ನುಗ್ಗೆಕಾಯಿ ರುಚಿಗೆ ಹೆಸರಾಗಿದೆ. ಕಾಯಿಗಳೇ ಅಲ್ಲದೆ ಹೂವು ಮತ್ತು ಸೊಪ್ಪುಗಳೂ ಸಹ ರುಚಿಕರ ತರಕಾರಿಗಳೇ. ಬೀಜಗಳಲ್ಲಿನ ಎಣ್ಣೆಗೆ ಬೆನ್ ಆಯಿಲ್ ಎಂದು ಹೆಸರು. ಬೀಜಗಳಿಂದ ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿ ದನಗಳಿಗೆ ಒಳ್ಳೆಯ ಸಿಹಿ ಮೇವಾಗಬಲ್ಲದು. ತೊಗಟೆಯಿಂದ ನಾರನ್ನು ಉತ್ಪಾದಿಸುತ್ತಾರೆ.

ನುಗ್ಗೆಯ ತ್ವರಿತ ಬೆಳವಣಿಗೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕಾಗದದ ತಯಾರಿಕೆಯಲ್ಲಿ ಅದನ್ನು ಕಚ್ಚಾಸಾಮಗ್ರಿಯಾಗಿ ಬಳಸಲಾಗುತ್ತಿದೆ. ಮರದಿಂದ ಲಭಿಸುವ ಗೋಂದು ಸಹ ಉಪಯುಕ್ತವೇ.  ಎಲೆಗಳನ್ನು ಒಣಗಿಸಿ, ಕುಟ್ಟಿ ಪುಡಿ ಮಾಡಿ, ಪಾತ್ರೆ ಉಜ್ಜಲು ಬಳಸುತ್ತಾರೆ.

ಪೌಷ್ಟಿಕ ಗುಣಗಳು : ನುಗ್ಗೆ ಸೊಪ್ಪು, ಕಾಯಿ, ಹೂವು ಮತ್ತು ಬೀಜಗಳು ಪೌಷ್ಟಿಕ ಆಹಾರಗಳು. ಅವುಗಳಲ್ಲಿ ಶರೀರದ ಬೆಳವಣಿಗೆಗೆ ಬೇಕಾದ ಶರ್ಕರಪಿಷ್ಟ, ಪ್ರೊಟೀನ್, ಕೊಬ್ಬು, ಖನಿಜ ಪದಾರ್ಥ ಹಾಗೂ ಜೀವಸತ್ವಗಳು ಅಧಿಕ ಪ್ರಮಾಣದಲ್ಲಿರುತ್ತವೆ.

೧೦೦ ಗ್ರಾಂ ಸೊಪ್ಪು ಮತ್ತು ಕಾಯಿಗಳಲ್ಲಿನ ವಿವಿಧ ಪೋಷಕಾಂಶಗಳು

ಪೋಷಕಾಂಶಗಳು ಸೊಪ್ಪು ಕಾಯಿ
ತೇವಾಂಶ ೭೫.೦ ಗ್ರಾಂ ೮೬.೯ ಗ್ರಾಂ
ಶರ್ಕರಪಿಷ್ಟ ೧೩.೪ ಗ್ರಾಂ ೩.೭ ಗ್ರಾಂ
ಪ್ರೊಟೀನ್ ೬.೭ ಗ್ರಾಂ ೨.೫ ಗ್ರಾಂ
ಒಟ್ಟು ಖನಿಜ ಪದಾರ್ಥ ೨.೩ ಗ್ರಾಂ ೨.೦ ಗ್ರಾಂ
ನಾರು ಪದಾರ್ಥ ೦.೯ ಗ್ರಾಂ ೪.೮ ಗ್ರಾಂ
ರಂಜಕ ೭೦ ಮಿ.ಗ್ರಾಂ ೧೧೦ ಮಿ.ಗ್ರಾಂ
ಕ್ಯಾಲ್ಸಿಯಂ ೪೪೦ ಮಿ.ಗ್ರಾಂ ೩೦ ಮಿ.ಗ್ರಾಂ
ಮೆಗ್ನೀಷಿಯಂ ೨೪ ಮಿ.ಗ್ರಾಂ ೨೪ ಮಿ.ಗ್ರಾಂ
ಆಕ್ಸಾಲಿಕ್ ಆಮ್ಲ ೧೦೧ ಮಿ.ಗ್ರಾಂ ೧೦೧ ಮಿ.ಗ್ರಾಂ
’ಎ’ ಜೀವಸತ್ವ ೧೧೩೦೦ ಐಯು ೧೮೪ ಐಯು
ಥಯಮಿನ್ ೦.೦೬ ಮಿ.ಗ್ರಾಂ ೦.೦೫ ಮಿ.ಗ್ರಾಂ
ರೈಬೋಫ್ಲೇವಿನ್ ೦.೦೫ ಮಿ.ಗ್ರಾಂ ೦.೦೭ ಮಿ.ಗ್ರಾಂ
’ಸಿ’ ಜೀವಸತ್ವ ೨೨೦ ಮಿ.ಗ್ರಾಂ ೧೨೦ ಮಿ.ಗ್ರಾಂ
ನಿಕೋಟಿನಿಕ್ ಆಮ್ಲ ೦.೮೦ ಮಿ.ಗ್ರಾಂ ೦.೨೦ ಮಿ.ಗ್ರಾಂ
ಕ್ಯಾಲೊರಿಗಳು ೯೨ ೨೬

 

ಎಲೆ ಮತ್ತು ಕಾಯಿಗಳಲ್ಲಿನ ಪ್ರೊಟೀನ್ ಅಂಶ (೧೬ ಗ್ರಾಂ ಸಾರಜನಕದಲ್ಲಿ)

  ಎಲೆ ಕಾಯಿ
ಆರ್ಜಿನೈನ್ ೬.೦ ಗ್ರಾಂ ೩.೬ ಗ್ರಾಂ
ಹಿಸ್ಟಿಡಿನ್ ೨.೧ ಗ್ರಾಂ ೧.೧ ಗ್ರಾಂ
ಲೈಸಿನ್ ೪.೩ ಗ್ರಾಂ ೧.೫ ಗ್ರಾಂ
ಟ್ರಿಪ್ಟೊಫ್ಯಾನ್ ೧.೯ ಗ್ರಾಂ ೦.೮ ಗ್ರಾಂ
ಫಿನೈಲ್ ಅನಲಿನ್ ೨.೦ ಗ್ರಾಂ ೧.೪ ಗ್ರಾಂ
ಮಿಥಿಯೊನೈನ್ ೨.೦ ಗ್ರಾಂ ೧.೪ ಗ್ರಾಂ
ಥ್ರಿಯೊನೈನ್ ೪.೯ ಗ್ರಾಂ ೩.೯ ಗ್ರಾಂ
ಲೂಸೈನ್ ೯.೩ ಗ್ರಾಂ ೬.೫ ಗ್ರಾಂ
ಐಸೊಲ್ಯೂಸೈನ್ ೬.೩ ಗ್ರಾಂ ೪.೪ ಗ್ರಾಂ
ವೇಲೈನ್ ೭.೧ ಗ್ರಾಂ ೫.೪ ಗ್ರಾಂ

