ್ದಾರೆ. ಆಯ್ತು ಬಾಳೆ ಹಚ್ಚಲು ಒಮ್ಮು ಬರಬೇಕೆಂದು ಒಪ್ಪಿಕೊಳ್ಳೋಣ. ಆದರೆ ಬಾಳೆ ಹಣ್ಣನ್ನು ತಿನ್ನಲು ಮ್ಮು ಬರಬೇಕೆಂಬ ನಿಯಮವೇನೂ ಇಲ್ಲವಲ್ಲ. ಬಾಳೆಹಣ್ಣು ತಿನ್ನಲು ಪಂಚಾಂಗ ಕೇಲಿ ಒಳಿತಾಗುವುದೆಂದರೆ ತಿನ್ನಬೇಕು, ಇಲ್ಲದಿದ್ದರೆ ಇಲ್ಲ. ಈ ಬಾಳೆಹಣ್ಣು ದೇವರಿಗೆ ನೈವೇಧ್ಯವಾಗಿ ಅರ್ಪಿಸುವರಲ್ಲ. ಆಗಲೂ ಪಂಚಾಂಗ ಕೇಳಿ ದೇವರಿಗೆ ಅರ್ಪಿಸುವರೋ?

ನನ್ನ ಪ್ರಶ್ನೆಗೆ ಉತ್ತರವಾಗಲಿ, ನನ್ನ ಅನುಮಾನಕ್ಕೆ ಪರಿಹಾರವಾಗಲೀ ದೊರಕಲೇ ಇಲ್ಲ. ನನ್ನದು ಒಂದು ಹುಂಬಗುತ್ತಿಗೆಯ ಸ್ವಭಾವ. ಆದರೆ ಹುಂಬತನವಲ್ಲ. ಮಾಡಬಾರದೆಂದದ್ದನ್ನು ಮಾಡಿಯೇ ತೀರಬೇಕು. ನನ್ನ ಅಪ್ಪನಂತೂ ‘ಮಾತು ಕೇಳದ ಮಗ’ ಎಂದು ಸಿಡಿಮಿಡಿಗೊಂಡು ನನ್ನ ಬಗ್ಗೆ ಒಂದಲ್ಲಾ ಒಂದು ರೀತಿಯ ತಿರಸ್ಕಾರ ಮಾಡತೊಡಗಿದ. ಭೂಮಿಯಲ್ಲಿ ಬೆಳೆ ಬೆಳೆಯಲು ಆತಂಕಪಡುವುದು ಸರಿಯಲ್ಲ. ಬೆಳೆ ಮಾಡಲು, ಹೊಲದಲ್ಲಿ ದುಡಿಯಲು ಮಾತು ಕೇಳದ ಮಗ ಎಂದರೂ ಸರಿ. ಯಾವ ಪಂಚಾಂಗದಿಂದವನನ್ನು ಕೇಳಲು ಹೋಗಲಿಲ್ಲ. ಸಣ್ಣ ಸಣ್ಣ ತಗ್ಗು ತೋಡಿ ಆಗಲೇ ಬಾಳೆ  ಸಸಿ ತಂದು ನೆಡಲು ತಯಾರಿ ಮಾಡಿಕೊಂಡೆ. ನನ್ನಪ್ಪ ಪಕ್ಕದ ಹೊಲದ ಚಂಬಣ್ಣನ ಹತ್ತಿರ ಹೋಗಿ, ‘ನಮ್ಮ ಮನ್ಯಾಗಿನ್ಯಾವರಿಗೆ ಬಾಳಿ ಹಚ್ಚಾಕ ಮ್ಮು ಬಂದಿಲ್ಲಾ. ಇಂವಾ ನೋಡಿದರ ಮಂಡ ಅದಾನು. ಅಂವಗ ಬಾಳಿ ಹಚ್ಚಬ್ಯಾಡನ್ನು ನೀನೇ ಬೇಕಾದರೆ ಹ್ಚ್ಇಕೊಟ್ಟು ಬಾ ಎಂದು ಕಳಿಸಿದ್ಧ. ಚಂಬಣ್ಣನಿಗೆ ನಾನು ಹೇಳಿದ್ದಿಷ್ಟೇ. ಎಲ್ಲಾ ಬಾಳೆ ಸಸಿ ನೀನೇ ಬೇಕಾದರೆ ಹಚ್ಚಿಕೊಟ್ಟು ಬಾ ಎಂದು ಕಳಿಸಿದ್ದ. ಚಂಬಣ್ಣನಿಗೆ ನಾನು ಹೇಳಿದ್ದಿಷ್ಟೇ. ಎಲ್ಲಾ ಬಾಳೆ ಸಸಿ ನೀನೇ ಹಚ್ಚಿರುವೆನೆಂದು ಹೇಳು. ಎಂದು ನಾನೇ ಹಚ್ಚಿದ್ದೆ.