 

೧೦೦ ಗ್ರಾಂ ಬೀಜ ಮತ್ತು ಹಿಂಡಿಗಳಲ್ಲಿನ ಪೋಷಕಾಂಶಗಳು

  ಬೀಜ ಹಿಂಡಿ
ತೇವಾಂಶ ೪.೦ ಗ್ರಾಂ
ಕಚ್ಚಾಪ್ರೊಟೀನ್ ೩೮.೪ ಗ್ರಾಂ ೫೮.೯೩ ಗ್ರಾಂ
ಜಿಡ್ಡು ೩೪.೭ ಗ್ರಾಂ
ಸಾರಜನಕದ ತಿಳಿಸಾರ ೧೬.೪ ಗ್ರಾಂ
ಖನಿಜ ಪದಾರ್ಥ ೩.೨ ಗ್ರಾಂ
ನಾರು ಪದಾರ್ಥ ೩.೫ ಗ್ರಾಂ
ಸುಣ್ಣ (ಕ್ಯಾಲ್ಸಿಯಂ ಆಕ್ಸೈಡ್) ೦.೪ ಗ್ರಾಂ
ರಂಜಕದ ಆಮ್ಲ ೧.೦ ಗ್ರಾಂ
ಪೊಟ್ಯಾಷ್ ೦.೫ ಗ್ರಾಂ

ಔಷಧೀಯ ಗುಣಗಳು : ನುಗ್ಗೆಸೊಪ್ಪನ್ನು ತಿನ್ನುತ್ತಿದ್ದಲ್ಲಿ ನೆಗಡಿ, ಶೀತ, ಜೀರ್ಣಕೋಶದ ತೊಂದರೆಗಳು ದೂರಗೊಳ್ಳುತ್ತವೆ. ಅದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ವ್ರಣ, ಗಾಯ, ಉರಿ, ಊತ ಮುಂತಾದುವುಗಳಲ್ಲಿ ಎಲೆಗಳನ್ನು ನುಣ್ಣಗೆ ಅರೆದು ಪಟ್ಟು ಹಾಕುವುದುಂಟು. ನುಗ್ಗೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ’ಎ’ ಜೀವಸತ್ವ ಇರುವ ಕಾರಣ ಕಣ್ಣುಗಳ ದೃಷ್ಟಿ ತೀಕ್ಷ್ಣಗೊಳ್ಳುತ್ತದೆ ಅವುಗಳ ಸೇವನೆಯಿಂದ ಸ್ಕರ್ವಿ ಕಾಯಿಲೆ ದೂರಗೊಳ್ಳುತ್ತದೆ.

ನುಗ್ಗೆ ಕಾಯಿಗಳನ್ನು ಬೇಯಿಸಿ ತಿನ್ನುತ್ತಿದ್ದಲ್ಲಿ ಶುದ್ಧ ರಕ್ತ ಹೆಚ್ಚುತ್ತದೆ. ಅವುಗಳಲ್ಲಿ ಕ್ರಿಮಿನಾಶಕ ಗುಣಗಳಿವೆ. ಹೃದಯ ರೋಗ ಪೀಡಿತರು ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಕು. ಅದರಿಂದ ಜಲೋದರಕ್ಕೆ ಒಳ್ಳೆಯದು. ಕೆಂಪು ನುಗ್ಗೆ ಹೂವುಗಳನ್ನು ತಿನ್ನುವುದರಿಂದ ವಾಯುಬಾಧೆ ಮತ್ತು ಮಲಬದ್ಧತೆಗಳು ದೂರಗೊಳ್ಳುತ್ತವೆ. ಅವುಗಳಲ್ಲಿ ಮೂತ್ರವರ್ಧಕ ಗುಣಗಳಿವೆ. ಹೂವುಗಳಲ್ಲಿನ ರಾಮ್ನೆಟಿನ್ ಪದಾರ್ಥವು ಅಣುಜೀವಿ ನಿರೋಧಕ.

ನುಗ್ಗೆ ಬೀಜ ನೆಗಡಿ, ಶೀತ ಮುಂತಾದುವುಗಳನ್ನು ಗುಣಪಡಿಸಬಲ್ಲವು. ಅವುಗಳಿಂದ ತೆಗೆದ ಎಣ್ಣೆಯನ್ನು ಸಂಧಿವಾತ ಹಾಗೂ ಕೀಲುನೋವುಗಳಲ್ಲಿ ಹೊರಲೇಪನವಾಗಿ ಬಳಸುತ್ತಾರೆ. ಬೀಜಗಳನ್ನು ಅರೆದು ಚರ್ಮವ್ಯಾಧಿಗಳಲ್ಲಿ ಬಳಸುತ್ತಾರೆ.

ನುಗ್ಗೆಯ ಬೇರುಗಳಲ್ಲಿ ಅಣುಜೀವಿ ನಿರೋಧಕ ಶಕ್ತಿಯಿದೆ. ವ್ರಣಗಳಿಗೆ ಒಳ್ಳೆಯದು. ಬೇರುಗಳ ರಸ ಮತ್ತು ಹಾಲುಗಳನ್ನು ಸೇವಿಸುತ್ತಿದ್ದಲ್ಲಿ ಬಿಕ್ಕಳಿಕೆ, ಕೆಮ್ಮು, ದಮ್ಮು, ಪಿತ್ತಜನಕಾಂಗದ ತೊಂದರೆಗಳು ಮತ್ತು ಸೊಂಟದ ನೋವು ದೂರಗೊಳ್ಳುತ್ತವೆ. ಹಸಿ ಬೇರುಗಳ ಕಷಾಯ ಗಂಟಲು ನೋವು, ಬಾಯಿ ಹುಣ್ಣುಗಳಿಗೆ ಮುಂತಾಗಿ ಲಾಭದಾಯಕ. ನುಗ್ಗೆ ಮರಗಳಿಂದ ಒಸರುವ ಗೋಂದನ್ನು ಪಂಜಾಬಿನಲ್ಲಿ ಒಗರು ಪದಾರ್ಥವಾಗಿ ಬಳಸುತ್ತಾರೆ. ಅದನ್ನು ಹಾಲಿನೊಂದಿಗೆ ಅರೆದು ಹಣೆಯ ಮೇಲೆ ಪಟ್ಟು ಹಾಕಿದಲ್ಲಿ ತಲೆನೋವಿಗೆ ಒಳ್ಳೆಯದು.

ಉಗಮ ಮತ್ತು ಹಂಚಿಕೆ : ನುಗ್ಗೆ ಸ್ವದೇಶೀ ತರಕಾರಿ. ಭಾರತದ ವಾಯುವ್ಯ ಪ್ರದೇಶ ಇದರ ತವರೂರು. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸಸ್ಯ ವರ್ಣನೆ : ನುಗ್ಗೆ ಮೊರಿಂಗೇಸೀ ಕುಟುಂಬಕ್ಕೆ ಸೇರಿದ ಮರ. ಪೂರ್ಣ ಬೆಳೆದಾಗ ೭-೮ ಮೀಟರ್ ಎತ್ತರವಿರುತ್ತದೆ. ಈ ಸಸ್ಯಕುಟುಂಬದ ವೈಶಿಷ್ಟ್ಯತೆಯೆಂದರೆ ಕಾಯಿಯ ಒಳಗೋಡೆಯ ಒಂದು ಅಂಚೆಗೆ ಬೀಜ ಅಂಟಿಕೊಂಡಿರುವುದು, ಮೂರು ಉದ್ದ ಏಣುಗಳುಳ್ಳ ಕಾಯಿ ಬಲಿತು ಒಣಗಿದರೂ ಸಿಡಿದು ಹಾರದೇ ಇರುವುದು ಹಾಗೂ ರೆಕ್ಕೆಗಳಿಂದ ಕೂಡಿದ ಬೀಜ ಇರುವುದು.

ಬೇಸಾಯದಲ್ಲಿನ ನುಗ್ಗೆ ಬಹುಬೇಗ ಬೆಳೆಯಬಲ್ಲದು. ಕಾಂಡದ ದಪ್ಪ ೧.೨ ರಿಂದ ೧.೫ ಮೀಟರ್; ರೆಂಬೆಗಳು ಮೋಟು. ಕಾಂಡ ಮತ್ತು ಬಲಿತ ರೆಂಬೆಗಳಲ್ಲಿನ ತೊಗಟೆ ಬೂದುಬಣ್ಣದಿರುತ್ತವೆ. ತೊಗಟೆ ದಪ್ಪ. ಅದು ಮೆತ್ತಗಿದ್ದು ಬೆಂಡಿನಂತಿರುತ್ತದೆ. ಅದರಲ್ಲಿ ಬಲೆಯಂತಿರುವ ಸೀಳುಗಳಿರುತ್ತವೆ. ಎಲೆತೊಟ್ಟುಗಳಿದ್ದ ಜಾಗದಲ್ಲಿ ಕುದುರೆ ಲಾಳದ ಆಕಾರವಿರುವ ಕುಸಿದ ಮಚ್ಚೆಗಳಿರುತ್ತವೆ. ಕಟ್ಟಿಗೆ ಮೃದು; ಹಗುರ. ಅದು ರಂಧ್ರಗಳಿಂದ ಕೂಡಿರುತ್ತದೆ. ಬಾಳಿಕೆ ಕಡಿಮೆ. ಎಲೆಗಳು ಸಂಯುಕ್ತವಿದ್ದು, ಕಿರು ಎಲೆಗಳನ್ನು ಹೊಂದಿರುತ್ತವೆ. ಎಲೆತೊಟ್ಟು ಬಲು ಉದ್ದ. ಎಳೆಯ ಎಲೆಗಳು ಸುಳಿಭಾಗದಲ್ಲಿ ಗುಂಪಾಗಿರುತ್ತವೆ. ಅವುಗಳ ಬಣ್ಣ ಹಸುರು. ಉಪ ಎಲೆಗಳಿಗೆ ಪುಟ್ಟ ತೊಟ್ಟು ಇರುತ್ತದೆ. ಎಲೆಗಳು ಎಳೆಯದಿದ್ದಾಗ ಅವುಗಳ ಮೇಲೆ ನವಿರಾದ ತುಪ್ಪಳ ಇರುತ್ತದೆ. ಉತ್ತರ ಭಾರತದಲ್ಲಿ ಮರಗಳು ಚಳಿಗಾಲದಲ್ಲಿ ಎಲೆಗಳನ್ನುದುರಿಸಿ ಬೋಳಾಗುತ್ತವೆ. ಚಳಿಗಾಲ ಕಳೆದ ಮೇಲೆ ಅವು ಹೊಸ ಚಿಗುರು ತಳ್ಳಿ ಹೂವು ಬಿಡುತ್ತವೆ. ಭಾರತದ ಇತರ ಪ್ರದೇಶಗಳಲ್ಲಿ ಏಷ್ಯಾದ್ಯಂತ ಎಲೆ, ಹೂವು ಮತ್ತು ಕಾಯಿ ಇರುತ್ತವೆಯಾದರೂ ಡಿಸೆಂಬರ್-ಜನವರಿ ಸಮಯದಲ್ಲಿ ಸ್ವಲ್ಪ ವಿರಾಳ.

ನುಗ್ಗೆಯ ಹೂವು ಗೊಂಚಲುಗಳಲ್ಲಿ ಬಿಡುತ್ತವೆ. ಹೂಗೊಂಚಲುಗಳು ಎಲೆಗಳ ಕಂಕುಳಲ್ಲಿ ಮೂಡುವುವು. ಹೂವು ದ್ವಿಲಿಂಗಿಗಳಿರುತ್ತವೆ. ಹೂ ಮೊಗ್ಗುಗಳ ಮೇಲೆ ತುಪ್ಪಳ ಇರುತ್ತದೆ. ಬಿಡಿ ಹೂವು ೦.೭ ರಿಂದ ೧.೦ ಸೆಂ.ಮೀ. ಉದ್ದವಿರುತ್ತವೆ. ಪುಷ್ಪ ಪಾತ್ರೆಯಲ್ಲಿ ಐದು ಎಸಳುಗಳಿರುತ್ತವೆ. ಅವುಗಳ ಬಣ್ಣ ಹಸುರು. ಹೂದಳ ಸಂಖ್ಯೆ ಐದು. ಅವು ಕೆನೆ ಬಿಳುಪು ಬಣ್ಣದ್ದಿರುತ್ತವೆ. ಕೇಸರ ಸಮೂಹದಲ್ಲಿ ಐದು ಕೆಸರಗಳಿದ್ದು ಅವುಗಳ ನಡುವೆ ಕೇಸರ ತಂತುಗಳಿರುತ್ತವೆ. ಅವುಗಳ ಪೈಕಿ ಒಂದು ಕೇಸರ ಮಾತ್ರ ಮಿಕ್ಕವುಗಳಿಗಿಂತ ಉದ್ದನಾಗಿರುತ್ತದೆ. ಅಂಡಾಶಯ ಉಚ್ಛ ಸ್ಥಿತಿಯದು. ಜರಾಯುಗಳ ಸಂಖ್ಯೆ ಮೂರು. ಅಂಡಕದ ಉದ್ದಕ್ಕೆ ಬೀಜ ಅಂಟಿಕೊಂಡಿರುತ್ತವೆ. ಶಲಾಕಾಗ್ರ ಕೃಶವಾಗಿದ್ದು, ಬೆಳ್ಳಗಿರುತ್ತದೆ. ಅದರ ಮೇಲೆಲ್ಲಾ ನವಿರಾದ ತುಪ್ಪಳ ಇರುತ್ತದೆ. ನುಗ್ಗೆ ಹೂವು ಮಕರಂದದ ಒಳ್ಳೆಯ ಮೂಲ.