ಬಾಳೆ ಬೆಳೆದು ದೊಡ್ಡ ಗಿಡವಾಗಿ ಗೊನೆ ಬಿಟ್ಟಿತ್ತು. ದೊಡ್ಡ ದೊಡ್ಡ ಬಾಳೆಗೊನೆಗಳು! ಬಾಳೆಯ ಗಿಡಕ್ಕೆ ಭಾರವಾಗಿ ನೆಲಕ್ಕೆ ಬಾಗಿದ್ದವು. ಒಂದೊಂದು ಬಾಳೆಯ ಗೊನೆಯಲ್ಲಿ ಏನಿಲ್ಲೆಂದರೂ 180ರಿಂದ 260 ರಷ್ಟು ಬಾಳೆಕಾಯಿಗಳು! ಶಣ್ಣ ಹುಡುಗರ ಕೈಗೆ ಅಮರುತ್ತಿರಲಿಲ್ಲ. ಒಂದು ಹಣ್ಣುತಿಂದರೆ ಹೊಟ್ಟೆ ತುಂಬಬೇಕು. ಪ್ರತಿಯೊಂದು ಗಿಡಕ್ಕೂ ಕವಲುಗಟ್ಟಿಗೆಯ ಆಸರೆ ಕೊಟ್ಟಿದ್ದೆ. ಬಂದವರೆಲ್ಲಾ ಏನು ಬಾಳೆ ಬೆಳೆದಿದೀರಿ ಎಂಥಾ ಗೊಬ್ಬರ ಹಾಕಿದೀರಿ? ಎಂದು ಆಶ್ಚರ್ಯದಿಂದ ಕೇಳುತ್ತಿದ್ದರು. ಮನೆಮಂದಿಯೆಲ್ಲಾ ತಿಂದು ತೇಗಿದರು. ಬಂದವರಿಗೆ ಕೊಟ್ಟೆ. ಬಂಧು ಬಾಂಧವರಿಗೂ ಕೊಟ್ಟೆ. ಮಾರಾಟ  ಮಾಡಬೇಕೆಂದರೆ ಆಗ ಬಾಳೆ ಹಣ್ಣಿಗೆ ಧಾರಣೆ ಇರಲಿಲ್ಲ.

ಎರಡು ವರ್ಷಗಳಲ್ಲಿ ನನ್ನ ಕೊಳಿವೆ ಬಾವಿಯಲ್ಲಿ ನೀರು ಬರುವುದು ನಿಂತಿತ್ತು. ಇನ್ನೊಂದು ಕೊಳಿವೆ ಬಾವಿಯಲ್ಲಿ ಸ್ವಲ್ಪ ನೀರು ಬಂದಿತ್ತು. ಅದರಲ್ಲಿ ಸಣ್ಣ ಒಂದೂವರೆ ಎಚ್ ಪಿ ಯ ಮೋಟಾರು ಕೋಡ್ರಿಸಿದ್ದೆ. ಬಾಳೆಗಿಡಗಳು ನೀರಿಲ್ಲದೇ ಒಣಗತೊಡಗಿದ್ದವು. ಆಗಲೇ ನುಗ್ಗೆಯ ಬೀಜ ಹಾಕುವ ನಿರ್ಧಾರ ಮಾಡಿದ್ದೆ. ‘ಏ ಮಗನ್ಯಾ ನುಗ್ಗೀ ಹಾಕಬ್ಯಾಡೋ ನುಗ್ಗಿ ಹಾಕಿದವನ್ನಾ ನುಗ್ಗ ನುಗ್ಗ ಮಾಡುವುದು’. ನನ್ನಪ್ಪ ಅವ್ವ ಇಬ್ಬರೂ ಎಚ್ಚರಿಕೆ ಕೊಟ್ಟರು. ಅದಕ್ಕೆ ನನ್ನ ಹೆಂಡತಿಯೂ ‘ಸೋ’ ಎಂದಳು. ‘ನೀ ಏನ ಕಲತ್ತೇನಂತ ದಿಮಾಕಿಲೇ ತಂದೆ ತಾಯಿ ಮಾತು ಕೇಳುಲ್ಲೇ ನುಗ್ಗಿ ಬೆಳೀಯಾಕ ಹೊಂಟಿದಿಯಂತ ‘ನಾನುಗ್ಗೋ ನೀನುಗ್ಗೋ’ ಅಂತ ಹಿರ್ಯಾರು ಶಾಸ್ತ್ರಾ ಮಾಡಿದಾರು. ಅದು ಸುಳ್ಳಲ್ಲ.’ ಎಂದು ಎಚ್ಚರಿಕೆ ಕೊಟ್ಟರು. ‘ಅದೇ ನುಗ್ಗೆಯ ಸಾರನ್ನು ಎಲ್ಲರೂ ಉಣ್ಣುತ್ತಾರಲ್ಲ?’ ಎಂಬುದು ನನ್ನ ಪ್ರಶ್ನೆ ಆಗಿತ್ತು.

ಭೂಮಿಯಲ್ಲಿ ಇದನ್ನೇ ಬೆಳೆಯಬೇಕು. ಇದನ್ನು ಬೆಳೆಯಬಾರದು ಎಂದು ಹೇಳುವವರು ನಾವೇ! ಹೊಂದೊಮ್ಮೆ ನನ್ನಪ್ಪನಿಗೆ ಹೀಗಾಗಿತ್ತು. ನನ್ನಜ್ಜನಿಗೆ ಹೀಗಾಗಿತ್ತು. ಅದು ಬಾಳೆ ಹಚ್ಚಿದ್ದರಿಂದ ಆಗಿತ್ತು. ಅದು ನುಗ್ಗೆ ಬೆಳೆದಿದ್ದರಿಂದ ಆಗಿತ್ತು. ಎಂದು ಹೇಳುತ್ತಾ ಬಂದಿದ್ದಾರೆ. ಕಾಗೆ ಕೂಡ್ರೂವುದಕ್ಕೂ ಟೊಂಗೆ ಮುರಿಯುವುದಕ್ಕೂ ಚಾಟಿ.’ ಎಂಬ ಮಾತು ಅದಕ್ಕೆ ಪ್ರಚಲಿತದಲ್ಲಿರಲಿಕ್ಕೆ ಸಾಕು. ಮದುವೆ ಮಂಟಪದಲ್ಲಿ ಓಡಾಡುವ ಬೆಕ್ಕನ್ನು ಹಿಡಿದು ಬುಟ್ಟಿ ಮುಚ್ಚಿಟ್ಟಂತೆ. ಅದು ಒಂದು ಸಂಪ್ರದಾಯವಾಗಿರಲು ಸಾಕು. ಬಾಳೆ ಬೆಳೆದು ಖುಷಿಯಲ್ಲಿ ನುಗ್ಗೆ ಬೆಲೆಯಲು ಮುಂದಾಗಿದ್ದೆ. ಒಂದೊಂದು ಪ್ರದೇಶದ ಮಣ್ಣು, ಹವಾಗುಣ ಮತ್ತು ಮಳೆಗಾಲಕ್ಕನುಸರಿಸಿ ಬೆಳೆ ಮಾಡಬೇಕೆಂದರೆ ಒಪ್ಪಬಹುದು. ಪಂಚಾಂಗ ನೋಡಿ ಬೆಳೆ ಮಾಡಲು ಹೇಳುವವರಿಗೇನು ಗೊತ್ತು ಬೆಳೆ ಮಾಡುವುದು? ‘ಬಾಳಿ ಹಣ್ಣಿನ ಫಲ ನುಗ್ಗಿಯಂಗಲ್ಲ’. ಎಂದು ಕಡ್ಡಿ ಮುರಿದಂತೆ ಮಾತಾಡತೊಡಗಿದ್ದರು. ‘ಏನಾದರೂ ಆಗುವದಿದ್ದರೆ ನನಗೇ ಆಗಲಿ, ಅನುಭವಿಸಲು ನಾನು ತಯ್ಯಾರ ಗಿರುವೆ’. ಇದೇ ನನ್ನ  ಉಪಾಯವಾಗಿತ್ತು.

ಔಷಧಿಗಳ ಆಗರವಾಗಿರುವ ನುಗ್ಗೆಯಂತಹ ಬೆಳೆ ಮಾಡಲು ಎಷ್ಟೊಂದು ವಿಘ್ನಗಳು! ಕೆಡುಕು ಮಾಡುವ ಗುಣ ಮನುಷ್ಯನಿಗಿದೆ ಹೊರತು ಗಿಡಮರಬಳ್ಳಿಗಳಿಗಿಲ್ಲ. ನುಗ್ಗೆ ಮಕ್ಕಳ ಬೆಳವಣಿಗೆಗೆ ಬೇಕಾದ ಕ್ಯಾಲ್ಸಿಯಂ ಒದಗಿಸುತ್ತದೆ. ಎ ಮತ್ತು ಬಿ ಜೀವಸತ್ವಗಳು ಹೇರಳವಾದ ನುಗ್ಗೆ ಇರುಳುಗಣ್ಣಿನ ತೊಂದರೆ ನಿವಾರಿಸುತ್ತದೆ. ನುಗ್ಗೆಯ ಸಾರು ವಿಶಿಷ್ಟ ರುಚಿ, ಸ್ವಾದ ಉಳ್ಳದ್ದಾಗಿದೆ. ನುಗ್ಗೆಯ ಚಿಗುರೆಲೆ ಹಾಗೂ ಹೂವುಗಳ ಪಲ್ಯಮಾಡುತ್ತಾರೆ. ನುಗ್ಗೆಯ ಎಲೆ, ಬೇರು ಮತ್ತು ತೊಗಟೆ ನರ ಸಂಬಂಧಿ ರೋಗಗಳ ನಿವಾರಣೆ ಮಾಡಬಲ್ಲದು. ಆರೋಗ್ಯಕ್ಕೆ ಪೂರಕವಾದ ಔಷದೀಯ ಗುಣಗಳುಳ್ಳ ನುಗ್ಗೆ ಬೆಳೆಯುವುದರಲ್ಲಿ ತಪ್ಪೇನಿಲ್ಲ. ಒಂದು ದಿನ ಸಾಯಂಕಾಲ ನುಗ್ಗೆ ಬೀಜಗಳನ್ನು ಬಾಳೆ ಗಿಡದ ಸಾಲಿನಲ್ಲಿ ಕುರಿಪಿಯಿಂದ ಮಡಿ ಮಾಡಿ ಹಾಕುತ್ತಿದ್ದೆ. ನನ್ನ ಮಗ ಬಂದವನೇ “ಅವೆಂಥಾ ಬೀಜಾ ಕಾಕ್ಹಾಕತ್ತಿದೀ”? ಎಂದಾಗ ‘ಇವು ನುಗ್ಗೆ ಬೀಜ, ಕಾಯಿ ಆಗುವುದು. ಸಾರು ಮಾಡಲು ಉಪಯೋಗಿಸುವರು.’ಎಂದು ಪರಿಚಯಿಸಿದ್ದೆ. ಆತ ಮನೆಗೆ ಹೋದವನೇ ‘ಅಪ್ಪಾ ನಾನೂ ಸಾರ ಮಾಡೂ ನುಗ್ಗಿ ಬೀಜ ಹಾಕಿದೆವು” ಎಂದು ಎಲ್ಲರ ಎದುರು ಹೇಳಿದ್ದ. ನನ್ನಪ್ಪನಿಗೆ ಸಿಟ್ಟು ನೆತ್ತಿಗೇರಿತ್ತು. ‘ಅಂವಾ ಏನ್ ಮಾಡಿದರೂ ಕೇಳವಲ್ಲಾ. ಹುಟ್ಟಿದ ಕೂಡಲೇ ನಾನು ಕಿತ್ತ ಒಗದ ಬರಬೇಕಿತ್ತೇನು’ ಎಂದು ಒದರಾಡತೊಡಗಿದ್ದ. ಆದರೆ ಹಾಗೇನೂ ಮಾಡದೇ ನನ್ನ ಜೊತೆಗೆ ಮಾತಾಡುವುದನ್ನೇ ಬಿಟ್ಟಿದ್ದ.