ಕಾಯಿ ಉದ್ದನಾಗಿದ್ದು, ನೆಲಮುಖನಾಗಿ ಇಳಿಬಿದ್ದಿರುತ್ತವೆ. ಬಲಿತಾಗ ದುಂಡಗೆ ಇಲ್ಲವೇ ಮುಮ್ಮೂಲೆಗಳಿಂದ ಕೂಡಿರುವುದು; ತುದಿಭಾಗ ಚೂಪು. ಕಾಯಿಗಳ ಉದ್ದದಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ. ಅವು ೨೦ ರಿಂದ ೧೦೦ ಸೆಂ.ಮೀ. ಗಳಷ್ಟು ಉದ್ದ ಇರುವುದುಂಟು. ಮೇಲಿನ ಸಿಪ್ಪೆ ಹಸುರು ಇಲ್ಲವೇ ಕಂದು ಬಣ್ಣದ್ದಿರುತ್ತದೆ. ತಿರುಳು ಸ್ಪಂಜಿನಂತೆ ಮೃದು. ಬೀಜ ಒತ್ತಿದ ಭಾಗ ಅರ್ಧ ಚಂದ್ರಾಕೃತಿಯಲ್ಲಿರುತ್ತದೆ. ಬೀಜಗಳ ಸಂಖ್ಯೆ ಬಹಳ. ಅವು ಗುಂಡಗೆ ಬಟಾಣಿ ಕಾಳಿನಂತಿದ್ದು ಸುಮಾರು ೧ ಸೆಂ.ಮೀ. ದಪ್ಪ ಇರುತ್ತವೆ. ಪ್ರತಿ ಬೀಜ ಹೊರ ಅಂಚಿನಲ್ಲಿ ಮೂರು ರೆಕ್ಕೆಗಳಿರುತ್ತವೆ. ಭ್ರೂಣದಲ್ಲಿ ತೈಲ ಪದಾರ್ಥವಿರುತ್ತವೆ.

ನುಗ್ಗೆಯ ಬೇರುಗಳು ಗಂಟುಗಂಟಾಗಿದ್ದು ರುಚಿಯಲ್ಲಿ ಮೂಲಂಗಿಯಂತೆ ಘಾಟಾಗಿರುತ್ತವೆ. ಬೇರು ತೊಗಟೆಯ ಬಣ್ಣ ಬಿಳಿ ಕಂದು.

ಹವಾಗುಣ : ನುಗ್ಗೆ ವಾಸ್ತವವಾಗಿ ಉಷ್ಣವಲಯದ ಮರ. ಒಣ ಹಾಗೂ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಚೆನ್ನಾಗಿ ಫಲಿಸುತ್ತದೆ. ಇದರ ಬೇಸಾಯಕ್ಕೆ ಮೈದಾನ ಪ್ರದೇಶಗಳಾದಲ್ಲಿ ಉತ್ತಮ. ಇದಕ್ಕೆ ದಕ್ಷಿಣ ಭಾರತದ ಹವಾಗುಣ ಸೂಕ್ತ. ಹಾಗಾಗಿ ವರ್ಷಾದ್ಯಂತ ಚಿಗುರು ಮತ್ತು ಹೂವು ಕಾಣಿಸುತ್ತವೆ. ಉತ್ತರ ಭಾರತದಲ್ಲಿ ದೀರ್ಘ ಚಳಿಯಿಂದಾಗಿ ಒಂದೇ ಒಂದು ಕೊಯ್ಲು. ಹೂಬಿಡುವಾಗ ಮೋಡ ಮುಚ್ಚಿದ ಹವಾಗುಣ ಅಥವಾ ಮಳೆಯಾಗುವುದಿದ್ದಲ್ಲಿ ಅವುಗಳ ಬಹುಪಾಲು ಉದುರಿಬೀಳುತ್ತವೆ. ಬಲವಾದ ಗಾಳಿ ಬೀಸುವಂತಿದ್ದರೂ ಸಹ ಹಾನಿಕಾರಕವೇ.

ಭೂಗುಣ : ನುಗ್ಗೆಯ ಬೇಸಾಯಕ್ಕೆ ಇಂತಹುದೇ ಮಣ್ಣಿನ ಭೂಮಿ ಇರಬೇಕು ಎಂಬ ನಿಯಮವಿಲ್ಲ. ಮರಳು ಮಿಶ್ರಿತ ಗೋಡು ಮಣ್ಣು ಅತ್ಯುತ್ತಮ. ಜಿಗುಟು ಕಪ್ಪು ಮಣ್ಣು ಸೂಕ್ತವಿರುವುದಿಲ್ಲ. ಏಕೆಂದರೆ ಬೇಸಿಗೆಯಲ್ಲಿ ಬಿರುಕುಗಳುಂಟಾಗಿ ಬೇರುಗಳಿಗೆ ಹಾನಿಯಾಗುತ್ತದೆಯಲ್ಲದೆ ಮಳೆಗಾಲದಲ್ಲಿ ಅಧಿಕ ತೇವಾಂಶ ಹಿಡಿದಿಟ್ಟು ಬೇರುಗಳು ಕೊಳೆಯುವಂತಾಗುತ್ತದೆ. ನೀರು ಬಸಿಯುವುದು ಬಹುಮುಖ್ಯ. ಮಣ್ಣಿನಲ್ಲಿ ಸ್ವಲ್ಪ ಸುಣ್ಣ ಇದ್ದರೂ ಗಿಡಗಳು ತಡೆದುಕೊಳ್ಳಬಲ್ಲವು.

ತಳಿಗಳು :

. ಜಾಫ್ನಾ : ದಕ್ಷಿಣ ಭಾರತದಲ್ಲಿ ಇದು ಬಹಳ ಮುಖ್ಯವಾದುದು. ಇದರ ಕಾಯಿಗಳು ೬೦-೯೦ ಸೆಂ.ಮೀ. ಉದ್ದವಿದ್ದು, ಮೃದುವಾದ ತಿರುಳನ್ನು ಹೊಂದಿರುತ್ತವೆ. ರುಚಿಯಲ್ಲಿ ಮಧುರ. ಇದು ಶ್ರೀಲಂಕಾದ ತಳಿ. ಇದರಲ್ಲಿ ಎರಡು ಬಗೆ. ಅವುಗಳೆಂದರೆ ಚವಕಚೇರಿ ಮುರುಂಗಾಯ್ ಮತ್ತು ಚೆಮ್ ಮುರುಂಗಾಯ್, ಚವಕಚೇರಿ ಮುರುಂಗಾಯ್‌ನ ಕಾಯಿಗಳು ೯೦ ರಿಂದ ೧೨೦ ಸೆಂ.ಮೀ. ಉದ್ದವಿರುತ್ತವೆ. ಚೆಮ್ ಮುರುಂಗಯ್‌ನ ಕಾಯಿಗಳ ತುದಿ ಕೆಂಪು ಬಣ್ಣದ್ದಿರುತ್ತದೆ.

. ಪೂನ ಮುರುಂಗಾಯ್ : ಇದರ ಕಾಯಿಗಳು ತಿನ್ನಲು ರುಚಿಯಾಗಿರುತ್ತವೆ. ತಿರುಳು ಅಧಿಕ.

. ಕೋಡಿಕ್ಕಳ್ ಮುರುಂಗಾಯ್ : ಇದರ ಕಾಯಿಗಳು ಮೋಟು; ಹೆಚ್ಚೆಂದರೆ ೧೫ ರಿಂದ ೨೫ ಸೆಂ.ಮೀ. ಅಷ್ಟೆ.

. ಪಾಲ ಮುರುಂಗಾಯ್ : ಇದರ ಕಾಯಿಗಳಲ್ಲಿ ತಿರುಳು ಸಾಕಷ್ಟಿರುತ್ತದೆಯಾದರೂ ಅದು ರುಚಿಯಲ್ಲಿ ಕಹಿಯಾಗಿರುತ್ತದೆ.

. ಪಿಕೆಎಂ: ಇದು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿನ ಪೆರಿಯಾಕುಳಂ ಸಂಶೋಧನಾ ಕೇಂದ್ರದ ಕೊಡುಗೆ. ಇದರ ಗಿಡಗಳು ಬಲು ಗಿಡ್ಡ; ವಿರಳ ನೆತ್ತಿಯಿಂದ ಕೂಡಿರುತ್ತವೆ. ಸಸಿಗಳನ್ನು ನೆಟ್ಟ ಕೇವ ಆರು ತಿಂಗಳುಗಳಲ್ಲಿಯೇ ಹೂವು ಬಿಟ್ಟು ಕಾಯಿ ಕಚ್ಚುತ್ತವೆ. ಪ್ರತಿ ಗಿಡದಲ್ಲಿ ವರ್ಷಕ್ಕೆ ೩೦೦-೪೦೦ ಕಾಯಿಗಳಷ್ಟು ಇಳುವರಿ ಸಿಗುತ್ತದೆ. ಕಾಯಿಗಳಲ್ಲಿ ಅಧಿಕ ತಿರುಳಿದ್ದು ತಿನ್ನಲು ಬಲು ರುಚಿಯಾಗಿರುತ್ತವೆ. ಇದು ಅಧಿಕ ಸಾಂದ್ರತೆ ನಾಟಿಗೆ ಬಲು ಸೂಕ್ತ.

. ಜಿಕೆವಿಕೆ : ಇದೂ ಸಹ ಗಿಡ್ಡ ತಳಿ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆ. ಅಧಿಕ ಇಳುವರಿ ಕೊಡುವ ತಳಿ. ವರ್ಷಾದ್ಯಂತ ಕಾಯಿ ಸಿಗುತ್ತಿರುತ್ತವೆ. ಇದರ ಗಿಡಗಳನ್ನು ತೀರಾ ಹತ್ತಿರ ನೆಡಬಹುದು. ಸುಮಾರು ಮೂರು ನಾಲ್ಕು ವರ್ಷಗಳವರೆಗೆ ಫಸಲು ಸಿಗುತ್ತಿರುತ್ತದೆ. ಕಾಯಿಗಳು ದಪ್ಪನಾಗಿದ್ದು ಮುಮ್ಮೂಲೆಗಳಿಂದ ಕೂಡಿರುತ್ತವೆ. ತಿರುಳು ಅಧಿಕ.

. ಧನ್ರಾಜ್ : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೊಡುಗೆ; ಕಾಯಿ ಮೋಟು, ರಸವತ್ತಾಗಿರುತ್ತದೆ. ಇದು ಏಕವಾರ್ಷಿಕ ನುಗ್ಗೆ, ಹೆಚ್ಚು ಫಸಲನ್ನು ಕೊಡುವ ತಳಿಯಾಗಿದೆ.

ಸಸ್ಯಾಭಿವೃದ್ಧಿ : ನುಗ್ಗೆಯನ್ನು ಬೀಜ ಊರಿ ಹಾಗೂ ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿ ಮಾಡಬಹುದು. ಇದು ಅನ್ಯ-ಪರಾಗಸ್ಪರ್ಶದಿಂದ ಕೂಡಿದ ಬೆಳೆ. ಹೂವು ಬಿಡುವಾಗ ಹೂಗೊಂಚಲನ್ನು ಬಟ್ಟೆಯ ಮಸ್ಲಿನ್ ಚೀಲ ಹೊದಿಸಿ ಕಟ್ಟಿದಲ್ಲಿ ಅವು ಸ್ವ-ಪರಾಗಸ್ಪರ್ಶಗೊಂಡು ಶುದ್ಧತೆ ಹಾಗೆಯೇ ಉಳಿಯುತ್ತದೆ. ಪೂರ್ಣಬಲಿತು ಪಕ್ವಗೊಂಡು ಒಣಗಿದ ಕಾಯಿಗಳನ್ನು ಬಿಡಿಸಿ ಮಾಡಿದ ಗಟ್ಟಿಬೀಜವನ್ನು ಮಾತ್ರವೇ ಬಿತ್ತನೆಗೆ ಬಳಸಬೇಕು. ಬೀಜವನ್ನು ಪಾಲಿಥೀನ್ ಚೀಲಗಳಲ್ಲಿ ಬಿತ್ತುವುದು ಒಳ್ಳೆಯದು. ಮೇಲ್ಮಣ್ಣು, ಮರಳು ಮತ್ತು ಕೊಳೆತ ಇಪ್ಪೆಗೊಬ್ಬರಗಳನ್ನು ಬೆರೆಸಿ ಸಿದ್ಧಗೊಳಿಸಿದ ಮಿಶ್ರಣವನ್ನು ಚೀಲಗಳಿಗೆ ತುಂಬಿ, ತಲಾ ಒಂದರಂತೆ ಬೀಜ ಊರಿ ನೀರು ಕೊಡುತ್ತಿದ್ದಲ್ಲಿ ಅವು ೪-೫ ದಿನಗಳಲ್ಲಿ ಮೊಳೆಯುತ್ತವೆ. ಸುಮಾರು ಒಂದು ತಿಂಗಳಲ್ಲಿ ಸಸಿಗಳು ನಾಟಿ ಮಾಡಲು ಸಿದ್ಧವಿರುತ್ತವೆ.

ನಿರ್ಲಿಂಗ ವಿಧಾನಗಳಲ್ಲಿ ಬಲಿತ ರೆಂಬೆಯ ತುಂಡುಗಳನ್ನು ನೆಟ್ಟು ಬೆಳೆಸಬಹುದು. ಇದು ಸುಲಭದ ಪದ್ಧತಿಯೇನೋ ನಿಜ. ಆದರೆ ಸಾಕಷ್ಟು ಸಂಖ್ಯೆಯ ರೆಂಬೆಯ ತುಂಡುಗಳು ಸಿಗುವುದು ಕಷ್ಟ.

ನುಗ್ಗೆಯನ್ನು ಕಣ್ಣು ಕೂಡಿಸಿ ಕಸಿ ಮಾಡಿ ಹಾಗೂ ಗೂಟಿ ಕಟ್ಟಿ ಸಹ ವೃದ್ಧಿ ಮಾಡಬಹುದು.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ರಿಂದ ೨.೫ ಮೀಟರ್ ಅಂತರದಲ್ಲಿ ೩೦ ಘನ ಸೆಂ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಗುಂಡಿಗಳನ್ನು ತೋಡಲು ಮೇ-ಜೂನ್ ಸೂಕ್ತ ಕಾಲ. ಅನಂತರ ಗುಂಡಿಗಳಿಗೆ ತಿಪ್ಪೆಗೊಬ್ಬರ ಮತ್ತು ಮೇಲ್ಮಣ್ಣುಗಳನ್ನು ತುಂಬಿ ನೀರು ಕೊಟ್ಟರೆ ಆ ಮಿಶ್ರಣ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಒಂದೆರಡು ಮಳೆಗಳಾದ ನಂತರ ತಲಾ ಒಂದರಂತೆ ಸಸಿಗಳನ್ನು ನೆಟ್ಟು, ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು.

ಆಕಾರ ಮತ್ತು ಸವರುವಿಕೆ : ಸಸಿಗಳು ಸುಮಾರು ಒಂದು ಮೀಟರ್‌ನಷ್ಟು ಎತ್ತರಕ್ಕೆ ಬೆಳೆದಾಗ ಅವುಗಳ ಸುಳಿಯನ್ನು ಚಿವುಟಿ ಹಾಕಿದರೆ ಪಕ್ಕ ಮೋಸುಗಳು ಬೆಳೆದು ಸುತ್ತ ಹರಡಿ ಬೆಳೆಯುತ್ತವೆ. ಆಗ ಅದರ ನೆತ್ತಿ ಬಿಚ್ಚಿ ಹರಡಿದ ಛತ್ರಿಯಂತೆ ಕಾಣುವುದು. ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಟ್ಟು ಅಧಿಕ ಫಸಲು ಸಾಧ್ಯ.

ಗೊಬ್ಬರ : ನುಗ್ಗೆ ಗಿಡಗಳಿಗೆ ಗೊಬ್ಬರ ಕೊಡುವ ರೂಢಿ ಇಲ್ಲ. ಪ್ರತಿ ವರ್ಷ ಗಿಡವೊಂದಕ್ಕೆ ೧೦ ರಿಂದ ೨೦ ಕಿ.ಗ್ರಾಂ. ತಿಪ್ಪೆಗೊಬ್ಬರ ಕೊಡುವುದು ಲಾಭದಾಯಕ. ಅದರ ಜೊತೆಗೆ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನೂ ಸಹ ಕೊಡಬೇಕು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕೊಯಮತ್ತೂರು ಕೇಂದ್ರವು ಪ್ರತಿ ಗಿಡಕ್ಕೆ ವರ್ಷಕ್ಕೆ ೭.೫ ಕಿ.ಗ್ರಾಂ ತಿಪ್ಪೆಗೊಬ್ಬರ ಮತ್ತು ೩೭೦ ಗ್ರಾಂ ಅಮೋನಿಯಂ ಸಲ್ಫೇಟ್‌ಗಳನ್ನು ಡಿಸೆಂಬರ್‌ನಲ್ಲಿ ಕೊಟ್ಟಾಗ ಅಧಿಕ ಇಳುವರಿ ಸಾಧ್ಯವಾಗಿದ್ದಾಗಿ ವರದಿ ಮಾಡಿದೆ.

ನೀರಾವರಿ : ಮಳೆ ಇಲ್ಲದಿದ್ದಾಗ ಹತ್ತು ಹದಿನೈದು ದಿನಗಳಿಗೊಮ್ಮೆ ನೀರು ಕೊಡಬೇಕು. ಗಿಡಗಳು ಚೆನ್ನಾಗಿ ಬೆಳೆದ ನಮತರ ಅಷ್ಟೇನೂ ನೀರು ಬೇಕಾಗಿಲ್ಲ.

ಮಿಶ್ರ/ಅಂತರ ಬೆಳೆಯಾಗಿ : ನುಗ್ಗೆಯನ್ನು ಶುದ್ಧ ಬೆಳೆಯಾಗಿ ಬೆಳೆಯುವುದುಂಟು. ಮಿಶ್ರ ಬೆಳೆಯಾಗಿ ಸಾಮಾನ್ಯವಾಗಿ ಎಲೆತೋಟಗಳಲ್ಲಿ ಇದರ ಗಿಡಗಳನ್ನು ಆಸರೆಗಾಗಿ ಬೆಳೆಯುತ್ತಾರೆ. ಮಾವು, ಸಪೋಟ, ತೆಂಗು ಮುಂತಾದ ಬೆಳೆಗಳಲ್ಲಿ ಫಸಲು ದೃಢಗೊಳ್ಳುವ ತನಕ ಅಂದರೆ ಮೊದಲ ೩-೪ ವರ್ಷಗಳವರೆಗೆ ಇದನ್ನು ಅಂತರ ಬೆಳೆಯಾಗಿ ಬೆಳೆಯಬಹುದು.

ಅಂತರ ಬೇಸಾಯ ಮತ್ತು ಕಳೆ ಹತೋಟಿ ಕಳೆಗಳನ್ನು ಕಿತ್ತು ಹಾಕಬೇಕು. ಪ್ರತಿವರ್ಷ ಪಾತಿಗಳನ್ನು ಹಿಗ್ಗಿಸಿ, ಅವುಗಳ ಅಗಲಕ್ಕೆ ಒಣಹುಲ್ಲು ಅಥವಾ ಎಲೆಗಳನ್ನು ಮಂದವಾಗಿ ಹರಡಿ ಹೊದಿಕೆ ಕೊಟ್ಟರೆ ತೇವ ಹೆಚ್ಚು ಕಾಲ ಉಳಿಯುತ್ತದೆ. ಮಣ್ಣಿನ ಫಲವತ್ತದೆ ಸುಧಾರಿಸು ಮಳೆಗಾಲದ ಪ್ರಾರಂಭದಲ್ಲಿ ದ್ವಿದಳಧಾನ್ಯ ಬೆಳೆಗಳನ್ನು ಬಿತ್ತಿ, ಅವು ಹೂವು ಬಿಡುವ ಮುಂಚೆ ಮಣ್ಣಿಗೆ ಸೇರಿಸಬೇಕು.

ಕೊಯ್ಲು ಮತ್ತು ಇಳುವರಿ : ವಾರ್ಷಿಕ ನುಗ್ಗೆ ತಳಿಗಳಲ್ಲಿ ಸಸಿಗಳನ್ನು ನೆಟ್ಟ ಆರೇಳು ತಿಂಗಳುಗಳಲ್ಲಿ ಹೂಬಿಟ್ಟು ಕಾಯಿ ಕಚ್ಚಲು ಪ್ರಾರಂಭಿಸುತ್ತವೆ. ವರ್ಷವಿಡೀ ಹೂವು ಕಾಯಿ ಇರುತ್ತವೆಯಾದರೂ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಸಿಗುವುದು ಮಾರ್ಚ್-ಮೇ ತಿಂಗಳುಗಳಲ್ಲಿ. ಗಿಡವೊಂದಕ್ಕೆ ವರ್ಷಕ್ಕೆ ೩೦೦-೪೦೦ ಕಾಯಿ ಸಿಗುವುದರಲ್ಲಿ ಸಂಶಯವಿಲ್ಲ, ಕಾಯಿಗಳು ಸಾಕಷ್ಟು ಬಲಿತಾಗ ಜೋಪಾನವಾಗಿ ಕಿತ್ತು, ಸಾಗಿಸಬೇಕು. ತಂಪು ಹೊತ್ತಿನಲ್ಲಿ ಕೊಯ್ಲು ಮಾಡುವುದು ಒಳ್ಳೆಯದು.

ಕೀಟ ಮತ್ತು ರೋಗಗಳು :

. ಎಲೆ ತಿನ್ನುವ ಕಂಬಳಿ ಹುಳು : ಈ ಕಂಬಳಿ ಹುಳುಗಳ ಮೈಮೇಲೆಲ್ಲಾ ಕೂದಲುಗಳಿರುತ್ತವೆ. ಈ ಕೀಟಗಳು ಎಲೆಗಳಲ್ಲಿನ ಹಸುರು ಭಾಗವನ್ನೆಲ್ಲಾ ತಿಂದು ಹಾಳು ಮಾಡುತ್ತವೆ. ಹಾನಿ ತೀವ್ರವಿದ್ದಾಗ ಮರಗಳು ಬೋಳಾಗುತ್ತವೆ. ಒಂದೆರಡು ಗಿಡಗಳಲ್ಲಿ ಇವು ಕಾಣಿಸಿಕೊಂಡ ಕೂಡಲೇ ೧೦ ಲೀಟರ್ ನೀರಿಗೆ ೧೦-೨೦ ಮಿ.ಲೀ. ರೋಗಾರ್ ಇಲ್ಲವೇ ಮೆಟಾಸಿಸ್ಟಾಕ್ಸ್ ಬೆರೆಸಿ ಸಿಂಪಡಿಸಬೇಕು.

. ಕಂದು ಬಣ್ಣದ ಪತಂಗ : ಇದರ ಕಂಬಳಿ ಹುಳುಗಳು ಮೋಟು; ಕಂದು ಬಣ್ಣದ್ದಿರುತ್ತವೆ. ಅವುಗಳ ಮೈಮೇಲೆ ಕುರುಚಲು ಕೂದಲು ಹರಡಿರುತ್ತವೆ. ಪ್ರಾಯದ ಪತಂಗಗಳು ಕಂದು ಬಣ್ಣವಿದ್ದು ಎಲೆಗಳ ಮೇಲೆ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದು ಹೊರಬಂದ ಹುಳುಗಳು ಎಲೆಗಳನ್ನು ತಿಂದು ಹಾಳು ಮಾಡುತ್ತವೆ. ಈ ಕೀಟದ ಹತೋಟಿ ಎಲೆ ತಿನ್ನುವ ಕಂಬಳು ಹುಳುವಿನಲ್ಲಿ ಇದ್ದಂತೆ.

. ತೊಗರಿ ಗಿಡಗಳಿಗೆ ಬೀಳುವ ಕಂಬಳಿಹುಳು : ಇದರ ಕಾಟ ಚಳಿಗಾಲದಲ್ಲಿ ಜಾಸ್ತಿ. ಪ್ರಾಯದ ಪತಂಗ ಕಂದು ಬಣ್ಣದ್ದಿರುತ್ತದೆ. ಮೊಟ್ಟೆಯೊಡೆದು ಹೊರಬಂದ ಹುಳುಗಳು ಎಲೆ ಮುಂತಾಗಿ ತಿಂದು ಹಾಳು ಮಾಡುತ್ತವೆ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಮಿ.ಲೀ. ಲೆಬಾಸಿಡ್ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು.

. ಮೊಗ್ಗು ಕೊರೆಯುವ ಹುಳು : ಹೂಮೊಗ್ಗು ಅರಳುವ ಮುಂಚೆ ಅವುಗಳನ್ನು ಈ ಕಂಬಳಿ ಹುಳುಗಳು ಕೊರೆದು, ಒಳಗೆ ಸೇರಿ ಆ ಭಾಗಗಳನ್ನೆಲ್ಲಾ ತಿನ್ನಲು ಪ್ರಾರಂಭಿಸುತ್ತವೆ. ಅದರಿಂದಾಗಿ ಬಹಳಷ್ಟು ಹೂ ಮೊಗ್ಗುಗಳು ಉದುರಿಬೀಳುತ್ತವೆ. ಇವುಗಳ ಹತೋಟಿಗೆ ಯಾವುದಾದರೂ ಸೂಕ್ತ ಕೀಟನಾಶಕ ಸಿಂಪಡಿಸಬಹುದು.

. ನುಶಿ : ಈ ಸೂಕ್ಷ್ಮ ಕೀಟಗಳು ಎಲೆ ಹಾಗೂ ಹೂಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಮೆಟಾಸಿಸ್ಟಾಕ್ಸ್ ಕೀಟನಾಶಕ ಬೆರೆಸಿ ಸಿಂಪಡಿಸಬೇಕು.

. ಶಲ್ಕ ಕೀಟಗಳು : ಈ ಕೀಟಗಳು ಚಿಗುರು ಮತ್ತು ಎಳೆಯ ಹೀಚುಗಳ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಚಳಿಗಾಲದಲ್ಲಿ ಇವುಗಳ ಹಾವಳಿ ಜಾಸ್ತಿ. ಇವುಗಳ ಹತೋಟಿ ನುಸಿಯಲ್ಲಿದ್ದಂತೆ.

. ಸಸ್ಯಹೇನು : ಹಳದಿ ಬಣ್ಣದ, ಮೆತುಶರೀರದ ಈ ಕೀಟಗಳು ಎಲೆಗಳಲ್ಲಿನ ರಸವನ್ನು ಹೀರುತ್ತವೆ. ಅವು ಎಲೆಗಳ ತಳಭಾಗದಲ್ಲಿ ಗುಂಪು ಗುಂಪಾಗಿರುವುದು ಸಾಮಾನ್ಯ; ಹತೋಟಿ ನುಶಿಯಲ್ಲಿದ್ದಂತೆ.

. ಕಾಂಡ ಕೊರೆಯುವ ಹುಳು : ಇವು ತೊಗಟೆಯಲ್ಲಿ ರಂಧ್ರಗಳನ್ನು ಮಾಡಿ ಕಾಂಡದೊಳಗೆ ಪ್ರವೇಶಿಸುತ್ತವೆ. ಅನಂತರ ಕಟ್ಟಿಗೆ ಹಾಗೂ ತೊಗಟೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಪ್ರಾಯದ ಕೀಟ ಸಣ್ಣ ದುಂಬಿ. ಅವುಗಳ ಹಿಕ್ಕೆ, ಮರದ ಪುಡಿ ಮುಂತಾದುವು ರಂಧ್ರಗಳ ಹೊರಗೆ ನೇತಾಡುತ್ತಿರುತ್ತವೆ. ಸೆಪ್ಟೆಂಬರ್-ನವೆಂಬರ್ ತಿಂಗಳಲ್ಲಿ ಇವುಗಳ ಕಾಟ ಜಾಸ್ತಿ. ಇವುಗಳ ಹತೋಟಿಗೆ ಚೂಪಾದ ಸಣ್ಣ ತಂತಿಯ ಮೊನೆಯನ್ನು ತೂರಿಸಿ ಚುಚ್ಚಿದರೆ ಸಾಕು. ಪೆಟ್ರೋಲ್ ಅದ್ದಿದ ಹತ್ತಿಯ ಸಿಂಬಿಯನ್ನು ರಂಧ್ರಗಳೊಳಕ್ಕೆ ತುರುಕಿ ಅದರ ಮೇಲೆ ಕೆಸರು ಮಣ್ಣನ್ನು ಮೆತ್ತಿದಲ್ಲಿ ಅವು ಒಳಗೆ ಉಸಿರುಕಟ್ಟಿ ಸಾಯುತ್ತವೆ.

. ಕಾಯಿ ಕೊರೆಯುವ ನೊಣ : ಇದರ ಎಳೆಯ ಮರಿಗಳು ಕಾಯಿಗಳಲ್ಲಿ ತೂತು ಮಾಡಿ ಹಾಳು ಮಾಡುತ್ತವೆ. ಅಂತಹ ಕಾಯಿಗಳು ತುದಿಯ ಕಡೆಯಿಂದ ಒಣಗುತ್ತಾ ಹೋಗುತ್ತವೆ. ಮರಗಳ ಬುಡದ ಸುತ್ತ ಶುಚಿಯಾಗಿರಬೇಕು. ೧೦ ಲೀಟರ್ ನೀರಿಗೆ ೧೦ ಮಿ.ಲೀ. ಮ್ಯಾಲಾಥಿಯಾನ್‌ಕೀಟನಾಶಕ ಮತ್ತು ೧೦೦ ಗ್ರಾಂ. ಸಕ್ಕರೆ ಬೆರೆಸಿ ಇಟ್ಟಲ್ಲಿ ನೊಣಗಳು ಅದನ್ನು ಕುಡಿದು ಸಾಯುತ್ತವೆ.

ರೋಗಗಳಲ್ಲಿ ಮುಖ್ಯವಾದುದು ಬೇರು ಕೊಳೆಯುವ ರೋಗ. ಇದಕ್ಕೆ ಡಿಪ್ಲೋಡಿಯ ಪ್ರಭೇದದ ರೋಗಾಣು ಕಾರಣ. ಇದರ ಹಾವಳಿಗ ಎಲ್ಲಾ ವಯಸ್ಸಿನ ಗಿಡಮರಗಳು ತುತ್ತಾಗುತ್ತವೆ. ರೋಗಪೀಡಿತ ಮರಗಳಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಉದುರುತ್ತವೆ. ಬುಡಭಾಗ ಕೊಳೆತು ಹಾಳಾಗುತ್ತದೆ. ಮಣ್ಣಿನಲ್ಲಿ ನೀರು ನಿಲ್ಲದಂತೆ ಮಾಡಬೇಕು. ಬುಡದ ಸುತ್ತ ಇರುವ ಮಣ್ಣನ್ನು ಸಡಲಿಸಿ ಶೇಕಡಾ ೧ರ ಬೋರ್ಡೊ ದ್ರಾವಣ ಸುರಿಯಬೇಕು. ಸೆರಸಾನ್ ಬಳಸಬಹುದು.

ಬೀಜೋತ್ಪಾದನೆ : ನುಗ್ಗೆಯ ಹೂವು ದ್ವಿಲಿಂಗಿಗಳಿದ್ದು ಸ್ವ-ಪರಾಗಸ್ಪರ್ಶ ವೇರ್ಪಡಲು  ಅಡ್ಡಿ ಇರುವುದಿಲ್ಲ. ಹೂಗೊಂಚಲಿಗೆ ಕಂದು ಬಣ್ಣದ ಕಾಗದದ ಚೀಲ ಇಲ್ಲವೇ ಮಸ್ಲಿನ್ ಬಟ್ಟೆಯ ಚೀಲ ಇಳಿಬಿಟ್ಟು ಕೀಟಗಳು ಹಾರಾಡದಂತೆ ಮಾಡಿದರೆ ಸಾಕು. ಕಾಯಿ ಪೂರ್ಣ ಬಲಿತು, ಒಣಗಬೇಕು. ಅಂತಹ ಕಾಯಿಗಳಲ್ಲಿನ ಬೀಜ ಚೆನ್ನಾಗಿರುತ್ತವೆ. ಗಟ್ಟಿ ಇರುವ ಹಾಗೂ ಹೊಸ ಬೀಜವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಳೆಯಬಲ್ಲವು.

* * *