ಎಂಟು ತಿಂಗಳಿಗೆ ನುಗ್ಗೆ ಮೊಗ್ಗು ಬಿಟ್ಟು ಟೊಂಗೆ ಟೊಂಗೆಗಳೆಲ್ಲ ಹೂವಾಗಿ ಮುತ್ತಿನ ಗೊಂಚಲು ಆಗಿತ್ತು. ದುಂಬಿ, ಜೇನು ಹೂವಿನತ್ತ ಆಕರ್ಷಿತವಾಗಿದ್ದವು. ನುಗ್ಗೆಯ ಪರಿಮಳವನ್ನು ಹೊತ್ತು ತಂದು ತೋಟದಲ್ಲೆಲ್ಲಾ ಪಸರಿಸಿತ್ತು. ಗಮ ಗಮ ವಾಸನೆಯೇ ವಾಸನೆ! ಅಂಗಿ ಕಸಿಯಂತಹ ನುಗ್ಗೆಯ ಮಿಡಿಗಳು ಜೋತು ಬಿದ್ದಿದ್ದವು. ಒಂದೊಂದು ಗಿಡದಲ್ಲಿ 300 ರಿಂದ 400 ರಷ್ಟು ಕಾಯಿಗಳ ಗೊಂಚಲು ಗೊಂಚಲು ನೆಲಕ್ಕೆ ತಾಗುವಂತೆ ಆಗಿದ್ದವು. ಸಾಮಾನ್ಯವಾಗಿ ನುಗ್ಗೆಕಾಯಿ ಉದ್ದ ಹಾಗು ಬಾರು ಕೋಲಿನ ಗುಣಿಯಂತೆ ದಪ್ಪಗೆ ಬೆಳೆದಿದ್ದವು. ಒಂದೊಂದು ಕಾಯಿ ಪಡುವಲ ಕಾಯಿಯಂತೆ ದಪ್ಪಗೆ ಆಗಿದ್ದವು.

ವರ್ಷಕ್ಕೆ ಎರಡು ಮೂರು ಸಲ ಕಾಯಿ ಆಗುವ ನುಗ್ಗೆಗೆ ಯಾವ ರೋಗ ಮತ್ತು ಕೀಟದ ಬಾಧೆ ಆಗಲಾರದು. ಸಾವಯವದಲ್ಲೇ ಬೆಳೆಯಲು ಸಾಧ್ಯವಿದೆ. ಎರಡು ಸಾವಿರದಿಂದ ಮೂರು ಸಾವಿರದಷ್ಟು ಆದಾಯ ಬರತೊಡಗಿತ್ತು. ತೊಗರಿ ಬೇಳೆಯಲ್ಲಿ ನುಗ್ಗೆ ಕಾಯಿ ಹಾಕಿ ಕುದಿಸಿ ಸಾರು ಮಾಡಿದರೆ ಸಾರಿನ ಪರಿಮಳ ಮೂಗಿಗೆ ಬಡಿಯುವುದು. ಒಟ್ಟಿನಲ್ಲಿ ನುಗ್ಗೆ ಬೆಳೆದರೆ ನುಗ್ಗು ನುಗ್ಗು ನುಗ್ಗಾಗುವುದಿಲ್ಲ. ನುಗ್ಗೆಯು ನನ್ನ ಹಿಗ್ಗನ್ನು ಹೆಚ್ಚಿಸಿತ್ತು. ಆದ್ದರಿಂದ ನುಗ್ಗೆ ಬೆಳೆಯುವವರು ಮೂಢನಂಬಿಕೆಗೆ ಬಲಿಯಾಗದೆ ಹಿಗ್ಗಿನಿಂದ ಬೆಳೆಯಿರಿ. ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ.